ಡಬ್ಲಿನ್: ಐರ್ಲೆಂಡ್ ದೇಶದ ಗಾಲವೇ ನಗರದಲ್ಲಿ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನೂರಾರು ಭಾರತೀಯ ನಿವಾಸಿಗಳಿಂದ ಪುಲ್ವಾಮಾದಲ್ಲಿ ಮಡಿದ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಭಾರತದ ಧ್ವಜ ಹಿಡಿದು ಮೌನ ಮೆರವಣಿಗೆ ಮೂಲಕ ಗೌರವ ಸಲ್ಲಿಸಿದ್ರು. ಐರ್ಲೆಂಡ್ ದೇಶದ ಪಾಕಿಸ್ತಾನ ಮಳಿಗೆಗಳಲ್ಲಿ ಯಾವುದೇ ವಸ್ತು ಖರೀದಿಸದೆ ಇರಲು ಭಾರತೀಯರು ನಿರ್ಧಾರ ಮಾಡಿದ್ದಾರೆ.
ಪಾಕಿಸ್ತಾನ ಹಾಗೂ ಅದು ಸಾಕಿ ಸಲಹುತ್ತಿರುವ ಉಗ್ರರ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಭಾರತೀಯ ನಿವಾಸಿಗಳಿ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ರು.
40 ಯೋಧರು ಹುತಾತ್ಮ:
ಫೇ.14 ರ ಗುರುವಾರ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 40 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದರು. ಸ್ಫೋಟದ ತೀವ್ರತೆ ಎಷ್ಟು ಇತ್ತು ಎಂದರೆ ಸೈನಿಕರ ದೇಹದ ಭಾಗಗಳು ಹೈವೇಯ 100 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಸ್ಫೋಟಕಗೊಂಡ ಬಳಿಕ ಉಳಿದ ಬಸ್ಸುಗಳು ನಿಂತ ಮೇಲೆ ಅವುಗಳ ಮೇಲೂ ಉಗ್ರರು ದಾಳಿ ನಡೆಸಿದ್ದರು. ಪೂರ್ವನಿಯೋಜಿತ ಕೃತ್ಯವಾಗಿದ್ದರಿಂದ ಸೈನಿಕರ ವಾಹನವನ್ನು ಉಗ್ರರು ಹಿಂಬಾಲಿಸಿಕೊಂಡು ಬಂದಿದ್ದರು. ಹೀಗಾಗಿ ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಉಗ್ರರ ಈ ದಾಳಿಗೆ ಸಾಕ್ಷ್ಯ ಎಂಬಂತೆ ಬಸ್ಸಿನ ಹಿಂಭಾಗದಲ್ಲಿ ಬುಲೆಟ್ ಗುರುತು ಬಿದ್ದಿತ್ತು.
ಬೆಂಗಳೂರು: ಪುಲ್ವಾಮದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ರಾಜಧಾನಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಾಗೆಯೇ ದುಷ್ಕೃತ್ಯ ಮೆರೆದ ಉಗ್ರ ಪಿಪಾಸುಗಳನ್ನ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಗುರುವಾರದಂದು ಪುಲ್ವಾಮದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಉಗ್ರರ ತವರು ಪಾಕಿಸ್ತಾನದ ರಾಕ್ಷಸಿತನಕ್ಕೆ ತಕ್ಕ ಉತ್ತರ ಕೋಡಲೇಬೇಕು. ವಿಶ್ವಸಂಸ್ಥೆ ಪಾಕಿಸ್ತಾನವನ್ನು ಉಗ್ರರಾಷ್ಟ್ರ ಎಂದು ಘೋಷಿಸಬೇಕು. ಯೋಧರನ್ನು ಬಲಿಪಡೆದ ಉಗ್ರ ಪಿಪಾಸುಗಳನ್ನ ಗಲ್ಲಿಗೇರಿಸಬೇಕು ಎಂದು ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದರು.
ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಪಾಕಿಸ್ತಾನಕ್ಕೆ ಬೆಂಬಲ ಕೊಡುವ ದೇಶಗಳಿಗೂ ಎಚ್ಚರಿಕೆ ಕೊಡಬೇಕು. ನಮ್ಮ ಸೈನಿಕರನ್ನ ಮೋಸದಿಂದ ಬಲಿಪಡೆದ ಯಾರನ್ನೂ ಬಿಡಬಾರದು. ಈ ಬಗ್ಗೆ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಜೈಕರ್ನಾಟಕ ಸಂಘಟನೆ ವತಿಯಿಂದ ಮೈಸೂರು ಸರ್ಕಲ್‍ನಲ್ಲಿ ಕೂಡ ಶ್ರದ್ದಾಂಜಲಿ ಸಲ್ಲಿಸಲಾಯಿತು. ಆತ್ಮಾಹುತಿ ದಾಳಿಯಲ್ಲಿ 47 ಯೋಧರ ಸಾವಿನ ಹಿನ್ನೆಲೆ ಪಾಕ್ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಸೈನಿಕರು ನಮ್ಮ ಹೆಮ್ಮೆ ಎಂದು ಘೋಷಣೆ ಕೂಗುತ್ತ ಆಕ್ರೋಶ ಹೊರಹಾಕಿದರು.
ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ತುಚ್ಛಕೃತ್ಯಕ್ಕೆ ಬಲಿಯಾದ ಭಾರತ ಮಾತೆಯ ಮಕ್ಕಳಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಜೊತೆಗೆ ದಾಳಿ ಮಾಡಿದ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಕೊಪ್ಪಳ ಅಶೋಕ ವೃತ್ತದಲ್ಲಿ ಮೇಣದ ಬತ್ತಿ ಹಿಡಿದು ಎ.ಬಿ.ವಿ.ಪಿ.ವಿದ್ಯಾರ್ಥಿ ಸಂಘಟನೆಯಿಂದ ಯುವಕರು ಶ್ರದ್ಧಾಂಜಲಿ ಸಮರ್ಪಿಸಿದ್ದು, ಸೋಲ್ಜರ್ ಅಮರ್ ರಹೇ ಎಂದು ಘೋಷಣೆ ಕೂಗಿದ್ದಾರೆ. ಕೋಟೆನಾಡು ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ವಂದೇ ಮಾತರಂ ಜಾಗೃತಿ ವೇದಿಕೆಯಿಂದ ಹುತಾತ್ಮ ಯೋಧರಿಗೆ ಕ್ಯಾಂಡಲ್ ಹಚ್ಚಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇತ್ತ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕೋರ್ಟ್ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಮೊಂಬತ್ತಿ ಹಿಡಿದು ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಮೈಸೂರಿನ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದು, ಮೊಂಬತ್ತಿ ಹಿಡಿದು ರಣಹೇಡಿ ಉಗ್ರರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲೆನಾಡು ಭಾಗದ ಚಿಕ್ಕಮಗಳೂರಿನಲ್ಲಿ ಹುತಾತ್ಮ ಯೋಧರಿಗೆ ವೀರ ಜವಾನ್ ಅಮರ್ ರಹೇ ಎಂದು ಘೋಷಣೆ ಕೂಗಿ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ವಿಜಯಪುರದಲ್ಲಿ ದೇಶ ರಕ್ಷಕರ ಪಡೆ ಮತ್ತು ಸಾರ್ವಜನಿಕರಿಂದ ಪುಲ್ವಾಮಾ ವೀರ ಯೋಧರಿಗೆ ಸನ್ಮಾನಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಜ್ಞಾನಗಂಗಾ ಉಚಿತ ಮನೆ ಪಾಠ ಕೇಂದ್ರದ ಸದಸ್ಯರು ಹಾಗೂ ಸಾರ್ವಜನಿಕರಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ನಗರದ ದುರ್ಗದ ಬೈಲ್ ವೃತ್ತದಲ್ಲಿ ಸಾರ್ವಜನಿಕರಿಂದ ಮೊಂಬತ್ತಿ ಹಚ್ಚಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಯೋತ್ಪಾದನೆ ತೊಲಗಲಿ ಎಂಬ ಘೋಷಣೆ ಮೂಲಕ ಉಗ್ರರ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಗಡಿಯಾರ ಕಂಬದ ಬಳಿ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದು, ಯೋಧರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಸಾವಿರಾರು ವಿದ್ಯಾರ್ಥಿಗಳು ಗುಲಾಬಿ ಹೂ ಸಮರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತುಮಕೂರು ನಗರದ ವರಿ ಇಂಟರ್ ನ್ಯಾಷನಲ್ ಶಾಲೆಯ 1 ಸಾವಿರ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ಶ್ರೀಗಳ ಗದ್ದುಗೆಗೆ ಗುಲಾಬಿ ಹೂವನ್ನಿಟ್ಟು ನಮಸ್ಕರಿಸಿದ್ದಾರೆ. 65 ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ಶ್ರೀಗಳ ಗದ್ದುಗೆ ದರ್ಶನ ಮಾಡಿಸಿದ್ದಾರೆ.
ಇತ್ತ ಜನವರಿ 31 ರಂದು ನಡೆಯಲಿರುವ ಸಿದ್ದಗಂಗಾ ಶ್ರೀಗಳ ಪುಣ್ಯಾರಾಧನೆಯ ಸಕಲ ತಯಾರಿ ನಡೆಯುತ್ತಿದೆ. ಭಕ್ತಾದಿಗಳಿಗಾಗಿ ಭಕ್ಷ್ಯ ಭೋಜನ ತಯಾರಾಗುತ್ತಿದೆ. ಎರಡು ಲಕ್ಷ ಜಹಾಂಗೀರ್, 80 ಕ್ವಿಂಟಾಲ್ ಬೋಂದಿ, 50 ಚೀಲ ಮಾಲ್ದಿ ಪುಡಿ ತಯಾರಾಗುತ್ತಿದೆ. ಇದನ್ನೂ ಓದಿ: ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!
ಒಟ್ಟು 65 ಕ್ಕೂ ಹೆಚ್ಚು ಅಡುಗೆ ಭಟ್ಟರು ಮಠದ ಮೂರು ಕಡೆ ತಯಾರಿ ಕಾರ್ಯದಲ್ಲಿ ತೊಡಗಿದ್ದಾರೆ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಠದ ಶಿಕ್ಷಕರಿಂದ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದೆ. ಸಿದ್ದಗಂಗಾ ವಿದ್ಯಾಸಂಸ್ಥೆ ಶಿಕ್ಷಕರಿಂದ ಮಠದ ಆವರಣದಲ್ಲಿರುವ ಕಲ್ಯಾಣಿ ಸ್ವಚ್ಛತೆ ನಡೆಯುತ್ತಿದೆ. ಹತ್ತಾರು ಶಿಕ್ಷಕರು ಕಲ್ಯಾಣಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಅವರು ಜನವರಿ 21ರ ಸೋಮವಾರ ಲಿಂಗೈಕ್ಯರಾಗಿದ್ದು, ಗುರುವಾರ ಪುಣ್ಯಾರಾಧನೆ ನಡೆಯಲಿದೆ.
ದಾವಣಗೆರೆ: ನಡೆದಾಡುವ ದೇವರು ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರದ ಮುಂಭಾಗ ನಾಗರಹಾವೊಂದು ಒಂದು ಗಂಟೆಗಳ ಕಾಲ ಕುಳಿತ ಅಚ್ಚರಿಯ ಘಟನೆ ಚನ್ನಗಿರಿ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ.
ಎಲ್ಲಿಂದಲೋ ಬಂದಿದ್ದ ನಾಗರಹಾವು ಸಿದ್ದಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಒಂದು ಗಂಟೆಗೂ ಅಧಿಕ ಕಾಲ ಕುಳಿತಿತ್ತು. ಈ ವಿಶೇಷ ದೃಶ್ಯವನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯ ಪಟ್ಟಿದ್ದಾರೆ. ಸಾಧಾರಣವಾಗಿ ಕಾಣಿಸಿಕೊಳ್ಳದ ನಾಗರಹಾವು ಸಿದ್ದಗಂಗಾ ಶ್ರೀಗಳ ಭಾವಚಿತ್ರ ಮುಂದೆ ಕಾಣಿಸಿದ್ದನ್ನು ಕಂಡು ಜನರು ಇದೊಂದು ವಿಸ್ಮಯ ಎಂದಿದ್ದಾರೆ. ಕೇವಲ ಮನುಷ್ಯರು ಮಾತ್ರವಲ್ಲದೇ ಮೂಖ ಜೀವಿ ಕೂಡ ಸಿದ್ದಗಂಗಾ ಶ್ರೀಗಳಿಗೆ ನಮನ ಸಲ್ಲಿಸಿದೆ ಎಂದು ಬರೆದು ಭಾವಚಿತ್ರ ಮುಂದಿರುವ ನಾಗರಹಾವಿನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.
ಮಂಡ್ಯ: ಜಿಲ್ಲೆಗೂ ಹಾಗೂ ಅಂಬರೀಶ್ ಅವರಿಗೂ ಕರುಳಬಳ್ಳಿ ಸಂಬಂಧ. ಅಂಬಿ ಅಗಲಿಕೆಯಿಂದ ಕಣ್ಣೀರಾಗಿದ್ದ ಮಂಡ್ಯ ಜನ ಇಂದು ಮಂಡ್ಯದಲ್ಲಿ ಅಂಬಿ ಅವರಿಗೆ ಶ್ರದ್ಧಾಂಜಲಿ, ನುಡಿ ನಮನ ಸಲ್ಲಿಸುತ್ತಿದ್ದಾರೆ. ಅಂಬರೀಶ್ ಪತ್ನಿ ಸುಮಲತಾ ಹಾಗೂ ಮಗ ಅಭಿಷೇಕ್ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ದಿಗ್ಗಜರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮಂಡ್ಯ ನಗರದಾದ್ಯಂತ ಎಲ್ಲಿ ನೋಡಿದರೂ ಅಂಬರೀಶ್ ಸ್ಮರಣೆ ನಡೆಯುತ್ತಿದೆ. ತಮ್ಮನ್ನಗಲಿದ ಅಂಬರೀಶ್ ನೆನೆದು ಇಂದಿಗೂ ಕಣ್ಣೀರಾಗುತ್ತಿರುವ ಅವರ ಅಭಿಮಾನಿಗಳು, ಇಂದು ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂದು ಸಂಜೆ ಐದು ಗಂಟೆ ಸುಮಾರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆರಂಭವಾಗಲಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಜನ ಅಂಬರೀಶ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್, ಸಿಎಂ ಕುಮಾರಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸೇರಿದಂತೆ ಹಲವು ಜನ ರಾಜಕಾರಣಿಗಳು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟರಾದ ಶಿವರಾಜ್‍ಕುಮಾರ್, ಜಗ್ಗೇಶ್, ದೊಡ್ಡಣ್ಣ, ನಟ ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಯಶ್ ಸೇರಿದಂತೆ ಹಲವು ಜನ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಖುದ್ದು ಕಾರ್ಯಕ್ರಮ ನೋಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯ ಜನ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಿರುವ ಅಭಿಮಾನಿಗಳು, ತಮ್ಮ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿರುವ ಅಂಬಿಗೆ ಭಾವಪೂರ್ಣವಾಗಿ ಗೌರವ ಸಲ್ಲಿಸಲಿದ್ದಾರೆ.
ಬೆಳಗಾವಿ (ಚಿಕ್ಕೋಡಿ): ಅಥಣಿ ಪಟ್ಟಣದ ಜನತೆ ಕ್ಯಾಂಡಲ್ ಮಾರ್ಚ್ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ಹೊಸ ವರ್ಷ ಬಂದ್ರೆ ಸಾಕು ಪಾರ್ಟಿ ಮಾಡ್ಕೊಂಡು, ಮೋಜು ಮಸ್ತಿ ಅಂತ ಆಚರಿಸುವ ಯುವಕರೇ ಹೆಚ್ಚು. ಆದ್ರೆ ಅಥಣಿ ಪಟ್ಟಣದಲ್ಲಿ ಮಾತ್ರ ಯುವಕರು ಶಾಂತಿಯುತವಾಗಿ ಮೇಣದ ಬತ್ತಿ ಬೆಳಗಿಸಿ, ಮೆರವಣಿಗೆ ಹೋಗುವ ಮೂಲಕ ವಿಶಿಷ್ಠವಾಗಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಹಾಗೆಯೇ ಈ ಅರ್ಥಪೂರ್ಣ ಆಚರಣೆಗೆ ಸ್ಥಳೀಯರು ಕೂಡ ಸಾಥ್ ನೀಡಿದ್ದು, ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ 20ಕ್ಕೂ ಹೆಚ್ಚು ಮಂದಿ ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಮೋಜು ಮಸ್ತಿಯಿಂದ ಹೊರಗುಳಿದು ಶಾಂತಿಯುತವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
2018ರ ಸಾಲಿನಲ್ಲಿ ಕರ್ನಾಟಕದಲ್ಲಾದ ದುರಂತಗಳಿಂದ ಸಾವನ್ನಪ್ಪಿದ ಜನರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೇಣದ ಬತ್ತಿ ಹೊತ್ತಿಸಿ ಪ್ರಾರ್ಥಿಸಿದರು. ಕೊಡಗಿನಲ್ಲಾದ ಪ್ರವಾಹದಲ್ಲಿ ಮಡಿದವರಿಗೆ ಮತ್ತು ಸುಳ್ವಾಡಿ ದುರಂತ ಹಾಗೂ ಮಂಡ್ಯ ಬಸ್ ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುವ ಮೂಲಕ ಹೊಸ ವರ್ಷದ ಆಚರಣೆಯನ್ನು ಅರ್ಥಪೂರ್ಣವಾಗಿ ಯುವಕರು ಆಚರಿಸಿದರು.
ಗದಗ: ಮನುಷ್ಯ ಮರಣಹೊಂದಿದಾಗ ಬಂಧು-ಬಾಂಧವರು, ಮಿತ್ರರು ಬೇಗ ಬರುವುದಿಲ್ಲ. ಆದರೆ ಕೋತಿಯೊಂದು ಸಾವಿನ ಮನೆಗೆ ತೆರಳಿ ತನ್ನದೇ ಭಾಷೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಾಂತ್ವಾನ ಹೇಳಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ.
ನಾಗನಗೌಡ ಪಾಟೀಲ್(71) ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಕುಟುಂಬದವರು ಅತೀವ ಶೋಕದಲ್ಲಿದ್ದರು. ಅಷ್ಟರಲ್ಲಿ ಕಪಿಯೊಂದು ಮೃತರ ಮನೆಗೆ ಧಾವಿಸಿದೆ. ಅರ್ಚಕರು ಪೂಜೆ ಸಲ್ಲಿಸುವ ವೇಳೆ ಶವದ ಬಳಿ ಸುಮ್ಮನೆ ಕೂತು ಶ್ರದ್ಧಾಂಜಲಿ ಸಲ್ಲಿಸಿದೆ.
ನಂತರ ಮನೆಯಿಂದ ಹೊರಬಂದು, ಮೃತನ ಹಿರಿಯ ಪುತ್ರ ಮರಿಗೌಡ ಅವರ ಪಕ್ಕದಲ್ಲಿ ಹಾಗೂ ಅವರ ಹೆಗಲೇರಿ ತಲೆಮೇಲೆ ಕೈಯಾಡಿಸಿದೆ. ಅವರ ಕಿವಿಯಲ್ಲಿ ತನ್ನದೆ ಭಾಷೆಯಲ್ಲಿ ಸಾಂತ್ವಾನ ಹೇಳಿದೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರಿದ್ದರೂ ಯಾರೋಬ್ಬರಿಗೂ ತೊಂದರೆ ಮಾಡದೆ, ಕುಟುಂಬದವರಿಗೆ ಪ್ರೀತಿ ಕನಿಕರ ತೋರಿಸಿದೆ.
ಕಪಿರಾಯನ ವರ್ತನೆ ಸಾರ್ವಜನಿಕರನ್ನು ಒಂದು ವೇಳೆ ನಿಬ್ಬೆರಗಾಗುವಂತೆ ಮಾಡಿದೆ.
ಬೆಂಗಳೂರು: ನಾನು ನೋಡಿರುವಂತಹ ನನ್ನ ಅಂಬರೀಶ್, ಅವರು ಒಳ್ಳೆಯ ಮಗ, ಸಹೋದರ, ಗಂಡ, ಸ್ನೇಹಿತ, ತಂದೆ, ನಟ, ರಾಜಕೀಯ ನಾಯಕ, ಸಮಾಜ ಸೇವಕ ಆಗಿದ್ದರು. ಅವರು ಇದಕ್ಕೆಲ್ಲ ಹೆಚ್ಚಾಗಿ ಒಳ್ಳೆಯ ಮನುಷ್ಯರಾಗಿದ್ದರು ಎಂದು ಪತಿಯನ್ನು ನೆನೆದು ಸುಮಲತಾ ಭಾವುಕರಾಗಿದ್ದಾರೆ.
ಸ್ಯಾಂಡಲ್‍ವುಡ್ ದಿಗ್ಗಜ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ನುಡಿ ನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸುಮಲತಾ ಪತಿಯನ್ನು ನೆನೆದು, ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಅಂಬಿ ಬಗ್ಗೆ ಸುಮಲತಾ ಮಾತುಗಳು:
ಭಗವದ್ಗೀತೆಯಲ್ಲಿ ನೀನು ಬರುವಾಗ ಏನು ತಗೆದುಕೊಂಡು ಬರುತ್ತೀಯಾ. ಹೋಗುವಾಗ ಏನು ತೆಗೆದುಕೊಂಡು ಹೋಗುತ್ತಿಯಾ. ಇಲ್ಲಿ ಯಾವುದು ಶಾಶ್ವತವಲ್ಲ ಎಂದು ಭಗವಂತ ಮನುಷ್ಯನಿಗೆ ಹೇಳುತ್ತಾನೆ. ಅದಕ್ಕೆ ಮನುಷ್ಯ ನೀನು ನನಗೆ ಇಲ್ಲಿ ಕಳುಹಿಸುವಾಗ ಒಂದೇ ಒಂದು ಹೃದಯ ಮಾತ್ರ ಕಳುಹಿಸಿದ್ದೀಯಾ. ಆದರೆ ನಾನು ಇಲ್ಲಿಂದ ಹೋಗುವಾಗ ಲಕ್ಷಾಂತರ ಜನರ ಹೃದಯದಲ್ಲಿ ಮನೆ ಮಾಡಿಕೊಂಡು ಶಾಶ್ವತವಾಗಿ ಇಲ್ಲಿಯೇ ಇರುತ್ತೇನೆ. ನೀನು ನನ್ನ ಕರೆದುಕೊಂಡು ಹೋಗ್ತಿಯಾ. ಆದರೆ ನನ್ನ ಹೃದಯ ಹಾಗೂ ನನ್ನ ಮನೆ ಇಲ್ಲಿಯೇ ಇರುತ್ತದೆ ಎಂದು ನಗುತ್ತಾ ಆ ಮನುಷ್ಯ ಹೇಳುತ್ತಾನೆ. ಅಂತಹ ಮನುಷ್ಯ ನಮ್ಮ, ನಿಮ್ಮ ಪ್ರೀತಿಯ ಅಂಬರೀಶ್.
ಅಂಬರೀಶ್ ಅವರ ಪ್ರಯಾಣದ ಬಗ್ಗೆ ಹೇಳಬೇಕೆಂದರೆ, ಅದು ನನಗಿಂತ ಚೆನ್ನಾಗಿ ಇಲ್ಲಿರುವ ಬಹಳಷ್ಟು ಜನ ಅವರನ್ನು ತುಂಬಾ ಹತ್ತಿರದಿಂದ ನೋಡಿ ತಿಳಿದುಕೊಂಡಿರುತ್ತೀರಿ. ನಾನು ಅವರನ್ನು 27 ವರ್ಷದಿಂದ ನೋಡಿದ್ದೇನೆ. ಅದನ್ನು ಹೇಳಲು ಮಾತ್ರ ಸಾಧ್ಯ. ಅವರ ಸಿನಿಮಾ ಪ್ರಯಾಣ ಶುರುವಾಗಿದ್ದು ಸುಮಾರು ವರ್ಷಗಳಾಗಿದೆ. ಅದರಲ್ಲಿ ಅವರಿಗೆ ಅನ್ನದಾತರಾಗಿದ್ದ ನಿರ್ಮಾಪಕರು, ಅವರಿಗೆ ಒಳ್ಳೆಯ ಪಾತ್ರ ನೀಡಿ ಕರ್ನಾಟಕ ಜನತೆ ಇಷ್ಟಪಡುವಂತಹ ಮೇರು ನಟ ಮಾಡಲು ಬೆಂಬಲಿಸಿದ ನಿರ್ದೇಶಕರು, ಸಹಕಲಾವಿದರು ಹಾಗೂ ಅವರನ್ನು ಪ್ರೀತಿಯಿಂದ ಸಾಕಿ ಸಲುಗಿದ ಅಭಿಮಾನಿಗಳಿಗೆ ವಂದನೆಗಳು.
ಅಂಬಿ ಒಬ್ಬ ರಾಜನಾಗಿ ಬಾಳಿ, ರಾಜನಾಗಿ ನಮ್ಮನ್ನು ಅಗಲಿ ಹೋದರು. ಅವರ ಪ್ರಯಾಣದಲ್ಲಿ ರಾಜಕಾರಣದಲ್ಲಿ, ಜೀವನದಲ್ಲಿ ಸ್ನೇಹಿತರು, ಬೆಂಬಲ ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು. ಅವರ ಅಂತಿಮ ಪಯಣವನ್ನು ಅರಸನಾಗಿ ಕಳುಹಿಸಿಕೊಟ್ಟಿದ್ದೀರಿ. ಅದಕ್ಕಾಗಿ ನಾನು ಸಿಎಂ ಕುಮಾರಣ್ಣ ಅವರಿಗೆ ಕೈಜೋಡಿಸಿ ನಮಸ್ಕಾರ ತಿಳಿಸುತ್ತೇನೆ.
ಕುಮಾರಸ್ವಾಮಿ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡು ಇದನ್ನು ನಡೆಸಿಕೊಟ್ಟ ರೀತಿ ಸಮಸ್ತ ನಾಡಿನ ಜನತೆ, ಅಂಬರೀಶ್ ಅವರ ಅಭಿಮಾನಿಗಳು, ಮಂಡ್ಯದ ಅಭಿಮಾನಿಗಳ ಪರವಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಬಿಗಿ ಭದ್ರತೆಗೆ ಕೊಟ್ಟು ನಮಗೆ ಸಹಕಾರ ನೀಡಿದ ಎಲ್ಲ ಅಧಿಕಾರಿ, ಪೊಲೀಸ್ ಇಲಾಖೆಗೆ ಹಾಗೂ ಅವರಿಗೆ ಸಾಥ್ ನೀಡಿದ ಚಿತ್ರರಂಗದ ಕುಟುಂಬದವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಮಾಧ್ಯಮದವರು ನೀವು ಅವರನ್ನು ರಾಜಕೀಯ ನಾಯಕನಾಗಿ ಹಾಗೂ ನಟನಾಗಿ ನೋಡಿದ್ದೀರಿ. ಅವರು ಸುಂದರವಾದ ಭಾಷೆಯಲ್ಲಿ ಮಾತನಾಡಿದರು, ನೀವು ಅವರನ್ನು ತಪ್ಪು ತಿಳಿಯದೇ ಅವರನ್ನು ಪ್ರೀತಿಸಿದ್ದೀರಾ ನಿಮಗೂ ನನ್ನ ಧನ್ಯವಾದಗಳು.
ಅವರು ಎಲ್ಲರಿಗೂ ಸ್ನೇಹಿತರಾಗಿದ್ದರು. ನಾನು ಅವರನ್ನು ಸ್ನೇಹಿತ ಎಂದು ಹೇಳಲೇ ಅಥವಾ ಗಂಡ ಎಂದು ಹೇಳಲೇ? ಎಲ್ಲದಕ್ಕಿಂತ ಹೆಚ್ಚಾಗಿ ಅವರು ನನಗೆ ತಂದೆಯಾಗಿ, ಅಣ್ಣನಾಗಿದ್ದರು. ನನ್ನ ಪ್ರಾಣಕ್ಕಿಂತ ಹೆಚ್ಚಾಗಿದ್ದರು. ಅವರು ಎಲ್ಲಿದ್ದರೂ ಅವರ ನಗುನಗುತ್ತಾ ನನಗೆ ಆಶೀರ್ವಾದ ಮಾಡುತ್ತಾರೆ. ನಾನು ಅವರನ್ನು ನನ್ನ ಅಂಬರೀಶ್ ಎಂದು ಕರೆಯುವ ಸಂದರ್ಭ ಇರಲಿಲ್ಲ. ಅವರು ಎಲ್ಲರ ಅಂಬರೀಶ್. ಅವರು ಎಲ್ಲರಿಗೂ ಬೇಕಾಗಿರುವುದು. ಅವರ ಅತ್ಯಂತ ಪ್ರಿಯರಾದ ಮಂಡ್ಯದ ಜನತೆಗೆ ದರ್ಶನ ಕೊಡಿಸಿದ್ದಕ್ಕೆ ಮಂಡ್ಯ ಜನತೆ ನಿಮ್ಮನ್ನು ಮರೆಯುವುದಿಲ್ಲ ಎಂದು ಹೇಳುತ್ತಾ ಮತ್ತೊಮ್ಮೆ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು ತಿಳಿಸಿದರು.
ಅಂಬರೀಶ್ ಅವರಿಗೆ ಮಾಜಿ ಪ್ರಧಾನಿ ದೇವೇಗೌಡ ಅಂದರೆ ಬಹಳ ಗೌರವ. ಅವರು ಪಕ್ಷಾತೀತವಾಗಿದ್ದರು. ಅದೇ ರೀತಿ ನೀವು ಕೂಡ 3 ದಿನ ಕಾಲ ಕೊಟ್ಟು ಎಲ್ಲವನ್ನು ನೋಡಿಕೊಂಡಿದ್ದಕ್ಕೆ ಅವರ ಅಭಿಮಾನಿ ಹಾಗೂ ಚಿತ್ರರಂಗದ ಪರವಾಗಿ ನಾನು ಧನ್ಯವಾದ ತಿಳಿಸುತ್ತೇನೆ. ಮಗ ಅಭಿಷೇಕ್ ಮೊದಲ ಸಿನಿಮಾ ನೋಡುವ ಆಸೆಯಿತ್ತು. ಅಭಿಷೇಕ್ ಮೇಲೂ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೇ ನೀವು ರಾಮನಗರದಲ್ಲಿ ಫಿಲಂ ಸಿಟಿ ಮಾಡಬೇಕು ಅಂತ ಆಸೆ ಇಟ್ಟುಕೊಂಡಿದ್ದೀರಾ. ಆದ್ರೆ ಅದನ್ನು ಅಂಬಿ ಆಸೆಯಂತೆ ಮೈಸೂರಿನಲ್ಲಿ ಮಾಡಿ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಅಗಲಿದ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ವೇದಿಕೆಯಲ್ಲೇ ಎಚ್‍ಡಿಕೆಯಲ್ಲಿ ಮನವಿ ಮಾಡಿಕೊಂಡರು.
ನನ್ನ ಬಳಿ ಅಂಬರೀಶ್ ಅವರು ಫಿಲಂ ಸಿಟಿ ಮೈಸೂರಿನಲ್ಲಿ ಆಗಬೇಕು ಅಂತ ಹೇಳಿದ್ದರು. ಅದಕ್ಕೆ ನಮ್ಮ ಕ್ಷೇತ್ರ ಹುಳಿಮಾವು ಬಳಿ ನಾನು ಜಾಗವನ್ನು ಕೂಡ ಕೊಟ್ಟಿದ್ದೇನೆ. ಅಲ್ಲದೇ ಆ ಫಿಲಂ ಸಿಟಿಗೆ ಅಂಬರೀಶ್ ಅವರ ಹೆಸರನ್ನೇ ಇಡಿ. ಈ ಮೂಲಕ ಅವರ ಹೆಸರು ಶಾಸ್ವತವಾಗಿ ಉಳಿಯಲು ಸಾಧ್ಯ ಅಂತ ಹೇಳಿದ್ರು.
ಅಂಬರೀಶ್ ಅವರ ಮಾತು ಬಹಳ ಒರಟು. ಆದ್ರೆ ಅವರ ಜೊತೆಯಲ್ಲಿ ಸ್ವಲ್ಪ ಸಮಯ ಕಳೆದ್ರೆ, ಅವರ ಹೃದಯ ಎಷ್ಟು ಮೃದುವಾಗಿತ್ತು ಹಾಗೂ ಎಷ್ಟು ಸ್ನೇಹಮಯವಾಗಿತ್ತು ಅನ್ನೋದು ಅರ್ಥವಾಗುತ್ತದೆ. ಸ್ನೇಹದಲ್ಲಿ ಅಂಬರೀಶ್ ಅವರಿಗೆ ಶ್ರೀಮಂತರಿರಲಿ, ಬಡವರಿರಲಿ ತಾರತಮ್ಯ ಇರಲಿಲ್ಲ. ಸಣ್ಣವರಿಂದ ಹಿಡಿದು ಅವರು ಎಷ್ಟೇ ಎತ್ತರದವರಾಗಿದ್ದರೂ ಕೂಡ ಒಂದೇ ರೀತಿಯ ಸ್ನೇಹ ಅವರಲ್ಲಿತ್ತು. ಅದು ಅವರ ವಿಶೇಷತೆಯಾಗಿತ್ತು. ಅದು ಒಂದು ಮಾನವೀಯ ಗುಣ ಕೂಡ ಆಗಿತ್ತು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಅದು ಎಲ್ಲರಿಗೂ ಬರಬೇಕಾದಂತಹ ಒಂದು ಸ್ವಭಾವವಾಗಿದೆ. ಆಗ ಮಾತ್ರ ಸಮಾಜದಲ್ಲಿ ನಾವು ಸಹಬಾಳ್ವೆ, ಸಾಮರಸ್ಯ ಕಾಣಲು ಸಾಧ್ಯ. ಇಂತಹ ಒಬ್ಬ ಸ್ನೇಹಜೀವಿ ಅಂಬರೀಶ್ ಆಗಿದ್ದರು ಅಂತ ಹೇಳಿದ್ರು.
ಪುಟ್ಟಣ್ಣ ಕಣಗಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಜಲೀಲ್ ಪಾತ್ರ ಮಾಡಲು ಅಂಬರೀಶ್ ಆಯ್ಕೆಯಾಗಿದ್ದರು. ನಾನು ಅವರನ್ನು ಭೇಟಿ ಮಾಡುವ ಸಮಯಕ್ಕೆ ಅಂಬರೀಶ್, ನಾಗರಹಾವು ಚಿತ್ರದಲ್ಲಿ ಅಭಿನಯ ಮಾಡಿಬಿಟ್ಟಿದ್ದಾರೆ. ಹೀಗಾಗಿ ಅಂಬಿಗೆ ಅದು ಕೂಡ ಬಯಸಿ ಬಂದಿದ್ದಲ್ಲ. ಆದ್ರೆ ಅವರಿಗೆ ಆ ಕ್ಷೇತ್ರದಲ್ಲಿ(ಕನ್ನಡ ಚಿತ್ರರಂಗ) ಬಹಳ ಎತ್ತರಕ್ಕೆ ಬೆಳೆದ್ರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ ಅಂದ್ರು.
ರಾಜಕಾರಣಕ್ಕೂ ಅಂಬರೀಶ್ ಅವರು ಬಯಸಿ ಬಂದಿಲ್ಲ. ದೇವೇಗೌಡರು ಜನತಾದಳದ ಅಧ್ಯಕ್ಷರಾಗಿದ್ದರು. ಅಲ್ಲದೇ ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅಂಬರೀಶ್ ರಾಜಕೀಯ ಪ್ರವೇಶ ಮಾಡಿದ್ರು ಅಂತ ಮಾಜಿ ಸಿಎಂ, ಅಂಬರೀಶ್ ಅವರ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ರು.
ಮನವಿ ಸ್ವೀಕರಿಸಿದ ಎಚ್‍ಡಿಕೆ:
ಮೈಸೂರಿನಲ್ಲೇ ಫಿಲಂ ಸಿಟಿ ಮಾಡುವ ಸಿದ್ದರಾಮಯ್ಯ ಅವರ ಮನವಿಯನ್ನು ಎಚ್‍ಡಿಕೆ ಸ್ವೀಕರಿಸಿದ್ದಾರೆ. ಮೈಸೂರಿನಲ್ಲೇ ಫಿಲಂ ಸಿಟಿ ಮಾಡುವುದಾಗಿ ವೇದಿಕೆಯಲ್ಲೇ ಘೋಷಣೆ ಮಾಡಿದ್ದಾರೆ.