Tag: ಶೌರ್ಯ ಚಕ್ರ

  • ಕುಟುಂಬದವರೊಂದಿಗೆ ಶೌರ್ಯ ಚಕ್ರ ಪ್ರಶಸ್ತಿ ಸಂಭ್ರಮಾಚರಿಸಿಕೊಳ್ಳಲು ಬಯಸಿದ್ರು ವರುಣ್‌ ಸಿಂಗ್‌!

    ಕುಟುಂಬದವರೊಂದಿಗೆ ಶೌರ್ಯ ಚಕ್ರ ಪ್ರಶಸ್ತಿ ಸಂಭ್ರಮಾಚರಿಸಿಕೊಳ್ಳಲು ಬಯಸಿದ್ರು ವರುಣ್‌ ಸಿಂಗ್‌!

    ನವದೆಹಲಿ: ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದ ಐಎಎಫ್‌ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರು, ತಾವು ಶೌರ್ಯ ಚಕ್ರ ಪ್ರಶಸ್ತಿ ಪಡೆದ ಸಂಭ್ರಮವನ್ನು ಇಂದೋರ್‌ನಲ್ಲಿ ಪತ್ನಿಯ ಕುಟುಂಬದವರೊಂದಿಗೆ ಆಚರಿಸಿಕೊಳ್ಳಲು ಬಯಸಿದ್ದರಂತೆ.

    ಇದೇ ಡಿಸೆಂಬರ್‌ ತಿಂಗಳ ಕೊನೆಯ ವಾರದಲ್ಲಿ ವರುಣ್‌ ಸಿಂಗ್‌ ಅವರು, ಇಂದೋರ್‌ನಲ್ಲಿರುವ ಪತ್ನಿ ಗೀತಾಂಜಲಿ ಅವರ ಪೋಷಕರ ಮನೆಗೆ ತೆರಳಿ ಸಂಭ್ರಮ ಕೂಟವನ್ನು ಏರ್ಪಡಿಸಲು ನಿರ್ಧರಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಶೌರ್ಯ, ಶೌರ್ಯೇತರ ಪ್ರಶಸ್ತಿ ಪಡೆದ ಯೋಧರ ಅನುದಾನ ಹೆಚ್ಚಳಕ್ಕೆ ಸಿಎಂ ಅಸ್ತು

    ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಈ ವರ್ಷದ ಸ್ವಾತಂತ್ರ್ಯ ದಿನದಂದು, 2020 ರಲ್ಲಿ ವೈಮಾನಿಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್‍ಸಿಎ ತೇಜಸ್ ಯುದ್ಧ ವಿಮಾನವನ್ನು ಸಮರ್ಥವಾಗಿ ಲ್ಯಾಂಡಿಂಗ್ ಮಾಡಿ ಅದರಲ್ಲಿದ್ದ ಯೋಧರ ಪ್ರಾಣ ಉಳಿಸಿದಕ್ಕಾಗಿ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು. ಲೈಟ್ ಕಾಂಬ್ಯಾಟ್ ಏರ್‍ಕ್ರಾಫ್ಟ್ ಸ್ಕ್ವಾಡ್ರನ್‍ನಲ್ಲಿ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ವರುಣ್ ಸಿಂಗ್, ಅವರ ಅಸಾಧಾರಣ ಶೌರ್ಯಕ್ಕಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಈ ವರ್ಷದ ಆಗಸ್ಟ್ 15 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೀಡಿ ಗೌರವಿಸಿದ್ದರು.

    ಈ ಸಂಭ್ರಮವನ್ನು ತನ್ನ ಪತ್ನಿಯೊಂದಿಗೆ ಅವರ ಪೋಷಕರ ಮನೆಗೆ ತೆರಳಿ ಆಚರಿಸಿಕೊಳ್ಳಲು ವರುಣ್‌ ಸಿಂಗ್‌ ನಿರ್ಧರಿಸಿದ್ದರು. ಆದರೆ ಡಿಸೆಂಬರ್‌ 8ರಂದು ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ವರುಣ್‌ ಸಿಂಗ್‌ ಗಂಭೀರ ಗಾಯಗೊಂಡು ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನಿಧನರಾದರು. ಇದನ್ನೂ ಓದಿ: ಕುಲ್ಗಾಮ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

    ವರುಣ್‌ ಸಿಂಗ್‌ 2008ರಲ್ಲಿ ಗೀತಾಂಜಲಿ ಅವರೊಂದಿಗೆ ವಿವಾಹವಾದರು. ಇವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.

  • ಬೆಂಗಳೂರಿನ ಅನಿಲ್ ಅರಸ್ ಸೇರಿ ನಾಲ್ವರು ಯೋಧರಿಗೆ ಶೌರ್ಯ ಚಕ್ರ

    ಬೆಂಗಳೂರಿನ ಅನಿಲ್ ಅರಸ್ ಸೇರಿ ನಾಲ್ವರು ಯೋಧರಿಗೆ ಶೌರ್ಯ ಚಕ್ರ

    – ಪೊಲೀಸ್, ಯೋಧರು ಸೇರಿ 926 ಜನರಿಗೆ ಶೌರ್ಯ ಪದಕ

    ನವದೆಹಲಿ: ಮೂಲತಃ ಬೆಂಗಳೂರಿನವರಾದ ಮೇಜರ್ ಅನಿಲ್ ಅರಸ್ ಅವರಿಗೆ ಶೌರ್ಯ ಚಕ್ರ ಸಿಕ್ಕಿದೆ.

    ದೇಶಕ್ಕಾಗಿ ಹೋರಾಡುವ ಮೂಲಕ ಸೇವೆಯಲ್ಲಿ ಧೈರ್ಯ, ಸಾಹಸ ಪ್ರದರ್ಶಿಸಿದ ನಾಲ್ವರು ಯೋಧರಿಗೆ ‘ಶೌರ್ಯ ಚಕ್ರ’ ಪ್ರಶಸ್ತಿ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದು, ಇದರಲ್ಲಿ ಬೆಂಗಳೂರಿನವರಾದ ಅನಿಲ್ ಅರಸ್ ಅವರ ಹೆಸರು ಸಹ ಇದೆ.

    ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಮೇಲೆ ಕಣ್ಣಿಡುವ ಗುಪ್ತಚರ ದಳದಲ್ಲಿ ಮೇಜರ್ ಅನಿಲ್ ಅರಸ್ ಕಾರ್ಯನಿರ್ವಹಿಸುತ್ತಿದ್ದಾರೆ.

    ಈ ಕುರಿತು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದ್ದು, ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುವ ಮೂಲಕ ಸಾಹಸ ತೋರಿದ ಪ್ಯಾರಾಚೂಟ್ ರೆಜಿಮೆಂಟ್ ನ ಲೆಫ್ಟಿನೆಂಟ್ ಕರ್ನಲ್ ಕ್ರಿಷನ್ ಸಿಂಗ್ ರಾವತ್, 4 ಮರಾಠಾ ಲೈಟ್ ಇನ್‍ಫೆಂಟ್ರಿಯ ಮೇಜರ್ ಅನಿಲ್ ಅರಸ್, ರಜಪೂತ್ ರೆಜಿಮೆಂಟ್ ನ ಹವಾಲ್ದಾರ್ ಅಲೋಕ್ ಕುಮಾರ್ ದುಬೆ ಹಾಗೂ ವಾಯುಪಡೆಯ ವಿಂಗ್ ಕಮಾಂಡರ್ ವಿಶಾಕ್ ನಾಯರ್ ಅವರಿಗೆ ‘ಶೌರ್ಯ ಚಕ್ರ’ ಪ್ರಕಟಿಸಲಾಗಿದೆ.

    ಇವರು ಜಮ್ಮು-ಕಾಶ್ಮೀರದಲ್ಲಿ ವಿವಿಧ ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ದೇಶಕ್ಕಾಗಿ ಹಾಗೂ ಸಿಬ್ಬಂದಿ ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದಾರೆ. ಇವರ ಸಾಹಸವನ್ನು ಮೆಚ್ಚಿ ಶೌರ್ಯ ಚಕ್ರ ನೀಡಲಾಗಿದೆ.

    ಯೋಧರು ಮಾತ್ರವಲ್ಲ ಸಾಹಸ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಸಿ ಧೈರ್ಯ, ಸಾಹಸ ಪ್ರದರ್ಶಿಸಿದ ಪೊಲೀಸ್ ಹಾಗೂ ಸೇನಾಪಡೆಗಳಿಗೆ ಒಟ್ಟು 926 ಶೌರ್ಯ ಪದಕವನ್ನು ಘೋಷಿಸಲಾಗಿದೆ. ಸಾಹಸ ಮೆರೆದ 21 ಪೊಲೀಸರಿಗೆ ‘ಶೌರ್ಯ ಪದಕ’, ಅತ್ಯುತ್ತಮ ಸೇವೆಗಾಗಿ 80 ಪೊಲೀಸರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಹಾಗೂ ಪ್ರಶಂಸಾ ಸೇವೆಗಾಗಿ 631 ಸಿಬ್ಬಂದಿಗೆ ಪ್ರಶಂಸಾ ಪದಕ ನೀಡಿ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

    ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆ ಅತಿ ಹೆಚ್ಚು 81 ಪದಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದೆ. ಸಿಆರ್ಪಿಎಫ್ 55 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆ 23, ದೆಹಲಿ ಪೊಲೀಸ್ ಇಲಾಖೆ 16, ಆಂಧ್ರ ಪ್ರದೇಶ ಪೊಲೀಸ್ ಇಲಾಖೆ ತಲಾ 16, ಮಹಾರಾಷ್ಟ್ರ ಪೊಲೀಸ್ ಇಲಾಖೆ, ತೆಲಂಗಾಣ ಪೊಲೀಸ್ ಇಲಾಖೆ ತಲಾ 14 ಹಾಗೂ ಜಾರ್ಖಂಡ್ ಪೊಲೀಸ್ ಇಲಾಖೆ 12 ಪದಕಗಳನ್ನು ಪಡೆದಿವೆ.

  • ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಸರ್ಕಾರದಿಂದ ವಿಶೇಷ ಗೌರವ: ಏನಿದು ಹೊಸ ವೆಬ್‍ಸೈಟ್? ಮಾಹಿತಿ ಪಡೆಯೋದು ಹೇಗೆ?

    ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಸರ್ಕಾರದಿಂದ ವಿಶೇಷ ಗೌರವ: ಏನಿದು ಹೊಸ ವೆಬ್‍ಸೈಟ್? ಮಾಹಿತಿ ಪಡೆಯೋದು ಹೇಗೆ?

    ನವದೆಹಲಿ: ಇದೂವರೆಗೂ ಎಷ್ಟು ಮಂದಿಗೆ ಭಾರತ ಸರ್ಕಾರ ಪರಮವೀರ ಚಕ್ರ ಗೌರವ ನೀಡಿದೆ? ಪರಮವೀರ ಚಕ್ರ ಪಡೆದ ಸೈನಿಕರ ಸಾಹಸ ಏನು? ಈ ಪ್ರಶ್ನೆಗಳಿಗೆ ಇಲ್ಲಿಯವರೆಗೆ ಸುಲಭವಾಗಿ ಬೇಗನೆ ಉತ್ತರ ಸಿಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ನೀವು ಬೆರಳ ತುದಿಯಲ್ಲಿ ಪರಮವೀರ ಚಕ್ರ, ಮಹಾವೀರ ಚಕ್ರ ಸೇರಿದಂತೆ ಶೌರ್ಯ ಗೌರವಕ್ಕೆ ಪಾತ್ರರಾದ ಸೈನಿಕರ ಮಾಹಿತಿಯನ್ನು ಪಡೆಯಬಹುದು.

    ದೇಶಕ್ಕಾಗಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಗೌರವ ಪದಕ ಪಡೆದ ಸೈನಿಕರ ಮಾಹಿತಿ ತಿಳಿಸುವ ಸಂಬಂಧ ಹೊಸ ವೆಬ್‍ಸೈಟನ್ನು ಆರಂಭಿಸಿದೆ. 71ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ http://gallantryawards.gov.in/ ವೆಬ್‍ಸೈಟನ್ನು ಲೋಕಾರ್ಪಣೆ ಮಾಡಿದ್ದಾರೆ.

    ವೆಬ್ ಸೈಟ್ ಲೋಕಾರ್ಪಣೆ ಮಾಡಿ ಟ್ವೀಟ್ ಮಾಡಿದ ಮೋದಿ, ದೇಶಕ್ಕಾಗಿ ಶೌರ್ಯ ತೋರಿದ ಸೈನಿಕರು, ನಾಗರಿಕರ ಬಗ್ಗೆ ಜನರಿಗೆ ಮಾಹಿತಿ ನೀಡಲು ಈ ವೆಬ್‍ಸೈಟನ್ನು ತೆರೆಯಲಾಗಿದೆ. ಈ ವೆಬ್‍ಸೈಟ್ ನಲ್ಲಿ ಪ್ರಕಟವಾಗಿರುವ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ, ಫೋಟೋಗಳು ಇದ್ದರೆ ಕಳುಹಿಸಿಕೊಡಿ. ಈ ವೆಬ್‍ಸೈಟ್ ಮತ್ತಷ್ಟು ಸುಧಾರಣೆ ಮಾಡಲು ನೀವು ಸಲಹೆ, ಪ್ರತಿಕ್ರಿಯೆಗಳನ್ನು ನೀಡಬಹುದು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ವೆಬ್‍ಸೈಟ್ ನಲ್ಲಿ ಏನಿದೆ?
    ಪರಮ ವೀರ ಚಕ್ರ, ಮಹಾ ವೀರ ಚಕ್ರ, ವಿರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ ಪಡೆದವರ ಫೋಟೋ ಮತ್ತು ವಿವರಗಳನ್ನು ನೀಡಲಾಗಿದೆ. 1950 ರಿಂದ ಪ್ರಾರಂಭವಾಗಿ 2017ರ ವರೆಗೆ ಈ ಗೌರವ ಪಡೆದ ವ್ಯಕ್ತಿಗಳ ವಿವರ ಈ ತಾಣದಲ್ಲಿ ಇದೆ.

    ಈ ಪದಕವನ್ನು ಯಾಕೆ ನೀಡಲಾಗುತ್ತದೆ? ಈ ಪದಕದಲ್ಲಿರುವ ವಿಶೇಷತೆ ಏನು? ಈ ಗೌರವ ಪಡೆಯಲು ಬೇಕಾಗಿರುವ ಮಾನದಂಡಗಳು ಏನು ಎನ್ನುವುದನ್ನು ವಿವರಿಸಲಾಗಿದೆ. 2006 ನೇ ಇಸ್ವಿಯಿಂದ ರಾಷ್ಟ್ರಪತಿಗಳು ಚಕ್ರ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವ ಫೋಟೋ/ ವಿಡಿಯೋಗಳು ಈ ತಾಣದಲ್ಲಿ ಸಿಗುತ್ತದೆ.

    ಮಾಹಿತಿ ಪಡೆಯುವುದು ಹೇಗೆ?
    ಹೋಮ್ ಪೇಜ್ ನಲ್ಲಿರುವ awardees ವಿಭಾಗಕ್ಕೆ ಹೋದರೆ ಪರಮ ವೀರ ಚಕ್ರ, ಮಹಾ ವೀರ ಚಕ್ರ, ವಿರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರದ ಫೋಟೋ ಕಾಣುತ್ತದೆ. ನೀವು ಆ ಫೋಟೋದ ಮೇಲೆ ಕ್ಲಿಕ್ ಮಾಡಿದರೆ ಇದೂವರೆಗೂ ಆ ಗೌರವಕ್ಕೆ ಪಾತ್ರರಾದವರ ಫೋಟೋಗಳು ಕಾಣುತ್ತದೆ. ಈ ಫೋಟೋದ ಮೇಲೆ ಕ್ಲಿಕ್ ಮಾಡಿದರೆ ಆ ವ್ಯಕ್ತಿಗೆ ಸಂಬಂಧಿಸಿದ ವಿವರ ಇರುವ ಹೊಸ ಪೇಜ್ ಓಪನ್ ಆಗುತ್ತದೆ.

  • ಪಠಾಣ್‍ಕೋಟ್ ಹುತಾತ್ಮ ಯೋಧ ನಿರಂಜನ್‍ಗೆ ರಾಜ್ಯ ಸರ್ಕಾರದಿಂದ ಅವಮಾನ

    ಪಠಾಣ್‍ಕೋಟ್ ಹುತಾತ್ಮ ಯೋಧ ನಿರಂಜನ್‍ಗೆ ರಾಜ್ಯ ಸರ್ಕಾರದಿಂದ ಅವಮಾನ

    ಬೆಂಗಳೂರು: ಕರುನಾಡ ಮಣ್ಣಿನ ವೀರ ಯೋಧ ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಸಮಾಧಿಯಲ್ಲೂ ರಾಜಕೀಯದಾಟ, ರಸ್ತೆಗೆ ಯೋಧನ ಹೆಸರಿಡಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರೇ ಅಡ್ಡ, ಬೆಂಗಳೂರಿನ ವೀರ ಯೋಧನಿಗೆ ಕನ್ನಡ ಮಣ್ಣಿನಲ್ಲೇ ಅವಮಾನ.

    ಹೌದು. ಪಂಜಾಬಿನಲ್ಲಿರುವ ವಾಯುನೆಲೆ ಪಠಾಣ್ ಕೋಟ್‍ನಲ್ಲಿ ಲೆಫ್ಟಿನೆಂಟ್ ನಿರಂಜನ್ ಎದೆಯುಬ್ಬಿಸಿ ಉಗ್ರರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದರು. ಕನ್ನಡ ಮಣ್ಣಿನ ಯೋಧ, ನಮ್ಮ ಬೆಂಗಳೂರಿನ ಹೆಮ್ಮೆಯ ನಿರಂಜನ್ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟರು.

    ಆದರೆ ನಮ್ಮ ನೀಚ ರಾಜಕೀಯ ವ್ಯವಸ್ಥೆ ನಿರಂಜನ್ ಹೆಸರನ್ನು ರಸ್ತೆಗೆ ಇಡುವುದಕ್ಕೆ ರಾಜಕೀಯದಾಟ ಆಡುತ್ತಿದೆ. ದೊಡ್ಡ ಬೊಮ್ಮಸಂದ್ರ ಹೆಬ್ಬಾಗಿಲಿನಿಂದ ವಿದ್ಯಾರಣ್ಯಪುರದ ನಂಜಪ್ಪ ವೃತ್ತದವರೆಗಿನ ಮುಖ್ಯರಸ್ತೆಗೆ ನಿರಂಜನ್ ಹೆಸರು ಇಡೋದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ರು. ಅಂತಿಮ ತೀರ್ಮಾನವೂ ಆಗಿತ್ತು.

    ಈ ಮಧ್ಯೆ ಇದಕ್ಕಿದ್ದ ಹಾಗೆ ಕೃಷಿ ಸಚಿವ ಕೃಷ್ಣಬೈರೇಗೌಡರು ಯೋಧನ ಹೆಸರು ಬೇಡ, ಸ್ವಾತಂತ್ರ್ಯ ಹೋರಾಟಗಾರ ಪೇಟಾ ಸಿದ್ದಪ್ಪನ ಹೆಸರು ಇಡಿ ಎಂದು ಬಿಬಿಎಂಪಿಗೆ ಆದೇಶ ಕೊಟ್ಟು ಪತ್ರ ಬರೆದಿದ್ದಾರೆ. ಅಸಲಿಗೆ ಈ ಹೆಸರಿನ ಸ್ವಾತಂತ್ರ್ಯ ಹೋರಾಟಗಾರರು ಯಾರು ಇಲ್ಲ ಎಂದು ದೊರೆಸ್ವಾಮಿಯೇ ಹೇಳಿದ್ದಾರಂತೆ. ಆದ್ರೆ ಮಿನಿಸ್ಟರ್ ಮಾತನ್ನು ಪಾಲಿಸೋದಕ್ಕೆ ಮೇಯರ್ ಅವರು ಮುಂದಾಗುತ್ತಿದ್ದಾರೆ ಎಂದು ನಿರಂಜನ್ ಸ್ನೇಹಿತ ಶಶಾಂಕ್ ಹೇಳಿದ್ದಾರೆ.

    ಶೌರ್ಯ ಚಕ್ರ ಪ್ರಶಸ್ತಿ ವಾಪಾಸ್:
    ಹರ್ಯಾಣ ಸರ್ಕಾರ ನಿರಂಜನ್ ಅವರ ಹೆಸರಿನಲ್ಲಿ ಆಡಿಟೋರಿಯಂ ಸ್ಥಾಪನೆ ಮಾಡಿದೆ. ಆದರೆ ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಚಿವರಿಗೆ ನಿಜಕ್ಕೂ ಮಾನ ಮರ್ಯಾದೆ ಇಲ್ಲ, ನಿರಂಜನ್ ಹೆತ್ತವರು ಈ ಬೆಳವಣಿಗೆ ನೋಡಿ ಕಣ್ಣೀರಿಡುತ್ತಿದ್ದಾರೆ. ಕೇಂದ್ರ ಸರ್ಕಾರ ನಿರಂಜನ್‍ಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿದೆ. ಆದ್ರೇ ನಮ್ಗೆ ಈಗ ಬೇಸರವಾಗಿದೆ, ಇದನ್ನು ವಾಪಾಸ್ ಮಾಡುವ ಬಗ್ಗೆಯೂ ಯೋಚನೆ ಮಾಡುತ್ತೇವೆ ಅಂತಾ ಶಶಾಂಕ್ ಹೇಳಿದ್ದಾರೆ.

    ನಿರಂಜನ್ ಯಾರು?
    2016ರ ಜನವರಿ 1 ಮತ್ತು 2ರ ನಡುರಾತ್ರಿಯಲ್ಲಿ ಉಗ್ರರು ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದಾಗ, ಎನ್‍ಎಸ್‍ಜಿ ಯೋಧರನ್ನು ಅಲ್ಲಿಗೆ ಕಳುಹಿಸಲಾಯಿತು. ಎನ್‍ಎಸ್‍ಜಿ ತಂಡದಲ್ಲಿ ಕರ್ನಾಟಕದ ನಿರಂಜನ್ ಅವರೂ ಇದ್ದರು. ದಾಳಿ ಎಸಗಿದ್ದ ಉಗ್ರನ ಬಳಿಯಿದ್ದ ಗ್ರೆನೇಡ್ ನಿಷ್ಕ್ರಿಯಗೊಳಿಸಲು ನಿರಂಜನ್ ಮುಂದಾಗಿದ್ದ ವೇಳೆ ಅದು ಸ್ಫೋಟಗೊಂಡಿತ್ತು. ಗ್ರೆನೇಡ್ ಸ್ಫೋಟದಿಂದಾಗಿ ಅವರ ಶ್ವಾಸಕೋಶಗಳು ಒಡೆದಿದ್ದವು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ನಿರಂಜನ್ ಹುತಾತ್ಮರಾಗಿದ್ದರು. ನಿರಂಜನ್ ಅವರು ಅಮೆರಿಕದ ಎಫ್‍ಬಿಐನಿಂದ ತರಬೇತಿ ಪಡೆದಿದ್ದರು. ಪಾಲಕ್ಕಾಡ್ ಜಿಲ್ಲೆಯ ಮುನ್ನರಾರ್ ಕಾಡ್ ಮೂಲದ ನಿರಂಜನ್, ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. 40 ವರ್ಷದ ಹಿಂದೆಯೇ ಅವರ ಕುಟುಂಬವು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿತ್ತು.