Tag: ಶೌಚಾಯಲ

  • ಹಳೆಯ KSRTC ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಹೈಟೆಕ್ ಟಾಯ್ಲೆಟ್

    ಹಳೆಯ KSRTC ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಹೈಟೆಕ್ ಟಾಯ್ಲೆಟ್

    ಬೆಂಗಳೂರು: ಸಂಚಾರದಲ್ಲಿಲ್ಲದ ಹಳೆಯ ಬಸ್ಸನ್ನು ಮಹಿಳಾ ಪ್ರಯಾಣಿಕರಿಗಾಗಿ ಹೈಟೆಕ್ ಶೌಚಾಲಯವನ್ನಾಗಿ ಪರಿವರ್ತಿಸಿ, ಅವುಗಳನ್ನು ಮೆಜೆಸ್ಟಿಕ್‍ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಬಸ್ ನಿಲ್ದಾಣದಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ.

    ಕೆಎಸ್ಆರ್‌ಟಿಸಿ ಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ‘ಸ್ತ್ರೀ ಟಾಯ್ಲೆಟ್’ ಲೋಗೋವನ್ನು ಬಿಡುಗಡೆ ಮಾಡಿದೆ.

    2016ರಲ್ಲಿ ಪುಣೆ ಮಹಾನಗರ ಪಾಲಿಕೆ, ಪುಣೆ ಮಹಾನಗರ ಪರಿವಾಹನ್ ಮಹಮಂಡಲ್ ಲಿಮಿಟೆಡ್ (ಪಿಎಂಪಿಎಂಎಲ್) ಜೊತೆ ಸೇರಿ ಆರು ಹಳೆಯ ಬಸ್ಸುಗಳನ್ನು ಮೊಬೈಲ್ ಶೌಚಾಲಯಗಳಾಗಿ ಪರಿವರ್ತಿಸಿತ್ತು.

    ಪುಣೆಯಲ್ಲಿ ಖಾಸಗಿ ಸಂಸ್ಥೆಯೊಂದು ಹಳೆಯ ಎಸಿ ಅಲ್ಲದ ಬಸ್ಸಿನಲ್ಲಿ ಶೌಚಾಲಯ ನಿರ್ಮಿಸುತ್ತಿದೆ. ಹೀಗಾಗಿ ನಾವು ಅದೇ ರೀತಿ ಶೌಚಾಲಯವನ್ನು ನಿರ್ಮಿಸಲು ಮುಂದಾಗಿದ್ದೇವೆ. ಆದರೆ ಇದನ್ನು ಮಾರ್ಚ್ 8 ರಂದು (ಅಂತರರಾಷ್ಟ್ರೀಯ ಮಹಿಳಾ ದಿನ) ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಆದರೆ ಈ ತಿಂಗಳ ಅಂತ್ಯದ ವೇಳೆಗೆ ಇದು ಬೆಂಗಳೂರಿಗೆ ತಲುಪಲಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಯೋಜನೆಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ತನ್ನ ಸಿಎಸ್‍ಆರ್ ನಿಧಿಯಡಿಯಲ್ಲಿ 12 ಲಕ್ಷ ರೂಪಾಯಿ ಭರಿಸುತ್ತಿದೆ.

    ವಿಶೇಷತೆ ಏನು?
    ಬಸ್ಸಿನಲ್ಲಿ ಆರು ಶೌಚಾಲಯಗಳಿರುತ್ತವೆ. ಅವುಗಳಲ್ಲಿ ಮೂರು ಭಾರತೀಯ ಮತ್ತು ಉಳಿದವು ವಿದೇಶಿ ಶೈಲಿಯ ಕಮೋಡ್‍ಗಳು ಇರುತ್ತವೆ. ಅಗತ್ಯ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಲಿಸಲಾಗುತ್ತದೆ. ಫ್ಲಶ್, ಶವರ್, ಸ್ಯಾನಿಟರಿ ನ್ಯಾಪ್ ವೆಂಡಿಂಗ್ ಮೆಷಿನ್, ಮಗುವಿಗೆ ಹಾಲುಣಿಸುವ ರೂಮ್, ಮಕ್ಕಳ ಡೈಪರ್ ಬದಲಾಯಿಸುವ ರೂಮ್ ಮತ್ತು ಪ್ಯಾನಿಕ್ ಬಟನ್ ಅನ್ನು ಹೊಂದಿರುತ್ತದೆ.

    ಪ್ರಾಯೋಗಿಕ ಯೋಜನೆಯ ಆಧಾರದ ಮೇಲೆ, ಹೆಚ್ಚು ಹಳೆಯ ಬಸ್ಸಿಗಳನ್ನು ವಾಶ್‍ರೂಮ್‍ಗಳಾಗಿ ನಿಯೋಜಿಸಿ ಕಿಕ್ಕಿರಿದ ಬಸ್ ನಿಲ್ದಾಣಗಳಲ್ಲಿ ಇರಿಸಲಾಗುವುದು. ಈ ಬಯೋ ಶೌಚಾಲಯಗಳು ಮಹಿಳಾ ಉದ್ಯೋಗಿಗಳಿಗೆ ಸಹಕಾರಿಯಾಗುತ್ತವೆ. ಯಾಕೆಂದರೆ ಹೆಚ್ಚಿನ ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿರಲ್ಲ. ಹೀಗಾಗಿ ಈ ರೀತಿಯ ಶೌಚಾಲಯ ಅವರಿಗೆ ಉಪಯುಕ್ತವಾಗುತ್ತವೆ.

  • ಶೌಚಾಲಯಕ್ಕೆ ಹೋಗಿ ಬರೋದಾಗಿ ಹೇಳಿ ಮಗು ಕೊಟ್ಟು ಪಾರಾರಿ!

    ಶೌಚಾಲಯಕ್ಕೆ ಹೋಗಿ ಬರೋದಾಗಿ ಹೇಳಿ ಮಗು ಕೊಟ್ಟು ಪಾರಾರಿ!

    ಧಾರವಾಡ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ಹಾವಳಿ ಜೋರಾಗಿದೆ. ಪೋಷಕರು ತಮ್ಮ ಮಕ್ಕಳು ಎಲ್ಲಿ ಕಳ್ಳತನವಾಗಿ ಬಿಡುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಆದರೆ ಧಾರವಾಡದಲ್ಲಿ ತಾಯಿಯೊಬ್ಬಳು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಅಪರಿಚಿತ ಮಹಿಳೆಯೊಬ್ಬರ ಕೈಗೆ ತನ್ನ ಮಗುವನ್ನ ಕೊಟ್ಟು ಪರಾರಿಯಾಗಿದ್ದಾಳೆ.

    ಧಾರವಾಡ ನಗರದ ಚರಂತಿಮಠ ಗಾರ್ಡನ್ ನ ಬನಶಂಕರಿ ಕಲ್ಯಾಣ ಮಂಟಪದ ಬಳಿ ಸೋಮವಾರ ರಾತ್ರಿ ಮಹಿಳೆಯೊಬ್ಬಳು ತನ್ನ ನವಜಾತ ಗಂಡು ಮಗುವನ್ನು ಅಲ್ಲೇ ಇದ್ದ ಇಬ್ಬರು ಮಹಿಳೆಯರ ಕೈಗೆ ಕೊಟ್ಟು ಹೋಗಿದ್ದಾಳೆ.

    ಮಗು ಪಡೆದಿದ್ದ ಮಹಿಳೆಯರು ಶೌಚಾಲಯಕ್ಕೆ ಹೋಗುವುದಾಗಿ ಹೇಳಿದ್ದ ಈ ಮಹಿಳೆಯ ವಾಪಸ್ ಬರುವಿಕೆಯನ್ನ ಕಾದು ಕುಳಿತ್ತಿದ್ದರು. ಆದರೆ ತುಂಬಾ ಸಮಯವಾದರೂ ಆಕೆ ಬರಲಿಲ್ಲ. ಕೊನೆಗೆ ಆ ಮಗುವನ್ನ ಶಹರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

    ಪೊಲೀಸರು ಮಗುವನ್ನ ಜಿಲ್ಲಾ ಆಸ್ಪತ್ರೆಯಲ್ಲಿ ಆರೈಕೆ ಮಾಡಿದ್ದು, ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಕೂಡಾ ಮಗು ಕೊಟ್ಟು ಪರಾರಿಯಾಗಿದ್ದ ತಾಯಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.