Tag: ಶೋ ರೂಂ

  • ನಮ್ಮಿಂದ ಏನೂ ಮೋಸ ಆಗಿಲ್ಲ, ಎಲ್ಲವೂ ಗ್ರಾಹಕನದ್ದೇ ತಪ್ಪು: ತುಮಕೂರು ಶೋ ರೂಂ ಸ್ಪಷ್ಟನೆ

    ನಮ್ಮಿಂದ ಏನೂ ಮೋಸ ಆಗಿಲ್ಲ, ಎಲ್ಲವೂ ಗ್ರಾಹಕನದ್ದೇ ತಪ್ಪು: ತುಮಕೂರು ಶೋ ರೂಂ ಸ್ಪಷ್ಟನೆ

    ತುಮಕೂರು: ಅಂತರಸನಹಳ್ಳಿಯ ಟಾಟಾ ಪ್ರೇರಣಾ ಮೋಟರ್ಸ್ ನಲ್ಲಿ ಯುವ ರೈತ ಕುಮಾರ್ ಖರೀದಿಸಿದ್ದ ಟಾಟಾ ಇಂಟ್ರಾ ಗೂಡ್ಸ್ (TATA Intra Goods) ವಾಹನದಲ್ಲಿ ಮೋಸ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋ ರೂಂ ಸರ್ವಿಸ್ ಮ್ಯಾನೇಜರ್ ಏಕನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಸ್ಪಷ್ಟನೆ ಏನು?: 27 ಸಾವಿರ ಕಿ.ಮೀ. ಗಾಡಿ ರನ್ ಆಗಿದ್ದಾಗ ಒಂದು ಬಾರಿ ಸರ್ವಿಸ್ ಮಾಡಲು ಗಾಡಿ ತಂದಿದ್ದಾರೆ. ಪವರ್ ಸ್ಟೇರಿಂಗ್ ಸಮಸ್ಯೆ ಎಂದು ಬಂದಿದ್ದರು. ಅವಾಗ ನಾವು ಬದಲಾವಣೆ ಮಾಡಿಕೊಟ್ಟಿದ್ದೇವೆ. ಈಗ ಬಂದು ಹೊಸ ಸಮಸ್ಯೆ ಹೇಳುತ್ತಿದ್ದಾರೆ. ಹೊಂಡ ಗುಂಡಿಯಲ್ಲಿ ಗಾಡಿ ಬಿದ್ರೆ ಟಕ್ ಎಂದು ಸೌಂಡ್ ಬರುತ್ತೆ ಅಂತ ಹೇಳುತ್ತಿದ್ದಾರೆ. ಅದು ನಮಗೆ ಕಂಡು ಬರುತ್ತಿಲ್ಲ. ಇದನ್ನೂ ಓದಿ: ಖರೀದಿಸಿದ ಆರೇ ತಿಂಗಳಲ್ಲಿ ವಾಹನ ರಿಪೇರಿ- ಹಳೆ ಇಂಜಿನ್‍ಗೆ ಹೊಸ ಬಾಡಿ ಹಾಕಿರುವ ಆರೋಪ

    ಗಾಡಿಯನ್ನು ಒಂದು ದಿನ ಸಂಪೂರ್ಣವಾಗಿ ಶೋ ರೂಂನಲ್ಲಿ ಬಿಟ್ಟು ಹೋಗಿ ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ಗಾಡಿ ಬಿಟ್ಟು ಹೋಗಲಿಕ್ಕೆ ಮುಂದಾಗುತ್ತಿಲ್ಲ. ಒಂದು ದಿನ ಗಾಡಿ ಬಿಟ್ಟು ಹೋದರೆ ನಮಗೆ ವ್ಯವಹಾರ ನಷ್ಟ ಆಗುತ್ತದೆ ಅಂತ ಹೇಳುತ್ತಾರೆ. ಗಾಡಿ ರಿಪೇರಿಗೆ ಬಿಟ್ಟರೆ ಒಂದು ದಿನದ ಮಟ್ಟಿಗೆ ಬದಲಿ ಇನ್ನೊಂದು ಗಾಡಿ ಅವರಿಗೆ ಕೊಡಬೇಕಂತೆ. ಇಲ್ಲಾಂದ್ರೆ ಆ ದಿನದ ಒಂದು ಬಾಡಿಗೆ ಕೊಡಿ ಅಂತ ಹೇಳ್ತಾರೆ. ಯಾವ ಕಂಪನಿಯಲ್ಲೂ ಆ ರೀತಿ ಆಯ್ಕೆ ಇಲ್ಲ.

    ಈ ಮಾದರಿಯ ವಾಹನದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ದೂರು ಬಂದಿಲ್ಲ. ಮೊದಲ ಬಾರಿಗೆ ದೂರು ಬಂದಿದೆ. ಅವರು ಗಾಡಿಯನ್ನು ಒಂದಿನ ಪೂರ್ತಿ ಗ್ಯಾರೇಜ್ ನಲ್ಲಿ ಬಿಟ್ಟು ಹೋದರೆ ನಾವು ಫ್ರೀ ಆಫ್ ಕಾಸ್ಟ್ಲಿ ಎಲ್ಲವೂ ರೆಡಿ ಮಾಡಿಕೊಡುತ್ತೇವೆ. ನಿಮ್ಮ ಗಾಡಿಯ ಸಮಸ್ಯೆಯನ್ನು ನೀವೇ ಮುಂದೆ ನಿಂತು ರಿಪೇರಿ ಮಾಡಿಕೊಂಡು ಹೋಗಿ ಎಂದು ನಾವು ಹೇಳಿದ್ದೇವೆ. ಆದರೆ ಅವರು ನಮ್ಮ ಮಾತು ಕೇಳುತ್ತಿಲ್ಲ.

    ಆರು ತಿಂಗಳಿಗೆ 70 ಸಾವಿರ ಕಿ.ಮೀ. ಗಾಡಿ ಓಡಿದೆ. ಅಷ್ಟೊಂದು ರನ್ ಆಗಲು ಹೇಗೆ ಸಾಧ್ಯ? ಟಾಟಾ ಮೋಟರ್ಸ್ ಮೊದಲ 72 ಸಾವಿರ ಕಿ.ಮೀ.ವರೆಗೆ ಮಾತ್ರ ಉಚಿತವಾಗಿ ರಿಪೇರಿ ಮಾಡಲಿಕ್ಕೆ ಅವಕಾಶ ಇದೆ. ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಏಕನಾಥ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಚೀಲ, ಬೆಡ್‍ಶೀಟ್‍ನಲ್ಲಿ ಸುತ್ತಿದ ರೀತಿಯಲ್ಲಿ ವೃದ್ಧನ ಮೃತದೇಹ ಪತ್ತೆ

    ಏನಿದು ಪ್ರಕರಣ?
    ಟಾಟಾ ಶೋ ರೂಂನಿಂದ ನನಗೆ ಮೋಸ ಆಗಿದೆ. ಖರೀದಿಸಿದ ಟಾಟಾ ಗೂಡ್ಸ್ ವಾಹನ (TaTa Goods) 25 ದಿನಕ್ಕೆ ಕೆಟ್ಟು ನಿಂತಿದೆ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿ ಕೊಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಯುವ ರೈತನೋರ್ವ ಶೋ ರೂಂ ಎದುರುಗಡೆ ಪ್ರತಿಭಟನೆ ನಡೆಸಿದ್ದರು.

    ತುಮಕೂರಿನ ಅಂತರಸಹಳ್ಳಿಯ ಟಾಟಾ ಶೋರೂಂನಲ್ಲಿ ಹೆಬ್ಬೂರಿನ ಕುಮಾರ್ ಎಂಬ ಯುವ ರೈತನೋರ್ವ ಮೇ ತಿಂಗಳಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನ ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ 25 ದಿನದಲ್ಲೇ ವಾಹನ ರಿಪೇರಿಗೆ ಬಂದಿದೆ. ಸ್ಟೇರಿಂಗ್ ಸಮಸ್ಯೆ, ಚಾರ್ಸಿ ವೆಲ್ಡಿಂಗ್, ಎಕ್ಸ್ ಲೇಟರ್ ಒತ್ತಿದಾಗ ಗಾಡಿ ಪೂರ್ತಿ ಶೇಖ್ ಆಗೋ ಸಮಸ್ಯೆ ಕಂಡು ಬಂದಿದೆ. ಕಂಪನಿ ರೂಲ್ಸ್ ಪ್ರಕಾರ 72 ಸಾವಿರ ಕಿ.ಮೀ. ಒಳಗೆ ಓಡಿದರೆ ರೀಪ್ಲೇಸ್‌ಮೆಂಟ್‌ ಮಾಡಿಕೊಡಬೇಕು. ಆದರೆ ಶೋ ರೂಂನವರು ಕಳೆದ 6 ತಿಂಗಳಲ್ಲಿ ಬರೋಬ್ಬರಿ 11 ಬಾರಿ ರಿಪೇರಿ ಮಾಡಿ ಕಳುಹಿಸಿದ್ದಾರೆಯೇ ಹೊರತು ಬದಲಿ ವಾಹನ ಕೊಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಯುವ ರೈತ ಕುಮಾರ್ ಟಾಟಾ ಶೋ ರೂಂ ಬಳಿ ಪ್ರತಿಭಟನೆ ಮಾಡಿದ್ದಾರೆ.

    ಯುವ ರೈತ ಕುಮಾರ್ ಕೃಷಿ ಬಳಕೆಗೆ ವಾಹನ ಬಳಸುವ ಜೊತೆಗೆ ರೈತರಿಂದ ಸಂಗ್ರಹಿಸಿದ ಹಾಲನ್ನೂ ವಾಹನದ ಮೂಲಕ ಡೈರಿಗೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ. ಮೊನ್ನೆ ದಿನ ಗೂಡ್ಸ್ ವಾಹನ ಮತ್ತೇ ಇದ್ದಕ್ಕಿದ್ದ ಹಾಗೆ ಕೈಕೊಟ್ಟಿತು. ಪರಿಣಾಮ ಸಕಾಲಕ್ಕೆ ಡೈರಿಗೆ ತಲುಪಲು ಆಗದೇ ಸುಮಾರು 900 ಲೀಟರ್ ಹಾಲು ಕೆಟ್ಟು ಹೋಗಿ ಸುಮಾರು 27 ಸಾವಿರ ರೂ. ನಷ್ಟ ಆಗಿದೆ. ಕಾಟಾಚಾರಕ್ಕೆ ಶೋರೂಂನವರು ರಿಪೇರಿ ಮಾಡಿಕೊಡ್ತಿದ್ದಾರೆಯೇ ಹೊರತು ಬದಲಿ ವಾಹನ ಕೊಡುವ ಮಾತನಾಡುತ್ತಿಲ್ಲ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿಕೊಟ್ಟಿದ್ದಾರೆ ಅನ್ನೋ ಆರೋಪ ಕುಮಾರ್ ಮಾಡಿದ್ದಾರೆ. ಆದರೆ ಶೋ ರೂಂನವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ನವೆಂಬರ್ ಅಂತ್ಯಕ್ಕೆ ಶ್ರೀರಂಗಪಟ್ಟಣ-ಮದ್ದೂರು ಬೈಪಾಸ್ ಓಪನ್

    ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಾಹನ ಖರೀದಿಸಿ ಪರದಾಡುತ್ತಿದ್ದ ಯುವ ರೈತ ಕುಮಾರ್ ಬದಲಿ ವಾಹನ ಕೊಡುವಂತೆ ಪಟ್ಟು ಹಿಡಿದಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ನೋ ಗ್ಯಾರೆಂಟಿ, ನೋ ವಾರೆಂಟಿ – ಮೊಬೈಲ್‍ಗೆ ಸರತಿ ಸಾಲಿನಲ್ಲಿ ನಿಂತ ಜನ

    ನೋ ಗ್ಯಾರೆಂಟಿ, ನೋ ವಾರೆಂಟಿ – ಮೊಬೈಲ್‍ಗೆ ಸರತಿ ಸಾಲಿನಲ್ಲಿ ನಿಂತ ಜನ

    ದಾವಣಗೆರೆ: ಜಿಲ್ಲೆಯ ಅಶೋಕ ರಸ್ತೆಯಲ್ಲಿ ಪ್ರಾರಂಭವಾದ ಸಂಗೀತಾ ಮೊಬೈಲ್ಸ್ ನೂತನ ಶಾಖೆ ಇಂದು 200 ರೂ. ಗೆ ಒಂದು ಮೊಬೈಲ್ ನೀಡುವುದಾಗಿ ಆಫರ್ ನೀಡಿದೆ.

    ಇಂದು ಬೆಳಗ್ಗೆಯಿಂದಲೇ ಜನ ಮೊಬೈಲ್ ಖರೀದಿಸಲು ಸಾಲುಗಟ್ಟಿ ನಿಂತಿದ್ದರು. ದಾವಣಗೆರೆಯಲ್ಲಿ ಐದನೇ ಸಂಗೀತ ಮೊಬೈಲ್ ಶೋ ರೂಂ ಹೊಸದಾಗಿ ಅಶೋಕ ರಸ್ತೆಯಲ್ಲಿ ಆರಂಭಗೊಂಡಿದೆ. ಹಾಗಾಗಿ ಆರಂಭಿಕ ಕೊಡುಗೆಯಾಗಿ ಕೇವಲ 200 ರೂ.ಗೆ ಒಂದು ಕೀಪ್ಯಾಡ್ ಮೊಬೈಲ್ ಅನ್ನು ನೀಡಲಾಗುತ್ತಿದೆ. ಈ ಮೊಬೈಲ್ ಪಡೆದುಕೊಳ್ಳಲು ಜನರು ಬೆಳ್ಳಂಬೆಳಗ್ಗೆಯೇ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದಾರೆ. ಇದನ್ನೂ ಓದಿ: ನೋ ಗ್ಯಾರೆಂಟಿ, ವಾರೆಂಟಿ 200 ರೂಪಾಯಿ ಮಾತ್ರ- ಮೊಬೈಲ್ ಖರೀದಿಸಲು ಮುಗಿಬಿದ್ದ ಗ್ರಾಹಕರು

    ಮೊದಲು ಬಂದ 200 ಮಂದಿಗೆ ಇನ್ನೂರು ರೂ.ಗೆ ಮೊಬೈಲ್ ನೀಡಲಾಗುವುದು ಎಂದು ಶೋ ರೂಂನವರು ಆಫರ್ ಕೊಟ್ಟಿದ್ದರು. ಹೀಗಾಗಿ ನೂರಾರು ಜನರು ಅಂಗಡಿ ಮುಂದೆ ಸಾಲಿನಲ್ಲಿ ನಿಂತಿದ್ದಾರೆ. ಮೊದಲು ಬಂದ 200 ಜನಕ್ಕೆ ಮಾತ್ರ ಕೀಪ್ಯಾಡ್ ಮೊಬೈಲ್ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ ತಕ್ಷಣ ಜನರು ಮೊಬೈಲ್‍ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಹಿಳೆಯರು ಕೂಡ ನಿಂತು ಮೊಬೈಲ್ ಪಡೆಯಲು ನಿಂತಿದ್ದು ವಿಶೇಷವಾಗಿತ್ತು.

    ಶೋ ರೂಂನವರು ನೀಡುವ ಮೊಬೈಲ್‍ಗೆ ಯಾವುದೇ ಗ್ಯಾರಂಟಿ ಮತ್ತು ವಾರಂಟಿ ಇರುವುದಿಲ್ಲ. ಇದು ನಮ್ಮ ಅಂಗಡಿಯ ಪ್ರಚಾರಕ್ಕಾಗಿ ಮಾತ್ರ ಕೊಡುತ್ತಿರುವುದು ಎಂದು ಅಂಗಡಿ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೂ ಜನ ಅದಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳದೇ ಬಿರುಬಿಸಿಲಿನಲ್ಲೂ ಮೊಬೈಲ್ ಖರೀದಿಸಲೇಬೇಕೆಂದು ಹಠಹಿಡಿದು ನಿಂತಿದ್ದಾರೆ. ಕೆಲವರಿಗೆ ಮೊಬೈಲ್ ಸಿಗದ ಕಾರಣ ಬೇಸರಗೊಂಡು ವಾಪಸ್ಸು ಹೋದರು. ಕೆಲಕಾಲ ಶೋರಂ ಮುಂಭಾಗ ಗದ್ದಲದ ವಾತವರಣ ಸೃಷ್ಟಿಯಾಗಿದ್ದು, ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

  • ಉಡುಪಿಯಲ್ಲಿ ಅವಾಂತರ ಸೃಷ್ಟಿಸಿದ ತುಂತುರು ಮಳೆ

    ಉಡುಪಿಯಲ್ಲಿ ಅವಾಂತರ ಸೃಷ್ಟಿಸಿದ ತುಂತುರು ಮಳೆ

    – ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

    ಉಡುಪಿ: ಜಿಲ್ಲೆಯಲ್ಲಿ ತುಂತುರು ಮಳೆ ಅವಾಂತರ ಸೃಷ್ಟಿಸಿದೆ. ಅಂಗಡಿಯ ನೇಮ್ ಬೋರ್ಡ್ ನಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಢ ಸಂಭವಿಸಿದೆ.

    ಉಡುಪಿಯ ಇಂದ್ರಾಳಿ ರೈಲ್ವೇ ಸೇತುವೆ ಬಳಿ ಇರುವ ದ್ವಿಚಕ್ರ ವಾಹನಗಳ ಶೋರೂಂ ಜಯದೇವ ಮೋಟಾರ್ಸ್ ನಲ್ಲಿ ಭಾನುವಾರ ರಾತ್ರಿ 9.45ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಶೋರೂಂ ನ ನೇಮ್ ಬೋರ್ಡ್ ನಲ್ಲಿ ಕಾಣಿಸಿಕೊಂಡ ಬೆಂಕಿ, ಮೂರು ಮಹಡಿಗಳ ಕಟ್ಟಡಕ್ಕೆ ಆವರಿಸಿದೆ. ಎರಡನೇ ಮಹಡಿಯಲ್ಲಿ ದ್ವಿಚಕ್ರ ವಾಹನಗಳ ಶೋರೂಂ ಇದೆ. ಶೋರೂಂನಲ್ಲಿದ್ದ ಹೊಸ ವಾಹನಗಳು, ಸರ್ವಿಸ್ ಗೆ ಬಂದಿದ್ದ ಗಾಡಿಗಳೆಲ್ಲ ಸುಟ್ಟಿದೆ. ಈ ಕಟ್ಟಡದ ಪಕ್ಕದಲ್ಲೇ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಹ ಇದ್ದು ಸ್ಥಳೀಯರಲ್ಲಿ ಅಪಾಯದ ಭೀತಿ ಎದುರಾಗಿತ್ತು. ಪೆಟ್ರೋಲ್ ಪಂಪ್ ಪಕ್ಕದ ಅಪಾರ್ಟ್ ಮೆಂಟ್ ಜನ ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಗೆ ಬಂದಿದ್ದಾರೆ.

    ಈ ಬಗ್ಗೆ ಸ್ಥಳೀಯ ಸುರೇಂದ್ರನಾಥ ಶೆಟ್ಟಿ ಮಾತನಾಡಿ, ಪೆಟ್ರೋಲ್ ಪಂಪ್ ಗೆ ಬೆಂಕಿ ಬಿದ್ದಿದೆ ಎಂದು ಮೊದಲು ಮಾಹಿತಿ ಬಂತು. ಪಂಪ್ ಹಿಂದಿನ ಅಪಾರ್ಟ್ ಮೆಂಟ್ ನಲ್ಲಿ ನಾವಿರೋದು. ಜೀವ ಕೈಯಲ್ಲಿ ಹಿಡಿದು ಕೆಳಗೆ ಓಡಿದೆವು. ನಗರಸಭೆಯಂತಹ ಕಟ್ಟಡಕ್ಕೆ ಪರವಾನಿಗೆ ಕೊಡುವಾಗ ಸರಿಯಾಗಿ ಪರಿಶೀಲಿಸಬೇಕು ಎಂದರು.

    ಶೋರೂಂ ನ ಪಕ್ಕದಲ್ಲೇ ಬಿಡಿಭಾಗಗಳ ವಿಭಾಗ ಇದೆ. ಕೆಳಗೆ ವಾಷಿಂಗ್ ಏರಿಯಾ ಇದೆ. ಕಟ್ಟಡದ ನೆಲ ಅಂತಸ್ತಲ್ಲಿ ಕ್ಲಿನಿಕ್, ಬಟ್ಟೆಯಂಗಡಿಯಿದ್ದು ಅಲ್ಲಿಗೂ ಬೆಂಕಿ ಆವರಿಸಿತ್ತು. ಬಟ್ಟೆಗಳನ್ನು ಅಂಗಡಿ ಮಾಲೀಕರು ಹೊರಗೆ ಸಾಗಿಸಿ ಭಾರೀ ನಷ್ಟವನ್ನು ತಡೆದಿದ್ದಾರೆ. ಟಾಪ್ ಫ್ಲೋರ್ ನಲ್ಲಿ ಇದ್ದ ಜಿಮ್ ಗೂ ಬೆಂಕಿ ಆವರಿಸಿದೆ. ಉಡುಪಿ, ಮಲ್ಪೆ, ಮಣಿಪಾಲ್ ಅಗ್ನಿಶಾಮಕ ದಳ ಸುಮಾರು ಎರಡು ಗಂಟೆ ಹರಸಾಹಸ ಪಟ್ಟು ಬೆಂಕಿ ನಂದಿಸಿದೆ. ಶೋರೂಮಲ್ಲಿ ಟೈಯರ್ ಸೆಕ್ಷನ್ ಇರುವುದರಿಂದ ಬೆಂಕಿ ಅಷ್ಟು ಸುಲಭದಲ್ಲಿ ನಂದಿರಲಿಲ್ಲ.

    ಅಗ್ನಿಶಾಮಕ ದಳದ ಅಧಿಕಾರಿ ನಿಜಗುಣಾನಂದ ಮಾತನಾಡಿ, ಘಟನೆ ನಡೆದ ಒಂದು ಗಂಟೆಯಲ್ಲಿ ಬೆಂಕಿ ತಹಬದಿಗೆ ಬಂದಿದೆ. ಎರಡೂವರೆ ಗಂಟೆಗಳ ಕಾಲ ಅಲ್ಲಲ್ಲಿ ಬೆಂಕಿ ಕಾಣಿಸುತ್ತಿತ್ತು. ಶೋರೂಂ ಒಳಗೆ ಟೈಯರ್, ಡೀಸೆಲ್ ಇರೋದ್ರಿಂದ ಬೆಂಕಿ ನಂದಿಸೋದು ಸವಾಲಾಯ್ತು. ಪೆಟ್ರೋಲ್ ಪಂಪ್ ಗೆ ಬೆಂಕಿ ಆವರಿಸದಂತೆ ತಡೆಯುವುದು ನಮ್ಮ ಮೊದಲ ಪ್ರಾಶಸ್ತ್ಯ ಆಗಿತ್ತು ಎಂದು ಹೇಳಿದರು.

    ಬೆಂಕಿ ಅವಘಡ ನೋಡಲು ಸಾವಿರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಜನರನ್ನು ಚದುರಿಸಲು ಮಣಿಪಾಲ ಪೊಲೀಸರು ಹರ ಸಾಹಸಪಟ್ಟರು. ಹೀರೋ ಮತ್ತು ವೆಸ್ಪಾ ಕಂಪನಿಯ ನೂರಾರು ವಾಹನ ಶೋರೂಮಲ್ಲಿದ್ದವು. ಬೆಂಕಿ ಅವಘಡದಿಂದ ಕೋಟ್ಯಂತರ ರೂಪಾಯಿಯ ವಾಹನಗಳು, ಜಯದೇವ ಮೋಟಾರಿನ ನ ಕಡತಗಳು ನಾಶವಾಗಿರುವ ಸಾಧ್ಯತೆ ಇದೆ. ಒಟ್ಟು ಎಷ್ಟು ನಷ್ಟವಾಗಿದೆ ಎಂದು ಇಂದು ಲೆಕ್ಕಾಚಾರ ನಡೆಯಲಿದೆ.