Tag: ಶೋಬಾ ಕರಂದ್ಲಾಜೆ

  • ದಾಖಲೆ ಆಹಾರ ಉತ್ಪಾದನೆ, ರಫ್ತಿನಲ್ಲೂ ದೇಶದ ಸಾಧನೆ: ಶೋಭಾ ಕರಂದ್ಲಾಜೆ

    ದಾಖಲೆ ಆಹಾರ ಉತ್ಪಾದನೆ, ರಫ್ತಿನಲ್ಲೂ ದೇಶದ ಸಾಧನೆ: ಶೋಭಾ ಕರಂದ್ಲಾಜೆ

    ಬೆಂಗಳೂರು: ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ಅಕ್ಕಿ, ಗೋಧಿಗಾಗಿ ಬೇರೆ ದೇಶದತ್ತ ನೋಡುತ್ತಿದ್ದ ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಮತ್ತು ದೂರದೃಷ್ಟಿಯ ಯೋಜನೆಗಳ ಫಲ ಇದಾಗಿದೆ. ಈ ಬಾರಿ 305 ಮಿಲಿಯ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮತ್ತು 326 ಮಿಲಿಯ ಮೆಟ್ರಿಕ್ ಟನ್ ತೋಟಗಾರಿಕಾ ಬೆಳೆ ಉತ್ಪಾದನೆ ಆಗಿದ್ದು, ಈ ವಿಚಾರದಲ್ಲಿ ದಾಖಲೆ ಉತ್ಪಾದನೆ ಸಾಧ್ಯವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

    ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ರಫ್ತು ವಿಚಾರದಲ್ಲೂ ವಿಶೇಷ ಸಾಧನೆ ಮಾಡಲು ನಾವು ಮುಂದಾಗಿದ್ದೇವೆ. ಆಹಾರ ಪದಾರ್ಥ ರಫ್ತಿನಲ್ಲೂ ನಾವೀಗ 9ನೇ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ಆಡಳಿತದಲ್ಲಿ ಕೃಷಿ ಮೂಲದಿಂದ ಜಿಡಿಪಿಗೆ ಕೇವಲ ಶೇ.13ರಿಂದ ಶೇ.14 ದಷ್ಟು ಕೊಡುಗೆ ಲಭಿಸುತ್ತಿತ್ತು. ಏಳು ವರ್ಷಗಳ ಬಿಜೆಪಿ ಆಡಳಿತದ ಬಳಿಕ ಅದು ಶೇ.20.22ಕ್ಕೆ ಏರಿದೆ. ಈ ರೀತಿ ಕೃಷಿ ಇಲಾಖೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

    ಪ್ರಧಾನಮಂತ್ರಿಯವರು ಕಿಸಾನ್ ಸಮ್ಮಾನ್ ಯೋಜನೆಯಡಿ ಇಲ್ಲಿನವರೆಗೆ 21 ಕೋಟಿ ರೈತರಿಗೆ 1,57,000 ಕೋಟಿ ರೂಪಾಯಿ ಬ್ಯಾಂಕ್ ಖಾತೆಗಳಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ನೀಡಿದ್ದಾರೆ. ಫಸಲ್ ಬಿಮಾ ಯೋಜನೆಯನ್ನೂ ಸರಳಗೊಳಿಸಲಾಗಿದೆ. ಯಾವುದೇ ಸಮಸ್ಯೆಗಳಿಲ್ಲದೆ ಖಾತೆಗೆ ಪರಿಹಾರಧನ ಬರುವಂತಾಗಿದೆ. ಇದೊಂದು ಕ್ರಾಂತಿಕಾರಿ ಬದಲಾವಣೆ ಎಂದರು.

    ನೈಸರ್ಗಿಕ ಕೃಷಿಗೆ ಆದ್ಯತೆ ಮತ್ತು ಪ್ರೋತ್ಸಾಹ ಕೊಡಲಾಗುತ್ತಿದೆ. ಹನಿ ನೀರಾವರಿಯಲ್ಲಿ ರಾಜ್ಯವು ದೇಶದಲ್ಲಿ ನಂಬರ್ ವನ್ ಆಗಿದೆ. ತೆಂಗು ರಫ್ತಿನ ಮೇಲೆ ಇದ್ದ ನಿಷೇಧವನ್ನು ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ತೆಂಗಿನ ಸಂಸ್ಕರಿತ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಸಾಧ್ಯವಾಗಲಿದೆ ಎಂದು ವಿವರಿಸಿದರು.

    ಟ್ರ್ಯಾಕ್ಟರ್, ಟಿಲ್ಲರ್, ಕೃಷಿ ಪರಿಕರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಸಬ್ಸಿಡಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಈ ಉತ್ಪನ್ನಗಳ ಗರಿಷ್ಠ ಮಾರಾಟ ದರವನ್ನು (ಎಂಆರ್ಪಿ) ಆನ್‍ಲೈನ್‍ನಲ್ಲಿ ಪ್ರಕಟಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಡೀಲರ್ ಅಂಗಡಿಯಲ್ಲೂ ಅದನ್ನು ದೊಡ್ಡದಾಗಿ ಪ್ರಕಟಿಸಬೇಕು. ಕೃಷಿ ಇಲಾಖೆಗಳಲ್ಲೂ ಈ ಕುರಿತ ಮಾಹಿತಿ ಸಿಗುವಂತಾಗಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದರು.

    ಹೆಚ್ಚು ಸವಾಲು ಇರುವ ಜನರಿಗೆ ಅತ್ಯಂತ ಹತ್ತಿರವಾದ ಇಲಾಖೆ ಎಂದೇ ಕೃಷಿಯನ್ನು ಗುರುತಿಸಲಾಗಿದೆ. ಇಡೀ ದೇಶದಲ್ಲಿ ಕೆಲಸ ಮಾಡಲು ಅವಕಾಶ ಇದೆ. ದೇಶದ ಶೇ.70 ಜನರು ರೈತಾಪಿ ಕೆಲಸ ಮಾಡುತ್ತಾರೆ. ಕೃಷಿಕರಲ್ಲಿ ಶೇ.80 ಜನರು ಕಡಿಮೆ ಜಮೀನು ಹೊಂದಿ ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದ್ದಾರೆ. ಕೃಷಿ ಲಾಭದಾಯಕವಲ್ಲ ಎಂದು ರೈತರು ಭೂಮಿಯಲ್ಲಿ ಕೃಷಿ ಮಾಡುತ್ತಿಲ್ಲ. ನಗರದ ಕೆಲಸಕ್ಕಾಗಿ ವಲಸೆ ಹೆಚ್ಚುತ್ತಿದೆ. ಸಣ್ಣ ಮತ್ತು ಮಧ್ಯಮ ರೈತರನ್ನು ಒಗ್ಗೂಡಿಸಿ ಕೃಷಿಯನ್ನು ಲಾಭದಾಯಕ ಕ್ಷೇತ್ರವನ್ನಾಗಿ ಮಾಡಲು ನರೇಂದ್ರ ಮೋದಿ ಅವರ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿದೆ ಎಂದರು.

    2013-14ರಲ್ಲಿ ಯುಪಿಎ ಸರ್ಕಾರವು ಬಜೆಟ್‍ನಲ್ಲಿ ಸುಮಾರು 21,350 ಕೋಟಿಯನ್ನು ಕೃಷಿ ಕ್ಷೇತ್ರಕ್ಕೆ ನೀಡಿ ಆ ಕ್ಷೇತ್ರವನ್ನು ಕಡೆಗಣಿಸಿತ್ತು. ಆದರೆ ಕಳೆದ ಆರೇಳು ವರ್ಷಗಳಲ್ಲಿ ಕೃಷಿ ಬಜೆಟ್ ಶೇ 460ರಷ್ಟು ಹೆಚ್ಚಾಗಿ 2020-21ರಲ್ಲಿ 1.31 ಲಕ್ಷ ಕೋಟಿ ಆಗಿದೆ ಎಂದರು.

    ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಘಟಕಗಳನ್ನು (ಎಫ್‍ಪಿಒ) ಆರಂಭಿಸುವ ಗುರಿಯನ್ನು ನಮ್ಮ ಜನಪರ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ. ಪ್ರತಿ ಎಫ್‍ಪಿಒಗೆ 25 ಬೇರೆ ಬೇರೆ ಉತ್ಪನ್ನ ಉತ್ಪಾದಿಸಲು ಅನುಮತಿ ಮತ್ತು ಸಾಲ ಸೌಕರ್ಯ ಸಿಗಲಿದೆ. ಇದಲ್ಲದೆ ಕೃಷಿ ಮೂಲಸೌಕರ್ಯ ಹೆಚ್ಚಳಕ್ಕೆ 1 ಲಕ್ಷ ಕೋಟಿಯ ಹೆಚ್ಚುವರಿ ಹಣವನ್ನು ನೀಡಲಾಗಿದೆ. ಖಾದ್ಯ ತೈಲ ಕ್ಷೇತ್ರದಲ್ಲಿ ಸ್ವಾವಲಂಬಿತನ ಸಾಧನೆಗೆ ಒತ್ತು ಕೊಡಲಾಗುತ್ತಿದೆ. ಒಣ ಭೂಮಿಯಲ್ಲಿ ಸಿರಿ ಧಾನ್ಯ ಬೆಳೆಯಲು ಉತ್ತೇಜನ ನೀಡಲಾಗುವುದು. ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

    ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರು ಮತ್ತು ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷರೂ ಆದ ಭಾರತಿ ಶೆಟ್ಟಿ, ರಾಜ್ಯ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕು. ಶೋಭಾ ಕರಂದ್ಲಾಜೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

  • ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತಿಲಕ ಅಭಿಯಾನ

    ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತಿಲಕ ಅಭಿಯಾನ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಮ ಇಟ್ಕೊಂಡವರನ್ನು ಕಂಡ್ರೆ ಭಯ ಆಗುತ್ತೆ ಎಂಬ ಹೇಳಿಕೆಯನ್ನು ನೀಡಿದ್ದು, ಇದೀಗ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಬಿಜೆಪಿ ‘ತಿಲಕದೊಂದಿಗೆ ಸೆಲ್ಫಿ’ ಎಂಬ ಅಭಿಯಾನ ಶುರು ಮಾಡಿದೆ.

    ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟ್ಟರಿನಲ್ಲಿ, ಹಣೆಗೆ ತಿಲಕವಿಟ್ಟು ಸೆಲ್ಫಿ ತೆಗೆಸಿಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, “ತಿಲಕಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ. ಅದು ಭಾರತ ಸಂಸ್ಕೃತಿಯ ಭಾಗ, ತಿಲಕದ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ.

    https://twitter.com/ShobhaBJP/status/1103205304840278016

    ಶೋಭಾ ಟ್ವೀಟ್‍ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ತಿಲಕ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗುವವರು ನಿಜವಾದ ದೈವ ಭಕ್ತರು. ತಿಲಕ ಇಟ್ಟುಕೊಂಡು ಸೆಲ್ಫಿಗೆ ಮುಖ ಒಡ್ಡುವವರು ಕ_ಭಕ್ತರು” ಎಂದು ರೀ-ಟ್ವೀಟ್ ಮಾಡಿ ಶೋಭಾ ಅವರಿಗೆ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ತನ್ನ ಟ್ವಿಟ್ಟರಿನಲ್ಲಿ, ಬಿಜೆಪಿಯಯವರು ಕುಂಕುಮ ನಾಮ, ಕಾವಿ ಬಟ್ಟೆಗಳನ್ನು ದುರಪಯೋಗ ಮಾಡಿಕೊಂಡಿದ್ದರಿಂದ ಸಾಮಾನ್ಯ ಜನರು ಕುಂಕುಮಧಾರಿಯನ್ನು ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಟ್ಟಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv