Tag: ಶೈಲೇಶ್ ಕುಮಾರ್

  • ವಿಜಯ ಪ್ರಕಾಶ್ ಹಾಡಿದ ‘ನೆನಪಿನ ಹಾದಿಯಲಿ ಒಂಟಿ ಪಯಣ’ ಆಲ್ಬಂ ಸಾಂಗ್ ರಿಲೀಸ್

    ವಿಜಯ ಪ್ರಕಾಶ್ ಹಾಡಿದ ‘ನೆನಪಿನ ಹಾದಿಯಲಿ ಒಂಟಿ ಪಯಣ’ ಆಲ್ಬಂ ಸಾಂಗ್ ರಿಲೀಸ್

    ಸಂಚಾರಿ ವಿಜಯ್ ಅಭಿನಯದ ‘6 ನೇ ಮೈಲಿ’ ಹಾಗೂ ಪ್ರಸ್ತುತ ವಸಿಷ್ಠ ಸಿಂಹ ಅಭಿನಯದ ‘ತಲ್ವಾರ್ ಪೇಟೆ’ ಚಿತ್ರಗಳ ನಿರ್ಮಾಪಕ ಡಾ.ಶೈಲೇಶ್ ಕುಮಾರ್ ಅವರು ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರ ಮೊದಲ ಹಜ್ಜೆಯಾಗಿ ‘ನೆನಪಿನ ಹಾದಿಯಲ್ಲಿ ಒಂಟಿ ಪಯಣ’ ಎಂಬ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ.

    ಶಶಿಕಲಾ ಪುಟ್ಟಸ್ವಾಮಿ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಟ ಪ್ರವೀಣ್ ತೇಜ್ ಹಾಗೂ ನಟಿ ಯಶಾ ಶಿವಕುಮಾರ್ ಅಭಿನಯಿಸಿದ್ದಾರೆ. ಸಾಯಿ ಶ್ರೀಕಿರಣ್ ಸಂಗೀತ ನೀಡಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಈ ಹಾಡಿಗಿದೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    ಇತ್ತೀಚೆಗೆ ‘ನೆನಪಿನ ಹಾದಿಯಲ್ಲಿ ಒಂಟಿ ಪಯಣ’ ಆಲ್ಬಂ ಸಾಂಗ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಖ್ಯಾತ ಹಾಕಿ ಆಟಗಾರ ಧನರಾಜ್ ಪಿಳ್ಳೈ,  ವಿ.ನಾಗೇಂದ್ರ ಪ್ರಸಾದ್,  ಲಕ್ಕಣ್ಣ ಅವರು ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ಮಾಪಕ ಶೈಲೇಶ್ ಕುಮಾರ್ ಮಾತನಾಡಿ, ಹಾಡು ಚೆನ್ನಾಗಿದೆ. ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದೇವೆ.  ಆ ಮೂಲಕ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ.  ನಮ್ಮ ಹೊಸಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.

    ಸಂಗೀತ ನಿರ್ದೇಶಕ ಸಾಯಿ ಶ್ರೀಕಿರಣ್ ಅವರಿಂದ ಈ ತಂಡದ ಪರಿಚಯವಾಯಿತು. ಶಶಿಕಲಾ ಅವರು ಬರೆದಿರುವ ಈ ಹಾಡು ಸುಂದರವಾಗಿದೆ. ಅಷ್ಟೇ ಚೆನ್ನಾಗಿ ನಿರ್ದೇಶನ ಕೂಡ ಮಾಡಿದ್ದಾರೆ.    ಇಡೀ ತಂಡದ ಪರಿಶ್ರಮದಿಂದ ಹಾಡು ಚೆನ್ನಾಗಿ ಬಂದಿದೆ ಎಂದು ನಟ ಪ್ರವೀಣ್ ತೇಜ್ ಹೇಳಿದರು. ಇದು ನನ್ನ ಮೊದಲ ಆಲ್ಬಂ ಸಾಂಗ್. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು ನಟಿ ಯಶಾ ಶಿವಕುಮಾರ್. ಹಾಡು ಬರೆದು, ನಿರ್ದೇಶಿಸಿರುವ ಶಶಿಕಲಾ ಪುಟ್ಟಸ್ವಾಮಿ , ಛಾಯಾಗ್ರಾಹಕ ಚಂದ್ರಶೇಖರ್ ಹಾಗೂ ಸಂಗೀತ ನಿರ್ದೇಶಕ ಸಾಯಿ ಶ್ರೀಕಿರಣ್ ಹಾಡಿನ ಬಗ್ಗೆ ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕತ್ತಲು ಕಷ್ಟವೆನಿಸಿದರೂ ‘6ನೇ ಮೈಲಿ’ಯಲ್ಲಿ ಅಚ್ಚರಿಯಿದೆ!

    ಕತ್ತಲು ಕಷ್ಟವೆನಿಸಿದರೂ ‘6ನೇ ಮೈಲಿ’ಯಲ್ಲಿ ಅಚ್ಚರಿಯಿದೆ!

    ಬೆಂಗಳೂರು: ವಿಶಿಷ್ಟವಾದ ಪಾತ್ರಗಳ ಮೂಲಕವೇ ಹೆಸರಾಗಿರುವ ಸಂಚಾರಿ ವಿಜಯ್ ನಟಿಸಿರೋ 6ನೇ ಮೈಲಿ ಚಿತ್ರ ತೆರೆ ಕಂಡಿದೆ. ಪಶ್ಚಿಮಘಟ್ಟಗಳೆಂದರೇನೇ ಹಲವಾರು ಕೌತುಕಳನ್ನು ಒಡಲೊಳಗೆ ಬಚ್ಚಿಟ್ಟುಕೊಂಡಿರುವ ಪ್ರದೇಶ. ಈಗಂತೂ ನೈಸರ್ಗಿಕ ಆಹ್ಲಾದವನ್ನೇ ಮಂಕಾಗಿಸುವಂಥಾ ಮಾಫಿಯಾಗಳೂ ಅಲ್ಲಿ ರಾರಾಜಿಸುತ್ತಿವೆ. ಇಂಥಾ ಪ್ರದೇಶದ ಕಥೆ ಅಂದ ಮೇಲೆ ಕುತೂಹಲ ಹುಟ್ಟದಿರೋದಿಲ್ಲ. ಇಂಥಾ ನಿರೀಕ್ಷೆಯೊಂದಿಗೆ ಥಿಯೇಟರು ಹೊಕ್ಕವರನ್ನು ಅಲ್ಲಲ್ಲಿ ನಿರಾಸೆ ಮಾಡಿದರೂ ಚೆಂದದ್ದೊಂದು ಅನುಭವ ಕಟ್ಟಿ ಕೊಡುವಲ್ಲಿ ಈ ಚಿತ್ರ ತಕ್ಕಮಟ್ಟಿಗೆ ಗೆದ್ದಿದೆ!

    ಉಜಿರೆ ವ್ಯಾಪ್ತಿಯ ದಟ್ಟವಾದ ಕಾಡಿನಲ್ಲಿಯೇ ಈ ಕಥಾನಕ ಬಿಚ್ಚಿಕೊಳ್ಳುತ್ತದೆ. ನೈಸರ್ಗಿಕ ಸೌಂದರ್ಯದ ಗಣಿಯಂತಿರೋ ಆ ಕಾಡಿನ ವಾತಾವರಣದಲ್ಲಿ ಬಹು ಕಾಲದಿಂದಲೂ ನಕ್ಸಲ್ ಚಟುವಟಿಕೆ ನಡೆದು ಬಂದಿರುತ್ತೆ. ಹಾಗಿದ್ದರೂ ಅದು ಚಾರಣಪ್ರಿಯರ ಹಾಟ್ ಸ್ಪಾಟ್ ಆಗಿಯೇ ಮುಂದುವರೆದಿರುತ್ತೆ. ಹೆಣ್ಣು ಗಂಡುಗಳ ಜೋಡಿ ಜೋಡಿ ಗುಂಪು ಚಾರಣದ ಹೆಸರಲ್ಲಿ ದಾಂಗುಡಿ ಇಡುವ ಪ್ರದೇಶದಲ್ಲಿ ಹಿಡಿದು ಸುಲಿಯುವ ದರೋಡೆಕೋರರು, ಅತ್ಯಾಚಾರಿಗಳೂ ಹುಟ್ಟಿಕೊಂಡಿರುತ್ತಾರೆ.

    ಇಂಥಾ ಕ್ರಿಮಿನಲ್ ಚಟುವಟಿಕೆಗಳ ಹಿಂದಿರುವವರನ್ನು ಮಟ್ಟ ಹಾಕಲು ನೈಟ್ ಜರ್ನಿಯ ಬೇಟೆ ಶುರು ಮಾಡಿಕೊಳ್ಳುವ ತನಿಖಾ ತಂಡ ಕ್ರಿಮಿನಲ್ಲುಗಳನ್ನು ಕೆಡವಿಕೊಳ್ಳೋದರ ಸುತ್ತಲಿನ ಕಥೆಯನ್ನು ಆರನೇ ಮೈಲಿ ಹೊಂದಿದೆ. ಆದರೆ ಕತ್ತಲಲ್ಲಿಯೇ ಹೆಚ್ಚಿನ ದೃಶ್ಯಗಳನ್ನು ಕಟ್ಟಿರೋದರಿಂದ ಅಸಲೀ ರೋಚಕತೆಯೊಂದು ಮಬ್ಬು ಮಬ್ಬಾಗಿ, ಪೇಲವವಾಗಿ ಪ್ರೇಕ್ಷಕರನ್ನು ತಲುಪಿಕೊಂಡಿದೆ.

    ಹೆಚ್ಚು ಎಳೆದಾಡಬಾರದೆಂಬ ಉದ್ದೇಶದಿಂದಲೇ ನಿರ್ದೇಶಕ ಸೀನಿ ಇಡೀ ಚಿತ್ರವನ್ನು ನೂರಾ ಇಪ್ಪತ್ತು ನಿಮಿಷಕ್ಕಿಳಿಸಿದ್ದಾರೆ. ಆದರೆ ಈ ಚಿತ್ರದ ನಿಜವಾದ ಕಂಟೆಂಟನ್ನು ಅರವತ್ತು ನಿಮಿಷದಲ್ಲಿಯೇ ಹೇಳುವಂಥಾದ್ದು. ಈ ಎಳೆದಾಟ ಮೊದಲಾರ್ಧದಲ್ಲಿ ಕೊಂಚ ಅಸಹನೆ ಹುಟ್ಟಿಸಿದರೂ ದ್ವಿತೀಯಾರ್ಧದಲ್ಲಿ ತುಂಬಾ ಚೇತೋಹಾರಿ ಅನುಭವ ನೀಡುವ ಮೂಲಕ ನಿರ್ದೇಶಕರು ಚಾಕಚಕ್ಯತೆ ತೋರಿಸಿದ್ದಾರೆ.

    ಕೆಲವಾರು ಕೊರತೆಗಳಾಚೆಗೂ ಬರೀ ಬೋರು ಹೊಡೆಸದೆ ಚೇತೋಹಾರಿ ಅನುಭವ ನೀಡುವ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಎಂದಿನಂತೆ ಚೆಂದದ ನಟನೆ ನೀಡಿದ್ದಾರೆ. ಮಿಕ್ಕೆಲ್ಲ ಪಾತ್ರಗಳನ್ನೂ ಕೂಡಾ ನಿರ್ದೇಶಕ ಸೀನಿ ಕಥೆಗೆ ಬೇಕಾದಂತೆ ಪಳಗಿಸಿಕೊಂಡಿದ್ದಾರೆ. ಈ ಮೂಲಕವೇ ಅವರು ನಿರ್ದೇಶಕರಾಗಿ ಭರವಸೆ ಹುಟ್ಟಿಸಿದ್ದಾರೆ.

  • 6ನೇ ಮೈಲಿಯಲ್ಲಿ ಸಂಚಾರಿ!

    6ನೇ ಮೈಲಿಯಲ್ಲಿ ಸಂಚಾರಿ!

    ಬೆಂಗಳೂರು: ಸಂಚಾರಿ ವಿಜಯ್ ಅಂದರೇನೇ ವಿಶಿಷ್ಟ ಶೈಲಿಯ ನಟ. ನಟನೆಗೆ ಸವಾಲಾದ ಪಾತ್ರಗಳನ್ನಷ್ಟೇ ಆರಿಸಿಕೊಳ್ಳುತ್ತಾ ಬಂದಿರುವ ವಿಜಯ್, 6ನೇ ಮೈಲಿ ಚಿತ್ರವನ್ನೂ ಕೂಡಾ ಅದೇ ಮಾನದಂಡದಲ್ಲಿಯೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಸೀನಿ ನಿರ್ದೇಶನದ ಈ ಚಿತ್ರವನ್ನು ಡಾ.ಜಿ.ಎಸ್ ಶೈಲೇಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಹರಿಹರ ಮೂಲದವರಾದ ಶೈಲೇಶ್ ಕುಮಾರ್ ವೃತ್ತಿಯಲ್ಲಿ ನ್ಯೂರೋ ಸರ್ಜನ್. ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಸದಭಿರುಚಿಯ ಸಿನಿಮಾ ನೀಡಬೇಕೆಂಬ ಆಸೆ ಹೊಂದಿದ್ದ ಅವರು 6ನೇ ಮೈಲಿ ಮೂಲಕ ನಿರ್ಮಾಪಕರಾಗಿದ್ದಾರೆ. ಇದೇ ವಾರ ಅಂದರೆ ಜುಲೈ 6ರಂದು 6ನೇ ಮೈಲಿ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ಅದ್ಭುತ ಮೈಸಿರಿಯ ಮಲೆನಾಡು ಸೀಮೆ ಎಂಬುದು ಟೆಕ್ಕಿಗಳೂ ಸೇರಿದಂತೆ ಎಲ್ಲರ ಆಕರ್ಷಣೆಯ ತಾಣ. ಟೆಕ್ಕಿಗಳಂತೂ ಇಲ್ಲಿನ ದಟ್ಟ ಕಾಡುಗಳಿಗೆ ವೀಕೆಂಡಿನಲ್ಲಿ ಟ್ರೆಕ್ಕಿಂಗ್ ಬರೋದು ಸಾಮಾನ್ಯ. ಆದರೆ ಇಂಥಾದ್ದೇ ಒಂದು ಪ್ರದೇಶದಲ್ಲಿ ಟ್ರೆಕ್ಕಿಂಗ್‍ಗೆ ಬರುತ್ತಿದ್ದ ಟೆಕ್ಕಿಗಳು ಸಾಲು ಸಾಲಾಗಿ ಕಣ್ಮರೆಯಾಗುತ್ತಿದ್ದರು. ಇದರ ಬೆಂಬಿದ್ದು ಹೋದಾಗ ಅನೇಕ ರೋಚಕ ಅಂಶಗಳೂ ಬಯಲಾಗಿದ್ದವು. ಈ ಕಥೆಯನ್ನೇ ಆರನೇ ಮೈಲಿ ಚಿತ್ರದ ಮೂಲಕ ರೋಚಕವಾಗಿ ಹೇಳಲಾಗಿದೆಯಂತೆ. ಸಾಯಿಕಿರಣ್ ಸಂಗೀತ ನಿರ್ದೇಶನದ ಈ ಚಿತ್ರದ ಹಾಡುಗಳು ಪಿ ಆರ್ ಕೆ ಆಡಿಯೋ ಮೂಲಕ ಬಿಡುಗಡೆಯಾಗಿದೆ.

    ಸೀನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪರಮೇಶ್ ಪಿ.ಎಂ(ಪರ್ಮಿ) ಅವರ ಛಾಯಾಗ್ರಹಣವಿದೆ. ಮಹೇಶ್ ರೆಡ್ಡಿ ಸಂಕಲನ, ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಚಾರಿ ವಿಜಯ್, ಆರ್.ಜೆ.ನೇತ್ರ, ರಘು ಪಾಂಡೇಶ್ವರ್, ಕೃಷ್ಣ ಹೆಬ್ಬಾಳೆ, ಡಾ.ಜಾಹ್ನವಿ, ಆರ್.ಜೆ.ಸುದ್ದೇಶ್, ಹೇಮಂತ್ ಸುಶೀಲ್, ಮೈತ್ರಿ ಜಗ್ಗಿ ಮುಂತಾದವರಿದ್ದಾರೆ.