Tag: ಶೂಫಿಯಾನ್

  • ಗುಂಡಿನ ಚಕಮಕಿ- ಶಾಕೂರ್ ಸೇರಿ ನಾಲ್ವರು ಉಗ್ರರು ಹತ

    ಗುಂಡಿನ ಚಕಮಕಿ- ಶಾಕೂರ್ ಸೇರಿ ನಾಲ್ವರು ಉಗ್ರರು ಹತ

    ಶ್ರೀನಗರ: ಭದ್ರತಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಅಲ್ ಬದ್ರ್ ಉಗ್ರ ಸಂಘಟನೆಯ ಸಂಸ್ಥಾಪಕ ಶಾಕೂರ್ ಅಹ್ಮದ್ ಪ್ಯಾರ್ರಿ ಸೇರಿ ನಾಲ್ವರು ಉಗ್ರರನ್ನು ಸೆದೆಬಡಿದಿದ್ದಾರೆ.

    ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಕಿಲೂರಾದಲ್ಲಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ನಾಲ್ವರು ಉಗ್ರರರನ್ನು ಹತ್ಯೆ ಮಾಡಲಾಗಿದೆ. ಓರ್ವನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ. ಅಲ್ ಬದ್ರ್ ಸಂಸ್ಥಾಪಕ ಶಾಕೂರ್ ಒಂದು ಕಾಲದಲ್ಲಿ ಜಮ್ಮು ಕಾಶ್ಮೀರ ಪೊಲೀಸರಿಗೆ ಎಸ್‍ಪಿಒ ಹಾಗೂ ಕಾನ್‍ಸ್ಟೇಬಲ್ ಆಗಿದ್ದ. ನಂತರ ಪರಾರಿಯಾಗಿ ಉಗ್ರ ಸಂಘಟನೆ ಸ್ಥಾಪಿಸಿದ್ದ. ಇದೀಗ ಶಾಕೂರ್ ಹಾಗೂ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

    ನಾಲ್ವರು ಉಗ್ರರ ಪೈಕಿ ಶಾಕೂರ್ ಅಲ್ ಬದ್ರ್ ಉಗ್ರ ಸಂಘಟನೆ ಸಂಸ್ಥಾಪಕ ಹಾಗೂ ಜಿಲ್ಲಾ ಕಮಾಂಡರ್ ಆಗಿದ್ದ. ಮತ್ತೊಬ್ಬನನ್ನು ಸುಹೈಲ್ ಭಟ್ ಎಂದು ಗುರುತಿಸಲಾಗಿದೆ. ಉಗ್ರರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಒಬ್ಬ ಉಗ್ರನನ್ನು ಜೀವಂತವಾಗಿ ಸೆರೆಹಿಡಿದಿದ್ದು, ನಾಲ್ವರು ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ. ಎರಡು ಎಕೆ ಹಾಗೂ ಮೂರು ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಸೇನೆ ತಿಳಿಸಿದೆ.

    ಈ ಕುರಿತು ಶೋಫಿಯಾನ್ ಪೊಲೀಸರು ಮಾಹಿತಿ ನಿಡಿ, 4-5 ಭಯೋತ್ಪಾದಕರು ಕಿಲೂರಾ ಪ್ರದೇಶದ ತೋಟದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಯೋಧರು ಸುತ್ತುವರಿದು ಶೋಧ ಕಾರ್ಯ ಆರಂಭಿಸಿದರು. ಆಗ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಸೇನಾ ಸಿಬ್ಬಂದಿ ಸಹ ಗುಂಡು ಹಾರಿಸಿದರು. ಈ ವೇಳೆ ನಾಲ್ವರು ಉಗ್ರರು ಸಾವನ್ನಪ್ಪಿದ್ದು, ಒಬ್ಬನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಸಿಕ್ಕವನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಾವನ್ನಪ್ಪಿದ ನಾಲ್ವರಲ್ಲಿ ಶಾಕೂರ್ ಅಹ್ಮದ್ ಪ್ಯಾರ್ರಿ ಪ್ರಮುಖನಾಗಿದ್ದು, ಈತ ವಿಶೇಷ ಪೊಲೀಸ್ ಅಧಿಕಾರಿ(ಎಸ್‍ಪಿಒ)ಯಾಗಿದ್ದ. ನಂತರ ಕಾನ್‍ಸ್ಟೇಬಲ್ ಮಾಡಲಾಯಿತು. ಆಗ ನಾಲ್ಕು ಎಕೆ-47 ಬಂದೂಕುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ. ಅಲ್ಲದೆ ಉಗ್ರ ಸಂಘಟನೆ ಸೇರಿದ್ದ. ಬಳಿಕ ತನ್ನದೇ ಗುಂಪು ಕಟ್ಟಿಕೊಂಡಿದ್ದ. ಅಲ್ ಬದ್ರ್ ಎಂಬ ಸಂಘಟನೆ ಕಟ್ಟಿಕೊಂಡು 10 ಯುವಕರನ್ನು ನೇಮಿಸಿಕೊಂಡಿದ್ದ. ಇದರಲ್ಲಿ ಐವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಕಾಶ್ಮೀರದ ಇನ್‍ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಘಟನೆಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿಲ್ಲ. ಜಮ್ಮು ಕಾಶ್ಮೀರದಲ್ಲಿನ ಉಳಿದ ಉಗ್ರರನ್ನು ಸೆದೆಬಡಿಯಲು ನವೆಂಬರ್ ಬಳಿಕ ಕಾರ್ಯಾಚರಣೆ ಚುರುಕುಗೊಳಿಸಿದ್ದೆವು. ಅದರಂತೆ ಹಂತ ಹಂತವಾಗಿ ಉಗ್ರರನ್ನು ಮಟ್ಟಹಾಕಲಾಗುತ್ತಿದೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.