Tag: ಶುಭಾಶಯ

  • ಮಿಕ್ಸರ್ ಗ್ರೈಂಡರ್ ಉದಾಹರಣೆ ನೀಡಿ ವಾಲ್‍ಗೆ ವಿಶ್ ಮಾಡಿದ ಸೆಹ್ವಾಗ್

    ಮಿಕ್ಸರ್ ಗ್ರೈಂಡರ್ ಉದಾಹರಣೆ ನೀಡಿ ವಾಲ್‍ಗೆ ವಿಶ್ ಮಾಡಿದ ಸೆಹ್ವಾಗ್

    ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಚಾಣಕ್ಷ ಬ್ಯಾಟ್ಸ್ ಮ್ಯಾನ್ ದಿ ವಾಲ್ ರಾಹುಲ್ ದ್ರಾವಿಡ್ ಅವರಿಗೆ ಇಂದು 47 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಈ ಹೆಮ್ಮೆಯ ಕನ್ನಡಿಗನಿಗೆ ದೇಶದ್ಯಾಂತ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

    ವಿಶಿಷ್ಟ ಉದಾಹರಣೆ ನೀಡಿ ದ್ರಾವಿಡ್ ಅವರಿಗೆ ವಿಶ್ ಮಾಡಿರುವ ಸೆಹ್ವಾಗ್ ಅವರು, ನನಗೆ ಗೊತ್ತಿರುವ ಪ್ರಕಾರ, ಮಿಕ್ಸರ್ ಗ್ರೈಂಡರ್ ಅಡುಗೆಮನೆಯಲ್ಲಿ ಮಾತ್ರ ರುಬ್ಬುತ್ತದೆ. ಆದರೆ ದ್ರಾವಿಡ್ ಅವರು ನಮಗೆ ಕ್ರಿಕೆಟ್ ಪಿಚ್‍ನಲ್ಲಿ ಹೇಗೆ ರುಬ್ಬಬಹುದು ಎಂದು ಕಲಿಸಿದರು. ನಮ್ಮ ತಂಡದಲ್ಲಿ ವಾಲ್ ಇದ್ದಾಗ ನಮ್ಮ ಬಳಿ ಎಲ್ಲವೂ ಇದ್ದಾಗೆ ಎಂದು ಬರೆದು ಗೆಳಯನಿಗೆ ಭಾರತದ ಮಾಜಿ ಆರಂಭಿಕ ಆಟಗಾರ ವಿಶ್ ಮಾಡಿದ್ದಾರೆ.

    ದ್ರಾವಿಡ್ ಅವರಿಗೆ ಶುಭಾಶಯ ತಿಳಿಸಿರುವ ಭಾರತದ ತಂಡದ ಆಟಗಾರ ಅಜಿಂಕ್ಯಾ ರಹಾನೆ ಅವರು, ನನ್ನ ಸ್ಫೂರ್ತಿ, ನನ್ನ ಚೊಚ್ಚಲ ಅಂತಾರಾಷ್ಟೀಯ ಪಂದ್ಯದಲ್ಲಿ ಅವರ ಜೊತೆಗೆ ಆಡಿದ್ದೇನೆ. ಯಾವಾಗಲೂ ನನಗೆ ಮಾರ್ಗದರ್ಶಿ, ನನ್ನ ರೋಲ್ ಮಾಡೆಲ್ ಮತ್ತು ಕ್ರಿಕೆಟಿನ ನಿಧಿ ರಾಹುಲ್ ಭಾಯ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ತನ್ನ ನೆಚ್ಚಿನ ಗೆಳೆಯನಿಗೆ ಶುಭಾ ಕೋರಿರುವ ಸಚಿನ್ ಅವರು, ಹುಟ್ಟು ಹಬ್ಬದ ಶುಭಾಶಯಗಳು ಜ್ಯಾಮಿ, ನೀನು ಬ್ಯಾಟಿಂಗ್ ಮಾಡುವಾಗ ಬೌಲರ್ ಗಳಿಗೆ ನಿಜವಾಗಿಯೂ ತೊಂದರೆಯಾಗುತ್ತಿತ್ತು. ನಿನಗೆ ಒಳ್ಳೆಯದಾಗಲಿ ನನ್ನ ಗೆಳೆಯ ಎಂದು ಬರೆದುಕೊಂಡಿದ್ದಾರೆ.

    ನನ್ನ ಉತ್ತಮ ಸ್ನೇಹಿತ ರಾಹುಲ್ ದ್ರಾವಿಡ್ ಅವರಿಗೆ ಈ ವಿಶೇಷ ಜನ್ಮದಿನ ಪ್ರೀತಿ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ಅದ್ಭುತ ವರ್ಷವನ್ನು ಹಾರೈಸುತ್ತೇನೆ ಎಂದು ವಿವಿಎಸ್ ಲಕ್ಷ್ಮಣ್ ಅವರು ಶುಭಾಶಯ ಹೇಳಿದ್ದಾರೆ. ಸ್ಪಿನರ್ ಹರ್ಭಜನ್ ಸಿಂಗ್ ಅವರು, ಹುಟ್ಟುಹಬ್ಬದ ಶುಭಾಶಯಗಳು ರಾಹುಲ್ ಡ್ರಾವಿಡ್ ನೀವು ಲೆಜೆಂಡ್ ಎಂದು ಬರೆದುಕೊಂಡಿದ್ದಾರೆ.

    ದ್ರಾವಿಡ್ ಅವರಿಗೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿರುವ ಕಿಚ್ಚ ಸುದೀಪ್ ಅವರು, ಸರ್ ನೀವು ಯಾವಾಗಲೂ ನಮಗೆ ಸ್ಫೂರ್ತಿಯಾಗಿದ್ದಿರಾ, ನಿಮ್ಮ ನಂಬಿಕೆ, ನಿಸ್ವಾರ್ಥತೆ ಮತ್ತು ಶ್ರದ್ಧೆ ಎಲ್ಲವನ್ನು ನಾವು ಅನುಸರಿಸಬೇಕು. ಹುಟ್ಟು ಹಬ್ಬದ ಶುಭಾಶಯಗಳು ಸರ್ ಎಂದು ಟ್ವೀಟ್ ಮಾಡಿ ದ್ರಾವಿಡ್ ಜೊತೆಗಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.

    ಇದರ ಜೊತೆಗೆ ದ್ರಾವಿಡ್ ಅವರಿಗೆ ವಿಶ್ ಮಾಡಿರುವ ನಟ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರು, ಕ್ರಿಕೆಟ್ ಪಂದ್ಯಗಳಲ್ಲಿ ಭಾರತವನ್ನು ಎಷ್ಟೋ ಕಠಿಣ ಪರಿಸ್ಥಿತಿಯಿಂದ ಪಾರು ಮಾಡಿದ ವಾಲ್, ನಿಮ್ಮ ರೀತಿ ಯಾರು ಇಲ್ಲ. ಮುಂದೆ ನಿಮ್ಮ ರೀತಿ ಯಾರು ಆಗಲು ಸಾಧ್ಯವಿಲ್ಲ ಎಂದು ಬಣ್ಣಿಸಿ ಬರೆದುಕೊಂಡು, ನೆಚ್ಚಿನ ಕ್ರಿಕೆಟಿಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

  • ಕ್ರಿಸ್ಮಸ್‍ಗೆ 2 ಅಮೂಲ್ಯ ಗಿಫ್ಟ್ ಕೊಟ್ಟ ಸಂತಾಗೆ ರಾಧಿಕಾ ಥ್ಯಾಂಕ್ಸ್

    ಕ್ರಿಸ್ಮಸ್‍ಗೆ 2 ಅಮೂಲ್ಯ ಗಿಫ್ಟ್ ಕೊಟ್ಟ ಸಂತಾಗೆ ರಾಧಿಕಾ ಥ್ಯಾಂಕ್ಸ್

    ಬೆಂಗಳೂರು: ನಾಡಿನೆಲ್ಲೆಡೆ ಕ್ರಿಸ್‍ಮಸ್ ಸಂಭ್ರಮ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಟಿ ರಾಧಿಕಾ ಪಂಡಿತ್ ಕ್ರಿಸ್‍ಮಸ್ ಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.

    ರಾಧಿಕಾ ಪಂಡಿತ್ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಕ್ರಿಸ್‍ಮಸ್ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. “ಕಳೆದ ಎರಡು ಕ್ರಿಸ್‍ಮಸ್‍ಗೆ ಐರಾ ಮತ್ತು ಜೂನಿಯರ್ ಯಶ್ ಅಂತಹ ಅಮೂಲ್ಯವಾದ ಉಡುಗೊರೆಯನ್ನು ನಮಗೆ ನೀಡಿರುವುದಕ್ಕೆ ಸಂತಾಗೆ ಧನ್ಯವಾದಗಳು. ನಮ್ಮ ಜಾರುಬಂಡಿಯ ಮೇಲೆ ಸವಾರಿ ಮಾಡಲು ನಾವು ಸಿದ್ಧ. ಎಲ್ಲರಿಗೂ ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ಕ್ರಿಸ್‍ಮಸ್ ಹಬ್ಬಕ್ಕಾಗಿ ಅಲಂಕೃತವಾಗಿರುವ ಜಾರುಬಂಡಿಯ ಪಕ್ಕದಲ್ಲಿ ಪತಿ ಯಶ್ ಜೊತೆ ರಾಧಿಕಾ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ರಾಧಿಕಾ ವಿಶ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಕ್ರಿಸ್‍ಮಸ್ ಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ.

    ರಾಧಿಕಾ 2018 ಡಿಸೆಂಬರ್ ತಿಂಗಳಲ್ಲಿ ಐರಾಗೆ ಜನ್ಮ ಕೊಟ್ಟಿದ್ದರು. ಇನ್ನೂ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸದ್ಯಕ್ಕೆ ಜೂನಿಯರ್ ಯಶ್‍ನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

    https://www.instagram.com/p/B6d8oG0g0Cc/

    ಬೆಂಗಳೂರಿನಲ್ಲಿ ರಾತ್ರಿಯೇ ಕ್ರಿಸ್‍ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಿವಾಜಿನಗರದ ಸೇಂಟ್ ಮೇರಿಸ್ ಬಸೆಲಿಕಾ, ಶಾಂತಿ ನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದಲ್ಲಿ 80 ರಿಂದ 85 ಚರ್ಚ್ ಗಳಿದ್ದು, ಬಣ್ಣ ಬಣ್ಣದ ಬೆಳಕುಗಳಿಂದ ಕಂಗೊಳಿಸುತ್ತಿವೆ.

  • ಒಡೆಯನಾಗಿ ಬಂದು ಹಬ್ಬಕ್ಕೆ ಶುಭಕೋರಿದ ದಚ್ಚು

    ಒಡೆಯನಾಗಿ ಬಂದು ಹಬ್ಬಕ್ಕೆ ಶುಭಕೋರಿದ ದಚ್ಚು

    ಬೆಂಗಳೂರು: ದೇಶದ್ಯಾಂತ ಆಚರಿಸುವ ಗೌರಿ ಗಣೇಶ ಹಬ್ಬಕ್ಕೆ ಒಡೆಯ ಪೋಸ್ಟರ್ ಹಾಕುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಡಿನ ಸಮಸ್ತ ಜನತೆಗೆ ಶುಭಕೋರಿದ್ದಾರೆ.

    ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ದರ್ಶನ್ ಅವರು ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು, ನಿಮ್ಮ ಎಲ್ಲ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ನಲ್ಲಿ ಸಂದೇಶ್ ಪ್ರೊಡಕ್ಷನ್‍ನಲ್ಲಿ ಎಂ.ಡಿ ಶ್ರೀಧರ್ ಅವರು ನಿರ್ದೇಶನ ಮಾಡುತ್ತಿರುವ ಒಡೆಯ ಸಿನಿಮಾದ ಪೋಸ್ಟರ್ ಹಾಕಿದ್ದಾರೆ. ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಹಬ್ಬಕ್ಕೆ ಶುಭಕೋರಿದ್ದು, ಅವರ ಅಭಿನಯದ ಗೀತಾ ಚಿತ್ರದ ಪೋಸ್ಟರ್ ಹಾಕಿ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

  • ಅದ್ಭುತ, ಅದ್ಭುತ, ಅದ್ಭುತ – ಚಿನ್ನದ ಹುಡುಗಿ ಹಿಮಾದಾಸ್‍ಗೆ ಸಿನಿ ತಾರೆಯರ ವಿಶ್

    ಅದ್ಭುತ, ಅದ್ಭುತ, ಅದ್ಭುತ – ಚಿನ್ನದ ಹುಡುಗಿ ಹಿಮಾದಾಸ್‍ಗೆ ಸಿನಿ ತಾರೆಯರ ವಿಶ್

    ಬೆಂಗಳೂರು: ಭಾರತದ ಹೆಮ್ಮೆಯ ಆಟಗಾರ್ತಿ ಹಿಮಾದಾಸ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಲು ಸಾಲು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಸಾಧನೆಗೆ ಇಡೀ ದೇಶವೇ ಸಂತೋಷ ಪಡುತ್ತಿದ್ದು, ಸಿನಿಮಾ ತಾರೆಯರು ಕೂಡ ಶುಭಾಶಯ ಕೋರುತ್ತಿದ್ದಾರೆ.

    ಹಿಮಾದಾಸ್ ಅವರು 19 ದಿನದಲ್ಲಿ ಬರೋಬ್ಬರಿ 5 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟ್ಸ್ ನಲ್ಲಿ ಹಿಮಾದಾಸ್ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ 5ನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಸಾಲು ಸಾಲು ಚಿನ್ನ ಗೆಲ್ಲುತ್ತಿರುವ ಹಿಮಾ ದಾಸ್‍ಗೆ ಭಾರತೀಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

    ಅಷ್ಟೇ ಅಲ್ಲದೇ ಸ್ಯಾಂಡಲ್‍ವುಡ್, ಬಾಲಿವುಡ್ ಸಿನಿ ತಾರೆಯರು ಹಿಮಾದಾಸ್‍ಗೆ ಟ್ವೀಟ್ ಮಾಡುವ ಮೂಲಕ ಅವರ ಸಾಧನೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಅವರು “ಅದ್ಭುತ, ಅದ್ಭುತ, ಅದ್ಭುತ” ಎಂದು ಕೈ ಮುಗಿಯುತ್ತಿರುವ ಎಮೋಜಿ ಹಾಕಿ ವಿಶ್ ಮಾಡಿದ್ದಾರೆ.

    ಬಾಲಿವುಡ್‍ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು “ಭಾರತೀಯ ಹೆಮ್ಮೆಯ ಹಿಮಾ ದಾಸ್ ಅವರು ಚಂದ್ರನಿಗಿಂತ ಮೀರಿ ಅವರ ಓಟ ಸಾಗಿದೆ. ಈಗ ಹಿಮಾದಾಸ್ ಐದನೇ ಚಿನ್ನ ಗೆದ್ದಿದ್ದಾರೆ. ಹೀಗಾಗಿ ನಾವು ಇನ್ನೊಂದು ಚಂದ್ರನನ್ನು ಸೃಷ್ಟಿಸಬೇಕಾಗಿದೆ. ಅಮೇಜಿಂಗ್” ಎಂದು ಅಮಿತಾಭ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಓಡುತ್ತಿರುವ ಹಿಮಾದಾಸ್ ಹಿಂದೆ ಚಂದ್ರನಿಗೆ ಚಿನ್ನದ ಪದಕದ ಬ್ಯಾಗ್ರೌಂಡ್ ಮಾಡಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಹಿಮಾದಾಸ್ ಅವರ ಸಾಧನೆಯನ್ನು ಚಂದ್ರನಿಗೆ ಹೋಲಿಸಿದ್ದಾರೆ.

    ಬಾಲಿವುಡ್ ನಟಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, “19 ದಿನಗಳು-5 ಚಿನ್ನದ ಪದಕ-1 ಚಿನ್ನದ ಹುಡುಗಿ, ಅಭಿನಂದನೆಗಳು ಹಿಮಾ ದಾಸ್. ಯುವತಿಯರಿಗೆ ದೊಡ್ಡ ಸ್ಫೂರ್ತಿ ನೀವು” ಎಂದು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

    ಬಾಲಿವುಡ್ ನಟ ಅನಿಲ್ ಕಪೂರ್ ಸೇರಿದಂತೆ ಅನೇಕರು ಹಿಮಾದಾಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟ-ನಟಿಯರಷ್ಟೆ ಅಲ್ಲದೇ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಸಚಿನ್ ತೆಂಡೂಲ್ಕರ್ ಸೇರಿದಂತೆ ರಾಜಕಾರಣಿಗಳು ಹಿಮಾ ದಾಸ್ ಅವರಿಗೆ ವಿಶ್ ಮಾಡಿದ್ದಾರೆ.

    ಐದು ಚಿನ್ನದ ಪದಕ:
    ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನದ ಪದಕ ಗೆದ್ದಿದ್ದರು. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.

    ಅದೇ ರೀತಿ ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.

    ಜುಲೈ 18ರಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡಿನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಜುಲೈ 20ರಂದು 400 ಮೀಟರ್ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಿಸಿದ್ದಾರೆ.

  • `ಶಿವ-ರಾಜ-ಕುಮಾರ’ನನ್ನು ವರ್ಣಿಸಿ ಹುಟ್ಟುಹಬ್ಬಕ್ಕೆ ಶುಭಕೋರಿದ ಜಗ್ಗೇಶ್

    `ಶಿವ-ರಾಜ-ಕುಮಾರ’ನನ್ನು ವರ್ಣಿಸಿ ಹುಟ್ಟುಹಬ್ಬಕ್ಕೆ ಶುಭಕೋರಿದ ಜಗ್ಗೇಶ್

    ಬೆಂಗಳೂರು: ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ತಮ್ಮ 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ಮಧ್ಯೆ ನವರಸ ನಾಯಕ ಜಗ್ಗೇಶ್ ಅವರು ಶಿವರಾಜ್‍ಕುಮಾರ್ ಹೆಸರಿನ ಅರ್ಥ ವರ್ಣಿಸಿ ಪ್ರೀತಿಯಿಂದ ವಿಶ್ ಮಾಡಿದ್ದಾರೆ.

    ಶಿವರಾಜ್‍ಕುಮಾರ್ ಅವರ ಹೆಸರಿನ ಅರ್ಥವನ್ನು ಬಣ್ಣಿಸಿ ಜಗ್ಗೇಶ್ ಅವರು ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ಹಾಗೆಯೇ ಅವರು ಬೇಗ ಗುಣಮುಖರಾಗಿ ಬಂದು ಕನ್ನಡಿಗರನ್ನು ರಂಜಿಸಿ, ನಿಮ್ಮ ಅಭಿಮಾನಿಗಳಂತೆ ನಾನು ನಿಮ್ಮ ಹೊಸಚಿತ್ರಕ್ಕೆ ಕಾಯುತ್ತಿರುವೆ ಎಂದು ಶಿವರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರೊಟ್ಟಿಗೆ ತಾವು ಹಾಗೂ ತಮ್ಮ ಪತ್ನಿ ಪರಿಮಳ ಅವರು ಇರುವ ಫೋಟೋವನ್ನು ಹಾಕಿ ಅಪ್ಲೋಡ್ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನಲ್ಮೆಯ ಸಹೋದರ ಶಿವರಾಜಕುಮಾರ ಹುಟ್ಟುಹಬ್ಬಕ್ಕೆ ನನ್ನ ಕುಟುಂಬವರ್ಗದ ಆತ್ಮೀಯ ಶುಭಹಾರೈಕೆ. ಬೇಗ ಗುಣಮುಖರಾಗಿ ಬಂದು ಕನ್ನಡಿಗರ ರಂಜಿಸಲು ಅಣಿಯಾಗಿ. ನಿಮ್ಮ ಅಭಿಮಾನಿಗಳಂತೆ ನಾನು ನಿಮ್ಮ ಹೊಸಚಿತ್ರಕ್ಕೆ ಕಾಯುತ್ತಿರುವೆ. ನಿಮ್ಮ ದೈಹಿಕ ಬಾದೆ ಕ್ಷಣಿಕ! ಎಲ್ಲಾ ನೋವು ಗೆಲ್ಲುವ ಆತ್ಮವಿಶ್ವಾಸ ನಿಮಗಿದೆ ಕಾರಣ. ನಿಮ್ಮ ಹೆಸರಲ್ಲೇ ಲಯಕಾರಕ ‘ಶಿವ’ಇದ್ದಾನೆ. ಎಲ್ಲರ ಗೆಲ್ಲುವ ಗುಣದ ‘ರಾಜ’ಇದ್ದಾನೆ. ಶತ್ರುಗಳ ಪ್ರೀತಿಯನ್ನು ಪಡೆಯುವ ಶಕ್ತಿಕೊಡುವ ‘ಕುಮಾರ’ ಶಿವನ ಎರಡನೇ ಪುತ್ರ ಶತ್ರುಸಂಹಾರಕ ಸ್ಕಂದನು ಇದ್ದಾನೆ. ಒಟ್ಟಾರೆ #ಶಿವ-ರಾಜ-ಕುಮಾರ ಕನ್ನಡದ ಆಸ್ತಿ. ಶುಭಮಸ್ತು, ಲವ್ ಯು ಸಹೋದರ ಎಂದು ಬರೆದು ಪೋಸ್ಟ್ ಮಾಡಿ ಶುಭಕೋರಿದ್ದಾರೆ.

    ಶಿವಣ್ಣ ಅವರು ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದರು. ಗುರುವಾರ ಅವರ ಶಸ್ತ್ರಚಿಕಿತ್ಸೆ ಯಶ್ವಸಿಯಾಗಿ ನಡೆದಿತ್ತು. ಶಿವಣ್ಣ ಅವರ ಜೊತೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಕೂಡ ಲಂಡನ್‍ಗೆ ತೆರಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಕೂಡ ಲಂಡನ್‍ಗೆ ತೆರಳಿ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ.

    ಶಿವರಾಜ್‍ಕುಮಾರ್ ಕೇಕ್ ಕತ್ತರಿಸುವ ಮೂಲಕ ತಮ್ಮ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ನಟ ಪುನೀತ್ ರಾಜ್‍ಕುಮಾರ್ ಅವರು ಕೂಡ ತಮ್ಮ ಅಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಎಂದರೆ ಈ ಹುಟ್ಟುಹಬ್ಬದಂದು ಶಿವಣ್ಣ ಅಧಿಕೃತವಾಗಿ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ. ಈ ಬಗ್ಗೆ ಅವರು ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    https://www.instagram.com/p/BzzdB4NHtjF/?igshid=s6ftl8tvv5yd

  • ಭೀಷ್ಮ ಅಂಬಿ ಬರ್ತ್ ಡೇಗೆ ಅಭಿಮನ್ಯು ನಿಖಿಲ್ ವಿಶ್

    ಭೀಷ್ಮ ಅಂಬಿ ಬರ್ತ್ ಡೇಗೆ ಅಭಿಮನ್ಯು ನಿಖಿಲ್ ವಿಶ್

    ಬೆಂಗಳೂರು: ಲೋಕಸಭಾ ಚುನಾಚಣೆ ಫಲಿತಾಂಶ ಪ್ರಕಟವಾದ ಬಳಿಕ ನಿಖಿಲ್ ಕುಮಾರಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬುಧವಾರ ಅಂಬರೀಶ್ ಅವರ ಹುಟ್ಟುಹಬ್ಬ ನಿಮಿತ್ತ ನಿಖಿಲ್ ವಿಶ್ ಮಾಡಿದ್ದಾರೆ.

    ನಟ ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ನಿಖಿಲ್ ಕುಮಾರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಂಬಿ ಬಗ್ಗೆ ಬರೆದು ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

    “ಹುಟ್ಟುಹಬ್ಬದ ಶುಭಾಶಯಗಳು ಅಂಬರೀಶ್ ಅಣ್ಣ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಜೊತೆಗೆ ಕಳೆದ ಕೆಲವು ಅದ್ಭುತ ನೆನಪುಗಳು ನಮ್ಮ ಜೊತೆ ಇವೆ. ಆ ಸಮಯವನ್ನು ಸದಾ ಗೌರವಿಸುತ್ತೇನೆ. ನಿಮ್ಮ ಬಗ್ಗೆ ಹೇಳಲು ತುಂಬ ಇದೆ. ಆದರೆ ಎಲ್ಲವನ್ನು ಹೇಳಲು ನನ್ನ ಬಳಿ ಪದಗಳೇ ಇಲ್ಲ. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇಷ್ಟು ಮಾತ್ರ ಹೇಳಲು ಸಾಧ್ಯ” ಎಂದು ಅಂಬಿಯ ಬಗ್ಗೆ ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ.

    ಅಂಬರೀಶ್ ಅವರ ಜೊತೆಗಿದ್ದ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಂಬರೀಶ್ ಹುಟ್ಟುಹಬ್ಬದ ದಿನದ ಹಿನ್ನೆಲೆಯಲ್ಲಿ ಕಳೆದ ದಿನ ಮಂಡ್ಯದಲ್ಲಿ ಅದ್ಧೂರಿಯಾಗಿ ಸಮಾರಂಭ ಮಾಡಿದ್ದು, ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿದ್ದರು.

    https://www.instagram.com/p/ByDckJOnYsY/

  • ಕಲಿಯುಗ ಕರ್ಣನ ಜನ್ಮದಿನ – ಅಂಬಿ ನೆನಪನ್ನು ಹಂಚಿಕೊಂಡ ಕಲಾವಿದರು

    ಕಲಿಯುಗ ಕರ್ಣನ ಜನ್ಮದಿನ – ಅಂಬಿ ನೆನಪನ್ನು ಹಂಚಿಕೊಂಡ ಕಲಾವಿದರು

    ಬೆಂಗಳೂರು: ಇಂದು ಮಂಡ್ಯದ ಗಂಡು ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಜನ್ಮದಿನ. ಇಂದು ಅವರು ನಮ್ಮ ಜೊತೆ ಇಲ್ಲದಿದ್ದರೂ ಎಂದಿಗೂ ಅಂಬರೀಶ್ ಅಮರ ಎಂದು ಸ್ಯಾಂಡಲ್‍ವುಡ್ ಕಲಾವಿದರು ಪ್ರೀತಿಯ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಒಂದೆಡೆ ಕಿಚ್ಚ ಸುದೀಪ್ ಅವರು ನಿಮ್ಮ ಅನುಪಸ್ಥಿತಿ ಹೆಚ್ಚು ಕಾಡುತ್ತಿದೆ ಎಂದರೆ, ಇನ್ನೊಂದೆಡೆ ಸುಮಲತಾ ಅಂಬರೀಶ್ ಅವರು ಅಂಬಿ ಎಂದಿಗೂ ಅಮರ ಎಂದು ಹಳೆ ನೆನಪನ್ನು ನೆನೆದಿದ್ದಾರೆ. ಅಲ್ಲದೆ ನವರಸ ನಾಯಕ ಜಗ್ಗೇಶ್ ಅವರು ನೇರನುಡಿಯ ಅದ್ಭುತ ಮನುಷ್ಯ ಎಂದು ಹೊಗಳಿ ಅಂಬಿ ಅವರನ್ನು ನೆನೆದು ಹುಟ್ಟುಹಬ್ಬಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಸೂಪರ್ ಸ್ಟಾರ್ ಉಪೇಂದ್ರ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೋಣಚ, ಅಕುಲ್ ಬಾಲಾಜಿ ಸೇರಿ ಹಲವು ಸ್ಟಾರ್ಸ್‍ಗಳು ಅಂಬರೀಶ್ ಅವರನ್ನು ಇಂದು ನೆನದು ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಅಪ್ಪಾಜಿಯವ್ರ ಪ್ರೀತಿ-ಆದರ್ಶ ಕುಟುಂಬ, ಅಭಿಮಾನಿಗಳನ್ನು ಕಾಯ್ತಿರುತ್ತದೆ- ದರ್ಶನ್

    ಟ್ವೀಟ್‍ಗಳಲ್ಲಿ ಏನಿದೆ?
    ಕಿಚ್ಚ ಸುದೀಪ್
    ಮಾಮ ನಿಮ್ಮ ಅನುಪಸ್ಥಿತಿ ಹೆಚ್ಚು ಕಾಡುತ್ತಿದೆ. ನಿಮ್ಮನ್ನು ಸದಾ ಪ್ರೀತಿಸುತ್ತೇನೆ. ಇನ್ನುಮುಂದೆ ಮೇ 29 ಮೊದಲಿನಂತೆ ಇರಲ್ಲ ಎಂದು ಬರೆದು ಅಂಬರೀಶ್ ಅವರ ಹಳೆಯ ಫೋಟೋವೊಂದನ್ನು ಹಾಕಿ ಭಾವುಕ ಟ್ವೀಟ್ ಮೂಲಕ ಶುಭಕೋರಿದ್ದಾರೆ.

    ಜಗ್ಗೇಶ್
    ಅಭಿಮಾನಿಯೊಬ್ಬರು ಅಂಬಿ ಅಣ್ಣನ ಹುಟ್ಟುಹಬ್ಬದ ಶುಭದಿನದಂದು ನಿಮ್ಮ ಹಾಗೂ ಅವರ ಒಡನಾಟದ ಬಗ್ಗೆ ನಿಮ್ಮ ನುಡಿಯಲ್ಲಿ ಹೇಳಿ ಎಂದು ಮನವಿ ಮಾಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಜಗ್ಗೇಶ್, ಅಂಬರೀಶ್ ಅವರು ನೇರನುಡಿಯ ಮನುಷ್ಯ. ಯಾರೆ ಒಟ್ಟಿಗೆ ಕೆಲಸ ಮಾಡುವಾಗ ತೃಪ್ತಿಯಾಗಿ ಅನ್ನ ತಾನೆ ಬಡಿಸಿ ತಿನಿಸಿ, ಆನಂದಿಸುತ್ತಿದ್ದ ಮನುಷ್ಯ. ಕಷ್ಟ ಎಂದರೆ ಮರು ಮಾತಾಡದೆ ಕೈ ಜೋಬಿಗೆ ಹೋಗುತ್ತಿತ್ತು. ಅವರನ್ನು ಕಾರಲ್ಲಿ ಹಿಂಬಾಲಿಸಿದರೆ ಮಕ್ಕಳ ಜೂಟಾಟದಂತೆ ಅವರ ಕಾರನ್ನು ವೇಗವಾಗಿ ಚಲಾಯಿಸಿ ಕೈಗೆ ಸಿಗದೆ ನಮಗೆ ಆಟ ಆಡಿಸಿ ಖುಷಿ ಪಡೋರು. ಅದ್ಭುತಮನುಷ್ಯ ಅಮರ ನೆನಪು ಎಂದು ಮಂಡ್ಯದ ಗಂಡನ್ನು ಹೊಗಳಿದ್ದಾರೆ.

    ಉಪೇಂದ್ರ
    ಇಂದು ಮಂಡ್ಯದ ಗಂಡು, ಕಲಿಯುಗ ಕರ್ಣ, ಒಂಟಿ ಸಲಗ, ರೆಬೆಲ್ ಸ್ಟಾರ್ ಅಂಬರೀಶ್ ರವರ ಜನ್ಮದಿನ. ದೈಹಿಕವಾಗಿ ನೀವು ನಮ್ಮನ್ನು ಅಗಲಿದರೂ ನಿಮ್ಮೊಂದಿಗಿನ ನೆನಪುಗಳು ಸದಾ ಅಮರ ಎಂದು ಬರೆದು ಅಂಬರೀಶ್ ಅವರ ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.

    ಪ್ರಿಯಾಂಕಾ ಉಪೇಂದ್ರ
    ಹುಟ್ಟುಹಬ್ಬದ ಶುಭಾಶಯಗಳು ಅಂಬರೀಶ್ ಸಾರ್. ನೀವು ಹಾಗೂ ನಿಮ್ಮ ನೆನಪು ಸದಾ ನಮ್ಮ ಹೃದಯದಲ್ಲಿ ಅಮರ ಎಂದು ಬರೆದು ವಿಶ್ ಮಾಡಿದ್ದಾರೆ.

    ಧ್ರುವ ಸರ್ಜಾ
    ನಮ್ಮ ಪ್ರೀತಿಯ ಕಲಿಯುಗದ ಕರ್ಣ, ರೆಬೆಲ್ ಸ್ಟಾರ್ , ಡಾ. “ಅಂಬರೀಷ್” ಅಂಕಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಜೈ ಆಂಜನೇಯ ಎಂದು ಬರೆದು ಅಂಬಿ ಅವರ ಹಳೆಯ ಫೋಟೋವೊಂದನ್ನು ಹಾಕಿ ಟ್ವೀಟ್ ಮಾಡಿ ನೆನೆದಿದ್ದಾರೆ.

    ಹರ್ಷಿಕಾ ಪೂಣಚ್ಚ
    ಜನ್ಮದಿನದ ಶುಭಾಶಯಗಳು ಅಂಬರೀಶ್ ಅಂಕಲ್. ಮಿಸ್ ಯು ಎಂದು ರೆಬೆಲ್ ಸ್ಟಾರ್ ಅವರ ಜೊತೆಗೆ ತಾವು ನಿಂತಿರುವ ಫೊಟೋವನ್ನು ಹಾಕಿ ಶುಭಾಶಯ ತಿಳಿಸಿದ್ದಾರೆ.

    ಅಕುಲ್ ಬಾಲಾಜಿ
    ನಮ್ಮ ಕಲಿಯುಗ ಕರ್ಣನಿಗೆ ಶುಭಕೋರುತ್ತಿದ್ದೇನೆ. ಅಂಬರೀಶ್ ಸಾರ್ ಹುಟ್ಟುಹಬ್ಬದ ಶುಭಾಷಯಗಳು. ನೀವು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ನಿಮ್ಮ ನೆನಪು ನಮ್ಮನ್ನು ಬಹಳ ಕಾಡುತ್ತಿದೆ. ನಿಮ್ಮನ್ನು ಸದಾ ನೆನಪಿಸಿಕೊಳ್ಳುತ್ತೇವೆ. ಲವ್ ಯು ಅಂಬಿ ಎಂದು ಬರೆದು ರೆಬೆಲ್ ಸ್ಟಾರ್ ಹಾಗು ಸುಮಲತಾ ಅವರ ಜೊತೆ ತಾವಿರುವ ಫೋಟೋ ಹಾಕಿ ಶುಭಾಶಯ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಅವರು ಕೂಡ ತಮ್ಮ ಪ್ರೀತಿಯ ಪತಿಯನ್ನು ನೆನೆದಿದ್ದಾರೆ. ಎಂದೆಂದಿಗೂ ನಮ್ಮೊಂದಿಗೆ. ಅಂಬಿ ಅಮರ ಎಂದೆಂದಿಗೂ ಅಮರ ಎಂದು ಬರೆದು ಅಂಬರೀಶ್ ಹಾಗೂ ಮಗ ಅಭಿಷೇಕ್ ಅವರ ಜೊತೆ ಇರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

  • ಫಲಿತಾಂಶ ಮೊದಲೇ ಪ್ರಧಾನಿಗೆ ಶುಭಾಶಯ ಕೋರಿದ ಸುಷ್ಮಾ ಸ್ವರಾಜ್

    ಫಲಿತಾಂಶ ಮೊದಲೇ ಪ್ರಧಾನಿಗೆ ಶುಭಾಶಯ ಕೋರಿದ ಸುಷ್ಮಾ ಸ್ವರಾಜ್

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಸರ್ಕಾರ 354 ಕ್ಷೇತ್ರದಲ್ಲಿ ಲೀಡ್‍ನಲ್ಲಿ ಸಾಗುತ್ತಿದೆ. ಹೀಗಿರುವಾಗ ಸುಷ್ಮಾ ಸ್ವರಾಜ್ ಅವರು ಅಧಿಕೃತವಾಗಿ ಫಲಿತಾಂಶ ಬರುವ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ಸುಷ್ಮಾ ಸ್ವರಾಜ್, “ಪ್ರಧಾನಿ ಮಂತ್ರಿ ಮೋದಿ ಅವರೇ, ಬಿಜೆಪಿ ಇಂತಹ ದೊಡ್ಡ ಗೆಲುವು ಸಾಧಿಸಿದಕ್ಕೆ ತುಂಬಾ ಶುಭಾಶಯಗಳು. ನಾನು ದೇಶದ ಜನತೆಗೆ ಹೃತ್ಪೂರ್ವಕವಾಗಿ ಶುಭಾಶಯ ಕೋರುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ವಾರಾಣಾಸಿಯಲ್ಲಿ ಮೋದಿ ಅಬ್ಬರ ಜೋರಾಗಿದೆ. ನರೇಂದ್ರ ಮೋದಿ ಅವರು 1,77,000 ಮತಗಳ ಲೀಡ್‍ನಲ್ಲಿ ಗೆಲುವಿನತ್ತ ಸಾಗುತ್ತಿದ್ದಾರೆ.

  • ಅಪ್ಪನಾಗಿದ್ದಕ್ಕೆ ವಿಶ್ ಮಾಡಿ ರಿಷಬ್ ಗುಟ್ಟು ಬಿಚ್ಚಿಟ್ಟ ಹರಿಪ್ರಿಯಾ!

    ಅಪ್ಪನಾಗಿದ್ದಕ್ಕೆ ವಿಶ್ ಮಾಡಿ ರಿಷಬ್ ಗುಟ್ಟು ಬಿಚ್ಚಿಟ್ಟ ಹರಿಪ್ರಿಯಾ!

    ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿಗೆ ಗಂಡು ಮಗು ಜನಿಸಿದಕ್ಕೆ ಸ್ಯಾಂಡಲ್‍ವುಡ್ ಕಲಾವಿದರು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಹಾಗೆಯೇ ನಟಿ ಹರಿಪ್ರಿಯಾ ಅವರು ರಿಷಬ್ ಶೆಟ್ಟಿ ಫೋಟೋ ಹಾಕಿ ಶುಭಾಶಯ ತಿಳಿಸಿದ್ದಾರೆ.

    ಹರಿಪ್ರಿಯಾ ತಮ್ಮ ಟ್ವಿಟ್ಟರಿನಲ್ಲಿ ರಿಷಬ್ ಲಾಲಿಪಾಪ್ ಹಿಡಿದುಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, ”  ”Yes?? it’s a Hero’. ಪ್ರಗತಿ ಹಾಗೂ ರಿಷಬ್ ಶೆಟ್ಟಿಗೆ ಶುಭಾಶಯಗಳು. ಗುರು, ಈಗ ಹೀರೋ ಹುಟ್ಟಿದ್ದಾನೆ. ಈಗಲಾದರೂ ನೀನು ಚಾಕ್ಲೇಟ್ ಕದಿಯುವುದನ್ನು ನಿಲ್ಲಿಸು. ಆಗ ನೀನು ನಿನ್ನ ಮಗನಿಗೆ ವಿಲನ್ ಆಗಿ ಕಾಣಿಸುವುದಿಲ್ಲ” ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

    ನಟ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರಿಗೆ ಗಂಡು ಮಗು ಜನಿಸಿದೆ. ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ರಿಷಬ್ ಶೆಟ್ಟಿ ಅವರು, ”Yes?? it’s a Hero” ಎಂದು ಬರೆದ ಹುಡುಗನ ಎಮೋಜಿ ಹಾಕಿದ್ದಾರೆ. ಜೊತೆಗೆ ಆಸ್ಪತ್ರೆಯ ಬೆಡ್ ಮೇಲಿರುವ ಪತ್ನಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

    ರಿಷಬ್ ಶೆಟ್ಟಿ ಅವರು ಫ್ರೆಬವರಿ 9 ರಂದು 2017 ರಲ್ಲಿ ಮೂಲತಃ ಶಿವಮೊಗ್ಗದ ರಿಪ್ಪನ್ ಪೇಟೆಯ ಪ್ರಗತಿ ಅವರನ್ನು ಮದುವೆಯಾಗಿದ್ದರು. ಸದ್ಯಕ್ಕೆ ರಿಷಬ್ ಶೆಟ್ಟಿ ಅಭಿನಯದ `ಬೆಲ್ ಬಾಟಂ’ ಸಿನಿಮಾ 50 ದಿನಗಳನ್ನು ಪೂರೈಸಿ ಯಶಸ್ವಿ ಕಾಣುತ್ತಿದೆ.

  • ವಿಶೇಷ ವಿಡಿಯೋ ಮೂಲಕ ಪತ್ನಿಗೆ ಮಹಿಳಾ ದಿನಾಚರಣೆ ವಿಶ್ ಮಾಡಿದ್ರು ಜನಾರ್ದನ ರೆಡ್ಡಿ

    ವಿಶೇಷ ವಿಡಿಯೋ ಮೂಲಕ ಪತ್ನಿಗೆ ಮಹಿಳಾ ದಿನಾಚರಣೆ ವಿಶ್ ಮಾಡಿದ್ರು ಜನಾರ್ದನ ರೆಡ್ಡಿ

    ಬಳ್ಳಾರಿ: ವಿಶೇಷ ವಿಡಿಯೊವೊಂದನ್ನು ತಮ್ಮ ಪ್ರೀತಿಯ ಪತ್ನಿಗೆ ಡೆಡಿಕೇಟ್ ಮಾಡುವ ಮೂಲಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ವಿಭಿನ್ನವಾಗಿ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯವನ್ನು ಕೋರಿದ್ದಾರೆ.

    ತಮ್ಮ 25ನೇ ವರ್ಷದ ಮದುವೆ ವಾರ್ಷಿಕೋತ್ಸವದ ದಿನದಂದು ಪತ್ನಿ ಜೊತೆಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿ ಮೈಯನ್ನು ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು. ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು. ಸಮಸ್ತ ಮಹಿಳಾ ಕುಲಕ್ಕೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಒಂದು ವಿಶೇಷ ಸಂದೇಶವನ್ನು ಬರೆದು ಪತ್ನಿ ಲಕ್ಷ್ಮೀ ಅರುಣಾ ಅವರಿಗೆ ಹಾಗೂ ಎಲ್ಲಾ ಮಹಿಳೆಯರಿಗೂ ಜನಾರ್ದನ ರೆಡ್ಡಿ ಅವರು ಪ್ರೀತಿಯಿಂದ ವಿಶ್ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಕನ್ನಡದ ವರನಟ ಡಾ.ರಾಜ್ ಕುಮಾರ್ ಹಾಡಿರುವ ಈ ಸುಮಧುರ ಗೀತೆ ಮಹಿಳೆಯ ತ್ಯಾಗ, ಸಹನೆ ಮತ್ತು ವಾತ್ಸಲ್ಯ ಭರಿತ ಹೃದಯಕ್ಕೆ ಪೂರಕವಾಗಿದ್ದು, ವಿಶ್ವ ಮಹಿಳಾ ದಿನಾಚರಣೆ ಶುಭ ಸಂದರ್ಭದಲ್ಲಿ ಸ್ಮರಿಸಲು ಸಂತೋಷವೆನಿಸುತ್ತಿದೆ. ಈ ವಿಶ್ವ ಮಹಿಳಾ ದಿನಾಚರಣೆ ವೇಳೆ ಮಹಿಳೆಯರ ಕುರಿತು ಅಕ್ಷರದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಮಹಿಳೆಯ ಹೃದಯ ಆಗಸದಷ್ಟು ವಿಶಾಲ, ಮನಸ್ಸು ಸಾಗರದಷ್ಟೇ ಸಮಾನ. ಮಹಿಳೆ ನಿಜಕ್ಕೂ ಅನಂತ ಸೃಷ್ಟಿಗೆ ಕಾರಣಳು. ಆದಿಶಕ್ತಿಯಾಗಿ ಎಲ್ಲೆಡೆ ವ್ಯಾಪಿಸಿರುವ ಮಹಿಳೆ ನಿಜಕ್ಕೂ ಈ ಜಗತ್ತಿನ ಅದ್ಭುತವಾದ ಕೊಡುಗೆ. ಪುರಾಣ, ಇತಿಹಾಸದಲ್ಲೂ ಮಹಿಳೆ ಎಂದಿಗೂ ಅಗ್ರ ಸ್ಥಾನದಲ್ಲಿದ್ದಾಳೆ. ಈಶ್ವರನಿಗೆ ಅರ್ಧಾಂಗಿಯಾಗಿ, ವಿಷ್ಣುವಿನಲ್ಲಿ ಅನುರಕ್ತಳಾಗಿ, ಬ್ರಹ್ಮನಿಗೆ ಸರಸ್ವತಿಯಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಮೂಲ ಕಾರಣಳಾಗಿದ್ದಾಳೆ. ಶಕ್ತಿ ದೇವತೆಯಾದ ಮಹಿಳೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಸ್ಕಾರಗಳಿಗೆ ಸ್ಫೂರ್ತಿದಾಯಕಳು. ಇಂತಹ ಮಹಿಳೆಯ ಬಗ್ಗೆ ಇಡೀ ಜಗತ್ತೇ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಗೌರವ ಸಲ್ಲಿಸುತ್ತಿದೆ.

    ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯದ ಅನುಮತಿ ಪಡೆದು ನನ್ನ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾನು ಬಳ್ಳಾರಿಗೆ ಆಗಮಿಸಿದಾಗ ಸರಳ ಕಾರ್ಯಕ್ರಮದಲ್ಲಿ ನನ್ನ ಪತ್ನಿಗಾಗಿ ನಾನು ಸಮರ್ಪಿಸಿ ಧ್ವನಿಗೂಡಿಸಿದ ಆ ಹಾಡನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಿದ್ದೇನೆ. ನನ್ನೆಲ್ಲ ನೋವು, ನಲಿವು, ಕಷ್ಟ, ನಷ್ಟಗಳು, ಸುಖ, ಸಂತೋಷ ಹೀಗೆ ನಾನಾ ರೀತಿಯ ಸಂದರ್ಭಗಳಲ್ಲಿ ಭಾಗಿಯಾಗಿ ಎಲ್ಲ ಸಮಯದಲ್ಲೂ ನನಗೆ ಪ್ರೋತ್ಸಾಹ ನೀಡುತ್ತಾ, ನನ್ನ ಶ್ರೇಯಸ್ಸನ್ನೇ ಬಯಸುತ್ತಾ, ಮಕ್ಕಳ ಪಾಲನೆ ಮಾತ್ರವಲ್ಲದೆ ನನ್ನನ್ನು ನಂಬಿದ ನೂರಾರು ಕುಟುಂಬಗಳ ಸದಸ್ಯರಿಗೆ ತಾಯಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸಿದ ನನ್ನ ಪತ್ನಿ ಶ್ರೀಮತಿ ಲಕ್ಷ್ಮಿಅರುಣಾ ಗೆ ಈ ಶುಭ ಸಂದರ್ಭದಲ್ಲಿ ಹೃದಯಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ. ಮತ್ತೊಮ್ಮೆ ವಿಶ್ವ ಮಹಿಳಾ ದಿನಾಚರಣೆ ಶುಭ ಸಂದರ್ಭದಲ್ಲಿ ಸಮಸ್ತ ಮಹಿಳೆಯರಿಗೆ ನನ್ನ ಹಾರ್ದಿಕ ಶುಭಾಶಯಗಳು ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಈ ವಿಡಿಯೋವನ್ನು ಈವರೆಗೆ ಸುಮಾರು 17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 400ಕ್ಕೂ ಹೆಚ್ಚು ಶೇರ್ ಆಗಿದೆ.

    https://www.facebook.com/galijanardhanreddy/videos/570411313445283/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv