Tag: ಶುದ್ಧ ನೀರು

  • ರಾಯಚೂರಿನ 50% ಜನರಿಗೆ ಮೂತ್ರಪಿಂಡ ಸಮಸ್ಯೆ: ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣ

    ರಾಯಚೂರಿನ 50% ಜನರಿಗೆ ಮೂತ್ರಪಿಂಡ ಸಮಸ್ಯೆ: ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣ

    -ಹೆಚ್ಚು ನೀರು ಕುಡಿಯದ ಜನರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ

    -ಬಿಸಿಲು ಹಾಗೂ ಅಶುದ್ಧ ನೀರು ಕಾಯಿಲೆಗೆ ಕಾರಣ

    -ಬೇಕರಿ, ಹೋಟೆಲ್ ಅಡುಗೆಮನೆ ಕೆಲಸಗಾರರು ಹಾಗೂ ರೈತರು ಹೆಚ್ಚು ಬಾಧಿತರು

    ರಾಯಚೂರು: ಕರ್ನಾಟಕ ರಾಜ್ಯದ ಬಿಸಿಲನಾಡು ಎಂದು ರಾಯಚೂರು ಜಿಲ್ಲೆಯನ್ನು ಕರೆಯುತ್ತಾರೆ. ನಿಜ, ಆದ್ರೆ ಆ ಬಿಸಿಲು ರಾಯಚೂರಿನ ಜನರ ಮೇಲೆ ಏನೆಲ್ಲಾ ಪರಿಣಾಮಗಳನ್ನ ಬೀರುತ್ತಿದೆ ಗೊತ್ತಾ? ಇಲ್ಲಿನ ಬಿಸಿಲಿನಿಂದಾಗಿಯೇ ಜನ ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಯ ಮೂರು ತಿಂಗಳಲ್ಲಿ ಸಾವಿರಾರು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ರೋಗಿಗಳಲ್ಲಿ ರೈತರ ಸಂಖ್ಯೆಯೇ ಹೆಚ್ಚಾಗಿರುವುದು ದುರಂತ.

    ವೈದ್ಯರೇ ಹೇಳುವ ಹಾಗೇ ಬೇಸಿಗೆಯಲ್ಲಿ ರೋಗಿಗಳ ಸಂಖ್ಯೆ ಇತರೆ ದಿನಗಳಿಗಿಂದ ಶೇಕಡಾ 100 ರಷ್ಟು ಹೆಚ್ಚಾಗಿರುತ್ತದೆ. ಜಿಲ್ಲೆಯ ಶೇಕಡಾ 50 ರಷ್ಟು ಜನರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಹದ ನಿರ್ಜಲೀಕರಣ. ಬೇಸಿಗೆಯಲ್ಲಿ ದೇಹದಿಂದ ಬೆವರು, ಮೂತ್ರ, ಉಸಿರಾಟದ ಮೂಲಕ ಹೆಚ್ಚು ನೀರು ಹೊರಹೋಗುತ್ತದೆ. ಹೆಚ್ಚೆಚ್ಚು ನೀರು ಕುಡಿಯದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಬೇಸಿಗೆ ಆರಂಭದಿಂದ ಪ್ರತೀ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಸರಿಸುಮಾರು ಮೂರದಿಂದ ನಾಲ್ಕು ಸಾವಿರ ಜನ ಮೂತ್ರಪಿಂಡ ಸಮಸ್ಯೆ ಹಾಗೂ ಕಿಡ್ನಿ ಸ್ಟೋನ್‍ನಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ರಾಯಚೂರು ಸೇರಿದಂತೆ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ವಿಪರೀತ ಮಟ್ಟಕ್ಕೆ ಮುಟ್ಟಿದೆ.

    ಹೊಲದಲ್ಲಿ ಕೆಲಸ ಮಾಡುವ ರೈತರು, ಕೃಷಿ ಕೂಲಿ ಕಾರ್ಮಿಕರು, ಬೇಕರಿಗಳಲ್ಲಿ, ಹೋಟೆಲ್ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವವರಲ್ಲಿ ಹಾಗೂ ಹೆಚ್ಚು ಮಾಂಸ ಪದಾರ್ಥ ಸೇವೆನೆ ಮಾಡುವವರನ್ನ ಮೂತ್ರಪಿಂಡ ಸಮಸ್ಯೆ ಕಾಡುತ್ತಿದೆ. ಕಾಲ್ಶಿಯಂ ಹಾಗೂ ಯೂರಿಕ್ ಆಸಿಡ್ ಸ್ಟೋನ್‍ಗಳು ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿರ್ಲಕ್ಷ್ಯ ಮಾಡುವವರು ಮೂತ್ರಪಿಂಡಗಳನ್ನೇ ಕಳೆದುಕೊಳ್ಳುತ್ತಿದ್ದಾರೆ.

    ಬಿಸಿಲಿನ ಜೊತೆ ಗ್ರಾಮೀಣ ಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಕೊರತೆ ಸಹ ಕಿಡ್ನಿ ಸ್ಟೋನ್‍ಗೆ ಕಾರಣವಾಗಿದೆ. ಕೆಲ ರೋಗಿಗಳಿಗೆ ಹೊಟ್ಟೆ ನೋವು, ಜ್ವರದಂತ ಲಕ್ಷಣಗಳು ಕಾಣಿಸಿಕೊಂಡರೆ, ಇನ್ನೂ ಕೆಲವರಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೇ ಮೂತ್ರಪಿಂಡಗಳ ಗಂಭೀರ ಸಮಸ್ಯೆ ಒಮ್ಮೆಲೆ ಎದುರಾಗುತ್ತಿದೆ ಎಂದು ಮೂತ್ರಪಿಂಡ ತಜ್ಞ ಡಾ.ತಾನಾಜಿ ಕಲ್ಯಾಣಕರ್ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಬಿಸಿಲೂರ ಜನರಿಗೆ ಬಿಸಿಲಿನಿಂದ ಕಿಡ್ನಿ ಸ್ಟೋನ್ ಜೊತೆ ಜೊತೆಗೆ ಸನ್ ಸ್ಟ್ರೋಕ್, ರಕ್ತದೊತ್ತಡ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿವೆ. ಬಿಸಿಲಿನ ತಾಪ ಹಾಗೂ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹೆಚ್ಚೆಚ್ಚು ನೀರು, ತಂಪು ಪಾನೀಯ, ಎಳನೀರು ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ.

     

  • ಯಾದಗಿರಿ: ಜಿಲ್ಲಾಸ್ಪತ್ರೆಗೆ ದಾಖಲಾಗಬೇಕಾದ್ರೆ ಊರಿಂದ ನೀರು ತರಬೇಕು!

    ಯಾದಗಿರಿ: ಜಿಲ್ಲಾಸ್ಪತ್ರೆಗೆ ದಾಖಲಾಗಬೇಕಾದ್ರೆ ಊರಿಂದ ನೀರು ತರಬೇಕು!

    ಯಾದಗಿರಿ: ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತದೆ. ಆದರೆ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಯಾದಗಿರಿಯ ಜಿಲ್ಲಾಸ್ಪತ್ರೆಗೆ ನೀವು ಎಂಟ್ರಿ ಕೊಟ್ಟು ನೀಡಬಹುದು.

    ಹೌದು. ಊರಿನಿಂದ ರೋಗಿಗಳು ನೀರು ತರಬೇಕಾದ ದುಸ್ಥಿತಿ ಯಾದಗಿರಿಯ ಜಿಲ್ಲಾಸ್ಪತ್ರೆಗೆ ಬಂದೊದಗಿದೆ. ನಿತ್ಯವು ನೂರಾರು ಬಡ ರೋಗಿಗಳು ಹಣವಿಲ್ಲದೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಆದ್ರೆ ಈ ಆಸ್ಪತ್ರೆಯಲ್ಲಿ ದಾಖಲಾಗಬೇಕಾದರೆ ನೀರಿಗಾಗಿ ನಿತ್ಯವು ನೂರಾರು ರೂಪಾಯಿ ಖರ್ಚು ಮಾಡಬೇಕಾಗಿದೆ.

    ಜಿಲ್ಲಾಸ್ಪತ್ರೆಯಲ್ಲಿ ಎರಡು ಕೊಳವೆ ಬಾವಿ ಮೂಲಕ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಎರಡೂ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಿಲ್ಲ. ಬಳಕೆಗೆ ಮಾತ್ರ ಈ ನೀರನ್ನು ಬಳಸಬಹುದಾಗಿದೆ. ಕೊಳವೆ ಬಾವಿ ನೀರನ್ನೇ ಶುದ್ಧೀಕರಿಸಿ ರೋಗಿಗಳಿಗೆ ಸಮರ್ಪಕವಾಗಿ ನೀರು ಪೂರೈಸಬೇಕು. ಆದರೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಆಸ್ಪತ್ರೆ ಕಟ್ಟಡದ ಮೇಲೆ ನೀರು ಶುದ್ಧಿಕರಣ ಘಟಕ ಅಳವಡಿಸಿದ್ದರೂ 15-20 ದಿನಗಳಿಗೊಮ್ಮೆ ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಅಗತ್ಯ ಪ್ರಮಾಣದ ಶುದ್ಧ ನೀರು ಸರಬರಾಜು ಆಗುತ್ತಿಲ್ಲ.

    ಆಸ್ಪತ್ರೆ ಕಟ್ಟಡದ ಮೇಲೆ ನೀರು ಶುದ್ಧಿಕರಣ ಘಟಕ ಅಳವಡಿಸಿದ್ರು 15-20 ದಿವಸಕ್ಕೊಮೆ ಬಳಕೆ ಮಾಡುತ್ತಿದ್ದಾರೆ. ಅದರಿಂದ ರೋಗಿಗಳಿಗೆ ಪೂರೈಸಬೇಕಾದಷ್ಟು ನೀರು ಶುದ್ಧಿಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆ ತಳಭಾಗದಲ್ಲಿ ಚಿಕ್ಕದಾದ ನೀರು ಶುದ್ಧಿಕರಣ ಘಟಕ ಹಾಕಿ ಕೈತೊಳೆದುಕೊಂಡಿದ್ದಾರೆ. ಇದರಿಂದ ಕೂಡ ಒಂದು ಹನಿ ನೀರು ಸರಿಯಾಗಿ ಸಿಗುತ್ತಿಲ್ಲ.

    ಬೇಸಿಗೆ ಆರಂಭವಾಗಿದ್ದು ದಾಹ ಹೆಚ್ಚಾಗುತ್ತಿದೆ. ಸರ್ಕಾರ ಮಾತ್ರ ಆಸ್ಪತ್ರೆಗೆ ಬರುವ ಜನರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡುತ್ತಿಲ್ಲ. ಹಗಲು ಸಮಯದಲ್ಲಿ ಬಡ ರೋಗಿಗಳು ಹಾಗೂ ಅವರ ಸಂಬಂಧಿಕರು ಆಸ್ಪತ್ರೆ ಮುಂಭಾಗದ ಅಂಗಡಿಗಳಲ್ಲಿ ನೀರನ್ನು ಖರೀದಿ ಮಾಡುತ್ತಾರೆ. ರಾತ್ರಿ ವೇಳೆಯಲ್ಲಿ ದಾಹವಾದ್ರೆ ರೋಗಿಗಳು ನೀರಿಲ್ಲದೇ ನರಕಯಾತನೆ ಅನುಭವಿಸುವಂತಾಗಿದೆ. ಇನ್ನು ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು, ಉಸ್ತುವಾರಿ ಸಚಿವರು ಇತ್ತ ಕಾಳಜಿ ವಹಿಸಿ ಬಡ ರೋಗಿಗಳಿಗೆ ಶುದ್ಧ ನೀರು ಪೂರೈಸುವ ಕೆಲಸ ಮಾಡಬೇಕಾಗಿದೆ.

     

  • ಕುಡಿಯುವ ನೀರಲ್ಲಿ ಮೀನು, ಹುಳಗಳ ಸರಬರಾಜು-ರಾಯಚೂರಲ್ಲಿ ನೀರಿಲ್ಲದೆ ನರಕಯಾತನೆ

    ಕುಡಿಯುವ ನೀರಲ್ಲಿ ಮೀನು, ಹುಳಗಳ ಸರಬರಾಜು-ರಾಯಚೂರಲ್ಲಿ ನೀರಿಲ್ಲದೆ ನರಕಯಾತನೆ

    -ನಗರಸಭೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರ ಪರದಾಟ

    -ಸಾಲಮಾಡಿ ನೀರು ಕೊಳ್ಳಲು ಮುಂದಾಗುತ್ತಿರುವ ಜನ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀರಿಗಾಗಿ ಜನ ನಿತ್ಯ ಪರದಾಡುತ್ತಿದ್ದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಒಂದು ರೀತಿಯ ಸಮಸ್ಯೆಯಾದ್ರೆ ನಗರ ಪಟ್ಟಣಗಳಲ್ಲಿ ಇನ್ನೊಂದು ರೀತಿಯ ಸಮಸ್ಯೆಗಳು ತಲೆದೂರಿವೆ. ಬಡವರು ಸಹ ಅನಿವಾರ್ಯವಾಗಿ ದುಡ್ಡು ಕೊಟ್ಟೆ ನೀರು ಕುಡಿಯಬೇಕಾದ ಪರಸ್ಥಿತಿ ಎದುರಾಗಿದೆ.

    ರಾಯಚೂರಿನ ಗಾಜಗಾರಪೇಟೆ, ವಾಸವಿನಗರ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ನಗರ ಪ್ರದೇಶದಲ್ಲಿದ್ದರೂ ಇವರಿಗೆ ನಾಲ್ಕು ದಿನಕ್ಕೆ ಒಂದು ಬಾರಿ ಕುಡಿಯುವ ನೀರು ಸಿಗುತ್ತಿದೆ. ಆ ನೀರು ಸಹ ಕೊಳಚೆ ವಾಸನೆಯಿದ್ದು, ಸಣ್ಣ ಮೀನು, ಹುಳಗಳು, ಕಸಕಡ್ಡಿ ನೀರಿನಲ್ಲಿ ಬರುತ್ತಿವೆ. ಅನಿವಾರ್ಯವಾಗಿ ಜನ ಇದೇ ನೀರನ್ನ ಸೋಸಿ ಕುಡಿಯುತ್ತಿದ್ದರು. ಆದ್ರೆ ಕಳೆದ ಒಂದು ತಿಂಗಳಿಂದ ಈ ನೀರನ್ನ ಕುಡಿದು ಮಕ್ಕಳು ಆಸ್ಪತ್ರೆ ಸೇರುತ್ತಿರುವುದರಿಂದ ಅನಿವಾರ್ಯವಾಗಿ ದುಡ್ಡು ಕೊಟ್ಟು ಶುದ್ಧ ಕುಡಿಯುವ ನೀರನ್ನ ತರುತ್ತಿದ್ದಾರೆ. ನೀರಿನ ಶುದ್ಧೀಕರಣ ಘಟಕದಲ್ಲಿ ಒಂದು ಕೊಡಕ್ಕೆ 7 ರೂಪಾಯಿ, ಒಂದು ಕ್ಯಾನ್‍ಗೆ 8 ರೂಪಾಯಿ ಕೊಡುತ್ತಿದ್ದಾರೆ. ಇಲ್ಲೂ ನೀರು ಸಿಗದಿದ್ದರೆ ಕಿರಾಣಿ ಅಂಗಡಿಗಳಲ್ಲಿ 35 ರಿಂದ 40 ರೂ. ಕೊಟ್ಟು ಒಂದು ಕ್ಯಾನ್ ನೀರನ್ನು ಪಡೆಯುತ್ತಿದ್ದಾರೆ.

    ರಾಯಚೂರು ನಗರಸಭೆ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ಜನ ನೀರಿನ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆ ಒಂದೆಡೆಯಾದ್ರೆ ಶುದ್ಧ ಕಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ನಾಲ್ಕು ದಿನಕ್ಕೆ ಒಂದು ಬಾರಿ ನೀರು ಬಿಡುವ ನಗರಸಭೆ ಕನಿಷ್ಠ ಶುದ್ಧೀಕರಣವನ್ನೂ ಮಾಡದೇ ಕುಡಿಯುವ ನೀರು ಅಂತ ಸರಬರಾಜು ಮಾಡುತ್ತಿದೆ. ಇದರಿಂದ ಬೇಸತ್ತಿರುವ ಜನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ಗ್ರಾಮೀಣ ಭಾಗದಲ್ಲಿ ಬೋರ್‍ವೆಲ್ ನೀರಿನಲ್ಲಿ ಲವಣಾಂಶಗಳು ಹೆಚ್ಚಾಗಿರುವುದರಿಂದ ಪದೇ ಪದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

    ಒಟ್ನಲ್ಲಿ, ಬೇಸಿಗೆ ಬಂದ್ರೆ ರಾಯಚೂರು ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ. ಈಗಾಗಲೇ ಜಿಲ್ಲಾಡಳಿತ ತೀವ್ರ ನೀರಿನ ಸಮಸ್ಯೆಗಳಿರುವ 68 ಗ್ರಾಮಗಳನ್ನ ಗುರುತಿಸಿದೆ. ಕೂಡಲೇ ಶುದ್ಧ ಕುಡಿಯುವ ಹಾಗೂ ದಿನಬಳಕೆ ನೀರನ್ನ ಸರಬರಾಜು ಮಾಡದಿದ್ದರೆ ನೀರಿಗಾಗೇ ಜನ ಸಾಲ ಮಾಡಬೇಕಾಗುತ್ತದೆ.

     

  • ಮಂಗಳೂರಿನ ಜನ ಶುದ್ಧ ನೀರಿನ ಬದಲು ಕುಡಿಯುತ್ತಿದ್ದಾರೆ ಡ್ರೈನೇಜ್ ನೀರು!

    ಮಂಗಳೂರಿನ ಜನ ಶುದ್ಧ ನೀರಿನ ಬದಲು ಕುಡಿಯುತ್ತಿದ್ದಾರೆ ಡ್ರೈನೇಜ್ ನೀರು!

    ಮಂಗಳೂರು: ನಗರದ ಜನರು ನೀರು ಕುಡಿಯೋ ಮೊದ್ಲು ಇನ್ಮುಂದೆ ಸ್ವಲ್ಪ ಯೋಚಿಸಬೇಕು. ಯಾಕಂದ್ರೆ ಮಂಗಳೂರು ನಗರವಾಸಿಗಳಿಗೆ ಶುದ್ದ ಕುಡಿಯುವ ನೀರಿಗೆ ಬದಲಾಗಿ ಡ್ರೈನೇಜ್ ನೀರನ್ನು ಕುಡಿಯುತ್ತಿದ್ದಾರೆ. ಪಾಲಿಕೆ ಡ್ರೈನೇಜ್ ನೀರು ಕುಡಿಸೋದರ ಜಾಡು ಹಿಡಿದು ಹೋದ ಪಬ್ಲಿಕ್ ಟಿವಿಗೆ ನಿಜ ಸಂಗತಿ ಗೊತ್ತಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ತುಂಬೆ ಡ್ಯಾಂನಿಂದ ಮಂಗಳೂರು ನಗರಕ್ಕೆ ಶುದ್ಧ ಕುಡಿಯೋ ನೀರು ಪೂರೈಕೆಯಾಗುತ್ತೆ. ಆದ್ರೆ ಇತ್ತೀಚೆಗೆ ನಗರದ ಜನರಿಗೆ ಹಲವು ರೋಗಗಳು ಕಾಣಿಸಿಕೊಂಡ ಪರಿಣಾಮ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಕೊಲಿಫಾರಂ ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇದಕ್ಕೆಲ್ಲಾ ಕೊಳಚೆ ನೀರು ಡ್ಯಾಂಗೆ ಸೇರುತ್ತಿರೋದೇ ಕಾರಣ ಎಂಬ ವಿಷಯ ಗೊತ್ತಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕ್ಷೇತ್ರವಾಗಿರುವ ಬಂಟ್ವಾಳದಲ್ಲಿ ಕೊಳಚೆ ನೀರಿನ ಶುದ್ಧೀಕರಣ ಘಟಕ ಇಲ್ಲ. ಅಲ್ಲದೇ 38 ಕೋಟಿ ರೂಪಾಯಿ ವೆಚ್ಚದಲ್ಲಿ 2003ರಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ತಿಯಾಗದೇ ಇರೋದು ಸಮಸ್ಯೆಗೆ ಕಾರಣ. ಈ ಬಗ್ಗೆ ಪಾಲಿಕೆಗೆ ಗೊತ್ತಿದ್ರೂ ಬಾಯಿ ಮುಚ್ಚಿ ಕುಳಿತಿದೆ. ಸಮಸ್ಯೆ ಬಗ್ಗೆ ಕೇಳಿದ್ರೆ ಇದೇನು ಹೊಸತಲ್ಲ ಅಂತ ಮೇಯರ್ ಹರಿನಾಥ್ ಬೇಜವಾಬ್ದಾರಿಯ ಉತ್ತರ ಕೊಡ್ತಿದ್ದಾರೆ.

    ಒಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಗಳ ಜಾಣ ಕುರುಡುತನದಿಂದಾಗಿ ಮಂಗಳೂರಿನ ಜನ ಡ್ರೈನೇಜ್ ನೀರನ್ನ ಕುಡಿಯುವಂತಾಗಿದೆ. ಇನ್ನಾದ್ರು ಸಮಸ್ಯೆ ಬಗೆಹರಿಸದಿದ್ರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.