Tag: ಶುದ್ಧ ನೀರು

  • ರಾಯಚೂರಲ್ಲಿ ಹಳ್ಳಹಿಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ- 17 ಗ್ರಾಮಗಳಿಗೆ ಕುಡಿಯಲು ನೀರೇ ಇಲ್ಲಾ

    ರಾಯಚೂರಲ್ಲಿ ಹಳ್ಳಹಿಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ- 17 ಗ್ರಾಮಗಳಿಗೆ ಕುಡಿಯಲು ನೀರೇ ಇಲ್ಲಾ

    ರಾಯಚೂರು: ರಾಜ್ಯದಲ್ಲಿ ಕಲುಷಿತ ನೀರು (Contaminated Water) ಕುಡಿದು ಎಷ್ಟೇ ಜನ ಸಾವನ್ನಪ್ಪಿದರೂ ರಾಯಚೂರಿನ (Raichur) ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುವ ಹಾಗೇ ಕಾಣುವುದಿಲ್ಲ. ರಾಯಚೂರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ 9 ಸಾವಾಗಿದ್ದರೂ ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.

    ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿನ ಸ್ಲೋ ಸ್ಯಾಂಡ್ ಫಿಲ್ಟರ್ ಅಕ್ಷರಶಃ ಹಾಳಾಗಿದ್ದು, ನೀರಿನ ಶುದ್ಧೀಕರಣ (Purification) ಎಂಬುವುದೇ ಮಾಯಾವಾಗಿದೆ. 17 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾದ ನೀರಿನ ಘಟಕ ಸಂಪೂರ್ಣ ಹಾಳಾಗಿದೆ. ಇಲ್ಲಿನ ನೀರು ಪಾಚಿಗಟ್ಟಿ ಸಂಪೂರ್ಣ ಕಲುಷಿತಗೊಂಡಿದೆ. ಇದನ್ನೂ ಓದಿ: ಇಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಹೈವೋಲ್ಟೇಜ್ ಸಭೆ

    ಇಷ್ಟು ದಿನ ಇದೇ ನೀರನ್ನು ಸರಬರಾಜು ಮಾಡುತ್ತಿದ್ದ ಅಧಿಕಾರಿಗಳು ಈಗ ತುಂಗಭದ್ರಾ ನದಿ ನೀರನ್ನು ಪಂಪ್ ಮಾಡುತ್ತಿದ್ದ ಎರಡು ಮೋಟಾರ್‌ಗಳು ಕೆಟ್ಟಿವೆ ಎಂದು ಕಳೆದ 15-20 ದಿನಗಳಿಂದ ಗ್ರಾಮಗಳಿಗೆ ನೀರು ಸರಬರಾಜು ಮಾಡುವುದನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದ್ದು, ನೀರಿಗಾಗಿ ಜನ ಪರದಾಟ ನಡೆಸಿದ್ದಾರೆ. ಬಿಚ್ಚಾಲಿ ಗ್ರಾಮದ ಜನ ನೇರವಾಗಿ ಶುದ್ಧೀಕರಣ ಘಟಕಕ್ಕೆ ಬಂದು ಟ್ಯಾಂಕ್ ಏರಿ ಹರಸಾಹಸ ಮಾಡಿ ಪಾಚಿಗಟ್ಟಿದ ಕಲುಷಿತ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಆಗಾಗ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದರೂ, ನೀರಿನ ಅನಿವಾರ್ಯತೆಯಿಂದ ಕಲುಷಿತ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸರ್ಕಾರಿ ಬಸ್, ಕಾರು ಮುಖಾಮುಖಿ ಡಿಕ್ಕಿ – 9 ಮಂದಿಗೆ ಗಂಭೀರ ಗಾಯ

    ಟ್ಯಾಂಕ್‌ನಿಂದ ತೆಗೆದುಕೊಳ್ಳುವಾಗಲೇ ನೀರನ್ನು ಸೋಸಿಕೊಂಡು ಕೊಡಗಳಿಗೆ ತುಂಬಿಸುತ್ತಿದ್ದಾರೆ. ಪಾಚಿ ಜೊತೆಗೆ ನೀರಿಗೆ ಹುಳು ಬಿದ್ದಿರುವುದರಿಂದ ಭಯದಲ್ಲೇ ನೀರನ್ನು ಬಳಸಬೇಕಿದೆ. 2015ರಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಿರ್ಮಾಣವಾದ ಘಟಕ ನಿರ್ವಹಣೆಯಿಲ್ಲದೆ ಸಂಪೂರ್ಣ ಹಾಳಾಗಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ರಕ್ತಚಂದನ ಸಾಗಿಸ್ತಿದ್ದ ಕಾರು ಭೀಕರ ಅಪಘಾತಕ್ಕೆ ಜಖಂ – ಪವಾಡವೆಂಬಂತೆ ಪಾರಾದ ಕಳ್ಳರು

    ದೊಡ್ಡ ಅನಾಹುತಗಳು ಸಂಭವಿಸಿದಾಗಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡುತ್ತಾರಾ ಎಂದು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಒಟ್ಟಿನಲ್ಲಿ ಎಷ್ಟೇ ಬಾರಿ ಅವಘಡಗಳು ನಡೆದರೂ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸವೇ ಸರಿ. ಕನಿಷ್ಟ ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತು ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌ – ಲೋಕಸಭೆಗೆ ಹೆಚ್‌ಡಿಕೆ ಸ್ಪರ್ಧೆ?

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆ ಮನೆಗೆ ಗಂಗಾ ನೀರು ಕುಡಿಯೋ ಯೋಜನೆಗೆ ಸರ್ಕಾರದ ಸಿದ್ಧತೆ

    ಮನೆ ಮನೆಗೆ ಗಂಗಾ ನೀರು ಕುಡಿಯೋ ಯೋಜನೆಗೆ ಸರ್ಕಾರದ ಸಿದ್ಧತೆ

    ಬೆಂಗಳೂರು: ಪ್ರತಿಯೊಂದು ಮನೆಗೂ ಕುಡಿಯುವ ನೀರು ಕೊಡುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಮೂಲಕ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಕೊಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಸಿದ್ಧತೆ ಮಾಡಿಕೊಂಡಿದೆ.

    ವಿಧಾನಸೌಧದಲ್ಲಿ ಹೊಸ ಯೋಜನೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮಾಹಿತಿ ನೀಡಿದರು. ಮನೆ ಮನೆಗೆ ಕುಡಿಯುವ ನೀರು ಕೊಡುವ ಗಂಗಾ ಯೋಜನೆ ಜಾರಿಗೆ ನಿರ್ಧಾರ ಮಾಡಿದ್ದೇವೆ. ಇನ್ನೊಂದು ತಿಂಗಳಲ್ಲಿ ಯೋಜನೆ ಸಿದ್ಧತೆ ಪೂರ್ಣಗೊಳ್ಳಲಿದೆ. ಕೊಳಾಯಿ ಮೂಲಕ ಮನೆ ಮನೆಗೆ ನೀರು ಕೊಡುವ ಯೋಜನೆ ಇದಾಗಿದೆ. ವರದಿ ಸಿದ್ಧವಾದ ಬಳಿಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಕೇಂದ್ರ ಈ ಯೋಜನೆಗೆ ಎಷ್ಟು ಅನುದಾನ ಕೊಡುತ್ತೆ ನೋಡಿಕೊಂಡು ರಾಜ್ಯ ಸರ್ಕಾರ ಇದ್ರ ಬಗ್ಗೆ ನಿರ್ಧಾರ ಮಾಡುತ್ತೆ ಅಂತ ಸ್ಪಷ್ಟಪಡಿಸಿದರು.

    ಏನಿದು ಗಂಗಾ ಯೋಜನೆ?
    ಪ್ರತಿಯೊಬ್ಬರಿಗೂ ಶುದ್ಧವಾದ ಕುಡಿಯುವ ನೀರು ನೀಡುವುದು ಈ ಯೋಜನೆ ಉದ್ದೇಶ. ಪೈಪ್ ಗಳ ಮೂಲಕ ಮನೆ ಮನೆಗೆ ಕೊಳಾಯಿ ಹಾಕಿ ನೀರು ಸರಬರಾಜು ಮಾಡೋದು. ತಿಂಗಳಿಗೆ ಇಂತಿಷ್ಟು ಅಂತ ಶುಲ್ಕ ವಿಧಿಸೋದು. ಸರ್ಕಾರವೇ ನೀರು ಬಿಡುವ ನಿರ್ವಹಣೆ ಮಾಡುವದರಿಂದ ಹೆಚ್ಚು ನೀರು ಪೋಲು ಆಗದಂತೆ ತಡೆಯೋದು. ಈ ಮೂಲಕ ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ.

  • ಕೋಟಿ ಕೋಟಿ ಹಣ ನೀರಲ್ಲಿ ಹೋಮ- ಮತ್ತೆ ಭೀಮೆಯ ಒಡಲು ಸೇರ್ತಿದೆ ಚರಂಡಿ ನೀರು

    ಕೋಟಿ ಕೋಟಿ ಹಣ ನೀರಲ್ಲಿ ಹೋಮ- ಮತ್ತೆ ಭೀಮೆಯ ಒಡಲು ಸೇರ್ತಿದೆ ಚರಂಡಿ ನೀರು

    ಕಲಬುರಗಿ: ಅದು ಬರೋಬ್ಬರಿ 47 ಕೋಟಿ ರೂಪಾಯಿ ವೆಚ್ಚದ ಯೋಜನೆ. ಅಂದುಕೊಂಡಂತೆ ಆದರೆ ಆ ಯೋಜನೆಯಿಂದಾಗಿ ಭೀಮಾ ನದಿಯ ಒಡಲು ಹಸನಾಗಬೇಕಿತ್ತು. ಆದರೆ ಅಂದುಕೊಂಡದ್ದು ಒಂದು, ಆಗಿದ್ದು ಮತ್ತೊಂದು. ಹೀಗಾಗಿ ಪಾಲಿಕೆಯ ಕೋಟಿ ಕೋಟಿ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.

    ಇದು ಕಲಬುರಗಿ ಜನರ ಜೀವನಾಡಿ ಭೀಮೆ. ಇಡೀ ಮಹಾನಗರದ ಚರಂಡಿ ನೀರು ಈ ಭೀಮೆಯ ಒಡಲು ಸೇರುತ್ತಿದೆ. ಹೀಗಾಗಿ ಚರಂಡಿ ನೀರನ್ನು ಶುದ್ಧೀಕರಿಸಿ ನಂತರ ನದಿಗೆ ಬಿಡಲು ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಬರೋಬ್ಬರಿ 47 ಕೋಟಿ ರೂಪಾಯಿಯನ್ನು ಸುರಿದಿದ್ದರು. ಆದರೆ ಈ ಬಹುಕೋಟಿ ವೆಚ್ಚದ ಪ್ಲಾನ್ ವರ್ಕೌಟ್ ಆಗ್ಲಿಲ್ಲ. ಕಾಮಗಾರಿ ಲೋಪದೋಷದಿಂದ ಮತ್ತದೇ ಚರಂಡಿ ನೀರು ನದಿಗೆ ಸೇರ್ತಿದೆ.

    ಅಂದಾಜು 40 ಎಂಎಲ್‍ಡಿ ಸಾಮಥ್ರ್ಯದ ಚರಂಡಿ ನೀರು ಶುದ್ದೀಕರಣ ಘಟಕವನ್ನು ಸರ್ಕಾರ ಏಷಿಯನ್ ಡೆವಲಪ್‍ ಮೆಂಟ್ ಬ್ಯಾಂಕ್ ನೆರವಿನಿಂದ ಶುರು ಮಾಡಿತು. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದಾಗ ಲೋಪದೋಷ ಕಂಡುಬಂತು. ಹೀಗಾಗಿ ಕರ್ತವ್ಯಲೋಪ ಎಸಗಿದವರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಅತ್ತ ಹಣವೂ ಉಳಿಲಿಲ್ಲ ಇತ್ತ ಕೆಲಸನ್ನು ಸರಿ ಆಗಿಲ್ಲ ಎನ್ನುವ ಹಾಗಾಗಿದೆ ಪಾಲಿಕೆ ಕಾಮಗಾರಿ.

  • ಈ ಊರಿನ ಜನ್ರಿಗೆ ಚಿಕೂನ್ ಗುನ್ಯಾ- ಚುನಾವಣೆಯಲ್ಲಿ ವೋಟ್ ಕೊಡಿ, ನೀರು ಕೊಡ್ತೀವಿ ಎಂದ ಕಾಂಗ್ರೆಸ್ ನಾಯಕರು ನಾಪತ್ತೆ

    ಈ ಊರಿನ ಜನ್ರಿಗೆ ಚಿಕೂನ್ ಗುನ್ಯಾ- ಚುನಾವಣೆಯಲ್ಲಿ ವೋಟ್ ಕೊಡಿ, ನೀರು ಕೊಡ್ತೀವಿ ಎಂದ ಕಾಂಗ್ರೆಸ್ ನಾಯಕರು ನಾಪತ್ತೆ

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಸುಮಾರು 1000ಕ್ಕೂ ಅಧಿಕ ಜನರು ಚಿಕೂನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ. ಇದುವರೆಗೂ ಯಾವ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.

    ಕಲುಷಿತ ನೀರಿನ ಸೇವನೆಯಿಂದ ಗ್ರಾಮಸ್ಥರು ಚಿಕೂನ್ ಗುನ್ಯಾದಿಂದ ಬಳಲುವಂತಾಗಿದೆ. ಗುಂಡ್ಲುಪೇಟೆ ಉಪಚುನಾವಣೆಯ ವೇಳೆಯಲ್ಲಿ ಗ್ರಾಮಕ್ಕೆ ಬಂದಿದ್ದ ಎಲ್ಲ ರಾಜಕೀಯ ನಾಯಕರು ನಮಗೆ ವೋಟ್ ಕೊಡಿ, ನಾವು ನಿಮಗೆ ನೀರು ಕೊಡ್ತೀವಿ ಅಂತಾ ಭರವಸೆಗಳನ್ನು ನೀಡಿದ್ದರು. ಆದ್ರೆ ಚುನಾವಣೆ ಗೆಲುವಿನ ಬಳಿಕ ಯಾವ ಕಾಂಗ್ರೆಸ್ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಚಿಕೂನ್ ಗುನ್ಯಾ ಬಂದಿದ್ದು ಯಾಕೆ?: ಭೀಮನಬೀಡು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಊರಿಗೆ ಒಂದು ಮೇಲ್ಮಟ್ಟದ ನೀರಿನ ಟ್ಯಾಂಕ್ ಇದೆ. ಆದರೆ ಸ್ವಚ್ಛ ನೀರು ಬರುವುದಿಲ್ಲ. ಹೀಗಾಗಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಕೆರೆಯ ಮೊರೆ ಹೋಗಿದ್ದಾರೆ. ಆದರೆ ಕೆರೆಯಲ್ಲಿನ ನೀರು ಕಲುಷಿತಗೊಂಡಿದ್ದರಿಂದ ಕುಡಿಯಲು ಯೋಗ್ಯವಾಗಿಲ್ಲ. ಆದ್ರೂ ಗ್ರಾಮಸ್ಥರು ವಿಧಿಯಿಲ್ಲದೇ ಕೆರೆಯ ನೀರನ್ನು ಬಳಸುತ್ತಿದ್ದಾರೆ. ದೀರ್ಘ ಕಾಲದಿಂದ ಕಲುಷಿತವಾಗಿರೋ ನೀರನ್ನು ಕುಡಿಯುವುದರಿಂದ ಗ್ರಾಮದಲ್ಲಿನ 1000ಕ್ಕೂ ಅಧಿಕ ಜನರು ಚಿಕೂನ್ ಗುನ್ಯಾದಿಂದ ಬಳಲುತ್ತಿದ್ದಾರೆ.

    ಉಪಚುನಾವಣೆ ಪ್ರಚಾರದ ವೇಳೆ ಗ್ರಾಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಪ್ರದರ್ಶನ ಮಾಡಿದ್ದರು. ತೀವ್ರ ಮುಜುಗುರಕ್ಕೊಳಗಾದ ಸಿಎಂ ನಮ್ಮ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್‍ರಿಗೆ ಮತ ನೀಡಿ ನಿಮಗೆ ನೀರು ಕೊಡ್ತೇವೆ ಎಂದು ಭರವಸೆ ನೀಡಿದ್ದರು.

  • ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗಾಗಿ ರಾಯಚೂರಿನಲ್ಲಿ ವಾಟರ್ ಅಂಬ್ಯುಲೆನ್ಸ್ ಸೇವೆ

    ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗಾಗಿ ರಾಯಚೂರಿನಲ್ಲಿ ವಾಟರ್ ಅಂಬ್ಯುಲೆನ್ಸ್ ಸೇವೆ

    ರಾಯಚೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸರಬರಾಜಿನ ಸಮರ್ಪಕ ವ್ಯವಸ್ಥೆಗಾಗಿ ಜಿಲ್ಲಾ ಪಂಚಾಯ್ತಿ ವಾಟರ್ ಅಂಬ್ಯುಲೆನ್ಸ್ ಸೇವೆಯನ್ನ ಆರಂಭಿಸಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗದಂತೆ ನೀರು ಪೂರೈಕೆಗೆ ಸಂಬಂಧಿಸಿದ ಕೊಳವೆ ಜಾಲದ ವ್ಯವಸ್ಥೆ, ಕೈಪಂಪು, ಕೊಳವೆ ಬಾಯಿ ಪಂಪು ತುರ್ತು ದುರಸ್ಥಿ, ಆರ್‍ಓ ಪ್ಲಾಂಟ್‍ಗಳ ದುರಸ್ಥಿಗೆ ಅಂಬ್ಯುಲೆನ್ಸ್ ಸಜ್ಜುಗೊಂಡಿದೆ.

    ನೀರಿನ ತುರ್ತು ಸೇವಾ ವಾಹನದಲ್ಲಿ ನುರಿತ ನಾಲ್ಕು ಜನ ತಂತ್ರಜ್ಞರು ಹಾಗೂ ಅಗತ್ಯ ಸಲಕರಣೆಗಳು ಇದ್ದು ಎಲ್ಲಾ ಗ್ರಾಮ ಪಂಚಾಯ್ತಿಗಳು ಸೇವೆಯ ಸೌಲಭ್ಯ ಪಡೆಯಬಹುದಾಗಿದೆ. ಸದ್ಯಕ್ಕೆ ಜಿಲ್ಲೆಗೆ ಒಂದು ಅಂಬ್ಯುಲೆನ್ಸ್ ಸೇವೆಯನ್ನ ಮಾತ್ರ ಆರಂಭಿಸಲಾಗಿದೆ. ಜಿಲ್ಲಾಪಂಚಾಯ್ತಿ ವಶಕ್ಕೆ ಪಡೆದಿರುವ 25 ಖಾಸಗಿ ಬೋರ್‍ವೆಲ್‍ಗಳ ತುರ್ತು ರಿಪೇರಿಯನ್ನೂ ತುರ್ತು ಸೇವಾ ತಂಡ ನಿರ್ವಹಿಸಲಿದೆ.

    ತುರ್ತುಸೇವಾ ವಾಹನದಲ್ಲಿ ಶುದ್ದ ಕುಡಿಯುವ ನೀರಿನ ತಂತ್ರಜ್ಞ, ಕೈಪಂಪು,ಕೊಳವೆ ಬಾವಿ ರಿಪೇರಿ ತಜ್ಞ ಹಾಗೂ ಎಲೆಕ್ಟ್ರೀಷಿಯನ್ ತಂಡ ಇರುತ್ತದೆ. ಜಿಲ್ಲೆಯಲ್ಲಿನ 473 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 328 ಮಾತ್ರ ಕೆಲಸ ಮಾಡುತ್ತಿದ್ದು, ಇದರಲ್ಲಿ 65 ಘಟಕಗಳು ಸಂಪೂರ್ಣ ಬಂದ್ ಆಗಿವೆ. ಶೀಘ್ರದಲ್ಲಿ ರೀಪೇರಿ ಆಗುವಂತಹ ಘಟಕಗಳನ್ನ ಸಾರ್ವಜನಿಕರಿಗೆ ಮುಕ್ತ ಮಾಡಲು ತುರ್ತು ಸೇವಾ ಘಟಕ ಕಾರ್ಯನಿರ್ವಹಿಸಲಿದೆ ಅಂತ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಯೂಸೂಫ್ ಖಾನ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ್ದಾರೆ.

     

  • ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಚರ್ಮರೋಗ: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ

    ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಚರ್ಮರೋಗ: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ

    – ನಾಲ್ಕು ಗ್ರಾಮಗಳಲ್ಲಿ ವೈದ್ಯರ ತಂಡದಿಂದ ನಿರಂತರ ತಪಾಸಣೆ

    ರಾಯಚೂರು: ಜಿಲ್ಲೆಯ ಕೃಷ್ಣಾನದಿ ತೀರದ ಗ್ರಾಮಗಳ ಜನ ಕಲುಷಿತ ನೀರನ್ನ ಬಳಸಿ ವಿವಿಧ ಚರ್ಮರೋಗಗಳಿಗೆ ತುತ್ತಾಗುತ್ತಿರುವ ಕುರಿತ ಪಬ್ಲಿಕ್ ಟಿವಿ ವರದಿಗೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕಳೆದ ಮೂರು ದಿನಗಳಿಂದ ರಾಯಚೂರು ತಾಲೂಕಿನ ಆತ್ಕೂರು, ಡಿ.ರಾಂಪೂರ್, ಬೂರ್ದಿಪಾಡ್, ಸರ್ಜಾಪುರ ಗ್ರಾಮಗಳಲ್ಲಿ ವೈದ್ಯರ ತಂಡ ಆರೋಗ್ಯ ತಪಾಸಣೆ ಶಿಬಿರ ನಡೆಸಿದೆ.

    ನದಿ ತೀರದ ಗ್ರಾಮಗಳ ಜನರ ಚರ್ಮರೋಗಕ್ಕೆ ಕೃಷ್ಣನದಿ ನೀರು ಹಾಗೂ ಬಿಸಿಲು ಕಾರಣ ಅಂತ ವೈದ್ಯರು ಹೇಳಿದ್ದಾರೆ. ನದಿಯಲ್ಲಿನ ನಿಂತ ನೀರಲ್ಲಿ ಹೆಚ್ಚಾಗಿರುವ ಫಂಗಸ್‍ನಿಂದಾಗಿ ಚರ್ಮರೋಗಗಳು ಕಾಣಿಸಿಕೊಂಡಿವೆ.  ಹೀಗಾಗಿ ವೈದ್ಯರು ಆಂಟಿ ಫಂಗಲ್, ಆಂಟಿ ಸ್ಟೆಮಿ ಮಾತ್ರೆ ಹಾಗು ಮುಲಾಮುಗಳನ್ನು ನೀಡುತ್ತಿದ್ದಾರೆ. ಆರೋಗ್ಯ ಇಲಾಖೆ ಗ್ರಾಮಸ್ಥರಿಗೆ ನೀರನ್ನ ಶುದ್ಧೀಕರಿಸಿ ಬಳಸುವಂತೆ ಜಾಗೃತಿಯನ್ನ ಮೂಡಿಸುತ್ತಿದ್ದಾರೆ.

    ಹೆಚ್ಚು ಕಾಲ ನಿಂತ ನೀರನ್ನ ಬಳಸುವುದಿರಿಂದ ವಾಂತಿ, ಬೇಧಿ, ಅತೀಸಾರದಂತಹ ಕಾಯಿಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ನೀರಿನ ಮಾದರಿಗಳನ್ನ ಸಂಗ್ರಹಿಸಿರುವ ಆರೋಗ್ಯ ಇಲಾಖೆ ಪ್ರಯೋಗಾಯಲಕ್ಕೆ ಕಳುಹಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾರಾಯಣಪ್ಪ ನದಿ ನೀರನ್ನ ಶುದ್ಧಿಕರಿಸುವಂತೆ ಜಿಲ್ಲಾ ಆರೋಗ್ಯ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆದಿದ್ದಾರೆ. ಗ್ರಾಮ ಪಂಚಾಯ್ತಿಗೆ ನೀರನ್ನ ಶುದ್ದಿಕರಿಸಿ ಕೊಳಾಯಿಗೆ ಬಿಡುವಂತೆ ಸೂಚಿಸಿದ್ದು, ನೀರಿನ ಕ್ಲೋರಿನೇಷನ್ ನಡೆದಿದೆ.

    ಪಬ್ಲಿಕ್ ಟಿವಿ ವರದಿಗೆ ಕೂಡಲೇ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಈಗ ವೈದ್ಯರ ತಂಡ ಚಿಕಿತ್ಸೆಗೆ ಮುಂದಾಗಿದೆ. ಗ್ರಾಮಗಳಿಗೆ ಶುದ್ಧ ನೀರಿನ ಸರಬರಾಜು ಮಾಡುವ ಅಗತ್ಯವಿದೆ.

  • ರಾಯಚೂರು ನಗರ ಸಭೆಯಿಂದ ಜನರಿಗೆ ಪಾಚಿಗಟ್ಟಿದ ಕೊಳಚೆ ನೀರು ಪೂರೈಕೆ

    ರಾಯಚೂರು ನಗರ ಸಭೆಯಿಂದ ಜನರಿಗೆ ಪಾಚಿಗಟ್ಟಿದ ಕೊಳಚೆ ನೀರು ಪೂರೈಕೆ

    ರಾಯಚೂರು: ಹಸಿರು ಬಣ್ಣದ ಪಾಚಿಗಟ್ಟಿದ ಕೊಳಚೆ ನೀರನ್ನ ಕನಿಷ್ಠ ಪ್ರಮಾಣದ ಶುದ್ಧೀಕರಣವನ್ನೂ ಮಾಡದೇ ನಗರ ಸಭೆ ಕೊಳಾಯಿಗೆ ನೇರವಾಗಿ ಬಿಡುಗಡೆ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ರಾಂಪುರ ಕೆರೆಯಿಂದ ನಗರಕ್ಕೆ ಹರಿಸುವ ನೀರನ್ನ ಶುದ್ದೀಕರಿಸುವ ಕನಿಷ್ಠ ಕೆಲಸವನ್ನೂ ನಗರಸಭೆ ಮಾಡುತ್ತಿಲ್ಲ. ಶುದ್ಧೀಕರಣ ಘಟಕ ಕೆಟ್ಟು ಹೋಗಿ ಸುಮಾರು ವರ್ಷಗಳೇ ಕಳೆದು ಹೋಗಿದೆ. ಇಲ್ಲಿನ ಯಂತ್ರೋಪಕರಗಳು ತುಕ್ಕು ಹಿಡಿದಿದ್ದು ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ಕೆಲಸದಲ್ಲಿಲ್ಲ. ಹೀಗಾಗಿ ಸಾರ್ವಜನಿಕರು ಕೊಳಚೆ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.

    ನೀರಿನಲ್ಲಿ ಹುಳು, ಕಸಕಡ್ಡಿ ಬರುವುದರಿಂದ ವಯಸ್ಸಿನ ಭೇದವಿಲ್ಲದೆ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜಲ ಮೂಲದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ ಕೃಷ್ಣ, ತುಂಗಾಭದ್ರ ಎರಡು ನದಿಗಳಿದ್ದರೂ ಕೊಳಚೆ ನೀರನ್ನ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ವತಃ ವೈದ್ಯರಾಗಿದ್ದರೂ ಜನರಿಗೆ ಶುದ್ಧ ನೀರನ್ನ ಕೊಡುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ನಾಯಿಕೊಡೆಯಂತೆ ತಲೆಎತ್ತಿಕೊಳ್ಳುತ್ತಿವೆ.

    ಒಟ್ನಲ್ಲಿ ರಾಯಚೂರಿನ ಜನತೆ ನಿತ್ಯ ನರಕವನ್ನ ನೋಡುತ್ತಿದ್ದು, ಇದೇ ಸ್ವರ್ಗ ಅಂತ ಆಸ್ಪತ್ರೆಯ ಬಿಲ್ಲು ಕಟ್ಟುತ್ತಾ ಬದುಕುತ್ತಿದ್ದಾರೆ. ಇಲ್ಲಿನ ಜನ ಇನ್ನೂ ಬದುಕಿದ್ದಾರೆ ಅಂತ ನಗರಸಭೆ ಹಾಗೂ ಜಿಲ್ಲಾಡಳಿತ ಮಲೀನವಾದ ನೀರನ್ನೇ ಕುಡಿಯಲು ಸರಬರಾಜು ಮಾಡುತ್ತಿವೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. ನಗರದ ಜನತೆಗೆ ಶುದ್ಧ ಕುಡಿಯುವ ನೀರನ್ನ ಒದಗಿಸಬೇಕಿದೆ.

     

  • ಕೊಳಚೆ ದಾಟಲು ಹಿಂಜರಿದ ಅಧಿಕಾರಿಯನ್ನು ಹೊತ್ಕೊಂಡು ಹೋದ ಗ್ರಾಮಸ್ಥರು!

    ಕೊಳಚೆ ದಾಟಲು ಹಿಂಜರಿದ ಅಧಿಕಾರಿಯನ್ನು ಹೊತ್ಕೊಂಡು ಹೋದ ಗ್ರಾಮಸ್ಥರು!

    -ಇದು ರಾಯಚೂರು ಜಿಲ್ಲೆಯ ಜಿ.ಪಂ.ಸಿಇಓ ರ `ಕೂರ್ಮಾ’ವತಾರ

    ರಾಯಚೂರು: ಬರಗಾಲದಿಂದ ತತ್ತರಿಸಿರುವ ರಾಯಚೂರಿನ ಜನತೆಗೆ ಬಿರು ಬೇಸಿಗೆ ಜಲಕ್ಷಾಮದ ಬರೆ ಎಳೆದಿದೆ. ರಾಯಚೂರು ತಾಲೂಕಿನ ಆತ್ಕೂರು ಗ್ರಾಮದ ಜನ ತಮ್ಮ ಕಷ್ಟವನ್ನ ಮನವರಿಕೆ ಮಾಡಿಕೊಡಲು ಅಧಿಕಾರಿಯನ್ನ ಹೊತ್ತುಕೊಂಡು ಕರೆದೊಯ್ದು ಸಮಸ್ಯೆಗಳನ್ನ ತೋರಿಸಿದರು. ಕುಡಿಯುವ ನೀರಿನ ಟ್ಯಾಂಕ್‍ಗೆ ನೀರು ಹೋಗದೆ ಎಲ್ಲೆಂದರಲ್ಲಿ ಹರಿದ ಪರಿಣಾಮ ಕೊಳಚೆ ದಾಟಲು ಹಿಂದು-ಮುಂದು ನೋಡಿದ ಜಿಲ್ಲಾ ಪಂಚಾಯ್ತಿ ಸಿಇಓ ಕೂರ್ಮರಾವ್ ಅವರನ್ನ ಗ್ರಾಮಸ್ಥರೇ ಹೊತ್ತುಕೊಂಡು ಟ್ಯಾಂಕ್ ಬಳಿ ಕರೆದೊಯ್ದರು. ಈ ಮೂಲಕ ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನ ಕೊಟ್ಟರೆ ತಲೆ ಮೇಲೆ ಬೇಕಾದ್ರು ಹೊತ್ತುಕೊಳ್ಳಲು ಗ್ರಾಮಸ್ಥರು ಸಿದ್ಧರಿದ್ದಾರೆ ಎನ್ನುವುದು ಸತ್ಯ.

    ಯಾವುದೇ ಗ್ರಾಮಕ್ಕೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಹೋಗಲು ಹೆದರುತ್ತಿದ್ದಾರೆ. ಗ್ರಾಮಸ್ಥರ ತಾಳ್ಮೆ ಮಿತಿ ಮೀರಿದ್ದು ಅವರ ಆಕ್ರೋಶ, ಸಿಟ್ಟಿಗೆ ಆಡಳಿತ ವರ್ಗ ಅಂಜುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಯ ಪರಿಶೀಲನೆಗಾಗಿ ರಾಯಚೂರು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನ ಗ್ರಾಮಸ್ಥರೇ ತರಾಟೆ ತೆಗೆದುಕೊಂಡು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೆಗಲ ಮೇಲೆ ಹೊತ್ತುಕೊಂಡು ಪರಿಹಾರ ಕೊಡಿ ಅಂತ ಆಗ್ರಹಿಸಿದ್ದಾರೆ.

    ಇದು ಒಂದೆಡೆಯಾದ್ರೆ ಬೂರ್ದಿಪಾಡ ಗ್ರಾಮದಲ್ಲಿ ಜನ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ಒಳಪಡಿಸಿದರು. ಕಾಟಾಚಾರಕ್ಕೆ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿಲ್ಲ. ಬೋರ್‍ವೆಲ್, ಪೈಪ್‍ಲೈನ್ ಎಲ್ಲಾ ಇದ್ರೂ ಟ್ಯಾಂಕ್‍ಗೆ ನೀರು ಹರಿಸುವ ವ್ಯವಸ್ಥೆಯಿಲ್ಲ ಅಂತ ಕಿಡಿಕಾರಿದ್ರು. ದೇವಸುಗೂರು ಗ್ರಾಮದಲ್ಲಿ ಮಹಿಳೆಯರು ಕೊಡಗಳನ್ನ ಹಿಡಿದು ನೀರು ಕೊಡಿ ಅಂತ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೂರ್ಮರಾವ್‍ಗೆ ಮುತ್ತಿಗೆ ಹಾಕಿದ್ರು.

    ಜನರ ಆಕ್ರೋಶ ಹಾಗೂ ನೀರಿನ ಸಮಸ್ಯೆಯನ್ನ ಕಣ್ಣಾರೆ ಕಂಡ ಅಧಿಕಾರಿಗಳು ಒಂದು ಸ್ಥಳದಲ್ಲಿ ಹೆಚ್ಚು ಕಾಲ ನಿಲ್ಲಲೇ ಇಲ್ಲಾ. ಈಗಾಗಲೇ ಅಗತ್ಯ ಕ್ರಮಗಳನ್ನ ಕೈಗೊಂಡಿದ್ದೇವೆ, ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಗ್ರಾಮಸ್ಥರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಪೂರ್ಣ ಕಾಮಗಾರಿಗಳನ್ನ ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚಿಸುವುದಾಗಿ ಕೂರ್ಮರಾವ್ ಹೇಳಿ ಅಲ್ಲಿಂದ ತೆರಳಿದರು.

    ಒಟ್ನಲ್ಲಿ, ಜನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ. ಕೇವಲ ಭರವಸೆಗಳನ್ನ ನೀಡುತ್ತಾರೆ ಹೊರತು ಶುದ್ಧ ಕುಡಿಯುವ ನೀರನ್ನ ಯಾರೂ ಕೊಡುತ್ತಿಲ್ಲ ಅಂತ ಕೆಂಡಾಮಂಡಲವಾಗಿದ್ದಾರೆ. ಈಗಲಾದ್ರೂ ಜಿಲ್ಲಾಪಂಚಾಯ್ತಿ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನ ಕೈಗೊಂಡು ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ.

     

  • ಕೂಗಾಟ, ಹಾರಾಟದಲ್ಲಿಯೇ ರಾಯಚೂರು ಸಾಮಾನ್ಯ ಸಭೆ ಅಂತ್ಯ

    ಕೂಗಾಟ, ಹಾರಾಟದಲ್ಲಿಯೇ ರಾಯಚೂರು ಸಾಮಾನ್ಯ ಸಭೆ ಅಂತ್ಯ

    ರಾಯಚೂರು: ರಾಯಚೂರು ನಗರಸಭೆ ಸಭಾಂಗಣದಲ್ಲಿ ನಡೆದ ಮಹಾ ಸಾಮಾನ್ಯ ಸಭೆ ಸದಸ್ಯರ ಕೂಗಾಟ, ಹಾರಾಟಗಳಿಗೆ ಬಲಿಯಾಯಿತು. ಸಭೆ ಆರಂಭದಿಂದಲೂ ವೈಯಕ್ತಿಕ ಸಮಸ್ಯೆಗಳನ್ನು ತೋಡಿಕೊಂಡ ಸದಸ್ಯರು ಅಧಿಕಾರಿಗಳು ಮಾತು ಕೇಳ್ತಿಲ್ಲಾ ಎಂದು ಹರಿಹಾಯ್ದರು. ನಗರಸಭೆಯಲ್ಲಿ ಸದಸ್ಯರನ್ನು ಕೇಳುವವರಿಲ್ಲ ಅಂತ ತಮ್ಮ ಗೋಳು ತೋಡಿಕೊಂಡರು.

    ಸದಸ್ಯೆ ಸೀಮಾ ನದಾಫ್ ತಮ್ಮ ವಾರ್ಡಿನ ಕಬರಸ್ತಾನದಲ್ಲಿ ತಮಗೇ ತಿಳಿಯದಂತೆ ಶೌಚಾಲಯ ನಿರ್ಮಿಸಿದ್ದಾರೆ ಅಂತ ಕೂಗಾಡಿದರು. ಇತರೆ ಸದಸ್ಯರು ಬೆಂಬಲ ಕೊಡದಿದ್ದಕ್ಕೆ ಖುರ್ಚಿಯಿಂದ ಎದ್ದು ಅಧ್ಯಕ್ಷೆ, ಉಪಾಧ್ಯಕ್ಷ, ಪೌರಾಯುಕ್ತರ ವಿರುದ್ಧ ಆರೋಪಿಸಿ ಪ್ರತಿಭಟನೆ ನಡೆಸಿದರು. ಗೊತ್ತುವಳಿಗಳು ಚರ್ಚಿಸದೇ ಎಸ್ ಪಾಸ್ ಆಗುತ್ತಿವೆ ಅಂತ ಸದಸ್ಯ ನರಸಪ್ಪ ಟೇಬಲ್ ಹಾರಿ ಸಭಾಂಗಣದ ಬಾವಿಗೆ ಇಳಿದು ನಗರಸಭೆ ಉಪಾಧ್ಯಕ್ಷ ಜಯಣ್ಣ ವಿರುದ್ಧ ಕೂಗಾಡಿ ಗೊಂದಲ ಸೃಷ್ಟಿ ಮಾಡಿದರು.

    ಇನ್ನೂ ಸದಸ್ಯ ಮೆಹಬೂಬ್ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದೀಪಾಲಂಕಾರಕ್ಕೆ ನಗರಸಭೆಯಿಂದ ನೀಡಲಾದ 3 ಲಕ್ಷ 90 ಸಾವಿರ ರೂಪಾಯಿ ಲೆಕ್ಕ ತೋರಿಸುವಂತೆ ಆಗ್ರಹಿಸಿ ಕಳ್ಳಲೆಕ್ಕಗಳಲ್ಲಿ ನಗರಸಭೆ ಮುಳುಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರೆಲ್ಲರೂ ಪಕ್ಷಭೇದ ಮರೆತು ನಗರಸಭೆ ಸದಸ್ಯರಿಗೆ ಬೆಲೆ ಸಿಗುತ್ತಿಲ್ಲ ಅಂತ ಕೂಗಾಡಿದರು. ಗದ್ದಲ, ಗಲಾಟೆಯಲ್ಲಿ 41 ಗೊತ್ತುವಳಿಗಳನ್ನು ಎಸ್ ಪಾಸ್ ಮೂಲಕ ಅಂಗೀಕರಿಸಲಾಯಿತು.

    ನಗರದಲ್ಲಿ ದಿನೇ ದಿನೇ ಗಂಭೀರವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕುರಿತಾಗಲಿ, ಅಸಮರ್ಪಕವಾಗಿ ಸಾಗಿರುವ ಒಳಚರಂಡಿ ಕಾಮಗಾರಿಯ ತೊಂದರೆ, ರಸ್ತೆ, ಶೌಚಾಲಯ, ವಿದ್ಯುತ್ ದೀಪದ ಬಗ್ಗೆ ಗಂಭೀರ ಚರ್ಚೆ ನಡೆಯದೇ ಬರೀ ಗಲಾಟೆಯಲ್ಲಿ ಸಭೆ ಮುಕ್ತಾಯಗೊಂಡಿತು.

     

  • ಯಾದಗಿರಿ: ಜನತೆಗೆ ಮರೀಚಿಕೆಯಾದ ಶುದ್ಧ ಕುಡಿಯುವ ನೀರು

    ಯಾದಗಿರಿ: ಜನತೆಗೆ ಮರೀಚಿಕೆಯಾದ ಶುದ್ಧ ಕುಡಿಯುವ ನೀರು

    – 3 ತಿಂಗಳಿನಿಂದ ಕಲುಷಿತ ನೀರು ಕುಡಿಯುತ್ತಿರೋ ಜನ

    ಯಾದಗಿರಿ: ನಗರದ ಜನತೆಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಶುದ್ಧ ನೀರು ಪೂರೈಸಿ ಜನರ ಆರೋಗ್ಯ ಕಾಪಾಡಬೇಕಾದ ನಗರಸಭೆ ಮಾತ್ರ ನಿಷ್ಕಾಳಜಿ ವಹಿಸಿದೆ. ನಗರಸಭೆ ಕಲುಷಿತ ನೀರು ಪೂರೈಸುತ್ತಿರುವ ಪರಿಣಾಮ ಜನತೆ ಅನಾರೋಗ್ಯದಿಂದ ಬಳಲುವಂತಾಗಿದೆ.

    ನಗರದ ಜನರಿಗೆ ಯಾದಗಿರಿ ನಗರಸಭೆ ಗಲೀಜು ನೀರು ಪೂರೈಸುತ್ತಿದೆ. ಕಳೆದ 3 ತಿಂಗಳಿನಿಂದ ಗಲೀಜು ನೀರನ್ನೇ ಜನತೆ ಸೇವನೆ ಮಾಡುತ್ತಿದ್ದಾರೆ. ನೀರು ಪೂರೈಸುವ ಪೈಪ್ ಲೈನ್ ಚರಂಡಿ ನೀರಿನಲ್ಲಿ ಸೇರಿಕೊಂಡ ಪರಿಣಾಮ ಚರಂಡಿ ನೀರು ನಲ್ಲಿಯ ಮೂಲಕ ಹರಿದುಬರುತ್ತಿದೆ.

    ವಾರ್ಡ್ 6ರ ಸವಿತಾ ನಗರ, ಮೈಲಾಪುರ ಅಗಸಿ ಹಾಗೂ ಇನ್ನಿತರೆ ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಲಿನವಾದ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಣವಾಗಿ ಗಲೀಜು ನೀರು ಸರಬರಾಜಾಗುತ್ತಿದೆ. ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನಲೆಯಲ್ಲಿ ಹಾಗೂ ನೀರಿನ ಕೊರತೆಯಿಂದಾಗಿ ನಗರದ ನಿವಾಸಿಗಳು ಇದೇ ನೀರನ್ನ ಸ್ವಲ್ಪಮಟ್ಟಿಗೆ ಶುದ್ಧೀಕರಿಸಿ ದಾಹ ತಣಿಸಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ನಗರದ ನಿವಾಸಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಭರವಸೆ ನೀಡುವ ಕೆಲಸ ಮಾಡಿದ್ದಾರೆ. ಈಗಾಗಲೇ ನಗರದ ಜನತೆ ನೀರಿಗಾಗಿ ಹಾಹಾಕರ ಪಡುತ್ತಿದ್ದಾರೆ. ಇದ್ದಷ್ಟಾದರೂ ನಮಗೆ ಶುದ್ಧವಾದ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಅಳಲು ತೊಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರು ನಗರಸಭೆ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆಹರಿಸಿ ನಗರದ ನಿವಾಸಿಗಳಿಗೆ ಶುದ್ಧವಾದ ನೀರು ಪೂರೈಸುವ ಕೆಲಸ ಮಾಡಬೇಕಿದೆ.