Tag: ಶುದ್ಧ ಕುಡಿಯುವ ನೀರಿನ ಘಟಕ

  • ಕೂಡಿಗೆಯಲ್ಲಿ ನೀರಿನ ಘಟಕವಿದ್ರೂ ಪ್ರಯೋಜನವಿಲ್ಲ – ಮೂರು ತಿಂಗಳಿಂದ ಜನರ ಪರದಾಟ

    ಕೂಡಿಗೆಯಲ್ಲಿ ನೀರಿನ ಘಟಕವಿದ್ರೂ ಪ್ರಯೋಜನವಿಲ್ಲ – ಮೂರು ತಿಂಗಳಿಂದ ಜನರ ಪರದಾಟ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳುಗಳಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಅಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಶುದ್ಧ ನೀರಿನ ಘಟಕ ಮೂರು ತಿಂಗಳುಗಳಿಂದ ಸ್ಥಗಿತಗೊಂಡಿದೆ.

    ಈ ವ್ಯಾಪ್ತಿಯ ಗ್ರಾಮಸ್ಥರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುತ್ತಾ ಬಂದಿದ್ದರೂ ಯಾರೂ ಇದನ್ನು ಸರಿಪಡಿಸಲು ಮುಂದಾಗಿಲ್ಲ. ಸಮಸ್ಯೆ ಹೇಳಿದರೆ ಬೇಜವಾಬ್ದಾರಿ ಉತ್ತರವನ್ನು ನೀಡುತ್ತಿದ್ದಾರೆ ಎಂದು ಕೂಡಿಗೆ ಗ್ರಾಮಸ್ಥರು ಆರೋಪಿಸಿದರು. ಇದನ್ನೂ ಓದಿ: ಅಶುದ್ಧಗೊಂಡಿದೆ ಶುದ್ಧ ಕುಡಿಯುವ ನೀರಿನ ಘಟಕ

    ಇದೇ ಸಂದರ್ಭದಲ್ಲಿ ಮಾತನಾಡಿದ ಕೂಡಿಗೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷರಾದ ಕೆ.ಎಸ್ ಕಾಂತರಾಜ್ ಅವರು, ಕಳೆದ ಎರಡು ವರ್ಷಗಳ ಹಿಂದೆ ಕೂಡಿಗೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡಿದೆ. ಆದರೆ ಇಲ್ಲಿಯ ಜನರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಗ್ರಾಮ ಪಂಚಾಯ್ತಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ಪಡೆಯಲು ಕಾರ್ಡನ್ನು ವಿತರಿಸಲಾಯಿತು. ಆದರೆ ಸಮರ್ಪಕವಾಗಿ ನೀರು ದೊರಕದ ಕಾರಣ ಗ್ರಾಮಸ್ಥರು ಕಾರ್ಡನ್ನು ಗ್ರಾಮ ಪಂಚಾಯ್ತಿಗೆ ಹಿಂತಿರುಗಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

    ಮಳೆಗಾಲ ಪ್ರಾರಂಭವಾದರೂ ಮಳೆಯಾಗದ ಕಾರಣ ಈ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ಕುಡಿಯುವ ನೀರಿನ ಘಟಕದಿಂದ ಕಾರ್ಡನ್ನು 300 ರೂ. ಕೊಟ್ಟು ಗ್ರಾಮ ಪಂಚಾಯ್ತಿಯಲ್ಲಿ ತೆಗೆದುಕೊಂಡಿದ್ದಾರೆ. ಆದರೆ ಜನರಿಗೆ ಯಾವುದೇ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಇಷ್ಟಾದರೂ ಕೂಡಿಗೆ ಗ್ರಾಮ ಪಂಚಾಯ್ತಿ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನಾದರೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾರ್ವಜನಿಕರ ಉಪಯೋಗಕ್ಕೆ ಬರುವ ರೀತಿಯಲ್ಲಿ ಆದಷ್ಟು ಬೇಗನೆ ಸರಿಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

  • ನಾಳೆಯೂ ಸದನದಲ್ಲಿ ಪ್ರತಿಭಟನೆಗೆ ನಿರ್ಧಾರ: ಶ್ರೀನಿವಾಸ ಪೂಜಾರಿ

    ನಾಳೆಯೂ ಸದನದಲ್ಲಿ ಪ್ರತಿಭಟನೆಗೆ ನಿರ್ಧಾರ: ಶ್ರೀನಿವಾಸ ಪೂಜಾರಿ

    ಬೆಂಗಳೂರು: ಆಡಳಿತ ಪಕ್ಷ ಹಾಗೂ ಬಿಜೆಪಿ ನಾಯಕರ ಗಲಾಟೆಯಿಂದಾಗಿ ವಿಧಾನ ಪರಿಷತ್ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

    ಕಲಾಪದಿಂದ ಹೊರಬಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು, ಶುದ್ಧ ನೀರಿನ ಘಟಕಗಳ ಅಳವಡಿಕೆಯಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಗಿದೆ. ಈ ಕುರಿತು ತನಿಖೆಗೆ ನಡೆಸಲು ಸದನ ಸಮಿತಿಗೆ ಕೊಡದಿದ್ದರೆ ನಾಳೆಯೂ ಸದನದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.

    ಶುದ್ಧ ನೀರಿನ ಘಟಕಗಳ ಅವ್ಯವಹಾರದ ಬಗ್ಗೆ ತನಿಖೆಗೆ ಕಲಾಪದಲ್ಲಿ ಬಿಜೆಪಿ ಒತ್ತಾಯಿಸಿದೆ. ಆದರೆ ಸರ್ಕಾರ ತನಿಖೆಗೆ ಒಪ್ಪಿಸಲು ಹಿಂದೇಟು ಹಾಕುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾದ ಕೆಲವೇ ದಿನಗಳಲ್ಲಿ ಹಾಳಾಗಿವೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಈ ಕುರಿತು ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ಕಲಾಪದಲ್ಲಿ ಬಿಜೆಪಿ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣಭೈರೇಗೌಡ ಅವರು, ಬೆಂಗಳೂರು ಭಾಗದಲ್ಲಿ ಪಂಚಾಯತಿ ಮಟ್ಟದಲ್ಲಿ ನೀರಿನ ಘಟಕಗಳ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಬೇರೆ ಜಿಲ್ಲೆಯಲ್ಲಿ ಆಗುತ್ತಿಲ್ಲ. ಹೀಗಾಗಿ ಪ್ರತ್ಯೇಕ ಏಜೆನ್ಸಿ ಮೂಲಕ ಶುದ್ಧ ನೀರು ಘಟಕ ನಿರ್ವಹಣೆಗೆ ಕ್ರಮವಹಿಸಿದ್ದೇವೆ. ಈ ಕುರಿತು ಆದಷ್ಟು ಬೇಗ ನಿರ್ಧಾರ ಮಾಡುತ್ತೇವೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಟೆಕ್ನಿಕಲ್ ಕಮಿಟಿ ನೇಮಕ ಮಾಡಲಾಗಿದೆ. ಆ ವರದಿ ಬಂದ ಮೇಲೆ ಮುಂದಿನ ಕ್ರಮಕ್ಕೆ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಬಿಜೆಪಿ ಸದಸ್ಯರು ಇದಕ್ಕೆ ಒಪ್ಪದೆ ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv