ಉಡುಪಿ: ಶೀರೂರು ಮಠಕ್ಕೆ ನೂತನ ಪೀಠಾಧಿಕಾರಿ ಆಯ್ಕೆ ವಿರುದ್ಧ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಶೀರೂರು ಮತ್ತು ಸೋದೆ ಮಠದ ಭಕ್ತರು ರಥಬೀದಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದ್ದಾರೆ.

ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಸ್ವಾಮೀಜಿ ಬಾಲವಟುವನ್ನು ಆಯ್ಕೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಚಟುಚಟಿಕೆ ಎಂದು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ವೃಂದಾವನಸ್ಥ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಪಾದರು ಸಹೋದರ ಲಾತವ್ಯ ಆಚಾರ್ಯ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸೋದೆ ಮಠದ ನಡೆ ಮತ್ತು ವಾದವನ್ನು ಪುರಸ್ಕರಿಸಿದೆ. ಇದನ್ನೂ ಓದಿ: ಶಿರೂರು ಮಠದ ಪೀಠಾಧಿಪತಿಯಾಗಿ ಉಡುಪಿ ವಿದ್ಯೋದಯ ಶಾಲೆಯ ಅನಿರುದ್ಧ್ ಆಯ್ಕೆ

ಅರ್ಜಿ ವಜಾವಾದ ಹಿನ್ನೆಲೆಯಲ್ಲಿ ಉಡುಪಿ ರಥಬೀದಿಯ ಶಿರೂರು ಮಠದ ಮುಂಭಾಗದಲ್ಲಿ ಮಠದ ಭಕ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸೋದೆ ಮಠಾಧೀಶರಿಗೆ ಜೈಕಾರ ಕೂಗಿದರು. ಸೋದೆ ಮಠದ ಪರವಾಗಿ ರತ್ನಕುಮಾರ್ ಮಾತನಾಡಿ, ಕಳೆದ ಮೇ ತಿಂಗಳಲ್ಲಿ ಸೋದೆ ಸ್ವಾಮೀಜಿಯವರು ಶೀರೂರು ಮಠಕ್ಕೆ ಸನ್ಯಾಸತ್ವ ದೀಕ್ಷೆಯನ್ನು ಕೊಟ್ಟಿದ್ದರು. ವೇದ ವರ್ಧನ ತೀರ್ಥ ಸ್ವಾಮೀಜಿ ಎಂದು ನಾಮಕರಣ ಮಾಡಿ ಪಟ್ಟಾಭಿಷೇಕ ಮಾಡಿದ್ದರು. ದಾಖಲಾದ ರಿಟ್ ಅರ್ಜಿ ವಜಾ ಆಗಿದೆ. ಬಾಲ ಸನ್ಯಾಸ ಮತ್ತು ಸೋದೆ ಸ್ವಾಮೀಜಿ ಕೊಟ್ಟ ಸನ್ಯಾಸತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದರು.












