Tag: ಶಿಸ್ತು ಕ್ರಮ

  • ಮತ್ತೊಮ್ಮೆ ತಪ್ಪು ಮಾಡಿದ್ರೆ ಪಂದ್ಯದಿಂದ ಕೊಹ್ಲಿ ಬ್ಯಾನ್ ಸಾಧ್ಯತೆ

    ಮತ್ತೊಮ್ಮೆ ತಪ್ಪು ಮಾಡಿದ್ರೆ ಪಂದ್ಯದಿಂದ ಕೊಹ್ಲಿ ಬ್ಯಾನ್ ಸಾಧ್ಯತೆ

    ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಶಿಸ್ತು ಉಲ್ಲಂಘಿಸಿದ್ದಾರೆ. ಮತ್ತೊಮ್ಮೆ ಅಶಿಸ್ತು ಪ್ರದರ್ಶಿಸಿದರೆ ಪಂದ್ಯದಿಂದ ನಿಷೇಧ ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.

    ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ 33 ರನ್ ಗಳಿಸಿ ಕೊಹ್ಲಿ ಔಟಾದರು. ಈ ವೇಳೆ ಸಿಟ್ಟಿನಲ್ಲಿ ಪೆವಿಲಿಯನ್ ಕಡೆ ನಡೆದ ಕೊಹ್ಲಿ ಬೌಂಡರಿ ಗೆರೆ ಬಳಿಯ ಹಗ್ಗಕ್ಕೆ ಹೊಡೆದು ಬಳಿಕ ಆರ್‌ಸಿಬಿ ಡಗೌಟ್‍ನಲ್ಲಿದ್ದ ಚಯರ್ ಮೇಲೆ ಬ್ಯಾಟ್ ಬೀಸಿದ್ದರು.

    ಕೊಹ್ಲಿ ಈ ವರ್ತನೆ ಐಪಿಎಲ್ ನೀತಿ ಸಂಹಿತೆಯ 2.2ರ ಲೆವೆಲ್ 1 ಉಲ್ಲಂಘನೆಯಾಗಿದೆ. ಲೆವೆಲ್ 1 ಉಲ್ಲಂಘನೆಯಾಗಿರುವ ಕಾರಣ ಸದ್ಯಕ್ಕೆ ಕೊಹ್ಲಿ ಪಾರಾಗಿದ್ದರೂ ಮತ್ತೊಮ್ಮೆ ಮರುಕಳಿಸಿದರೆ ಪಂದ್ಯದ ಶುಲ್ಕದ ಶೇ.50 ರಿಂದ ಶೇ.100 ರಷ್ಟು ದಂಡ ಅಥವಾ 2 ರಿಂದ 4 ಪಂದ್ಯಕ್ಕೆ ನಿಷೇಧ ಹೇರಬಹುದಾಗಿದೆ.

    ಕಳೆದ 4 ವರ್ಷಗಳಿಂದ ಕೊಹ್ಲಿ ಹೈದರಾಬಾದ್ ವಿರುದ್ಧ ರನ್ ಬರ ಎದುರಿಸುತ್ತಿದ್ದು ಯಾವುದೇ ಅರ್ಧಶತಕ ಹೊಡೆದಿಲ್ಲ. ಹೈದರಾಬಾದ್ ವಿರುದ್ಧದ ಕಳೆದ 6 ಇನ್ನಿಂಗ್ಸ್‍ನಲ್ಲಿ ಕೊಹ್ಲಿ 12, 3, 16, 14, 7, 6 ರನ್ ಹೊಡೆದಿದ್ದಾರೆ.

  • ಕಸ ತುಂಬುವ ವಾಹನದಲ್ಲಿ ಪತ್ರಕರ್ತನ ಮೃತದೇಹ ರವಾನಿಸಿದ್ದ ಪಿಎಸ್‍ಐ ವರ್ಗಾವಣೆ

    ಕಸ ತುಂಬುವ ವಾಹನದಲ್ಲಿ ಪತ್ರಕರ್ತನ ಮೃತದೇಹ ರವಾನಿಸಿದ್ದ ಪಿಎಸ್‍ಐ ವರ್ಗಾವಣೆ

    ಹಾವೇರಿ: ಪತ್ರಕರ್ತನ ಮೃತ ದೇಹವನ್ನು ಕಸ ಸಾಗಿಸುವ ಟ್ರ್ಯಾಕ್ಟರ್ ನಲ್ಲಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಪಿಎಸ್‍ಐ ವರ್ಗಾವಣೆಯಾಗಿದ್ದಾರೆ.

    ಹಾವೇರಿ ಎಸ್ಪಿ ಕೆ. ಪರಶುರಾಂ ಹಾನಗಲ್ ಅವರು ಗುರುರಾಜ ಮೈಲಾರ ಅವರನ್ನು ಹಾನಗಲ್ ಪಿಎಸ್‍ಐ ಹುದ್ದೆಯಿಂದ ಜಿಲ್ಲಾ ವಿಶೇಷ ಗುಪ್ತದಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

    ಭಾನುವಾರ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸುದ್ದಿವಾಹಿನಿ ವರದಿಗಾರ ಮೌನೇಶ ಪೋತರಾಜ್ (29) ಮೃತಪಟ್ಟಿದ್ದರು. ಈ ವೇಳೆ ಸ್ಥಳದಲ್ಲಿ ಮಹಜರು ನಡೆಸಿದ ಪೊಲೀಸರು ಬಳಿಕ ಮೃತದೇಹವನ್ನು ತಾಲೂಕು ಆಸ್ಪತ್ರೆ ಶವಾಗಾರಕ್ಕೆ ಪುರಸಭೆಯ ಕಸ ತುಂಬುವ ವಾಹನದಲ್ಲಿ ಸಾಗಿಸಿದ್ದರು. ಕಸ ತುಂಬುವ ವಾಹನದಲ್ಲಿ ಮೃತದೇಹ ಸಾಗಿಸಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

    ಈ ಹಿನ್ನೆಲೆಯಲ್ಲಿ ಎಸ್ಪಿ ಪರಶುರಾಂ ಪಿಎಸ್‍ಐಗೆ ವರ್ಗಾವಣೆ ಜೊತೆಗೆ ಇಲಾಖೆ ಶಿಸ್ತು ನಿಯಮಾವಳಿ ಪ್ರಕಾರ ದೋಷಾರೋಪಣ ಪತ್ರ ಹೊರಡಿಸಲಾಗಿದೆ. ಅಲ್ಲದೇ ಪ್ರಕರಣದ ಮೇಲ್ವಿಚಾರಣೆ ಮಾಡುವಲ್ಲಿ ವಿಫಲರಾಗಿರುವ ಹಾನಗಲ್ ಸಿಪಿಐ ರೇವಪ್ಪ ಕಟ್ಟೀಮನಿ ವಿರುದ್ಧವೂ ನೋಟಿಸ್ ಜಾರಿ ಮಾಡಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಎಸ್‍ಪಿ ಕೆ.ಪರಶುರಾಂ ಅವರು, ಭಾನುವಾರ ಮಕರ ಸಂಕ್ರಾಂತಿಯ ಕಾರಣ ಯಾವುದೇ ವಾಹನಗಳು ಸಿಗಲಿಲ್ಲ. ಅಲ್ಲದೇ, ಮೃತದೇಹವನ್ನು ಕೊಂಡೊಯ್ಯಲು ಆಂಬ್ಯುಲೆನ್ಸ್ ಸೇವೆಯೂ ದೊರೆಯಲಿಲ್ಲ. ಅದ್ದರಿಂದ ಸಮೀಪದಲ್ಲೇ ಲಭ್ಯವಿದ್ದ ಟ್ರ್ಯಾಕ್ಟರ್ ಬಳಸಲಾಗಿತ್ತು. ಆದರೆ ಈ ಇದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.