Tag: ಶಿಶು

  • ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶು ಪತ್ತೆ

    ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶು ಪತ್ತೆ

    ನಿಜಾಮಾಬಾದ್: ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶುವೊಂದನ್ನ ಬಿಟ್ಟು ಹೋಗಿರೋ ಘಟನೆ ತೆಲಂಗಾಣದ ನಿಜಾಮಾಬಾದ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿ ಮಗು ಪತ್ತೆಯಾಗಿದೆ.

    ಇಂದು ಅಪರಿಚಿತರು ಆಸ್ಪತ್ರೆಯ ಮುಂಭಾಗ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆ ಆಸ್ಪತ್ರೆ ಮುಂದೆ ಮಗು ಇರುವುದನ್ನು ಆಸ್ಪತ್ರೆ ಸಿಬ್ಬಂದಿಯೊಬ್ಬರು ಗಮನಿಸಿದ್ದಾರೆ. ತಕ್ಷಣ ಮಗುವನ್ನು ಆಸ್ಪತ್ರೆಯ ಒಳಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ.

    ಸದ್ಯಕ್ಕೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವನ್ನು ಬಿಟ್ಟು ಹೋಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ದೇಹದ ಹೊರಭಾಗದಲ್ಲಿ ಕರುಳು ಹೊಂದಿದ್ದ ಮಗು- ಫೋಟೋ ಹಾಕಿ ಜಾಗೃತಿ ಮೂಡಿಸ್ತಿರೋ ತಾಯಿ

    ದೇಹದ ಹೊರಭಾಗದಲ್ಲಿ ಕರುಳು ಹೊಂದಿದ್ದ ಮಗು- ಫೋಟೋ ಹಾಕಿ ಜಾಗೃತಿ ಮೂಡಿಸ್ತಿರೋ ತಾಯಿ

    ಕಾರ್ಡಿಫ್: ಬ್ರಿಟನ್‍ನ ವೇಲ್ಸ್‍ನಲ್ಲಿ ಗ್ಯಾಸ್ಟ್ರೋಚೈಸಿಸ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಮಗುವೊಂದು ದೇಹದ ಹೊರಭಾಗದಲ್ಲಿ ಕರುಳು ಹೊಂದಿತ್ತು. ಇದೀಗ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

    ಮಗುವಿನ ಶಸ್ತ್ರಚಿಕಿತ್ಸೆ ಮೇ ನಲ್ಲಿ ನಡೆದಿದ್ದರೂ, ಈಗ 21 ವರ್ಷದ ತಾಯಿ ಕೋಲ್ ವಾಲ್ಟರ್ಸ್ ಮಗುವಿನ ಫೋಟೋವನ್ನ ಹಂಚಿಕೊಂಡು ಈ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಅವಾ-ರೋಸ್ ನೈಟಿಂಗೇಲ್ ಹೆಸರಿನ ಮಗುವಿಗೆ ಜನನಕ್ಕೂ ಮುನ್ನ ಹೊಟ್ಟೆಯ ಭಾಗ ಸರಿಯಾಗಿ ಬೆಳವಣಿಗೆಯಾಗದ ಕಾರಣ ಅದರ ಕರುಳು ದೇಹದಿಂದ ಹೊರಗಡೆ ಇತ್ತು. ಇದೀಗ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಕರುಳನ್ನ ಅದರ ಸ್ಥಾನಕ್ಕೆ ಸೇರಿಸಿದ್ದಾರೆ.

    ಮಗು ಹುಟ್ಟಿದ ಕೆಲವು ಗಂಟೆಗಳಲ್ಲಿ ಈ ಫೋಟೋ ತೆಗೆಯಲಾಗಿದೆ. 3 ಸಾವಿರದಲ್ಲಿ ಒಂದು ಮಗುವಿಗೆ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಗುವಿಗೆ ಇನ್ಫೆಕ್ಷನ್ ಆಗಬಾರದೆಂದು ಅವರ ಮೈ ಮೇಲೆ ತೆಳುವಾಗ ಪ್ಲಾಸ್ಟಿಕ್ ಪದರ ಸುತ್ತಿರೋದನ್ನ ಫೋಟೋದಲ್ಲಿ ಕಾಣಬಹುದು. ಮಗು ಹುಟ್ಟಿದ ಕೆಲವು ಗಂಟೆಗಳ ನಂತರ ವೈದ್ಯರು ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು, ಮಗುವಿನ ತಾಯಿಗೆ ಮೊದಲೇ ಶಸ್ತ್ರಚಿಕಿತ್ಸೆಯ ಪರಿಣಾಮಗಳ ಬಗ್ಗೆ ತಿಳಿಸಿದ್ದರು.

    ವೈದ್ಯರು ಹೇಳಿದ್ದನ್ನು ಕೇಳಿದ ನಂತರ ಶಸ್ತ್ರಚಿಕಿತ್ಸೆಗೆ ನನ್ನ ಮಗುವನ್ನು ಕಳುಹಿಸಲು ನಾನು ತುಂಬಾ ಭಯಪಟ್ಟಿದ್ದೆ ಎಂದು ವಾಲ್ಟರ್ಸ್ ಹೇಳಿದ್ದಾರೆ. ಕಾರ್ಡಿಫ್ ಹೀತ್ ಆಸ್ಪತ್ರೆಯಲ್ಲಿ ಸುಮಾರು 3 ಗಂಟೆಗಳ ಕಾಲ ಮಗುವಿಗೆ ಆಪರೇಷನ್ ಮಾಡಿದ್ದು, ಯಶಸ್ವಿಯಾಗಿ ಮಗುವಿನ ಕರಳನ್ನು ದೇಹದೊಳಗೆ ಸೇರಿಸಿದ್ದಾರೆ.

    ಶಸ್ತ್ರಚಿಕಿತ್ಸೆಯ ನಂತರ ಮಗುವಿಗೆ 7 ದಿನಗಳ ಕಾಲ ಆಕ್ಷಿಜನ್ ಹಾಕಲಾಗಿತ್ತು. ಈ ವೇಳೆ ಮಗುವಿಗೆ ಆಂತರಿಕವಾಗಿ ಆಹಾರ ನೀಡಲಾಗಿತ್ತು ಎಂದು ವರದಿಯಾಗಿದೆ.

  • ದಾದಿಯರೇ ಹೆರಿಗೆ ಮಾಡಿಸಲು ಪ್ರಯತ್ನಿಸಿ ಕೊನೆಗೆ ಬೇರೆ ಆಸ್ಪತ್ರೆಗೆ ಕಳಿಸಿದ್ರು- ತಾಯಿ ಹೊಟ್ಟೆಯಲ್ಲೇ ಮಗು ಸಾವು

    ದಾದಿಯರೇ ಹೆರಿಗೆ ಮಾಡಿಸಲು ಪ್ರಯತ್ನಿಸಿ ಕೊನೆಗೆ ಬೇರೆ ಆಸ್ಪತ್ರೆಗೆ ಕಳಿಸಿದ್ರು- ತಾಯಿ ಹೊಟ್ಟೆಯಲ್ಲೇ ಮಗು ಸಾವು

    ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ದೊಮ್ಮಸಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಹೆರಿಗೆಗಾಗಿ ನೇತ್ರಾವತಿ ಎಂಬ ಮಹಿಳೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದರಿಂದ ಹೆರಿಗೆ ಮಾಡಿಸಲು ತಿಣುಕಾಡಿದ ದಾದಿಯರು ವಾಣಿ ವಿಲಾಸ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿ ಕೈ ತೊಳೆದುಕೊಂಡಿದ್ದರು. ವಾಣಿ ವಿಲಾಸ್ ಗೆ ಹೋಗಲು ದೂರವಾಗಿದ್ದರಿಂದ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ತಾಯಿ ಹೊಟ್ಟೆಯಲ್ಲೇ ಮಗು ಮೃತಪಟ್ಟಿರುವು ಗೊತ್ತಾಗಿದೆ.

    ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆಯೆಂದು ಆರೋಪಿಸಿ ಆಸ್ಪತ್ರೆ ಮುಂಭಾಗದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ನೇತ್ರಾವತಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದರಿಂದಲೇ ಈ ಎಡವಟ್ಟಾಗಿದೆಯೆಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

     

  • ರಿಮ್ಸ್ ನಲ್ಲಿ ದಿನಕ್ಕೊಂದು ಯಡವಟ್ಟು- 2 ಗಂಟೆ ಕಾಲ ನವಜಾತ ಶಿಶು ಸಮೇತ ಲಿಫ್ಟ್ ನಲ್ಲಿ ಸಿಲುಕಿದ ಪೋಷಕರು

    ರಿಮ್ಸ್ ನಲ್ಲಿ ದಿನಕ್ಕೊಂದು ಯಡವಟ್ಟು- 2 ಗಂಟೆ ಕಾಲ ನವಜಾತ ಶಿಶು ಸಮೇತ ಲಿಫ್ಟ್ ನಲ್ಲಿ ಸಿಲುಕಿದ ಪೋಷಕರು

    ರಾಯಚೂರು: ನಗರದ ಪ್ರತಿಷ್ಠಿತ ಆಸ್ಪತ್ರೆ ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ಸೋಮವಾರ ರಾತ್ರಿ ಆಸ್ಪತ್ರೆಯ ಲಿಫ್ಟ್ ನಲ್ಲಿ 2 ಗಂಟೆಗಳ ಕಾಲ ನವಜಾತ ಶಿಶು ಹಾಗೂ ಪೋಷಕರು ಸಿಲುಕಿ ಪರದಾಡಿದ ಘಟನೆ ನಡೆದಿದೆ.

    ಜಿಲ್ಲೆಯ ಮಾನ್ವಿ ತಾಲೂಕಿನ ಕುರಡಿ ಗ್ರಾಮದ ನರಸಮ್ಮ ಎಂಬವರಿಗೆ ರಾತ್ರಿ 11 ಗಂಟೆಗೆ ಹೆರಿಗೆಯಾಗಿತ್ತು. ಹೆರಿಗೆ ಬಳಿಕ ಮಗುವನ್ನು ಶಿಶು ನಿಗಾ ಘಟಕಕ್ಕೆ ಕರೆದೊಯ್ಯುವಾಗ ಲಿಫ್ಟ್ ನಲ್ಲಿ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ. ಲಿಫ್ಟ್ ನಲ್ಲಿ ಮಗುವಿನೊಂದಿಗೆ ಪೋಷಕರು ಎರಡು ಗಂಟೆ ಸಿಲುಕಿದ್ರೂ ಆಸ್ಪತ್ರೆಯ ಯಾವ ಸಿಬ್ಬಂದಿಯೂ ಸಹಾಯಕ್ಕೆ ಮುಂದಾಗಿಲ್ಲ.

    ಕೊನೆಗೆ ಶಿಶುವಿನ ಪೋಷಕರು ತಮ್ಮ ಪರಿಚಯಸ್ಥರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ಆಸ್ಪತ್ರೆ ಹೋಂ ಗಾರ್ಡಗಳು ಶಿಶು ಹಾಗೂ ಪೋಷಕರನ್ನ ಹೊರಗೆ ಕರೆತಂದಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ.

    ಏಕಾಏಕಿ ಲಿಫ್ಟ್ ಕೆಡಲು ಕಾರಣ ತಿಳಿದುಬಂದಿಲ್ಲ. ಲಿಫ್ಟ್ ರಿಪೇರಿ ಕಾರ್ಯ ನಡೆದಿದ್ದು ರೋಗಿಗಳು ಮೇಲಂತಸ್ಥಿನ ಕೊಠಡಿಗಳಿಗೆ ತೆರಳಲು ಪರದಾಡುತ್ತಿದ್ದಾರೆ.

     

  • ಕೊಪ್ಪಳದಲ್ಲಿ ಮತ್ತೊಂದು ವಿಚಿತ್ರ ಮಗು ಜನನ

    ಕೊಪ್ಪಳದಲ್ಲಿ ಮತ್ತೊಂದು ವಿಚಿತ್ರ ಮಗು ಜನನ

    ಕೊಪ್ಪಳ: ಇತ್ತೀಚೆಗಷ್ಟೇ ವಿಚಿತ್ರ ಮಗುವೊಂದು ಜನಿಸಿದ್ದ ಕಾರಣ ಸುದ್ದಿಯಾದ ಕೊಪ್ಪಳ ಇದೀಗ ಮತ್ತೆ ಇದೇ ವಿಚಾರದಲ್ಲಿ ಸುದ್ದಿಯಾಗಿದೆ.

    ಕುಷ್ಟಗಿ ತಾಲೂಕಿನ ಮನ್ನೇರಾಳ ಗ್ರಾಮದಲ್ಲಿ ವಿಲಕ್ಷಣ ಶಿಶು ಜನನವಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಮನ್ನೇರಾಳ ಗ್ರಾಮದ ಗಂಗವ್ವ ಗೌಡರ ಅನ್ನೋ ಮಹಿಳೆ ಶುಕ್ರವಾರದಂದು ಈ ಶಿಶುವಿಗೆ ಜನ್ಮ ನೀಡಿದ್ದು, ಮಗುವಿನ ತಲೆಯಲ್ಲಿ ಮಾಂಸ ಬೆಳೆಯುತ್ತಿದೆ.

    ಇತ್ತೀಚೆಗಷ್ಟೇ ಕುಷ್ಟಗಿ ತಾಲೂಕಿನ ಜುಮುಲಾಪೂರ ಗ್ರಾಮದ ಅನಸೂಯಮ್ಮ ಎಂಬವರು ವಿಚಿತ್ರ ಶಿಶುವಿಗೆ ಜನ್ಮ ನೀಡಿದ್ದರು. ಎರಡು ಕೆಜಿ ತೂಕದ ಹೆಣ್ಣು ಮಗುವಿನ ಕಿವಿ, ಮೂಗು, ಬಾಯಿ, ಕಣ್ಣು ಬೇರೆ ಬೇರೆ ಜಾಗದಲ್ಲಿ ಅಸಹಜವಾಗಿ ಇದ್ದು, ಜನರ ಅಚ್ಚರಿಗೆ ಕಾರಣವಾಗಿತ್ತು. ಅಲ್ಲದೆ ಶಿಶುವಿನ ತಲೆಯಲ್ಲಿ ನೀರು ತುಂಬಿ ದೊಡ್ಡ ಗಾತ್ರದಲ್ಲಿತ್ತು. ಹೆರಿಗೆ ಬಳಿಕ ಮಗುವಿನ ತಲೆ ಒಡೆದು ನೀರು ಹೊರಕ್ಕೆ ಬಂದು ಶಿಶು ಮೃತಪಟ್ಟಿತ್ತು.

    ಇದೀಗ ಗಂಗವ್ವ ಕೂಡ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು, ಇಂತಹ ವಿಚಿತ್ರ ಶಿಶುಗಳ ಜಜನಕ್ಕೆ ಕಾರಣವೇನೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.

    ಇದನ್ನೂ ಓದಿ: ರಾಯಚೂರಿನಲ್ಲಿ ಕಣ್ರೆಪ್ಪೆಯೇ ಇಲ್ಲದ ಮಗು ಜನನ

    ಇದನ್ನೂ ಓದಿ: ಬೀದರ್: ಮಗುವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ!