ನವದೆಹಲಿ: ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ತಾನು ಪಾರ್ವತಿ ದೇವಿಯ ಅವತಾರವಾಗಿದ್ದೇನೆ. ಕೈಲಾಸ ಪರ್ವತದಲ್ಲಿರುವ ಶಿವನನ್ನು ತಾನೇ ಮದುವೆಯಾಗುವುದಾಗಿ ಹೇಳಿರುವ ಘಟನೆ ಭಾರತ ಮತ್ತು ಚೀನಾ ಗಡಿಯ ಸಮೀಪವಿರುವ ನಾಭಿದಾಂಗ್‍ವನ ಗುಂಜಿಯಲ್ಲಿ ನಡೆದಿದೆ.
ಹರ್ಮಿಂದರ್ ಕೌರ್ ಮಹಿಳೆ. ಈಕೆ ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ನಿವಾಸಿಯಾಗಿದ್ದಾರೆ. ಗುಂಜಿ ಕೈಲಾಸ-ಮಾನಸ ಸರೋವರದ ಹಾದಿಯಲ್ಲಿದೆ. ಇವಳನ್ನು ನಿರ್ಬಂಧಿತ ಪ್ರದೇಶದಿಂದ ಆಚೆ ಹಾಕಲು ಪೊಲೀಸ್ ತಂಡ ಹೋಗಿತ್ತು. ಆದರೆ ಹಮಿರ್ಂದರ್ ಕೌರ್ ಪೊಲೀಸರಿಗೆ ಆತ್ಮಹತ್ಯೆಯ ಬೆದರಿಕೆಯನ್ನು ಹಾಕಿದ್ದಾಳೆ. ಇದರಿಂದಾಗಿ ಆ ಪೊಲೀಸ್ ತಂಡ ವಿಧಿ ಇಲ್ಲದೇ ವಾಪಸ್ ಬರಬೇಕಾಯಿತು.
ಈ ಬಗ್ಗೆ ಅಲ್ಲಿನ ಪೊಲೀಸ್ ಅಧಿಕಾರಿ ಮಾತನಾಡಿ, 15 ದಿನಗಳ ಅನುಮತಿಯ ಮೇರೆಗೆ ತಾಯಿಯೊಂದಿಗೆ ಈ ಪ್ರದೇಶಕ್ಕೆ ಬಂದಿದ್ದರು. ಆದರೆ ಅವರು ಅಲ್ಲಿ ವಾಸವಾಗಲು ಅವಧಿ ಮುಗಿದರೂ ನಿರ್ಬಂಧಿತ ಪ್ರದೇಶವನ್ನು ತೊರಯಲು ನಿರಾಕರಿಸಿದರು. ಹರ್ಮಿಂದರ್‌ನ್ನು ನಿರ್ಬಂಧಿತ ಪ್ರದೇಶದಿಂದ ಕರೆತರಲು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ಮೂವರ ಪೊಲೀಸ್ ತಂಡವನ್ನು ಧಾರ್ಚುಲಾದಿಂದ ಕಳುಹಿಸಲಾಗಿತ್ತು ಎಂದರು.
ಹಮಿರ್ಂದರ್ ಕೌರ್‌ನನ್ನು ಬಲವಂತಯವಾಗಿ ಧಾರ್ಚುಲಾಗೆ ಕಳುಹಿಸಲು ನಿರ್ಧಸಿದ್ದೆವು. ಆದರೆ ಪ್ರಯೋಜನವಾಗಲಿಲ್ಲ. ಇದರಿಂದಾಗಿ ನಾವು ಈಗ ಹರ್ಮಿಂದರ್‌ನ್ನು ಮರಳಿ ಕರೆತರಲು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 12 ಸದಸ್ಯರ ದೊಡ್ಡ ಪೊಲೀಸ್ ತಂಡವನ್ನು ಕಳುಹಿಸಲು ಯೋಜಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ದಾಳಿ – 177 ಶಿಕ್ಷಕರ ವರ್ಗಾವಣೆ
ಶುಭ ಸೋಮವಾರ ಶಿವನಿಗೆ ತುಂಬಾ ಇಷ್ಟವಾದ ದಿನ. ಈ ದಿನ ಶಿವನ ನೈವೇದ್ಯಕ್ಕೆ ವಿಶೇಷ ರೆಸಿಪಿ ಟ್ರೈ ಮಾಡಿ. ಅದೇ ‘ಪಾಲ್ ಪಾಯಸ’ ಇದನ್ನು ಮಾಡುವುದು ತುಂಬಾ ಸುಲಭ ಮತ್ತು ಕಡಿಮೆ ಪದಾರ್ಥದಲ್ಲಿ ಮಾಡಬಹುದು. ಈ ಪಾಯಸವನ್ನು ದೇಶಾದ್ಯಂತ ವಿವಿಧ ದೇವಾಲಯಗಳಲ್ಲಿ ‘ಪ್ರಸಾದ’ವಾಗಿ ನೀಡಲಾಗುತ್ತದೆ.
ಬೇಕಾದ ಪದಾರ್ಥಗಳು:
* ಅಕ್ಕಿ – 50 ಗ್ರಾಂ
* ಹಾಲು – 1 ಲೀಟರ್
* ಏಲಕ್ಕಿ ಪುಡಿ – 5 ಗ್ರಾಂ
* ಸಕ್ಕರೆ – 100 ಗ್ರಾಂ
ಮಾಡುವ ವಿಧಾನ:
* ಅಕ್ಕಿಯನ್ನು ತೊಳೆದು 1/2 ಗಂಟೆ ನೆನೆಸಿಡಿ.
* ಒಂದು ಬಾಣಲಿಯಲ್ಲಿ ಹಾಲನ್ನು ಹಾಕಿ ನಂತರ ಅದಕ್ಕೆ ಅಕ್ಕಿಯನ್ನು ಹಾಕಿ ಬೇಯಿಸಿ.
* ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ಸಕ್ಕರೆ ಕರಗುವ ತನಕ ಸರಿಯಾಗಿ ಬೆರೆಸಿ(ಗಟ್ಟು ಆಗದಂತೆ ನೋಡಿಕೊಳ್ಳಿ)
* ಇನ್ನೊಂದು ಪ್ಯಾನ್‍ನಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಗೋಡಂಬಿ ಹಾಕಿ ಗೋಲ್ಡನ್ ಆಗುವವರೆಗೂ ಹುರಿಯಿರಿ. ನಂತರ ಅದಕ್ಕೆ ಒಣದ್ರಾಕ್ಷಿ ಸೇರಿಸಿ ಮತ್ತು ಒಂದು ನಿಮಿಷ ಹುರಿಯಿರಿ.
* ಅಕ್ಕಿ ಮಿಶ್ರಣದ ಮೇಲೆ ತುಪ್ಪದಿಂದ ಕರಿದ ದ್ರಾಕ್ಷಿ, ಗೋಡಂಬಿ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಬಡಿಸಿ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಗೋಕರ್ಣ ಹಾಗೂ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಭಕ್ತರು ಶಿವರಾತ್ರಿ ಉತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿ ಶಿವನ ದರ್ಶನ ಪಡೆದರು.
ಗೋಕರ್ಣದಲ್ಲಿ ಆತ್ಮಲಿಂಗ ಅಭಿಷೇಕಕ್ಕೆ ಮಾತ್ರ ಅವಕಾಶ:
ಗೋಕರ್ಣದಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ಸೇರಿದ್ದ ಭಕ್ತರು, ಸಮುದ್ರ, ಕೋಟಿತೀರ್ಥದಲ್ಲಿ ಸ್ನಾನ ಮಾಡಿ ಮಹಾಬಲೇಶ್ವರ ದೇವರ ಸನ್ನಿಧಿಯಲ್ಲಿ ಸಾಲುಗಟ್ಟಿ ನಿಂತ ಭಕ್ತರು ಮಹಾಗಣಪತಿ ಮತ್ತು ಮಹಾಬಲೇಶ್ವರನಿಗೆ ಪೂಜೆ ಅರ್ಪಿಸಿದರು. ಸ್ಥಳೀಯರು ಬೆಳಗ್ಗೆ ಆತ್ಮಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೋವಿಡ್ ನಿಯಮ ಸಡಿಲಿಸಿದ ಕಾರಣ ಮಹಾರಾಷ್ಟ್ರ ಮತ್ತು ಗೋವಾದಿಂದ ಹೆಚ್ಚಿನ ಭಕ್ತರು ಇಂದು ಆಗಮಿಸಿದ್ದರು. ಇದನ್ನೂ ಓದಿ: ಶಿವರಾತ್ರಿ ಪ್ರಯುಕ್ತ ಜೆಪಿ ಪಾರ್ಕ್‌ನಲ್ಲಿ ಅಹೋರಾತ್ರಿ ಕಾರ್ಯಕ್ರಮ – 1 ಸಾವಿರ ಸಾಧಕರಿಗೆ ಸನ್ಮಾನ
ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗಕ್ಕೆ ಮೇಲಿನಿಂದ ಅಭಿಷೇಕ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಸ್ಪರ್ಶಿಸಿ ನಮಸ್ಕರಿಸಲು ಆಗದ ಕಾರಣ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಪಾಣಪೀಠಕ್ಕೆ ಕಾಲು ತಗುಲಬಾರದು ಎಂದು ಸುತ್ತಲೂ ಪರದೆ ಅಳವಡಿಸಲಾಗಿತ್ತು. ಸ್ವಲ್ಪ ಎತ್ತರಿಸಿದ್ದ ಕಾರಣ ಕೈಯಿಂದ ಆತ್ಮಲಿಂಗ ಮುಟ್ಟಲು ಭಕ್ತರಿಗೆ ಸಾಧ್ಯವಾಗಲಿಲ್ಲ. ಭಕ್ತರಿಗೆ ವಿಶೇಷ ಪೂಜೆಗೂ ಅವಕಾಶ ನಿರಾಕರಿಸಲಾಗಿತ್ತು. ಕೇವಲ ನೀರು, ಬಿಲ್ವಪತ್ರೆ, ಹಾಲು ಎರೆಯಲು ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ
ಮುರುಡೇಶ್ವರದಲ್ಲಿ ಜಾತ್ರೆಯಂತೆ ಸೇರಿದ ಭಕ್ತರು:
ಧಾರ್ಮಿಕ ಕ್ಷೇತ್ರದ ಜೊತೆ ಪ್ರವಾಸಿ ಸ್ಥಳವೂ ಆಗಿರುವ ಮುರುಡೇಶ್ವರದಲ್ಲಿ ಸಾವಿರಾರು ಜನರು ಶಿವನ ದರ್ಶನ ಪಡೆದು ಪುನೀತರಾದರು. ರಾಜ್ಯ ಮತ್ತು ಹೊರ ರಾಜ್ಯದಿಂದ ಆಗಮಿಸಿದ್ದ ಸಾವಿರಾರು ಭಕ್ತರು ಮುರುಡೇಶ್ವರದ ಸಮುದ್ರದಲ್ಲಿ ಪವಿತ್ರ ಸ್ನಾನ ಮಾಡಿ ಶಿವನ ದರ್ಶನ ಪಡೆದರು. ಮುರುಡೇಶ್ವರದಲ್ಲಿ ಈ ಬಾರಿ ಪೂಜೆ ಹಾಗೂ ದರ್ಶನಕ್ಕೆ ಸಂಪೂರ್ಣ ಅವಕಾಶ ಮಾಡಿಕೊಡಲಾಗಿದ್ದು ರಾತ್ರಿ ಕೂಡ ವಿಶೇಷ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಮಹಾಶಿವರಾತ್ರಿ ಹಬ್ಬದ ದಿನ ಉಪವಾಸ ಏಕೆ ಮಾಡ್ತಾರೆ?
ರಾಯಚೂರು: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ಸಂಭ್ರಮ ಜೋರಾಗಿದೆ. ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಎಲ್ಲ ಭಕ್ತರು ಸಂಭ್ರಮದಲ್ಲಿದ್ದಾರೆ.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮಿ ವಿಶೇಷ ಪೂಜೆ ನೆರವೇರಿಸುತ್ತಿದ್ದು, ರುದ್ರದೇವರಿಗೆ ಮಹಾರುದ್ರಾಭಿಷೇಕ ನಡೆಯಿತು. ಮಠದ ಪಂಡಿತರು, ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳಿಂದ ಮಂತ್ರಪಠಣ ನಡೆಯಿತು. ಮಹಾಶಿವರಾತ್ರಿ ಹಿನ್ನೆಲೆ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಬರುತ್ತಿದ್ದಾರೆ. ಇದನ್ನೂ ಓದಿ: ಇಂದು ಮಹಾಶಿವರಾತ್ರಿ – ಆದಿ ಅಂತ್ಯವಿಲ್ಲದ ಶಿವನ ಆರಾಧಕರಿಗೆ ಇಂದು ಹಬ್ಬ
ಮಹಾಶಿವರಾತ್ರಿ ಹಿನ್ನೆಲೆ ರಾಯಚೂರಿನ ಈಶ್ವರ ದೇವಾಲಯಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ನಗರದ ಐತಿಹಾಸಿಕ ಚಂದ್ರಮೌಳೇಶ್ವರ ದೇವಾಲಯ, ರಾಮಲಿಂಗೇಶ್ವರ ದೇವಾಲಯ, ನಂದೀಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಅಲ್ಲದೆ ಭಕ್ತರ ಸಂಖ್ಯೆಯೂ ಸಹ ಹೆಚ್ಚಾಗಿದೆ.
ಇಂದು ಮಹಾಶಿವರಾತ್ರಿ ಹಬ್ಬವನ್ನು ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸೋಮವಾರ ಶಿವನಿಗೆ ಬಹಳ ಇಷ್ಟವಾದ ದಿನ. ಆದರೆ ಈ ಬಾರಿ ಹಬ್ಬ ಮಂಗಳವಾರ ಬಂದಿದೆ.
ಶಿವನ ಪೂಜೆ ಮಾಡುವುದು ಹೇಗೆ:
ಮಹಾಶಿವರಾತ್ರಿ ದಿನ ಹಸುವಿನ ತುಪ್ಪದ ಜೊತೆ ಕರ್ಪೂರವನ್ನು ಬೆರೆಸಿ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಈ ದಿನ ರುದ್ರಾಕ್ಷಿಯ ಮಾಲೆ ಧರಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಹಸಿ ಹಾಲಿನಲ್ಲಿ ಗಂಗಾ ಜಲವನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ನಂತರ ಚಂದನ, ಹೂ, ದೀಪ ಹಾಗೂ ಧೂಪ ಹಚ್ಚಿ ಪೂಜೆ ಮಾಡಬೇಕು.
ವ್ರತದ ಮಹತ್ವ:
ಮಹಾಶಿವರಾತ್ರಿ ಹಬ್ಬದಂದು ವ್ರತ ಮಾಡುವುದರಿಂದ ಪಾಪ ದೂರ ಆಗುತ್ತದೆ ಹಾಗೂ ಆತ್ಮ ಶುದ್ಧ ಆಗುತ್ತದೆ. ಎಲ್ಲೆಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗುತ್ತದೋ ಅಲ್ಲಿ ಶಿವ ಖಂಡಿತವಾಗಿಯೂ ಇರುತ್ತಾನೆ ಎಂಬುದು ಜನರ ನಂಬಿಕೆ. ಮಹಾಶಿವರಾತ್ರಿ ಇಡೀ ದಿನ ಶ್ರದ್ಧೆಯಿಂದ ವ್ರತ ಮಾಡಿದರೆ, ಶಿವ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಮಹಾಶಿವರಾತ್ರಿ ದಿನ ಮಾಡುವ ವ್ರತ ಪ್ರಭಾವಶಾಲಿ ಎಂದು ಹಿರಿಯರು ಹೇಳುತ್ತಾರೆ.
ಶಿವನನ್ನು ಪ್ರಸನ್ನಗೊಳಿಸಲು ಮಹಾಶಿವರಾತ್ರಿ ಇಡೀ ದಿನ ಜನರು ಉಪವಾಸವಿರುತ್ತಾರೆ. ಕೆಲವರು ಇಡೀ ದಿನ ಅನ್ನ ಹಾಗೂ ನೀರು ಸೇವಿಸದೇ ಉಪವಾಸ ಮಾಡಿದರೆ, ಮತ್ತೆ ಕೆಲವರು ಹಣ್ಣು, ಡ್ರೈ ಫ್ರೂಟ್ಸ್ ಮಾತ್ರ ಸೇವಿಸುತ್ತಾರೆ.
ರುದ್ರನ ಆರಾಧಕರಿಗೆ ಇಂದು ಸಂಭ್ರಮದ ದಿನ. ದೇಶಾದ್ಯಂತ ಆಚರಿಸುವ ಅತೀ ದೊಡ್ಡ ಹಬ್ಬಗಳಲ್ಲಿ ಮಹಾಶಿವರಾತ್ರಿ ಸಹ ಒಂದು. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಕರನನ್ನು ನೆನೆದು, ಪುನೀತರಾಗುತ್ತಾರೆ.
ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ಶಿಷ್ಟ ರಕ್ಷಕನಾದ ಶಿವ, ಭಕ್ತರು ಕೇಳಿದ ವರಗಳನ್ನು ಕೊಡುತ್ತಾನೆ ಎಂಬ ನಂಬಿಕೆ ಇದೆ. ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ.
ಮಹಾನ್ ಹಬ್ಬದ ಹಿನ್ನೆಲೆ ಏನು?
ಶಿವಪುರಾಣದ ಪ್ರಕಾರ ಶಿವರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ. ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿರುತ್ತೆ. ಈ ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ಕಷ್ಟ ಎಂದೆನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮನ ನಡುವೆ ಜಗಳವನ್ನು ನಿವಾರಿಸುವಂತೆ ಎಲ್ಲರೂ ಶಿವನಲ್ಲಿ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮನ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ. ಯಾರು ನನ್ನ ಮೂಲ ಕಂಡುಹಿಡಿಯುತ್ತಾರೆ ಅವರೇ ಶ್ರೇಷ್ಠ ಎಂದು ಹೇಳುತ್ತಾನೆ.
ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ.
ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇದಗೆ ಪುಷ್ಪದ ಬಳಿ ಬ್ರಹ್ಮ, ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂದು ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇದಗೆ ಪುಷ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇದಗೆ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆಯಿದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.
ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತೆ ಎಂಬ ನಂಬಿಕೆ ಇದೆ. ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಶ್ರೇಷ್ಠ ಎಂಬ ನಂಬಿಕೆಗಳಿವೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ.
ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ.
ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ. ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ ಎಂಬುದು ಎಲ್ಲರ ಕೋರಿಕೆ. ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ನವರಾತ್ರಿಯ ಮೊದಲ ದಿನ ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಪೂಜಿಸಿದರೆ, ಎರಡನೇ ದಿನ ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಗುತ್ತದೆ.
ಪಾರ್ವತಿಯೂ ಉಮಾ ಹೆಸರಿನಲ್ಲಿ ಹಿಮಾಲಯನ ಪುತ್ರಿಯಾಗಿ ಜನಿಸುತ್ತಾಳೆ. ನಾರದರ ಉಪದೇಶದಿಂದ ಉಮೆ ಭಗವಾನ್ ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಅತಿಯಾದ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸನ್ನು ಆಚರಿಸಿದ ಕಾರಣ ಇವಳಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂತು.
ಯಾವ ರೀತಿ ತಪಸ್ಸು ಮಾಡಿದ್ದಳು?
ಹಲವು ವರ್ಷ ಈಕೆ ಕೇವಲ ಫಲ ಮೂಲಗಳನ್ನು ತಿಂದು ಕಳೆದಿದ್ದಳು. ನೂರು ವರ್ಷಗಳವರೆಗೆ ಕೇವಲ ಎಲೆಗಳನ್ನು ತಿನ್ನುತ್ತಿದ್ದಳು. ಕೆಲವು ದಿನಗಳವರೆಗೆ ಕಠಿಣ ಉಪವಾಸವಿದ್ದು ತೆರೆದ ಆಕಾಶದ ಕೆಳಗೆ ಮಳೆ-ಬಿಸಿಲಿನ ಭಯಾನಕ ಕಷ್ಟಗಳನ್ನು ಸಹಿಸಿದಳು. ಈ ಕಠಿಣ ತಪಸ್ಸಿನ ಬಳಿಕ ಮೂರು ಸಾವಿರ ವರ್ಷಗಳವರೆಗೆ ಕೇವಲ ನೆಲದ ಮೇಲೆ ಉದುರಿಬಿದ್ದ ಬಿಲ್ವಪತ್ರಗಳನ್ನು ತಿಂದು ಹಗಲು-ರಾತ್ರಿ ಭಗವಾನ್ ಶಂಕರನ ಆರಾಧನೆ ಮಾಡುತ್ತಿದ್ದಳು. ಹೀಗಾಗಿ ಕೇವಲ ಎಲೆ(ಪರ್ಣ)ಗಳನ್ನು ತಿಂದು ಜೀವಿಸಿದ್ದರಿಂದ ಆಕೆಗೆ ಅಪರ್ಣ ಎನ್ನುವ ಹೆಸರು ಬಂತು.
ಕಠಿಣ ತಪಸ್ಸು ಮಾಡಿದರೂ ಶಿವನ ಅನುಗ್ರಹ ಸಿಗದ್ದಕ್ಕೆ ಅವಳು ಒಣಗಿದ ಬಿಲ್ವಪತ್ರಗಳನ್ನು ತಿನ್ನುವುದನ್ನು ಬಿಟ್ಟು ಬಿಟ್ಟಳು. ಅನೇಕ ಸಾವಿರ ವರ್ಷಗಳವರೆಗೆ ಅವಳು ಆಹಾರ-ನೀರೂ ಸೇವಿಸದೇ ಮತ್ತಷ್ಟು ಕಠಿಣ ತಪಸ್ಸು ಮುಂದುವರಿಸಿದ್ದಳು. ಅನೇಕ ಸಾವಿರ ವರ್ಷಗಳ ಈ ತಪಸ್ಸಿನಿಂದಾಗಿ ಉಮಾಳ ಶರೀರವು ತುಂಬಾ ಕ್ಷೀಣವಾಯಿತು. ಮಗಳ ದೇಹ ಕೃಶವಾಗುತ್ತಿರುವುದನ್ನು ಕಂಡು ತಾಯಿಯಾದ ಮೇನಾದೇವಿಯು ಅತಿ ದುಃಖಿತಳಾದಳು. ಇವಳ ಈ ತಪಸ್ಸಿನಿಂದ ಮೂರು ಲೋಕಗಳಲ್ಲಿ ಹಾಹಾಕಾರ ಎದ್ದಿತು.
ಕೊನೆಗೆ ಈಕೆಯ ಕಠಿಣ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ,”ಹೇ ದೇವಿ, ಇಂದಿನವರೆಗೆ ಯಾರೂ ಇಂತಹ ಕಠೋರ ತಪಸ್ಸು ಮಾಡಿರಲಿಲ್ಲ. ಇಂತಹ ತಪಸ್ಸು ನಿನ್ನಿಂದಲೇ ಸಂಭವಿಸಿದೆ. ನಿನ್ನ ತಪಸ್ಸಿನ ಬಗ್ಗೆ ಹೊಗಳಿಕೆ ಎಲ್ಲೆಡೆ ನಡೆಯುತ್ತಿದೆ. ನಿನ್ನ ಮನೋ ಕಾಮನೆಯು ಎಲ್ಲಾ ವಿಧದಿಂದ ಪೂರ್ಣವಾಗುತ್ತದೆ. ಭಗವಾನ್ ಚಂದ್ರಮೌಳಿ ಶಿವನು ನಿನಗೆ ಪತಿಯಾಗಿ ದೊರೆಯುವನು. ಈಗ ನೀನು ತಪಸ್ಸನ್ನು ಬಿಟ್ಟು ಮನೆಗೆ ಹಿಂತಿರುಗು” ಎಂದು ವರವನ್ನು ನೀಡುತ್ತಾನೆ. ನಂತರ ಶಿವನು ಬ್ರಹ್ಮಚಾರಿಣಿಯನ್ನು ಸತಿಯಾಗಿ ಸ್ವೀಕರಿಸುತ್ತಾನೆ. ಇದನ್ನೂ ಓದಿ: ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ
ಬ್ರಹ್ಮಚಾರಿಣಿ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ, ಇವುಗಳ ವೃದ್ಧಿ ಆಗುತ್ತದೆ. ಬ್ರಹ್ಮಚಾರಿಣಿ ದೇವಿಯ ಕೃಪೆ ಇದ್ದರೆ ಆತನಿಗೆ ಎಲ್ಲೆಡೆ ಸಿದ್ಧಿ ಮತ್ತು ವಿಜಯದ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆಯಿದೆ. ಈಕೆಯ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲ ಇರುತ್ತದೆ.
ಕಾರವಾರ: ಕರಾವಳಿಯಲ್ಲಿ ಕಳೆದ ಎರಡು ವರ್ಷದಿಂದ ಸುರಿದ ಬಾರಿ ಮಳೆ ಸಾಕಷ್ಟು ಅನಾಹುತವನ್ನೇನೋ ತಂದಿತ್ತು. ಈಗ ಇತಿಹಾಸದ ಗತ ವೈಭವ ಸಾರುವ 11ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲದ ಪುರಾತನ ಶಿವನ ಶಿಲಾ ದೇವಸ್ಥಾನಗಳು ಭೂಮಿಯಲ್ಲಿ ಹುದುಗಿ ಹೋಗಿದ್ದು, ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಮಾರುಗದ್ದೆ ಗ್ರಾಮದಲ್ಲಿ 11ನೇ ಶತಮಾನದ ಕಲ್ಯಾಣಿ ಚಾಲುಕ್ಯರು ತಮ್ಮ ಆಡಳಿತಾವಧಿಯಲ್ಲಿ ನಾಲ್ಕು ಶಿವಾಲಯವನ್ನು ನಿರ್ಮಿಸಿದ್ದು, ಇದರಲ್ಲಿ ಒಂದು ಬಾದಾಮಿಯಲ್ಲಿರುವ ದೇವಸ್ಥಾನದಂತೆ ಶಿಲಾಮಯವಾಗಿದೆ. ಇಲ್ಲಿನ ಕೆತ್ತನೆಗಳು ಮನೋಜ್ಞವಾಗಿದ್ದು, ಪ್ರತಿ ಕಲ್ಲುಗಳಲ್ಲಿ ಮೂಡಿರುವ ಶಿವ, ವೀರಭದ್ರ, ದುರ್ಗೆ ಸೇರಿದಂತೆ ಹಲವು ಶಿಲಾ ಕಲಾಕೃತಿಗಳಿವೆ.
ಕಂಬಗಳು ಶಿಲಾಮಯವಾಗಿದ್ದು, ಕಲ್ಯಾಣಿ ಚಾಲಿಕ್ಯರ ಶೈಲಿಯ ಈ ದೇವಸ್ಥಾನ ಎಂತಹವರನ್ನೂ ಮನಸೂರೆಗೊಳ್ಳುತ್ತದೆ. ಆದರೆ ಕಳೆದ ಎರಡು ವರ್ಷದಿಂದ ಸುರಿದ ಭಾರೀ ಮಳೆ ಶಿಲಾಮಯ ದೇವಸ್ಥಾನದ ಜೊತೆ ಪುರಾತನ ನಾಲ್ಕು ದೇವಸ್ಥಾನದವನ್ನು ಸಂಪೂರ್ಣ ನುಂಗಿದೆ. ಹಿಂದೆ ಸುರಿದ ಅಬ್ಬರದ ಮಳೆ ನೀರಿಗೆ ಇಡೀ ದೇವಸ್ಥಾನದ ಅರ್ಧ ಭಾಗ ಮಣ್ಣಿನಿಂದ ಮುಚ್ಚಿಹೋಗಿದೆ.
ಇತಿಹಾಸಕಾರ ಲಕ್ಷ್ಮೀಶ್ ಸೋಂದಾ ಅವರ ಪ್ರಕಾರ ಈ ದೇವಸ್ಥಾನ 11ನೇ ಶತಮಾನದ್ದಾಗಿದ್ದು, ಇವುಗಳ ಉತ್ಕಲನ ನಡೆಸಿದರೆ ಹಲವು ವಿಶೇಷ ಮಾಹಿತಿಗಳು ಲಭಿಸುತ್ತವೆ. ಈ ದೇವಸ್ಥಾನದ ಸುತ್ತ ಅಗ್ರಹಾರ ಹಾಗೂ ಹಿಂದೆ ಜನವಸತಿ ಇದ್ದ ಕುರುಹುಗಳಿದ್ದು, ಕಲ್ಯಾಣಿ ಚಾಲುಕ್ಯರ ಕಾಲದ ಗತವೈಭವವನ್ನು ಸಾರುತ್ತವೆ. ಆದರೆ ಇಷ್ಟೊಂದು ಮಹತ್ವ ಇರುವ ಈ ದೇವಸ್ಥಾನ ಈಗ ಹಾಳು ಬಿದ್ದಿದೆ.
ಪ್ರವಾಹ ಇಲ್ಲಿನ ಹಲವು ವಿಗ್ರಹಗಳನ್ನು ಕೊಚ್ಚಿಕೊಂಡು ತನ್ನೊಂದಿಗೆ ತೆಗೆದುಕೊಂಡು ಹೋದ್ರೆ, ಹಲವು ಮಣ್ಣಿನಲ್ಲಿ ಮುಚ್ಚಿಹೋಗಿವೆ. ಶಿವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ಈ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗುತಿತ್ತು. ಆದರೆ ಕಳೆದ ಎರಡು ವರ್ಷದಿಂದ ಸುರಿದ ಅಬ್ಬರದ ಮಳೆಯಿಂದಾಗಿ ಮಾರು ದೂರದಲ್ಲಿ ಇರುವ ಹೊಳೆಯ ನೀರು ಹಾಗೂ ಗುಡ್ಡದಿಂದ ಕೊಚ್ಚಿ ಬಂದ ಮಣ್ಣಿನ ಮಡ್ಡಿಯಿಂದಾಗಿ ಎಲ್ಲವೂ ಮುಚ್ಚಿಹೋಗಿದೆ. ಜೊತೆಗೆ ಹಲವು ವಿಗ್ರಹಗಳು ನೀರಿನಲ್ಲಿ ತೇಲಿಹೋಗಿದ್ದು ಶಿಲೆಗಳು ಹಲವು ಭಾಗದಲ್ಲಿ ಕುಸಿದು ಬಿದ್ದಿವೆ.
ಗ್ರಾಮಾದ ಜನ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆಗೆ ಮನವಿ ಮಾಡಿ ಇವುಗಳನ್ನು ರಕ್ಷಿಸಿ, ಈ ಪ್ರದೇಶವನ್ನು ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ಸಾಮಾಜಿಕವಾಗಿ ಹಿಂದುಳಿದ ಗ್ರಾಮದ ಅಭಿವೃದ್ಧಿ ಮಾಡಬೇಕು ಎಂದು ಕಳೆದ ಒಂದು ವರ್ಷದಿಂದ ಪತ್ರ ಹೋರಾಟ ಮಾಡುತಿದ್ದಾರೆ.
ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆ ಜಾಣ ಕಿವುಡುತನ ತೋರಿಸಿದೆ. ಇದರಿಂದಾಗಿ ಪುರಾಣ ಪ್ರಸಿದ್ಧ ಗೋಕರ್ಣದಂತೆ ಪ್ರಸಿದ್ದಿಯಾಗಬೇಕಿದ್ದ ಈ ಶಿವನ ದೇವಾಲಯ ಭೂಮಿ ಪಾಲಾಗಿ ಹೋಗುತ್ತಿದೆ. ಸದ್ಯ ಸಂಪೂರ್ಣ ಜೀರ್ಣಾವಸ್ಥೆ ತಲುಪಿರುವ ಈ ದೇವಸ್ಥಾನ ಮೊದಲಿನಂತಾಗಬೇಕು ಎನ್ನುವುದು ಗ್ರಾಮದ ಜನರ ಆಶಯವಾಗಿದೆ.
ಇತಿಹಾಸ ಸ್ಮಾರಕವನ್ನು ರಕ್ಷಿಸುವ ಹೊಣೆ ಪುರಾತತ್ವ ಇಲಾಖೆಯದ್ದು. ಆದರೆ ಗ್ರಾಮಸ್ತರೇ ಈ ದೇವಸ್ಥಾನವನ್ನು ರಕ್ಷಿಸಿ ಜೀರ್ಣೋದ್ಧಾರ ಮಾಡುವಂತೆ ಮನವಿ ಮಾಡಿದರೂ, ಇಲಾಖೆಯ ಅಧಿಕಾರಿಗಳು ಮಾತ್ರ ಇತ್ತ ಸುಳಿದಿಲ್ಲ.
ಚಿಕ್ಕಮಗಳೂರು: ಬಿಲ್ವಪತ್ರೆ ಅಂದರೆ ಭೀಮಾಶಂಕರನಿಗೆ ಬಲು ಪ್ರೀತಿ. ಈಗ ಬಿಲ್ವ ಪತ್ರೆ ಮರಗಳು ಮಾಯ ಆಗ್ತಿವೆ. ಆದರೆ ಚಿಕ್ಕಮಗಳೂರಿನ ಸಖರಾಯಪಟ್ಟಣದ ಕಲ್ಮುರುಡೇಶ್ವರ ಮಠದ ಆವರಣದಲ್ಲಿ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳಿದ್ದು, ಕಾಡಿನಂತೆ ಬೆಳೆದು ನಿಂತಿವೆ.
ಬಿಲ್ವಪತ್ರೆ ಅಂದರೆ ಶಿವನ ಭಕ್ತರಿಗೆ ಎಲ್ಲಿಲ್ಲದ ಗೌರವ. ಬಿಲ್ವ ಪತ್ರೆಯಲ್ಲೇ ಶಿವನನ್ನ ಪೂಜಿಸಬೇಕು ಅನ್ನೋದು ಶಿವಭಕ್ತರ ಕನಸು. ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಸ್ಯ ರಾಶಿಯಲ್ಲೇ ಅಪರೂಪ ಹಾಗೂ ಆಧ್ಯಾತ್ಮಿಕವಾಗಿ ಪರಮ ಶ್ರೇಷ್ಠವಾಗಿರೋ ಬಿಲ್ವ ಪತ್ರೆಗಾಗಿ ಕಾಡು-ಮೇಡು ಅಲೆಯೋ ಭಕ್ತರೂ ಇದ್ದಾರೆ. ಆದರೆ ಕಾಫಿನಾಡ ಸಖರಾಯಪಟ್ಟಣದ ಕಲ್ಮುರುಡೇಶ್ವರ ಮಠದ ಆವರಣದಲ್ಲಿ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳಿದ್ದು, ಯಾರೊಬ್ಬರು ಒಂದೇ ಒಂದು ಸಸಿಯನ್ನ ನೆಡದಿದ್ದರೂ ತನ್ನಷ್ಟಕ್ಕೆ ತಾನೆ ಬೆಳೆದು ನಿಂತ ಬಿಲ್ವಪತ್ರೆಯ ಮರಗಳು ಈ ಜಾಗದ ವಿಶೇಷತೆಯಾಗಿದೆ.
ಬಿಲ್ವಪತ್ರೆಯಲ್ಲಿ ಶಿವಾರಾಧನೆ ಮಾಡಿದರೆ ಶಿವ ಮೆಚ್ಚಿ ಭಕ್ತರ ಬೇಡಿಕೆ ಈಡೇರಿಸ್ತಾನೆ ಅನ್ನೋದು ಭಕ್ತರ ನಂಬಿಕೆ. ಈ ಬಿಲ್ವಪತ್ರೆ ಎಲ್ಲೆಂದರಲ್ಲಿ ಸಿಗದಿರೋದೆ ಶಿವಭಕ್ತರ ಕೊರಗು. ಆದರೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟದ ಕಲ್ಮುರುಡೇಶ್ವರ ಸ್ವಾಮಿ ಮಠದ ಆವರಣದಲ್ಲಿ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳಿವೆ. ಈ ಬಿಲ್ವಪತ್ರೆ ವನದ ಸೊಬಗು ಸವಿಯಲು ರಾಜ್ಯದ ಮೂಲೆ, ಮೂಲೆಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸ್ತಾರೆ. ಮಠಕ್ಕಾಗಮಿಸೋ ಭಕ್ತರು ಬಿಲ್ವಪತ್ರೆ ಎಲೆ ಕೊಯ್ದು, ಭಕ್ತಿಯಿಂದ ಇಲ್ಲಿನ ಕಲ್ಮುರುಡೇಶ್ವರನಿಗೆ ಮುಡಿಸೋದು ವಾಡಿಕೆ. ಹೀಗೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ ಅನ್ನೋದು ಭಕ್ತರ ನಂಬಿಕೆ.
ಅಪರೂಪದಲ್ಲೂ ಅತ್ಯಂತ ವಿರಳವಾಗಿರೋ ಬಿಲ್ವಪತ್ರೆಯ ಒಂದೂ ಮರ ಕಂಡರೇನೆ ಶಿವಭಕ್ತರು ನಾನೇ ಧನ್ಯ ಅಂತಾರೆ. ಅಂತಹದರಲ್ಲಿ ನೂರಾರು ಮರಗಳನ್ನ ಇಲ್ಲಿಗೆ ತಂದು ನೆಟ್ಟೋರ್ಯಾರು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಈ ಪ್ರಶ್ನೆಗೆ ಸ್ಥಳೀಯರು ಹತ್ತಾರು ಪುರಾಣದ ಕಥೆ ಹೇಳುತ್ತಾರೆ. ಹಿಂದೆ ಮರುಳಸಿದ್ದೇಶ್ವರನೆಂಬ ಸನ್ಯಾಸಿಯೊಬ್ಬ ಇಲ್ಲಿ ತಪಸ್ಸು ಮಾಡುತ್ತಿದ್ದರು. ಆ ವೇಳೆ ಅವರು ರುದ್ರಾಕ್ಷಿಯನ್ನು ಮಠದ ಸುತ್ತಲೂ ಚೆಲ್ಲಿದ್ದರಿಂದ ಈ ಮರಗಳು ಬೆಳೆದಿವೆ. ಮರಗಳನ್ನು ಯಾರು ಬೆಳೆಸಿಲ್ಲ. ಶಿವನ ಶಕ್ತಿಯಿಂದ ನೈಸರ್ಗಿಕವಾಗಿ ಬೆಳೆದು ನಿಂತಿವೆ ಅಂತ ಹಿರಿಯರು, ಭಕ್ತರು ಹೇಳುತ್ತಾರೆ.
ಅದೇನೆ ಇರಲಿ ವನದಲ್ಲಿ ಬಿಲ್ವಪತ್ರೆ ಹೊರತುಪಡಿಸಿ ಬೇರ್ಯಾವ ಮರಗಿಡಗಳಿಲ್ಲ. ಸುಮಾರು 2 ಎಕ್ರೆ ಪ್ರದೇಶದಲ್ಲಿ ಬೆಳೆದಿರೋ ಈ ಮರಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಇನ್ನಾದರೂ ಈ ಅಪರೂಪದ ಸಸ್ಯ ಸಂಪತ್ತಿನತ್ತ ಸರ್ಕಾರ ಗಮನ ಹರಿಸಬೇಕೆಂಬುದು ಸ್ಥಳಿಯರ ಆಗ್ರಹಿಸಿದ್ದಾರೆ.