Tag: ಶಿವಾರ್ಜುನ

  • ಚಿರು ನೆನಪಲ್ಲೇ ಮತ್ತೊಮ್ಮೆ ಥಿಯೇಟರ್‌ಗೆ ‘ಶಿವಾರ್ಜುನ’

    ಚಿರು ನೆನಪಲ್ಲೇ ಮತ್ತೊಮ್ಮೆ ಥಿಯೇಟರ್‌ಗೆ ‘ಶಿವಾರ್ಜುನ’

    ದಿವಂಗತ ನಟ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಕಟ್ಟ ಕಡೆಯ ಚಿತ್ರ ‘ಶಿವಾರ್ಜುನ’ ರೀ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿರಂಜೀವಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಅಭಿಮಾನಿ ಬಳಗಕ್ಕೆ ಈ ಸುದ್ದಿ ಕೇಳಿ ಮನದುಂಬಿ ಬಂದಿದೆ. ಮತ್ತೊಮೆ ಚಿರಂಜೀವಿ ಸರ್ಜಾರನ್ನ ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

    ‘ಶಿವಾರ್ಜುನ’ ಚಿತ್ರ ಮಾರ್ಚ್ 12ರಂದು ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಮರು ದಿನವೇ ಸರ್ಕಾರ ಕೋವಿಡ್ 19 ಎಚ್ಚರಿಕೆಯ ಕ್ರಮವಾಗಿ ಚಿತ್ರಮಂದಿರವನ್ನು ಬಂದ್ ಮಾಡಿತ್ತು. ಇದೀಗ ಸುಮಾರು ಏಳು ತಿಂಗಳ ಬಳಿಕ ಚಿತ್ರಮಂದಿರ ತೆರೆಯಲು ಸರ್ಕಾರ ಅನುಮತಿ ನೀಡಿದ್ದು ಶಿವಾರ್ಜುನ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.

    ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಶಿವತೇಜಸ್ ಬಿಡುಗಡೆಯಾಗಿ ಎರಡು ದಿನವಷ್ಟೇ ಚಿತ್ರ ಪ್ರದರ್ಶನ ಕಂಡಿತ್ತು. ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಎಲ್ಲೆಡೆ ಕೇಳಿ ಬಂದಿತ್ತು ಆದ್ರಿಂದ ಚಿತ್ರವನ್ನು ಮರು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ. ಅಕ್ಟೋಬರ್ 16ರಂದು ಶಿವಾರ್ಜುನ ಚಿತ್ರ ರಾಜ್ಯಾದ್ಯಂತ ಮತ್ತೊಮ್ಮೆ ಬಿಡುಗಡೆಯಾಗಲಿದೆ ಎಂದು ಶಿವತೇಜಸ್ ತಿಳಿಸಿದ್ದಾರೆ.

    ನಾಯಕ ನಟ ಚಿರು ಅಗಲಿಕೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಶಿವತೇಜಸ್ ಚಿತ್ರದ ನಾಯಕ ನಟ ನಮ್ಮೊಂದಿಗಿಲ್ಲ ಅನ್ನೋದೇ ಬೇಸರದ ಸಂಗತಿ. ಅವ್ರ ಅಗಲಿಕೆ ನೋವಲ್ಲೇ ಅವ್ರ ಕೊನೆಯ ಸಿನಿಮಾವನ್ನು ರೀರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡು ದುಃಖದಲ್ಲಿರೋ ಚಿರು ಅಭಿಮಾನಿ ಬಳಗಕ್ಕೆ ಮತ್ತೊಮ್ಮೆ ಚಿರು ನಟನೆಯ ಕೊನೆಯ ಚಿತ್ರವನ್ನು ತೆರೆ ಮೇಲೆ ನೋಡೋ ಅವಕಾಶ ಇದ್ರಿಂದ ಮತ್ತೆ ಸಿಕ್ಕಾಂತಾಗಿದೆ. ‘ಶಿವಾರ್ಜುನ’ ಚಿತ್ರಕ್ಕೆ ಸುರಾಗ್ ಕೋಕಿಲ ಸಂಗೀತ, ವೇಣು ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಚಿರಂಜೀವಿ ಸರ್ಜಾ, ಅಮೃತ ಐಯ್ಯಂಗರ್, ರವಿಕಿಶನ್, ಸಾಧುಕೋಕಿಲ, ತಾರಾ, ಕಿಶೋರ್. ಚಿತ್ರದ ತಾರಾಂಗಣದಲ್ಲಿದ್ದಾರೆ.

  • ಚಿರು ಮತ್ತೆ ಉದಯಿಸ್ತಿದ್ದಾರೆ – ಅಭಿಮಾನಿಗಳಿಗೆ ಮೇಘನಾರಿಂದ ಗುಡ್‍ನ್ಯೂಸ್

    ಚಿರು ಮತ್ತೆ ಉದಯಿಸ್ತಿದ್ದಾರೆ – ಅಭಿಮಾನಿಗಳಿಗೆ ಮೇಘನಾರಿಂದ ಗುಡ್‍ನ್ಯೂಸ್

    ಬೆಂಗಳೂರು: ಇತ್ತೀಚೆಗಷ್ಟೆ ದಿವಗಂತ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನಡೆದಿದೆ. ಇದರ ಬೆನ್ನಲ್ಲೆ ನಟಿ ಮೇಘನಾ ಚಿರು ಅಭಿಮಾನಿಗಳಿಗೆ ಗುಡ್‍ನ್ಯೂಸ್ ನೀಡಿದ್ದಾರೆ.

    ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ಶಿವಾರ್ಜುನ. ಈ ಸಿನಿಮಾ ಇದೇ ಅಕ್ಟೋಬರ್ 16ರಂದು ಶುಕ್ರವಾರ ಮತ್ತೆ ಬಿಡುಗಡೆಯಾಗುತ್ತಿದೆ. ಈ ಸಿಹಿಸುದ್ದಿಯನ್ನು ಚಿರು ಪತ್ನಿ ಮೇಘನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    “ಚಿರು ಮತ್ತೆ ಉದಯಿಸುತ್ತಿದ್ದಾರೆ, ಅದಕ್ಕೆ ಕಾರಣ ಅಕ್ಟೋಬರ್ 16ರಂದು ಶಿವಾರ್ಜುನ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ” ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಜೊತೆಗೆ ಸಿನಿಮಾ ಪೋಸ್ಟರನ್ನು ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಲು ಮತ್ತೊಂದು ಕಾರಣವೂ ಇದೆ. ಅದೇನೆಂದರೆ ಇದೇ ಅ.17ರಂದು ಚಿರಂಜೀವಿ ಹುಟ್ಟುಹಬ್ಬ ಇದೆ. ಈ ಹಿನ್ನೆಲೆಯಲ್ಲಿ ಚಿರುವಿನ ಕೊನೆಯ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

    ‘ಸಿಂಗ’ ಮತ್ತು ‘ಖಾಕಿ’ಯಲ್ಲಿ ಅಬ್ಬರಿಸಿದ್ದ ಚಿರು ‘ಶಿವಾರ್ಜುನ’ನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನಿಮಾ ಶಿವತೇಜಸ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನಿರ್ಮಾಪಕ ಶಿವಾರ್ಜುನ್ ನಿರ್ಮಿಸಿದ್ದಾರೆ. ಇದೊಂದು ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದೆ. ಕಾಮಿಡಿ, ಫ್ಯಾಮಿಲಿ, ಎಮೋಷನ್ ಹೀಗೆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿ ಅಡಕವಾಗಿದೆ. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ಬಳಗವೇ ಸಿನಿಮಾದಲ್ಲಿದೆ.

    ಧ್ರುವ ಸರ್ಜಾ ಹುಟ್ಟುಹಬ್ಬದ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದ ಮೇಘನಾ, “ನನ್ನ ಕಷ್ಟದ ಸಮಯದಲ್ಲಿ ನೀನು ಹೇಗೆ ನನ್ನ ಜೊತೆಯಲ್ಲಿ ಗಟ್ಟಿಯಾಗಿ ನಿಂತಿದ್ದೆ ಹಾಗೆಯೇ ನಾನು ಕೂಡ ಶಾಶ್ವತವಾಗಿ ನಿನ್ನ ಪಕ್ಕ ನಿಲ್ಲುತ್ತೇನೆ. ಪ್ರಾಮಿಸ್ ಬರ್ತ್ ಡೇ ಬಾಯ್. ಸದಾ ನೀನು ಖುಷಿಯಾಗಿರು ಎಂದು ಆಶೀಸುತ್ತೇನೆ. ನಮ್ಮ ಚಿರು ನಕ್ಕಂತೆ ನೀನು ನಗುತ್ತಿರು. ಹ್ಯಾಪಿಸ್ಟ್ ಬರ್ತ್ ಡೇ ಬಿಲ್ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

    https://www.instagram.com/p/CGFApjZHS0U/?igshid=1kqfuzdu5e83a

    ಭಾನುವಾರವಷ್ಟೇ ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು.

  • ಇದೇ ವರ್ಷ ತೆರೆಕಂಡಿದ್ವು ಚಿರು ನಟನೆಯ ಮೂರು ಸಿನಿಮಾಗಳು

    ಇದೇ ವರ್ಷ ತೆರೆಕಂಡಿದ್ವು ಚಿರು ನಟನೆಯ ಮೂರು ಸಿನಿಮಾಗಳು

    ಬೆಂಗಳೂರು: ಪ್ರತಿಭಾವಂತ, ಸದಾ ನಗುಮುಖದ ಯುವ ನಟ ಚಿರಂಜೀವಿ ಸರ್ಜಾ ಇಂದು ನಮ್ಮನ್ನ ಅಗಲಿದ್ದಾರೆ. ಅವರ ಸಾವಿನ ಸುದ್ದಿ ಸಾಂಡಲ್‍ವುಡ್ ನಟ, ನಟಿಯರು, ಕಲಾವಿದರು, ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ.

    ಚಿರು 2009ರಲ್ಲಿ ‘ವಾಯುಪುತ್ರ’ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಗನಾಗಿ ತೆರೆಹಂಚಿಕೊಂಡಿದ್ದರು. ಕನ್ನಡ ಚಿತ್ರರಂಗದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ಕುಟುಂಬದಲ್ಲಿ ಬೆಳೆದ ಚಿರಂಜೀವಿ ಸರ್ಜಾ ಹಿರಿಯರಿಗೆ ಗೌರ, ಕಿರಿಯರಿಗೆ ಪ್ರೀತಿ ಕೊಟ್ಟು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

    ಚಿರಂಜೀವಿ ಸರ್ಜಾ ನಟನೆಯ ಮೂರು ಸಿನಿಮಾಗಳು ಇದೇ ವರ್ಷ ತೆರೆ ಕಂಡಿದ್ದವು. ಜನವರಿ ತಿಂಗಳಿನಲ್ಲಿ ‘ಖಾಕಿ’ ಸಿನಿಮಾ ತೆರೆಕಂಡಿತ್ತು. ನವೀನ್ ರೆಡ್ಡಿ ನಿರ್ದೇಶನದ ಈ ಸಿನಿಮಾ ಪಕ್ಕಾ ಕಮರ್ಷಿಯಲ್ ಮಾದರಿಯ ಸಿನಿಮಾವಾಗಿತ್ತು. ತರುಣ್ ಶಿವಪ್ಪ ಮತ್ತು ಮಾನಸಾ ತರುಣ್ ಜಂಟಿಯಾಗಿ ‘ಖಾಕಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

    ‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಜೊತೆಗೆ ಚಿರಂಜೀವಿ ಸರ್ಜಾ ಉತ್ತಮ ಒಡನಾಟ ಹೊಂದಿದ್ದರು. ಚೈತನ್ಯ ಅವರ ‘ಆಟಗಾರ’, ‘ಆಕೆ’, ‘ಅಮ್ಮ ಐ ಲವ್ ಯೂ’, ಹಾಗೂ ಈ ವರ್ಷ ಫೆಬ್ರವರಿಯಲ್ಲಿ ತೆರೆ ಕಂಡ ‘ಆದ್ಯಾ’ ಸಿನಿಮಾಗಳಲ್ಲಿ ಚಿರು ನಟಿಸಿದ್ದರು.

    ಮಾರ್ಚ್ 12ರಂದು ಸಿನಿಮಾ ತೆರೆ ಕಂಡಿದ್ದ ‘ಶಿವಾರ್ಜುನ’ ಸಿನಿಮಾವನ್ನು ಬಹಳ ಪ್ರೀತಿಯಿಂದ ಮಾಡಿದ್ದರು. ದುರಾದೃಷ್ಟವಶಾತ್ ಸಿನಿಮಾ ರಿಲೀಸ್ ಆದ ಎರಡೇ ದಿನಕ್ಕೆ ಕೊರೊನಾ ವೈರಸ್‍ನಿಂದಾಗಿ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಆದೇಶ ಹೊರಬಿದ್ದಿತ್ತು. ಹಾಗಾಗಿ ‘ಶಿವಾರ್ಜುನ’ ಸಿನಿಮಾ ಎರಡೇ ದಿನಕ್ಕೆ ಪ್ರದರ್ಶನವನ್ನು ನಿಲ್ಲಿಸಬೇಕಾಗ ಅನಿವಾರ್ಯತೆ ಎದುರಾಯಿಗಿತ್ತು.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಉಳಿದಿದ್ದ ಚಿರು ಕುಟುಂಬದೊಂದಿಗೆ ಖುಷಿ, ಖುಷಿಯಾಗಿ ಕಾಲ ಕಳೆಯುತ್ತಿದ್ದರು. ಆದರೆ ನಿನ್ನೆ ರಾತ್ರಿಯಿಂದ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ತಮ್ಮ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರೆಳಿದ್ದಾರೆ.

  • ಫ್ಯಾಮಿಲಿ ಕುಳಿತು ಎಂಜಾಯ್ ಮಾಡುಬಹುದಾದ ಚಿತ್ರ ಶಿವಾರ್ಜುನ

    ಫ್ಯಾಮಿಲಿ ಕುಳಿತು ಎಂಜಾಯ್ ಮಾಡುಬಹುದಾದ ಚಿತ್ರ ಶಿವಾರ್ಜುನ

    ಚಿರು ಸರ್ಜಾ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಶಿವಾರ್ಜುನ ಇಂದು ತೆರೆಗಪ್ಪಳಿಸಿದೆ. ಕೊರೊನಾ ಭೀತಿಯ ನಡುವೆಯೂ ಚಿತ್ರಕ್ಕೆ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಿರುವ ಯುವ ಸಾಮ್ರಾಟ್ ಚಿರು ಸರ್ಜಾ ಓನ್ಸ್ ಅಗೈನ್ ಶಿವಾರ್ಜುನ ಚಿತ್ರದ ಮೂಲಕ ಅಬ್ಬರಿಸಿದ್ದಾರೆ.

    ಮಾಸ್ ಹಾಗೂ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಕಂಟೆಟ್‍ಗೆ ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾನೆ. ನಾಯಕ ಶಿವು ಆಯುರ್ವೇಧಿಕ್ ಡಾಕ್ಟರ್ ಸಾಧು ಕೋಕಿಲ ಬಳಿ ಕೆಲಸಕ್ಕೆ ಸೇರಿ ಕೊಳ್ಳುತ್ತಾನೆ. ಆದ್ರೆ ಈ ಶಿವ ಯಾರು, ಈತನ ಹಿನ್ನೆಲೆ ಏನು ಅನ್ನೋದನ್ನ ನಿರ್ದೇಶಕರು ಪ್ರೇಕ್ಷಕರಿಗೆ ಕ್ಲೂ ಕೊಡದೆ ಮೊದಲಾರ್ಧ ಕ್ಯೂರಿಯಾಸಿಟಿ ಮೂಡಿಸುತ್ತಾರೆ. ಅಸಲಿ ಕಥೆ ಸೆಕೆಡ್ ಹಾಫ್ ನಲ್ಲಿದ್ದು, ಶಿವ ಯಾರು, ಆತ ತನ್ನ ಶತ್ರುಗಳನ್ನು ಹೇಗೆ ಬಗ್ಗು ಬಡಿಯುತ್ತಾನೆ ಅನ್ನೋದನ್ನ ಮಾಸ್ ಆಗಿ ಚಿತ್ರಿಸಿದ್ದಾರೆ ನಿರ್ದೇಶಕರು.

    ಎರಡು ಊರುಗಳ ನಡುವೆ ನಡೆಯುವ ಕಥೆಯೇ ಶಿವಾರ್ಜುನ. ರಾಮದುರ್ಗ ಹಾಗೂ ರಾಯದುರ್ಗ ಎರಡು ಊರುಗಳ ನಡುವೆ ಇಡೀ ಚಿತ್ರ ನಡೆಯುತ್ತೆ. ಪ್ರತಿ ವರ್ಷ ಈ ಎರಡು ಊರುಗಳ ನಡುವೆ ಸ್ಪರ್ಧೆ ನಡೆಯುತ್ತಿರುತ್ತೆ. ಸಡನ್ ಆಗಿ ಒಂದು ವರ್ಷ ಈ ಸ್ಪರ್ಧೆ ನಿಂತು ಹೋಗುತ್ತೆ. ಎರಡು ಊರುಗಳ ನಡುವೆ ಕಾದಾಟ ಶುರುವಾಗುತ್ತೆ. ಇದಕ್ಕೆ ಕಾರಣ ಏನು ಈ ಸ್ಪರ್ಧೆಗೂ, ಕಾದಾಟಕ್ಕೂ ನಾಯಕ ಶಿವುಗೂ ಏನು ಕಾರಣ, ಸಂಬಂಧ ಏನು ಅನ್ನೋದನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಚಿರು ಸರ್ಜಾ ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದ್ರೆ ಹೆಚ್ಚು ಇಷ್ಟವಾಗುತ್ತಾರೆ. ಡಾನ್ಸ್ ಹಾಗೂ ಫೈಟಿಂಗ್ ನಲ್ಲಿ ತೆರೆ ಮೇಲೆ ಚಿರು ನೋಡೋಕೆ ಸಖತ್ ಥ್ರಿಲ್ ನೀಡ್ತಾರೆ.

    ಪಾಪ್ ಕಾರ್ನ್ ಮಂಕಿ ಟೈಗರ್, ಲವ್ ಮೊಕ್ಟೈಲ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ನಲ್ಲಿ ಗಮನ ಸೆಳೆದಿರುವ ಅಮೃತ ಐಯ್ಯಂಗಾರ್ ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಸಖತ್ ಇಷ್ಟವಾಗುತ್ತಾರೆ ಜೊತೆಗೆ ಭರವಸೆಯ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ತಾರಾ, ಕಿಶೋರ್ ಅಭಿನಯದ ಬಗ್ಗೆ ಮಾತನಾಡುವ ಹಾಗಿಲ್ಲ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ನಟಿ ತಾರಾ ಪುತ್ರ ಶ್ರೀಕೃಷ್ಣ ಬಾಲನಟನಾಗಿ ಪಾದಾರ್ಪಣೆ ಮಾಡಿದ್ದು, ಚಿತ್ರದಲ್ಲಿ ಶ್ರೀಕೃಷ್ಣನ ಮುದ್ದಾದ ನಟನೆ ನೋಡಲು ಖುಷಿಯಾಗುತ್ತೆ.

    ಸೂರಗ್ ಕೋಕಿಲ ಮ್ಯೂಸಿಕ್ ಚಿತ್ರದ ಸಂದರ್ಭ, ಸನ್ನೀವೇಶಕ್ಕೆ ತಕ್ಕ ಹಾಗೆ ಮೂಡಿಬಂದಿದ್ದು ಸ್ಯಾಂಡಲ್‍ವುಡ್‍ಗೆ ಮತ್ತೊಬ್ಬ ಭರವಸೆಯ ಯುವ ಸಂಗೀತ ನಿರ್ದೇಶಕ ಸಿಕ್ಕಿದ್ರು ಅಂದ್ರೆ ತಪ್ಪಾಗೊಲ್ಲ. ಸಾಹಸ ದೃಶ್ಯಗಳು ಮಾಸ್ ಪ್ರಿಯರ ಮನ ಸೆಳೆಯುತ್ತೆ. ರೆಗ್ಯೂಲರ್ ಸಿನಿಮಾ ಕಥೆಯೇ ಚಿತ್ರದಲ್ಲಿದ್ರು ಕೂಡ ನಿರ್ದೇಶಕರು ನೀಡಿರುವ ಹೊಸ ಸ್ಪರ್ಶ ನೋಡುಗರಿಗೆ ಇಷ್ಟವಾಗುತ್ತೆ. ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರದಲ್ಲಿರೋದ್ರಿಂದ ಇಡೀ ಫ್ಯಾಮಿಲಿ ಕುಳಿತು ಎಂಜಾಯ್ ಮಾಡಬಹುದು.

    ಚಿತ್ರ: ಶಿವಾರ್ಜುನ
    ನಿರ್ದೇಶನ: ಶಿವ ತೇಜಸ್
    ನಿರ್ಮಾಪಕ: ಶಿವಾರ್ಜುನ್
    ಸಂಗೀತ ನಿರ್ದೇಶನ: ಸುರಾಗ್ ಕೋಕಿಲ
    ಛಾಯಾಗ್ರಹಣ: ವೇಣು
    ತಾರಾಬಳಗ: ಚಿರಂಜೀವಿ ಸರ್ಜಾ, ಅಮೃತ ಐಯ್ಯಂಗರ್, ರವಿಕಿಶನ್, ಸಾಧಕೋಕಿಲ, ತಾರಾ, ಕಿಶೋರ್.

    ರೇಟಿಂಗ್: 3.5/5

  • ‘ಶಿವಾರ್ಜುನ’ನಾಗಿ ನಾಳೆ ಅಬ್ಬರಿಸಲಿದ್ದಾರೆ ಚಿರಂಜೀವಿ ಸರ್ಜಾ!

    ‘ಶಿವಾರ್ಜುನ’ನಾಗಿ ನಾಳೆ ಅಬ್ಬರಿಸಲಿದ್ದಾರೆ ಚಿರಂಜೀವಿ ಸರ್ಜಾ!

    ‘ಸಿಂಗ’ ಮತ್ತು ‘ಖಾಕಿ’ಯಲ್ಲಿ ಅಬ್ಬರಿಸಿದ್ದ ಚಿರು ಇದೀಗ ‘ಶಿವಾರ್ಜುನ’ನಾಗಿ ಎಲ್ಲರನ್ನು ರಂಜಿಸಲು ಬರುತ್ತಿದ್ದಾರೆ. ನಾಳೆ ಅಂದರೆ ಮಾರ್ಚ್ 12ರಂದು ಎಲ್ಲಾ ಚಿತ್ರಮಂದಿರಗಳಲ್ಲೂ ‘ಶಿವಾರ್ಜುನ’ ಲಗ್ಗೆ ಇಡುತ್ತಿದ್ದಾನೆ.

    ಸಿನಿಮಾ ಈಗಾಗಲೇ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವುದು ಎಲ್ಲರಿಗೂ ಗೊತ್ತೆ ಇದೆ. ಟೈಟಲ್ ನಿಂದ ಹಿಡಿದು, ಹೊಸಬರ ಎಂಟ್ರಿವರೆಗೆ ವಿಶೇಷವಾಗಿದೆ. ಸಿನಿಮಾದಲ್ಲಿ ಶಿವ-ಅರ್ಜುನನಿಗೆ ಸಂಬಂಧಿಸಿದಂತ ಎರಡು ಕ್ಯಾರೆಕ್ಟರ್ ಇದೆ. ಹೀಗಾಗಿ ಆ ಎರಡು ಕ್ಯಾರೆಕ್ಟರ್ ಗೆ ಮ್ಯಾಚ್ ಆಗುವಂತ ಟೈಟಲ್ ಹುಡುಕುವಾಗ ಚಿತ್ರತಂಡಕ್ಕೆ ಹೊಳೆದಿದ್ದು ಇದೆ ‘ಶಿವಾರ್ಜುನ’ ಹೆಸರು. ಕಾಕತಾಳೀಯವೆಂಬಂತೆ ಈ ಸಿನಿಮಾದ ನಿರ್ಮಾಪಕರ ಹೆಸರು ಕೂಡ ಶಿವಾರ್ಜುನ ಆಗಿದೆ. ಜೊತೆಗೆ ಈ ಚಿತ್ರ ನಿರ್ದೇಶಕರ ಹೆಸರು ಕೂಡ ಶಿವತೇಜಸ್. ಹೀಗಾಗಿ ಕಥೆಗೆ ಟೈಟಲ್ ಅದ್ಭುತವಾಗಿ ಮ್ಯಾಚ್ ಆಗುತ್ತಿದ್ದರಿಂದ ‘ಶಿವಾರ್ಜುನ’ನನ್ನೇ ಫೈನಲ್ ಮಾಡಿದ್ದಾರೆ ಅಂತಾರೆ ನಿರ್ದೇಶಕರು.

    ಇದೊಂದು ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಸಿನಿಮಾ. ಜನ ಸಿನಿಮಾಗೆ ಹೋಗೋದೆ ಮನರಂಜನೆಗಾಗಿ. ಆ ಎರಡು ಗಂಟೆಗಳ ಮನರಂಜನೆಯನ್ನ ‘ಶಿವಾರ್ಜುನ’ ಪಕ್ಕ ನೀಡಲಿದ್ದಾನೆ. ಕಾಮಿಡಿ, ಫ್ಯಾಮಿಲಿ, ಎಮೋಷನ್ ಹೀಗೆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿ ಅಡಕವಾಗಿದೆ. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ಬಳಗವೇ ಸಿನಿಮಾದಲ್ಲಿರುವುದರಿಂದ ಮನರಂಜನೆ ಸಿಗುವುದರಲ್ಲಿ ಅನುಮಾನವೇ ಇಲ್ಲ.

    ಇನ್ನು ಸಿನಿಮಾ ಇಷ್ಟು ಅದ್ಭುತವಾಗಿ ಮೂಡಿ ಬರಲು ಕಾರಣ ನಿರ್ಮಾಪಕ ಸಹಕಾರ ಅಂತಾರೆ ನಿರ್ದೇಶಕ ಶಿವತೇಜಸ್. ಸಿನಿಮಾಗೆ ಏನೆಲ್ಲಾ ಬೇಕು, ಕ್ಯಾರೆಕ್ಟರ್ ಗಳು, ಜಾಗ ಎಲ್ಲವನ್ನು ಕೇಳಿದ್ದಂತೆ ಒದಗಿಸಿಕೊಟ್ಟಿದ್ದಾರೆ. ಯಾವುದಕ್ಕೂ ಕಾಂಪ್ರೊಮೈಸ್ ಆಗುವ ಸಂಭವವೇ ಬಂದಿಲ್ಲ. ಒಬ್ಬ ಡೈರೆಕ್ಟರ್ ಏನ್ ನಿರೀಕ್ಷೆ ಮಾಡ್ತಾನೋ ಎಲ್ಲವನ್ನು ಒದಗಿಸಿದ್ದಾರೆ ಎಂಬ ಖುಷಿಯ ಮಾತುಗಳನ್ನಾಡಿದ್ದಾರೆ.

    ಶಿವ ತೇಜಸ್ ಕಥೆ – ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಶಿವಾರ್ಜುನ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿದ್ದಾರೆ. ಅಮೃತಾ ಅಯ್ಯಂಗಾರ್ ಮತ್ತು ಅಕ್ಷತಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕವಿರಾಜ್, ಯೋಗರಾಜ್ ಭಟ್ ಮತ್ತು ವಿ ನಾಗೇಂದ್ರ ಪ್ರಸಾದರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಸುರಾಗ್, ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ ಮತ್ತು ಕೆ.ಎಂ ಪ್ರಕಾಶ್ ಸಂಕಲನವಿದೆ. ನಾಳೆ ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರಲಿದೆ. ಇಡೀ ಫ್ಯಾಮಿಲಿ ಸಮೇತ ಕುಳಿತು ನೋಡುವಂತ ಕಂಟೆಂಟ್ ಸಿನಿಮಾದಲ್ಲಿದ್ದು, ವಾರಾಂತ್ಯಕ್ಕೆ ಒಂದೊಳ್ಳೆ ಸಿನಿಮಾ ನೋಡಿದ ಭಾವ ಮೂಡುವುದರಲ್ಲಿ ಸಂಶಯವಿಲ್ಲ.

  • ‘ಶಿವಾರ್ಜುನ’ ಆಗಿ ಅಬ್ಬರಿಸಲಿದ್ದಾರೆ ಚಿರಂಜೀವಿ ಸರ್ಜಾ!

    ‘ಶಿವಾರ್ಜುನ’ ಆಗಿ ಅಬ್ಬರಿಸಲಿದ್ದಾರೆ ಚಿರಂಜೀವಿ ಸರ್ಜಾ!

    ಸ್ಯಾಂಡಲ್‍ವುಡ್ ಪ್ರಿನ್ಸ್, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ 12ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಅಭಿಮಾನಿಗಳಿಗೆ ಸಂತಸ ನೀಡಿದೆ.

    ಇದೊಂದು ಆ್ಯಕ್ಷನ್ ಕಂ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾವಾಗಿದೆ. ಚಿರು ಈಗಾಗಲೇ ‘ಸಿಂಗ’ ಮತ್ತು ‘ಖಾಕಿ’ಯಲ್ಲಿ ಅಬ್ಬರಿಸಿದ್ದು, ‘ಶಿವಾರ್ಜುನ’ ಮೇಲೆ ಪ್ರೇಕ್ಷಕರಿಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ ಈ ಸಿನಿಮಾದಲ್ಲಿ ಮತ್ತೊಂದು ವಿಶೇಷತೆಯನ್ನು ಕಾಣಬಹುದು. ಸಿನಿಮಾ ಆ್ಯಕ್ಷನ್ ಕಂ ಫ್ಯಾಮಿಲಿ ಸೆಂಟಿಮೆಂಟೇ ಇರಬಹುದು ಆದ್ರೆ ಶಿವನ ವಿಚಾರ ತಾಂಡವವಾಡುತ್ತಿದೆ. ಟೈಟಲ್ ‘ಶಿವಾರ್ಜುನ’ ನಿರ್ಮಾಪಕರು ಶಿವಾರ್ಜುನ್, ನಿರ್ದೇಶಿಸಿರುವವರು ಕೂಡ ಶಿವತೇಜಸ್. ಹೀಗಾಗಿ ಸಿನಿಮಾದ ಮೇಲೆ ಶಿವನ ಆಶೀರ್ವಾದ ಕೊಂಚ ಹೆಚ್ಚೇ ಇರುವಂತಾಗಿದೆ.

    ಕಂಪ್ಲೀಟ್ ಆ್ಯಕ್ಷನ್ ಸಿನಿಮಾದಲ್ಲಿ ಮಾಡಬೇಕೆಂಬ ಆಸೆಯಿದ್ದ ಚಿರುಗೆ ಈ ಸಿನಿಮಾ ಆ ಕನಸನ್ನು ನನಸು ಮಾಡಿದೆಯಂತೆ. ಹೀಗಾಗಿ ‘ಶಿವಾರ್ಜುನ’ನ ಬಗ್ಗೆ ಚಿರು ಹೇಳೋದು ಹೀಗೆ, ‘ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಇಂಥದ್ದೊಂದು ಸಿನಿಮಾ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ಈ ಚಿತ್ರ ನನಗೆ ಸ್ಪೆಷಲ್. ಅದು ನಾನು ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ಅಲ್ಲ. ನಿರ್ಮಾಪಕ ಶಿವಾರ್ಜುನ್ ಅಂಕಲ್ ಮಾಡುತ್ತಿರುವ ಚಿತ್ರ ಎಂಬುದು ವಿಶೇಷ. ಅವರು ನಮ್ಮ ಫ್ಯಾಮಿಲಿಯವರು. ಅವರಿಗಾಗಿ ಮಾಡಿದ ಚಿತ್ರವಿದು. ಹಾಗಾಗಿ, ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ಕೊಡಬೇಕು. ಪ್ರತಿಭಾವಂತರು ಸೇರಿ ಮಾಡಿರುವ ಚಿತ್ರವಿದು. ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ’ ಎಂದಿದ್ದಾರೆ.

    ಶಿವ ತೇಜಸ್ ಕಥೆ – ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಶಿವಾರ್ಜುನ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿದ್ದಾರೆ. ಅಮೃತಾ ಅಯ್ಯಂಗಾರ್ ಮತ್ತು ಅಕ್ಷತಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕವಿರಾಜ್, ಯೋಗರಾಜ್ ಭಟ್ ಮತ್ತು ವಿ ನಾಗೇಂದ್ರ ಪ್ರಸಾದರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಸುರಾಗ್, ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ ಮತ್ತು ಕೆ.ಎಂ ಪ್ರಕಾಶ್ ಸಂಕಲನವಿದೆ.

  • ಶಿವಾರ್ಜುನ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ

    ಶಿವಾರ್ಜುನ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ

    ಬೆಂಗಳೂರು: ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ‘ಶಿವಾರ್ಜುನ’ ಚಿತ್ರದ ಫಸ್ಟ್ ಲುಕ್ ಟೀಸರ್ ಧ್ರುವಸರ್ಜಾ ಬಿಡುಗಡೆ ಮಾಡಿದರು.

    ಇತ್ತೀಚೆಗೆ ನಡೆದ ನಾಯಕ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ದಿನ ಈ ಫಸ್ಟ್ ಲುಕ್ ಟೀಸರ್ ಅನಾವರಣಗೊಂಡಿದೆ. ನಟಿ ತಾರಾ ವೇಣು, ಮೇಘನಾ ರಾಜ್, ನಿರ್ಮಾಪಕ ಉದಯ್ ಕೆ ಮೆಹ್ತಾ, ಚಿತ್ರತಂಡ ಹಾಗೂ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಈ ಫಸ್ಟ್ ಲುಕ್ ಟೀಸರ್ ಲೋಕಾರ್ಪಣೆಯಾಗಿದೆ.


    ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಮಾತಿನ ಜೋಡಣೆ ಮುಕ್ತಾಯವಾಗಿದೆ. ಹೆಚ್.ಸಿ.ವೇಣು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರಾಗ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ವಿನೋದ್, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ಚೇತನ್ ಕುಮಾರ್ (ಬಹದ್ದೂರ್) ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

    ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಅಮೃತ, ಅಕ್ಷತ, ತಾರಾ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧುಕೋಕಿಲ, ರವಿ ಕಿಶನ್, ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರಿದ್ದಾರೆ.

  • ‘ಶಿವಾರ್ಜುನ’ನಿಗಾಗಿ ವಾಯ್ಸ್ ಡಬ್ ಮಾಡಿದ ತಾರಾ ಪುತ್ರ ಶ್ರೀಕೃಷ್ಣ!

    ‘ಶಿವಾರ್ಜುನ’ನಿಗಾಗಿ ವಾಯ್ಸ್ ಡಬ್ ಮಾಡಿದ ತಾರಾ ಪುತ್ರ ಶ್ರೀಕೃಷ್ಣ!

    ಬೆಂಗಳೂರು: ಎಂ.ಬಿ. ಮಂಜುಳಾ ಶಿವಾರ್ಜುನ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಶಿವಾರ್ಜುನ. ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಟಿಸಿರೋ ವಿಚಾರ ಗೊತ್ತೇ ಇದೆ. ಇದರಲ್ಲಿ ತಾರಾ ಕೂಡಾ ಬಹುಮುಖ್ಯವಾದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕಾಗಿ ನಟಿ ತಾರಾ ಅವರ ಮುದ್ದಿನ ಮಗ ಶ್ರೀಕೃಷ್ಣ ಈ ಚಿತ್ರಕ್ಕಾಗಿ ಮೊದಲ ಬಾರಿ ವಾಯ್ಸ್ ಡಬ್ ಮಾಡಿದ್ದಾನೆ.

    ತಾರಾ ಅವರೇ ಮಗ ಶ್ರೀಕೃಷ್ಣನನ್ನು ಕೂರಿಸಿಕೊಂಡು ಡಬ್ಬಿಂಗ್ ಕಾರ್ಯವನ್ನು ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ. ಈ ಸಿನಿಮಾಗಾಗಿ ಪುಟ್ಟ ಶ್ರೀಕೃಷ್ಣ ತೊದಲು ಮಾತುಗಳ ಮೂಲಕ ಲೀಲಾಜಾಲವಾಗಿಯೇ ಡೈಲಾಗ್ ಹೇಳುತ್ತಾ ಡಬ್ ಮಾಡಿದ್ದಾನೆ. ತಾರಾ ದಶಕಗಳಿಂದಲೂ ಸಿನಿಮಾ ರಂಗದ ಭಾಗವಾಗಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು. ಅವರ ಮಗ ಕೂಡಾ ಭವಿಷ್ಯದಲ್ಲಿ ಚಿತ್ರರಂಗಕ್ಕೇ ಪಾದಾರ್ಪಣೆ ಮಾಡೋ ಲಕ್ಷಣವೂ ಈ ಮೂಲಕ ಗೋಚರಿಸಿದೆ. ಮಗನ ಮೊದಲ ತೊದಲು ನುಡಿಗಳ ಡಬ್ಬಿಂಗ್ ಕಾರ್ಯದ ಸಂದರ್ಭದಲ್ಲಿ ತಾರಾ ಅವರ ಮುಖದಲ್ಲಿದ್ದ ಖುಷಿಯೇ ಅದನ್ನು ಸೂಚಿಸುವಂತಿದೆ.

    ಶಿವಾರ್ಜುನ ನಿಶ್ಚಿತಾ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ. ಮಂಜುಳಾ ಶಿವಾರ್ಜುನ್ ನಿರ್ಮಾಣ ಮಾಡಿರುವ ಮೊದಲ ಚಿತ್ರ. ಚಿತ್ರರಂಗದಲ್ಲಿ ಬಹುಕಾಲದಿಂದಲೂ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಶಿವಾರ್ಜುನ್ ಪಾಲಿನ ಮೊದಲ ಹೆಜ್ಜೆಯೂ ಹೌದು. ಆರಂಭದಲ್ಲಿ ಶೀರ್ಷಿಕೆಯೇ ಇಲ್ಲದೇ ಚಿತ್ರೀಕರಣ ಶುರು ಮಾಡಿ ನಂತರ ನಿರ್ಮಾಪಕ ಶಿವಾರ್ಜನ್ ಹೆಸರನ್ನೇ ಕಥೆಗೆ ಪೂರಕವಾಗಿರೋದರಿಂದ ಶೀರ್ಷಿಕೆಯಾಗಿಡಲಾಗಿದೆ. ಇತ್ತೀಚೆಗಷ್ಟೇ ತೆರೆ ಕಂಡು ಗೆದ್ದಿದ್ದ ಸಿಂಗ ಚಿತ್ರದಲ್ಲಿ ತಾರಾ ಚಿರು ಅಮ್ಮನಾಗಿ ಮನೋಜ್ಞ ಅಭಿನಯ ನೀಡಿದ್ದರು. ಇದೀಗ ಶಿವಾರ್ಜುನ ಚಿತ್ರದಲ್ಲಿಯೂ ತಾರಾ ಸಾಥ್ ಕೊಟ್ಟಿದ್ದಾರೆ. ಇದಕ್ಕೆ ವಾಯ್ಸ್ ಡಬ್ ಮಾಡೋ ಮೂಲಕ ತಾರಾ ಪುತ್ರ ಶ್ರೀಕೃಷ್ಣನೂ ಜೊತೆಯಾಗಿದ್ದಾನೆ.

    ಈ ಹಿಂದೆ ಧೈರ್ಯಂ, ಲೌಡ್ ಸ್ಪೀಕರ್ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಶಿವತೇಜಸ್ ಶಿವಾರ್ಜುನನ ಸಾರಥ್ಯ ವಹಿಸಿಕೊಂಡಿದ್ದಾರೆ. ಇದೊಂದು ರಗಡ್ ಕಥೆ ಹೊಂದಿರೋ ಚಿತ್ರ ಅನ್ನೋದಕ್ಕೆ ಚಿರಂಜೀವಿ ಸರ್ಜಾರ ಕೆಲ ಗೆಟಪ್ಪುಗಳೇ ಸಾಕ್ಷಿಯಂತಿವೆ. ಆಕ್ಷನ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿರೋ ಈ ಚಿತ್ರಕ್ಕೆ ಹೆಚ್.ಸಿ ವೇಣು ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಸುರಾಗ್ ಸಂಗೀತ, ರವಿವರ್ಮಾ, ವಿನೋದ್, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಸಿಂಗ ಚಿತ್ರದ ಮೂಲಕ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಚಿರಂಜೀವಿ ಸರ್ಜಾ ಇದೀಗ ಮತ್ತೊಮ್ಮೆ ಆಕ್ಷನ್ ಮೂಡಿನಲ್ಲಿ ಎಲ್ಲ ವರ್ಗದ ಪ್ರೇಕ್ಷಕರನ್ನೂ ಮುದಗೊಳಿಸೋ ಇರಾದೆಯೊಂದಿಗೆ ಅಡಿಯಿರಿಸುತ್ತಿದ್ದಾರೆ.

  • ಚಿರಂಜೀವಿ ಸರ್ಜಾ ಅಭಿನಯದ ಚಿತ್ರಕ್ಕೆ `ಶಿವಾರ್ಜುನ’ ಶೀರ್ಷಿಕೆ

    ಚಿರಂಜೀವಿ ಸರ್ಜಾ ಅಭಿನಯದ ಚಿತ್ರಕ್ಕೆ `ಶಿವಾರ್ಜುನ’ ಶೀರ್ಷಿಕೆ

    ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ `ಪ್ರೊಡಕ್ಷನ್ ನಂ 1` ಚಿತ್ರ ಕೆಲವು ದಿನಗಳ ಹಿಂದೆ ಆರಂಭವಾಗಿ, ನಿರಂತರ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಕ್ಕೆ ಈಗ `ಶಿವಾರ್ಜುನ` ಎಂದು ನಾಮಕರಣ ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಾರ್ಜುನ್ ಅವರ ನಿರ್ಮಾಣದ ಚಿತ್ರವಿದು. ನಿರ್ಮಾಪಕರ ಹೆಸರೆ ಚಿತ್ರದ ಶೀರ್ಷಿಕೆಯಾಗಿರುವುದು ವಿಶೇಷ.


    ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯುತ್ತಿದೆ. ಹೆಚ್.ಸಿ.ವೇಣು ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರಾಗ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ವಿನೋದ್, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿದೆ. ಯೋಗರಾಜ್ ಭಟ್ ಹಾಗೂ ಚೇತನ್‍ಕುಮಾರ್ (ಬಹದ್ದೂರ್) ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.


    ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಅಮೃತ, ಅಕ್ಷತ, ತಾರಾ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧುಕೋಕಿಲ, ರವಿ ಕಿಶನ್, ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರಿದ್ದಾರೆ.