Tag: ಶಿವಾಜಿ ಮಹಾರಾಜ್

  • ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಆರಗ ಜ್ಞಾನೇಂದ್ರ

    ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೆರಡು ದಿನದಿಂದ ಬೆಳಗಾವಿಯಲ್ಲಿ ಪುಂಡತನ ಹೆಚ್ಚಾಗುತ್ತಿದ್ದು, ನಿನ್ನೆ ರಾತ್ರಿಯೂ ಗುಂಪು ಸೇರಿ ಸರ್ಕಾರಿ ವಾಹನಗಳಿಗೆ ಬೆಂಕಿ ಇಡುವ ಮೂಲಕ ಶಾಂತಿಯನ್ನು ಕದಡುವ ಕೆಲಸ ಮಾಡಿದ್ದಾರೆ. ಇಂತಹ ಕೆಲಸವನ್ನು ಮಾಡಿದವರು ಯಾರೇ ಆದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಇನ್ನೊಮ್ಮೆ ಇಂತಹ ಪ್ರಕರಣ ಆಗದಿರುವ ಹಾಗೇ ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂಓದಿ:  ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ಅವರು ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿದ್ದಾರೆ. ಇವರಿಬ್ಬರೂ ಪ್ರತಿಯೊಬ್ಬ ನಾಗರಿಕರೂ ಹೆಮ್ಮೆ ಹಾಗೂ ಗರ್ವದಿಂದ ನೆನಸಿಕೊಳ್ಳುವಂತಹ ಭಾರತೀಯ ಪುತ್ರರು. ಇವರ ಹೆಸರಿನಲ್ಲಿ, ಕೆಲವು ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ, ಭಾಷೆ ಹಾಗೂ ಸಹೋದರತ್ವ ಬಾಂಧವ್ಯವನ್ನು ಕೆಡಿಸುವಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಜೊತೆಗೆ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಗೆ ಹಾನಿ ಮಾಡಿರುವ ಘಟನೆಯನ್ನು ಖಂಡಿಸುತ್ತೇನೆ ಎಂದರು. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

    ಘಟನೆಯ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಬೆಂಗಳೂರು ಹಾಗೂ ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯ ಕಾಪಾಡಲು ಸಹಕರಿಸೇಕೆಂದು, ವಿನಂತಿಸುತ್ತೇನೆ ಎಂದು ಮನವಿ ಮಾಡಿದರು. ಇದನ್ನೂ ಓದಿ: MES ಪುಂಡಾಟಿಕೆಯನ್ನು ಖಂಡಿಸಿದ ಸಿಎಂ – 27 ಮಂದಿ ಅರೆಸ್ಟ್

    ರಾಯಣ್ಣ ಮೂರ್ತಿ ಭಂಗ ಪ್ರಕರಣದ ಕುರಿತು ಮಾತನಾಡಿದ ಅವರು, ರಾಯಣ್ಣ ಮೂರ್ತಿ ಭಂಗ ಮಾಡಿದವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಕೆಲವರ ವಶ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

  • ಆಗ್ರಾ ಮೊಘಲ್ ಮ್ಯೂಸಿಯಂಗೆ ಶಿವಾಜಿ ಮಹಾರಾಜ್ ಹೆಸರು: ಯೋಗಿ ಆದಿತ್ಯನಾಥ್

    ಆಗ್ರಾ ಮೊಘಲ್ ಮ್ಯೂಸಿಯಂಗೆ ಶಿವಾಜಿ ಮಹಾರಾಜ್ ಹೆಸರು: ಯೋಗಿ ಆದಿತ್ಯನಾಥ್

    – ಉತ್ತರ ಪ್ರದೇಶದಲ್ಲಿ ಗುಲಾಮ ಮನಸ್ಥಿತಿಗೆ ಸ್ಥಾನವಿಲ್ಲ

    ಲಕ್ನೋ: ಆಗ್ರಾದ ಸುಪ್ರಸಿದ್ಧ ತಾಜ್ ಮಹಲ್ ಆವರಣದಲ್ಲಿರುವ ಮೊಘಲ್ ವಸ್ತು ಸಂಗ್ರಹಾಲಯಕ್ಕೆ ಮರು ನಾಮಕರಣ ಮಾಡಲಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಎಂದು ಹೆಸರಿಡಲಾಗಿದೆ. ಈ ಕುರಿತು ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಪಷ್ಟಪಡಿಸಿದ್ದಾರೆ.

    ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ ಎಂದು ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ. ಇಂತಹ ಗುಲಾಮ ಮನಸ್ಥಿತಿಯ ಯಾವುದೇ ವಿಷಯವನ್ನು ಬಿಜೆಪಿ ಸರ್ಕಾರ ತೆಗೆದು ಹಾಕುತ್ತದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ನಿರ್ಮಾಣ ಹಂತದಲ್ಲಿರುವ ಆಗ್ರಾದ ವಸ್ತುಸಂಗ್ರಹಾಲಯಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಎಂದು ನಾಮಕರಣ ಮಾಡಲಾಗಿದೆ. ಹೊಸ ಉತ್ತರ ಪ್ರದೇಶದಲ್ಲಿ ಗುಲಾಮಿ ಮನಸ್ಥಿತಿಗಳಿಗೆ ಯಾವುದೇ ರೀತಿಯ ಸ್ಥಾನವಿಲ್ಲ. ಶಿವಾಜಿ ಮಹಾರಾಜ್ ನಮ್ಮ ಹೀರೋ. ಜೈ ಹಿಂದ್, ಜೈ ಭಾರತ್ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೇವಲ ಆಗ್ರಾದ ವಸ್ತುಸಂಗ್ರಹಾಲಯ ಮಾತ್ರವಲ್ಲ ಅಲಹಬಾದ್‍ಗೆ ಪ್ರಯಾಗ್‍ರಾಜ್ ಸೇರಿ ಯೋಗಿ ಆದಿತ್ಯನಾಥ್ ಅವರು ತಮ್ಮ 3 ವರ್ಷಗಳ ಆಡಳಿತಾವಧಿಯಲ್ಲಿ ಹಲವು ಸ್ಥಳಗಳು, ರಸ್ತೆಗಳ ಹೆಸರನ್ನು ಬದಲಾಯಿಸಿದ್ದಾರೆ. ಅಲ್ಲದೆ ಗುಲಾಮಿ ಸಂಸ್ಕೃತಿಗೆ ಉತ್ತರ ಪ್ರದೇಶದಲ್ಲಿ ಸ್ಥಾನಮಾನವಿಲ್ಲ ಎಂದು ಹೇಳಿದ್ದಾರೆ.

    ಮೊಘಲ್ ಮ್ಯೂಸಿಮ್ ಯೋಜನೆಯನ್ನು ಕಳೆದ ಬಾರಿಯ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ 2015ರಲ್ಲಿ ಜಾರಿಗೆ ತರಲಾಗಿತ್ತು. ತಾಜ್ ಮಹಲ್ ಬಳಿಯ ಒಟ್ಟು 6 ಎಕರೆ ಪ್ರದೇಶದಲ್ಲಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ವಸ್ತು ಸಂಗ್ರಹಾಲಯವು ಮೊಘಲ್ ಸಂಸ್ಕೃತಿ, ಕಲಾಕೃತಿಗಳು, ವರ್ಣಚಿತ್ರಗಳು, ಪಾಕ ಪದ್ಧತಿ, ವೇಷ ಭೂಷಣ, ಮೊಘಲ್ ಯುಗ, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಹಾಗೂ ಪ್ರದರ್ಶನ ಕಲೆಗಳನ್ನು ಒಳಗೊಂಡಿದೆ.