Tag: ಶಿವಸೇನ

  • ಈ ವೇಳೆ ವಿಪಕ್ಷ ಹೇಗಿರಬೇಕೆಂದು ರಾಹುಲ್ ಗಾಂಧಿ ತೋರಿಸಿದ್ದಾರೆ: ಶಿವಸೇನೆ

    ಈ ವೇಳೆ ವಿಪಕ್ಷ ಹೇಗಿರಬೇಕೆಂದು ರಾಹುಲ್ ಗಾಂಧಿ ತೋರಿಸಿದ್ದಾರೆ: ಶಿವಸೇನೆ

    – ರಾಹುಲ್ ಗಾಂಧಿಯನ್ನು ಹಾಡಿಹೊಗಳಿದ ಸೇನೆ

    ಮುಂಬೈ: ದೇಶ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ವಿರೋಧ ಪಕ್ಷ ಹೇಗೆ ವರ್ತಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೋರಿಸಿಕೊಟ್ಟಿದ್ದಾರೆ ಎಂದು ರಾಹುಲ್ ನಡೆಯನ್ನು ಶಿವಸೇನೆ ಮೆಚ್ಚಿಕೊಂಡಿದೆ.

    ಈ ವಿಚಾರವಾಗಿ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ದೇಶದ ಹಿತಾಸಕ್ತಿಗಾಗಿ ರಾಹುಲ್ ಗಾಂಧಿ ಅವರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು, ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಕುಳಿತು ಚರ್ಚಿಸಬೇಕು. ರಾಹುಲ್ ಗಾಂಧಿ ಮತ್ತು ಮೋದಿ ಅವರ ರಾಜಕೀಯ ಹಿತಾಸಕ್ತಿಗಳು ಬೇರೆ ಇರಬಹುದು. ಆದರೆ ಇದು ಜಗಳವಾಡುವ ಸಮಯವಲ್ಲ ದೇಶವು ಒಗ್ಗಟ್ಟಿನಿಂದ ಈ ರೋಗದ ವಿರುದ್ಧ ಹೋರಾಡಬೇಕು ಎಂದು ಬರೆದುಕೊಂಡಿದೆ.

    ಜನರಲ್ಲಿ ರಾಹುಲ್ ಗಾಂಧಿ ಬಗ್ಗೆ ಬೇರೆ ಅಭಿಪ್ರಾಯಗಳಿವೆ. ಹಾಗೆಯೇ ಪಿಎಂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆಯೂ ಬೇರೆ ಬೇರೆ ಅಭಿಪ್ರಾಯಗಳಿವೆ. ಬಿಜೆಪಿ ಪಾರ್ಟಿ ಅರ್ಧದಷ್ಟು ಯಶಸ್ಸನ್ನು ರಾಹುಲ್ ಗಾಂಧಿಯವರನ್ನು ತೆಗಳುವುದಿರಿಂದ ಪಡೆದುಕೊಂಡಿದೆ. ಇದು ಇಂದಿಗೂ ಮುಂದುವರಿದಿದೆ. ಆದರೆ ಈಗ ದೇಶದಲ್ಲಿರುವ ಬಿಕ್ಕಟ್ಟಿನ ನಡುವೆ ರಾಹುಲ್ ಗಾಂಧಿಯವರು ತೆಗೆದುಕೊಂಡ ನಿಲುವುಗಳನ್ನು ನಾವು ಪ್ರಶಂಸಿಸಬೇಕಾಗಿದೆ ಎಂದು ಶಿವಸೇನೆ ಹೇಳಿದೆ.

    ದೇಶವು ಕೊರೊನಾ ವೈರಸ್ ನಿಂದ ಬಿಕ್ಕಟ್ಟಿನಲ್ಲಿ ಸಿಲುಕಿದ ಸಮಯದಲ್ಲಿ ರಾಹುಲ್ ಗಾಂಧಿ ಅವರು ವಿರೋಧ ಪಕ್ಷ ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಹುಲ್ ಗಾಂಧಿಯವರು ಈ ನಿಲುವುಗಳಿಂದ ಒಂದು ಮಾದರಿಯಾಗಿ ನಿಂತಿದ್ದಾರೆ. ಜೊತೆಗೆ ಮೊದಲಿನಿಂದಲೂ ಕೊರೊನಾ ವೈರಸ್ ಬಗ್ಗೆ ಕೇಂದ್ರಕ್ಕೆ ಎಚ್ಚರಿಕೆ ಕೊಡುತ್ತಾ ಬಂದಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತಿಳಿಸಿದೆ.

    ಬಿಜೆಪಿಯವರು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುವ ತವಕದಲ್ಲಿ ಇದ್ದರೆ, ಆಗಲೇ ರಾಹುಲ್ ಗಾಂಧಿ ಕೊರೊನಾ ವೈರಸ್ ಅನ್ನು ನಿಭಾಯಿಸುವ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದರು. ಜೊತೆಗೆ ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳ ರಫ್ತು ಮಾಡುವುದನ್ನು ನಿಲ್ಲಿಸುವಂತೆ ರಾಹುಲ್ ಗಾಂಧಿ ಪದೇ ಪದೇ ಸರ್ಕಾರವನ್ನು ಒತ್ತಾಯಿಸುತ್ತಿದ್ದರು ಎಂದು ಸೇನಾ ತನ್ನ ಮುಖವಾಣಿಯಲ್ಲಿ ಬರೆದುಕೊಂಡಿದೆ.

    ಗುರುವಾರ ಮಾತನಾಡಿದ್ದ ರಾಹುಲ್ ಗಾಂಧಿ, ಕೊರೊನಾ ವೈರಸ್ ದೇಶದ ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಎರಡು ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಿದೆ. ಆರೋಗ್ಯದ ಜೊತೆಗೆ ಆರ್ಥಿಕತೆ ಮೇಲೆ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದರು. ಜೊತೆಗೆ ನಾನು ಈ ಸಮಯದಲ್ಲಿ ಕೇಂದ್ರ ಸರ್ಕಾರದ ತಪ್ಪುಗಳನ್ನು ಹುಡುಕಲು ಹೋಗುವುದಿಲ್ಲ. ಬದಲಿಗೆ ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದರು.

    ಕೊರೊನಾ ವಿಚಾರದಲ್ಲಿ ಲಾಕ್‍ಡೌನ್ ಒಂದೇ ಮುಖ್ಯವಲ್ಲ. ಇದರೊಂದಿಗೆ ಕೊರೊನಾ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ವಲಯಗಳಲ್ಲಿ ಕ್ಷಿಪ್ರವಾಗಿ ಟೆಸ್ಟಿಂಗ್‍ಗಳು ನಡೆಯಬೇಕು. ವೈರಸ್ ಹರಡುವ ವೇಗದಲ್ಲೇ ನಮ್ಮ ಪರೀಕ್ಷೆಗಳು ನಡೆದಾಗ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಅಂದಾಜು 350 ಟೆಸ್ಟ್ ಗಳು ನಡೆದಿದೆ. ಆದರೆ ಕೊರೊನಾ ವೈರಸ್ ಪ್ರಭಾವ ಮುಂದೆ ಇದು ಅತಿ ಕಡಿಮೆ ಟೆಸ್ಟ್ ಗಳಾಗಿದ್ದು, ಸರ್ಕಾರ ಟೆಸ್ಟಿಂಗ್ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದರು.

  • ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸಾಧ್ಯತೆ

    ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸಾಧ್ಯತೆ

    ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಂದು 8 ದಿನಗಳು ಕಳೆದರೂ ಸರ್ಕಾರ ರಚನೆಯಾಗಿಲ್ಲ. ಹೀಗಾಗಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ.

    ಈಗಿರುವ ವಿಧಾನಸಭೆ ಅವಧಿಯ ಅಧಿಕಾರಾವಧಿ ನವೆಂಬರ್ 8ಕ್ಕೆ ಕೊನೆಗೊಳ್ಳಲಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ಮುಖಂಡ ಸುಧೀರ್ ಮುಂಗಂಟಿವರ್, ನವೆಂಬರ್ 7ರೊಳಗೆ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನ ನಮಗೆ ಬರೆದಿಟ್ಟುಕೊಳ್ಳಿ – ಬಿಜೆಪಿ ಇಲ್ಲದೇ ಸರ್ಕಾರ ರಚನೆಗೆ ಶಿವಸೇನೆ ಪ್ಲಾನ್

    ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಶಿವಸೇನ ಮಾತುಕತೆ ವಿಳಂಬವಾಗಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಮಾತುಕತೆ ನಡೆಸಿ, ಸರ್ಕಾರ ರಚಿಸಲಾಗುತ್ತದೆ. ರಾಜ್ಯದ ಜನತೆ ಯಾವುದೇ ಒಂದು ಪಕ್ಷಕ್ಕೆ ಬಹುಮತ ನೀಡಿಲ್ಲ. ಬಿಜೆಪಿ-ಶಿವಸೇನಯನ್ನು ಒಳಗೊಂಡ ಮೈತ್ರಿಗೆ ಜನರು ಬಹುಮತ ನೀಡಿದ್ದಾರೆ. ನಮ್ಮ ಮೈತ್ರಿ ಫೆವಿಕಾಲ್ ಅಥವಾ ಅಂಬುಜಾ ಸಿಮೆಂಟ್‍ಗಿಂತ ಬಲವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ

    ಈ ನಡುವೆ ಮುಖ್ಯಮಂತ್ರಿ ಪಟ್ಟ ಬೇಕು ಅಂತ ಜೋತುಬಿದ್ದು ಬಿಜೆಪಿಗೆ ಬಿಸಿತುಪ್ಪವಾಗಿರುವ ಶಿವಸೇನೆ ಈಗ ಎನ್‍ಸಿಪಿ ಜೊತೆ ಡೈರೆಕ್ಟ್ ಡೀಲಿಂಗ್‍ಗೆ ಮುಂದಾಗಿದೆ. ಫೋನ್‍ಕಾಲ್ ಮೂಲಕ ಎನ್‍ಸಿಪಿ ಮುಖಂಡ ಶರದ್ ಪವಾರ್ ಜೊತೆ ಶಿವಸೇನ ನಾಯಕ ಉದ್ಧವ್ ಠಾಕ್ರೆ ಮಾತುಕತೆ ನಡೆಸಿದ್ದಾರೆ. ಈ ಬೆನ್ನಲ್ಲೇ ಶಿವಸೇನೆಯ ನಾಯಕರೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಿವಸೇನ ಸಂಜಯ್ ರಾವತ್ ಹೇಳಿದ್ದಾರೆ.

    ಎನ್‍ಸಿಪಿ-ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿ ಕೂರಲಿವೆ ಎಂದು ಎನ್‍ಸಿಪಿಯ ಅಜಿತ್ ಪವಾರ್ ಒಂದು ಹೇಳಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಹಾರಾಷ್ಟ್ರ ಕೈ ಮುಖಂಡರಾದ ಪೃಥ್ವಿರಾಜ್ ಚೌವ್ಹಾಣ್, ಅಶೋಕ್ ಚೌವ್ಹಾಣ್ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ, ಜಾರ್ಖಂಡ್‍ಗೆ ನವೆಂಬರ್ 30ರಿಂದ ಡಿಸೆಂಬರ್ 20ರವೆಗೆ 5 ಹಂತದಲ್ಲಿ ಚುನಾವಣೆಯಲ್ಲಿದ್ದು, ಡಿಸೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  • ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್ ಬ್ಯಾನ್ ಮಾಡಲಾಗಿತ್ತು: ಶಿವಸೇನೆ

    ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್ ಬ್ಯಾನ್ ಮಾಡಲಾಗಿತ್ತು: ಶಿವಸೇನೆ

    ಮುಂಬೈ: ನೋಟು ಅಮಾನ್ಯೀಕರಣ ವಿಫಲವಾಗಿದ್ದಕ್ಕೆ ಪ್ರಧಾನಿ ಮೋದಿ ಹೇಗೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಮೋದಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್‍ಬ್ಯಾನ್ ಮಾಡಿದ್ದರು ಎಂದು ಬಿಜೆಪಿ ವಿರುದ್ಧ ಮಿತ್ರಪಕ್ಷ ಶಿವಸೇನೆ ಕಿಡಿಕಾರಿದೆ.

    ನೋಟ್ ಬ್ಯಾನ್ ಬಳಿಕ ಶೇ.99.3ರಷ್ಟು ಹಳೆಯ ನೋಟುಗಳು ವಾಪಾಸ್ಸಾಗಿವೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ. ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿ ದಾರಿ ತಪ್ಪಲು ಕಾರಣವಾಗಿದೆ. ನೋಟು ಅಮಾನ್ಯೀಕರಣದ ಪರಿಣಾಮದಿಂದಾಗಿ ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯಲ್ಲಿ ಕುಸಿಯುತ್ತಿದೆ. ಅಂದು ನೋಟ್ ಬ್ಯಾನ್ ನಿಂದಾಗಿ ಸುಮಾರು 100 ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಶಿವಸೇನೆ ಹೇಳಿದೆ.

    ಇಂದಿನ ದೇಶದ ಆರ್ಥಿಕ ಪರಿಸ್ಥಿತಿಗೆ ಪ್ರಧಾನಿ ಮೋದಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ನೋಟು ಅಮಾನ್ಯೀಕರಣದ ವಿಫಲ ಯತ್ನಕ್ಕೆ ಯಾವ ರೀತಿಯಲ್ಲಿ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದೆ. ಕೇವಲ ಪ್ರಚಾರಕ್ಕಾಗಿ ನೋಟ್ ಬ್ಯಾನ್ ಮಾಡಲಾಗಿತ್ತು ಎಂದು ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಟೀಕಿಸಿದೆ.

     

    500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣದ ಬಳಿಕ ಮಾತನಾಡಿದ್ದ ಪ್ರಧಾನಿ ಮೋದಿ, ನನಗೆ 50 (ಡಿಸೆಂಬರ್ 30, 2018ವರೆಗೆ) ದಿನಗಳ ಅವಕಾಶ ನೀಡಿ. ಒಂದು ವೇಳೆ ನಾನು ತೆಗೆದುಕೊಂಡಿರುವ ಈ ನಿರ್ಧಾರ ತಪ್ಪಾಗಿದ್ದರೆ, ನೀವು ನೀಡುವ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆಯನ್ನಾಧರಿಸಿ ಶಿವಸೇನೆ ನಿಮ್ಮ ತಪ್ಪಿಗೆ ಪ್ರಾಯಶ್ಚಿತವೇನು ಎಂದು ವ್ಯಂಗ್ಯ ಮಾಡಿದೆ.

    ಅರುಣ್ ಜೇಟ್ಲಿ ತಿರುಗೇಟು:
    ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಗೊಳಿಸಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರದ ಈ ಕ್ರಮದಿಂದ ಇಂದು ದೇಶದ ಆರ್ಥಿಕತೆ ಸುಗಮವಾಗಿ ನಡೆಯಲು ಸಹಾಯಕವಾಗಿದೆ. ಅಲ್ಲದೇ ದಾಖಲೆಯ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ನೋಟು ಅಮಾನ್ಯೀಕರಣದ ಮೊದಲು 2 ವರ್ಷಗಳಲ್ಲಿ ತೆರಿಗೆ ಸಂಗ್ರಹ ಕೇವಲ ಶೇ.6.6 ರಿಂದ ಶೇ.9 ರಷ್ಟಿತ್ತು. ನೋಟು ನಿಷೇಧದ ಬಳಿಕ ಇದರ ಪ್ರಮಾಣ ಶೇ.15 ರಿಂದ ಶೇ.18ಕ್ಕೆ ಗಣನೀಯವಾಗಿ ಏರಿಕೆಯಾಗಿದೆ. 2014 ರಲ್ಲಿ ಆದಾಯ ತೆರಿಗೆ ಪಾವತಿಸುತ್ತಿದ್ದವರ ಸಂಖ್ಯೆ ಕೇವಲ 3.8 ಕೋಟಿಯಷ್ಟಿತ್ತು, ಸದ್ಯ 2017-18ನೇ ಸಾಲಿನಲ್ಲಿ 6.86 ಕೋಟಿ ಗ್ರಾಹಕರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಟೀಕಾಕಾರಿಗೆ ಉತ್ತರಿಸಿದ್ದಾರೆ.

    ನೋಟು ಅಮಾನ್ಯೀಕರಣದಿಂದಾಗಿ 2016ರ ನವೆಂಬರ್ 8 ರವರೆಗು ಚಲಾವಣೆಯಲ್ಲಿದ್ದ 500 ಹಾಗೂ 1,000 ಮುಖಬೆಲೆಯ 15.41 ಲಕ್ಷ ಕೋಟಿ ರೂಪಾಯಿಗಳ ಪೈಕಿ 15.31 ಲಕ್ಷ ಕೋಟಿ ರೂಪಾಯಿಗಳು ಭಾರತೀಯ ರಿಸರ್ವ್ ಬ್ಯಾಂಕಿಗೆ ಜಮೆಯಾಗಿದೆ.

    ಹೊಸ ನೋಟುಗಳ ಮುದ್ರಣದ ವೆಚ್ಚ:
    ನೋಟು ನಿಷೇಧದ ಬಳಿಕ 2016-17 ರ ಅವಧಿಯಲ್ಲಿ ಆರ್‍ಬಿಐ 7,965 ಕೋಟಿ ರೂ. ಗಳನ್ನು ಹೊಸ 500 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟು ಮುದ್ರಣಕ್ಕಾಗಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ನೋಟು ಮುದ್ರಣದ ವೆಚ್ಚ ಕಳೆದ ವರ್ಷದಲ್ಲಿ ಮಾಡಿದ್ದ ವೆಚ್ಚಕ್ಕಿಂತಲೂ ಎರಡರಷ್ಟು ಹೆಚ್ಚಾಗಿದೆ. ಇನ್ನು 2017-18 (ಜುಲೈ 2017 ರಿಂದ ಜೂನ್ 2018) ಅವಧಿಯಲ್ಲಿ 4,912 ಕೋಟಿ ರೂ. ಗಳನ್ನು ನೋಟು ಮುದ್ರಣಕ್ಕಾಗಿ ಆರ್‍ಬಿಐ ವೆಚ್ಚಮಾಡಿದೆ.

    ನೋಟು ನಿಷೇಧ ವೇಳೆ ಈ ಕ್ರಮ ಕಪ್ಪು ಹಣದ ಪತ್ತೆ, ಭ್ರಷ್ಟಚಾರ ನಿಯಂತ್ರಣ ಮತ್ತು ಖೋಟಾ ನೋಟು ಪರಿಶೀಲನೆಗೆ ಸಹಾಯವಾಗುತ್ತದೆ ಎಂಬ ವಾದ ಕೇಳಿ ಬಂದಿತ್ತು. ಆದರೆ ಈ ವೇಳೆ 500 ರೂ. ಹಾಗೂ 1 ಸಾವಿರ ರೂ ಮುಖಬೆಲೆ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 59.7% ಮತ್ತು 59.6% ಕಡಿಮೆ ಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 100 ರೂ. ಹಾಗೂ 50 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 35%, 154.3% ರಷ್ಟು ಪತ್ತೆಯಾಗಿದೆ. ನೋಟು ನಿಷೇಧ ಕ್ರಮದಿಂದಾಗಿ 2017-18 ಆರ್ಥಿಕ ವರ್ಷದ ಮೇಲೆ ಪ್ರಭಾವ ಬೀರಿತ್ತು ಎಂದು ಆರ್ ಬಿಐ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv