Tag: ಶಿವಳ್ಳಿ

  • ಶಿವಳ್ಳಿ ಸ್ಥಾನವನ್ನು ರಾಮಲಿಂಗಾರೆಡ್ಡಿಗೆ ಕೊಡಲಾಗುತ್ತೆ: ಸಿದ್ದರಾಮಯ್ಯ

    ಶಿವಳ್ಳಿ ಸ್ಥಾನವನ್ನು ರಾಮಲಿಂಗಾರೆಡ್ಡಿಗೆ ಕೊಡಲಾಗುತ್ತೆ: ಸಿದ್ದರಾಮಯ್ಯ

    ಬೆಂಗಳೂರು: ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಹಿರಿಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಶಿವಳ್ಳಿ ಸ್ಥಾನವನ್ನು ಅವರಿಗೆ ನೀಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ರಂಜಾನ್ ಹಬ್ಬ ಇರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಆಗಮಿಸಿದ್ದರು. ಐದು ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಪ್ರಾರ್ಥನೆ ನಡೆಸಿದ್ದು, ಪ್ರಾರ್ಥನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಪಾಲ್ಗೊಂಡಿದ್ದರು.

    ಈ ವೇಳೆ ರಾಮಲಿಂಗಾರೆಡ್ಡಿ ಅವರ ಅಸಮಾಧಾನ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನೇ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡುತ್ತೇನೆ. ಪುನಾರಚನೆ ಮಾಡುವಾಗ ರಾಮಲಿಂಗಾರೆಡ್ಡಿ ಅವರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಲಾಗಿತ್ತು. ಆದರೆ ಈಗ ಪುನಾರಚನೆ ಮಾಡುತ್ತಿಲ್ಲ. ಶಿವಳ್ಳಿ ನಿಧನದಿಂದ ಕಾಂಗ್ರೆಸ್ಸಿನ ಒಂದು ಸ್ಥಾನ ಖಾಲಿ ಇದ್ದು, ಆ ಸ್ಥಾನವನ್ನು ರಾಮಲಿಂಗಾರೆಡ್ಡಿ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

    ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಪಟ್ಟ ವಿಚಾರದ ಬಗ್ಗೆ ಮಾತನಾಡಿ, ಖರ್ಗೆ ಅವರು ಮುಖ್ಯಮಂತ್ರಿಯಾಗುವುದು ಬೇಡ ಎಂದು ನಾವು ಹೇಳಲೇ ಇಲ್ಲ. ಖರ್ಗೆ ಸಿಎಂ ಆಗಬೇಕು ಎಂದು ಹೇಳುತ್ತಿದ್ದೇವೆ. 2013ರಲ್ಲಿ ಶಾಸಕರು ಹಾಗೂ ಹೈಕಮಾಂಡ್ ನನಗೆ ಸಿಎಂ ಆಗಿ ಎಂದು ಹೇಳಿದ್ದರು. ಹಾಗಾಗಿ ನಾನು ಸಿಎಂ ಆಗಿದ್ದೆ. ಹಾಗಂತ ಖರ್ಗೆ ಸಿಎಂ ಆಗಬಾರದು, ಪರಮೇಶ್ವರ್ ಸಿಎಂ ಆಗಬಾರದು ಎಂದು ನಾವು ಹೇಳುತ್ತಿಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

  • ಶಿವಳ್ಳಿ ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದ ಡಿಕೆಶಿ!

    ಶಿವಳ್ಳಿ ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದ ಡಿಕೆಶಿ!

    ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸಚಿವ ಡಿ.ಕೆ ಶಿವಕುಮಾರ್ ಅವರು ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ದಿವಂಗತ ಸಚಿವ ಸಿ.ಎಸ್ ಶಿವಳ್ಳಿ ಅವರನ್ನು ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ.

    ಇಂಗಳಗಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ವೇದಿಕೆ ಮೇಲೆ ಮಾತನಾಡುತ್ತಿದ್ದ ಅವರು ಶಿವಳ್ಳಿ ಅವರನ್ನು ಕಳೆದುಕೊಂಡಿರುವುದು ಮನಸ್ಸಿಗೆ ಬಹಳ ನೋವನ್ನು ತಂದಿದೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

    ಶಿವಳ್ಳಿ ಜಾತಿ ಧರ್ಮ ಬೇಧ ಭಾವ ಮಾಡಲಿಲ್ಲ. ನಿಮಗೆ ಯಾವತ್ತಾದ್ರೂ ಅವನು ಕಿರುಕುಳ ನೀಡಿದ್ದಾನಾ ಹೇಳಿ? ಪಾಪ ಶಿವಳ್ಳಿ ಪತ್ನಿ ಕುಸುಮಾ ಅವರು ಇಂದು ಚುನಾವಣೆಗೆ ನಿಂತಿದ್ದಾರೆ. ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಗೆಲ್ಲಿಸಿ ಮೈತ್ರಿ ಸರ್ಕಾರವನ್ನು ಬಲಗೊಳಿಸಿ ಎಂದು ಹೇಳಿ ಭಾವುಕರಾದರು.

    ಈಗ ಚುನಾವಣೆ ಬಂದಿದೆ ವೋಟ್ ಕೊಡಿ ಎಂದು ಕಣ್ಣಿರು ಹಾಕುತ್ತಿಲ್ಲ. ಬದಲಿಗೆ ನನಗೆ ತುಂಬಾ ಹತ್ತಿರವಾದ ಗೆಳೆಯ ಅವನು. ಶಿವಳ್ಳಿಯನ್ನು ಕಳೆದುಕೊಂಡು ನನಗೆ ನೋವಾಗಿದೆ. ಹೀಗಾಗಿ ನನಗೆ ಅಳು ಬಂದಿದೆ. ನಾನು ನಾಟಕ ಮಾಡುತ್ತಿಲ್ಲ ಎಂದು ಹೇಳಿ ಭಾವುಕರಾದರು.

  • ಶಿವಳ್ಳಿ ಸಾವಿನ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರೀರಾಮುಲು!

    ಶಿವಳ್ಳಿ ಸಾವಿನ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರೀರಾಮುಲು!

    ಬಳ್ಳಾರಿ: ಒಂದೆಡೆ ದಿವಂಗತ ಸಚಿವ ಸಿ ಎಸ್ ಶಿವಳ್ಳಿ ಸಾವಿನ ವಿಚಾರದ ಬಗ್ಗೆ ಶಾಸಕ ಶ್ರೀರಾಮುಲು ವಿರುದ್ದ ಕಾಂಗ್ರೆಸ್ ದೂರು ನೀಡುತ್ತಿದೆ. ಇನ್ನೊಂದೆಡೆ ಶಿವಳ್ಳಿ ಸಾವಿನ ಬಗ್ಗೆ ಶಾಸಕ ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದಾರೆ.

    ಶಿವಳ್ಳಿ ಸಚಿವರಾಗಿದ್ದ ವೇಳೆ ಅವರ ಇಲಾಖೆಗೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಇತರರೂ ಕೈಹಾಕಿದ್ದರು. ಹೀಗಾಗಿ ಸಚಿವರಾಗಿದ್ದ ವೇಳೆ ಶಿವಳ್ಳಿ ಅವರು ಸಾಕಷ್ಟು ನೊಂದಿದ್ದರು ಎಂದು ಶಾಸಕ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ – ಶ್ರೀರಾಮುಲು ಗಂಭೀರ ಆರೋಪ

    ಅಲ್ಲದೇ, ಶಿವಳ್ಳಿ ಅವರು ಯಾವತ್ತೋ ಮಂತ್ರಿಯಾಗಬೇಕಿತ್ತು. ಅವರು ಸೀನಿಯರ್ ಶಾಸಕರಾಗಿದ್ದರು. ಆದ್ರೆ ಅವರಿಗೆ ಮಂತ್ರಿ ಸ್ಥಾನ ನೀಡದೇ ಮೈತ್ರಿ ಸರ್ಕಾರದಲ್ಲಿ ಹೊಸಬರನ್ನ ಮಂತ್ರಿ ಮಾಡಲಾಗಿತ್ತು. ಆ ಕಾರಣಕ್ಕಾಗಿ ಅವರು ನೊಂದಿದ್ದರು. ಅದನ್ನೆ ನಾನು ಹೇಳಿರುವುದು. ಆದರೆ ಕಾಂಗ್ರೆಸ್ ನಾಯಕರು ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಶಿವಳ್ಳಿ ಸಾವಿನ ಬಗ್ಗೆ ನಾನು ತಪ್ಪು ಅರ್ಥದಿಂದ ಮಾತನಾಡಿಲ್ಲವೆಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

    ಶಿವಳ್ಳಿ ಶಾಸಕರಾಗಿದ್ದ ವೇಳೆ ಬಿಜೆಪಿಗೆ ಬರಲು ರೆಡಿಯಾಗಿದ್ದರು. ಹೀಗಾಗಿ ಕುಂದಗೋಳ್ ಮತ್ತು ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಶ್ರೀರಾಮಲು ಭರವಸೆ ವ್ಯಕ್ತಪಡಿಸಿದರು.

  • ಅಳುತ್ತಲೇ ಪರೀಕ್ಷೆ ಬರೆಯುತ್ತಿರೋ ಶಿವಳ್ಳಿ ಪುತ್ರಿ!

    ಅಳುತ್ತಲೇ ಪರೀಕ್ಷೆ ಬರೆಯುತ್ತಿರೋ ಶಿವಳ್ಳಿ ಪುತ್ರಿ!

    ಹುಬ್ಬಳ್ಳಿ: ತಂದೆ ಶಿವಳ್ಳಿ ಸಾವಿನ ದುಃಖದ ಮಧ್ಯೆಯೂ ಅವರ ಎರಡನೇ ಮಗಳು ಕಣ್ಣೀರು ಹಾಕುತ್ತಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿದ್ದಾರೆ.

    ಸಿ. ಎಸ್ ಶಿವಳ್ಳಿ ಅವರ ಎರಡನೇ ಪುತ್ರಿ ರೂಪಾ ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿ ಇರುವ ಕೆಎಲ್‍ಈ ಕಾಲೇಜಿ ನಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇಂದು ರೂಪ ಹುಬ್ಬಳ್ಳಿಯ ಸೆಂಟ್ ಆಂಟೋನಿ ಶಾಲೆಯಲ್ಲಿ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾಳೆ. ರೂಪಾ 10ನೇ ತರಗತಿಯ ಸಿಬಿಎಸ್‍ಇ ಇಂಗ್ಲೀಷ್ ಪರೀಕ್ಷೆ ಬರೆಯುತ್ತಿದ್ದಾಳೆ.

    ಸಿಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಕಾರ್ಯಾಚರಣೆ ನಡೆದ ಸ್ಥಳದಲ್ಲೇ ಹಾಜರಿದ್ದು, ಎಲ್ಲಾ ಕಾರ್ಯದ ಉಸ್ತುವಾರಿ ವಹಿಸಿದ್ದರು. ಈ ವೇಳೆಯೇ ಅವರು ಬಳಲಿದ್ದರು ಎಂಬ ಮಾಹಿತಿ ಲಭಿಸಿತು.

    ಕಳೆದ 2 ದಿನಗಳಿಂದ ಕಟ್ಟಡ ಕುಸಿತ ಸ್ಥಳದಲ್ಲೇ ಇದ್ದ ಅವರು ಗುರುವಾರ ಸಿಎಂ ಕುಮಾರಸ್ವಾಮಿ ಅವರು ಆಗಮಿಸಿದ್ದ ವೇಳೆಯೂ ಸಿಎಂ ಅವರೊಂದಿಗೆ ಇದ್ದರು. ಹೆಚ್ಚಿನ ಸಮಯ ಸ್ಥಳದಲ್ಲೇ ಇದ್ದ ಸಚಿವರು ಬಳಲಿದ್ದ ಪರಿಣಾಮ ಕಿಮ್ಸ್ ಆಸ್ಪತ್ರೆಯ ವೈದ್ಯರು ಬಳಿ ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಸಚಿವರು ಮತ್ತೆ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯಲು ಆಗಮಿಸಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಸಂಭವಿಸಿತ್ತು.

    ಕಳೆದ ತಿಂಗಳು ಅಭಿವೃದ್ಧಿ ಕಾರ್ಯಕ್ರಮಕ್ಕೆ ಉದ್ಘಾಟನೆ ನಡೆಸಿ ಅಲ್ಲಿ ಆಹಾರ ಸೇವಿಸಿದ್ದ ಸಚಿವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. ಆ ಬಳಿಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿದ್ದರು. ಮೂರು ತಿಂಗಳಿಗೊಮ್ಮೆ ಅವರು ಆಸ್ಪತ್ರೆಗೆ ದಾಖಲಾಗಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಟ್ಟಡ ಕುಸಿತ ದುರಂತದ ಬಳಿಕ ಹೆಚ್ಚಿನ ವಿಶ್ರಾಂತಿ ಪಡೆಯದೆ ಜವಾಬ್ದಾರಿ ನಿರ್ವಹಿಸಿದ್ದರು. ಪರಿಣಾಮ ಹೃದಯಘಾತ ಸಂಭವಿಸಿತ್ತು ಎಂದು ಹೇಳಲಾಗುತ್ತಿದೆ.

    https://www.youtube.com/watch?v=AH1OxAUo0qQ

  • ಸೋದರನಿಗಿಂತ್ಲೂ ಹೆಚ್ಚು ಶಿವಳ್ಳಿ ಆತ್ಮೀಯರಾಗಿದ್ದರು: ಸಚಿವ ಡಿಕೆಶಿ

    ಸೋದರನಿಗಿಂತ್ಲೂ ಹೆಚ್ಚು ಶಿವಳ್ಳಿ ಆತ್ಮೀಯರಾಗಿದ್ದರು: ಸಚಿವ ಡಿಕೆಶಿ

    ಹುಬ್ಬಳ್ಳಿ: ಶಿವಳ್ಳಿ ನನ್ನ ಸಹೋದರನಿಗಿಂತಲೂ ಹೆಚ್ಚು ಹಾಗೂ ಅವರ ಸರಳತೆ ಅವರನ್ನು ಬಿಟ್ಟು ಹೋಗಿರಲಿಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಶುಕ್ರವಾರ ವಿಧಿವಶರಾದ ಪೌರಾಡಳಿತ ಸಚಿವ ಶಿವಳ್ಳಿ ಅವರ ಅಂತಿಮ ದರ್ಶನ ಪಡೆಯಲು ಬಂದ ವೇಳೆ ಮಾತನಾಡಿದ ಅವರು, ಶಿವಳ್ಳಿ ನನ್ನ ಸಹೋದರನಿಗಿಂತಲೂ ಹೆಚ್ಚು ಆತ್ಮೀಯರಾಗಿದ್ದರು. ಅವರ ಸರಳತೆ ಅವರನ್ನು ಬಿಟ್ಟು ಹೋಗಿರಲಿಲ್ಲ. ಶಿವಳ್ಳಿ ಅಗಲಿಕೆಯ ನೋವು ನನಗೆ ತಡೆಯಲು ಆಗುತ್ತಿಲ್ಲ. ಆತ ನನ್ನ ಕುಟುಂಬದ ಸದಸ್ಯನಿಗಿಂತ ಹೆಚ್ಚಾಗಿದ್ದರು. ಶಿವಳ್ಳಿ ನನ್ನ ಆತ್ಮೀಯ ಮಿತ್ರ. ನನ್ನ ಹೃದಯಕ್ಕೆ ಹತ್ತಿರವಾದ ವ್ಯಕ್ತಿ ಎಂದು ಹೇಳಿದ್ದಾರೆ.

    ನಾನೇ ಶಿವಳ್ಳಿಯವರನ್ನ ಕಾಂಗ್ರೆಸ್‍ಗೆ ಕರೆ ತಂದಿದ್ದೆ. ಶಿವಳ್ಳಿ ಅಗಲಿಕೆ ನಂಬಲು ಸಾಧ್ಯವಾಗುತ್ತಿಲ್ಲ. ಧಾರವಾಡದಲ್ಲಿ ಇದ್ದಾಗ ನನ್ನ ಜೊತೆ ಅರ್ಧಗಂಟೆ ಮಾತನಾಡಿದ್ದರು. ನನಗೆ ಈಗಲೂ ನಂಬಲೂ ಸಾಧ್ಯವಾಗುತ್ತಿಲ್ಲ. ಬಡವರ ಪರವಾಗಿ ಹೋರಾಟ ಮಾಡುವ ವ್ಯಕ್ತಿಯಾಗಿದ್ದರು ಎಂದರು

    ಈ ವೇಳೆ ಯಡಿಯೂರಪ್ಪ ಡೈರಿ ಬಹಿರಂಗ ವಿಚಾರದ ಬಗ್ಗೆ ಡಿಕೆಶಿ ಸಾಫ್ಟ್ ಕಾರ್ನರ್ ತಾಳಿದ್ದಾರೆ. ಡೈರಿ ಬಗ್ಗೆ ಈಗಾಗಲೇ ತುಂಬಾ ಜನ ಮಾತನಾಡಿದ್ದಾರೆ. ಯಾರ್ಯಾರು ಏನೇನ್ ಮಾತನಾಡುತ್ತಾರೆ ಮಾತನಾಡಲಿ. ಮುಂದೆ ನಾನು ಮಾತನಾಡುವೆ. ನಾನು ನ್ಯಾಯಾಲಯಕ್ಕೆ ಗೌರವ ಕೊಡುವವನು. ದೇಶದ ಕಾನೂನನ್ನು ಗೌರವಿಸುತ್ತೇನೆ ಎಂದು ತಿಳಿಸಿದರು.

  • ಇಂದು ಸಂಜೆ ಸಚಿವ ಶಿವಳ್ಳಿ ಅಂತ್ಯಕ್ರಿಯೆ

    ಇಂದು ಸಂಜೆ ಸಚಿವ ಶಿವಳ್ಳಿ ಅಂತ್ಯಕ್ರಿಯೆ

    ಹುಬ್ಬಳ್ಳಿ: ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಸಚಿವ ಸಿ.ಎಸ್.ಶಿವಳ್ಳಿ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.

    ಶುಕ್ರವಾರ ರಾತ್ರಿ ಧಾರವಾಡದ ಕುಂದಗೋಳಕ್ಕೆ ಪಾರ್ಥಿವ ಶರೀರ ರವಾನಿಸಲಾಯ್ತು. ಬಳಿಕ ಶಿವಾನಂದ ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಜನರು ಆಗಮಿಸಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

    ಯರಗುಪ್ಪಿಗೆ ಕೊಂಡೊಯ್ದು ಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ಮಧ್ಯಾಹ್ನ ಮೂರೂವರೆಗೆ ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯ, ಗೃಹಸಚಿವ ಎಂ.ಬಿ ಪಾಟೀಲ್, ಡಿ.ಕೆ ಶಿವಕುಮಾರ್, ಆರ್.ವಿ ದೇಶಪಾಂಡೆ ಸೇರಿದಂತೆ ಹಲವು ನಾಯಕರು ಅಂತಿಮ ದರ್ಶನ ಪಡೆಯಲಿದ್ದಾರೆ.

    ಧಾರವಾಡ ಜಿಲ್ಲಾಯಾದ್ಯಂತ ಇಂದು ಸರ್ಕಾರಿ ರಜೆ ಘೋಷಿಸಲಾಗಿದ್ದು, 3 ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆಗೆ ಸೂಚಿಸಲಾಗಿದೆ. ಆದ್ರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ.

  • ಧಾರವಾಡ: ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವು

    ಧಾರವಾಡ: ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವು

    ಧಾರವಾಡ: ಕೃಷಿ ಹೊಂಡದಲ್ಲಿ ಈಜಲು ಹೋದ ಯುವನೋರ್ವ ಮುಳುಗಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.

    22 ವರ್ಷದ ಮಲ್ಲಿಕಾರ್ಜುನ್ ಕಳಸಣ್ಣವರ ಮೃತ ಯುವಕ. ಮಲ್ಲಿಕಾರ್ಜುನ ತನ್ನ ಇತರ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಸ್ನಾನ ಮಾಡಲೆಂದು ಹೋಗಿದ್ದ. ಕೃಷಿ ಹೊಂಡದಲ್ಲಿ ಹೂಳು ತುಂಬಿಕೊಂಡಿದ್ದನ್ನು ಗಮನಿಸದ ಮಲ್ಲಿಕಾರ್ಜುನ ಏಕಾಏಕಿ ಹೊಂಡಕ್ಕೆ ಜಿಗಿದಿದ್ದಾನೆ. ಇದರಿಂದ ಹೂಳಿನಲ್ಲಿ ಸಿಕ್ಕಿ ಹಾಕಿಕೊಂಡ ಮಲ್ಲಿಕಾರ್ಜುನ ಮೇಲೆ ಬರಲು ಆಗದೇ ಮುಳುಗಿ ಸಾವನ್ನಪ್ಪಿದ್ದಾನೆ.

    ಮಲ್ಲಿಕಾರ್ಜುನ್ ಜೊತೆಯಲ್ಲಿದ್ದ ಸ್ನೇಹಿತರು ಆತನನ್ನು ಪೈಪ್ ಕೊಟ್ಟು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಆದರೆ ಪೈಪ್ ಮಲ್ಲಿಕಾರ್ಜುನನಿಗೆ ತಾಗದ ಕಾರಣ ಮೇಲಕ್ಕೆ ಬರಲು ಸಾಧ್ಯವಾಗಿಲ್ಲ. ಕಳೆದರೆಡು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿದ್ದರಿಂದ ಹೊಂಡದಲ್ಲಿ ನೀರು ತುಂಬಿಕೊಂಡಿತ್ತು. ಹಾಗಾಗಿ ಯುವಕರು ಕೃಷಿ ಹೊಂಡಕ್ಕೆ ಯುವಕರು ತೆರಳಿದ್ದರು.

    ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.