ಕಾರವಾರ: ಸಿದ್ದರಾಮಯ್ಯ ಜೆಡಿಎಸ್ ಪಕ್ಷಕ್ಕೆ ಮೋಸಮಾಡಿ ಹೋಗುವಾಗ ಚೂರಿ ಹಾಕಲಿಲ್ಲವಾ ಅದೇನು ಚೂರಿನೋ ಚಾಕುನೋ, ನೀವು ಮೋಸಮಾಡಿಲ್ಲವೇ ಎಂದು ಪ್ರಶ್ನಿಸಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಸಿದ್ದರಾಮಯ್ಯನವರ ಮಾತಿಗೆ ತಿರುಗೇಟು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಸಧ್ಯಮಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್ ನಲ್ಲಿ ಉಪಮುಖ್ಯಮಂತ್ರಿಯಾಗಿದ್ದವರು. ಆದರೆ ಅವರು ಪಕ್ಷ ಬಿಟ್ಟು ಬಂದಿದ್ದರು. ದೇಶದಲ್ಲಿ ಪಕ್ಷಾಂತರ ಮಾಡಿದವನು ನಾನೊಬ್ಬನೇ ಅಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಅಷ್ಟೇ ಎಂದರು.
ಸಿದ್ದರಾಮಯ್ಯನವರ ಮೇಲೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ಅವರು ಮಾತನಾಡಿರುವ ಮತ್ತು ಉಪಯೋಗಿಸಿರುವ ಭಾಷೆ ಸರಿಯಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ. ನಾನು ಒಬ್ಬ ಸರ್ಕಾರದ ಭಾಗವಾಗಿ ಕ್ಷೇತ್ರಕ್ಕೆ ಹಣ ತಂದಿದ್ದೇನೆ. ಅವರ ಜೇಬಿನಿಂದ ಸಿದ್ದರಾಮಯ್ಯ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 13ನೇ ತಾರೀಕಿನ ನಂತರ ಯಾರು ಏನು ಕೊಟ್ಟಿದ್ದರು ಏನಾಯ್ತು ಎಂದು ಹೇಳುತ್ತೇನೆ ಎಂದು ತಿಳಿಸಿದರು.
ಕಾರವಾರ: ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಅವರು ಮುಂಡಗೋಡಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನಿಂದ ಯಲ್ಲಾಪುರಕ್ಕೆ ಇಂದು ಆಗಮಿಸಿದ ಶಿವರಾಮ್ ಹೆಬ್ಬಾರ್, ಮುಂಡಗೋಡದಲ್ಲಿ ಬಿಜೆಪಿ ಸಭೆ ನಡೆಯುತ್ತಿದೆ ಎಂಬ ಸುದ್ದಿ ಸಿಗುತ್ತಿದ್ದಂತೆ ಅತ್ತ ಪ್ರಯಾಣ ಬೆಳೆಸಿದರು. ಸಭೆಗೆ ಹಾಜರಾದ ಅವರು ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಜೊತೆ ಮಾತುಕತೆ ನಡೆಸಿ, ಅಸಮಾಧಾನವನ್ನು ತಣಿಸುವ ಪ್ರಯತ್ನಿಸಿದ್ದಾರೆ.
ಇದಕ್ಕೂ ಮುನ್ನ ಯಲ್ಲಾಪುರದಲ್ಲಿ ಮಾತನಾಡಿದ ಅನರ್ಹ ಶಾಸಕರು, ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 30 ಕೊನೆ ದಿನ. ಅದು ನಮಗೆ ರಾಜಕೀಯ ನಿರ್ಣಯ ಕೈಗೊಳ್ಳಲೂ ಕೊನೆ ದಿನ. ನೂರಕ್ಕೆ ನೂರರಷ್ಟು ನ್ಯಾಯಾಲಯ ಅವಕಾಶ ಮಾಡಿಕೊಡುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಅನರ್ಹರಾಗುವುದಕ್ಕೂ ಚುನಾವಣೆಗೆ ನಿಲ್ಲುವುದಕ್ಕೂ ಸಂಬಂಧವಿಲ್ಲ. ಅನರ್ಹತೆ ಆ ದಿನಕ್ಕೆ ಅಷ್ಟೇ. ಪಿ.ದಿನಕರನ್ ಕೇಸ್‍ನಲ್ಲಿ 19 ಜನರಿಗೆ ಇದೇ ನಿರ್ಣಯವನ್ನು ನ್ಯಾಯಾಲಯ ನೀಡಿದೆ ಎಂದು ತಿಳಿಸಿದರು.
ಮಾಜಿ ಸ್ಪೀಕರ್ ವಿರುದ್ಧ ಗರಂ!
ಉದ್ದೇಶಪೂರ್ವಕವಾಗಿ, ರಾಜಕೀಯದ ಹಿತಾಸಕ್ತಿಗಾಗಿ, ಒಂದು ಪಕ್ಷದ ಕಾರ್ಯಕರ್ತರಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ಅನರ್ಹತೆ ನಿರ್ಣಯ ತೆಗೆದುಕೊಂಡರು. ನ್ಯಾಯಾಧೀಶರಾಗಿ ಅವರು ನಿರ್ಣಯ ತೆಗೆದುಕೊಂಡಿಲ್ಲ. ಸ್ಪೀಕರ್ ಸ್ಥಾನದಲ್ಲಿರುವವರು ಮನಸ್ಸಿಗೆ ಬಂದಂತೆ ಅನರ್ಹತೆ ಮಾಡುವಂತಿಲ್ಲ. 2023ರ ವೆರಗೂ ಅನರ್ಹತೆಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇಂತಹ ನಿರ್ಣಯ ದೇಶದ ಇತಿಹಾಸದಲ್ಲಿ ಇದೇ ಮೊದಲು. ರಮೇಶ್ ಕುಮಾರ್ ಅವರ ಈ ನಿರ್ಧಾರ ಸಂವಿಧಾನ ವಿರೋಧಿ ಕ್ರಮ ಎಂದು ಹೇಳಿದರು.
ಸುಪ್ರೀಂಕೋರ್ಟ್ ಗುರುವಾರ ಮಧ್ಯಾಹ್ನದೊಳಗೆ ಯಾವುದಾದರೂ ಒಂದು ತೀರ್ಪು ನೀಡಲಿದೆ. ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ಇಲ್ಲದಿದ್ದಲ್ಲಿ ಅದು ಸಾಂವಿಧಾನಿಕ ಬಿಕ್ಕಟ್ಟಾಗಲಿದೆ. ಅನರ್ಹತೆ ನಿರ್ಣಯ ಮಾಡದಿದ್ದರೇ ಕ್ಷೇತ್ರಕ್ಕೆ ಎರಡು ಶಾಸಕರಾಗಲಿದ್ದಾರೆ ಎಂದರು.
ಮಾಜಿ ಸ್ಪೀಕರ್ ನಡೆಯ ಬಗ್ಗೆ ಯೋಚಿಸಿಯೇ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವು. ಕೋರ್ಟ್ ನಮಗೆ ಮಧ್ಯಕಾಲಿಕ ತೀರ್ಪು ನೀಡಿತ್ತು. ವಿಧಾನಸಭೆಗೆ ಹೋಗುವುದು ಬಿಡೋದು ಶಾಸಕರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿತ್ತು. ಮುಂದುವರಿದ ಭಾಗವಾಗಿ ಕಳೆದ ಕೆಲವು ದಿನಗಳಿಂದ ವಾದ ಪ್ರತಿವಾದಗಳು ನಡೆದಿವೆ. ನಾನು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿಲ್ಲ. ತೀರ್ಪು ಬಂದ ಬಳಿಕ ಅನರ್ಹ ಶಾಸಕರೆಲ್ಲರೂ ಒಟ್ಟಾಗಿ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದರೂ ಈವರೆಗೂ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ಜೊತೆಗೆ ಯಾವುದೇ ಪಕ್ಷವೂ ತನ್ನ ಅಭ್ಯರ್ಥಿಯ ಹೆಸರನ್ನು ಹೆಸರನ್ನು ಘೋಷಿಸಿಲ್ಲ.
ಕಾರವಾರ: ಅನರ್ಹ ಶಾಸಕರು ಹತಾಶರಾಗಿದ್ದಾರೆ ಎನ್ನುವುದು ಕೇವಲ ಊಹಾಪೋಹ. ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.
ಶಿರಸಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ವಯಂ ಘೋಷಿತ ಬುದ್ಧಿವಂತ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ರಾಜಕೀಯ ದ್ವೇಷ ಪ್ರೇರಿತರಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಅವರು ಮನಸ್ಸಿಗೆ ಬಂದಂತೆ ನಿರ್ಣಯ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಹಾಗೂ ಮುಖಂಡರ ಒತ್ತಡಕ್ಕೆ ಒಳಗಾಗಿ ಅಥವಾ ಅವರ ಓಲೈಕೆಗಾಗಿ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಅತೃಪ್ತ 15 ಜನ ಶಾಸಕರು ಸದನಕ್ಕೆ ಹಾಜರಾಗಬಹುದು, ಇಲ್ಲವೇ ಹಾಜರಾಗದೇ ಇರಬಹುದು. ಇದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಆದರೂ ರಮೇಶ್ ಕುಮಾರ್ ಅವರು ನಾವು ಸದನಕ್ಕೆ ಹಾಜರಾಗಿಲ್ಲವೆಂದು ಅನರ್ಹಗೊಳಿಸಿದ್ದಾರೆ. ಇದು ರಾಜಕೀಯ ದ್ವೇಷ ಪ್ರೇರಿತ ನಿರ್ಣಯವಾಗಿದೆ ಎಂದು ಆರೋಪಿಸಿದರು.
ಉತ್ತರ ಕನ್ನಡ ಜಿಲ್ಲೆಯಿಂದ ನಾನೊಬ್ಬನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಿದೆ. ನಾವು ಎಲ್ಲಿಯೂ ಬಿಜೆಪಿ ಸೇರುತ್ತೇವೆ ಅಂತ ಹೇಳಿಕೆ ನೀಡಿಲ್ಲ. ಮೈತ್ರಿಯಿಂದ ಮೋಸಕ್ಕೆ ಒಳಗಾಗಿರುವ ಕಾರಣ ರಾಜೀನಾಮೆ ನೀಡಿದ್ದೇವೆ. ನ್ಯಾಯಾಲಯದ ಅಂತಿಮ ನಿರ್ಣಯ ಬಂದ ಮೇಲೆ ನಾವೆಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಜೊತೆಗೆ ಕಾಂಗ್ರೆಸ್ ನಾಯಕರ ಒತ್ತಡವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.
ಕಾರವಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನು ಅನರ್ಹ ಮಾಡುತ್ತಿದ್ದಂತೆ ಮುಂಬೈನಲ್ಲಿದ್ದ ಶಾಸಕರು ಒಬ್ಬೊಬ್ಬರಂತೆ ತಮ್ಮ ತಮ್ಮ ಕ್ಷೇತ್ರಕ್ಕೆ ವಾಪಸ್ ಆಗುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಕ್ಷೇತ್ರಕ್ಕೆ ವಾಪಸ್ ಆಗಿದ್ದಾರೆ. ಶುಕ್ರವಾರ ಯಲ್ಲಾಪುರ ಕ್ಷೇತ್ರದ ವಿವಿಧ ಭಾಗದಲ್ಲಿ ಆಪ್ತ ವಲಯ ಹಾಗೂ ಕಾರ್ಯಕರ್ತರೊಂದಿಗೆ ತಮ್ಮ ಮುಂದಿನ ರಾಜಕೀಯ ನಿರ್ಧಾರ ಕುರಿತು ಸಭೆ ನಡೆಸಲಿದ್ದಾರೆ. ಜೊತೆಗೆ ತಮ್ಮ ನಿಲುವಿಗೆ ಬದ್ಧರಾಗಿರುವ ಕುರಿತು ಕಾರ್ಯಕರ್ತರೊಂದಿಗೆ ಚರ್ಚೆ ಮಾಡಲಿದ್ದಾರೆ.
ಶಿವರಾಮ್ ಹೆಬ್ಬಾರ್ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮುಂಬೈ ಹೋಟೆಲ್ ಹೋಗಿ ಸೇರಿದ್ದರು. ಸುಮಾರು ಮೂರು ವಾರಗಳ ಕಾಲ ಅತೃಪ್ತ ಶಾಸಕರು ತಮ್ಮ ಸ್ವ-ಕ್ಷೇತ್ರವನ್ನು ಮರೆತು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಈಗ ರಮೇಶ್ ಕುಮಾರ್ ಅವರು ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದಾರೆ.
ಶಿವರಾಮ್ ಹೆಬ್ಬಾರ್ ಅವರು ಈಗಾಗಲೇ ಎರಡು ಬಾರಿ ಕ್ಷೇತ್ರಕ್ಕೆ ಬಂದು ವಾಪಸ್ ಹೋಗಿದ್ದರು. ಮಾಜಿ ಸ್ಪೀಕರ್ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ ನಂತರ ಒಬ್ಬೊಬ್ಬರಂತೆ ಮುಂಬೈನಿಂದ ತಮ್ಮ ಕ್ಷೇತ್ರಕ್ಕೆ ವಾಪಸ್ ಬರುತ್ತಿದ್ದಾರೆ. ಮಂಗಳವಾರ ರಮೇಶ್ ಜಾರಕಿಹೊಳಿ ಮತ್ತು ಶ್ರೀಮಂತ್ ಪಾಟೀಲ್ ಅವರು ಇಬ್ಬರು ಒಟ್ಟಿಗೆ ಆಗಮಿಸಿದ್ದರು.
ಕಾರವಾರ: ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕ ಸ್ಥಾನದಿಂದ ಅತೃಪ್ತರನ್ನು ಅನರ್ಹಗೊಳಿಸಿದ್ದು, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ ಕಾರ್ಯಕರ್ತರಿಗೆ ಸ್ವಷ್ಟನೆ ನೀಡಿದ್ದಾರೆ.
ಸ್ಪೀಕರ್ ನಿರ್ಣಯ ಅತೀ ಶೀಘ್ರದಲ್ಲೇ ಸುಪ್ರೀಂ ಪರಿಶೀಲನೆಗೆ ಒಳಪಡಲಿದೆ. ನ್ಯಾಯಕ್ಕೆ ಜಯ ಸಿಗಲಿದೆ. ಯಾರೂ ಧೃತಿಗೆಡಬೇಕಿಲ್ಲ, ನನ್ನ ಅಭಿಮಾನಿಗಳು ಹಾಗೂ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ವಿಚಾರವನ್ನು ಜನತಾ ನ್ಯಾಯಾಲಯದ ಮುಂದೆ ಇಡಲಿದ್ದೇನೆ. ನಿಮ್ಮೆಲ್ಲರಿಗೆ ನನ್ನ ನಿರ್ಧಾರಕ್ಕೆ ಕಾರಣವೇನು ಎನ್ನುವುದನ್ನ ತಿಳಿಸುತ್ತೇನೆ. ನಿಮ್ಮೆಲ್ಲರ ಆಶಯದಂತೆ ನನ್ನ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಮಾನ್ಯ, ನನ್ನ ಅಭಿಮಾನಿ ಕಾರ್ಯಕರ್ತ ಬಂಧುಗಳೆ, ಸುಪ್ರೀಂ ಆದೇಶವಿದ್ದಾಗಲೂ, ರಾಜೀನಾಮೆಯನ್ನು ಮೊದಲೇ ನೀಡಿದ್ದರೂ, ಕೆಲವರ ಒತ್ತಡದಿಂದ ಪಕ್ಷಪಾತಿಯಾಗಿ ತೆಗೆದುಕೊಂಡ ಇಂದಿನ ಸ್ಪೀಕರ್ ಅನರ್ಹತೆ ನಿರ್ಣಯ ಅತೀ ಶೀಘ್ರದಲ್ಲೇ ಸುಪ್ರೀಂ ಪರಿಶೀಲನೆಗೆ ಒಳಪಡಲಿದೆ ಹಾಗೂ ನ್ಯಾಯಕ್ಕೆ ಜಯವಾಗಲಿದೆ.
ಯಾರೂ ಧೃತಿಗೆಡಬೇಕಾಗಿಲ್ಲ, ನನ್ನ ಅಭಿಮಾನಿಗಳು ಹಾಗೂ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ, ಮತ್ತೆ ಜನತಾ ನ್ಯಾಯಾಲಯದ ಮುಂದೆ ಹೋಗಲಿದ್ದೇನೆ. ನಿಮ್ಮೆಲ್ಲರಲ್ಲಿ ನನ್ನ ಈ ನಿರ್ಧಾರಕ್ಕೆ ಕಾರಣಗಳನ್ನು ವಿಸ್ತಾರವಾಗಿ ತಿಳಿಸುತ್ತೇನೆ ಹಾಗೂ ನಿಮ್ಮೆಲ್ಲರ ಆಶಯದಂತೆ ನನ್ನ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ.
ಸ್ಪೀಕರ್ ನೀಡಿದ ನ್ಯಾಯಸಮ್ಮತವಲ್ಲದ ತೀರ್ಪಿಗೆ ಖಂಡಿತವಾಗಿಯೂ ಸುಪ್ರೀಂನಲ್ಲಿ ನ್ಯಾಯ ಸಿಗಲಿದೆ ಹಾಗೂ ನನ್ನ ರಾಜಕೀಯ ನಿರ್ಧಾರಕ್ಕೆ ನನ್ನ ಯಲ್ಲಾಪುರ-ಮುಂಡಗೋಡ್-ಬನವಾಸಿ ಕ್ಷೇತ್ರದ ಮತದಾರರು/ಅಭಿಮಾನಿ ಕಾರ್ಯಕರ್ತರು ನನ್ನ ಪರ ತೀರ್ಪು ನೀಡಲಿದ್ದಾರೆ ಎಂಬ ಅಚಲ ವಿಶ್ವಾಸವಿದೆ. ನಿಮ್ಮ ವಿಶ್ವಾಸಿ ಶಿವರಾಮ ಹೆಬ್ಬಾರ್ ಎಂದು ಬರೆದು ಪೋಸ್ಟ್ ಮಾಡಿ ತಿಳಿಸಿದ್ದಾರೆ.
ಬೆಂಗಳೂರು: ‘ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿರುವುದು’ ಎಂದು ಕೆಲವು ಅತೃಪ್ತ ಶಾಸಕರು ಹೇಳಿಕೆ ನೀಡಿದ್ದಾರೆ. ಇದು ಸಂಪೂರ್ಣ ಸುಳ್ಳು ದುರುದ್ದೇಶ ಪೂರಿತ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.
ನಿನ್ನೆ ತಡರಾತ್ರಿ ಕ್ಷೇತ್ರಕ್ಕೆ ಆಗಮಿಸಿದ್ದ ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್, ಸಿದ್ದರಾಮಯ್ಯನವರೇ ನಮ್ಮ ನಾಯಕರು ಅವರು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದೇವೆ. ಹೀಗಾಗಿ ಬಿಜೆಪಿ ಸೇರುವ ಯಾವುದೇ ಉದ್ದೇಶ ಹೊಂದಿಲ್ಲ. ಸಿದ್ದರಾಮಯ್ಯನವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಹೆಬ್ಬಾರ್ ಅವರ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲ ಸೃಷ್ಟಿಸಿದ್ದು, ಇದೀಗ ಸ್ವತಃ ಸಿದ್ದರಾಮಯ್ಯನವರೇ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ತಪ್ಪು ಮುಚ್ಚಿಕೊಳ್ಳುವ ದುರುದ್ದೇಶದಿಂದ ಅತೃಪ್ತ ಶಾಸಕರು ‘ಸಿದ್ದರಾಮಯ್ಯನವರು ನಮ್ಮ ನಾಯಕರು’ ಎಂದು ಹೇಳುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೂಡ ನನ್ನ ಮೇಲೆ ಸುಳ್ಳು ಆರೋಪಗಳ ಸುರಿಮಳೆ ಆಗಿವೆ. ನನ್ನ ರಾಜಕೀಯ ಜೀವನದಲ್ಲಿ ಇವೆಲ್ಲ ಮೊದಲನೆಯದಲ್ಲ, ಬಹುಶ: ಕೊನೆಯದೂ ಅಲ್ಲ. ಇಂತಹ ಸುಳ್ಳು ಆರೋಪಗಳ ವಿಷಕುಡಿದು, ಕುಡಿದು ನಾನು ವಿಷಕಂಠನ್ನಾಗಿದ್ದೇನೆ. ಕೊನೆಗೆ ಸತ್ಯವೇ ಗೆಲ್ಲುವುದು. ಸತ್ಯಮೇವ ಜಯತೇ! ಎಂದು ಮೊದಲ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೂಡಾ ನನ್ನ ಮೇಲೆ ಸುಳ್ಳು ಆರೋಪಗಳ ಸುರಿಮಳೆ ಆಗಿವೆ. ನನ್ನ ರಾಜಕೀಯ ಜೀವನದಲ್ಲಿ ಇವೆಲ್ಲ ಮೊದಲನೆಯದಲ್ಲ, ಬಹುಶ: ಕೊನೆಯದೂ ಅಲ್ಲ. ಇಂತಹ ಸುಳ್ಳು ಆರೋಪಗಳ ವಿಷಕುಡಿದು,ಕುಡಿದು ನಾನು ವಿಷಕಂಠನ್ನಾಗಿದ್ದೇನೆ. ಕೊನೆಗೆ ಸತ್ಯವೇ ಗೆಲ್ಲುವುದು. ಸತ್ಯಮೇವ ಜಯತೇ!@INCKarnataka
‘ಸಿದ್ದರಾಮಯ್ಯನವರು ನಮ್ಮ ನಾಯಕರು’ ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಿದ್ದರೆ ಅವರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ದುರುದ್ದೇಶ ಇರಬಹುದು. ಅವರು ನೀಡದೆ ಇದ್ದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದರೆ ಇದರ ಹಿಂದೆ ಯಾರೋ ಸಂಚುಕೋರರು ಇದ್ದಾರೆಂದು ಅರ್ಥ. ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ ಎಂದು ಎರಡನೇ ಟ್ವೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.
'ಸಿದ್ದರಾಮಯ್ಯನವರು ನಮ್ಮನಾಯಕರು'ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಿದ್ದರೆ ಅವರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ದುರುದ್ದೇಶ ಇರಬಹುದು. ಅವರು ನೀಡದೆ ಇದ್ದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದರೆ ಇದರ ಹಿಂದೆ ಯಾರೋ ಸಂಚುಕೋರರು ಇದ್ದಾರೆಂದು ಅರ್ಥ. ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ.
‘ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿರುವುದು’ ಎಂದು ಕೆಲವು ಅತೃಪ್ತ ಶಾಸಕರು ನೀಡಿದ್ದಾರೆನ್ನಲಾದ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ. ಈ ಮಾತನ್ನು ಅವರು ನನ್ನ ಮುಂದೆ ಬಂದು ಹೇಳಲಿ ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದು ಮೂರನೇ ಟ್ವೀಟ್‍ನಲ್ಲಿ ಕಿಡಿ ಕಾರಿದ್ದಾರೆ. ಈ ಮೂಲಕ ಅತೃಪ್ತ ಶಾಸಕರು ತಮ್ಮ ಮೇಲೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಎಂದು ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.
'ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿರುವುದು' ಎಂದು ಕೆಲವು ಅತೃಪ್ತ ಶಾಸಕರು ನೀಡಿದ್ದಾರೆನ್ನಲಾದ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ. ಈ ಮಾತನ್ನು ಅವರು ನನ್ನ ಮುಂದೆ ಬಂದು ಹೇಳಲಿ ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ.
ಶಿವರಾಮ್ ಹೆಬ್ಬಾರ್ ಹೇಳಿದ್ದೇನು?
ನಾವು ಬಿಜೆಪಿ ಜೊತೆ ಸಂಪರ್ಕದಲ್ಲಿಲ್ಲ. ನಮ್ಮ ನಾಯಕ ಸಿದ್ದರಾಮಯ್ಯ, ಅವರು ಹೇಳಿದಂತೆ ಯಾರ ಜೊತೆಗೂ ಸಂಪರ್ಕ ಸಾಧಿಸಿಲ್ಲ ಎಂದು ಶಿವರಾಮ್ ಹೆಬ್ಬಾರ್ ಹೇಳಿದ್ದರು. ಬುಧವಾರ ರಾತ್ರಿ ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ್ದ ಅವರು, ನಾವು ಯಾವ ಬಿಜೆಪಿ ನಾಯಕರ ಜೊತೆ ಸಂಪರ್ಕ ಹೊಂದಿಲ್ಲ. ಸದ್ಯ ರಾಜ್ಯದಲ್ಲಿ ಆಗುತ್ತಿರುವ ಬಿಜೆಪಿ ಸರ್ಕಾರ ರಚನೆಯ ಬೆಳವಣಿಗೆಗೆ ನಮಗೆ ಯಾವುದೇ ಸಂಬಂಧ ಇಲ್ಲ. ನಾವು ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇವೆ. ಇಂದಿಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದು ತಿಳಿಸಿದ್ದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ರಾಜೀನಾಮೆ ಅಂಗೀಕಾರವಾದ ಬಳಿಕ ಎಲ್ಲರೂ ಒಟ್ಟಿಗೆ ಸೇರಿ ತೀರ್ಮಾನ ಮಾಡುತ್ತೇವೆ. ನಮ್ಮ ನಾಯಕರು ಸಿದ್ದರಾಮಯ್ಯ ಅವರು, ಅವರೇ ದೂರ ಉಳಿಯಿರಿ ಎಂದಿದ್ದಾರೆ. ಸ್ಪೀಕರ್ ಅವರಿಗೆ ಮನವಿ ಮಾಡಿದ್ದು, ಅವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಮ್ಮ ಮುಂದಿನ ತೀರ್ಮಾನ ಇರುತ್ತದೆ ಎಂದಿದ್ದರು.
ರಾಯಚೂರು: ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ನಾನು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೇನೆ. ಬೇರೆಯವರ ಮೇಲೆ ಆರೋಪ ಮಾಡಲ್ಲ ಎಂದು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಫೋನ್ ಕರೆಯಲ್ಲಿ ಮಾತನಾಡಿದ ಅವರು, ರಾಜೀನಾಮೆ ಅಂಗಿಕಾರವಾದ ಮೇಲೆಯೇ ಮುಂಬೈ ಬಿಡುತ್ತೇವೆ. ಶಿವರಾಮ್ ಹೆಬ್ಬಾರ್ ಹೇಳಿಕೆ ಅವರ ವೈಯಕ್ತಿಕ ವಿಚಾರ. ನಾನು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಬೇರೆ ಯಾರದ್ದೋ ಹೆಸರು ತಂದು ಆರೋಪ ಮಾಡಲ್ಲ, ಅದು ಸರಿಯಲ್ಲ ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಗೆ ಹೋಗುತ್ತೇನೋ ಇಲ್ಲವೋ ಎನ್ನುವ ವಿಚಾರ ಮುಂದೆ ತಿಳಿಸುತ್ತೇನೆ. ರಾಜೀನಾಮೆ ಅಂಗೀಕಾರವಾದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇನೆ. ಸದ್ಯ ಮುಂಬೈ ಬಿಟ್ಟು ಕ್ಷೇತ್ರಕ್ಕೆ ಬರುವುದಿಲ್ಲ. ಇನ್ನೆರಡು ದಿನದಲ್ಲಿ ರಾಜೀನಾಮೆ ಅಂಗೀಕಾರವಾದರೆ ಬೆಂಗಳೂರಿಗೆ ಬರುತ್ತೇವೆ ಎಂದು ತಿಳಿಸಿದರು.
ಹೆಬ್ಬಾರ್ ನಿನ್ನೆ ನಮ್ಮ ಜೊತೆಯಲ್ಲೇ ಇದ್ದರು. ಆದರೆ ಸದ್ಯ ಅವರು ತಮ್ಮ ಸ್ವಕ್ಷೇತ್ರಕ್ಕೆ ಹೋಗಿದ್ದಾರೆ. ಅವರ ಹೇಳಿಕೆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಪ್ರತಾಪ್ ಗೌಡ ಪಾಟೀಲ್ ಹೇಳಿದರು.
ಕಾರವಾರ: ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರು ಸಿದ್ದರಾಮಯ್ಯ ಮಾತಿನಂತೆ ನಡೆದುಕೊಂಡಿದ್ದು, ಬಿಜೆಪಿ ಸಂಪರ್ಕದಲ್ಲಿ ಇಲ್ಲ ಎಂದಿದ್ದಾರೆ.
ರಾತ್ರಿಯಷ್ಟೇ ಕ್ಷೇತ್ರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಪಬ್ಲಿಕ್ ಟಿವಿ ಮಾತನಾಡಿದ ಅವರು, ನಾವು ಯಾವ ಬಿಜೆಪಿ ನಾಯಕರ ಜೊತೆ ಸಂಪರ್ಕವಿಲ್ಲ. ಸದ್ಯ ರಾಜ್ಯದಲ್ಲಿ ಆಗುತ್ತಿರುವ ಬಿಜೆಪಿ ಸರ್ಕಾರ ರಚನೆಯ ಬೆಳವಣಿಗೆಗೆ ನಮಗೆ ಯಾವುದೇ ಸಂಬಂಧ ಇಲ್ಲ. ನಾವು ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇವೆ. ಇಂದಿಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದರು.
ಶಾಸಕ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ರಾಜೀನಾಮೆ ಅಂಗೀಕಾರ ಬಳಿಕ ಎಲ್ಲರೂ ಒಟ್ಟಿಗೆ ಸೇರಿ ತೀರ್ಮಾನ ಮಾಡುತ್ತೇವೆ. ನಮ್ಮ ನಾಯಕರು ಸಿದ್ದರಾಮಯ್ಯ ಅವರು, ಅವರೇ ದೂರ ಉಳಿಯಿರಿ ಎಂದಿದ್ದಾರೆ. ಸ್ಪೀಕರ್ ಅವರಿಗೆ ಮನವಿ ಮಾಡಿದ್ದು, ಅವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಮ್ಮ ಮುಂದಿನ ತೀರ್ಮಾನ ಇರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ಜನರ ಕ್ಷಮೆಯಾಚನೆ ಮಾಡಿರುವ ಅವರು, ಕಳೆದ 1 ತಿಂಗಳಿನಿಂದ ನಡೆದ ರಾಜಕೀಯ ಬೆಳವಣಿಗೆ ನನಗೂ ಅಸಮಾಧಾನ ಉಂಟು ಮಾಡಿದೆ. ಆದರೆ ಅನಿವಾರ್ಯ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ. 120 ಶಾಸಕರಲ್ಲಿ ನಾವು 20 ಶಾಸಕರು 4 ರಿಂದ 7 ಬಾರಿ ಶಾಸಕರಾಗಿದ್ದೇವೆ. ಆದರೆ ನಾವು ಯಾರನ್ನು ಟೀಕೆ ಮಾಡಲ್ಲ. ಈಗ ನಾವು ತೆಗೆದುಕೊಂಡಿರುವ ನಿರ್ಧಾರ ಧೃಡವಾಗಿದ್ದು, ಸ್ಪೀಕರ್ ಅವರು ಯಾವ ಒತ್ತಡಕ್ಕೂ ಒಳಗಾಗದೇ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ ಎಂದರು.
ಕ್ಷೇತ್ರಕ್ಕೆ ಆಗಮಿಸಿದ್ದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ನಾನು ತುರ್ತು ಕೆಲಸಕ್ಕೆ ಬಂದಿದ್ದು ನಿಜ. ನಮ್ಮ ಯಾವ ನಿಲುವಿನಲ್ಲಿ ಒಗ್ಗಟ್ಟಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂತಿಮ ನಿರ್ಣಯಕ್ಕೆ ನಾವೆಲ್ಲರೂ ಬಾಧ್ಯಸ್ಥರು. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಕೊಟ್ಟಿದ್ದೇವೆ ನಮ್ಮ ನಿರ್ಣಯವನ್ನು ಸ್ವೀಕರಿಸಬೇಕು ಎಂದು ಪ್ರಾರ್ಥನೆ ಮಾಡಿದ್ದೇವೆ. ಸೂಕ್ತ ನಿರ್ಣಯ ಸಿಗುತ್ತೆ ಎಂದು ನಂಬಿಕೊಂಡಿದ್ದೇವೆ. ಆ ನಿರ್ಣಯದ ನಂತರ ನಮ್ಮ ನಡೆ ಬಹಿರಂಗ ಮಾಡುತ್ತೇವೆ ಎಂದು ತಿಳಿಸಿದರು.
ಶಿವರಾಮ್ ಹೆಬ್ಬಾರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅತೃಪ್ತ ಶಾಸಕರ ಹಿಂದೆ ಸಿದ್ದರಾಮಯ್ಯ ಅವರು ಇದ್ದರಾ ಎಂಬ ಪ್ರಶ್ನೆ ಮೂಡಿದೆ. ಆದರೆ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅತೃಪ್ತ ಶಾಸಕರನ್ನ ಸೇರಿಸಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ದಿಕ್ಕು ತಪ್ಪಿಸಲು ಶಿವರಾಮ್ ಹೆಬ್ಬಾರ್ ಈ ಹೇಳಿಕೆ ನೀಡಿದ್ದಾರಾ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ವಿಶ್ವಾಸ ಮತಯಾಚನೆಯ ವೇಳೆ ಮಾತನಾಡಿದ್ದ ಸಿದ್ದರಾಮಯ್ಯ, ಈ ಹೊಲಸು ರಾಜಕೀಯ ಬೆಳವಣಿಗೆಗಳ ಹಿಂದೆ ಬಿಜೆಪಿ ಪಕ್ಷ ಇದೆ ಎಂಬುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ. ರಾಜ್ಯದ ಮತದಾರರು ಮೂರ್ಖರಲ್ಲ. ಇದಕ್ಕೆ ಮುಂದಿನ ಚುನಾವಣೆಗಳು ತಕ್ಕ ಪಾಠ ಕಲಿಸಲಿವೆ. ಅಧಿಕಾರದಾಸೆಗೆ ಶಾಸಕರನ್ನು ಖರೀದಿಸಿ, ಇದ್ದ ಸರ್ಕಾರವನ್ನು ಅಸ್ಥಿರಗೊಳಿಸಿ ಜನರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ರಚಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
ಇಂದಿನ ಹದಗೆಟ್ಟ ರಾಜಕೀಯ ಪರಿಸ್ಥಿತಿಗೂ ನಮಗೂ ಸಂಬಂಧವೇ ಇಲ್ಲ ಎಂದು ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಇದೊಂದು ರೀತಿ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯದು ಎಂಬಂತಿದೆ. ಮುಂದೆ ಬಿಜೆಪಿ ಸರ್ಕಾರ ಬಂದು ಈಗ ಪಕ್ಷಾಂತರ ಮಾಡಿದವರೆಲ್ಲ ಬಿಜೆಪಿಯಲ್ಲಿ ಮಂತ್ರಿಗಳಾದರೆ ಜಗತ್ತಿಗೆ ಇವರ ಕುತಂತ್ರ ತಿಳಿಯುವುದಿಲ್ಲವೇ? ನಮಗೆ ದ್ರೋಹ ಬಗೆದು ಪಕ್ಷವನ್ನು ಬಿಟ್ಟು ಯಾರು ಬಿಜೆಪಿ ಜತೆ ಹೋಗಿದ್ದಾರೋ, ಅವರನ್ನು ಪ್ರಳಯವಾದರೂ ಮತ್ತೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದಿದ್ದರು.
ಕಾರವಾರ: ಮೈತ್ರಿ ಸರ್ಕಾರ ಬಿದ್ದ ಬೆನ್ನಲ್ಲೇ ಕಾಂಗ್ರೆಸ್‍ನ ರೆಬೆಲ್ ಶಾಸಕ ಶಿವರಾಮ್ ಹೆಬ್ಬಾರ್ ಅವರು ಮುಂಬೈನಿಂದ ವಾಪಸ್ ಆಗಿದ್ದಾರೆ.
ಶಿವರಾಮ್ ಹೆಬ್ಬಾರ್ ಅವರು ಬುಧವಾರ ಸಂಜೆ ಯಲ್ಲಾಪುರದ ಮನೆಗೆ ಆಗಮಿಸಿದ್ದಾರೆ. ಸಾರ್ವಜನಿಕರಿಗೆ ತಿಳಿಯದಂತೆ ಶಾಸಕರು ಮನೆಗೆ ಸೇರಿದ್ದು, ಆಪ್ತರನ್ನು ಮಾತ್ರ ಕರೆದು ಮಾತುಕತೆ ನಡೆಸಿದ್ದಾರೆ. ಹೀಗಾಗಿ ಮನೆಗೆ ಬಾರದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದಾರೆ.
ಶಾಸಕ ಶಿವರಾಮ್ ಹೆಬ್ಬಾರ್ ಅವರು ಬಿಜೆಪಿ ಸೇರುವ ಕುರಿತು ಕುಟುಂಬದವರೊಂದಿಗೆ ಹಾಗೂ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆ. ರಾಜಕೀಯ ಭವಿಷ್ಯದಿಂದ ಬಿಜೆಪಿ ಸೇರುವುದು ಉತ್ತಮ. ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಅಂತ ತಿಳಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಅತೃಪ್ತರೊಂದಿಗೆ ವಾಸ್ತವ್ಯ ಹೂಡಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಶಿರಸಿ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕರ ಕಚೇರಿಗೆ ತೆರಳಿ ಶಾಸಕರನ್ನು ಹುಡುಕಿಕೊಡುವಂತೆ ದೂರನ್ನು ದಾಖಲಿಸಿದ್ದಾರೆ.
ನಗರದ ಡಿವೈಎಸ್ಪಿ ಕಚೇರಿಗೆ ತೆರಳಿದ ಜಿಲ್ಲಾ ಕಾಂಗ್ರೆಸ್ ಭೀಮಣ್ಣ ನಾಯ್ಕ್ ಮತ್ತಿತ್ತರರು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಹುಡುಕಿಕೊಡುವಂತೆ ಡಿವೈಎಸ್ಪಿ ಜಿ.ಟಿ ನಾಯಕ ಅವರಿಗೆ ದೂರು ಸಲ್ಲಿಸಿದ್ದಾರೆ. ಕಳೆದ 10 ದಿನಗಳಿಂದ ಶಾಸಕರು ಕಾಣೆಯಾಗಿದ್ದು, ಶಾಸಕರು ಸಂಪರ್ಕಕ್ಕೂ ಸಿಕ್ಕಿಲ್ಲ. ಅಲ್ಲದೇ ಕ್ಷೇತ್ರದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಶಾಸಕರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನರು ಅಪಹರಣ ಮಾಡಿ ಅವರನ್ನು ಅಕ್ರಮವಾಗಿ ಹಾಗೂ ಬಲವಂತವಾಗಿ ಕೂಡಿ ಹಾಕಿರಬಹುದೆಂಬ ಸಂಶಯ ಬಲವಾಗಿದೆ ಎಂದು ತಿಳಿಸಿದ್ದಾರೆ.
ಶಾಸಕರ ಕ್ಷೇತ್ರಕ್ಕೆ ಅತೀ ಅಗತ್ಯವಿರುವ ಕಾರಣ ದೂರನ್ನು ಸ್ವೀಕರಿಸಿದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರರನ್ನು ಹುಡುಕಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಭೀಮಣ್ಣ ನಾಯ್ಕ, ರೈತರು, ಸಾರ್ವಜನಿಕರು ಸೇರಿದಂತೆ ಅನೇಕರು ಶಾಸಕರ ಕುರಿತಾಗಿ ಕೇಳಿಕೊಂಡು ಬರುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಮೊದಲು ಶಾಸಕರ ಮನೆಗೆ ತೆರಳಿದಾಗ ಅವರು ಇಲ್ಲದ ಕಾರಣ ಅವರನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು.
ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರನ್ನು ಹುಡುಕಿಕೊಡುವಂತೆ ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶವರೆಡ್ಡಿ ದೂರು ನೀಡಿದ್ದರು. ಈ ಬಗ್ಗೆ ಕೇಶವರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಅವರು, 10 ದಿನದಿಂದ ಚಿಕ್ಕಬಳ್ಳಾಪುರ ಶಾಸಕರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಬರಗಾಲದಿಂದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಸುಧಾಕರ್ ಅವರು ಯಾರ ಸಂಪರ್ಕಕ್ಕೆ ಸಿಗದಿರುವ ಕಾರಣ ಹಾಗೂ ಜನರ ಸಮಸ್ಯೆಗೆ ಸ್ಪಂದಿಸದ್ದಕ್ಕೆ ಅವರನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.