Tag: ಶಿವರಾಮ್ ಹೆಬ್ಬಾರ್

  • ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅನುಮತಿ ಕಾಯಬೇಕಿಲ್ಲ: ಶಿವರಾಮ್ ಹೆಬ್ಬಾರ್

    ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅನುಮತಿ ಕಾಯಬೇಕಿಲ್ಲ: ಶಿವರಾಮ್ ಹೆಬ್ಬಾರ್

    ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ಮುಂಜಾಗೃತಾ ಕ್ರಮದಿಂದ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ, ಮೀನುಗಾರರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

    ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಕೊರೊನಾ ತಡೆ ಬಗ್ಗೆ ಸಭೆ ನಡೆಸಿದ ಅವರು, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ಮುಕ್ತವಾಗಿ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ನಿರ್ಣಯದಂತೆ ಜಿಲ್ಲೆಯಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಮೀನುಗಾರಿಕೆಗೂ ಸಹ ಅವಕಾಶ ನೀಡಲಾಗಿದೆ. ಅಡಿಕೆ ಸೇರಿದಂತೆ ಇತರೆ ಬೆಳೆಗಳನ್ನು ರೈತರು ದೇಶದ ಯಾವುದೇ ಭಾಗಗಳಿಗೆ ಸಾಗಿಸಲು ಅನುಮತಿಗಾಗಿ ಕಾಯಬೇಕಾಗಿಲ್ಲ. ಜಿಲ್ಲಾಧಿಕಾರಿ ಮೂಲಕ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಮೂಲಕವು ಅನುಮತಿ ಪಡೆದುಕೊಳ್ಳಬಹುದು ಎಂದರು.

    ಘಟ್ಟದ ಕೆಳಗೆ ಕಲ್ಲಂಗಡಿ, ಘಟ್ಟದ ಮೇಲ್ಬಾಗದಲ್ಲಿ ಅನಾನಸ್, ಬಾಳೆಹಣ್ಣು, ಪಪ್ಪಾಯಿ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ಕೊಂಡುಕೊಳ್ಳುವವರು ಇಲ್ಲದ ಕಾರಣ ಸುಮಾರು 12 ಸಾವಿರ ಟನ್ ಅನಾನಸ್ ಹಾಗೆ ಇದೆ. ಈ ಬಗ್ಗೆ ಭಾರತ ಸರ್ಕಾರದ ಅಧಿಕಾರಿಗಳ ಜೊತೆ ಮಾತಾಡಿದ್ದು, ಈ ವಾರದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

    ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಯಾವುದೇ ತೊಂದರೆಯಾಗಿಲ್ಲ. ಓಟಿಪಿ ಬದಲು ಈ ಮೂರು ತಿಂಗಳು ಸಹಿ ಪಡೆದು ಪಡಿತರ ವಿತರಣೆ ಮಾಡಲು ಸೂಚಿಸಲಾಗಿದ್ದು, ಈಗಾಗಲೇ ಶೇ. 80ರಷ್ಟು ಪಡಿತರ ನೀಡಲಾಗಿದೆ. ಜೊತೆಗೆ ಬಿಪಿಎಲ್‍ಗಾಗಿ ಜಿಲ್ಲೆಯಲ್ಲಿ 3,427 ಜನರು ಅರ್ಜಿ ಸಲ್ಲಿಸಿದ್ದು, ಅವರಿಗೂ ಮೂರು ತಿಂಗಳು ಪಡಿತರ ವಿತರಣೆ ಮಾಡುವುದಾಗಿ ತಿಳಿಸಿದರು.

    ಶಿರಸಿ ಸಿದ್ದಾಪುರದಲ್ಲಿ ನಾಲ್ಕು ಜನರಲ್ಲಿ ಮಂಗನ ಕಾಯಿಲೆ ಕಂಡು ಬಂದಿದೆ. ಈಗಾಗಲೇ ಆರೋಗ್ಯ ಇಲಾಖೆ ಕಾರ್ಯೋನ್ಮುಕವಾಗಿದ್ದು, ಶಿರಸಿ ಉಪವಿಭಾಗಾಧಿಕಾರಿ ಪ್ರತಿ ಎರಡು ದಿನಕ್ಕೊಮ್ಮೆ ಸ್ಥಳಕ್ಕೆ ತೆರಳಿ ಜನರಲ್ಲಿ ಧೈರ್ಯ ತುಂಬಲು ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಔಷಧಿ ಪಡೆಯಲು ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಪಿಡಿಓಗಳಿಗೆ ಆಯಾ ಭಾಗದ ಜನರು ಯಾವ ಔಷಧಿಗಳು ಬೇಕು ಎಂಬುದನ್ನು ತಿಳಿಸಿದಲ್ಲಿ ಅವರ ಮೂಲಕ ಪೂರೈಸಲು ಸೂಚಿಸಲಾಗಿದೆ. ಅಲ್ಲದೆ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುವ ವಾಹನಗಳಿಗೆ ಡಿಸೆಲ್ ವ್ಯವಸ್ಥೆ ಕೂಡ ಪಿಡಿಓ ಮೂಲಕ ಮಾಡಲಾಗಿದೆ ಎಂದು ಹೇಳಿದರು.

  • ಜನ ನಮ್ಮನ್ನು ಮಾನ್ಯ ಮಾಡಿ ಸಿದ್ದರಾಮಯ್ಯರನ್ನ ಅಮಾನ್ಯ ಮಾಡಿದ್ದಾರೆ: ಶಿವರಾಮ್ ಹೆಬ್ಬಾರ್

    ಜನ ನಮ್ಮನ್ನು ಮಾನ್ಯ ಮಾಡಿ ಸಿದ್ದರಾಮಯ್ಯರನ್ನ ಅಮಾನ್ಯ ಮಾಡಿದ್ದಾರೆ: ಶಿವರಾಮ್ ಹೆಬ್ಬಾರ್

    ಕಾರವಾರ: ಪಕ್ಷಾಂತರ ಮಾಡಿದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಮಂತ್ರಿ ಮಾಡುವುದಿಲ್ಲ ಎಂಬ ಕಾಲ ಬಂದಾಗ ನಮಗೆ ಮೋಸ ಮಾಡಿದರು ಎಂದು ಸಿದ್ದರಾಮಯ್ಯನವರೇ ಮಾತನಾಡಿದ್ದರು. ಇಂದು ಅವರಿಗೆ ಯಾವ ಬೇಸರವಾಗಿದೆಯೋ ಗೊತ್ತಿಲ್ಲ. ಅವರು ಬೇಸರ ಮಾಡಿಕೊಳ್ಳುವುದು ಬೇಡ, ಜನ ನಮ್ಮನ್ನು ಮಾನ್ಯ ಮಾಡಿದ್ದಾರೆ. ಅವರನ್ನು ಅಮಾನ್ಯ ಮಾಡಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದು ಟಾಂಗ್ ಕೊಟ್ಟರು.

    ಉಪ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ಶಿವರಾಮ್ ಹೆಬ್ಬಾರ್ ಉಪಚುನಾವಣೆಯಲ್ಲಿ ಸೋತವರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಸಚಿವ ಸಂಪುಟ ವಿಸ್ತರಣೆ ಫೆ. 6ರಂದು ಆಗಲಿದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಅದರಂತೆ ಆಗುತ್ತದೆ, ಯಾವುದೇ ವಿಷಯವಾದರೂ ಸಿಎಂಗೆ ಕೇಳಿ ಎಂದು ಪ್ರತಿಕ್ರಿಯಿಸಿದರು.

  • ಉಪಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಂಡ ಹೆಬ್ಬಾರ್

    ಉಪಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಂಡ ಹೆಬ್ಬಾರ್

    ಕಾರವಾರ: ಯಲ್ಲಾಪುರ ಉಪ ಚುನಾವಣೆ ಸಂದರ್ಭದಲ್ಲಿ ಕೊಂಡೆಮನೆ ಗ್ರಾಮದ ಜನರಿಗೆ ಕೊಟ್ಟ ಮಾತನ್ನು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಉಳಿಸಿಕೊಂಡಿದ್ದಾರೆ.

    ಯಲ್ಲಾಪುರ ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕೊಂಡೆಮನೆ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತವೆ. ಪ್ರತಿ ದಿನ ನಗರಕ್ಕೆ ಬರಬೇಕಾದರೇ ಈ ಗ್ರಾಮದ ಜನರು ಕಾಲು ಹಾದಿಯಲ್ಲಿಯೇ ನಗರಕ್ಕೆ ಬರುವ ಸ್ಥಿತಿ ಇತ್ತು. ಈ ಕಾರಣದಿಂದ ಸತತ 15 ವರ್ಷಗಳಿಂದ ಸಂಬಂಧ ಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರು ಏನೂ ಪ್ರಯೋಜನವಾಗಿರಲಿಲ್ಲ.

    ಕೊಂಡೆಮನೆ ಗ್ರಾಮವು ಮೊದಲು ಯಲ್ಲಾಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿತ್ತು. ಆದರೆ ಸರ್ಕಾರ ಈ ಗ್ರಾಮವನ್ನು ಉಪಳೇಶ್ವರ ಗ್ರಾಮ ಪಂಚಾಯ್ತಿಗೆ ಸೇರಿಸಿದ್ದು ಈ ಪ್ರಕ್ರಿಯೆ ನಡೆಯಲು ತಾಂತ್ರಿಕ ಕಾರಣದಿಂದ 15 ವರ್ಷಗಳೇ ಕಳೆದುಹೋಯಿತು. ಈ ಮಧ್ಯೆ ರಸ್ತೆ ಮಾಡಲು ಪಟ್ಟಣ ಪಂಚಾಯ್ತಿ ಆಗಲಿ, ಗ್ರಾಮ ಪಂಚಾಯ್ತಿಯಾಗಲಿ ಮುಂದೆ ಬಾರದೇ 15 ವರ್ಷಗಳಿಂದ ನಗರ ಪ್ರದೇಶಕ್ಕೆ ಹತ್ತಿರವಿದ್ದರೂ ಕೊಂಡೆಮನೆ ಗ್ರಾಮವು ರಸ್ತೆಯೇ ಇಲ್ಲದೇ ಕಾಲು ಹಾದಿಯಲ್ಲಿಯೇ ಇಲ್ಲಿನ ಜನರು ತಿರುಗಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಇತ್ತೀಚಿಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಶಿವರಾಮ್ ಹೆಬ್ಬಾರ್ ಈ ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಇಲ್ಲಿನ ಗ್ರಾಮದ ಜನರು ತಮ್ಮ ಊರಿಗೆ ರಸ್ತೆ ಮಾಡಿಕೊಡುವುದಾದರೇ ಮಾತ್ರ ಮತ ಹಾಕುವುದಾಗಿ ಹೇಳಿದ್ದರು. ಇದಕ್ಕೆ ಶಿವರಾಮ್ ಹೆಬ್ಬಾರ್ ತಾವು ಗೆಲ್ಲಲಿ ಸೋಲಲಿ ಈ ಊರಿಗೆ ರಸ್ತೆ ಮಾಡಿಕೊಡುವ ಆಶ್ವಾಸನೆ ನೀಡಿದ್ದರು.

    ಈಗ ಚುನಾವಣೆಯಲ್ಲಿ ಅತ್ಯಂತ ಬಹುಮತದಲ್ಲಿ ಗೆದ್ದ ಹೆಬ್ಬಾರ್ ತಾವು ಕೊಟ್ಟ ಆಶ್ವಾಸನೆಯನ್ನು ಮರೆಯದೇ ಈ ಊರಿಗೆ ರಸ್ತೆ ಮಾಡಲು ಮುಂದಾಗಿದ್ದಾರೆ. ಆದರೇ ತಾಂತ್ರಿಕ ಕಾರಣ ಅಡ್ಡ ಬಂದಿದ್ದು ಅನುದಾನದ ಸಮಸ್ಯೆ ಎದುರಾಗಿದೆ. ಆದರೂ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸ್ವಂತ ಹಣ ಖರ್ಚು ಮಾಡಿ ಈಗ ರಸ್ತೆ ನಿರ್ಮಿಸಿದ್ದಾರೆ.

  • ಗೆಲುವಿಗಾಗಿ ಸ್ವಾಮೀಜಿಗಳ ಮೊರೆ ಹೋದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ

    ಗೆಲುವಿಗಾಗಿ ಸ್ವಾಮೀಜಿಗಳ ಮೊರೆ ಹೋದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ

    ಕಾರವಾರ: ಉಪ ಚುನಾವಣೆ ಮತದಾನಕ್ಕೆ ಎರಡೇ ದಿನ ಬಾಕಿ ಉಳಿದಿದೆ. ಬಿಜೆಪಿ ಸೇರಿದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್‍ರನ್ನು ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದ್ದು, ಮತ ಬೇಟೆಗೆ ಭರ್ಜರಿ ತಂತ್ರ ಹೆಣೆದಿದೆ. ಇದರಿಂದಾಗಿ ಹೆದರಿದ ಹೆಬ್ಬಾರ್, ಜಾತಿ ಮತ ಭೇಟೆಗಾಗಿ ಮಠಗಳ ಮೊರೆ ಹೋಗಿದ್ದಾರೆ.

    ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಶಿವರಾಮ್ ಹೆಬ್ಬಾರ್ ಅವರಿಗೆ ಗೆಲ್ಲುವ ಅನಿವಾರ್ಯತೆಯಿದೆ. ಇತ್ತ ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕರನ್ನು ಕಣಕ್ಕಿಳಿಸಿದ್ದು, ಖುದ್ದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಳತ್ವ ವಹಿಸಿದ್ದಾರೆ. ಹೀಗಾಗಿ ಹೆಬ್ಬಾರ್ ಪರ ಇದ್ದ ಮತದಾರರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಕಾಂಗ್ರೆಸ್ ತಂತ್ರಗಾರಿಕೆಯಿಂದ ಹೆದರಿರುವ ಹೆಬ್ಬಾರ್, ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರೆನಿಸಿರುವ ಬ್ರಾಹ್ಮಣ ಹಾಗೂ ಹಿಂದುಳಿದ ಮತಗಳ ಓಲೈಕೆಗೆ ಇಳಿದಿದ್ದಾರೆ. ರಾತ್ರೋರಾತ್ರಿ ಬ್ರಾಹ್ಮಣ ಜನಾಂಗದ ಮಠಾಧೀಶರರಾದ ಸ್ವರ್ಣವಳ್ಳಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮೊರೆ ಹೋಗಿ, ತಮ್ಮ ಪರ ಇರುವಂತೆ ಕೇಳಿಕೊಂಡಿದ್ದಾರೆ. ತನ್ನ ಹೆಸರು ಬಳಸಿ ಕಾಂಗ್ರೆಸ್‍ಗೆ ಮತ ನೀಡಿ ಎಂದು ಕೇಳುತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಆರೋಪಿಸಿದ್ದಾರೆ.

    ಕಾಂಗ್ರೆಸ್‍ಗೆ ದ್ರೋಹ ಬಗೆದ ಹೆಬ್ಬಾರ್‍ರನ್ನು ಸೋಲಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಖುದ್ದು ಕ್ಷೇತ್ರದ ತುಂಬಾ ಓಡಾಡಿ, ದಲಿತ ಮತ್ತು ಅಹಿಂದ ಮತಗಳನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಇದು ಕಾಂಗ್ರೆಸ್‍ನ ಭರವಸೆಯನ್ನು ಹೆಚ್ಚಿಸಿದೆ. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಕ್ಷೇತ್ರದಲ್ಲಿ ಎರಡನೇ ಅತಿಹೆಚ್ಚು ಮತದಾರರಾಗಿರುವ ನಾಯಕ ಜನಾಂಗದವರಾಗಿದ್ದು, ನಾಯಕ ಜನಾಂಗ ಇವರ ಪರ ನಿಂತಿದೆ.

  • ರಾತ್ರೋ ರಾತ್ರಿ ಸ್ವರ್ಣವಲ್ಲಿ ಶ್ರೀಗಳನ್ನು ಭೇಟಿಯಾದ ಶಿವರಾಮ್ ಹೆಬ್ಬಾರ್

    ರಾತ್ರೋ ರಾತ್ರಿ ಸ್ವರ್ಣವಲ್ಲಿ ಶ್ರೀಗಳನ್ನು ಭೇಟಿಯಾದ ಶಿವರಾಮ್ ಹೆಬ್ಬಾರ್

    ಕಾರವಾರ: ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಯಲ್ಲಾಪುರದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಸ್ವರ್ಣವಲ್ಲಿ ಶ್ರೀಗಳನ್ನು ರಾತ್ರೋ ರಾತ್ರಿ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ.

    ಬ್ರಾಹ್ಮಣ ಜನಾಂಗದ ಪೀಠಾಧಿಪತಿಯಾದ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಯಲ್ಲಾಪುರ ಕ್ಷೇತ್ರದಲ್ಲಿ ಬ್ರಾಹ್ಮಣ ಜನಾಂಗ ಹಾಗೂ ಹಿಂದುಳಿದ ಜನಾಂಗದ ಮೇಲೆ ತನ್ನದೇ ಆದ ಹಿಡಿತ ಹೊಂದಿದ್ದಾರೆ. ಅಲ್ಲದೆ ಹಸಿರು ಕ್ರಾಂತಿ ಮೂಲಕ ಈ ಭಾಗದಲ್ಲಿ ಹೆಚ್ಚು ಚಿರಪರಿಚಿತರು. ಅಷ್ಟೇ ಅಲ್ಲದೆ ಕೈಗಾ ವಿರೋಧಿ ಹೋರಾಟದ ಮೂಲಕ ಯಲ್ಲಾಪುರದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.

    ಆದರೆ ಶಿವರಾಮ್ ಹೆಬ್ಬಾರ್ ಮಧ್ಯರಾತ್ರಿ 12 ಗಂಟೆಗೆ ಸ್ವರ್ಣವಲ್ಲಿ ಮಠಕ್ಕೆ ಭೇಟಿ ಕೊಟ್ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶಿವರಾಮ್ ಹೆಬ್ಬಾರ್ ಶ್ರೀಗಳನ್ನು ದಿಢೀರ್ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ.

    ಯಲ್ಲಾಪುರ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಸ್ವಾಮಿಗಳ ಭೇಟಿ ಮಹತ್ವವಾಗಿದ್ದು, ಈ ಹಿಂದೆ ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗೆ ಕಾರಣರಾಗಿದ್ದ ಶ್ರೀಗಳು ಹೆಬ್ಬಾರ್ ಪರ ನಿಲ್ಲುವರೇ ಎಂಬುದನ್ನು ಕಾದುನೋಡಬೇಕಿದೆ.

    ಯಲ್ಲಾಪುರದ ಕ್ಷೇತ್ರದಲ್ಲಿ ಅಧಿಕ ಬ್ರಾಹ್ಮಣ ಮತ ಇರುವ ಹಿನ್ನೆಲೆಯಲ್ಲಿ ಜಾತಿ ಮತ ಬೇಟೆಗೆ ಹೆಬ್ಬಾರ್ ಶ್ರೀಗಳನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಮಾತುಕತೆ ಬಳಿಕ ಶ್ರೀಗಳಿಂದ ಹೆಬ್ಬಾರ್ ಮಂತ್ರಾಕ್ಷತೆಯನ್ನೂ ಪಡೆದಿದ್ದಾರೆ.

  • ಕಾಂಗ್ರೆಸ್ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿಡಿ, ಇಲ್ಲ ಅಂದ್ರೆ – ಶಿವರಾಮ್ ಹೆಬ್ಬಾರ್

    ಕಾಂಗ್ರೆಸ್ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿಡಿ, ಇಲ್ಲ ಅಂದ್ರೆ – ಶಿವರಾಮ್ ಹೆಬ್ಬಾರ್

    ಕಾರವಾರ: ಕಾಂಗ್ರೆಸ್ ಪ್ರಚೋದನೆಯಿಂದ ನನ್ನ ಚುನಾವಣಾ ಪ್ರಚಾರಕ್ಕೆ ಅಡ್ಡಿಯಾಯಿತು. ಇದು ಬೆದರಿಸುವ ತಂತ್ರವಾಗಿದೆ. ಆದರೆ ನಾವು ಯಾರಿಗೂ ಹೆದರುವುದಿಲ್ಲ ಎಂದು ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

    ಮುಂಡಗೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಎರಡು ದಿನಗಳ ಹಿಂದೆ ಪ್ರಚಾರ ಸಭೆಯಲ್ಲಿ ನಡೆದ ಗಲಾಟೆ ಕುರಿತು ಪ್ರತಿಕ್ರಿಯೆ ನೀಡಿದರು.

    ಪ್ರಜಾಪ್ರಭುತ್ವದಲ್ಲಿ ನನ್ನ ಅನಿಸಿಕೆ ಹೇಳಿಕೊಳ್ಳಲು ನನಗೆ ಹಕ್ಕಿದೆ. ಆದರೆ ಕಾಂಗ್ರೆಸ್ ಪ್ರಚೋದನೆಯಿಂದ ಗಲಾಟೆ ಆಯಿತು. ಅದಕ್ಕಾಗಿ ಮಾರನೇ ದಿನ ದೇಶಪಾಂಡೆ ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತರು ಗಲಾಟೆ ಮಾಡಿದರು. ನೀವು ಬಿಜೆಪಿ ನಾಯಕರಿಗೆ ತೊಂದರೆ ನೀಡಿದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡುತ್ತಾರೆ ಎಂದರು.

    ಉತ್ತರ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ಇಂತಹ ಕಹಿ ಘಟನೆಗಳು ಎಂದಿಗೂ ನಡೆದಿಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಿ. ಸಭೆಗೆ ಬರಲು ಮನಸ್ಸಿಲ್ಲ ಎಂದರೆ ಬರುವುದು ಬೇಡ. ಗಲಾಟೆ ನೀವು ಮಾಡಿದಲ್ಲಿ ಅದು ನಮ್ಮವರಿಂದ ಮುಂದುವರಿಯುತ್ತದೆ. ಆದ ಕಾರಣ ಯಾರೂ ಮಾಡದಿರುವುದು ಉತ್ತಮ ಎಂದು ಕಾಂಗ್ರೆಸ್‍ಗೆ ಸಲಹೆ ನೀಡಿದರು.

    ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ರಾಜ್ಯ, ರಾಷ್ಟ್ರ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್ ಸಹ ಪ್ರಚಾರ ಮಾಡುತ್ತಿದ್ದು, ಬಿಜೆಪಿ ಮತ್ತು ನನ್ನ ಕುರಿತು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ವೈಯಕ್ತಿಕ ತೇಜೋವಧೆಗೆ ಅವರು ಮುಂದಾಗಿದ್ದು, ನಾವೂ ತಿರುಗೇಟು ನೀಡಬೇಕಾಗುತ್ತದೆ. ನಾವು ಯಾರ ಗುಲಾಮರಲ್ಲ ಎಂದು ಪುನರುಚ್ಚರಿಸಿದರು.

  • ಸ್ವಪಕ್ಷೀಯರಿಂದ್ಲೂ ಕ್ಲಾಸ್, ಹಳೆ ಪಕ್ಷದವ್ರಿಂದ್ಲೂ ಕ್ಲಾಸ್ – ಮಧ್ಯರಾತ್ರಿ ಬಿಜೆಪಿ ಅಭ್ಯರ್ಥಿ ಕಕ್ಕಾಬಿಕ್ಕಿ

    ಸ್ವಪಕ್ಷೀಯರಿಂದ್ಲೂ ಕ್ಲಾಸ್, ಹಳೆ ಪಕ್ಷದವ್ರಿಂದ್ಲೂ ಕ್ಲಾಸ್ – ಮಧ್ಯರಾತ್ರಿ ಬಿಜೆಪಿ ಅಭ್ಯರ್ಥಿ ಕಕ್ಕಾಬಿಕ್ಕಿ

    ಕಾರವಾರ: ಸ್ವಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್‍ಗೆ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದದಿಂದ ಬೈದು ನೂಕಾಡಿ ಗ್ರಾಮದಿಂದ ಹೊರಕ್ಕೆ ಕಳುಹಿಸಿದ ಘಟನೆ ಬನವಾಸಿಯ ಅಜ್ಜರಣಿ ಗ್ರಾಮದಲ್ಲಿ ನಡೆದಿದೆ.

    ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನೀವೇ ಕಾರಣರಾದವರು. ಈ ಹಿಂದೆ ಬಿಜೆಪಿ ತೆಗಳಿ ಈಗ ಆಡಿದ ಮಾತು ಉಳಿಸಿಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರು ಜರೆದ್ರು. ಇತ್ತ ಕಾಂಗ್ರೆಸ್ ಕಾರ್ಯಕರ್ತರೇನು ಸುಮ್ನೆ ಇರಲಿಲ್ಲ. ಬಿಜೆಪಿಗೆ ಹೋದ ನಿಮಗೆ ಹೇಗೆ ವೋಟ್ ಕೊಡೋದು ಎಂದು ತರಾಟೆ ತೆಗೆದುಕೊಂಡರು.

    ಕಳೆದ ಬಾರಿ ಕಾಂಗ್ರೆಸ್ಸಿನಲ್ಲಿದ್ದಾಗ ಬಿಜೆಪಿಯವರ ಬಗ್ಗೆ ಏನೂಂತ ಭಾಷಣ ಮಾಡಿದ್ದೀರಿ. ಇಂದು ಅದನ್ನು ಉಳಿಸಿಕೊಳ್ಳೋದನ್ನು ಕಲಿತುಕೊಳ್ಳಿ. ನಿಮ್ಮ ಸ್ವಾರ್ಥಕ್ಕೋಸ್ಕರ ನೀವು ಮಾಡಬೇಡಿ ಎಂದು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಮಾಧಾನ ಪಡಿಸಲು ಹೆಬ್ಬಾರ್ ಯತ್ನಿಸಿ ಕೊನೆಗೆ ಪರಿಸ್ಥಿತಿಯ ತೀವ್ರತೆ ಅರಿತು ಗ್ರಾಮದಿಂದ ಹೊರ ನಡೆದಿದ್ದಾರೆ.

    ಹೆಬ್ಬಾರ್ ಹೇಳಿದ್ದೇನು?
    ಯಲ್ಲಾಪುರ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿ ಸಿದ್ದರಾಮಯ್ಯ ಹಾಗೂ ದೇಶಪಾಂಡೆ ಅವರು ಹೆಬ್ಬಾರ್ ನಾಲಾಯಕ್ ಎಂದ ಹೇಳಿಕೆಯನ್ನು ಪ್ರಸ್ತಾಪಿಸಿ, ಹಿರಿಯ ನಾಯಕರಾದವರಿಗೆ ನಾಲಿಗೆ ಮೇಲೆ ಹಿಡಿತವಿರಬೇಕು, ನೀವು ನಿಮ್ಮ ನಾಲಿಗೆಯನ್ನ ಹರಿಬಿಟ್ಟರೇ ನಾನು ನನ್ನ ನಾಲಿಗೆಯನ್ನ ಹರಿಬಿಡುತ್ತೇನೆ. ಪಕ್ಷಾಂತರದ ಬಗ್ಗೆ ದೇಶಪಾಂಡೆ, ಸಿದ್ದರಾಮಯ್ಯ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ದೇಶಪಾಂಡೆ ಇಡೀ ಜಿಲ್ಲೆಯ ಜನರ ಕ್ಷಮೆ ಕೇಳಬೇಕು. ಕಳೆದ ಬಾರಿ ಸತೀಶ್ ಸೈಲ್, ಶಾರದ ಶೆಟ್ಟಿ, ಮಂಕಾಳು ವೈದ್ಯ ಯಾಕೆ ಸೋತರು ಅನ್ನೋದು ಗೊತ್ತು, ಅಧಿಕಾರಿಗಳನ್ನ ಇಟ್ಟುಕೊಂಡು ದೇಶಪಾಂಡೆ ದಬ್ಬಾಳಿಕೆ ಮಾಡಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಅನಂತಕುಮಾರ್ ಹೆಗಡೆ ಬಳಿ ಬೂಟಿನೇಟು ತಿಂದು ಹೆಬ್ಬಾರ್ ಬಿಜೆಪಿ ತೊರೆದಿದ್ದರು- ಕಾಂಗ್ರೆಸ್ ಮುಖಂಡ ಕಿಡಿ

    ಅನಂತಕುಮಾರ್ ಹೆಗಡೆ ಬಳಿ ಬೂಟಿನೇಟು ತಿಂದು ಹೆಬ್ಬಾರ್ ಬಿಜೆಪಿ ತೊರೆದಿದ್ದರು- ಕಾಂಗ್ರೆಸ್ ಮುಖಂಡ ಕಿಡಿ

    ಕಾರವಾರ: ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಈ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಬಳಿ ಬೂಟಿನ ಹೊಡೆತ ತಿಂದು ಬಿಜೆಪಿಯಿಂದ ಹೊರ ಬಂದಿದ್ದರು. ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ಎಂದು ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ್ ವಾಗ್ದಾಳಿ ನಡೆಸಿದ್ದಾರೆ.

    ಯಲ್ಲಾಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಹೆಬ್ಬಾರ್ ಈ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಅನಂತಕುಮಾರ್ ಹಗ್ಡೆ ಬಳಿ ಬೂಟಿನಿಂದ ಹೊಡೆತ ತಿಂದು ಬಿಜೆಪಿ ಬಿಟ್ಟು ಹೊರಬಂದು, ನಂತರ ಕಾಂಗ್ರೆಸ್ ಸೇರಿದ್ದರು. ಈಗ ಮತ್ತೆ ಬಿಜೆಪಿಗೆ ಸೇರಿದ್ದಾರೆ, ಅವರಿಗೆ ನಾಚಿಗೆಯಾಗಬೇಕು. ಅವರ ಬಂಡವಾಳ ಹೊರಹಾಕಿದರೆ ಬೆಟ್ಟದಷ್ಟಿದೆ ಎಂದು ಕಿಡಿಕಾರಿದರು.

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಅವರನ್ನು ಬಿಜೆಪಿಯಿಂದ ಕಾಂಗ್ರೆಸ್‍ಗೆ ಕರೆತಂದ ದೇಶಪಾಂಡೆಗೆ ಹೆಬ್ಬಾರ್ ಚೂರಿ ಹಾಕಿದ್ದಾರೆ. ಹಾಗೆಯೇ ಮತ ನೀಡಿದವರಿಗೂ ಚೂರಿ ಹಾಕಿದ್ದಾರೆ ಇವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

    ಆಪರೇಷನ್ ಕಮಲದ ಪಿತಾಮಹ ಮಿಸ್ಟರ್ ಯಡಿಯೂರಪ್ಪ, ಅನರ್ಹ ಶಾಸಕರಿಗೆ 20 ಕೋಟಿ ರೂ. ಕೊಡಲಾಗಿದೆ. ಲಂಚದ ಹಣ ತಂದು ಶಾಸಕರಿಗೆ ಕೊಟ್ಟು ಸಮ್ಮಿಶ್ರ ಸರ್ಕಾರ ಕೆಡವಿ ಹಾಕಿದ್ದರು. ಅಲ್ಲದೆ ಮಹಾರಾಷ್ಟ್ರದಲ್ಲಿ ಕಳ್ಳರ ರೀತಿ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆ ಕೊನೆ ಮಾಡಿ ಅಧಿಕಾರಕ್ಕೆ ಬರುತ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

    ಅನಂತಕುಮಾರ್ ಹೆಗಡೆ ಗ್ರಾಮಪಂಚಾಯತ್ ಸದಸ್ಯನಾಗುಲು ಸಹ ನಾಲಾಯಕ್, ಸಂವಿಧಾನವೇ ಅವನಿಗೆ ಗೊತ್ತಿಲ್ಲ. ಅನಂತಕುಮಾರ್ ಏನು ಮಾತನಾಡುತ್ತಾರೆ ಎನ್ನುವುದು ಅವರಿಗೇ ಗೊತ್ತಿರುವುದಿಲ್ಲ. ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ. ನಾನು ಪ್ರಧಾನಿಯಾಗಿದ್ದರೆ ಅಂದು ಸಚಿವ ಸ್ಥಾನದಿಂದ ಅವರನ್ನು ಕಿತ್ತು ಹಾಕುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾನು ಬಿಜೆಪಿ ಸೇರುತ್ತೇನೆ ಎನ್ನುತ್ತಾರೆ. ನನ್ನ ಹೋರಾಟವೇ ಕೋಮುವಾದಿ, ಜಾತಿವಾದಿಗಳ ವಿರುದ್ಧ ಹೀಗಿರುವಾಗ ಬಿಜೆಪಿಗೆ ಸೇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಚುನಾವಣೆ ನಂತರ ಯಡಿಯೂರಪ್ಪ ಸರ್ಕಾರ ಹೋಗಲಿದ್ದು, ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ. ಮಧ್ಯಂತರ ಚುನಾವಣೆ ಬರುತ್ತದೆ ನಾವೇ ಆಡಳಿತ ನಡೆಸುತ್ತೇವೆ, ಏಳು ಕೆ.ಜಿ. ಅಕ್ಕಿ ಬದಲು ಹತ್ತು ಕೆ.ಜಿ. ಅಕ್ಕಿಯನ್ನು ಬಡವರಿಗೆ ನೀಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

    ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ನಾಯಕರು ಮಾತಿನ ಚಾಟಿ ಬೀಸುತಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ರನ್ನು ಗೆಲ್ಲಿಸಲು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಶತ ಪ್ರಯತ್ನ ನಡೆಸುತ್ತಿದ್ದಾರೆ.

  • ಒಗ್ಗಟ್ಟಿನ ಮಂತ್ರ ಜಪಿಸಿದ್ದ ಶಿವರಾಮ್ ಹೆಬ್ಬಾರ್‌ಗೆ ಸಂಕಷ್ಟ

    ಒಗ್ಗಟ್ಟಿನ ಮಂತ್ರ ಜಪಿಸಿದ್ದ ಶಿವರಾಮ್ ಹೆಬ್ಬಾರ್‌ಗೆ ಸಂಕಷ್ಟ

    ಕಾರವಾರ: ಸೋಮವಾರವಷ್ಟೆ ಬೃಹತ್ ಸಮಾವೇಶ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್‌ಗೆ ಈಗ ಹೊಸ ಆತಂಕವೊಂದು ಎದುರಾಗಿದೆ. ಮಾಜಿ ಶಾಸಕ, ಬಿಜೆಪಿ ಮುಖಂಡ ವಿ.ಎಸ್ ಪಾಟೀಲ್ ಪುತ್ರ ಬಾಪುಗೌಡ ಪಾಟೀಲ್ ಅವರು ಕಾಂಗ್ರೆಸ್ ಸೇರಿ ಕಮಲ ಪಾಳಯಕ್ಕೆ ಶಾಕ್ ನೀಡಿದ್ದಾರೆ.

    ಇಂದು ಸಂಜೆ ಮುಂಡಗೋಡಿನ ಕಾಂಗ್ರೆಸ್ ಕಚೇರಿಯಲ್ಲಿ ಬಾಪುಗೌಡ ಪಾಟೀಲ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ್ ಸಮ್ಮುಖದಲ್ಲಿ ಬಾಪುಗೌಡ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಉಪಚುನಾವಣೆ ಹತ್ತಿರ ಇರುವಾಗಲೇ ಬಾಪುಗೌಡ ಕಾಂಗ್ರೆಸ್ ಸೇರಿರುವುದು ಬಿಜೆಪಿಗೆ ಸ್ಥಳೀಯವಾಗಿ ಹೊಡೆತ ಬಿದ್ದಿದೆ ಎಂಬ ಚರ್ಚೆಗಳು ಆರಂಭಗೊಂಡಿವೆ.

    ವಿ.ಎಸ್ ಪಾಟೀಲ್ ಅವರು ಮುಂಡಗೋಡಿನಲ್ಲಿ ಬಿಜೆಪಿಯ ಪ್ರಬಲ ಮುಖಂಡರಾಗಿದ್ದಾರೆ. ಅವರ ಮಗ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಬಿಜೆಪಿಗೆ ಹಾಗೂ ಶಿವರಾಮ್ ಹೆಬ್ಬಾರ್‌ಗೆ ತೀವ್ರ ಆಘಾತವಾಗಿದ್ದು, ದೊಡ್ಡ ಹಿನ್ನಡೆಯಾದಂತಾಗಿದೆ. ಇದರಿಂದ ಉಪಸಮರದಲ್ಲಿ ಬಿಜೆಪಿಗೆ ಬೆಂಬಲ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತ ಬಾಪುಗೌಡ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ಸಿಗೆ ಇನ್ನಷ್ಟು ಬಲ ಬಂದಂತಾಗಿದೆ.

  • ನಾನು ಎಕ್ಸ್ ಎಂಎಲ್‍ಎ ಅಲ್ಲ: ಕರ್ನಾಟಕ ಭವನದ ಸಿಬ್ಬಂದಿ ಮೇಲೆ ಹೆಬ್ಬಾರ್ ಗರಂ

    ನಾನು ಎಕ್ಸ್ ಎಂಎಲ್‍ಎ ಅಲ್ಲ: ಕರ್ನಾಟಕ ಭವನದ ಸಿಬ್ಬಂದಿ ಮೇಲೆ ಹೆಬ್ಬಾರ್ ಗರಂ

    ನವದೆಹಲಿ: ಯಾರು ಎಕ್ಸ್ ಎಂಎಲ್‍ಎ? ನಾನು ಮಾಜಿ ಶಾಸಕನಲ್ಲ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಮೇಲೆ ಗುಡುಗಿದ್ದಾರೆ.

    ಸುಪ್ರೀಂಕೋರ್ಟ್ ಬುಧವಾರ ಅನರ್ಹ ಶಾಸಕರ ಪ್ರಕರಣದ ತೀರ್ಪು ನೀಡಲಿದೆ. ಈ ಹಿನ್ನೆಲೆಯಲ್ಲಿ ಶಿವರಾಮ್ ಹೆಬ್ಬಾರ್ ಮಂಗಳವಾರ ರಾತ್ರಿ ಕರ್ನಾಟಕ ಭವನಕ್ಕೆ ಆಗಮಿಸಿದರು. ಈ ವೇಳೆ ರೂಮ್ ನೀಡುವಂತೆ ಕೆ.ಬಿ 1ನ ಸಿಬ್ಬಂದಿಗೆ ಕೇಳಿದರು. ಆದರೆ ರೂಮ್ ನೀಡಲು ನಿರಾಕರಿಸಿದ ಸಿಬ್ಬಂದಿ, ರೂಮ್ ಖಾಲಿ ಇಲ್ಲ. ಇಲ್ಲಿ ಕೇವಲ ಹಾಲಿ ಮತ್ತು ಮಾಜಿ ಸಚಿವರಿಗೆ ಮಾತ್ರ ರೂಮ್ ಕೊಡಲಾಗುತ್ತದೆ. ಶಾಸಕರು ಮತ್ತು ಮಾಜಿ ಶಾಸಕರಿಗೆ ಕೆಬಿ 2ನಲ್ಲಿ ರೂಂ ಸಿಗುತ್ತದೆ ಎಂದು ಹೇಳಿದ.

    ಕರ್ನಾಟಕ ಭವನ ಸಿಬ್ಬಂದಿಯ ಮಾತಿನಿಂದ ಫುಲ್ ಗರಂ ಆದ ಅನರ್ಹ ಶಾಸಕರು, ಯಾರಪ್ಪಾ ಎಕ್ಸ್ ಎಂಎಲ್‍ಎ? ಒಬ್ಬರಿಗೊಂದು ಇನ್ನೊಬ್ಬರಿಗೊಂದು ಯಾಕ್ ಮಾಡ್ತಿರಿ ಎಂದು ಗುಡುಗಿದರು. ಆಗ ಕರ್ನಾಟಕ ಭವನದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಕರೆ ಮಾಡಿ, ವಿಚಾರಿಸಿದರು. ಈ ಮಧ್ಯೆ ಶಿವರಾಮ್ ಹೆಬ್ಬಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಲು ಹಿಂದೇಟು ಹಾಕಿದರು.

    ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಧೀಶ ಎನ್.ವಿ.ರಮಣ ಪೀಠ ಪ್ರಕರಣದ ವಾದವನ್ನು ಆಲಿಸಿ ತೀರ್ಪನ್ನು ಬುಧವಾರಕ್ಕೆ ಕಾಯ್ದರಿಸಿತ್ತು. ಈ ನಡುವೆ ಕಾಂಗ್ರೆಸ್ ಸಿಎಂ ಬಿ.ಎಸ್.ಯಡಿಯೂರಪ್ಪನವರ ಹುಬ್ಬಳ್ಳಿಯ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿತ್ತು. ಕಾಂಗ್ರೆಸ್ ಪರ ವಕೀಲ ವಾದವನ್ನು ಆಲಿಸಿದ ಪೀಠ ತೀರ್ಪು ನೀಡುವ ಸಂದರ್ಭದಲ್ಲಿ ಆಡಿಯೋವನ್ನ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ ಎಂದು ಸೂಚಿಸಿತ್ತು.

    ತೀರ್ಪು ವಿಳಂಬವಾದ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೊಹ್ಟಗಿ, ಕರ್ನಾಟಕದಲ್ಲಿ ಘೋಷಣೆಯಾಗಿರುವ ಉಪಚುನಾವಣೆಯನ್ನು ಮುಂದೂಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ರೊಹ್ಟಗಿಯವರ ವಾದ ಆಲಿಸಿದ್ದ ನ್ಯಾಯಾಲಯ, ಅನರ್ಹ ಶಾಸಕರಿಗಾಗಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿತ್ತು.