Tag: ಶಿವರಾಮ್ ಹೆಬ್ಬಾರ್

  • ನಾಯಕತ್ವ ಬದಲಾವಣೆ – ಶಿವರಾಂ ಹೆಬ್ಬಾರ್ ಫುಲ್ ಗಲಿಬಿಲಿ

    ನಾಯಕತ್ವ ಬದಲಾವಣೆ – ಶಿವರಾಂ ಹೆಬ್ಬಾರ್ ಫುಲ್ ಗಲಿಬಿಲಿ

    ಬೆಂಗಳೂರು: ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಆತಂಕದಿಂದ ಮತ್ತೋರ್ವ ಸಚಿವನ ಭೇಟಿಗೆ ಹಾತೊರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಚಿವ ಶಿವರಾಂ ಹೆಬ್ಬಾರ್ ಜೆಸಿ ರಸ್ತೆಯ ನಿವಾಸದಲ್ಲಿ ಬೆಳವಣಿಗೆಗಳ ಬಗ್ಗೆ ಮಾತನಾಡಲು ಸಚಿವ ಬಿ.ಸಿ.ಪಾಟೀಲ್ ಭೇಟಿಗಾಗಿ ಮನೆಯ ಗೇಟ್ ನಲ್ಲೆ ನಿಂತು ಚಡಪಡಿಸಿದ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಏನೋ ಆತಂಕ….ಏನೋ ಸಂಕಟ…ನಿಂತಲ್ಲಿ ನಿಲ್ಲಲು ಆಗುತ್ತಿಲ್ಲ ಕೂತಲ್ಲಿ ಕೂರಲಾಗುತ್ತಿಲ್ಲ. ಏನಿದು ಗೊಂದಲ ಏನಿದು ಟೆನ್ಷನ್…. ಎಲ್ಲಿ ಎಲ್ಲಿ….ಸ್ನೇಹಿತ ಎಲ್ಲಿ ಎಷ್ಟೊತ್ತಿಗೆ ಬರ್ತಾನೆ…? ಏನಂತೆ ಈ ಬೆಳವಣಿಗೆ…? ಎಂಬಂತೆನೆಯಿಂದ ಒಳಗೂ ಹೊರಗೂ ಓಡಾಡಿದ್ದಾರೆ.

    ಸಚಿವ ಶಿವರಾಂ ಹೆಬ್ಬಾರ್ ಬಿಜೆಪಿಯ ಸದ್ಯದ ಬೆಳವಣಿಗೆಯಿಂದ ಆತಂಕಗೊಂಡಿದ್ದಾರೆ. ಜೆಸಿ ರಸ್ತೆಯ ಸರ್ಕಾರಿ ನಿವಾಸದಲ್ಲಿ ಶಿವರಾಂ ಹೆಬ್ಬಾರ್ ಟೆನ್ಷನ್ ನಲ್ಲಿ ಇದ್ದರು.  ತಮ್ಮ ನಿವಾಸದ ಪಕ್ಕದಲ್ಲೇ ಇದ್ದ ಬಿ.ಸಿ.ಪಾಟೀಲ್ ಗಾಗಿ ರಸ್ತೆವರೆಗೆ ಹೋಗಿ ಕಾದು ನಿಂತಿದ್ದರು. ಫೋನ್ ಮೇಲೆ ಫೋನ್ ಮಾಡಿ  ಬೇಗ ಬಾ ಮನೆಗೆ ಮಾತಾಡಬೇಕು ಎಂದು ಬಿ.ಸಿ.ಪಾಟೀಲ್ ಗೆ ಕರೆ ಮಾಡಿ ಕರೆಯತೊಡಗಿದರು.  ಇದನ್ನೂ ಓದಿ : ನಾಯಕತ್ವ ಬದಲಾವಣೆಗೆ ಕಾಲ ಸೂಕ್ತವಾಗಿಲ್ಲ: ಪೇಜಾವರ ಶ್ರೀ

    ನಿಮ್ಮ ಮನೆಗೆ ನೇರವಾಗಿ ಬರ್ತಿನಿ ಎಂದಿದ್ದ ಸಚಿವ ಬಿ.ಸಿ.ಪಾಟೀಲ್ ಬರಲೇ ಇಲ್ಲ. ಪದೇ ಪದೇ ಗೇಟ್ ಬಳಿ ಬಂದು ರಸ್ತೆ ಕಡೆ ನೋಡುತ್ತ ಬಿ.ಸಿ.ಪಾಟೀಲ್ ಗಾಗಿ ಹೆಬ್ಬಾರ್ ಕಾದು ನಿಂತಿದ್ದಾರೆ. ಆದರೆ ಶಿವರಾಂ ಹೆಬ್ಬಾರ್ ನಿವಾಸಕ್ಕೆ ಬರದೇ ಪಕ್ಕದಲ್ಲಿ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ನೇರವಾಗಿ ಬಿ.ಸಿ.ಪಾಟೀಲ್ ಹೋಗಿದ್ದಾರೆ.

    ಬಿ.ಸಿ.ಪಾಟೀಲ್ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಏಕಾಂಗಿಯಾಗಿ ಫುಟ್ ಪಾತ್ ಮೇಲೆ ಶಿವರಾಂ ಹೆಬ್ಬಾರ್ ನಡೆದುಕೊಂಡೇ ಪಾಟೀಲ್ ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿ.ಸಿ.ಪಾಟೀಲ್ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಶಿವರಾಂ ಹೆಬ್ಬಾರ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಯಡಿಯೂರಪ್ಪ ಬದಲಾವಣೆಗೆ ಜೊತೆಗೆ ನಾಲ್ಕೈದು ವಲಸಿಗರನ್ನು ಸಂಪುಟದಿಂದ ಕೈಬಿಡಬಹುದು ಎಂಬ ಸುದ್ದಿ ಹಬ್ಬಿದೆ. ಈ ಬೆಳವಣಿಗೆಯಿಂದ ವಿಚಲಿತರಾಗಿರುವ ವಲಸಿಗ ಮಂತ್ರಿಗಳು ನಿನ್ನೆ ತಡರಾತ್ರಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಸಂಪುಟ ಸಭೆ ಬಳಿಕ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

  • ಪದೇ ಪದೇ ಕಾಲ್ ಮಾಡಿ ಬಿ.ಸಿ ಪಾಟೀಲ್ ಮನೆ ಮುಂದೆ ಕಾದು ನಿಂತ ಸಚಿವ ಹೆಬ್ಬಾರ್

    ಪದೇ ಪದೇ ಕಾಲ್ ಮಾಡಿ ಬಿ.ಸಿ ಪಾಟೀಲ್ ಮನೆ ಮುಂದೆ ಕಾದು ನಿಂತ ಸಚಿವ ಹೆಬ್ಬಾರ್

    ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಆಗುತ್ತಿರುವ ಸದ್ಯದ ಬೆಳವಣಿಗೆ ಕುರಿತಂತೆ ಸಚಿವ ಶಿವರಾಮ್ ಹೆಬ್ಬಾರ್ ಆತಂಕಗೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸಲು ಕೃಷಿ ಸಚಿವ ಬಿ.ಸಿ ಪಾಟೀಲ್‍ಗಾಗಿ ತಮ್ಮ ಮನೆಯ ಗೇಟ್ ಬಳಿ ಕಾದು ನಿಂತ ಪ್ರಸಂಗ ನಡೆದಿದೆ.

    ನಗರದ ಜೆಸಿ ರಸ್ತೆಯಲ್ಲಿ ಶಿವರಾಮ್ ಹೆಬ್ಬಾರ್‌ರವರ ಸರ್ಕಾರಿ ನಿವಾಸ ಇದ್ದು, ಅದರ ಪಕ್ಕದಲ್ಲಿಯೇ ಬಿ.ಸಿ ಪಾಟೀಲ್‍ರವರ ಮನೆ ಕೂಡ ಇದೆ. ಹೀಗಾಗಿ ಮನೆಗೆ ಬೇಗ ಬಾ ನಿನ್ನ ಬಳಿ ಮಾತಾಡಬೇಕು ಎಂದು ಬಿ.ಸಿ.ಪಾಟೀಲ್ ಗೆ ಶಿವರಾಮ್ ಹೆಬ್ಬಾರ್ ಕರೆ ಮಾಡಿ ಕರೆದಿದ್ದಾರೆ. ಈ ವೇಳೆ ನಿಮ್ಮ ಮನೆಗೆ ನೇರವಾಗಿ ಬರುತ್ತೇನೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

    ಈ ಹಿನ್ನೆಲೆ ಶಿವರಾಮ್ ಹೆಬ್ಬಾರ್‍ರವರು, ತಮ್ಮ ನಿವಾಸದ ಗೇಟ್ ಬಳಿಯೇ ಆತಂಕದಿಂದ ಕಾದಿದ್ದಾರೆ. ಮಂತ್ರಿ ಸ್ಥಾನದ ಗತ್ತು ಇಲ್ಲ, ಗೈರತ್ತು ಇಲ್ಲ ಎಂಬಂತೆ ಅಕ್ಷರಶಃ ಆತಂಕದಿಂದ ಗೇಟ್ ಬಳಿಯೇ ನಿಂತುಕೊಂಡು ಪದೇ ಪದೇ ರಸ್ತೆ ಕಡೆಯೆ ನೋಡುತ್ತಾ ಕಾಯುತ್ತಾ ನಿಂತಿದ್ದರು. ನಂತರ ಬಿ.ಸಿ ಪಾಟೀಲ್, ಶಿವರಾಂ ಹೆಬ್ಬಾರ್ ನಿವಾಸಕ್ಕೆ ಬರದೇ ಪಕ್ಕದಲ್ಲಿ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ನೇರವಾಗಿ ಬಂದಿದ್ದಾರೆ. ಈ ವಿಚಾರ ತಿಳಿದ ಶಿವರಾಂ ಹೆಬ್ಬಾರ್ ಏಕಾಂಗಿಯಾಗಿ ಬಿ.ಸಿ.ಪಾಟೀಲ್ ನಿವಾಸದ ಕಡೆಗೆ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗಿದ್ದಾರೆ. ಆತಂಕದಲ್ಲೆ ಬಿ.ಸಿ.ಪಾಟೀಲ್ ನಿವಾಸಕ್ಕೆ ಎಂಟ್ರಿ ಕೊಟ್ಟ ಸಚಿವರು, ಪಾಟೀಲ್ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಟೆನ್ಷನ್ ಫ್ರೀ ಆದರು.

    ನಾಯಕತ್ವ ಬದಲಾವಣೆ ಎಲ್ಲವೂ ಊಹಾಪೋಹ ಅಷ್ಟೇ. ಯಡಿಯೂರಪ್ಪನವರಾಗಲಿ ಹೈಕಮಾಂಡ್ ಆಗಲಿ ಯಾರು ಸಹ ನಾಯಕತ್ಚ ಬದಲಾವಣೆ ಬಗ್ಗೆ ಎಲ್ಲೂ ಹೇಳಿಲ್ಲ. ನಾವು ಸಚಿವರುಗಳು ಊಟಕ್ಕೆ ಸೇರುತ್ತಿರುತ್ತೇವೆ. ನಿನ್ನೆಯು 4-5 ಜನ ಊಟಕ್ಕೆ ಸೇರಿದ್ದೆವು. ನಾಯಕತ್ವ ಬದಲಾವಣೆ ಇಲ್ಲಾ ಎಂದು ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಆದ್ದರಿಂದ ನಮಗೆ ಯಾವುದೇ ಗೊಂದಲ ಇಲ್ಲ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುಂದಾದರೆ ಅದು ಹೈಕಮಾಂಡ್ ತೀರ್ಮಾನ. ನಾವು ಯಡಿಯೂರಪ್ಪ ಹಾಗೂ ಭಾರತೀಯ ಜನತಾಪಾರ್ಟಿಯನ್ನ ನಂಬಿಕೊಂಡು ಬಂದವರು. ಪಕ್ಷಕ್ಕೆ ಬಂದ ಮೇಲೆ ಪಕ್ಷದ ತೀರ್ಮಾನಕ್ಕೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಸಿಎಂ ಬದಲಾದರೆ ಸಚಿವ ಸ್ಥಾನ ಕೈ ತಪ್ಪುತ್ತೆ ಎಂಬ ಆತಂಕ ನಮಗಿಲ್ಲ. ಎಲ್ಲವೂ ಮಾಧ್ಯಮಗಳಲ್ಲಿ ಬರುತ್ತಿರುವ ಊಹಪೋಹದ ಸುದ್ದಿ. ಅದರ ಬಗ್ಗೆ ನಾವೇನು ಮಾತನಾಡಲ್ಲ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲಾ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದು ಬಿ.ಸಿ.ಪಾಟೀಲ್ ಹಾಗೂ ಶಿವರಾಂ ಹೆಬ್ಬಾರ್ ಜಂಟಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ನಾನು ಮಂತ್ರಿಯಾಗಬೇಕೆಂದು ಬಿಜೆಪಿಗೆ ಬಂದವನಲ್ಲ: ಮಹೇಶ್ ಕುಮಟಳ್ಳಿ

  • ಯಲ್ಲಾಪುರ ಕ್ಷೇತ್ರದ ಜನತೆಗೆ 4 ಅಂಬುಲೆನ್ಸ್ – ಟ್ರಯಲ್ ನೋಡಿದ ಶಿವರಾಮ್ ಹೆಬ್ಬಾರ್

    ಯಲ್ಲಾಪುರ ಕ್ಷೇತ್ರದ ಜನತೆಗೆ 4 ಅಂಬುಲೆನ್ಸ್ – ಟ್ರಯಲ್ ನೋಡಿದ ಶಿವರಾಮ್ ಹೆಬ್ಬಾರ್

    ಕಾರವಾರ: ಶಾಸಕರ ಅನುದಾನದಲ್ಲಿ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ತಮ್ಮ ವಿಧಾನಸಭಾ ಕ್ಷೇತ್ರ ಯಲ್ಲಾಪುರಕ್ಕೆ ನಾಲ್ಕು ಅಂಬುಲೆನ್ಸ್ ಖರೀದಿಸಿದ್ದಾರೆ.

    ಖರೀದಿಸಿದ ಅಂಬುಲೆನ್ಸ್ ಗಟ್ಟಿಮುಟ್ಟಾಗಿದೆಯೇ ಎಂದು ಪರೀಕ್ಷಿಸಲು ತಾವೇ ಸ್ವತ: ಹೊಸದಾಗಿ ಬಂದ ಅಂಬುಲೆನ್ಸ್ ಏರಿ ವಾಹನ ಚಲಾಯಿಸಿ ಟ್ರಯಲ್ ನೋಡಿದರು. ಯಲ್ಲಾಪುರದ ಪ್ರವಾಸಿ ಮಂದಿರದಿಂದ ಯಲ್ಲಾಪುರ ನಗರವನ್ನು ಒಂದು ಸುತ್ತುಹಾಕಿ ನಂತರ ಅಂಬುಲೆನ್ಸ್  ಸೇವೆಗೆ ಚಾಲನೆ ನೀಡಿದರು.

    ಸಚಿವ ಶಿವರಾಮ್ ಹೆಬ್ಬಾರ್ ರವರು ತಮ್ಮ ವೃತ್ತಿಯನ್ನು ಮೊದಲು ಲಾರಿ ಚಾಲಕರಾಗಿ ಆರಂಭಿಸಿದ್ದರು. ನಂತರ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲವು ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಗೆ ಬರುವ ಮೂಲಕ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಮತ್ತೆ ಪುನ: ಬಿಜೆಪಿಗೆ ಬರುವ ಮೂಲಕ ಇಂದು ರಾಜ್ಯ ಕಾರ್ಮಿಕ ಸಚಿವರಾಗಿದ್ದಾರೆ. ಇದನ್ನೂ ಓದಿ : ಉತ್ತರ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ

  • ಮುನ್ನೆಚ್ಚರಿಕೆ ಕ್ರಮವಾಗಿ ಕೋರ್ಟ್ ಮೊರೆ ಹೋಗಿದ್ದೇವೆ: ಶಿವರಾಮ್ ಹೆಬ್ಬಾರ್

    ಮುನ್ನೆಚ್ಚರಿಕೆ ಕ್ರಮವಾಗಿ ಕೋರ್ಟ್ ಮೊರೆ ಹೋಗಿದ್ದೇವೆ: ಶಿವರಾಮ್ ಹೆಬ್ಬಾರ್

    ಕಾರವಾರ: ನಾಳೆ ಆಧಾರ ರಹಿತ ಎಂದು ಘೋಷಣೆ ಆದ ಮೇಲೆ ಹೋದ ಮಾನ ಮತ್ತೆ ಬರಲು ಸಾಧ್ಯವಿಲ್ಲ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಮಾಜಿ ಸಚಿವರೊಬ್ಬರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಇದೊಂದು ರಾಜಕೀಯ ಷಡ್ಯಂತ್ರ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದೇವೆ. ನಾಳೆ ಆಧಾರ ರಹಿತ ಎಂದು ಘೋಷಣೆ ಆದ ಮೇಲೆ ಹೋದ ಮಾನ ಮತ್ತೆ ಬರಲು ಸಾಧ್ಯವಿಲ್ಲ. ಏನು ಬೇಕಾದರೂ ಸಹಿಸಿಕೊಳ್ಳಲು ಸಿದ್ಧವಿದ್ದೇವೆ. ಸೋಲನ್ನು ಸಹಿಸಿಕೊಂಡಿದ್ದೇವೆ. ಈ ರೀತಿಯ ನೈತಿಕ ಅಧಃಪತನವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ.

    ಹಳೆ ಸರ್ಕಾರವನ್ನು ತೆಗೆದು ಹೊಸ ಸರ್ಕಾರ ಬರಲು ಯಾರು ಕಾರಣರಾದರು ಅವರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂಬ ಅನೇಕ ಮಾಹಿತಿಯಿಂದ ತಿಳಿದುಕೊಂಡು ನಾವು ಈ ಸಿದ್ಧತೆ ಮಾಡಿಕೊಂಡಿದ್ದೇವೆ. ಒಬ್ಬ ವ್ಯಕ್ತಿಯ ಮಾನವೀಯತೆಯನ್ನ, ಗೌರವವನ್ನ ಈ ರೀತಿ ಹರಾಜು ಮಾಡುವುದು ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ. ಇದನ್ನು ಪ್ರಸಾರ ಮಾಡುವ ಮಾಧ್ಯಮಕ್ಕೂ ಶೋಭೆ ತರತಕ್ಕದ್ದಲ್ಲ ಎಂದು ಕಿಡಿಕಾರಿದರು.

  • ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ, ಶೀಘ್ರವೇ ಕಾನೂನು: ಶಿವರಾಮ್ ಹೆಬ್ಬಾರ್

    ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ, ಶೀಘ್ರವೇ ಕಾನೂನು: ಶಿವರಾಮ್ ಹೆಬ್ಬಾರ್

    – ಬಾಯ್ಲರ್ ಅನಾಹುತ ತಡೆಯಲು ಮೊದಲ ಆದ್ಯತೆ

    ಬೆಂಗಳೂರು: ಬಾಯ್ಲರ್ ಡಿಪಾರ್ಟ್ಮೆಂಟ್ ನಲ್ಲಿ ಅಪಘಾತಗಳನ್ನು ತಡೆಯುವುದು ನಮ್ಮ ಕರ್ತವ್ಯ. ಇದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭರವಸೆ ನೀಡಿದರು.

    ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ ಹಾಗೂ ಜಾಲಹಳ್ಳಿಯ ಬಿಇಎಲ್ ನೇತೃತ್ವದಲ್ಲಿ ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕ್ಯಾಂಪಸ್‍ನ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ 50ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಐದು ತಿಂಗಳ ಕಾಲ ಕಾರ್ಮಿಕರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಬಡತನ, ಕಾರ್ಮಿಕರ ಶ್ರಮವನ್ನು ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

    ಟೊಯೋಟಾ ಕಾರ್ಮಿಕರ ಸಮಸ್ಯೆಗೆ ನಿನ್ನೆ ತಾರ್ಕಿಕ ಅಂತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸೌಖ್ಯತೆಯನ್ನು ಮಾಡಬೇಕಿದೆ. ಮಕ್ಕಳ ಪಾಲನೆ, ಪೋಷಣೆ ಬೇರೆಯವರ ಜವಬ್ದಾರಿ ಎಂದುಕೊಳ್ಳಲಾಗಿದೆ. ಬಾಯ್ಲರ್ ಡಿಪಾಟ್ರ್ಮೆಂಟ್ ನಲ್ಲಿ ಅಪಘಾತಗಳನ್ನು ತಡೆಯುವುದು ನಮ್ಮ ಕರ್ತವ್ಯ. ಕಾರ್ಮಿಕರಿಗೆ ಅನುಕೂಲವಾಗುವ ಹೊಸ ಹೊಸ ಕಾನೂನುಗಳನ್ನು ತಂದಿದ್ದೇವೆ. ಕಾರ್ಮಿಕ ಬದ್ಧತೆ ಹಾಗೂ ರಕ್ಷಣೆ ಮಾಲೀಕರ ಜವಾಬ್ದಾರಿ ಎಂದು ತಿಳಿಸಿದರು.

    ಕಾಂಟ್ರಾಕ್ಟ್ ಬೇಸ್ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಬಗ್ಗೆ ಹೊಸ ಕಾನೂನನ್ನು ಶೀಘ್ರದಲ್ಲೇ ತರಲಾಗುವುದು. ಇಡೀ ದೇಶದಲ್ಲೇ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಅಪಘಾತಗಳ ಸಂಖ್ಯೆ ಕಡಿಮೆಯಾದಾಗ ಈ ಸಮಾರಂಭ ಔಚಿತ್ಯಪೂರ್ಣವಾಗುತ್ತದೆ. ಕಾರ್ಮಿಕರಿಗೆ ಉದ್ಯೋಗ ಸಿಗಬೇಕು ಎಂದರು. ಈ ವೇಳೆ ರಸ್ತೆ ಸುರಕ್ಷತಾ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

    ಬಿಇಎಲ್ ಡೆಪ್ಯುಟಿ ಮ್ಯಾನೇಜರ್ ಗುರುರಾಜ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಈ ವೇಳೆ ಬಿಇಎಲ್ ಕಾರ್ಖಾನೆಯ ಘಟಕ ಮುಖ್ಯಸ್ಥರಾದ ಆರ್.ಪಿ.ಮೋಹನ್, ಸನ್ ಸೇರ ಇಂಜಿನಿಯರಿಂಗ್ ಲಿಮಿಟೆಡ್ ನ ಎಂಡಿ ಎಫ್.ಆರ್.ಸಿಂಘ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ರಾಜ್ಯ ಮಟ್ಟದ ಸುರಕ್ಷತಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

  • ತಾಲೂಕು ಪಂಚಾಯತ್ ರದ್ಧತಿ ಸರ್ಕಾರದಿಂದ ಸಾಧ್ಯವಿಲ್ಲ: ಹೆಬ್ಬಾರ್

    ತಾಲೂಕು ಪಂಚಾಯತ್ ರದ್ಧತಿ ಸರ್ಕಾರದಿಂದ ಸಾಧ್ಯವಿಲ್ಲ: ಹೆಬ್ಬಾರ್

    ಕಾರವಾರ: ತಾಲೂಕು ಪಂಚಾಯತ್ ರದ್ಧತಿ ಕೇವಲ ಊಹಾಪೋಹ. ರದ್ದು ಮಾಡಲು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಈ ಬಾರಿಯೂ ಮೂರು ವಿಭಾಗದ ಪಂಚಾಯತ್ ರಾಜ್ ವ್ಯವಸ್ಥೆಯಡಿಯಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.

    ಶಿರಸಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಾಲೂಕು ಪಂಚಾಯತ್ ರದ್ದತಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ಸಹ ತಿಳಿಸಿದ್ದಾರೆ ಮುಂದಿನ ಚುನಾವಣೆಯಲ್ಲಿ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತಿಗೆ ಚುನಾವಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

    ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ ಒಂದು ವರ್ಷ ಆಯಿತು. ಜನ ನನ್ನ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರೀಕ್ಷೆಗೆ ತಕ್ಕ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

  • ಪದೇ ಪದೇ ಖಾತೆ ಬದಲಾವಣೆ ಆಡಳಿತ ದೃಷ್ಟಿಯಿಂದ ಶೋಭೆ ತರಲ್ಲ: ಶಿವರಾಮ್ ಹೆಬ್ಬಾರ್

    ಪದೇ ಪದೇ ಖಾತೆ ಬದಲಾವಣೆ ಆಡಳಿತ ದೃಷ್ಟಿಯಿಂದ ಶೋಭೆ ತರಲ್ಲ: ಶಿವರಾಮ್ ಹೆಬ್ಬಾರ್

    ಕಾರವಾರ: ಪದೇ ಪದೇ ಖಾತೆ ಬದಲಾವಣೆ ಮಾಡುವುದು ಆಡಳಿತ ದೃಷ್ಟಿಯಿಂದ ಶೋಭೆ ತರುವುದಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಇಂದು ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾತೆ ಬದಲಾವಣೆ ಮಾಡುವುದು ಮುಖ್ಯಮಂತ್ರಿ ಪರಮಾಧಿಕಾರ ಮಂತ್ರಿಮಂಡಲ ರಚನೆಯಾದಾಗ ಖಾತೆ ಹಂಚಿಕೆ ಬಗ್ಗೆ ಈ ರೀತಿಯ ಘಟನೆ ನಡೆಯುತ್ತವೆ. ಇದು ಕೇವಲ ಯಡಿಯೂರಪ್ಪ ಸರ್ಕಾರದಲ್ಲಿ ಮಾತ್ರವಲ್ಲ, ಅನೇಕ ಸರ್ಕಾರದಲ್ಲಿ ಕಂಡಿದ್ದೇವೆ. ಅದೇ ರೀತಿಯಲ್ಲಿ ನಮ್ಮ ಸರ್ಕಾರದಲ್ಲೂ ಖಾತೆ ಹಂಚಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಅನೇಕ ಸಚಿವರು ಬೇಸರ ತೋಡಿಕೊಂಡದ್ದನ್ನು ಮುಚ್ಚಿಡಲಾಗಲ್ಲ. ಮುಖ್ಯಮಂತ್ರಿ ಮತ್ತೊಂದು ಬಾರಿ ಖಾತೆ ಮರುಹಂಚಿಕೆ ಮಾಡಿ ಸಮಾಧಾನ ಮಾಡೋ ಪ್ರಯತ್ನ ಮಾಡಿದ್ದಾರೆ ಎಂದರು.

    ಸಮಾಧಾನ ಆಗ್ತಾರೆ ಎಂದು ಅಂದುಕೊಂಡಿದ್ದೇನೆ. ನಾವೆಲ್ಲಾ ಒಟ್ಟಿಗೆ ಇದ್ದೇವೆ. ಆದರೆ ನಾವೆಲ್ಲ ಗುಂಪಾಗಿ ಉಳಿದಿಲ್ಲ ಎಂದ ಅವರು ನಾನು ನೂರಕ್ಕೆ ನೂರು ಆನಂದ್ ಸಿಂಗ್ ಜೊತೆಯಿದ್ದೇನೆ. ಆನಂದ್ ಸಿಂಗ್ ಮಾತ್ರವಲ್ಲ, ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳ ಎಲ್ಲರ ಜೊತೆಯಿದ್ದೇನೆ. ಆನಂದ್ ಸಿಂಗ್ ಗೆ ತಾಳ್ಮೆ ಕಳೆದುಕೊಳ್ಳಬೇಡ ಎಂದಿದ್ದೇನೆ. ಏನೂ ತೊಂದರೆ ಆಗಲ್ಲ, ಎಲ್ಲವೂ ಸರಿ ಹೋಗುತ್ತೆ. ಮುಖ್ಯಮಂತ್ರಿ ಎಲ್ಲವೂ ಸರಿಪಡಿಸ್ತಾರೆ ಎಂದು ತಿಳಿಸಿದರು.

    ಇನ್ನು ಇಂದು ರೈತರ ಪ್ರತಿಭಟನೆ ಹಾಗೂ ಟ್ರಾಕ್ಟರ್ ರ‍್ಯಾಲಿ ಕುರಿತು ಅಸಮಾಧಾನ ಹೊರಹಾಕಿದ ಕಾರ್ಮಿಕ ಸಚಿವ, ಗಣರಾಜ್ಯೋತ್ಸವ ದಿನ ಈ ರೀತಿ ಟರ್ಯಾಕ್ಟರ್ ಪ್ರತಿಭಟನೆ ಮಾಡುವುದು ಸಂಘಟನೆಗೆ ಶೋಭೆ ತರುವುದಿಲ್ಲ. ರೈತರು ರಾಜಕೀಯಕರಣಕ್ಕೆ ಒಳಗಾಗಬಾರದು ಎಂದು ಹೇಳೀದರು.

  • ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹಾ: ಶಿವರಾಮ್ ಹೆಬ್ಬಾರ್

    ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹಾ: ಶಿವರಾಮ್ ಹೆಬ್ಬಾರ್

    ರಾಯಚೂರು: ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಕೇವಲ ಊಹಾಪೋಹಾ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಅಂತ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಸುದ್ದಿಗಾರರೊಂಂದಿಗೆ ಮಾತನಾಡಿದ ಸಚಿವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ ಸೂಕ್ತ ಸಮಯದಲ್ಲಿ ಅವರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಿಎಂ ಹಾಗೂ ಹೈಕಮಾಂಡ್‍ಗೆ ಬಿಟ್ಟ ವಿಚಾರ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮರ್ಥ ನಾಯಕತ್ವ ಹೊಂದಿದೆ ಎಂದರು.

    ಡಿಕೆಶಿ ಹಾಗೂ ಹೆಚ್‍ಡಿಕೆ ಅಡ್ಜಸ್ಟ್ ಮೆಂಟ್ ರಾಜಕೀಯ ವಿಚಾರದ ಬಗ್ಗೆ ಸಿ.ಪಿ.ಯೋಗೇಶ್ವರ್ ಏನು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ನಾನು ರಾಜ್ಯ ಪ್ರವಾಸದಲ್ಲಿದ್ದೇನೆ ಅದರ ಬಗ್ಗೆ ತಿಳಿದುಕೊಂಡು ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು. ಇದನ್ನೂ ಓದಿ: ಬಿಜೆಪಿ ಬಗ್ಗೆ ಎಚ್‍ಡಿಕೆ ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ: ಬಸವರಾಜ್ ಹೊರಟ್ಟಿ

    ಇದೇ ವೇಳೆ ಎಂಟಿಬಿ ನಾಗರಾಜ್ ಹಾಗೂ ಎಚ್ ವಿಶ್ವನಾಥ್ ಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಅವರನ್ನ ಈಗಾಗಲೇ ಎಂಎಲ್ ಸಿ ಮಾಡಿದ್ದಾರೆ ಸಚಿವರನ್ನಾಗಿ ಮಾಡುವುದು ಸಿಎಂ ಗೆ ಬಿಟ್ಟ ವಿಚಾರ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: 15 ದಿನ ಹಿಂದೆ ಕಾಂಗ್ರೆಸ್‌ಗೆ ಬರ್ತಿನಿ ಅಂತ ಯೋಗೇಶ್ವರ್‌ ನನ್ನ ಬಳಿ ಚರ್ಚಿಸಿದ್ದ – ಡಿಕೆಶಿ

  • ನಾವು ಎಲ್ಲದ್ದಕ್ಕೂ ದಾಖಲೆ ಕೊಡುತ್ತೇವೆ – ಸಿದ್ದುಗೆ ಹೆಬ್ಬಾರ್ ತೀರುಗೇಟು

    ನಾವು ಎಲ್ಲದ್ದಕ್ಕೂ ದಾಖಲೆ ಕೊಡುತ್ತೇವೆ – ಸಿದ್ದುಗೆ ಹೆಬ್ಬಾರ್ ತೀರುಗೇಟು

    – ಬೆಂಗ್ಳೂರಿನಲ್ಲಿ ಭಯಪಡುವ ವಾತಾವರಣವಿಲ್ಲ

    ಹಾಸನ: ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ನಾವು ಎಲ್ಲದ್ದಕ್ಕೂ ದಾಖಲೆ ಕೊಡುತ್ತೇವೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.

    ಹಾಸನದಲ್ಲಿ ಮಾತನಾಡಿದ ಅವರು ಮಾಧ್ಯಮದ ವಿರುದ್ಧವೂ ವ್ಯಂಗ್ಯವಾಡಿದ್ದು, ಟಿವಿ ನೋಡುವುದನ್ನು ಪಾಲಕರು ಬಂದ್ ಮಾಡಿದರಿಂದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿಯಿತು. ಇಲ್ಲವಾದರೆ ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಏನೋ ಆಗಿಬಿಡುತ್ತೆ ಎಂದು ದೂರದರ್ಶನದಲ್ಲಿ ತೋರಿಸುತ್ತಾರೆ. ಅದನ್ನು ನೋಡಿದ ನಿಮಗೆಲ್ಲ ಬೆಂಗಳೂರಿನಲ್ಲಿದ್ದವರ ನಿಮ್ಮ ಸಂಬಂಧಿಕರ ಬಗ್ಗೆ ಭಯ ಆಗುತ್ತೆ. ಅಂತಹ ಯಾವುದೇ ಭಯಪಡುವ ವಾತಾವರಣ ಬೆಂಗಳೂರಿನಲ್ಲಿ ಇಲ್ಲ. ಬೆಂಗಳೂರಿನಲ್ಲಿ ವ್ಯವಸ್ಥಿತವಾದ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಬರುತ್ತೆ ಎಂಬುದು ಗೊತ್ತಿಲ್ಲದ ಕಾರಣ ಸಿದ್ಧತೆ ಮಾಡಿಕೊಳ್ಳಲು ವಿಳಂಬವಾಗಿತ್ತು. ಈಗ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸಮರ್ಥವಾಗಿ ಕೊರೊನಾಗೆ ಕಡಿವಾಣ ಹಾಕುವ ಪ್ರಯತ್ನ ಆಗಿದೆ. ಜೊತೆಗೆ ಕೋವಿಡ್-19 ಜೊತೆಗೆ ನಾವು ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಸಚಿವ ಹೆಬ್ಬಾರ್ ತಿಳಿಸಿದರು.

  • ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

    ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

    – ರಂಜಾನ್‍ಗೂ ಯಾವುದೇ ವಿನಾಯಿತಿ ಇಲ್ಲ

    ಕಾರವಾರ: ಮೇ 3ರ ತನಕ ಭಟ್ಕಳದಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರಿಯಲ್ಲಿದ್ದು, ರಂಜಾನ್ ಹಬ್ಬಕ್ಕೂ ಇದರಿಂದ ವಿನಾಯಿತಿ ಇಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಇಂದು ಸಂಜೆ ಭಟ್ಕಳಕ್ಕೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಭಟ್ಕಳದ ತಂಜೀಂ ಸಂಸ್ಥೆ ರಂಜಾನ್ ಹಬ್ಬಕ್ಕಾಗಿ ತಮಗೆ ದಿನದಲ್ಲಿ ಕನಿಷ್ಟ 2 ಗಂಟೆಯಾದರೂ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಮನವಿಯನ್ನು ನಯವಾಗಿ ತಿರಸ್ಕರಿಸಿದ ಸಚಿವರು ಮೇ 3ರ ತನಕ ನಿಯಮದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಮುಸ್ಲಿಂ ಮಾತ್ರವಲ್ಲದೇ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಯಾವುದೇ ಧರ್ಮದ ಸಾರ್ವಜನಿಕವಾಗಿ ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶವಿಲ್ಲ ಎಂದರು.

    ಮೇ 3ರವರೆಗೂ ಈ ಹಿಂದಿನ ನಿಯಮಗಳೇ ಜಾರಿಯಲ್ಲಿರಲಿವೆ. ನಂತರದ ದಿನಗಳಲ್ಲಿ ಜಿಲ್ಲೆಯ ಮತ್ತು ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ರಾಜ್ಯ ಮತ್ತು ಜಿಲ್ಲೆಗಳ ಬೆಳವಣಿಗೆಗಳನ್ನು ಗಮನಿಸಿ ಚರ್ಚೆ ನಡೆಸಿ ತಿಳಿಸಲಾಗುವುದು. ಏಪ್ರಿಲ್ 26, 27ರೊಳಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಕೊರೊನಾ ಮುಕ್ತವಾಗಲು ಎಲ್ಲಾ ಹೋರಾಟ ನಡೆಸುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಕೇಳಿಕೊಂಡರು.

    ಡಿಸ್ಚಾರ್ಜ್ ಸಮ್ಮರಿ ವಿತರಣೆ
    ಭಟ್ಕಳದಲ್ಲಿ ಪತ್ತೆಯಾದ ಮೊದಲ 3 ಪ್ರಕರಣಗಳ ಸೋಂಕಿತರು ಗುಣಮುಖರಾಗಿ ಬಂದಿದ್ದು, ಅವರಿಗೆ ಸಚಿವ ಶಿವರಾಮ್ ಹೆಬ್ಬಾರ್ ಡಿಸ್ಚಾರ್ಜ್ ಸಮ್ಮರಿ ವಿತರಿಸಿ ಅಭಿನಂದಿಸಿದರು. ಮನೆಯಲ್ಲಿದ್ದು ಇತರರಲ್ಲೂ ಜಾಗೃತಿ ಮೂಡಿಸುವಂತೆ ಮನವಿ ಮಾಡಿ ಆಸ್ಪತ್ರೆಯಿಂದ ಬೀಳ್ಕೊಟ್ಟರು.

    ಈ ವೇಳೆ ಶಾಸಕ ಸುನೀಲ್ ನಾಯ್ಕ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ ಕುಮಾರ್, ನೊಡಲ್ ಅಧಿಕಾರಿ ಡಾ. ಶರದ್ ನಾಯಕ, ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಡಿಎಚ್‍ಒ ಡಾ.ಮೂರ್ತಿರಾಜ್ ಭಟ್, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇದ್ದರು.