Tag: ಶಿವಮೊಗ್ಗ ಸ್ಫೋಟ

  • ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಟ್ವಿಸ್ಟ್‌ – ಈಗಾಗಲೇ A1 ಆರೋಪಿ ಅರೆಸ್ಟ್‌!

    ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಟ್ವಿಸ್ಟ್‌ – ಈಗಾಗಲೇ A1 ಆರೋಪಿ ಅರೆಸ್ಟ್‌!

    ಬೆಂಗಳೂರು: ರಾಮೇಶ್ವರಂ ಕೆಫೆ ಪ್ರಕರಣಕ್ಕೆ (Rameshwaram Cafe Blast) ಸ್ಫೋಟಕ ಟ್ಬಿಸ್ಟ್ ಸಿಕ್ಕಿದ್ದು, ಕೇಸ್‌ನಲ್ಲಿ ಈಗಾಗಲೇ ಇಬ್ಬರ ಬಂಧನ ಮಾಡಲಾಗಿದೆ. ಆಶ್ಚರ್ಯವಾದರೂ ಇದು ನಿಜವಾದ ಸಂಗತಿ.

    ಶಿವಮೊಗ್ಗದಲ್ಲಿ ಟ್ರಯಲ್‌ ಬಾಂಬ್‌ ಸ್ಫೋಟ (Shivamogga Trial Blast) ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದ ಮಾಝ್‌ ಮುನೀರ್‌ನನ್ನೇ (Maaz Muneer) ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಮೊದಲ ಆರೋಪಿಯನ್ನಾಗಿ ಮಾಡಿದೆ. ಜೈಲು ಸೇರುವ ಮೊದಲೇ ಕೆಲವೊಂದು ಕಡೆ ಸ್ಫೋಟಕ್ಕೆ ಪ್ಲ್ಯಾನ್‌ ಮಾಡಿದ ಹಿನ್ನೆಲೆಯಲ್ಲಿ ಆತನನ್ನೇ ಎ1 ಆರೋಪಿಯನ್ನಾಗಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

    ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ ಮಾಝ್‌ ಮುನೀರ್‌ನನ್ನು ಎನ್‌ಐಎ  ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ರೇಡ್ ಮಾಡಿದ ಬಳಿಕ ಮಾಝ್ ಬ್ಯಾರಕ್‌ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.  ಇದನ್ನೂ ಓದಿ: ಪಟಾಕಿ ಬ್ಲಾಸ್ಟ್‌ ನೆಪದಲ್ಲಿ ಸ್ಫೋಟಕ ಸ್ಫೋಟ – ಇದು ಶಿವಮೊಗ್ಗ ಶಂಕಿತ ಉಗ್ರನ ಟ್ರಯಲ್‌ ಬ್ಲ್ಯಾಸ್ಟ್‌ ಕಥೆ

    ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಮತೀನ್ ಮತ್ತು ಮುಸಾವೀರ್ ಹೆಸರನ್ನು ಉಲ್ಲೇಖಿಸಲಾಗಿದ್ದು, ಈಗ ಬಂಧನ ಆಗಿರೋ ಮುಜಾಮಿಲ್ ಷರೀಫ್ ನಾಲ್ಕನೇ ಆರೋಪಿಯನ್ನಾಗಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

    ಏನಿದು ಶಿವಮೊಗ್ಗ ಸ್ಫೋಟ ಕೇಸ್‌?
    ಬಂಧನಕ್ಕೆ ಒಳಗಾಗಿರುವ ಸೈಯದ್ ಯಾಸಿನ್‌, ಮಾಜ್‌ ಮುನೀರ್‌, ಶಾರೀಕ್‌ ಅಹ್ಮದ್‌ ಶಿಮೊಗ್ಗದ ಅಕ್ಷರ ಕಾಲೇಜಿನಲ್ಲಿ ಒಟ್ಟಿಗೆ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು. ಬಳಿಕ ಯಾಸಿನ್ ಶಿವಮೊಗ್ಗದಲ್ಲಿ ಎಂಜಿನಿಯರಿಂಗ್‌ ಓದಿದ್ದರೆ ಮುನೀರ್‌ ಮಂಗಳೂರಿನ ಮುಡಿಪು ಸಮಿಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್‌ ಓದುತ್ತಿದ್ದ. ತೀರ್ಥಹಳ್ಳಿ ಮೂಲದ ಶಾರೀಕ್‌ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ.  ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌ನಲ್ಲಿ ಆರೋಪಿಗಳ ಶಾಲಾ, ಕಾಲೇಜು ಸ್ನೇಹಿತರ ವಿಚಾರಣೆ ನಡೆಸಲಾಗ್ತಿದೆ: ಎನ್‌ಐಎ

    ಸೈಯದ್ ಯಾಸಿನ್‌ ನಿವಾಸದಿಂದ 3-4 ದೂರದಲ್ಲಿರುವ ಪುರಲೆ ಸಮೀಪದ ತುಂಗಾ ನದಿ ತೀರದ್ದಲ್ಲಿ ಇವರೆಲ್ಲ ಟ್ರಯಲ್‌ ಬಾಂಬ್‌ ಸ್ಫೋಟ ಮಾಡುತ್ತಿದ್ದರು. ಈ ಮೂವರು ಶಿವಮೊಗ್ಗವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡು ಮಂಗಳೂರು ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು. ಮೂವರೂ ಬಾಂಬ್‌ ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು.

    ಈ ಆರೋಪಿಗಳು ಅರೆಸ್ಟ್‌ ಆಗಿದ್ದು ಹೇಗೆ?
    2022ರ ಆಗಸ್ಟ್ 15ರಂದು ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಶಿವಮೊಗ್ಗದಲ್ಲಿರುವ ಅಮೀರ್ ಅಹಮದ್ ವೃತ್ತದಲ್ಲಿ ಘರ್ಷಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಬಟ್ಟೆ ಅಂಗಡಿ ನೌಕರ ಪ್ರೇಮ್‌ಸಿಂಗ್‌ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬೀಯುಲ್ಲಾ ಎಂಬಾತನ ಬಂಧನವಾಗುತ್ತದೆ. ಆತನ ವಿಚಾರಣೆ ಮತ್ತು ಮೊಬೈಲ್‌ ದಾಖಲೆ ಪರಿಶೀಲನೆಯ ವೇಳೆ ಆತ ಹಲವರ ಜೊತೆ ಸಂವಹನ ನಡೆಸಿದ ವಿಚಾರ ತಿಳಿದು ಬರುತ್ತದೆ. ಈ ಆಧಾರದಲ್ಲಿ ತನಿಖೆ ನಡೆಸಿದಾಗ ಟ್ರಯಲ್‌ ಬಾಂಬ್‌ ಸ್ಫೋಟದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ಈ ಪ್ರಕರಣದ ಆರೋಪಿಯಾಗಿದ್ದ ಶಾರೀಕ್‌ ನಾಪತ್ತೆಯಾಗಿದ್ದ. ಆದರೆ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಲು ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಂಬ್‌ ಸ್ಫೋಟಗೊಂಡ ಪರಿಣಾಮ ಶಾರೀಕ್‌ ಸಿಕ್ಕಿಬಿದ್ದಿದ್ದ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಬಿಜೆಪಿ ಕಾರ್ಯಕರ್ತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ ಎನ್‌ಐಎ

     

    ಐಸಿಸ್‌ ಮಾಧ್ಯಮದ ಸದಸ್ಯರು:
    ಯಾಸಿನ್‌ ಮತ್ತು ಮಾಜ್‌ ಮುನೀರ್‌ ಪಿಯುಸಿ ಸ್ನೇಹಿತರು. ಇವರ ಜೊತೆ ಶಾರೀಕ್‌ ಐಸಿಸ್‌ ಚಟುವಟಿಕೆಯ ಬಗ್ಗೆ ಮಾಹಿತಿ ಕಳುಹಿಸುತ್ತಿದ್ದ. ಆರೋಪಿಗಳ ಮೊಬೈಲ್‌ನಲ್ಲಿ ಬಾಂಬ್‌ ತಯಾರಿಸುವ ಪಿಡಿಎಫ್‌ ಫೈಲ್‌, ಐಸಿಸ್‌ ಉಗ್ರರು ತಲೆ ಕಡಿಯುವ ಮತ್ತು ಜೀವಂತವಾಗಿ ಸುಡುವ ವೀಡಿಯೋಗಳು ಲಭ್ಯವಾಗಿದ್ದವು. ಇವರು ಐಸಿಸ್‌ ಜೊತೆ ನೇರವಾಗಿ ಸಂವಹನ ನಡೆಸಿಲ್ಲ. ಆದರೆ ಐಸಿಸ್‌ ಟೆಲಿಗ್ರಾಮ್‌ ಚಾನೆಲ್‌ನ ಸದಸ್ಯರಾಗಿದ್ದರು. ಇಸ್ಲಾಂ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹೀಗಾಗಿ ನಮ್ಮನ್ನು ವಿರೋಧಿಸುವ ಖಾಫೀರ್‌ ಮೇಲೆ ಜಿಹಾದ್‌ ಮಾಡಬೇಕು ಎಂಬ ಮನಸ್ಥಿತಿಯನ್ನು ಇವರು ಹೊಂದಿದ್ದರು. ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾಡುವ ಕನಸು ಕಂಡಿದ್ದರು. ಸೆರೆ ಸಿಕ್ಕ ಒಂದು ಪೆನ್‌ಡ್ರೈವ್‌ನಲ್ಲಿ ಮತಾಂಧತೆಯನ್ನು ಪ್ರಚೋದಿಸುವ ವೀಡಿಯೋ, ಪಠ್ಯಗಳು ಲಭ್ಯವಾಗಿತ್ತು.

    ಬಾಂಬ್‌ ತಯಾರಿ:
    ಯಾಸಿನ್‌ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರನಾಗಿದ್ದರೆ ಮಾಜ್‌ ಮುನೀರ್‌ ಮೆಕ್ಯಾನಿಕ್‌ ಓದಿದ್ದ. ಹೀಗಾಗಿ ಇವರು ಬಾಂಬ್‌ ತಯಾರಿಸಲು ಮುಂದಾಗುತ್ತಾರೆ. ಯಾಸಿನ್‌ ರಿಲೆ ಸರ್ಕ್ಯೂಟ್‌, ಟೈಮರ್‌ ಆನ್‌ಲೈನ್‌ನಲ್ಲಿ ಖರೀದಿಸಿದ್ದ. ಅಲ್ಯೂಮಿನಿಯಂ ಪೌಡರ್‌ ಸರ್ಚ್‌ ಮಾಡಿದ್ದ ಆದರೆ ಸಿಕ್ಕಿರಲಿಲ್ಲ. ಬ್ಯಾಟರಿ, ಸ್ವಿಚ್‌ ಜೊತೆ ಸ್ಥಳೀಯವಾಗಿ ಸಿಗುವ ಸ್ಫೋಟಕವನ್ನು ಖರೀದಿ ಮಾಡಿ ಆಗಸ್ಟ್‌ 15ರ ಬಳಿಕ ಗುರುಪುರ–ಪುರಲೆ ಸಮೀಪದ ಅಡಿಕೆ ತೋಟಗಳಿಂದ ಆವೃತವಾದ ತುಂಗಾ ನದಿಯ ದಂಡೆಯಲ್ಲಿ ಪರೀಕ್ಷೆ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ಸ್ಫೋಟ ನಡೆದಿರಲಿಲ್ಲ. ಆದರೆ ಈ ಸ್ಫೋಟದ ವಿಡಿಯೋವನ್ನು ಮೊಬೈಲಿನಲ್ಲಿ ಸೆರೆ ಹಿಡಿಯಲಾಗಿತ್ತು. ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಂಬ್‌ ಸ್ಫೋಟಿಸಲು ತಯಾರಿ ನಡೆಸುತ್ತಿದ್ದರು. ಭಾರತದ ರಾಷ್ಟ್ರ ಧ್ವಜವನ್ನು ಇವರು ಸುಟ್ಟಿದ್ದರು ಅದರ ವೀಡಿಯೋವನ್ನು ಇವರು ಚಿತ್ರೀಕರಿಸಿದ್ದರು.

  • ಹುಣಸೋಡು ಸ್ಫೋಟ ಪ್ರಕರಣ- 150ಕ್ಕೂ ಹೆಚ್ಚು ಮನೆಗಳಿಗೆ ಹಾನಿ

    ಹುಣಸೋಡು ಸ್ಫೋಟ ಪ್ರಕರಣ- 150ಕ್ಕೂ ಹೆಚ್ಚು ಮನೆಗಳಿಗೆ ಹಾನಿ

    – 7 ಗ್ರಾಮದ 1,422 ಕುಟುಂಬಗಳಿಗೆ ತೊಂದರೆ
    – 7 ಗ್ರಾಮಗಳಲ್ಲಿ ಕ್ರಷರ್ ಗಳದ್ದೇ ಸಾಮ್ರಾಜ್ಯ

    ಶಿವಮೊಗ್ಗ: ಜಿಲ್ಲೆಯಲ್ಲಿ ಸಂಭವಿಸಿದ ಬ್ಲಾಸ್ಟ್ ನಿಂದಾಗಿ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದು, ಹಲವು ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಐವರ ಮೃತದೇಹಗಳು ಪತ್ತೆಯಾಗಿವೆ. ಸ್ಫೋಟದಿಂದ ಜೀವ ಹಾನಿ ಜೊತೆಗೆ ಆಸ್ತಿ ಪಾಸ್ತಿ ಸಹ ಹಾನಿಯಾಗಿದ್ದು, 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ 1,422 ಕುಟುಂಬಗಳಿಗೆ ತೊಂದರೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಶಿವಮೊಗ್ಗದ ಹುಣಸೋಡು ಗ್ರಾಮದ ಬಳಿ ಭೀಕರ ಸ್ಫೋಟ ಸಂಭವಿಸಿದ್ದು, ಜಿಲ್ಲೆಯ ಅಬ್ಬಲೆಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹೂಣಸೊಂಡ, ಬಸವನಗಂಗೂರು, ಕಲ್ಲುಗಂಗೂರು, ಅಬ್ಬಲಗೆರೆಯಲ್ಲಿ 150 ಕ್ಕು ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅಬ್ಬಲಗೆರೆ ಸೇರಿ ಒಟ್ಟು 7 ಗ್ರಾಮಗಳಲ್ಲಿ ಕ್ರಷರ್ ಗಳದ್ದೇ ಸಾಮ್ರಾಜ್ಯ ಎನ್ನುವಂತಾಗಿದ್ದು, ಹೂಣಸೊಂಡದಲ್ಲಿ ಆಪಾರ ಪ್ರಮಾಣದ ಹಾನಿ ಸಂಭವಿಸಿದೆ.

    ಕಲ್ಲುಗಂಗೂರು ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ತಗಡಿನ ಶೀಟ್, ಸಿಮೆಂಟ್ ಶೀಟ್ ಹಾಗೂ ಹೆಂಚಿನ ಮನಗೆಳನ್ನು ರಿಪೇರಿ ಮಾಡಲೇಬೇಕು ಎನ್ನುವಷ್ಟರಮಟ್ಟಿಗೆ ಹಾನಿಯಾಗಿವೆ. ಮುರಿದ, ಬಿರುಕು ಬಿಟ್ಟ ಮನೆಗಳಲ್ಲಿ ಭೀತಿಯಲ್ಲೇ ಜನ ವಾಸ ಮಾಡುವ ಅನಿವಾರ್ಯತೆ ಎದುರಾಗಿದೆ. 7 ಗ್ರಾಮದ 1,422 ಕುಟುಂಬಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯಾಗಿದೆ ಎಂದು ಅಂದಾಜಿಸಲಾಗಿದೆ.

    ಇದೀಗ ಅನಧಿಕೃತ ಗಣಿಗಾರಿಕೆಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಜೆಲ್ ಸ್ಫೋಟಕ ಎಲ್ಲಿಂದ ಬಂತು, ಅದನ್ನು ಎಲ್ಲಿ ಸ್ಟೋರ್ ಮಾಡುತ್ತಾರೆ ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಜಲ್ಲಿ, ಮರಳು ಬೇಕು. ಅದನ್ನು ಕಾನೂನಾತ್ಮಕವಾಗಿ ಮಾಡಬೇಕು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ. ನಮ್ಮ ಸರ್ಕಾರದಲ್ಲಿ ಗಣಿ ಇಲಾಖೆ ಸೇರಿ ಯಾವುದೇ ಇಲಾಖೆಯಲ್ಲಿ ಕಾನೂನು ಚೌಕಟ್ಟು ಮೀರಿ ಕೆಲಸ ಮಾಡಿದ್ದರೆ, ಯಾರೇ ತಪ್ಪು ಮಾಡಿದ್ದರೂ ಅದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೆ ಉನ್ನತ ಮಟ್ಟದ ತನಿಖೆ ನಡೆಸಲು ಸಿಎಂ ಸಮಿತಿ ರಚನೆ ಮಾಡಿದ್ದಾರೆ.

    ಈ ಬಗ್ಗೆ ಹುಣಸೋಡಿನಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಇಂತಹ ದುರ್ಘಟನೆ ನಡೆಯಬಾರದಿತ್ತು. ನಡೆದು ಹೋಗಿದೆ. ಘಟನೆಯಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಒಂದು ಸಂಶಯಾಸ್ಪದ ಇದೆ. ರಾಜ್ಯದಲ್ಲಿನ ಎಲ್ಲ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲಾಗುವುದು. ಈ ಬಗ್ಗೆ ತನಿಖೆ ನಡೆಸಲು ಶೀಘ್ರವಾಗಿ ಸಮಿತಿ ರಚಿಸಲಾಗುವುದು. ಹುಣಸೋಡು ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ರೀತಿ ಘಟನೆ ರಾಜ್ಯದಲ್ಲಿ ಇನ್ನು ಎಲ್ಲಿಯೂ ನಡೆಯಬಾರದು. ಮೃತ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದಾರೆ ಎಂದರು.