Tag: ಶಿವಗಣೇಶ್

  • ರಾಹುಲ್ ಐನಾಪುರರ ಫಸ್ಟ್ ಲುಕ್ ‘ಗತ್ತು’!

    ರಾಹುಲ್ ಐನಾಪುರರ ಫಸ್ಟ್ ಲುಕ್ ‘ಗತ್ತು’!

    ಹಿಂದೆ ತ್ರಾಟಕ ಎಂಬ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಿದ್ದವರು ರಾಹುಲ್ ಐನಾಪುರ. ಶಿವಗಣೇಶ್ ನಿರ್ದೇಶನ ಮಾಡಿದ್ದ ಆ ಚಿತ್ರದಲ್ಲಿ ವಿಚಿತ್ರ ಕಾಯಿಲೆ ಇರೋ ಅಧಿಕಾರಿಯ ಪಾತ್ರದಲ್ಲಿ ಅವರು ನಟಿಸಿದ್ದ ರೀತಿ ಕಂಡ ಪ್ರೇಕ್ಷಕರೆಲ್ಲ ಕನ್ನಡಕ್ಕೋರ್ವ ಖಡಕ್ ವಿಲನ್ ಎಂಟ್ರಿ ಆಯಿತೆಂದು ನಿರ್ಧರಿಸಿದ್ದರು. ಹೀಗೆ ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ರಾಹುಲ್ ಇದೀಗ ಗತ್ತು ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಫಸ್ಟ್ ಲುಕ್ ಪೋಸ್ಟರ್ ಈಗ ಬಿಡುಗಡೆಯಾಗಿದೆ.

     

    ಈ ಶೀರ್ಷಿಕೆಗೆ ತಕ್ಕುದಾದ ಗತ್ತಿನ ಲುಕ್ಕಿನಲ್ಲಿಯೇ ರಾಹುಲ್ ಮಿಂಚಿದ್ದಾರೆ. ಇದೀಗ ಲಾಂಚ್ ಆಗಿರುವ ಗತ್ತು ಫಸ್ಟ್ ಲುಕ್ ಪೋಸ್ಟರ್‍ನಲ್ಲಿ ರಾಹುಲ್ ಐನಾಪುರ ಅವರ ಗೆಟಪ್ಪಿನ ಒಂದಷ್ಟು ಝಲಕ್‍ಗಳಿವೆ. ಅವುಗಳಲ್ಲಿ ಅವರು ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಜೊತೆಯಾಗಿ ಮಾಡಿದ ಮೇಲೆ ಮತ್ತದೇ ತಂಡ ಮತ್ತೆ ಜೊತೆಯಾಗೋದು ಅಪರೂಪ. ಆದರೆ ರಾಹುಲ್ ಐನಾಪುರ ಮತ್ತು ನಿರ್ದೇಶಕ ಶಿವ ಗಣೇಶ್ ವಿಚಾರದಲ್ಲಿ ಮೊದಲ ಕಾಂಬಿನೇಷನ್ನು ಹ್ಯಾಟ್ರಿಕ್ ಬಾರಿಸಿದೆ. ತ್ರಾಟಕ ಗೆಲುವು ಕಾಣುತ್ತಲೇ ಶಿವಗಣೇಶ್ ನಿರ್ದೇಶನ ಮಾಡಿದ್ದ ‘ಅದೃಶ್ಯ’ ಎಂಬ ಚಿತ್ರದಲ್ಲಿ ರಾಹುಲ್ ನಟಿಸಿದ್ದರು ಗತ್ತು ಮೂಲಕ ಈ ಜೋಡಿ ಮೂರನೇ ಬಾರಿ ಒಂದಾಗಿದೆ.

    ರಾಹುಲ್ ಐನಾಪುರ ರಾಜಕಾರಣದ ಹಿನ್ನೆಲೆಯಿಂದ ಬಂದವರಾದರೂ ಅವರ ಪ್ರಧಾನ ಆಸಕ್ತಿ ಕೇಂದ್ರೀಕರಿಸಿಕೊಂಡಿದ್ದದ್ದು ಸಿನಿಮಾದತ್ತ. ಸಿನಿ ತೆಕ್ಕೆಗೆ ಬಿದ್ದ ಅವರು ತ್ರಾಟಕ ಮೂಲಕ ನಾಯಕನಾಗಿ ಹೊರ ಹೊಮ್ಮಿದ್ದರು. ಓರ್ವ ನಿರ್ದೇಶಕರಾಗಿ ರಾಹುಲ್ ಐನಾಪುರರ ಕಸುವೇನೆಂಬುದನ್ನು ನಿಖರವಾಗಿಯೇ ಅರಿತುಕೊಂಡಿರುವವರು ಶಿವಗಣೇಶ್. ಈ ಬಾರಿ ಗತ್ತು ಚಿತ್ರದ ಮೂಲಕ ನಾನಾ ಕೊಂಬೆಕೋವೆ, ವಿಸ್ತಾರಗಳಿರುವ ರಗಡ್ ಕಥೆಯನ್ನೇ ಅವರು ಸಿದ್ಧಪಡಿಸಿಕೊಂಡಂತಿದೆ. ಕಥೆಯ ವಿಚಾರವೂ ಸೇರಿದಂತೆ ಉಳಿದ ಅಂಶಗಳೆಲ್ಲ ಇನ್ನಷ್ಟೇ ಜಾಹೀರಾಗಬೇಕಿವೆ. ಆದರೆ ಗತ್ತು ಚಿತ್ರದ ಫಸ್ಟ್ ಲುಕ್ ಮಾತ್ರ ಮಸ್ತಾಗಿದೆ.

  • ಕ್ಷಣ ಕ್ಷಣಕ್ಕೂ ಕುತೂಹಲ ಕ್ರಿಯೇಟ್ ಮಾಡುವ ತ್ರಾಟಕ!

    ಕ್ಷಣ ಕ್ಷಣಕ್ಕೂ ಕುತೂಹಲ ಕ್ರಿಯೇಟ್ ಮಾಡುವ ತ್ರಾಟಕ!

    ಈ ಹಿಂದೆ ಜಿಗರ್ ಥಂಡಾ, ಹೃದಯದಲಿ ಇದೇನಿದು ಮತ್ತು ಈಗಷ್ಟೇ ಬಿಡುಗಡೆಗೆ ತಯಾರಾಗುತ್ತಿರುವ ಅಖಾಡ ಎಂಬ ರಗಡ್ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕವೇ ಕನ್ನಡ ಚಿತ್ರ ರಂಗದಲ್ಲಿ ಸಂಚಲನ ಉಂಟು ಮಾಡಿದ್ದವರು ಶಿವಗಣೇಶ್. ಈ ಕಾರಣಕ್ಕಾಗಿಯೇ ತ್ರಾಟಕ ಸಿನಿಮಾದ ಕುರಿತು ಕ್ಯೂರಿಯಾಸಿಟಿ ಹೆಚ್ಚಾಗಿತ್ತು.

    ಅದೇನೋ ವಿಕ್ಷಿಪ್ತ ನಿಗೂಢವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಂತಿರೋ ತ್ರಾಟಕ ಅಂದ್ರೇನು ಅಂತೊಂದು ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಅಂದಹಾಗೆ ಈ ಹೆಸರಿನ ಅರ್ಥಕ್ಕೂ ಇಡೀ ಚಿತ್ರದ ಕಥೆಗೂ ಕನೆಕ್ಷನ್ನುಗಳಿವೆ. ತ್ರಾಟಕ ಅಂದರೆ ಮೇಣದ ಬತ್ತಿಯ ಬೆಳಕನ್ನು ದಿಟ್ಟಿಸಿ ನೋಡುತ್ತಾ ಯೋಗ ವಿದ್ಯೆಯಲ್ಲಿ ಏಕಾಗ್ರತೆ ಸಾಧಿಸೋ ಒಂದು ವಿಧಾನ ಅನ್ನೋದು ಬಿಡುಗಡೆಯಾಗಿರುವ ಸಿನಿಮಾದ ಮೂಲಕ ಜಾಹೀರಾಗಿದೆ.

    ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ರಮ್ಯ ಚೈತ್ರ ಕಾಲ, ಅಖಾಡ ಮತ್ತು ತಾರೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ರಾಹುಲ್ ಐನಾಪುರ ಈ ಚಿತ್ರವನ್ನು ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿದ್ದಾರೆ. ಅವರು ಈ ಚಿತ್ರದಲ್ಲಿ ಎಂಥಾದ್ದೇ ಅಪರಾಧ ಪ್ರಕರಣವನ್ನಾದರೂ ಬೆನ್ನತ್ತಿ ರಹಸ್ಯ ಜಾಹೀರು ಮಾಡುವ ಸಿಸಿಬಿ ಎಸಿಪಿಯಾಗಿ ನಟಿಸಿದ್ದಾರೆ.

    ನಾಯಕ ಇಲ್ಲಿ ತನ್ನ ವೃತ್ತಿಯ ಒತ್ತಡಗಳನ್ನು ಮೀರಿಕೊಂಡು ಅಪರಾಧ ಪ್ರಕರಣಗಳನ್ನು ಭೇದಿಸಲು ತ್ರಾಟಕ ವಿದ್ಯೆಯ ಮೊರೆ ಹೋಗುವ ಅಂಶಗಳಿವೆ. ಸರಣಿ ಕೊಲೆಗಳನ್ನು ಬೆನ್ನತ್ತುವ ಕಥೆ ಕ್ಷಣಕ್ಷಣಕ್ಕೂ ರೋಚಕ ತಿರುವುಗಳನ್ನು ಪಡೆಯುತ್ತಾ ನೋಡುಗರನ್ನು ಥ್ರಿಲ್ ಗೆ ಒಳಪಡಿಸುತ್ತದೆ. ವಿನೋದ್ ಭಾರತಿ ಛಾಯಾಗ್ರಹಣ ಕಥೆಗೆ ಪೂರಕವಾಗಿ ಕೆಲಸ ಮಾಡಿದೆ. ಸುರೇಶ್ ಆರ್ಮುಗಂ ಸಂಕಲನವಂತೂ ತೀಕ್ಷ್ಣವಾಗಿದೆ.

    ಭವಾನಿ ಪ್ರಕಾಶ್ ಎಂಬ ರಂಭೂಮಿ ನಟಿಯಂತೂ ಪೊಲೀಸ್ ಅಧಿಕಾರಿಯನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ನಂದಗೋಪಾಲ್ ಎನ್ನುವ ಯುವ ಪ್ರತಿಭೆ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ದಕ್ಕಿದ ಸಮರ್ಥ ಹಾಸ್ಯ ಕಲಾವಿದ ಎನಿಸಿಕೊಳ್ಳುತ್ತಾರೆ. ಒಟ್ಟಾರೆಯಾಗಿ ತ್ರಾಟಕವನ್ನು ಜನ ಮಿಸ್ ಮಾಡದೇ ನೋಡಿದರೆ ಭರ್ಜರಿ ಥ್ರಿಲ್ಲರ್ ಸಿನಿಮಾವನ್ನು ನೋಡಿದ ಅನುಭೂತಿಗೊಳಗಾಗೋದು ಗ್ಯಾರೆಂಟಿ.

    ರೇಟಿಂಗ್ – 3.5/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ತಾರಕಕ್ಕೇರಿದ ಅಬ್ಬರದಲ್ಲಿ ತ್ರಾಟಕ ಎಂಟ್ರಿ!

    ತಾರಕಕ್ಕೇರಿದ ಅಬ್ಬರದಲ್ಲಿ ತ್ರಾಟಕ ಎಂಟ್ರಿ!

    ಬೆಂಗಳೂರು: ಈ ಹಿಂದೆ ಜಿಗರ್ಥಂಡ ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವಗಣೇಶ್ ಅವರ ಹೊಸ ಚಿತ್ರ ತ್ರಾಟಕ. ಇದೇ ತಿಂಗಳ ಮೂವತ್ತೊಂದರಂದು ತೆರೆ ಕಾಣಲು ಸಜ್ಜಾಗಿರೋ ಈ ಚಿತ್ರದ ಮೂಲಕ ರಾಹುಲ್ ಐನಾಪುರ ಎಂಬ ಖಡಕ್ ಲುಕ್ಕಿನ ಹೀರೋ ಪ್ರತ್ಯಕ್ಷವಾಗಲಿದ್ದಾರೆ!

    ಶೀರ್ಷಿಕೆಯ ಮೂಲಕವೇ ಕುತೂಹಲ ಹುಟ್ಟಿಸೋ ಟ್ರೆಂಡು, ಆ ಮೂಲಕವೇ ಕ್ರಿಯೇಟಿವ್ ಆಗಿ ಪ್ರೇಕ್ಷಕರನ್ನು ಸೆಳೆದುಕೊಳ್ಳೋ ಚಿತ್ರಗಳ ಸಾಲಿನಲ್ಲಿ ತ್ರಾಟಕ ಚಿತ್ರವೂ ಸೇರಿಕೊಂಡಿದೆ. ಈ ಚಿತ್ರವನ್ನು ನಿರ್ಮಾಣ ಮಾಡೋದರ ಜೊತೆಗೆ ನಾಯಕನಾಗಿಯೂ ರಾಹುಲ್ ಐನಾಪುರ ನಟಿಸಿದ್ದಾರೆ. ಬಿಜಾಪುರ ಮೂಲದ ರಾಹುಲ್ ಕಾಂಗ್ರೆಸ್ ನ ಮಾಜಿ ಶಾಸಕ ಮನೋಹರ ಐನಾಪುರ ಅವರ ಪುತ್ರ. ರಾಜಕೀಯ, ವ್ಯವಹಾರ, ಕಲಿತ ಇಂಜಿನಿಯರಿಂಗ್… ಹೀಗೆ ಕಣ್ಣ ಮುಂದೆ ಸಾಲು ಸಾಲು ಅವಕಾಶವಿದ್ದರೂ ನಟನೆಯನ್ನೇ ಆರಿಸಿಕೊಂಡಿರೋ ರಾಹುಲ್ ಈಗಾಗಲೇ ಪೋಸ್ಟರುಗಳಲ್ಲಿ ಡಿಫರೆಂಟ್ ಲುಕ್ಕಿನ ಮೂಲಕ ಎಲ್ಲರನ್ನು ಸೆಳೆದುಕೊಂಡಿದ್ದಾರೆ.

    ಅಷ್ಟಕ್ಕೂ ಈ ತ್ರಾಟಕ ಅಂದರೆ ಏನರ್ಥ, ಈ ಚಿತ್ರದ ಕಥೆಯೇನು ಅಂತೆಲ್ಲ ಈಗಾಗಲೇ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ತ್ರಾಟಕ ಎಂದರೆ ಯೋಗ ವಿದ್ಯೆಯಲ್ಲಿ ಏಕಾಗ್ರತೆ ಸಾಧಿಸೋ ಒಂದು ವಿಧಾನ. ಈ ಚಿತ್ರದ ಕಥೆ, ಪ್ರಧಾನ ಪಾತ್ರಕ್ಕದು ಸರಿ ಹೊಂದೋದರಿಂದ ತ್ರಾಟಕ ಎಂಬ ಹೆಸರಿಡಲಾಗಿದೆಯಂತೆ. ಇದು ಕ್ರೈಂ ಥ್ರಿಲ್ಲರ್ ಕಥಾನಕ, ಇನ್ವೆಸ್ಟಿಗೇಷನ್ನುಗಳನ್ನು ಪ್ರಧಾನವಾಗಿಸಿಕೊಂಡಿರೋ ಚಿತ್ರ. ಇದರಲ್ಲಿ ರಾಹುಲ್ ಎಸಿಪಿಯಾಗಿ ನಟಿಸಿದ್ದಾರೆ. ಇವರಿಗೆ ಈ ಹಿಂದೆ ಒರಟ ಐ ಲವ್ ಯೂ ಚಿತ್ರದಲ್ಲಿ ನಾಯಕಿಯಾಗಿದ್ದ ಹೃದಯಾ ಜೊತೆಯಾಗಿದ್ದಾರೆ.

    ವಿನೋದ್ ಭಾರತಿ ಛಾಯಾಗ್ರಹಣ, ಅರುಣ್ ಸುರಗ ಸಂಗೀತ ಈ ಚಿತ್ರಕ್ಕಿದೆ. ಭವಾನಿ ಪ್ರಕಾಶ್, ಯಶ್ವಂತ್ ಶೆಟ್ಟಿ, ನಂದಗೋಪಾಲ್, ಅಕ್ಷರಾ, ಅಜಿತ್ ಜಯರಾಜ್, ಶ್ರೀಧರ್ ಶಾಸ್ತ್ರಿ, ಅಜಯ್ ಶಿವರಾಜ್, ದಿಶಾ ಪೂವಯ್ಯ ಮುಂತಾದವರು ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv