Tag: ಶಿವಕುಮಾರ ಶ್ರೀಗಳು

  • ನಡೆದಾಡುವ ದೇವರ ಗದ್ದುಗೆ ದರ್ಶನ ಪಡೆದ ಗೃಹ ಸಚಿವ ಅಮಿತ್ ಶಾ

    ನಡೆದಾಡುವ ದೇವರ ಗದ್ದುಗೆ ದರ್ಶನ ಪಡೆದ ಗೃಹ ಸಚಿವ ಅಮಿತ್ ಶಾ

    ತುಮಕೂರು: ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನೋತ್ಸವ ಹಿನ್ನೆಲೆ ತುಮಕೂರಿನಲ್ಲಿರುವ ಸಿದ್ದಗಂಗಾ ಮಠಕ್ಕೆ ಕೇಂದ್ರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದ್ದಾರೆ.

    ತುಮಕೂರು ವಿವಿಯ ಹೆಲಿಪ್ಯಾಡಲ್ಲಿ ಇಳಿದ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆಗರ ಜ್ಞಾನೇಂದ್ರ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ಇದನ್ನೂ ಓದಿ: ಇಂದು ಶಿವಕುಮಾರ ಶ್ರೀಗಳ 115 ನೇ ಜನ್ಮ ದಿನೋತ್ಸವ – ಪೂಜಾ ಕೈಂಕರ್ಯಗಳು ಆರಂಭ

    ನಂತರ ಕಾರಿನ ಮೂಲಕ ರಸ್ತೆ ಮಾರ್ಗವಾಗಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಅಮಿತ್ ಶಾ ಅವರು, ಶ್ರೀಗಳ ಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸಿದ್ದಗಂಗಾ ಮಠದಲ್ಲಿ ನಡೆದಾಡುವ ದೇವರ ಬಸವ ಭಾರತ ಹೆಸರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಖೂಬಾ, ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ ಸೇರಿದಂತೆ ಹಲವಾರು ಸಾಧು ಸಂತರು ಭಾಗವಹಿಸಿದ್ದರು. ಅಲ್ಲದೇ ವೇದಿಕೆ ಮುಂಭಾಗದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು 10 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ರಾಹುಲ್‌ ಗಾಂಧಿ ಭೇಟಿ

    ಇಂದು ಲಿಂಗೈಕ್ಯ ಶಿವಕುಮಾರ ಶ್ರೀಗಳ ಜನ್ಮದಿನೋತ್ಸವ ಹಿನ್ನೆಲೆ ಸುಮಾರು 1.5 ರಿಂದ 2 ಲಕ್ಷ ಭಕ್ತಾದಿಗಳಿಗೆ ಎಂಟು ಕಡೆಗಳಲ್ಲಿ ಉಪ್ಪಿಟ್ಟು, ಕೇಸರಿಬಾತ್, ಬೂಂದಿ ಪಾಯಸ, ಅನ್ನಸಾಂಬಾರ್, ವಿವಿಧ ಖಾದ್ಯಗಳ ಊಟ, ತಿಂಡಿಯ ವ್ಯವಸ್ಥೆಗೊಳಿಸಲಾಗಿದೆ.

    ಇಂದು ಬೆಳಗ್ಗಿನಿಂದಲೇ ಸಿದ್ದಗಂಗಾ ಮಠದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದು, ಅಮಿತ್ ಶಾ ಸಹ ಆಗಮಿಸಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟಂತೆ ಆಗಿದೆ. ಅಮಿತ್ ಶಾ ಆಗಮನದ ಹಿನ್ನೆಲೆ 04 ಎಸ್‍ಪಿ, 10 ಡಿ.ವೈ.ಎಸ್‍ಪಿ, ಕೆ.ಎಸ್.ಆರ್.ಪಿ., ಡಿಆರ್ ಸೇರಿದಂತೆ 2 ಸಾವಿರ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.

  • ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ

    ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ

    – ದೆಹಲಿ ಉದ್ಯಮಿಯಿಂದ ಬೆಳ್ಳಿ ವಿಗ್ರಹ ಸಮರ್ಪಣೆ

    ತುಮಕೂರು: ತ್ರಿವಿಧ ದಾಸೋಹಿ, ಪರಮಪೂಜ್ಯ ಶಿವೈಕ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹವನ್ನು ಇಂದು ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

    ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಳೇ ಮಠದಲ್ಲಿ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ಧಗಂಗಾ ಸ್ವಾಮಿಜಿಗಳು ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಅಲ್ಲಿಂದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿತು. ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಆದ ಬಳಿಕ ನೇರವಾಗಿ ಗದ್ದುಗೆಯ ಪೀಠದ ಮೇಲೆ ಬೆಳ್ಳಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

    ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗದ್ದುಗೆ ಪೀಠವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪೀಠದ ಕೆಳಭಾಗದಲ್ಲಿ ಶ್ರೀಗಳ ಪಾದುಕೆ, ಸ್ವಲ್ಪ ಮೇಲ್ಭಾಗದಲ್ಲಿ ಶಿವಲಿಂಗ ಈಗಾಗಲೇ ಪ್ರತಿಷ್ಠಾಪನೆ ಮಾಡಲಾಗಿತ್ತು. ಶಿವಲಿಂಗದ ಹಿಂಭಾಗದ ಮೇಲ್ಭಾಗದಲ್ಲಿ ಶ್ರೀಗಳ ಭಾವಚಿತ್ರ ಇರಿಸಲಾಗಿತ್ತು. ಈ ಭಾವ ಚಿತ್ರ ತೆರವುಗೊಳಿಸಿ ಅದರ ಜಾಗದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

    ಗದ್ದುಗೆ ಪೀಠದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಸಾಕ್ಷಾತ್ ಶಿವಕುಮಾರ ಶ್ರೀಗಳೇ ಬಂದು ಕುಂತ ಅನುಭವ ಭಕ್ತಾಧಿಗಳಲ್ಲಿ ಕಂಡಿದೆ. ಇಂದು ಶ್ರೀಗಳು ಲಿಂಗೈಕ್ಯರಾಗಿ 1 ವರ್ಷವಾಗಿದೆ. ಹಾಗಾಗಿ ಶ್ರೀಮಠದ ಭಕ್ತರಾದ ದೆಹಲಿ ಮೂಲದ ಉದ್ಯಮಿ ಮುಕೇಶ್ ಗರ್ಗ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಬೆಳ್ಳಿ ವಿಗ್ರಹ ಇದಾಗಿದೆ.

  • ಹುಳಿಯಾರು ಕನಕ ವೃತ್ತ ತೆರವು ವಿವಾದ- ಮಾಧುಸ್ವಾಮಿ ಸ್ಪಷ್ಟನೆ

    ಹುಳಿಯಾರು ಕನಕ ವೃತ್ತ ತೆರವು ವಿವಾದ- ಮಾಧುಸ್ವಾಮಿ ಸ್ಪಷ್ಟನೆ

    ಮಂಡ್ಯ: ಚಿಕ್ಕನಾಯಕನಹಳ್ಳಿಯಲ್ಲಿನ ವೃತ್ತಕ್ಕೆ ಹೆಸರಿಡುವ ಕುರಿತ ವಿವಾದ ತಾರಕಕ್ಕೇರಿದ್ದು, ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರಿಡಲ್ಲ, ಬದಲಿಗೆ ಕನಕ ವೃತ್ತ ಎಂದು ಹೆಸರಿಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಕೆ.ಆರ್.ಪೇಟೆಯಲ್ಲಿ ಹುಳಿಯಾರು ಕನಕ ವೃತ್ತ ತೆರವುಗೊಳಿಸಿದ ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ನಾನು ಬೆಳಗಾವಿಯಲ್ಲಿದ್ದಾಗ ಕನಕ ವೃತ್ತ, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಎಂಬ ಹೆಸರಿನ ನಾಮಫಲಕಗಳನ್ನು ಹಾಕಲು ಎರಡು ಗುಂಪುಗಳು ಮುಂದಾಗಿದ್ದವು. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಶಾಂತಿಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡೋಣ ಎಂದು ಮುಂದಾಗಿದ್ದೆ. ಸ್ವಾಮೀಜಿಯವರಿಗಾಗಿ ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದೆ. ಬಳಿಕ ನಡೆದ ಸಭೆಯಲ್ಲಿ ಕನಕ ವೃತ್ತ ಹೆಸರಿಡಲು ಎದುರಾಗಿರುವ ಕಾನೂನು ತೊಡಕುಗಳನ್ನ ಗಮನಕ್ಕೆ ತಂದಿದ್ದೆ. ನಂತರ ಕನಕ ವೃತ್ತ ಎಂದೆ ಹೆಸರಿಡೋಣ ಎಂದು ಸ್ವಾಮೀಜಿಗೆ ತಿಳಿಸಿದೆ.

    ಹುಳಿಯಾರು ಈ ಹಿಂದೆ ಗ್ರಾಮ ಪಂಚಾಯಿತಿಯಾಗಿತ್ತು. ಈಗ ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದೆರ್ಜೆಗೇರಿದೆ. ಪಟ್ಟಣ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆದು ಕನಕ ವೃತ್ತ ಎಂದು ಹೆಸರಿಡೋಣ ಅಂತ ಹೇಳಿದೆ. ಈ ವೇಳೆ ಕಾಗಿನೆಲೆ ಶ್ರೀಗಳು ಈಗಲೇ ಆಗಬೇಕೆಂದು ಪಟ್ಟು ಹಿಡಿದರು. ಆ ವೇಳೆ ನಾನು ಶ್ರೀಗಳ ಮೇಲೆ ರೇಗಿದ್ದು ನಿಜ. ಇದಾದ ಬಳಿಕ ಯಾರ್ಯಾರೋ ದಿನ ನಿತ್ಯ ಕರೆ ಮಾಡಿ ನೀವು ಕುರುಬರ ವಿರೋಧಿ ಎಂದು ಕೇಳುತ್ತಿದ್ದರು. ನಾನು ಕುರುಬ ಸಮುದಾಯದ ಬೆಂಬಲದಿಂದಲೇ ಚಿಕ್ಕನಾಯಕನಹಳ್ಳಿಯಲ್ಲಿ ಗೆದ್ದು ಬಂದಿದ್ದೇನೆ. ನನ್ನ ಜೊತೆ ಆ ಸಮುದಾಯದ ಮುಖಂಡರು ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಅವರಿಗೆ ಹೆಚ್ಚು ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.

    ನಾನು ಅಧಿಕಾರದಲ್ಲಿ ಇರುವವರೆಗೂ ಆ ವೃತ್ತಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಡಲು ಬಿಡಲ್ಲ. ಶ್ರೀಗಳ ಹೆಸರಿಟ್ಟು ನಾನು ಜಾತಿವಾದಿ ಆಗಲು ತಯಾರಿಲ್ಲ. ದಾಸ ಶ್ರೇಷ್ಠ ಕನಕ ವೃತ್ತ ಎಂದೇ ನಾಮಕರಣ ಮಾಡುತ್ತೇನೆ ಎಂದು ಹೇಳಿದ್ದೇನೆ. ಹೀಗಿರುವಾಗ ಇವತ್ತು ಒಬ್ಬ ಕರೆ ಮಾಡಿ ನೀವು ಒಂದು ಸಮಾಜಕ್ಕೆ ಮಾತ್ರ ಮಂತ್ರೀನ ಎಂದು ಕೇಳಿದ, ಹೂ ಅಂದೆ. ಸಿಟ್ಟಾಗಿ ಬೈದು ಫೋನ್ ಕಟ್ ಮಾಡಿದೆ. ಆ ಆಡಿಯೋವನ್ನು ವಾಟ್ಸಪ್ ಮೂಲಕ ವೈರಲ್ ಮಾಡಿ ವಿವಾದ ಸೃಷ್ಠಿಸುತ್ತಿದ್ದಾರೆ. ಉಪ ಚುನಾವಣೆ ಗುರಿಯಾಗಿಟ್ಟುಕೊಂಡೇ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.

  • ಸಿದ್ದಗಂಗಾ ಮಠದಲ್ಲಿ 8 ಸಾವಿರ ಮಕ್ಕಳ ಸಾಮೂಹಿಕ ಕೇಶಮುಂಡನ ಮೂರ್ಖತನ: ಮಾತೆ ಮಹಾದೇವಿ

    ಸಿದ್ದಗಂಗಾ ಮಠದಲ್ಲಿ 8 ಸಾವಿರ ಮಕ್ಕಳ ಸಾಮೂಹಿಕ ಕೇಶಮುಂಡನ ಮೂರ್ಖತನ: ಮಾತೆ ಮಹಾದೇವಿ

    ಬಾಗಲಕೋಟೆ: ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ಶಿವೈಕ್ಯರಾದ ಹಿನ್ನಲೆಯಲ್ಲಿ ಮಠದ 8 ಸಾವಿರ ವಿದ್ಯಾರ್ಥಿಗಳ ಸಾಮೂಹಿಕ ಕೇಶ ಮುಂಡನ ಮಾಡುತ್ತಿರುವುದು ಮೂರ್ಖತನ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

    ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಪ್ರಕಟಣೆ ಹೊರಡಿಸಿರುವ ಮಾತೆ ಮಹಾದೇವಿ ಅವರು, ಲಿಂಗಾಯತ ಧರ್ಮದ ಪ್ರಕಾರ ಯಾರಾದರೂ ಲಿಂಗೈಕ್ಯರಾದರೆ ತಲೆ ಬೊಳಿಸಿಕೊಳ್ಳುವ ಸಂಪ್ರದಾಯವಿಲ್ಲ. ಹೀಗಾಗಿ ಇಂತಹ ಮೂಢ ನಂಬಿಕೆಯನ್ನು ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಮಾಡಬಾರದು. ಬಸವ ತತ್ವ ಎಂದು ಹೇಳುತ್ತ ಅದಕ್ಕೆ ವಿರುದ್ಧವಾದ ಕೆಲಸ ಮಾಡುತ್ತ ಹೋದರೆ ಹಿರಿಯರಿಗೆ ಮಾಡಿದ ಅಪಚಾರವಾಗುವುದು ಎಂದು ಹೇಳಿದ್ದಾರೆ.

    ಮಹಾನ್ ಸಂತರಾದ ಸಿದ್ದಗಂಗಾ ಶ್ರೀಗಳ ಲಿಂಗೈಕ್ಯ ಸಂಸ್ಮರಣೆ ಸಮಾರಂಭದಲ್ಲಿ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ದಾಸೋಹ ಮಾಡಿ. ಆದರೆ ಮೌಢ್ಯಾಚರಣೆ, ಮನುವಾದ ಹಾಗೂ ವೈದಿಕ ಧರ್ಮಕ್ಕೆ ಸಂಬಂಧಿಸಿದ ತಲೆ ಬೆಳಿಸಿಕೊಳ್ಳುವ ಸಂಪ್ರದಾಯ ಸರಿಯಲ್ಲ. ವಿದ್ಯಾರ್ಥಿಗಳು ಮಠದ ಕೈಯಲ್ಲಿ ಇರುತ್ತಾರೆ. ನಾವು ಹೇಳಿದ ಹಾಗೆ ಕೇಳುತ್ತಾರೆ ಅಂತ ಸಾಮೂಹಿಕ ಕೇಶ ಮುಂಡನಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

    ಶಿವಕುಮಾರ ಶ್ರೀಗಳು ಅನೇಕ ವರ್ಷಗಳಿಂದ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದರು. ಕಿರಿಯ ಶ್ರೀಗಳು ಮಠದ ಎಲ್ಲ ಕಾರ್ಯವನ್ನು ನಡೆಸಿಕೊಂಡು ಬಂದಿದ್ದಾರೆ. ಈಗ ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳಿಗೆ ಅನಾಥ ಭಾವ ಬೆಳೆಯಲು ಅವಕಾಶವೇ ಇಲ್ಲ. ಆದ್ದರಿಂದ ಈ ಆಚರಣೆಯನ್ನು ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಮಾಡಕೂಡದು. ಮೂಢನಂಬಿಕೆಯಿಂದ ಹೊರಬರಬೇಕು. ಮಠಗಳ ಮೂಲಕ ಮೌಢ್ಯತೆ ಬಿತ್ತುವುದು ಲಿಂಗಾಯತ ಧರ್ಮಕ್ಕೆ ಮಾಡುವ ಅಪಚಾರ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿ, ಪ್ರೀತಿಯಿಂದ ನೋಡಿ, ದಾಸೋಹ ಮಾಡಿ ಇಂತಹ ಮೂಢಾಚರಣೆಯನ್ನು ಮಾಡಬಾರದು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತುಮಕೂರು ನಗರ ಪ್ರವೇಶದ ಮಾರ್ಗ ಬದಲಾವಣೆ

    ತುಮಕೂರು ನಗರ ಪ್ರವೇಶದ ಮಾರ್ಗ ಬದಲಾವಣೆ

    ಬೆಂಗಳೂರು: ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಸಿದ್ದಗಂಗಾ ಮಠಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ತುಮಕೂರಿಗೆ ಬರುವವರ ಹಾಗೂ ತುಮಕೂರು ಮೂಲಕ ಬೆಂಗಳೂರು, ಉತ್ತರ ಕರ್ನಾಟಕದ ಕಡೆಗೆ ಹೋಗುವ ಮಾರ್ಗವನ್ನು ಬದಲಿಸಲಾಗಿದೆ.

    ರಾಷ್ಟ್ರೀಯ ಹೆದ್ದಾರಿ-04 ಮಾರ್ಗದಲ್ಲಿ ಕ್ಯಾತ್ಸಂದ್ರದಿಂದ ಸರ್ಕಲ್‍ವರೆಗೂ ಎಲ್ಲ ರೀತಿಯ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಕೆಲವು ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಸಿದ್ದಗಂಗಾ ಮಠಕ್ಕೆ ಬರುವ ಭಕ್ತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಗಣ್ಯರು ಹೆಲಿಕಾಪ್ಟರ್ ಮೂಲಕ ಮಠಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಶಿವಣ್ಣನಾಗಿ ಬಂದವರು ಶಿವಕುಮಾರ ಸ್ವಾಮೀಜಿಯಾದ್ರು!

    ಮಾರ್ಗ ಬದಲಾವಣೆ ಹೇಗಿದೆ?:
    ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಮಧುಗಿರಿ, ಕೊರಟಗೆರೆ, ದಾಬಸಪೇಟೆ ಮಾರ್ಗವಾಗಿ ತೆರಳಲಿವೆ. ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ವಾಹನಗಳು ಗುಬ್ಬಿ ಗೇಟ್ ರಿಂಗ್ ರಸ್ತೆ ಮೂಲಕ ಕುಣಿಗಲ್ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಗೂಳೂರು ಮೂಲಕ ಸಾಗುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ತುಮಕೂರಿಗೆ ಆಗಮಿಸುವ ವಾಹನಗಳು ಗುಬ್ಬಿ ರಿಂಗ್ ರಸ್ತೆ ಮುಖಾಂತರ ನಗರವನ್ನು ಪ್ರವೇಶಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

    ಶಿರಾ ಕಡೆಯಿಂದ ತುಮಕೂರು ನಗರಕ್ಕೆ ಬರುವ ಸಾರ್ವಜನಿಕರು ರಂಗಾಪುರ ಬ್ರಿಡ್ಜ್ ಬಳಿ ಸರ್ವಿಸ್ ರಸ್ತೆ, ಶ್ರೀದೇವಿ ಕಾಲೇಜ್ ಮುಖಾಂತರ ತುಮಕೂರು ತಲುಪಬಹುದು.

    https://youtu.be/jtctwPaRF7o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳವಾರ ಶಾಲಾ, ಕಾಲೇಜುಗಳಿಗೆ ರಜೆ – 3 ದಿನ ಶೋಕಾಚರಣೆ

    ಮಂಗಳವಾರ ಶಾಲಾ, ಕಾಲೇಜುಗಳಿಗೆ ರಜೆ – 3 ದಿನ ಶೋಕಾಚರಣೆ

    ತುಮಕೂರು: ಜವರಾಯನ ಜೊತೆಗೆ ಹೋರಾಡುತ್ತಿದ್ದ ನಡೆದಾಡುವ ದೇವರು, ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ.

    ಸಿದ್ದಗಂಗಾ ಮಠದ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಪರಮ ಪೂಜ್ಯ ಶ್ರೀಗಳು ಶಿವಕ್ಯೆಯಾಗಿರುವುದನ್ನು ವೈದ್ಯರು ಈಗ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

    ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು ಶೋಕಾಚರಣೆ ನಡೆಸಬೇಕು ಹಾಗೂ ನಾಳೆ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

    ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಹಾಗೂ ಸಿದ್ದಗಂಗಾ ಮಠದ ಕಿರಿಯ ಶ್ರೀಗಳ ಜೊತೆಗೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಶಾಸಕ ಸೋಮಣ್ಣ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಾತುಕತೆ ನಡೆಸಿದ್ದಾರೆ. ಅದರಂತೆ ವಿಧಿವಿಧಾನ ಅನುಸರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಭಕ್ತರಿಗೆ ಇಂದು ಹಾಗೂ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಪವಾಡ ಪುರುಷರಾಗಿರುವ ಶ್ರೀಗಳು ದೈವಿ ಶಕ್ತಿಯಾಗಿ ನಮಗೆ ಮಾರ್ಗದರ್ಶನ ನೀಡಿ, ಧಾರ್ಮಿಕ ಕ್ಷೇತಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಶ್ರೀಗಳನ್ನು ಕಳೆದುಕೊಂಡ ನಮಗೆ ನೋವು ತಂದಿದೆ. ಬಡಮಕ್ಕಳಿಗೆ ಶಿಕ್ಷಣ, ಆಶ್ರಯ ನೀಡಿ, ಸ್ವಾಮೀಜಿಗಳು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಎಚ್‍ಡಿಕೆ ಸ್ಮರಿಸಿದರು.

    ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಶ್ರೀಗಳ ಅಗಲಿಕೆ ನೋವು ತಂದಿದೆ. ಅವರ ಆತ್ಮದ ಬೆಳಕು ಅನೇಕರ ಜೀವನ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಈ ಕಾಲದ ಬಸವಣ್ಣನನ್ನು ನಾವು ಕಳೆದುಕೊಂಡಿದ್ದೇವೆ. ಶ್ರೀಗಳು ಸಾಮಾಜಿಕ ಕಳಕಳಿ ಇಟ್ಟುಕೊಂಡಿದ್ದರು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಳ್ಳುವ ಶಿಕ್ಷಣವನ್ನು ಸಿದ್ದಗಂಗಾ ಮಠದಿಂದ ಮೂಲಕ ನೀಡಿದ್ದಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶತಾಯುಷಿ ಶ್ರೀಗಳ ಪಾದಮುಟ್ಟಿ ನಮಸ್ಕರಿಸಿದ ಯಶ್

    ಶತಾಯುಷಿ ಶ್ರೀಗಳ ಪಾದಮುಟ್ಟಿ ನಮಸ್ಕರಿಸಿದ ಯಶ್

    ತುಮಕೂರು: ರಾಕಿಂಗ್ ಸ್ಟಾರ್ ಯಶ್ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

    ನಟ ಯಶ್ ಶುಕ್ರವಾರ ಖಾಸಗಿ ಕಾರ್ಯಕ್ರಮ ನಿಮಿತ್ತ ತುಮಕೂರಿಗೆ ಬಂದಿದ್ದರು. ನಂತರ ಅವರು ಶ್ರೀಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಶತಾಯುಷಿ ಶಿವಕುಮಾರ ಸ್ವಾಮೀಜಿಗಳ ಪಾದಮುಟ್ಟಿ ನಮಸ್ಕರಿಸಿದ್ದು, ಅಷ್ಟೇ ಅಲ್ಲದೇ ಕೆಲ ಹೊತ್ತು ಅವರ ಮುಂದೆ ಕುಳಿತುಕೊಂಡಿದ್ದಾರೆ. ಇನ್ನು ಮಠದ ವತಿಯಿಂದ ಯಶ್ ವರಿಗೆ ಹಣ್ಣು ನೀಡಿ, ಶಾಲು ಹಾಕಿ ಗೌರವಿಸಲಾಯಿತು.

    ಇತ್ತೀಚೆಗಷ್ಟೆ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಿದ್ದು, ಜ್ವರ ಹಾಗೂ ಕಫ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಯಶ್ ಶ್ರೀಗಳನ್ನು ಭೇಟಿಯಾಗಿದ್ದಾರೆ ಅಂತಾ ತಿಳಿದು ಬಂದಿದೆ.

    ಪ್ರಸ್ತುತ ಯಶ್ ದಕ್ಷಿಣ ಭಾರತದ ಬಹುನಿರೀಕ್ಷಿತ ಕೆ.ಜಿ.ಎಫ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಸಿನಿಮಾ ತೆರೆಕಾಣಲಿದೆ. ಇದನ್ನು ಓದಿ: ಮಗುವಿನೊಂದಿಗಿರೋ ಯಶ್ ಫೋಟೋ ಹಾಕಿ ಪತ್ನಿ ರಾಧಿಕಾ ಹೀಗೆ ತಮಾಷೆ ಮಾಡಿದ್ರು!