Tag: ಶಿವಕುಮಾರ್

  • ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್‍ಪಿನ್ ಶಿವಕುಮಾರ್ ಕೊರೊನಾಗೆ ಬಲಿ

    ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್‍ಪಿನ್ ಶಿವಕುಮಾರ್ ಕೊರೊನಾಗೆ ಬಲಿ

    ತುಮಕೂರು: ಎಸ್.ಎಸ್.ಎಲ್.ಸಿ, ಪಿಯುಸಿ, ಪೊಲೀಸ್ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಕಿಂಗ್ ಪಿನ್ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾನೆ.

    ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆ ಕಾಗ್ಗೆರೆ ಮೂಲದ ಶಿವಕುಮಾರ್(65) ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾನೆ.

    2011ರಲ್ಲಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ, 2012ರಲ್ಲಿ ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ದೂರು ದಾಖಲಾಗಿತ್ತು. ಅಲ್ಲೂ ಶಿವಕುಮಾರ್ ಹೆಸರು ಕೇಳಿ ಬಂದಿತ್ತು.

    2013ರಲ್ಲಿ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ದೇವೇಂದ್ರ, ತುಮಕೂರಿನ ಗುಬ್ಬಿ ಮೂಲದ ಮಲ್ಲೇಶ್ ಎಂಬಾತನನ್ನು ತುಮಕೂರು ಪೊಲೀಸರು ಬಂಧಿಸಿದ್ದರು. ಆಗ ವಿಚಾರಣೆ ವೇಳೆ ಕಿಂಗ್‍ಪಿನ್ ಇದೇ ಶಿವಕುಮಾರ್ ಎಂಬ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು.

    ಬಿಡುಗಡೆಗೊಂಡಿದ್ದ ಈತ 2016ರಲ್ಲಿ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಹಾಗೂ 2018ರಲ್ಲಿ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಈತ ಪೊಲೀಸರ ಅತಿಥಿಯಾಗಿದ್ದನು. ಒಟ್ಟಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಶಿವಕುಮಾರ್ ವಿಚಾರಣೆ ಎದುರಿಸುತ್ತಿದ್ದನು.

  • ಕೊರೊನಾ ಬಿಜೆಪಿಯವರಿಗೆ ಮಾತ್ರ ಬರುತ್ತಾ? -ಹೆಚ್‍ಡಿಕೆ, ಡಿಕೆಶಿಗೆ ಸಿ.ಟಿ.ರವಿ ಟಾಂಗ್

    ಕೊರೊನಾ ಬಿಜೆಪಿಯವರಿಗೆ ಮಾತ್ರ ಬರುತ್ತಾ? -ಹೆಚ್‍ಡಿಕೆ, ಡಿಕೆಶಿಗೆ ಸಿ.ಟಿ.ರವಿ ಟಾಂಗ್

    ಚಿಕ್ಕಮಗಳೂರು: ಕೊರೊನಾ ಬಿಜೆಪಿಯವರಿಗೆ ಮಾತ್ರ ಬರುತ್ತಾ ಇಲ್ಲ ಎಲ್ಲರಿಗೂ ಬರುತ್ತಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ ರವಿ ಅವರು, ಇದೇ ತಿಂಗಳು 18ರಂದು ನಡೆಯುವ ಸರ್ವಪಕ್ಷ ಸಭೆಗೆ ಏಕೆ ಹೋಗಬೇಕು ಎಂದು ಪ್ರಶ್ನಿಸಿದ್ದ ಡಿ.ಕೆ.ಶಿವಕುಮಾರ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಖಾರವಾಗಿ ಕಿಡಿ ಕಾರಿದ್ದು, ಇಂದು ಸಂಖ್ಯಾಬಲದಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾದರೆ ಕಾಂಗ್ರೆಸ್-ಜೆಡಿಎಸ್‍ಗೆ ರಾಜ್ಯದ ಬಗ್ಗೆ ಜವಾಬ್ದಾರಿ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

    ಕೊರೊನಾ ವೈರಸ್ ಬಿಜೆಪಿ ಬೆಂಬಲಿಗರಿಗೆ ಮಾತ್ರ ಬರುತ್ತೋ ಅಥವಾ ಎಲ್ಲರಿಗೂ ಬರುತ್ತೋ ಎಂದು ಕಾಂಗ್ರೆಸ್-ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿ, ಕೊರೊನಾ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಸೇರಿದಂತೆ ಎಲ್ಲರಿಗೂ ಬಂದಿದೆ. ರಾಜಕಾರಣಕ್ಕೆ ಸಂಬಂಧವೇ ಇಲ್ಲದವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾವೇ ರಾಜಕಾರಣ ಮಾಡಿಲ್ಲ ಇವರೇಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಇವರು ರಾಜಕಾರಣವನ್ನೇ ಮಾಡಬೇಕು ಎಂದರೆ ಬೇರೆ ಸಾಕಷ್ಟು ವಿಷಯಗಳಿವೆ ಅಲ್ಲಿ ಮಾಡಲಿ. ಇದು ರಾಜಕಾರಣ ಮಾಡುವ ವಿಷಯವಲ್ಲ. ಇದರಲ್ಲೂ ರಾಜಕಾರಣದ ಬಳಕೆ ದುರದೃಷ್ಟಕರ ಸಂಗತಿಯಾಗಿದೆ. ಸರ್ಕಾರ ವ್ಯವಸ್ಥೆ ನಿರ್ಮಾಣ ಮಾಡಬೇಕು. ಅದರ ನಿಯಂತ್ರಣ ಎಲ್ಲರ ಸಹಕಾರದಿಂದಲೇ ಆಗಬೇಕು. ಇದು ರಾಜಕಾರಣದ ವಿಷಯವಲ್ಲ. ಇಲ್ಲಿ ರಾಜಕಾರಣ ಮಾಡೋದು ಬಿಟ್ಟು ಸಲಹೆ-ಸಹಕಾರ ಕೊಡಲಿ. ಅದು ಸೂಕ್ತವಾಗಿದ್ದಾರೆ, ಅದನ್ನು ಸ್ವೀಕರಿಸುವ ಮನಸ್ಸು ಸರ್ಕಾರಕ್ಕೂ ಇರಬೇಕು ಎಂದು ಅಭಿಪ್ರಾಯಪಟ್ಟರು.

  • ಕಾಳಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ

    ಕಾಳಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ

    ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ರೆಮ್‍ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.

    ರಾಷ್ಟ್ರಾದ್ಯಂತ ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಜನರು ಬಳಲುತ್ತಿದ್ದಾರೆ ಮತ್ತು ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಸಹ ಪ್ರಮುಖ ಕ್ರಮಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಪೊಲೀಸರು ಮತ್ತು ಇತರ ಅನೇಕ ಸಂಬಂಧಿತ ಅಧಿಕಾರಿಗಳು ಸರ್ಕಾರದೊಂದಿಗೆ ವೈರಸ್ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

    ಈ ಮಧ್ಯೆ ಸಿ, ಎಫ್ ಮತ್ತು ಸಗಟು ವಿತರಕರು ಬ್ಯಾಚ್ ನಂ ಆರ್ ಎಂ121004ಎ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ರೆಮ್ ಡಿಸಿವರ್ ಅನ್ನು ಸರಬರಾಜು ಮಾಡುತ್ತಿಲ್ಲ ಎಂದು ನೆಲಮಂಗಲ ನಗರದ ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.

    ಕಳೆದ 10 ದಿನಗಳಿಂದ ಚುಚ್ಚುಮದ್ದಿನ ಬಗ್ಗೆ ವಿಚಾರಿಸಿದಾಗ, ಅವರು ಯಾವುದೇ ಸ್ಟಾಕ್ ಇಲ್ಲದೆ ಉತ್ತರಿಸುತ್ತಿದ್ದಾರೆ. ಸಿ&ಎಫ್ ವಿತರಕರು ಸರಿಯಾಗಿ ವಿತರಣೆ ಮಾಡುತ್ತಿಲ್ಲ. 1500 ರಿಂದ 2000 ಸಾವಿರಕ್ಕೆ ಸಿಗುವ ಔಷಧಿಯನ್ನು ಕಾಳ ಸಂತೆಯಲ್ಲಿ 15 ರಿಂದ 25 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಈ ಕುರಿತಂತೆ ಕೂಡಲೇ ಕ್ರಮ ವಹಿಸುವಂತೆ ಮಾನ್ಯ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಕಮಿಷನರ್ ಸೇರಿದಂತೆ ಅನೇಕರಿಗೆ ಶಿವಕುಮಾರ್‍ರವರು ಪತ್ರ ಬರೆದು ಕೂಡಲೇ ಈ ಪ್ರಕರಣವನ್ನು ಸಿಬಿಐ, ಸಿಸಿಬಿ, ಸಿಐಡಿಗೆ ಹಸ್ತಾಂತರ ಮಾಡಿ ಕರ್ನಾಟಕದಲ್ಲಿ ಸ್ಟಾಕ್ ಲಭ್ಯವಿರುವಂತೆ ಮನವಿ ಮಾಡಿಕೊಂಡಿದ್ದಾರೆ.

  • ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ

    ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(ಎಸ್‍ಐಟಿ) ಈಗ ಶಿವಕುಮಾರ್ ಬೆನ್ನು ಬಿದ್ದಿದೆ.

    ಅಸಲಿಗೆ ಈ ಪ್ರಕರಣದಲ್ಲಿರುವ ಶಿವಕುಮಾರ್ ಕನಕಪುರ ಮೂಲದ ವ್ಯಕ್ತಿಯಾಗಿದ್ದು, ಗ್ರಾನೈಟ್ ಉದ್ಯಮ ನಡೆಸುತ್ತಿದ್ದಾನೆ. ಈತನಿಗೆ ಸಿಡಿ ಸೂತ್ರದಾರರ ಜೊತೆ ನಂಟು ಇರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಸಿಡಿ ಹುಡುಗರಿಗೆ 10 ಲಕ್ಷ ಹಣ ಸಂದಾಯ ಮಾಡಿದ್ದ ಶಿವಕುಮಾರ್ ಸಿಡಿ ರಿಲೀಸ್ ಬಳಿಕ ಯುವತಿಯ ಗೆಳೆಯನಿಗೆ 50 ಸಾವಿರ ಕೊಟ್ಟಿದ್ದಾನೆ. ಯುವತಿಯನ್ನು ಗೋವಾಗೆ ಕರೆದೊಯ್ಯಲು 50 ಸಾವಿರ ರೂ. ಕೊಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಸದ್ಯ ಕೊಚ್ಚಿಯಲ್ಲಿ ಶಿವಕುಮಾರ್ ತಲೆ ಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆತನ ಪತ್ತೆಗೆ ಈಗ ಬಲೆ ಬೀಸಲಾಗಿದೆ. ಕಾಲ್‌ ಡಿಟೈಲ್ಸ್‌ನಲ್ಲಿ ಈತ ಸಿಡಿ ಗ್ಯಾಂಗ್‌ ಸದಸ್ಯರ ಜೊತೆ ನಿಖಟ ಸಂಪರ್ಕ ಹೊಂದಿದ್ದ ಮಾಹಿತಿಯೂ ಸಿಕ್ಕಿದೆ.

    ಎಸ್‍ಐಟಿ ಪೊಲೀಸರು ಈಗ ವಿಚಾರಣೆಗೆ ಒಳಪಟ್ಟವರ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಎರಡು ದಿನ ಬ್ಯಾಂಕ್ ಮುಷ್ಕರ ಇದ್ದ ಹಿನ್ನೆಲೆಯಲ್ಲಿ ಮಾಹಿತಿ ಸಿಕ್ಕಿರಲಿಲ್ಲ. ಬುಧವಾರ ವಿಚಾರಣೆಗೆ ಒಳಪಟ್ಟವರ ಬ್ಯಾಂಕ್ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ಗ್ಯಾಂಗ್ ಸದಸ್ಯರ ಖಾತೆಗೆ ಈತ ಹಣ ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • ನಟ ರಮೇಶ್ ಪುತ್ರಿಯ ಆರತಕ್ಷತೆ ಸಮಾರಂಭ – ರಾಜಕೀಯ, ಚಿತ್ರರಂಗದ ಗಣ್ಯರು ಭಾಗಿ

    ನಟ ರಮೇಶ್ ಪುತ್ರಿಯ ಆರತಕ್ಷತೆ ಸಮಾರಂಭ – ರಾಜಕೀಯ, ಚಿತ್ರರಂಗದ ಗಣ್ಯರು ಭಾಗಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕ ಮತ್ತು ಅಕ್ಷಯ್ ಅವರ ವಿವಾಹ ಆರತಕ್ಷತೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು.

     

    ಡಿಸೆಂಬರ್ 28 ರಂದು ನಿಹಾರಿಕಾ ಅವರು ಅಕ್ಷಯ್ ಅವರನ್ನು ಕೈಹಿಡಿದಿದ್ದರು. ಕೊರೊನಾ ಹಿನ್ನಲೆ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಸೇರಿ ಸರಳವಾಗಿ ಮದುವೆ ಸಮಾರಂಭ ನಡೆದಿತ್ತು. ಇಂದು ಖಾಸಗಿ ಹೋಟೆಲಿನಲ್ಲಿ ಆರತಕ್ಷತೆ ಸಮಾರಂಭ ನಡೆಯಿತು.

    ಕಾರ್ಯಕ್ರಮದಲ್ಲಿ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರಾದ ಶಿವರಾಜ್ ಕುಮಾರ್,ಯಶ್, ರಾಘವೇಂದ್ರ ರಾಜ್ ಕುಮಾರ್, ರವಿಚಂದ್ರನ್, ಶ್ರೀಮುರಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಾ. ಅಶ್ವತ್‍ನಾರಾಯಣ್, ಸಂಸದ ತೇಜಸ್ವಿ ಸೂರ್ಯ, ಆರೋಗ್ಯ ಸಚಿವ ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇನ್ನಿತರರು ಭಾಗವಹಿಸಿ ನೂತನ ವಧುವರರಿಗೆ ಶುಭ ಹಾರೈಸಿದರು.

    ಸಿನಿಮಾ ಕ್ಷೇತ್ರವಲ್ಲದೆ ಇರುವ ಅಕ್ಷಯ್ ನಿಹಾರಿಕ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಒಬ್ಬರಿಗೊಬ್ಬರು ಒಪ್ಪಿದ ನಂತರ ಎರಡು ಕುಟುಂಬದವರು ಸೇರಿ ವಿವಾಹ ಮಾಡಿದ್ದರು.

     

  • ನಾಳೆ ಡಿ.ಕೆ ಶಿವಕುಮಾರ್ ಮಗಳ ನಿಶ್ಚಿತಾರ್ಥ

    ನಾಳೆ ಡಿ.ಕೆ ಶಿವಕುಮಾರ್ ಮಗಳ ನಿಶ್ಚಿತಾರ್ಥ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಮತ್ತು ಉದ್ಯಮಿ ಸಿದ್ಧಾರ್ಥ ಹೆಗಡೆ ಪುತ್ರ ಅಮರ್ಥ್ಯ ಹೆಗಡೆಯ ನಿಶ್ಚಿತಾರ್ಥ ನಾಳೆ ಖಾಸಗಿ ಹೋಟೆಲ್‍ನಲ್ಲಿ ನಡೆಯಲಿದೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಖಾಸಗಿ ಹೋಟೆಲ್‍ವೊಂದರಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಡಿ.ಕೆ ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಅಮರ್ಥ್ಯ ಕಾಫಿ ಡೇ ಸಿದ್ಧಾರ್ಥ ಅವರ ಹಿರಿಯ ಪುತ್ರನಾಗಿದ್ದು ತಂದೆ ಮೃತಪಟ್ಟ ನಂತರ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ತನ್ನ ತಂದೆ ನಡೆಸುತ್ತಿರುವ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜನ್ನು ನೋಡಿಕೊಳ್ಳುತ್ತಿದ್ದಾರೆ.

  • ಸಾವನ್ನಪ್ಪಿದ ನಂತ್ರ 3 ದಿನ ಕಾರಿನಲ್ಲೇ ಇತ್ತು ಶವ!

    ಸಾವನ್ನಪ್ಪಿದ ನಂತ್ರ 3 ದಿನ ಕಾರಿನಲ್ಲೇ ಇತ್ತು ಶವ!

    – ಡೋರ್, ವಿಂಡೋ ಕ್ಲೋಸ್ ಆಗಿತ್ತು
    – ನಾಪತ್ತೆ ದೂರು ದಾಖಲಿಸಿದ್ದ ಕುಟುಂಬ

    ಮಂಡ್ಯ: ಅನಾರೋಗ್ಯದಿಂದ ಕಾರಿನಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಮೃತ ದೇಹ ಮೂರು ದಿನಗಳ ಕಾಲ ಕಾರಿನಲ್ಲೇ ಮೃತ ದೇಹವಿದ್ದ ಘಟನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಬಳಿ ಜರುಗಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರಗಾವಲು ಗ್ರಾಮದ ಶಿವಕುಮಾರ್ (42) ಸಾವನ್ನಪ್ಪಿರುವ ವ್ಯಕ್ತಿ. ಶಿವಕುಮಾರ್ ಕಿರುಗಾವಲಿನಿಂದ ಕಳೆದ ಮೂರು ದಿನಗಳ ಹಿಂದೆ ಮಂಡ್ಯ ನಗರಕ್ಕೆ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ಮಿಮ್ಸ್ ಆಸ್ಪತ್ರೆಯ ಎದುರು ಕಾರು ನಿಲ್ಲಿಸಿಕೊಂಡಿದ್ದು, ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದ್ದಾರೆ.

    ಕಾರಿನ ಡೋರ್, ವಿಂಡೋ ಮುಚ್ಚಿದ್ದ ಕಾರಣ ಯಾರಿಗೂ ಸಹ ತಿಳಿದಿಲ್ಲ. ಶಿವಕುಮಾರ್ ಮನೆಗೆ ಬಾರದ ಕಾರಣ ಕುಟುಂಬಸ್ಥರು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಮೂರು ದಿನಗಳಿಂದ ಕಾರು ಇದ್ದ ಜಾಗದಲ್ಲೇ ಇದ್ದ ಕಾರಣ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ಮಾಡಿದ ವೇಳೆ ಶಿವಕುಮಾರ್ ಮೃತರಾಗಿರುವುದು ತಿಳಿದು ಬಂದಿದೆ.

    ಮಿಮ್ಸ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಈ ಕುರಿತು ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 57 ಲಕ್ಷ ಹಣ ಪತ್ತೆ – ಡಿಕೆ ಸುರೇಶ್‌ ಅವರೇ ಈಗ ಏನು ಹೇಳ್ತೀರಿ?

    57 ಲಕ್ಷ ಹಣ ಪತ್ತೆ – ಡಿಕೆ ಸುರೇಶ್‌ ಅವರೇ ಈಗ ಏನು ಹೇಳ್ತೀರಿ?

    – ಪಬ್ಲಿಕ್‌ ಟಿವಿಗೆ ಎಲ್ಲ ಗೊತ್ತಾಗಿದ್ಯಲ್ಲ
    – ಅಣ್ಣನ ಮನೆಯಲ್ಲಿ ನನಗೆ ಗೊತ್ತಿದ್ದಂತೆ ನಗದು ಸಿಕ್ಕಿಲ್ಲ

    ಬೆಂಗಳೂರು: ಪಬ್ಲಿಕ್ ಟಿವಿ ಸಿಬಿಐ ಮೂಲಗಳನ್ನು ಆಧರಿಸಿ 50 ಲಕ್ಷ ನಗದನ್ನು ವಶಪಡಿಸಿಕೊಂಡಿರುವ ಬಗ್ಗೆ ಇಂದು ಮಧ್ಯಾಹ್ನವೇ  ಎಕ್ಸ್‌ಕ್ಲೂಸಿವ್‌ ವರದಿ ಬಿತ್ತರಿಸಿತ್ತು. ಆದರೆ ಸಿಬಿಐ ಅಧಿಕೃತ ಪ್ರಕಟಣೆ ಹೊರಡಿಸುವ ಮುನ್ನ ಮಾತನಾಡಿದ್ದ ಸಂಸದ ಡಿಕೆ ಸುರೇಶ್, ಪಬ್ಲಿಕ್ ಟಿವಿಗೆ ಎಲ್ಲಾ ಗೊತ್ತಾಗಿದ್ಯಂತಲ್ಲ ಎಂದಿದ್ದರು.

    50 ಲಕ್ಷ ಸಿಕ್ಕಿದ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ನನ್ನ ಅಣ್ಣನ ಮನೆಯಲ್ಲಿ ನನಗೆ ಗೊತ್ತಿದ್ದಂತೆ ನಗದು ಸಿಕ್ಕಿಲ್ಲ. ಪಬ್ಲಿಕ್ ಟಿವಿ 50 ಲಕ್ಷ ಸಿಕ್ಕಿದೆ ಅಂತಾ ವರದಿ ಮಾಡಿದೆ. ಆ ಹಣ ಯಾರ ಮನೆಯಲ್ಲಿ ಸಿಕ್ಕಿದೆ ಅಂತಾ ಪಬ್ಲಿಕ್ ಟಿವಿ ಹೇಳಬೇಕು ಅಂತಾ ಡಿಕೆ ಸುರೇಶ್, ಪಬ್ಲಿಕ್‌ ಟಿವಿ ದೊಡ್ಡ ತಪ್ಪು ಮಾಡಿದ್ದೇವೆ ಎಂಬಂತೆ ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಈ ಡಿಕೆ ಶಿವಕುಮಾರ್‌ ಹೆದರುವ ಮಗ ಅಲ್ಲ, ಯಾವುದಕ್ಕೂ ಜಗ್ಗಲ್ಲ: ಡಿಕೆಶಿ

    ಸಂಜೆ ಸಿಬಿಐ ಅಧಿಕೃತ ಪ್ರಕಟಣೆ ಹೊರಡಿಸಿ, ಡಿಕೆಶಿಗೆ ಸಂಬಂಧಿಸಿದಂತೆ 14 ಕಡೆ ನಡೆದ ದಾಳಿಯಲ್ಲಿ 57 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿತು. ಈ ಮೂಲಕ ಪಬ್ಲಿಕ್‌ ಟಿವಿ ವರದಿ ಮಾಡಿದ್ದ ಸುದ್ದಿ ನಿಜವಾಯಿತು.

    ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್ 57 ಲಕ್ಷ ರೂ. ನಗದು ಸಿಕ್ಕಿದ ಬಗ್ಗೆ ಸರಿಯಾದ ಸ್ಪಷ್ಟನೆ ನೀಡಲಿಲ್ಲ. ಅಷ್ಟು ದುಡ್ಡು ಸಿಕ್ಕಿದರೆ ಸಂತೋಷ. ನಾನೇನು ಕದ್ದು ಮುಚ್ಚಿ ಏನು ಮಾಡಿಲ್ಲ. ನನ್ನ ಮನೆಯಲ್ಲಿ 1.77 ಲಕ್ಷ ಸಿಕ್ಕಿದೆ. ನನ್ನ ಕಚೇರಿಯಲ್ಲಿ ಸಿಬ್ಬಂದಿ ಖರ್ಚಿಗೆ ಅಂತಾ ಮೂರ್ನಾಲ್ಕು ಲಕ್ಷ ಸಿಕ್ಕಿರಬಹುದು. ದೆಹಲಿಯ ಸುರೇಶ್ ಮನೆಯಲ್ಲಿ ಎರಡ್ಮೂರು ಲಕ್ಷ ಸಿಕ್ಕಿರಬಹುದು. ಊರಿನಲ್ಲಿ ಎಷ್ಟು ಸಿಕ್ಕಿದೆ ಎನ್ನುವುದು ಗೊತ್ತಿಲ್ಲ ಎಂದರು. ಬೇರೆಯವರ ಮನೆಯಲ್ಲಿ ಏನು ಸಿಕ್ಕಿದ್ಯೋ ನಂಗೆ ಗೊತ್ತಿಲ್ಲ ಎಂದು ಹೇಳಿ ಜಾರಿಕೊಂಡರು

    ಇದಕ್ಕೂ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಡಿಕೆಶಿ, ಇಂದಿನ ದಾಳಿಯಲ್ಲಿ ನನ್ನ ಮನೆಯಲ್ಲಿ ಪಂಚೆ, ಪ್ಯಾಂಟು ಶರ್ಟು, ಸೀರೆಗಳ ಲೆಕ್ಕವನ್ನು ಸಿಬಿಐ ತಗೊಂಡಿದೆ ಎಂದು ಹೇಳಿದರು.

  • ವಾರ್ ಟೈಮ್ ವಾರಿಯರ್‌ಗೆ ಪೀಸ್ ಟೈಮ್ ಪೈನ್

    ವಾರ್ ಟೈಮ್ ವಾರಿಯರ್‌ಗೆ ಪೀಸ್ ಟೈಮ್ ಪೈನ್

    ಬೆಂಗಳೂರು: ಇದು ರಾಜ್ಯ ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಡಿಕೆಶಿಯ ಪಾಲಿಗೆ ಎದುರಾದ ಇನ್ನೊಂದು ರೀತಿಯ ಸಂಕಷ್ಟ. ಇನ್ನೇನು ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟಾಭಿಷೇಕ ಆಗಿಯೇ ಬಿಟ್ಟಿತು ಎನ್ನಲಾಗುತ್ತಿತ್ತು. ಆದರೆ ಈಗ ಹೈಕಮಾಂಡ್ ಮಟ್ಟದಲ್ಲೇ ಭಿನ್ನರಾಗ ಶುರುವಾಗಿದೆ ಎನ್ನಲಾಗುತ್ತಿದೆ.

    ಇನ್ನು ಚುನಾವಣೆಗೆ 3 ವರ್ಷವಿದೆ. ಇಂತಹ ರಾಜಕೀಯ ಪೀಸ್ ಟೈಮ್ ನಲ್ಲಿ ಡಿ.ಕೆ.ಶಿವಕುಮಾರ್ ಅವರಂತಹ ವಾರಿಯರ್ ಬೇಡ ಬೇರೆಯವರೇ ಇರಲಿ ಎನ್ನುವ ಮಾತು ಹೈಕಮಾಂಡ್ ವಲಯದಲ್ಲಿ ಚರ್ಚೆ ಆಗುತ್ತಿದೆ. ಒಂದೂವರೆ ವರ್ಷ ಕಳೆದ ನಂತರ ಮತ್ತೆ ನೋಡಿದರಾಯ್ತು ಸದ್ಯಕ್ಕೆ ಬೇರೆಯವರಿಗೆ ನೇತೃತ್ವ ಕೊಡಲಾಗುತ್ತದೆ ಎನ್ನುವುದು ದೆಹಲಿ ಅಂಗಳದ ಸ್ಟ್ರಾಂಗ್ ರೂಮರ್. ಈ ಬೆಳವಣಿಗೆಗೆ ಕಾರಣವಾಗಿರುವುದು ಡಿಕೆಶಿಗಿರುವ ಸಿಬಿಐ ಭಯ ಎನ್ನುವ ಮಾತು ಕೇಳಿ ಬರುತ್ತಿದೆ.

    ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ರಾಜ್ಯ ಕಾಂಗ್ರೆಸ್ಸಿನ ಬಹುತೇಕ ನಾಯಕರು ಹೈಕಮಾಂಡ್ ಬಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಗೊಂದಲಕ್ಕೆ ಬಿದ್ದ ಹೈ ಕಮಾಂಡ್ ಪೀಸ್ ಟೈಮ್, ವಾರ್ ಟೈಮ್ ಸೂತ್ರ ಬಳಸಬಹುದು ಎನ್ನಲಾಗುತ್ತಿದೆ.

    ಹಾಗೇನಾದರು ಪೀಸ್ ಟೈಮ್ ನಲ್ಲಿ ವಾರಿಯರ್ ಪಟ್ಟಾಭಿಷೇಕ ಬೇಡ ಎಂಬ ತೀರ್ಮಾನವಾದರೆ ಡಿಕೆಶಿ ಪಟ್ಟಾಭಿಷೇಕ ಸದ್ಯಕ್ಕಿಲ್ಲ ಎನ್ನುವುದು ಪಕ್ಕಾ. ಇವೆಲ್ಲವನ್ನು ಮೀರಿ ಡಿಕೆಶಿಗೆ ಪಟ್ಟಾಭಿಷೇಕ ಅನಿವಾರ್ಯ ಎನ್ನುವ ತೀರ್ಮಾನಕ್ಕೆ ಹೈಕಮಾಂಡ್ ಬಂದರಷ್ಟೇ ಡಿಕೆಶಿಗೆ ಅವಕಾಶ. ಇಲ್ಲದಿದ್ದರೆ ಪೀಸ್ ಟೈಮ್ ಫಾರ್ಮುಲವೇ ಡಿಕೆಶಿ ಪಾಲಿಗೆ ಮುಳ್ಳಾಗುವ ಸಾಧ್ಯತೆಯಿದೆ.

  • ಮಾಜಿ ಸಚಿವ ರೇವಣ್ಣ ಆಪ್ತನಿಗೆ ಐಟಿ ಶಾಕ್

    ಮಾಜಿ ಸಚಿವ ರೇವಣ್ಣ ಆಪ್ತನಿಗೆ ಐಟಿ ಶಾಕ್

    ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಆಪ್ತ, ಗುತ್ತಿಗೆದಾರ ಶಿವಕುಮಾರ್ ಮನೆ ಮೇಲೆ ಮಂಗಳವಾರ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

    ಹಾಸನದ ಅಡ್ಲಿಮನೆ ರಸ್ತೆಯಲ್ಲಿರುವ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇವಣ್ಣ ಆಪ್ತ ಶಿವಕುಮಾರ್, ನಾನು ರೇವಣ್ಣ ಜೊತೆ ಇದ್ದೇನೆ. ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ ಎಚ್.ಡಿ.ರೇವಣ್ಣ ಆಪ್ತ ಎಂದು ನನ್ನ ಮೇಲೆ ಐಟಿ ರೇಡ್ ಮಾಡಿಲ್ಲ ಎಂದರು.

    ಸುಮಾರು 8 ಜನ ಐಟಿ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಸುಮಾರು 12:30 ರಿಂದ ಮಧ್ಯರಾತ್ರಿ 1 ಗಂಟೆವರೆಗೆ ದಾಖಲೆ ಪರಿಶೀಲನೆ ಮಾಡಿದ್ದಾರೆ. ಕಾನೂನು ಬದ್ಧವಾಗಿ ಏನನ್ನು ಕೇಳಿದ್ದಾರೆ ಎಲ್ಲವನ್ನೂ ಕೊಟ್ಟಿದ್ದೇನೆ. ಇಂದು ನನ್ನನ್ನು ಐಟಿ ಕಚೇರಿಗೆ ಬರಲು ಹೇಳಿದ್ದಾರೆ. ಈ ವರ್ಷ ಮಾತ್ರ ನಾನು ಐಟಿ ರಿಟರ್ನ್ ಮಾಡಿರಲಿಲ್ಲ. ಹೀಗಾಗಿ ಪೆನಾಲ್ಟಿ ಹಾಕುತ್ತೇನೆ ಎಂದಿದ್ದಾರೆ. ನಮ್ಮ ಟರ್ನ್ ಓವರ್ ಮೇಲೆ ಎಷ್ಟು ಪೆನಾಲ್ಟಿ ಎಂದು ಇಂದು ಗೊತ್ತಾಗುತ್ತೆ ಎಂದು ಶಿವಕುಮಾರ್ ತಿಳಿಸಿದ್ದಾರೆ.