Tag: ಶಿಲೆ

  • ಆಂಜನಾದ್ರಿ ಬೆಟ್ಟದಿಂದ ಗುಜರಾತಿಗೆ ಶಿಲೆಯನ್ನು ತೆಗೆದುಕೊಂಡ ಹೋದ ವಜುಭಾಯಿ ವಾಲಾ

    ಆಂಜನಾದ್ರಿ ಬೆಟ್ಟದಿಂದ ಗುಜರಾತಿಗೆ ಶಿಲೆಯನ್ನು ತೆಗೆದುಕೊಂಡ ಹೋದ ವಜುಭಾಯಿ ವಾಲಾ

    ಕೊಪ್ಪಳ: ಇಂದು ಕೊಪ್ಪಳಕ್ಕೆ ಬಂದಿಳಿದ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಭೇಟಿಕೊಟ್ಟು ಪೂಜೆಸಲ್ಲಿಸಿ ಶಿಲೆಯನ್ನು ತೆಗೆದುಕೊಂಡು ಹೋಗಿದ್ದಾರೆ.

    ಅಂಜನಾದ್ರಿ ಪರ್ವತಕ್ಕೆ ರಾಜ್ಯಪಾಲರು ಶಿಲಾ ಪೂಜೆಗಾಗಿ ಇಂದು ಆಗಮಿಸಿದ್ದರು. ವಜುಭಾಯಿ ವಾಲಾ ತಮ್ಮೂರಿನ ಗುಜರಾತ್ ರಾಜ್ಯದ ಲಾಂಬವೇಲದಲ್ಲಿ ಹನುಮ ದೇವಸ್ಥಾನ ನಿರ್ಮಿಸುತ್ತಿದ್ದಾರೆ. ಇದೇ ಕಾರಣಕ್ಕೆ ವಜುಭಾಯಿ ವಾಲಾ ಹನುಮ ಹುಟ್ಟಿದ ಸ್ಥಳದಿಂದ ಶಿಲೆ (ಕಲ್ಲು) ತಗೆದುಕೊಂಡು ಹೋಗಿ ಹನುಮ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದಾರೆ.

    ಅಂಜನಾದ್ರಿ ಪರ್ವತದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಲ್ಲು (ಶಿಲೆ) ತಗೆದುಕೊಂಡು ಹೋಗಿದ್ದಾರೆ. ಬೆಂಗಳೂರು, ಗುಜರಾತ್‍ನಿಂದ ಬಂದ ಅರ್ಚಕರಿಗೆ  ಅಂಜನಾದ್ರಿ ಬೆಟ್ಟದ ಆಂಜನೇಯಯನಿಗೆ ಅರ್ಚಕರು ಸುಮಾರು ಒಂದು ಗಂಟೆಗಳ ಕಾಲ ಪೂಜೆ ಸಲ್ಲಿಸಿ ಶಿಲೆಯನ್ನ ನೀಡಿದ್ದಾರೆ.

  • ರಾಮಮಂದಿರಕ್ಕೆ ಅಂಜನಾದ್ರಿ ಶಿಲೆ – ಪೇಜಾವರಶ್ರೀ ಮೂಲಕ ಅಯೋಧ್ಯೆಗೆ ರವಾನೆ

    ರಾಮಮಂದಿರಕ್ಕೆ ಅಂಜನಾದ್ರಿ ಶಿಲೆ – ಪೇಜಾವರಶ್ರೀ ಮೂಲಕ ಅಯೋಧ್ಯೆಗೆ ರವಾನೆ

    ಉಡುಪಿ: ಭಗವಾನ್ ಶ್ರೀ ರಾಮಚಂದ್ರನ ಮಂದಿರಕ್ಕೆ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯಲಿದೆ. ರಾಮಮಂದಿರ ಶಿಲಾನ್ಯಾಸದ ಹಿನ್ನೆಲೆಯಲ್ಲಿ ದೇಶವ್ಯಾಪಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದೆ.

    ಇಡೀ ದೇಶದ ಪವಿತ್ರ ಕ್ಷೇತ್ರಗಳ ಮಣ್ಣು ಮತ್ತು ನೀರಿನ ಸಂಗ್ರಹ ಒಂದೆಡೆ ನಡೆಯುತ್ತಿದ್ದರೆ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆಯನ್ನು ಮೆರವಣಿಗೆ ಮೂಲಕ ತಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಒಪ್ಪಿಸಲಾಗಿದೆ.

    ಶ್ರೀರಾಮ ಸೇನೆಯ ರಾಜ್ಯ ಮುಖಂಡ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮೆರವಣಿಗೆಯ ಮೂಲಕ ಶಿಲೆಯನ್ನು ಹೊತ್ತು ತಂದರು. ಬ್ರಹ್ಮಾವರ ತಾಲೂಕು ನೀಲಾವರ ಮಠದ ಆವರಣದಲ್ಲಿ ನಡೆದ ಧಾರ್ಮಿಕ ಆಚರಣೆಯ ನಂತರ ಶಿಲೆಯನ್ನು ಪೇಜಾವರ ಸ್ವಾಮೀಜಿ ಅವರಿಗೆ ಹಸ್ತಾಂತರ ಮಾಡಲಾಯಿತು. ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಶಿಲೆಗೆ ಅಭಿಷೇಕ ನಡೆಸಿ, ಆರತಿ ಮಾಡಿ ಸ್ವೀಕಾರ ಮಾಡಿದರು. ಅಯೋಧ್ಯೆಯ ಶ್ರೀರಾಮ ಮಂದಿರದ ಶಿಲಾನ್ಯಾಸಕ್ಕೂ ಮುನ್ನ ಈ ಶಿಲೆಯನ್ನು ಅಯೋಧ್ಯೆಗೆ ತಲುಪಿಸುವುದಾಗಿ ಭರವಸೆ ನೀಡಿದರು.

    ಹನುಮಂತ ಶ್ರೀರಾಮನ ಪರಮಭಕ್ತ. ಆತ ಅವತರಿಸಿದ ಅಂಜನಾದ್ರಿ ಬೆಟ್ಟದ ಶಿಲೆಯನ್ನು ರಾಮ ಮಂದಿರದ ಶಿಲಾನ್ಯಾಸಕ್ಕೆ ಬಳಸಲಾಗುತ್ತದೆ. ಶಿಲೆಯನ್ನು ಶಿಲಾನ್ಯಾಸಕ್ಕೆ ಅರ್ಪಿಸುವ ಮೂಲಕ ಕರ್ನಾಟಕಕ್ಕೂ ರಾಮಮಂದಿರಕ್ಕೂ ಭಾವನಾತ್ಮಕ ಸಂಬಂಧ ಬೆಸೆದಂತಾಗುತ್ತದೆ. ವಿಶ್ವೇಶ ತೀರ್ಥ ಶ್ರೀಪಾದರಿಗೆ ಅಂಜನಾದ್ರಿ ಬೆಟ್ಟದಲ್ಲಿ ಸನ್ಯಾಸತ್ವ ದೀಕ್ಷೆ ಕೊಡಲಾಗಿತ್ತು.

    ಮುತಾಲಿಕ್ ಮಾತನಾಡಿ, ಪೇಜಾವರಶ್ರೀಗಳು ರಾಮ ಮಂದಿರದ ದೊಡ್ಡ ಹೋರಾಟಗಾರ. ಅವರ ಶಿಷ್ಯ, ರಾಮಮಂದಿರದ ಟ್ರಸ್ಟಿ. ಅವರ ಮೂಲಕ ಶಿಲೆಯನ್ನು ರಾಮಮಂದಿರಕ್ಕೆ ಅರ್ಪಿಸುತ್ತಿದ್ದೇವೆ. ಕೋಟಿ ಕೋಟಿ ಭಕ್ತರ ಕನಸು ನನಸಾಗುತ್ತಿದೆ ಎಂದರು.

  • ರಾಮಮಂದಿರ ಶಿಲಾನ್ಯಾಸಕ್ಕೆ ಅಂಜನಾದ್ರಿ ಪರ್ವತದ ಶಿಲೆ- ಗೋಕರ್ಣದಲ್ಲಿ ವಿಶೇಷ ಪೂಜೆ

    ರಾಮಮಂದಿರ ಶಿಲಾನ್ಯಾಸಕ್ಕೆ ಅಂಜನಾದ್ರಿ ಪರ್ವತದ ಶಿಲೆ- ಗೋಕರ್ಣದಲ್ಲಿ ವಿಶೇಷ ಪೂಜೆ

    ಕಾರವಾರ: ಕಾರವಾರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸಕ್ಕಾಗಿ ಕಳುಹಿಸಿ ಕೊಡಲು ಅಂಜನಾದ್ರಿ ಪರ್ವತದಿಂದ ತಂದ ಶಿಲೆಗೆ ಇಂದು ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಲಾಯ್ತು.

    ಶ್ರೀರಾಮ ಸೇನೆಯ ರಾಜ್ಯಾಧ್ಯಾಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಈ ಶಿಲೆಯನ್ನು ಗೋಕರ್ಣ ಕ್ಷೇತ್ರಕ್ಕೆ ತರಲಾಗಿದ್ದು, ದೇವಾಲಯದ ಹೊರ ಭಾಗದಲ್ಲೇ ಶಿಲೆಯನ್ನು ಪೂಜಿಸಿ ಪ್ರಾರ್ಥಿಸಲಾಯಿತು. ಬಳಿಕ ಶಿಲೆಯನ್ನು ತಲೆಯಲ್ಲಿ ಹೊತ್ತುಕೊಂಡು ಕಾರ್ಯಕರ್ತರು ದೇವಸ್ಥಾನಕ್ಕೆ ಸುತ್ತುವರಿದರು.

    ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯಾಧ್ಯಾಕ್ಷ ಪ್ರಮೋದ್ ಮುತಾಲಿಕ್, 500 ವರ್ಷಗಳ ಸುದೀರ್ಘ ಹೋರಾಟಕ್ಕೆ ತೆರೆಬಿದ್ದಿದ್ದು, ಅದೆಷ್ಟೋ ತ್ಯಾಗ ಬಲಿದಾನಗಳು ನಡೆದಿವೆ. ಸ್ವಾತಂತ್ರ್ಯ ಬಂದ ನಂತರವೂ ಹೋರಾಟ ನಡೆದಿದೆ. ಅಂಜನಾದ್ರಿ ಆಂಜನೇಯನ ಜನ್ಮ ಭೂಮಿಯಾಗಿದ್ದು, ಇಲ್ಲಿಂದ ರಾಮಜನ್ಮ ಭೂಮಿಗೆ ಶಿಲೆ ತಲುಪಿಸುವ ಕಾರ್ಯ ಒದಗಿರುವುದು ಪುಣ್ಯ ಹಾಗೂ ಶ್ರೇಷ್ಠ ಅವಕಾಶ ಎಂದರು.

    ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ, ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾ ಅಧ್ಯಕ್ಷ ಜಯಂತ ನಾಯ್ಕ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಈ ಶಿಲೆಯೊಂದಿಗೆ ರಾಮಚಂದ್ರಾಪುರ ಮೂಲ ಮಠ ಅಶೋಕೆಗೂ ಭೇಟಿ ನೀಡಲಾಗಿದ್ದು, ಅಲ್ಲಿಂದ ಉಡುಪಿ ಪೇಜಾವರ ಮಠಕ್ಕೆ ತೆರಳಿ ಅಲ್ಲಿ ಶಿಲೆಯನ್ನು ಶ್ರೀಗಳ ಬಳಿ ನೀಡಿ ಅವರ ಮೂಲಕ ಅಯೋಧ್ಯೆಗೆ ಶಿಲೆಯು ತಲುಪಲಿದೆ. ಗೋಕರ್ಣ ಮಾತ್ರವಲ್ಲದೇ ಯಲ್ಲಾಪುರದ ಜೋಡಿಕೆರೆ ಆಂಜನೇಯ ಮತ್ತು ಭಟ್ಕಳದ ಚನ್ನಪಟ್ಟಣದ ಆಂಜನೇಯ ದೇವಸ್ಥಾನ ಪ್ರಮುಖ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಯಿತು.