Tag: ಶಿರೋಮಣಿ ಅಕಾಲಿದಳ

  • ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ರಾಜೀನಾಮೆ

    ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ರಾಜೀನಾಮೆ

    – ಎನ್‍ಡಿಎ ಮೈತ್ರಿಕೂಟಕ್ಕೆ ಶಿರೋಮಣಿ ಅಕಾಲಿದಳ ಬಿಗ್ ಶಾಕ್

    ನವದೆಹಲಿ: ಎನ್‍ಡಿಎ ಮೈತ್ರಿಕೂಟಕ್ಕೆ ಅಂಗ ಪಕ್ಷ ಶಿರೋಮಣಿ ಅಕಾಲಿದಳ ಬಿಗ್ ಶಾಕ್ ನೀಡಿದೆ. ಬಿಜೆಪಿ ರೈತ ವಿರೋಧಿ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಕೌರ್, ರೈತ ವಿರೋಧಿ ಸುಗ್ರೀವಾಜ್ಞೆ ಮತ್ತು ಬಿಲ್ಲನ್ನು ವಿರೋಧಿಸಿ ನಾನು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರೊಂದಿಗೆ ಅವರ ಮಗಳಗಾಗಿ, ಸಹೋದರಿಯಾಗಿ ನಿಲ್ಲುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.

    ರೈತರು ಮತ್ತು ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಅಗತ್ಯ ವಸ್ತುಗಳ ತಿದ್ದುಪಡಿ ಬಿಲ್ಲನ್ನು ಲೋಕಸಭೆಯಲ್ಲಿ ಮಂಡಿಸಿದ ಬೆನ್ನಲ್ಲೇ ಕೌರ್ ರಾಜೀನಾಮೆ ನೀಡಿದ್ದು, ವೋಟಿಂಗ್‍ಗೆ ಮುಂಚೆ ಕೇಂದ್ರ ಸರ್ಕಾರ ಮುಜುಗರ ಅನುಭವಿಸಿತು. ಈ ಬಿಲ್‍ಗೆ ವಿರುದ್ಧವಾಗಿ ಅಕಾಲಿದಳ ಮತ ಹಾಕಿತ್ತು.

    ಸಂಸತ್‍ನಲ್ಲಿ ಮಾತನಾಡಿದ ಕೌರ್ ಪತಿ ಸುಖ್‍ಬೀರ್ ಸಿಂಗ್ ಬಾದಲ್, ಈ ಮಸೂದೆ ನಮ್ಮ ವಿರೋಧವಿದೆ. ರೈತ ವಿರೋಧಿ ರಾಜಕೀಯಕ್ಕೆ ನಮ್ಮ ವಿರೋಧವಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ತರುತ್ತಿರುವ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ರೈತ ಪ್ರತಿಭಟನೆಗಳು ನಡೆಯುತ್ತಿವೆ.

  • ಔರಂಗಜೇಬ್ ಹೆಸರು, ಪಠ್ಯವನ್ನು ತೆಗೆಯಿರಿ- ಶಿರೋಮಣಿ ಅಕಾಲಿದಳ ಒತ್ತಾಯ

    ಔರಂಗಜೇಬ್ ಹೆಸರು, ಪಠ್ಯವನ್ನು ತೆಗೆಯಿರಿ- ಶಿರೋಮಣಿ ಅಕಾಲಿದಳ ಒತ್ತಾಯ

    ನವದೆಹಲಿ: ರಾಜ್ಯದಲ್ಲಿ ಬಿಜೆಪಿ ಟಿಪ್ಪು ಪಠ್ಯವನ್ನು ತೆಗೆಯುವಂತೆ ಒತ್ತಾಯಿಸಿದ ನಂತರ ಇದೀಗ ಮೊಘಲ್ ದೊರೆ ಔರಂಗಜೇಬನ ಹೆಸರನ್ನು ಸಹ ತೆಗೆದು ಹಾಕಬೇಕು ಎಂದು ಶಿರೋಮಣಿ ಅಕಾಲಿ ದಳ ಒತ್ತಾಯಿಸಿದೆ.

    ದೆಹಲಿಯ ಔರಂಗಜೇಬ್ ರಸ್ತೆ ಎಂಬ ಹೆಸರಿನ ನಾಮಫಲಕಕ್ಕೆ ಶಿರೋಮಣಿ ಅಕಾಲಿದಳ ಕಪ್ಪು ಬಣ್ಣ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಮೊಘಲ್ ದೊರೆ ಔರಂಗಜೇಬ್ ಹೆಸರಿನ ರಸ್ತೆಯ ನಾಮಫಲಕಗಳು ಹಾಗೂ ವಿದ್ಯಾರ್ಥಿಗಳ ಇತಿಹಾಸದ ಪುಸ್ತಕಗಳಲ್ಲಿನ ಔರಂಗಜೇಬನ ಪಠ್ಯವನ್ನು ತೆಗೆಯಬೇಕು ಎಂದು ಶಿರೋಮಣಿ ಅಕಾಲಿ ದಳದ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಹಾಗೂ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ(ಡಿಎಸ್‍ಜಿಎಂಸಿ) ಸದಸ್ಯರು ಒತ್ತಾಯಿಸಿದ್ದಾರೆ. ಅಲ್ಲದೆ ಔರಂಗಜೇಬ್ ಹೆಸರಿನ ರಸ್ತೆಗಳ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ.

    ಔರಂಗಜೇಬ್ ಒಬ್ಬ ಹಂತಕ, ಅವನ ಒತ್ತಾಯಪೂರ್ವಕ ಮತಾಂತರದಿಂದ ಗುರು ತೇಜ್ ಬಹದ್ದೂರ್ ಅವರು ತಮ್ಮ ಪ್ರಾಣವನ್ನೇ ತ್ಯಜಿಸಿದರು. ಹೀಗಾಗಿ ನಾವು ರಸ್ತೆಗಳಿಗೆ ಔರಂಗಜೇಬನ ಹೆಸರಿಡುವುದು ಹಾಗೂ ವಿದ್ಯಾರ್ಥಿಗಳ ಇತಿಹಾಸ ಪುಸ್ತಕದಲ್ಲಿ ಆತನ ಪಠ್ಯ ಇರುವುದನ್ನು ವಿರೋಧಿಸುತ್ತೇವೆ. ಆತ ಒಬ್ಬ ಹಂತಕ, ಆತನ ಹೆಸರನ್ನು ರಸ್ತೆಗಳಿಗೆ ಇಡುವುದರಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲ ದಿನಗಳ ಹಿಂದೆ ಬೆಂಗಾಳಿ ಮಾರುಕಟ್ಟೆಯ ಬಾಬರ್ ರಸ್ತೆಯ ಹೆಸರಿಗೆ ಹಿಂದೂ ಸೇನೆಯವರು ಕಪ್ಪು ಬಣ್ಣ ಬಳಿದಿದ್ದರು. ರಸ್ತೆಯ ಹೆಸರನ್ನು ಬದಲಿಸುವಂತೆ ಸಂಘಟನೆಯು ಒತ್ತಾಯಿಸಿತ್ತು.

    ದಕ್ಷಿಣ ಭಾರತದ ಕರ್ನಾಟಕದಲ್ಲಿ ಟಿಪ್ಪು ವಿರುದ್ಧ ಹೋರಾಟ ನಡೆಯುತ್ತಿದ್ದರೆ, ಉತ್ತರ ಭಾರತದಲ್ಲಿ ಔರಂಗಜೇಬನ ಕುರಿತು ಅಸಮಾಧಾನ ಎದ್ದಿದೆ. ಟಿಪ್ಪು ಜಯಂತಿಯನ್ನು ಸರ್ಕಾರ ನಿಲ್ಲಿಸಿದ್ದು, ಆತನ ಬಗ್ಗೆ ಇರುವ ಪಠ್ಯವನ್ನೂ ಪುಸ್ತಕದಿಂದ ತೆಗೆಯಬೇಕು ಎಂದು ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ.