Tag: ಶಿರೂರು ಸ್ವಾಮೀಜಿ

  • ಸ್ವತಂತ್ರವಾಗಿ ಹೊರಟಿದ್ದ ಶೀರೂರು ಶ್ರೀಗಳಿಗೆ ಜೆಡಿಯು ಗಾಳ

    ಸ್ವತಂತ್ರವಾಗಿ ಹೊರಟಿದ್ದ ಶೀರೂರು ಶ್ರೀಗಳಿಗೆ ಜೆಡಿಯು ಗಾಳ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಅಧೀನದಲ್ಲಿರುವ ಶೀರೂರು ಮಠಾಧೀಶರಿಗೆ ಜೆಡಿಯು ಪಕ್ಷ ಗಾಳ ಹಾಕಿದೆ. ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದ್ದ ಲಕ್ಷ್ಮೀವರ ತೀರ್ಥ ಶ್ರೀಪಾದರಿಗೆ ಜೆಡಿಯು ಪಕ್ಷ ಸೇರುವಂತೆ ಪತ್ರ ಬರೆದಿದೆ.

    ಜೆಡಿಯು ಜಿಲ್ಲಾಧ್ಯಕ್ಷರು ಸ್ವಾಮೀಜಿಯವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ತಾವು ಇಚ್ಛಿಸಿದರೆ ಜೆಡಿಯುನಿಂದ ಟಿಕೆಟ್ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಜೆಡಿಯು ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿದೆ. ಒಮ್ಮತದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಜೆಡಿಎಸ್ ಮತ್ತು ಜೆಡಿಯುನ ಮಾನಸಿಕತೆಗೂ ಸ್ವಾಮೀಜಿಗಳ ದೃಷ್ಟಿಕೋನಕ್ಕೂ ಹೊಂದಾಣಿಕೆ ಆಗುವುದರಿಂದ ಈ ಬೇಡಿಕೆ ಇಟ್ಟಿರುವುದಾಗಿ ಜನತಾದಳ ಹೇಳಿದೆ.

    ಜಿಲ್ಲೆಯಲ್ಲಿ ಈವರೆಗೆ ಐದು ಸ್ಥಾನಗಳ ಪೈಕಿ ಎರಡು ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ಇದೀಗ ಮೂರನೇ ಅಭ್ಯರ್ಥಿಯ ತಲಾಶ್ ನಲ್ಲಿದ್ದ ಜೆಡಿಎಸ್ ಗೆ ಶೀರೂರು ಶ್ರೀಗಳನ್ನು ಸೆಳೆದರೆ ಕರಾವಳಿ ಜಿಲ್ಲೆಯಲ್ಲಿ ಬಲ ಬರುತ್ತದೆ ಎಂಬ ಲೆಕ್ಕಾಚಾರ ಹಾಕಿದೆ.

    ಜೆಡಿಯು ಜಿಲ್ಲಾಧ್ಯಕ್ಷ ರಾಜೀವ ಕೋಟ್ಯಾನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾಮಕೃಷ್ಣ ಹೆಗ್ಡೆಯವರ ತತ್ವಾದರ್ಶದ ಮೇಲೆ ಚುನಾವಣೆ ಎದುರಿಸಲಿದ್ದೇವೆ. ಶೀರೂರು ಶ್ರೀಗಳೂ ಹೆಗ್ಡೆಯವರ ಆದರ್ಶ ಮೆಚ್ಚಿದವರು. ಉಡುಪಿಯಲ್ಲಿ ಸ್ವಾಮೀಜಿ ನಮ್ಮ ಮೈತ್ರಿಯಲ್ಲಿ ಸ್ಪರ್ಧಿಸಬೇಕೆಂಬುದು ನಮ್ಮ ಆಕಾಂಕ್ಷೆ. ನಿರ್ಧಾ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬೆಂಬಲ ಕೊಡುವ ಭರವಸೆಯಿದೆ ಎಂದು ಹೇಳಿದರು.

  • ಬಿಎಸ್ ವೈ ಜೊತೆ ಶೀರೂರು ಶ್ರೀ ಮಾತುಕತೆ- ಸ್ವಾಮೀಜಿಯನ್ನು ಭೇಟಿ ಮಾಡಲಿರುವ ಮಧ್ವರಾಜ್

    ಬಿಎಸ್ ವೈ ಜೊತೆ ಶೀರೂರು ಶ್ರೀ ಮಾತುಕತೆ- ಸ್ವಾಮೀಜಿಯನ್ನು ಭೇಟಿ ಮಾಡಲಿರುವ ಮಧ್ವರಾಜ್

    ಉಡುಪಿ: ಜಿಲ್ಲೆಯ ಶ್ರೀಕೃಷ್ಣಮಠದ ಶೀರೂರು ಶ್ರೀ ಅವರು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಎಸ್ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಶ್ರೀಗಳ ಜೊತೆ ಮಾತನಾಡಿದ್ದಾರೆ. ಅಲ್ಲದೇ ಸಚಿವ ಮಧ್ವರಾಜ್ ಭೇಟಿ ಮಾಡೋದಾಗಿ ಹೇಳಿದ್ದಾರೆ.

    ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡೋದು ದೊಡ್ಡ ಸುದ್ದಿಯಾಗಿದೆ. ಉಡುಪಿಯ ಉಪ್ಪೂರಿನಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶೀರೂರು ಶ್ರೀಗಳ ಹೇಳಿಕೆ ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದರು. ಇದನ್ನೂ ಓದಿ: ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ- ಅವಕಾಶ ಸಿಕ್ಕರೆ ಬಿಜೆಪಿಯಿಂದ್ಲೇ ಸ್ಪರ್ಧೆ

    ಸ್ವಾಮೀಜಿ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ತಿಳಿದಿದ್ದೇನೆ. ಅವರ ಅಸಮಾಧಾನದ ಬಗ್ಗೆ ಶೀರೂರು ಶ್ರೀಗಳ ಜೊತೆ ಚರ್ಚೆ ಮಾಡುತ್ತೇನೆ. ನನಗೆ ಶೀರೂರು ಶ್ರೀಗಳ ಬಗ್ಗೆ ಅಪಾರವಾದ ಗೌರವವಿದೆ ಎಂದರು. ಈಗ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ, ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅವರಿಗೆ ಆಗಿರುವ ನೋವಿನ ಬಗ್ಗೆಯೂ ಚರ್ಚೆ ಮಾಡ್ತೇನೆ ಎಂದು ಹೇಳಿದರು.

    ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಹೇಳಿದರೆ ನಾನು ಖಂಡಿತಾ ಸ್ಪರ್ಧೆ ಮಾಡುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಈ ಬಾರಿ ಉಡುಪಿಯಿಂದ ಸ್ಪರ್ಧಿಸುವುದಾಗಿ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ನಿನ್ನೆ ಘೋಷಿಸಿದ್ದರು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಫೋನ್ ಮೂಲಕ ಮಾತುಕತೆ ಮಾಡಿದ್ದಾರೆ.

    ಉಡುಪಿ ಜಿಲ್ಲಾ ಬಿಜೆಪಿ ಬಗ್ಗೆ ಶೀರೂರು ಶ್ರೀಗಳ ಅಸಮಾಧಾನವನ್ನು ವರಿಷ್ಠರು ಆಲಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯ ಬಿಜೆಪಿ ನಾಯಕ ಉದಯ ಕುಮಾರ್ ಶೆಟ್ಟಿ ಫೋನ್ ಮೂಲಕ ಉಭಯ ನಾಯಕರನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಿದ್ದರು. ಬಿಎಸ್ ವೈ ಮತ್ತು ಶೋಭಾ ಕರಂದ್ಲಾಜೆ ಮುಖತಃ ಭೇಟಿಯಾಗುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

  • ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ- ಅವಕಾಶ ಸಿಕ್ಕರೆ ಬಿಜೆಪಿಯಿಂದ್ಲೇ ಸ್ಪರ್ಧೆ

    ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ- ಅವಕಾಶ ಸಿಕ್ಕರೆ ಬಿಜೆಪಿಯಿಂದ್ಲೇ ಸ್ಪರ್ಧೆ

    ಉಡುಪಿ: ಇಲ್ಲಿನ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ಉಡುಪಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ ಅವರು, ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಅಂತ ಹೇಳಿದ್ದಾರೆ.

    ಉಡುಪಿಯ ರಾಜಕೀಯ ವ್ಯವಸ್ಥೆ ಸರಿಯಿಲ್ಲ. ಹೀಗಾಗಿ ಸಕ್ರೀಯ ರಾಜಕಾರಣಕ್ಕೆ ಬರುವ ಮನಸ್ಸು ಮಾಡಿದ್ದೇನೆ. ವ್ಯವಸ್ಥೆಗಳು ಸರಿ ಇರುತ್ತಿದ್ದರೆ ಈ ನಿರ್ಧಾರ ಮಾಡುತ್ತಿರಲಿಲ್ಲ. ಪಕ್ಷೇತರನಾಗಿ ನಿಲ್ಲಬೇಕೆಂಬು ಎನ್ನುವುದು ನನ್ನ ಮನಸ್ಸು. ಕಳೆದ 15 ದಿನಗಳಿಂದ ಚಿಂತನೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇನೆ ಅಂದ್ರು.

    ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳ ದರ್ಪ, ದೌಲತ್ತುಗಳು ಜಾಸ್ತಿಯಾಗಿದೆ. ರಾಜಕೀಯ ಕೂಡಾ ಜನಪರವಾಗಿಲ್ಲ. ಈ ಕಾರಣದಿಂದ ರಾಜಕೀಯಕ್ಕೆ ಬರುವ ಮನಸ್ಸು ಮಾಡಿದ್ದೇನೆ. ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು ಅಂತ ಜನ, ಮಾಧ್ಯಮಗಳು ಕೇಳಬಹುದು. ರಾಜಕೀಯದಲ್ಲಿ ಧರ್ಮ ಇರಬೇಕು. ಅದು ನಾಶವಾಗಿದೆ. ಎಲ್ಲಿ ಧರ್ಮ ಇಲ್ಲವೋ, ಅಧರ್ಮ ಇದೆಯೋ ಅಲ್ಲಿಗೆ ಮಠಾಧೀಶರು ಬರಬೇಕು. ಸಮಸ್ಯೆಗಳನ್ನು ಸರಿ ಮಾಡಬೇಕು ಎಂದರು.

    ಬಡವರಿಗೆ, ದೀನರಿಗೆ ಜಿಲ್ಲೆಯಲ್ಲಿ ಬಹಳ ಸಮಸ್ಯೆಯಾಗಿದೆ. ಅದನ್ನೆಲ್ಲಾ ನೋಡಿ ನೋಡಿ ಬೇಸರಗೊಂಡಿದ್ದೇನೆ. ಕಷ್ಟದಲ್ಲಿರುವವರಿಗೆ ನನ್ನ ಕೈಲಾದ ಎಲ್ಲಾ ಸಹಾಯಗಳನ್ನು ಮಾಡುತ್ತಾ ಬಂದಿದ್ದೇನೆ. ಮುಂದೆ ಹೆಚ್ಚು ಹೆಚ್ಚು ಸಹಾಯ ಮಾಡಬೇಕಾದರೆ ರಾಜಕೀಯ ಶಕ್ತಿ ಬೇಕು. ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಕೊಡಿ ಅಂತ ಆಕಾಂಕ್ಷೆ ವ್ಯಕ್ತಪಡಿಸುವುದಿಲ್ಲ. ಪಕ್ಷೇತರನಾಗಿಯೇ ಸ್ಪರ್ಧೆ ಮಾಡಬೇಕು. ಕೇಂದ್ರ ಬಿಜೆಪಿಯ ಆಡಳಿತ ಚೆನ್ನಾಗಿದೆ. ಈ ಉದ್ದೇಶದಿಂದ ಬಿಜೆಪಿ ಬಗ್ಗೆ ಒಲವಿದೆ ಅಂತ ಹೇಳಿದ್ರು.

    ಉಡುಪಿ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ. ಸಚಿವ ಪ್ರಮೋದ್ ಮಧ್ವರಾಜ್ ಹಲವಾರು ಕೆಲಸ ಮಾಡಿದ್ದಾರೆ. ಅವರಿಗೆ ವಿರುದ್ಧ ನನ್ನ ಸ್ಪರ್ಧೆ ಅಲ್ಲ. ಜನಕ್ಕೋಸ್ಕರ ಕೆಲಸ ಮಾಡಬೇಕು. ಹೀಗಾಗಿ ರಾಜಕೀಯ ಪ್ರವೇಶ ಮಾಡಲು ನಿರ್ಧರಿಸಿದ್ದೇನೆ. ಇನ್ನು ಯೋಗಿ ಆದಿತ್ಯನಾಥ್ ನನಗೆ ಮಾದರಿ. ಅವರು ಉತ್ತರ ಪ್ರದೇಶ ಸಿಎಂ ಆಗಿ ಆಯ್ಕೆ ಆದ ನಂತರ ಬಹಳ ಬದಲಾವಣೆಯಾಗಿದೆ. ಅವರ ಕೆಲಸ ನಮಗೆ ಮಾದರಿ. ಖಾವಿ ತೊಟ್ಟವರ ರಾಜಕೀಯದ ನಾಂದಿ ಹಾಡಿದ್ದಾರೆ. ಕೇಸರಿ ಬಟ್ಟೆಗೆ ಮತ್ತಷ್ಟು ಗೌರವವನ್ನು ತಂದು ಕೊಟ್ಟಿದ್ದಾರೆ. ಅವರಂತೆ ಕೆಲಸ ಮಾಡಬೇಕೆಂಬ ಹಂಬಲವಿದೆ. ಹಿತೈಷಿಗಳು, ಭಕ್ತರು, ಆಪ್ತರ ಜೊತೆಯೆಲ್ಲಾ ಚರ್ಚೆ ಮಾಡಿದ್ದೇನೆ. ಸಾಧಕ ಬಾಧಕಗಳ ಬಗ್ಗೆಯೂ ವಿಮರ್ಶೆಗಳು ಆಗಿದೆ ಎಂದು ಸ್ವಾಮೀಜಿ ಹೇಳಿದರು.