Tag: ಶಿರೂರು ಸ್ವಾಮೀಜಿ

  • ಶಿರೂರು ಶ್ರೀ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪೊಲೀಸರ ಕೈ ಸೇರಿದ ಪ್ರಾಥಮಿಕ ಮರಣೋತ್ತರ ವರದಿ

    ಶಿರೂರು ಶ್ರೀ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪೊಲೀಸರ ಕೈ ಸೇರಿದ ಪ್ರಾಥಮಿಕ ಮರಣೋತ್ತರ ವರದಿ

    ಉಡುಪಿ: ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಶಿರೂರು ಶ್ರೀಗಳ ಅಸಹಜ ಸಾವಿನ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಸದ್ಯ ಮರಣೋತ್ತರ ಪರೀಕ್ಷೆ ಪೊಲೀಸರ ಕೈಗೆ ಸೇರಿದ್ದು, ಶ್ರೀಗಳ ಹೊಟ್ಟೆಯಲ್ಲಿ ವಿಷವಿರಲಿಲ್ಲ ಎಂದು ತಿಳಿಸಲಾಗಿದೆ.

    ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್.ಎಸ್.ಎಲ್) ವರದಿ ಬರುವವರೆಗೆ ಕಾಯುವುದು ಅನಿವಾರ್ಯ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

    ವರದಿಯಲ್ಲಿ ಏನಿದೆ?
    ಸದ್ಯ ಪೊಲೀಸರ ಕೈ ಸೇರಿರುವ ವರದಿಯಲ್ಲಿ ಶಿರೂರು ಶ್ರೀಗಳ ಸ್ವಾಮೀಜಿಯ ಲಿವರ್ (ಯಕೃತ್) ಸಂಪೂರ್ಣ ಹಾನಿಯಾಗಿದ್ದು, ಎರಡೂ ಮೂತ್ರಕೋಶಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲವಂತೆ. ಅಷ್ಟೇ ಅಲ್ಲದೆ ಅನ್ನನಾಳದಲ್ಲಿ ಹಲವು ರಂಧ್ರಗಳಿದ್ದವು, ಹೊಟ್ಟೆಯಲ್ಲಿ ರಕ್ತನಾಳಗಳು ಒಡೆದು ರಕ್ತಸ್ರಾವವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಜುಲೈ 19ರಂಂದು ಶ್ರೀಗಳು ಅನುಮಾನಾಸ್ಪದ ರೀತಿಯಲ್ಲಿ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಶಿರೂರು ಮೂಲ ಮಠದಲ್ಲಿ ಕಾಂಡೋಮ್ ಗಳು, ಮಹಿಳೆಯರ ಬಟ್ಟೆಗಳು ಮತ್ತು ಬಾವಿಯಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಇತ್ತ ಶಿರೂರು ಶ್ರೀಗಳು ಪರಸ್ತ್ರೀ ವ್ಯಾಮೋಹಕ್ಕೆ ಸಿಲುಕಿ ಸಾವನ್ನಪ್ಪಿದ್ರಾ ಎಂಬ ಪ್ರಶ್ನೆಯೂ ಭಕ್ತಾದಿಗಳಲ್ಲಿ ಮನೆ ಮಾಡಿದೆ. ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಶಿರೂರು ಶ್ರೀಗಳಿಗೆ ವಿಷ ಪ್ರಾಷಾನ ಆಗಿಲ್ಲ ಎಂದು ಹೇಳಲಾಗುತ್ತಿದೆ. ಆದ್ರೆ ಎಫ್‍ಎಸ್‍ಎಲ್ ವರದಿ 6 ವಾರಗಳ ಬಳಿಕ ಪೊಲೀಸರ ಕೈ ಸೇರುವ ಸಾಧ್ಯತೆಗಳಿವೆ.

    ಜುಲೈ 31ರಂದು ಆರಾಧನೆ:
    ಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾವನಸ್ಥ ಹಿನ್ನೆಲೆಯಲ್ಲಿ ಜುಲೈ 31 ರಂದು ಶಿರೂರು ಸ್ವಾಮೀಜಿ ಆರಾಧನೆ ಕಾರ್ಯಕ್ರಮವಿದೆ. ಶ್ರೀಗಳು ನಿಧನ ಹೊಂದಿದ ಹದಿಮೂರನೇ ದಿನ ಸೋದೆಮಠದ ನೇತೃತ್ವದಲ್ಲಿ ಈ ಆರಾಧನೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಹಿರಿಯಡ್ಕ ಸಮೀಪದ ಮೂಲಮಠ ಶೀರೂರಿನಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.

  • ಕೇಮಾರು ಸ್ವಾಮೀಜಿಗೆ ಜೀವ ಬೆದರಿಕೆ

    ಕೇಮಾರು ಸ್ವಾಮೀಜಿಗೆ ಜೀವ ಬೆದರಿಕೆ

    ಉಡುಪಿ: ಶಿರೂರು ಶ್ರೀ ಅನುಮನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಮಾರು ಶ್ರೀಗೆ ಜೀವ ಬೆದರಿಕೆ ಬಂದಿದೆ.

    ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಅವರು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಎದುರಿಸುತ್ತಿದ್ದಾರೆ. ಶಿರೂರು ಶ್ರೀ ಅಸಹಜ ಸಾವಿನ ಬಗ್ಗೆ ಕೇಮಾರು ಮಾಧ್ಯಮಗಳ ಮುಂದೆ ಮಾತನಾಡಿದ್ದು ಹಾಗೂ ಎಸ್‍ಪಿಗೆ ಮನವಿ ಕೊಟ್ಟಿದ್ದಕ್ಕೆ ಬೆದರಿಕೆ ಕರೆ, ಸಂದೇಶಗಳು ಬಂದಿದೆ ಎಂದು ಕೇಮಾರು ಶ್ರೀ ಹೇಳಿದ್ದಾರೆ. ಇದನ್ನೂ ಓದಿ: ಶಿರೂರು ಶ್ರಿಗಳ ದೇಹದಲ್ಲಿ ವಿಷಕಾರಕ ಅಂಶ ಪತ್ತೆ- ಸಮಗ್ರ ತನಿಖೆಗೆ ಕೇಮಾರು ಶ್ರೀ ಆಗ್ರಹ

    ಈ ಕುರಿತು ಅಗತ್ಯ ಬಿದ್ದರೆ ದೂರು ನೀಡುತ್ತೇನೆ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಅಂತ ಕೇಮಾರು ಈಶ ವಿಠಲ ಸ್ವಾಮೀಜಿ ಹೇಳಿದ್ದಾರೆ.

    ಶಿರೂರು ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಅಂತ ಸುದ್ದಿಯಾದ ಬಳಿಕ ಕೇಮಾರು ಶ್ರೀಗಳು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಠದಲ್ಲಿ ಎಲ್ಲರು ಊಟ ಮಾಡಿದ್ದಾರೆ. ಆದ್ರೆ ಸ್ವಾಮೀಜಿಯೊಬ್ಬರಿಗೆ ಮಾತ್ರ ಯಾಕೆ ಫುಡ್ ಪಾಯಿಸನ್ ಆಗ್ಬೇಕು ಅಂತ ಪ್ರಶ್ನಿಸಿದ್ದರು. ಹಾಗೇ ಆಗೋದಾದ್ರೆ ಎಲ್ಲರೂ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಬೇಕಿತ್ತು. ಹೀಗಾಗಿ ಒಂದು ವೇಳೆ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದರು.

    ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಇದೆ ಅಂತ ಡಾಕ್ಟರ್ ಹೇಳಿದ್ದಾರೆ. ಆದ್ರೆ ಅದರ ಬಗ್ಗೆ ಸಮಗ್ರ ತನಿಖೆ ನಡೆಸಲಿ. ವೈದ್ಯರು ಬರೀ ಹೇಳಿದ್ರೆ ಸಾಲದು ಆ ಬಗ್ಗೆ ವರದಿ ಕೊಡಲಿ. ಅಲ್ಲದೇ ಪೊಲೀಸರು ಕೂಡ ಸಮಗ್ರ ತನಿಖೆ ನಡೆಸಬೇಕಿದೆ. ಹಾಗೆಯೇ ಸರ್ಕಾರ ಕೂಡಲೇ ಮಧ್ಯಪ್ರವೇಶಿಸದಿದ್ದರೆ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ ಅಂತ ಅವರು ಸರ್ಕಾರವನ್ನು ಆಗ್ರಹಿಸಿದ್ದರು.

  • ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್

    ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್

    ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಹಾಕಿದ್ದ ಕೇವಿಯಟ್ ಅನೂರ್ಜಿತವಾಗಿದೆ. ಈ ಮೂಲಕ ಏಳು ಮಠದ ಯತಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಉಡುಪಿ ಕೃಷ್ಣಮಠದ ಗರ್ಭಗುಡಿಯಲ್ಲಿರುವ ಪಟ್ಟದ ದೇವರನ್ನು ವಾಪಾಸ್ ಕೊಡಿಸಬೇಕು, ನನ್ನ ವಾದವನ್ನೂ ಕೋರ್ಟ್ ಆಲಿಸಬೇಕು ಅಂತ ಸಲ್ಲಿಸಿದ್ದ ಕೇವಿಯಟ್ ಅರ್ಜಿ ಬಿದ್ದು ಹೋಗಿದೆ. ಜುಲೈ 4 ರಂದು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಕೆಯಾಗಿತ್ತು. ಜುಲೈ 19 ರಂದು ಸ್ವಾಮೀಜಿ ನಿಧನ ಹಿನ್ನೆಲೆಯಲ್ಲಿ ಕೇವಿಯಟ್ ಅನೂರ್ಜಿತವಾಗಿದೆ.

    ಕೇವಿಯಟ್‍ಗೆ 90 ದಿನಗಳ ಕಾಲಾವಕಾಶ ಇರುತ್ತದೆ. ಕೇವಿಯಟ್ ಸಲ್ಲಿಸಿದವರು ಮರಣ ಹೊಂದಿದರೆ ಅದು ಅನೂರ್ಜಿತವಾಗುತ್ತದೆ ಎಂಬುದು ಕಾನೂನು. ಶಿಷ್ಯ ಸ್ವೀಕಾರಕ್ಕಾಗಿ ಯಾರೂ ಒತ್ತಾಯ ಮಾಡುವಂತಿಲ್ಲ. ಉಳಿದ ಏಳು ಮಠಾಧೀಶರು ಕೋರ್ಟ್ ಮೆಟ್ಟಿಲೇರಿದರೆ ಆ ಸಂದರ್ಭ ನನ್ನ ವಾದವನ್ನೂ ಕೇಳಬೇಕು ಎಂದು ನಮೂದಿಸಲಾಗಿತ್ತು.

    ಪಟ್ಟದ ದೇವರನ್ನು ವಾಪಾಸ್ ಕೊಡದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಶಿರೂರು ಸ್ವಾಮೀಜಿ ಹೇಳಿದ್ದರು. ಇತರೆ ಆರು ಮಠಾಧೀಶರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಶಿರೂರು ಶ್ರೀ ಸಜ್ಜಾಗಿದ್ದರು. ಆದರೆ ಕಳೆದ ಗುರುವಾರ ಸ್ವಾಮೀಜಿ ನಿಗೂಢವಾಗಿ ಸಾವನ್ನಪ್ಪಿದ್ದರು. ಸದ್ಯ ಪಟ್ಟದ ದೇವರ ವಿಗ್ರಹ ಈಗ ಕೃಷ್ಣಮಠದಲ್ಲಿದ್ದು, ಪರ್ಯಾಯ ಸ್ವಾಮೀಜಿ ದಿನಂಪ್ರತಿ ಪೂಜೆ ಮಾಡುತ್ತಿದ್ದಾರೆ.

  • ಶಿರೂರು ಶ್ರೀ, ರಮ್ಯಾ ಶೆಟ್ಟಿಯ ನಡುವಿನ ಸಂಬಂಧವೇನು? ಮಠದ ಮಾಜಿ ಮ್ಯಾನೇಜರ್ ಸ್ಫೋಟಕ ಹೇಳಿಕೆ

    ಶಿರೂರು ಶ್ರೀ, ರಮ್ಯಾ ಶೆಟ್ಟಿಯ ನಡುವಿನ ಸಂಬಂಧವೇನು? ಮಠದ ಮಾಜಿ ಮ್ಯಾನೇಜರ್ ಸ್ಫೋಟಕ ಹೇಳಿಕೆ

    ಹಾಸನ: ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿಗಳ ನಿಧನಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣಕ್ಕೂ ಸ್ಫೋಟಕ ವಿಚಾರಗಳು ಹೊರ ಬರುತ್ತಿವೆ. ಶಿರೂರು ಶ್ರೀಗಳದ್ದು ಕೊಲೆಯಾಗಿದೆ ಅಂತಾದ್ರೆ ಅದಕ್ಕೆ ಕಾರಣ ರಮ್ಯಾ ಶೆಟ್ಟಿ ಎಂದು ಮಠದ ಮಾಜಿ ಮ್ಯಾನೇಜರ್ ಸುನಿಲ್ ಕುಮಾರ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

    ಶ್ರೀಗಳಿಗೆ ಮತ್ತು ಮಠಕ್ಕೆ ಸೇರಿದಂತೆ ತರಕಾರಿ, ಆಹಾರ ಪದಾರ್ಥಗಳನ್ನು ರಮ್ಯಾ ತರುತ್ತಿದ್ದರು. ರಮ್ಯಾ ಮಠದ ಭಕ್ತೆಯಾಗಿದ್ದರೆ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಹೋಗಬೇಕಿತ್ತು. ರಮ್ಯಾ ಸ್ವಾಮೀಜಿ ಬಳಿ ಒಬ್ಬಂಟಿಯಾಗಿ ರಾತ್ರಿ ವೇಳೆ ಮಠದಲ್ಲಿ ಇರುತ್ತಿದ್ದರು. ಸ್ವಾಮೀಜಿಗಳ ಕೋಣೆಗೆ ಯಾರು ಹೋಗುತ್ತಿರಲಿಲ್ಲ, ಆದ್ರೆ ರಮ್ಯಾ ಹೋಗ್ತಿದ್ರು. ಮಠಕ್ಕೆ ಸೇರಿದ ನಂತರ ರಮ್ಯಾ ಮೈತುಂಬ ಬಂಗಾರ, ಕಾರು ಸೇರಿ 2 ಮನೆ ಸೇರಿ ಆಸ್ತಿ ಹೆಚ್ಚಾಯಿತು ಎಂದು ಆರೋಪಿಸಿದರು.

    ರಮ್ಯಾ ಶೆಟ್ಟಿ ಮಠಕ್ಕೆ ಬರೋ ಮುನ್ನ ಎಲ್ಲವೂ ಚೆನ್ನಾಗಿತ್ತು. ಒಂಬತ್ತು ವರ್ಷ ನಾನು ಮತ್ತು ನನ್ನ ಕುಟುಂಬದಲ್ಲಿಯೇ ವಾಸವಾಗಿದ್ದೇವು. ಸ್ವಾಮೀಜಿಗಳು ಎಲ್ಲರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಆದ್ರೆ ರಮ್ಯಾ ಶೆಟ್ಟಿ ಆಗಮನದ ಬಳಿಕ ಮಠದ ವಾತಾವರಣವೇ ಬದಲಾಯಿತು. ಕೆಲವೇ ದಿನಗಳಲ್ಲಿಯೇ ಇಡೀ ಮಠವನ್ನೇ ರಮ್ಯಾ ತನ್ನ ಸ್ವಾಧೀನಕ್ಕೆ ಪಡೆದುಕೊಂಡಳು. ಮಠದ ಬ್ಯಾಂಕ್ ವ್ಯವಹಾರ ಸೇರಿದಂತೆ ಎಲ್ಲ ಕೆಲಸಗಳನ್ನು ರಮ್ಯಾ ನೋಡಿಕೊಳ್ಳುತ್ತಿದ್ದಳು. ರಮ್ಯಾ ಸೂಚಿಸಿದವರನ್ನೆ ಮಠದ ಕಾರ್ಯಗಳಿಗೆ ನೇಮಿಸಿಕೊಳ್ಳಲಾಗುತ್ತಿತ್ತು ರಹಸ್ಯ ವಿಚಾರಗಳನ್ನು ಸುನಿಲ್ ವಿವರಿಸಿದರು.

    ಶಿಶೂರು ಸ್ವಾಮೀಜಿ ಆರೋಗ್ಯವಾಗಿದ್ದರು, ಉತ್ತಮ ಯೋಗ ಹಾಗೂ ಈಜು ಪಟುವಾಗಿದ್ದರು. 55ನೇ ವಯಸ್ಸಿನಲ್ಲಿ ಸ್ವಾಮೀಜಿಗಳು ಸಾವನ್ನಪ್ಪಿದ್ದಾರೆ ಎಂದರೆ ಅದಕ್ಕೆ ರಮ್ಯಾ ಕಾರಣ. ಮಠದಲ್ಲಿ ಸ್ವಾಮೀಜಿಗಳಿಗಿಂತ ರಮ್ಯಾ ಮಾತು ನಡೆಯುತ್ತಿತ್ತು. ರಮ್ಯಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪೆÇಲೀಸ್ ಗೆ ದೂರು ನೀಡಿ ಕಿರುಕುಳ ನೀಡಿ ಮಠದಿಂದ ಹೊರ ಹಾಕಿದಳು. ಮಠದಲ್ಲಿರುವ ಸಿಸಿ ಟಿವಿ ಪರೀಕ್ಷಿಸಿದರೆ ಸತ್ಯಾಂಶ ತಿಳಿಯಲಿದೆ. ರಮ್ಯಾ ವಿರುದ್ಧ ಉಡುಪಿ ಜನ ಹೋರಾಟ ಮಾಡಬೇಕು. ಆಕೆಯ ವಿರುದ್ಧ ಕಾನೂನು ಕ್ರಮ ಆಗಬೇಕು. ಸೂಕ್ತ ತನಿಖೆ ನಡೆಸಿ ರಮ್ಯಾ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸುನಿಲ್ ಆಗ್ರಹಿಸಿದರು.

  • ಶಿರೂರು ಶ್ರೀಗೆ ಇಬ್ಬರು ಉದ್ಯಮಿಗಳಿಂದ ಮೋಸ- ಬರೋಬ್ಬರಿ 26 ಕೋಟಿ ರೂ. ದೋಖಾ

    ಶಿರೂರು ಶ್ರೀಗೆ ಇಬ್ಬರು ಉದ್ಯಮಿಗಳಿಂದ ಮೋಸ- ಬರೋಬ್ಬರಿ 26 ಕೋಟಿ ರೂ. ದೋಖಾ

    ಉಡುಪಿ: ಶಿರೂರು ಲಕ್ಷ್ಮಿವರ ತೀರ್ಥ ಸ್ವಾಮೀಜಿಯವರಿಗೆ ವ್ಯವಹಾರದಲ್ಲಿ 26 ಕೋಟಿ ರೂಪಾಯಿ ಮೋಸ ಆಗಿದ್ಯಂತೆ. ಈ ಕುರಿತು ಸ್ವತಃ ಶಿರೂರು ಸ್ವಾಮೀಜಿ ಅವರೇ ದೈವದ ಮುಂದೆ ದೂರು ಕೊಟ್ಟಿದ್ದರು. ಈ ವಿಡಿಯೋ ಕೂಡ ಇದೀಗ ವೈರಲ್ ಆಗಿದೆ.

    ಶಿರೂರು ಸ್ವಾಮೀಜಿ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಸ್ವಾಮೀಜಿಗೆ ಇಬ್ಬರು ಉದ್ಯಮಿಗಳಿಂದ ಮೋಸ ಆಗಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಉದ್ಯಮಿಗಳ ವಿರುದ್ಧ ಕೋಟಿ ಚೆನ್ನಯ್ಯರಿಗೆ ದೂರು ನೀಡಿದ್ದಾರೆ.

    ಏಪ್ರಿಲ್ ತಿಂಗಳಲ್ಲಿ ಹಿರಿಯಡ್ಕದಲ್ಲಿ ನಡೆದ ಗರೊಡಿಯಲ್ಲಿ ಶಿರೂರು ಸ್ವಾಮೀಜಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೈವ ನುಡಿ ಕೊಡುವ ವೇಳೆ ಸ್ವಾಮೀಜಿ ತಮ್ಮ ನೋವು ತೋಡಿಕೊಂಡಿದ್ದರು. ಇಬ್ಬರು ಉದ್ಯಮಿಗಳಿಂದ ನನಗೆ ಮೋಸವಾಗಿದೆ. ಒಬ್ಬ 12 ಕೋಟಿ, ಮತ್ತೊಬ್ಬ 14 ಕೋಟಿ ರೂ. ಮೋಸವಾಗಿದೆ. ನನ್ನ ಇತರೆ ನೋವನ್ನೆಲ್ಲ ಪಕ್ಕಕ್ಕೆ ಸರಿಸಿ ಬದುಕುತ್ತಿದ್ದೇನೆ. ಈಗ ಹಣಕಾಸಿನ ವಿಚಾರದಲ್ಲೂ ಮೋಸವಾಗಿದೆ ಅಂತ ಸ್ವಾಮೀಜಿ ದೂರಿದ್ದಾರೆ. ನಿನ್ನ ಕಾರಣಿಕದಿಂದ ಹಣ ತರಿಸಿಕೊಡು ಅಂತ ಕೋಟಿ ಚೆನ್ನಯ್ಯರ ಮುಂದೆ ಸಮಸ್ಯೆ ತೋಡಿಕೊಂಡಿದ್ದರು. ಸ್ವಾಮೀಜಿಗೆ ವ್ಯವಹಾರದಲ್ಲೂ ಕೋಟ್ಯಾಂತರ ರೂಪಾಯಿ ಮೋಸವಾಗಿದೆ ಎಂಬೂದು ಈ ವಿಡಿಯೋ ಮೂಲಕ ಸಾಬೀತಾಗಿದೆ.

    ಕೊಡಮಣಿತ್ತಾಯ ಶಾಪ?:
    ಇದಕ್ಕೂ ಮೊದಲು ಅಂದ್ರೆ 5 ವರ್ಷದ ಹಿಂದೆ ಸ್ವಾಮೀಜಿಯವರು ಉಡುಪಿಯ ಪಡುಬಿದ್ರೆಯ ಬಾಲುಪೂಜಾರಿ ಎಂಬವರ ಕುಟುಂಬದ ಮನೆಯಲ್ಲಿ ನಡೆದ ನೇಮದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದ್ದರು ಎನ್ನಲಾಗಿದ್ದು, ಆ ದೈವದ ಶಾಪದಿಂದಲೇ ಸ್ವಾಮೀಜಿ ವಿಧಿವಶರಾಗಿದ್ದಾರಾ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಇದೇ ಘಟನೆ ಶ್ರೀಗಳ ಬದುಕಿಗೆ ಕುತ್ತಾಯಿತೇ ಎಂಬ ಪ್ರಶ್ನೆಗಳನ್ನು ಹಾಕಿ ಜನ ವೀಡಿಯೋ ಶೇರ್ ಮಾಡುತ್ತಿದ್ದರು.

    ಶ್ರೀಗಳ ಅನುಚಿತ ವರ್ತನೆ ದೈವಾರಾಧನೆಯ ರಂಗದಲ್ಲೂ ಸಾಕಷ್ಟು ಚರ್ಚೆಗೆ ದಾರಿಯಾಗಿತ್ತು. ಅದರ ಪರಿಣಾಮ ಇದಾಗಿರಬಹುದೇ ಎಂಬುದು ಈಗ ಚರ್ಚೆಯಾಗುತ್ತಿದೆ. ದರ್ಶನದಲ್ಲಿ ಇರುವಾಗ ಕೊಡಮಣಿತ್ತಾಯ ದೈವದ ಬಳಿ ಮಾತನಾಡುವ ಸ್ವಾಮೀಜಿ, ನೀನು ನನಗೆ ಏನು ಕೊಟ್ಟಿದ್ದೀಯ? ಏನೂ ಕೊಟ್ಟಿಲ್ಲ ಎಂದು ಸನ್ನೆ ಮಾಡಿದ್ದರು. ನಿನ್ನಿಂದ ಏನೂ ಸಹಾಯವಾಗಿಲ್ಲ ಅಂತ ದೈವದ ಮುಂದೆ ಹೇಳಿಕೊಂಡಿದ್ದರು. ಸದ್ಯ ಇದೀಗ ಈ ವೀಡಿಯೋ ಕೂಡ ಬಹು ಚರ್ಚಿತ ವಿಷಯವಾಗಿದೆ.

  • ಉಡುಪಿ ರಥಬೀದಿ ಸ್ತಬ್ಧ: ಶಾಲಾ-ಕಾಲೇಜು, ಅಂಗಡಿ ಮುಂಗಟ್ಟು ಬಂದ್

    ಉಡುಪಿ ರಥಬೀದಿ ಸ್ತಬ್ಧ: ಶಾಲಾ-ಕಾಲೇಜು, ಅಂಗಡಿ ಮುಂಗಟ್ಟು ಬಂದ್

    ಉಡುಪಿ: ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶರಾದ ಹಿನ್ನೆಲೆಯಲ್ಲಿ ಇಂದು ಉಡುಪಿಯ ರಥಬೀದಿ ಸ್ತಬ್ಧವಾಗಿದೆ.

    ನಗರದ ಎಲ್ಲ ಶಾಲಾ- ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದ್ದು, ಶಾಲಾ-ಕಾಲೇಜು ಸೇರಿದಂತೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಶಿರೂರು ಸ್ವಾಮೀಜಿಗಾಗಿ ಶೋಕಾಚರಣೆ ಮಾಡುತ್ತಿದ್ದಾರೆ.

    ಗೌರವಾರ್ಥವಾಗಿ ವ್ಯಾಪಾರ ವಹಿವಾಟು ಬಂದ್ ಮಾಡಿದ್ದಾರೆ. ಈ ಮೂಲಕ ಶಿರೂರು ಸ್ವಾಮೀಜಿಗಳ ಅಸಹಜ ಸಾವಿಗೆ ಉಡುಪಿ ಜನತೆ ಕಂಬನಿ ಮಿಡಿಯುತ್ತಿದ್ದಾರೆ. ಈಗಾಗಲೇ ಮಠದ ಮುಂದೆ ಅಪಾರ ಭಕ್ತರು ನೆರೆದಿದ್ದಾರೆ.

    ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಹತ್ತಿಯ ಬುಟ್ಟಿ ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕಾಗಿ ಸಾಂಪ್ರದಾಯಿಕ ಬುಟ್ಟಿ ತಂದಿದ್ದು, ಭಕ್ತರು ಹತ್ತಿಯನ್ನು ಬುಟ್ಟಿಯಲ್ಲಿ ಹಾಕುತ್ತಿದ್ದಾರೆ. ಬಳಿಕ ಮಠದ ಭಕ್ತರು ಬುಟ್ಟಿಯಲ್ಲಿ ಮೃತ ಶರೀರ ಹೊರಲಿದ್ದಾರೆ. ಇಂದು ಸಂಜೆ ಸ್ವಾಮೀಜಿಗಳ ಅಂತ್ಯಕ್ರಿಯೆ ನೇರವೇರಲಿದೆ.

    ಉಡುಪಿ ಮಠದ ಸಂಪ್ರದಾಯದಂತೆ ಸಂಸ್ಕಾರ ಮಾಡಲಾಗುತ್ತಿದೆ. ಆದ್ದರಿಂದ ಶ್ರೀಗಳ ಶರೀರವನ್ನು ಮೊದಲು ಕೃಷ್ಣಮಠಕ್ಕೆ ಕೊಂಡೊಯ್ಯಲಾಗುತ್ತದೆ. ಬಳಿಕ ಮಠದ ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ ಶ್ರೀ ಕೃಷ್ಣ ದೇವರ ದರ್ಶನವನ್ನು ಮಾಡಿಸಲಾಗುತ್ತದೆ.

    ನಂತರ ಶಿರೂರು ಸ್ವಾಮೀಜಿಯ ಮೂಲಮಠವಾದ ಕಾಪುವಿನ ಹಿರಿಯಡ್ಕದಕ್ಕೆ ಮೃತದೇವನ್ನು ಕೊಂಡೊಯ್ದು ಮಣ್ಣಿನಡಿ ಹೂಳುವ ಮೂಲಕ ಸಂಸ್ಕಾರ ಮಾಡಲಾಗುತ್ತದೆ. ಅಂತ್ಯ ಸಂಸ್ಕಾರ ಮಾಡುವಾಗ ಪೂಜಾ ಸಾಮಾಗ್ರಿಗಳನ್ನು ಅವರ ಶರೀರದ ಜೊತೆ ಇರಿಸಿ ಬೃಂದಾವನ ನಿರ್ಮಿಸಲಾಗುತ್ತದೆ. ಜೊತೆಗೆ ಉಪ್ಪು, ಹತ್ತಿ, ಕಾಳುಮೆಣಸು ಮತ್ತು ಕರ್ಪೂರಗಳನ್ನು ತುಂಬಿಸಿ ಸಮಾಧಿ ಮಾಡಲಾಗುತ್ತದೆ.

    55 ವರ್ಷದ ಶಿರೂರು ಸ್ವಾಮೀಜಿಗಳಿಗೆ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಬುಧವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

  • ನಾನು ಮಲಗಿರೋವಾಗ ಏನಾದ್ರೂ ಮಾಡಬಹುದೆಂಬ ಭಯವಿದೆ ಅಂದಿದ್ದರು ಶ್ರೀಗಳು- ಸಂತೋಷ್ ಗುರೂಜಿ

    ನಾನು ಮಲಗಿರೋವಾಗ ಏನಾದ್ರೂ ಮಾಡಬಹುದೆಂಬ ಭಯವಿದೆ ಅಂದಿದ್ದರು ಶ್ರೀಗಳು- ಸಂತೋಷ್ ಗುರೂಜಿ

    ಉಡುಪಿ: ಕಳೆದ ಎರಡು ತಿಂಗಳಿಂದ ನನಗೆ ಇಲ್ಲಿ ಊಟ ಮಾಡುವುದಕ್ಕೂ ಭಯವಾಗುತ್ತಿದೆ ಎಂದು ಶಿರೂರು ಹೇಳಿಕೊಂಡಿದ್ದರು ಅಂತ ಬಾರ್ಕೂರು ಮಠಾಧೀಶದ ಸಂಸ್ಥಾಪಕ ಸಂತೋಷ್ ಗುರೂಜಿ ಹೇಳಿದ್ದಾರೆ.

    ಶಿರೂರು ಮಠದ ಸ್ವಾಮೀಜಿಗಳು ಇಂದು ಬೆಳಗ್ಗೆ ಕೆಎಂಸಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಈ ಸಂಬಂಧ ಸಂತೋಷ್ ಗುರೂಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ರು. ಊಟ ಮಾಡುವುದಕ್ಕೂ ಭಯವಾಗುತ್ತಿದೆ ಅಂತ ಶ್ರೀಗಳ ಹೇಳಿಕೆಯಿಂದ ನನಗೆ ಆತಂಕವಾಗಿತ್ತು. ಆದ್ರೆ ನನ್ನ ವೈಯಕ್ತಿಕ ಕಾರಣದಿಂದ ಅವರು ಒಂದು ವಾರದಿಂದ ನನ್ನ ಜೊತೆ ಮಾತನಾಡಲಿಲ್ಲ ಅಂದ್ರು.

    ಒಬ್ಬರೇ ಓಡಾಡಬೇಡಿ ಯಾರಾದರೂ ನಾಲ್ಕು ಜನರನ್ನು ನಿಮ್ಮ ಜೊತೆ ಇರಿಸಿಕೊಳ್ಳಿ ಎಂದು ನಾನು ಅವರಿಗೆ ಹೇಳಿದ್ದೆ. ಆಗ ಅವರು ನನ್ನ ಎದುರಿಗೆ ಬಂದು ಯಾರು ಏನು ಮಾಡಲು ಸಾಧ್ಯವಿಲ್ಲ. ಆದರೆ ನನ್ನ ಆಹಾರದಲ್ಲಿ ಅಥವಾ ನಾನು ಮಲಗಿರುವಾಗ ಏನಾದರೂ ಮಾಡಬಹುದು ಎಂಬ ಭಯವಿದೆ ಎಂದು ಹೇಳಿದ್ದರು ಅಂತ ಗೂರೂಜಿ ಹೇಳಿದ್ರು.

    ನಾಲ್ಕು ತಿಂಗಳ ಹಿಂದೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ನಂತರ ಎರಡು ತಿಂಗಳಿಂದ ಅದಕ್ಕೆ ರಕ್ಕೆಪುಕ್ಕಗಳೆಲ್ಲವೂ ಸೇರಿಕೊಂಡಿತ್ತು. ಬಳಿಕ ಶಿರೂರು ನೀಡಿದ ಹೇಳಿಕೆಗಳು ಮಾಧ್ಯಮದಲ್ಲಿ ಬಂತು. ಇದರಿಂದ ಅವರು ತೀವ್ರ ವಿರೋಧವನ್ನು ಕಾಣಬೇಕಾಯಿತ್ತು. ಶಿರೂರು ಸ್ವಾಮಿಜಿ ಅವರು ಕಂಡಿದ್ದನ್ನ ಹಾಗೇ ಹೇಳುತ್ತಾರೆ. ಯಾವುದನ್ನು ವಿರೋಧಿಸಬೇಕೋ ಅದನ್ನು ವಿರೋಧಿಸುತ್ತಾರೆ. ಅವರು ಕಂಡಿದನ್ನು ಬಿಡುವುದಿಲ್ಲ. ಸಾಮಾಜಿಕ ಕಾಂತ್ರಿಯಲ್ಲೂ ಕೂಡ ಇವರು ವಿರೋಧವನ್ನು ಕಂಡಿದ್ದರು. ಅವರ ಮಠದಲ್ಲಿ ಎಲ್ಲ ಜಾತಿಯ ಜನರಿಗೆ ನೇರ ಪ್ರವೇಶವಿದೆ ಅಂದ್ರು.

    ಶ್ರೀಗಳ ಜೊತೆ ನನ್ನ ಹತ್ತಿರದ ಒಡನಾಟವಿತ್ತು. ಶಿರೂರು ಮಠಕ್ಕೂ ಹಾಗೂ ನಮ್ಮ ಬಾರ್ಕೂರು ಮಠಕ್ಕೂ ಆತ್ಮೀಯ ಸಂಬಂಧವಿತ್ತು. ನನ್ನ ಪಟ್ಟಾಭಿಷೇಕದಿಂದ ಮೊನ್ನೆವರೆಗೂ ನಮ್ಮಿಬ್ಬರ ನಡುವೆ ಆತ್ಮೀಯ ಬಾಂಧವ್ಯವಿತ್ತು ಅಂತ ಹೇಳಿದ್ರು.

  • ಶಿರೂರು ಶ್ರೀಗಳಿಗೆ ವಿಷ ಪ್ರಾಶನ: ವೈದ್ಯರ ಶಂಕೆ

    ಶಿರೂರು ಶ್ರೀಗಳಿಗೆ ವಿಷ ಪ್ರಾಶನ: ವೈದ್ಯರ ಶಂಕೆ

    ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ರಕ್ತವಾಂತಿ ಮಾಡಿಕೊಂಡು ಸಾವು ಕಂಡಿರುವುದು ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

    ಸ್ವಾಮೀಜಿಗಳನ್ನು ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ನಮ್ಮ ವೈದ್ಯರ ತಂಡವೆಲ್ಲರೂ ಸೇರಿ ಚಿಕಿತ್ಸೆ ಕೊಟ್ಟಿದ್ದೆವು. ಆದರೆ ಬಹು ಅಂಗಾಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ನಂತರ ಹೊಟ್ಟೆಯಲ್ಲಿ ವಿಷಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೊಟ್ಟೆಯೊಳಗೆ ತೀವ್ರ ರಕ್ತಸ್ರಾವವಾಗಿತ್ತು. ನಮ್ಮ ಸಂಶಯವನ್ನ ಪೊಲೀಸರಿಗೆ ತಿಳಿಸಿದ್ದೇವೆ. ಮುಂದಿನ ಕ್ರಮ ಪೊಲೀಸರು ಕೈಗೊಳ್ಳುತ್ತಾರೆ. ಕೆಎಂಸಿ. ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯ ಡಾ.ಅವಿನಾಶ್ ಹೇಳಿದ್ದಾರೆ.

    ಫುಡ್ ಪಾಯಿಸನಿಂಗ್ ಎಂದು ಹೇಳಲಾಗುತ್ತಿದೆಯಾದರೂ ಹಲವಾರು ಅನುಮಾನಗಳು ಎದ್ದಿವೆ. ಇನ್ನೊಂದೆಡೆ ಬುಧವಾರ ಸಂಜೆಯೇ ರಕ್ತ ವಾಂತಿ ಕಾರಿರುವ ಶ್ರೀಗಳು ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಅನ್ನೋ ಸಂದೇಶ ಹರಿದಾಡಿತ್ತು. ಆದರೆ ಆಸ್ಪತ್ರೆ ವೈದ್ಯಾಧಿಕಾರಿ ಈ ಸುದ್ದಿಯನ್ನು ಅಲ್ಲಗಳೆದಿದ್ದು, ಆರೋಗ್ಯ ಸುಧಾರಣೆ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದರು.

    ಇತ್ತೀಚೆಗೆ ತಮ್ಮ ಪಟ್ಟದ ದೇವರನ್ನು ನೀಡದಿರುವುದನ್ನು ಪ್ರಶ್ನಿಸಿ ಇತರೇ ಮಠಾಧೀಶರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು. ಅಲ್ಲದೇ ಉಳಿದ ಮಠಾಧೀಶರು ತನ್ನ ಮೇಲೆ ಉತ್ತರಾಧಿಕಾರಿ ಹೊಂದುವಂತೆ ಹಾಕುತ್ತಿರುವ ಒತ್ತಡದಿಂದ ತಪ್ಪಿಸಿಕೊಳ್ಳಲು ಹೈಕೋರ್ಟ್ ತೆರಳಿ ತಡೆಯಾಜ್ಞೆ ತಂದಿದ್ದರು. ಶಿರೂರು ಮಠದ `ಶ್ರೀ ಅನ್ನವಿಠಲ’ ಪಟ್ಟದ ದೇವರನ್ನು ಹಿಂದಿರುಗಿಸುವಂತೆ ಸ್ಬಾಮೀಜಿ, ಪರ್ಯಾಯ ಮಠಾಧೀಶರಿಗೆ ಕೇಳಿಕೊಂಡಿದ್ದರೂ ನೀಡದ ಪರ್ಯಾಯ ಪೀಠಾಧಿಪತಿಗಳು ಉತ್ತರಾಧಿಕಾರಿ ಹೊಂದುವಂತೆ ಸೂಚಿಸಿದ್ದರು. ಕೃಷ್ಣಮಠದಲ್ಲಿ ಈ ಬಗ್ಗೆ ಗುಪ್ತ ಸಭೆ ನಡೆದು ಶಿರೂರು ಸ್ವಾಮೀಜಿಗಳನ್ನು ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರವೂ ನಡೆದಿತ್ತು ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಅವರು ಏಕಾಏಕಿ ಅನಾರೋಗ್ಯ ಪೀಡಿತರಾಗಿದ್ದಲ್ಲದೆ, ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿರುವುದು ಭಕ್ತರ ಅನುಮಾನಕ್ಕೆ ಕಾರಣವಾಗಿದೆ.

    ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಶಿರೂರು ಶ್ರೀಗಳು ಉಡುಪಿಯಲ್ಲಿ ಜನಸಾಮಾನ್ಯರ ಸ್ವಾಮೀಜಿ ಎಂದೇ ಹೆಸರು ಗಳಿಸಿದ್ದರು. ಸಂಗೀತ, ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಶಿರೂರು ಶ್ರೀಗಳು ತನ್ನ ಎರಡು ಅವಧಿಯ ಪರ್ಯಾಯದಲ್ಲಿ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಹಾಗೂ ಅವ್ಯವಹಾರ ತಡೆಯುವಲ್ಲೂ ಯಶಸ್ವಿಯಾಗಿದ್ದರು. ಶಿರೂರು ಸ್ವಾಮೀಜಿ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಬುಧವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶ್ರೀಗಳು ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

    55ನೇ ವಯಸ್ಸಿನ ಶಿರೂರು ಶ್ರೀಗಳ ವಿಧಿವಶದಿಂದ ಶಿರೂರು ಮಠ ಅನಾಥವಾಗಿದ್ದು, ಹಲವು ಗಣ್ಯರು, ಸಾವಿರಾರು ಭಕ್ತರು ಕಂಬನಿ ಮಿಡಿದಿದ್ದಾರೆ. ಕೇವಲ ಫುಡ್ ಪಾಯ್ಸನಿಂಗ್ ಆಗಿರುತ್ತಿದ್ದರೆ ಹಠಾತ್ ಸಾವು ಸಂಭವಿಸುತ್ತಿರಲಿಲ್ಲ. ಆಹಾರದ ರೂಪದಲ್ಲಿ ಬೇರೇನೋ ಸೇವನೆ ಆಗಿರುವ ಶಂಕೆ ಭಕ್ತರಲ್ಲಿದೆ.

  • ಉಡುಪಿಯ ಶಿರೂರು ಶ್ರೀಗಳು ವಿಧಿವಶ

    ಉಡುಪಿಯ ಶಿರೂರು ಶ್ರೀಗಳು ವಿಧಿವಶ

    ಉಡುಪಿ: ಇಲ್ಲಿನ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶಿರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ  ವಿಧಿವಶರಾಗಿದ್ದಾರೆ.

    ಬುಧವಾರ ಬೆಳಗ್ಗೆ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದ ಶ್ರೀಗಳ ಆರೋಗ್ಯ ಬಿಗಡಾಯಿಸಿತ್ತು. ಹೀಗಾಗಿ ಶ್ರೀಗಳನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಅಲ್ಲದೇ ಡ್ರಿಪ್ಸ್ ಕೂಡ ಹಾಕಲಾಗಿತ್ತು.

    ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು. ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶಿರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಪದೇ ಪದೇ ಆಸ್ಪತ್ರೆಗಳಿಗೆ ಚೆಕಪ್ ಗೆ ತೆರಳುತ್ತಿದ್ದ ಶ್ರೀಗಳು ಒಮ್ಮೆ ಗುಣಮುಖರಾದ್ರೆ ಮತ್ತೊಮ್ಮೆ ಅನಾರೋಗ್ಯಕ್ಕೆ ಈಡಾಗುತ್ತಲೇ ಇದ್ದರು.

    ಚುನಾವಣೆ ಸಂದರ್ಭ ನಿರ್ಜಲೀಕರದಿಂದ ಅಸ್ವಸ್ಥರಾಗಿದ್ದರು. ನಿನ್ನೆ ಬೆಳಗ್ಗೆ ಶ್ರೀಗಳನ್ನು ಕೆಎಂಸಿಗೆ ದಾಖಲಿಸಲಾಗಿತ್ತು. ಅವರು ರಕ್ತವಾಂತಿ ಮಾಡಿದ್ದರಿಂದ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಆಸ್ಪತ್ರೆಯಲ್ಲೇ ವಿಧಿವಶರಾಗಿದ್ದಾರೆ.

  • ನಾನು ಗೆದ್ದರೆ ಮೋದಿಯನ್ನು ಬೆಂಬಲಿಸುತ್ತೇನೆ- ಶಿರೂರು ಸ್ವಾಮೀಜಿ

    ನಾನು ಗೆದ್ದರೆ ಮೋದಿಯನ್ನು ಬೆಂಬಲಿಸುತ್ತೇನೆ- ಶಿರೂರು ಸ್ವಾಮೀಜಿ

    ಉಡುಪಿ: ಪಕ್ಷೇತರ ಅಭ್ಯರ್ಥಿಯಾಗಿ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಕಣಕ್ಕಿಳಿದು ಉಡುಪಿ ವಿಧಾನಸಭೆ ಕ್ಷೇತ್ರಕ್ಕೆ ರಂಗು ಹಚ್ಚಿದ್ದಾರೆ. ಇವತ್ತು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಗಳು ಉಮೇದುವಾರಿಕೆ ಸಲ್ಲಿಸಿದ್ರು. ಪಜೇರೋ ಸ್ಪೋರ್ಟ್ಸ್ ಕಾರಲ್ಲಿ ಬಂದು ಸ್ವಾಮೀಜಿ ನಾಮಪತ್ರ ಸಲ್ಲಿಸಿದರು.

    ಶಿರೂರು ಸ್ವಾಮೀಜಿ ಚುನಾವಣಾ ಅಖಾಡಕ್ಕೆ ಇಳಿಯುವ ಮೂಲಕ ಕಣ ಈ ಬಾರಿ ರಂಗೇರಿದೆ. ಮಧ್ಯಾಹ್ನ ಹನ್ನೆರಡೂವರೆ ಗಂಟೆ ಸುಮಾರಿಗೆ ತಾಲೂಕು ಕಚೇರಿಗೆ ಆಗಮಿಸಿದ ಶ್ರೀಗಳು ಚುನಾವಾಧಿಕಾರಿಗಳಿಗೆ ನಾಮಪತ್ರ ನೀಡಿದರು. ಇದಕ್ಕೂ ಮುನ್ನ ಶ್ರೀಗಳು ಕಡಿಯಾಳಿಯ ಮಹಿಷಮರ್ಧಿನಿ ದೇವಸ್ಥಾನಕ್ಕೆ ಭೇಟಿ ಕೊಟ್ರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಶಿರೂರು ಶ್ರೀ ,ಅಲ್ಲಿಂದ ನೇರ ಕಾರು ಹತ್ತಿ ತಾಲೂಕು ಕಚೇರಿಗೆ ಬಂದರು. ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ಪಜೇರೋ ಸ್ಪೋರ್ಟ್ಸ್  ಕಾರಿನಲ್ಲಿ ಆಗಮಿಸಿದ್ರು. ಈ ಸಂದರ್ಭ ಸ್ವಾಮೀಜಿ ಕೆಲಕಾಲ ಅಸ್ವಸ್ಥರಾದರು. ನಿರ್ಜಲೀಕರ ಶ್ರೀಗಳನ್ನು ಬಾಧಿಸಿತ್ತು.

    ಸುಮಾರು ಐದು ಎಳನೀರು ನೀಡಿ ಸ್ವಾಮೀಜಿಯವರ ಆರೋಗ್ಯ ಸ್ಥಿತಿಯನ್ನು ಶಿಷ್ಯರು ಹತೋಟಿಗೆ ತಂದರು. ಅಸ್ವಸ್ಥರಾಗಿದ್ದರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೊಂಚ ವಿಳಂಬವಾಯ್ತು.

    ಈ ವೇಳೆ ಮಾತನಾಡಿದ ಅವರು ,ನಾನು ಪಕ್ಷೇತರನಾಗಿ ನಾಮಪಪತ್ರ ಸಲ್ಲಿಸ್ತಿದ್ದೇನೆ. ಈಗಾಗಲೇ ಪ್ರಚಾರ ಶುರು ಮಾಡಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಅಂದ್ರು. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಅಂತ ಹೇಳಿದರು.

    ಮೋದಿ ಅಥವಾ ಅಮಿತ್ ಶಾ ಮನವೊಲಿಸಿದ್ರೆ ಈ ಕುರಿತು ಚಿಂತನೆ ನಡೆಸುತ್ತೇನೆ. ಪಕ್ಷೇತರನಾಗಿ ಗೆದ್ದರೆ ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡ್ತೇನೆ ಅಂತ ಪ್ರತಿಕ್ರಿಯೆ ನೀಡಿದ್ರು. ಉಡುಪಿ ಬಿಜೆಪಿ ಸರಿಯಿಲ್ಲ, ಅದನ್ನು ಸರಿಮಾಡಬೇಕು ಎಂಬ ಇಚ್ಚೆಯೇ ರಾಜಕೀಯ ಪ್ರವೇಶಕ್ಕೆ ಕಾರಣ ಅಂತ ಹೇಳಿದರು.

    ನಾನು 40 ವರ್ಷದ ಬಿಜೆಪಿ ವೋಟರ್. ಎರಡು ಬಾರಿ ಕಾಂಗ್ರೆಸ್ ನ ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿದ್ದು ಬಿಟ್ಟರೆ, ಮತ್ತೆಂದೂ ಕಾಂಗ್ರೆಸ್ ಕಡೆ ಮುಖ ಹಾಕಿಲ್ಲ ಅಂತ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಬಗ್ಗೆ ಮಾತನಾಡಲ್ಲ ಅಂತ ಹೇಳಿದರು.