Tag: ಶಿರೂರು ಶ್ರೀ

  • ನನಗೆ ಮಕ್ಕಳಿರೋದು ಸಾಬೀತಾದರೆ ಪೀಠ ತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ

    ನನಗೆ ಮಕ್ಕಳಿರೋದು ಸಾಬೀತಾದರೆ ಪೀಠ ತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ

    ಚೆನ್ನೈ: ನನ್ನ ವಿರುದ್ಧ ಶೀರೂರು ಶ್ರೀಗಳು ಮಾಡಿದ್ದಾರೆ ಎನ್ನಲಾದ ಆರೋಪ ಸಾಬೀತಾದರೆ ನಾನು ಪೀಠ ತ್ಯಾಗ ಮಾಡುತ್ತೇನೆ ಎಂದು ಪೇಜಾವರಶ್ರೀಗಳು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಾನು ಯಾವುದೇ ಪರೀಕ್ಷೆ ಅಥವಾ ವಿಚಾರಣೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ಶೀರೂರು ಶ್ರೀಗಳ ಸಾವಿನ ಬಳಿಕ ದಿನಕ್ಕೊಂದು ವಿಚಾರಗಳು ಬೆಳಕಿಗೆ ಬರುತ್ತಿದ್ದು, ಇದರಲ್ಲಿ ಪೇಜಾವರ ಶ್ರೀಗಳು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂಬ ವಾಟ್ಸಪ್ ಆಡಿಯೋ ಕೂಡಾ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಪೇಜಾವರಶ್ರೀಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

    ಪೇಜಾವರ ಶ್ರೀಗಳ ಹೇಳಿಕೆಯಲ್ಲೇನಿದೆ..?: ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ಒಂದು ಪುಟದ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅದರ ಪೂರ್ಣ ರೂಪ ಇಂತಿದೆ.

    ಶೀರೂರು ಮಠದ ಗತಿಸಿದ ಶ್ರೀ ಲಕ್ಷ್ಮೀವರತೀರ್ಥರ ಆಪ್ತವರ್ಗವು ಬಹಿರಂಗಗೊಳಿಸಿದ ಆಡಿಯೋದಲ್ಲಿ ತಾರುಣ್ಯದಲ್ಲಿ ನನಗೆ ಸ್ತ್ರೀ ಸಂಗವಿತ್ತು. ಪದ್ಮಾ ಎಂಬ ಹೆಣ್ಣು ಮಗಳು ತಮಿಳುನಾಡಿನಲ್ಲಿದ್ದಾಳೆಂಬ ಶುದ್ಧ ಸುಳ್ಳು ಸಂಗತಿಯನ್ನು ಉಲ್ಲೇಖಿಸಲಾಗಿದೆ. ಡಿಸೆಂಬರ್‍ನಲ್ಲಿ ಇವರೇ ಕಳುಹಿಸಿರಬಹುದಾದ ಪತ್ರದಲ್ಲಿ ಅವನು ಗಂಡು ಮಗನೆಂದು ಅವನ ಕುಲನಾಮವನ್ನು ಉಲ್ಲೇಖಿಸಲಾಗಿದೆ. ಈ ವ್ಯತ್ಯಾಸದಿಂದ ಇದು ಕಲ್ಪನೆಯೆಂದು ಗೊತ್ತಾಗುತ್ತದೆ. ಇದನ್ನು ನಮ್ಮ ದೇಶದ ಯಾರೂ ನಂಬುವುದಿಲ್ಲವೆಂದು ನನಗೆ ಗೊತ್ತಿದೆ. ಈ ಬಗ್ಗೆ ಯಾವ ವಿಚಾರಣೆ ಹಾಗೂ ಪರೀಕ್ಷೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಇದು ಬರೇ ಸುಳ್ಳು ಆರೋಪ.

    ಇದನ್ನು ಸಿದ್ದಪಡಿಸಲು ಸಾಧ್ಯವೇ ಇಲ್ಲ. ಇದು ಸಿದ್ಧವಾದರೆ ನಾನು ತಕ್ಷಣ ಪೀಠ ತ್ಯಾಗ ಮಾಡುವೆನು. ಲಕ್ಷೀವರ ತೀರ್ಥರ ನಿಧನದ ನಂತರ ಅವರ ಅವ್ಯವಹಾರದ ಬಗ್ಗೆ ಹೇಳಿಕೆ ಸರಿಯಿಲ್ಲವೆಂದು ಕೆಲವರು ಆಕ್ಷೇಪಿಸಿದ್ದಾರೆ. ಲಕ್ಷೀವರತೀರ್ಥರಿಗೆ ವಿಠಲ ದೇವರನ್ನು ಯಾಕೆ ಕೊಟ್ಟಿಲ್ಲ? ಅವರ ಅಂತ್ಯದರ್ಶನಕ್ಕೆ ಯಾಕೆ ಹೋಗಿಲ್ಲ ಮುಂತಾದ ಪ್ರಶ್ನೆ, ಆಕ್ಷೇಪವನ್ನು ಮಾದ್ಯಮದವರು ಮಾಡಿದ್ದರಿಂದ ಅದಕ್ಕೆ ಉತ್ತರವಾಗಿ ಅವರು ಸನ್ಯಾಸಧರ್ಮವನ್ನು ಪೂರ್ಣವಾಗಿ ಉಲ್ಲಂಘಿಸಿದ್ದಾರೆಂಬುದನ್ನು ಅನಿವಾರ್ಯವಾಗಿ ನಾನು ವಿವರಿಸ ಬೇಕಾಯಿತು.

    ಹಿಂದಿನ ಪಲಿಮಾರು ಸ್ವಾಮಿಗಳಾದ ರಘುವಲ್ಲಭ ತೀರ್ಥರು, ಹಿಂದಿನ ಶೀರೂರು ಸ್ವಾಮಿಗಳಾದ ಮನೋಜ್ಞ ತೀರ್ಥರು, ಸುಬ್ರಹ್ಮಣ್ಯ ಮಠದ ಸ್ವಾಮಿಗಳಾದ ವಿದ್ಯಾಭೂಷಣರು ಪೀಠ ತ್ಯಾಗ ಮಾಡಲು ನನ್ನ ಪಾತ್ರವೇನೂ ಇಲ್ಲ. ಅವರನ್ನು ಪೀಠದಲ್ಲಿ ಉಳಿಸಲು ಎಲ್ಲಾ ಪ್ರಯತ್ನ ಮಾಡಿದ್ದೇನೆ. ಅವರಾಗಿ ಸ್ವೇಚ್ಛೆಯಿಂದ ಹೋಗಿದ್ದಾರೆ. ಅದಕ್ಕಾಗಿ ನನ್ನನ್ನು ಹಂತಕನನ್ನಾಗಿ ದೂಷಿಸುವುದು ಸರ್ವಥಾ ತಪ್ಪು. ರಘುವಲ್ಲಭರಿಗೆ 5 ಲಕ್ಷ ರೂ. ಕೊಟ್ಟಿರುವೆನೆಂದು ಆರೋಪಿಸುವುದೂ ಪೂರ್ಣ ಸುಳ್ಳು. ಅವರಿಗೆ ಇದಕ್ಕಾಗಿ ಒಂದು ಪೈಸೆ ಕೂಡ ಕೊಟ್ಟಿಲ್ಲ. ವಿಶ್ವ ವಿಜಯರನ್ನು ನಾನು ಕಳುಹಿಸಿಯೇ ಇಲ್ಲ. ಅವರಾಗಿಯೇ ಹೋದರು. ಹೋದರೆ ಅನೇಕ ಸಮಸ್ಯೆಯಾಗುವುದೆಂದು ನಾನು ಹೇಳಿದ್ದೆ. ಆದರೂ ಹೋದರು. ಬಂದ ಮೇಲೆ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿಯೂ ಹೇಳಿದೆ. ಆದರೆ ಅವರು ನನಗೆ ತಿಳಿಸದೇ ಪೀಠ ತ್ಯಾಗ ಮಾಡಿದ್ದಾರೆ. ವ್ಯಾಸರಾಜ ಸ್ವಾಮಿಗಳ ಆಶ್ರಮ, ಸುವಿದ್ಯೇಂದ್ರರ ಆಶ್ರಮ ಸ್ವೀಕಾರ ಮತ್ತು ಪೀಠ ತ್ಯಾಗದಲ್ಲಿ ನನ್ನ ಪಾತ್ರ ಕಿಂಚಿತ್ತು ಇಲ್ಲ. ಆದರೂ ಇದೆಲ್ಲವುಗಳಿಗೂ ನಾನೇ ಕಾರಣವೆಂದು ದೂಷಿಸುವುದು ಸರ್ವಾಥಾ ಸರಿಯಲ್ಲ. ಶೀರೂರು ಸ್ವಾಮಿಗಳಿಂದ ನಾನು ಯಾವುದೇ ರೀತಿಯ ಹಣವನ್ನು ಅಪೇಕ್ಷಿಸಲೂ ಇಲ್ಲ, ಕೇಳಲೂ ಇಲ್ಲ. ಇದೆಲ್ಲದರ ಬಗ್ಗೆಯೂ ಬಹಿರಂಗ ವಿಚಾರಣೆಗೆ ನಾನು ಯಾವಾಗಲೂ ಸಿದ್ಧ.

     

    ಡಿವಿಆರ್ ಎಲ್ಲಿ?: ಇನ್ನು ಶೀರೂರು ಶ್ರೀಗಳು ನೆಲೆಸಿದ್ದ ಮೂಲಮಠದ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು, ಪ್ರಕರಣ ಮತ್ತಷ್ಟು ನಿಗೂಢವಾಗುತ್ತಿದೆ. ಶ್ರೀಗಳು ಆಸ್ಪತ್ರೆಗೆ ದಾಖಲಾದ ದಿನವೇ ಡಿವಿಆರ್ ನಾಪತ್ತೆಯಾಗಿದೆ. ಅಷ್ಟೇ ಅಲ್ಲ ಶೀರೂರು ಮೂಲಮಠದಿಂದ ಇನ್ನು ಕೆಲ ವಸ್ತುಗಳು ಕಾಣೆಯಾಗಿವೆ. ಉದ್ದೇಶಪೂರ್ವಕವಾಗಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರಾ ಅಥವಾ ಸಿಸಿಟಿವಿ ಬರಿ ಪ್ರದರ್ಶನಕ್ಕೆ ಮಾತ್ರ ಅಳವಡಿಸಲಾಗಿತ್ತಾ ಎಂಬುವುದರ ಕುರಿತು ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

    ಇದೇ ವೇಳೆ ಇನ್ನೆರಡು ದಿನಗಳಲ್ಲಿ ಶ್ರೀಗಳ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬರಲಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. ಈ ನಡುವೆ ಪಟ್ಟದ ದೇವರ ವಾಪಸ್ ಗಾಗಿ ಶಿರೂರು ಶ್ರೀಗಳು ಸಲ್ಲಿಸಿದ್ದ ಕೇವಿಯಟ್ ಅರ್ಜಿ ಸ್ವಾಮೀಜಿಗಳ ಸಾವಿನಿಂದಾಗಿ ಅನೂರ್ಜಿತವಾಗಿದೆ. ಹೀಗಾಗಿ ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್ ಸಿಕ್ಕಿದೆ.

  • ಶಿರೂರು ಮಠಕ್ಕೆ ಸಮಿತಿ ಆಯ್ಕೆ- ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ

    ಶಿರೂರು ಮಠಕ್ಕೆ ಸಮಿತಿ ಆಯ್ಕೆ- ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ

    ಉಡುಪಿ: ಶಿರೂರು ಮಠದ ಒಂದು ತಿಂಗಳ ಆಡಳಿತ ನಿರ್ವಹಣೆಗೆ ಐವರು ಸದಸ್ಯರ ಆಡಳಿತ ಸಮಿತಿ ಸೋಮವಾರ ರಚನೆಯಾಗಲಿದೆ ಎಂಬ ಮಾಹಿತಿ ಸೋದೆ ಮಠದ ಮೂಲಗಳಿಂದ ಲಭಿಸಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಮಠದ ಮೂಲಗಳಿಂದ ಮಾಹಿತಿ ಲಭಿಸಿದ್ದು, ಮಠದ ಆಡಳಿತ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಈ ವ್ಯವಸ್ಥೆ ಮಾಡುತ್ತೇವೆ. ಸೋದೆ ವಿಶ್ವವಲ್ಲಭ ಸ್ವಾಮಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗುತ್ತದೆ. ಸೋದೆಮಠವೂ ಶಿರೂರು ಮಠದ ದ್ವಂದ್ವ ಮಠ ಆಗಿರುವುದರಿಂದ ಜವಾಬ್ದಾರಿ ವಹಿಸುತ್ತೇವೆ ಎಂದಿದ್ದಾರೆ. ಆದರೆ ಶಿರೂರು ಮಠದ ಮುಂದಿನ ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

    ಒಂದು ತಿಂಗಳೊಳಗೆ ಶಿರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆಯಾಗಬೇಕು. ಉತ್ತರಾಧಿಕಾರಿ ಆಯ್ಕೆಗೆ ಸೋದೆ ಮಠದ ಪ್ರಯತ್ನ ನಡೆಸುತ್ತಿದ್ದು, ಹಲವಾರು ವಟುಗಳ ಜಾತಕ ಪರಿಶೀಲನೆ ನಡೆಸುತ್ತಿದ್ದಾರೆ. ವಟು ಆಯ್ಕೆಯ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉತ್ತರಾಧಿಕಾರಿ ನೇಮಕವಾಗಲಿದೆ. ಆದರೆ ನೂತನ ಉತ್ತರಾಧಿಕಾರಿಯಾಗಿ ಬರಲು ಹಲವರ ನಿರಾಸಕ್ತಿ ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಶಿರೂರು ಮಠದ ಆರ್ಥಿಕ ನಷ್ಟವೇ ಈ ನಿರಾಸಕ್ತಿಗೆ ಕಾರಣವಾಗಿದ್ದು, ಸನ್ಯಾಸ ಯೋಗವಿದ್ದರೂ ಉತ್ತರಾಧಿಕಾರಿಯಾಗಲು ಹಲವರ ನಿರಾಸಕ್ತಿ ವಹಿಸಿದ್ದಾರೆ. ಈ ಕುರಿತು ಕಳೆದ ಕೆಲ ವಾರಗಳಿಂದ ಮೂಡಿರುವ ಗೊಂದಲಗಳೇ ಕಾರಣ ಎನ್ನಲಾಗಿದೆ.

    ಮಠಾಧೀಶರುಗಳ ಚಾತುರ್ಮಾಸ್ಯದ ನಂತರ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಉತ್ತರಾಧಿಕಾರಿ ಆಯ್ಕೆ ಸಮಿತಿಯಲ್ಲಿ ಶಿರೂರು ಮಠದ ವಿದ್ವಾಂಸರಿಗೂ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

  • ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

    ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

    ಉಡುಪಿ: ಇಲ್ಲಿನ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವು ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಲೇ ಇದ್ದು, ಶಿರೂರು ಮೂಲ ಮಠದಲ್ಲಿ ಸಿಕ್ಕಿದ ಬಾಟಲಿಯೊಂದು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ.

    ಮಠದಲ್ಲಿ ಸಿಕ್ಕಿರುವ ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿಗಳು ಈಗ ಹರಿದಾಡುತ್ತಿದ್ದು, ಬಾಟಲಿಯಲ್ಲಿದ್ದ ದ್ರವವನ್ನು ಗೋಡಂಬಿ ಜ್ಯೂಸ್ ಎಂದೂ ಸ್ವಾಮೀಜಿಯ ಆಪ್ತ ಮಹಿಳೆ ಕುಡಿಸಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಈ ಬಾಟಲಿ Morinzhi ಎಂಬ ಹೆಸರಿನ ಡ್ರಿಂಕ್ ಆಗಿದ್ದು, ಪೊಲೀಸರು ಸದ್ಯ ಈ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.

    ಮೊರಿಜೈನ್ ಆರೋಗ್ಯ ವೃದ್ಧಿ ಪಾನೀಯವಾಗಿದ್ದು, ಇದನ್ನೇ ವಿಷದ ಬಾಟಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ ಆ ಹೆಸರಿನ ಶಕ್ತಿವರ್ಧಕ ಪಾನೀಯ ಲಭ್ಯವಿದ್ದು, ಸ್ವಾಮೀಜಿ ತಮ್ಮ ಆಪ್ತ ಮಹಿಳೆಯಿಂದ ತರಿಸಿಕೊಂಡು ಈ ಪಾನೀಯ ಕುಡಿಯುತ್ತಿದ್ರಾ? ಅಥವಾ ಮಹಿಳೆಯೇ ತಂದು ಕುಡಿಸಿದ್ರಾ? ಎಂಬ ಶಂಕೆಯ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಶಿರೂರು ಸ್ವಾಮೀಜಿ ಆಪ್ತರು ನೀಡಿರುವ ಮಾಹಿತಿ ಪ್ರಕಾರ, ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೂ ಈ ಮಹಿಳೆ ಬಂದಿರಲಿಲ್ಲ. ಅನಾರೋಗ್ಯಕ್ಕೀಡಾದಾಗಲೂ ಆಸ್ಪತ್ರೆಗೆ ಬಂದಿರಲಿಲ್ಲ. ಹಾಗಾದ್ರೆ ಸ್ವಾಮೀಜಿ ಜೊತೆ ಕೊನೆಗಳಿಗೆಯಲ್ಲಿ ಆಪ್ತೆ ಎನಿಸಿಕೊಂಡಿದ್ದ ಮಹಿಳೆ ಮುನಿಸಿಕೊಂಡಿರಬಹುದೇ ಎಂಬ ಸಂಶಯ ವ್ಯಕ್ತವಾಗುತ್ತಿದೆ.

  • ಊಟ ನೀಡ್ತಿದ್ದ ಮಹಿಳೆ ಮೈ ಮೇಲೆ ಶಿರೂರು ಶ್ರೀಗಳ ಆಭರಣಗಳು

    ಊಟ ನೀಡ್ತಿದ್ದ ಮಹಿಳೆ ಮೈ ಮೇಲೆ ಶಿರೂರು ಶ್ರೀಗಳ ಆಭರಣಗಳು

    ಉಡುಪಿ: ನಿಗೂಢವಾಗಿ ಸಾವನ್ನಪ್ಪಿದ ಶಿರೂರು ಸ್ವಾಮೀಜಿ ಗಳಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದ ಮಹಿಳೆ ವಿಚಾರಣೆ ನಡೆಸಲಾಗುತ್ತಿದೆ. ಶಿರೂರು ಶ್ರೀಗಳ ಆಭರಣಗಳು ಮಹಿಳೆಯ ಮೈಮೇಲೆ ಕಂಡುಬಂದಿದ್ದು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ರಮ್ಯಾ ಶೆಟ್ಟಿ ಎಂಬ ಮಹಿಳೆ ಶ್ರೀ ಗಳಿಗೆ ಊಟ ವ್ಯವಸ್ಥೆ ಮಾಡುತ್ತಿದ್ದರು. ರಮ್ಯಾರನ್ನು ಬ್ರಹ್ಮಾವರದ ವ್ಯಕ್ತಯೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ರಮ್ಯಾ ಮಣಿಪಾಲದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಪ್ರತಿ ನಿತ್ಯ ತಾಯಿ ಜೊತೆ ಶಿರೂರು ಮೂಲ ಮಠಕ್ಕೆ ಆಗಮಿಸುತ್ತಿದ್ದ ರಮ್ಯಾ ಶ್ರೀಗಳಿಗೆ ಉಟ ತೆಗೆದುಕೊಂಡು ಬರುತ್ತಿದ್ದರು. ಹಲವು ಬಾರಿ ಮಠದಲ್ಲಿಯೇ ತಂಗುತ್ತಿದ್ದರೂ ಎಂದು ಹೇಳಲಾಗುತ್ತಿದೆ.

    ರಮ್ಯಾ ಶೆಟ್ಟಿ, ಇತ್ತೀಚೆಗೆ ಮೂಲಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು ಎಂಬ ಮಾಹಿತಿ ಮಠದ ಮೂಲಗಳಿಂದ ಲಭಿಸಿದ್ದು, ಪ್ರತಿ ಸೋಮವಾರ ಕೆಲಸಗಾರರಿಗೆ ಸಂಬಳವನ್ನು ರಮ್ಯಾ ನೀಡುತ್ತಿದ್ರು. ಶ್ರೀ ಗಳಿಗೆ ರಮ್ಯಾ ಹೇಗೆ ಆಪ್ತೆಯಾದಳು? ಶ್ರೀಗಳಿಗೆ ನೀಡುತ್ತಿದ್ದ ಆಹಾರದ ಪಟ್ಟಿ ಎಂಬುದರ ಬಗ್ಗೆ ಪೊಲೀಸರು ರಮ್ಯಾರಿಂದ ಮಾಹಿತಿ ಪಡೆಯುತ್ತಿದ್ದಾರೆ. ಸ್ವಾಮೀಜಿಗೆ ಭಕ್ತರಿಂದ ಉಡುಗೊರೆಯಾಗಿ ಬಂದಿದ್ದ ಚಿನ್ನಾಭರಣ ಮಹಿಳೆ ಮೈಮೇಲೆ ಇರುವುದು ಈಗ ಚರ್ಚೆಗೆ ಕಾರಣವಾಗಿದೆ. ಶಿರೂರು ಶ್ರೀ ತೊಡುತ್ತಿದ್ದ ಚಿನ್ನದ ಐದು ಕಡಗಗಳ ಪೈಕಿ ಒಂದನ್ನು ರಮ್ಯಾ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ರಮ್ಯಾ ಶೆಟ್ಟಿ ಮೈ ಮೇಲೆ ಶಿರೂರು ಸ್ವಾಮೀಜಿ ಕಡಗ, ಸರ ಇರುವುದರಿಂದ ರಮ್ಯಾ ಯಾಕಿಷ್ಟು ಆತ್ಮೀಯಳು ಎಂಬ ಪ್ರಶ್ನೆಯೂ ಎದ್ದಿದೆ.

    ಪೇಜಾವರಶ್ರೀ ಪತ್ರಿಕಾಗೋಷ್ಠಿಯಲ್ಲಿ, ಶಿರೂರು ಶ್ರೀಗಳು ಮಹಿಳೆ ಜೊತೆ ಸಂಪರ್ಕ ಇರುವುದಾಗಿ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿ ಹೇಳಿದ್ದ ಮಹಿಳೆ ಇವರೇನಾ? ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

     

  • ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಉಡುಪಿ: ಶಿರೂರು ಸ್ವಾಮೀಜಿ ಅವರು ತುಳುವಿನಲ್ಲಿ ಮಾತನಾಡಿರುವ ವಾಟ್ಸಪ್ ವಾಯ್ಸ್ ನೋಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಜ್ಜರಿಗೆ ಒಂದು ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್ ಆಗುತ್ತೆ. 50 ಲಕ್ಷ ಪಲಿಮಾರು ಸ್ವಾಮೀಜಿಗೆ. 50 ಲಕ್ಷ ಅವರಿಗೆ ಕೊಡಬೇಕಂತೆ ಎಂದು ಮಾತನಾಡಿದ್ದಾರೆ. ಸೋದೆ ಸ್ವಾಮೀಜಿ ವಿಶ್ವವಲ್ಲಭ ತೀರ್ಥಶ್ರಿಗಳ ಹೆಸರು ಪ್ರಸ್ತಾಪ ಮಾಡಿದ್ದಾರೆ.

    ಅವರ ಎಂಟು ಸಾವಿರ ಭಕ್ತರಿಂದ ಪ್ರತಿ ಮನೆಯಿಂದ ಒಂದು ಪವನ್ ಚಿನ್ನ ಒಟ್ಟುಗೂಡಿಸ್ತಾರಂತೆ. ಆದ್ರೆ ಆಡಿಯೋದಲ್ಲಿ ಯಾವುದೂ ಸ್ಪಷ್ಟ ಮಾಹಿತಿ ಇಲ್ಲ. ಯಾವ ಸಂದರ್ಭದಲ್ಲಿ ಯಾರಿಗೆ ಈ ಆಡಿಯೋ ಕಳುಹಿಸಿದ್ದಾರೋ ಎಂಬ ಬಗ್ಗೆ ಮಾಹಿತಿಯಿಲ್ಲ.

    ಪಟ್ಟದ ದೇವರನ್ನು ಮರಳಿ ನೀಡುವ ವಿಚಾರದಲ್ಲಿ ವ್ಯವಹಾರ ಮಾತುಕತೆ ನಡೆದಿತ್ತಾ? ಅಥವಾ ಯಾವುದೊ ಮಹತ್ವದ ಯೋಜನೆಗೆ ಹಣ ಸಂಗ್ರಹಿಸುವ ಬಗ್ಗೆ ನಡೆದ ಮಾತುಕತೆಯೋ ಸ್ಪಷ್ಟವಾಗಿಲ್ಲ. ಆಡಿಯೊದ ಮೂಲ ತನಿಖೆ ಮಾಡಿದ್ರೆ ಸಾಕಷ್ಟು ವಿಚಾರ ಬೆಳಕಿಗೆ ಬರುವ ಸಾಧ್ಯತೆ ಇದೆ.

    ಶಿರೂರು ಶ್ರೀ ವಾಟ್ಸಾಪ್ ವಾಯ್ಸ್ ನೋಟ್:

    ಆಗ ನೋಡಿದೆ ನಿನ್ನ ವಾಟ್ಸಪ್…
    ಭಾರಿ ಖುಷಿ ಆಯ್ತು.
    ಅಜ್ಜರದ್ದು ಒಂದು ಡಿಮ್ಯಾಂಡ್ ಉಂಟು ಮಾರಾಯಾ.
    ಅವರಿಗೆ ಒಂದು ಕೋಟಿ ಕೊಡಬೇಕಂತೆ.
    ಐವತ್ತು ಲಕ್ಷ ಪಲಿಮಾರು ಸ್ವಾಮೀಜಿಗೆ ಕೊಡಬೇಕಂತೆ.
    ಐವತ್ತು ಲಕ್ಷ ಅವರಿಗೆ (ಪೇಜಾವರ?) ಬೇಕಂತೆ.
    ಆಮೇಲೆ ಈ ಮ್ಯಾಟರ್ ಫಿನೀಷ್ ಅಂತೆ.

    ಆಮೇಲೆ ಏನೂಂತ ಅಂದ್ರೆ… ಕರ್ನಾಟಕದಲ್ಲಿ ಸೋದೆ ಮಠದ ಶಿಷ್ಯಂದಿರ ಒಟ್ಟು ಎಂಟು ಸಾವಿರ ಮನೆ ಉಂಟಂತೆ. ಎಂಟು ಸಾವಿರ ಮನೆಗೆ ಒಂದೊಂದು ಮನೆಯಿಂದ ಒಂದೊಂದು ಪವನ್ ಚಿನ್ನ ವ್ಯವಸ್ಥೆ ಮಾಡಿ ಕೊಡುತ್ತೇನೆ ಅಂತ ಹೇಳಿದ್ದಾನೆ. ವಿಶ್ವವಲ್ಲಭ (ಸೋದೆ ಮಠಾಧೀಶರು) ಹೇಳಿದ್ದಾನೆ. ಅದನ್ನು ಇವರು ಬೇಡುತ್ತಿದ್ದಾರೆ.

    ವಿಷಯ ಇವತ್ತು ಬೆಳಗ್ಗೆ ಗೊತ್ತಾಯ್ತು. ಇಷ್ಟೇ ವಿಷಯ, ಎಲ್ಲರಿಗೂ ತಿಳಿಸು ಆಯ್ತಾ ಅಂತ ಹೇಳಿದ್ದಾರೆ.

  • ಶಿರೂರು ಶ್ರೀಗಳಿಗೆ ಮೊಸರವಲಕ್ಕಿ ಕೊಟ್ಟವರು ಯಾರು?

    ಶಿರೂರು ಶ್ರೀಗಳಿಗೆ ಮೊಸರವಲಕ್ಕಿ ಕೊಟ್ಟವರು ಯಾರು?

    ಉಡುಪಿ: ಶಿರೂರು ಶ್ರೀಗಳು ಕೊನೆಯ ಬಾರಿಗೆ ಮಠದಲ್ಲಿ ಮೊಸರು ಅವಲಕ್ಕಿಯನ್ನು ಸೇವಿಸಿದ್ದರು. ಇದಾದ ಕೆಲ ಸಮಯದ ಬಳಿಕ ಶ್ರೀಗಳು ರಕ್ತದ ವಾಂತಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಕೊನೆಯ ಬಾರಿಗೆ ಮೊಸರು ಅವಲಕ್ಕಿ ನೀಡಿದ್ದು ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ವನ ಮಹೋತ್ಸವದಲ್ಲಿ ಭಾಗಿಯಾಗಿದ್ದ ಶ್ರೀಗಳು ಅಲ್ಲಿ ಯಾವುದೇ ಆಹಾರವನ್ನು ಸೇವಿಸಿರಲಿಲ್ಲವಂತೆ. ಸಂಜೆ ಮಠಕ್ಕೆ ಆಗಮಿಸಿದಾಗಲೇ ತಮ್ಮ ನೆಚ್ಚಿನ ಆಹಾರವಾದ ಮೊಸರು ಅವಲಕ್ಕಿ ತಿಂದಿದ್ದರು. ಅವಲಕ್ಕಿ ತಿಂದ ಬಳಿಕವೇ ಶ್ರೀಗಳಿಗೆ ಫುಡ್ ಪಾಯ್ಸನ್ ಆಗಿದೆ ಮಠದ ಮೂಲಗಳು ತಿಳಿಸಿದ್ದವು. ಶ್ರೀಗಳು ರಕ್ತದ ವಾಂತಿ ಮಾಡಿಕೊಳ್ಳುತ್ತಿದ್ದಂತೆ ಭಕ್ತವೃಂದ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿತ್ತು.

    ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಸದ್ಯ ಶ್ರೀಗಳ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಮಠವನ್ನು ಮೂರು ದಿನಗಳ ಕಾಲ ವಶಕ್ಕೆ ಪಡೆದು, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ್ದಾರೆ.

    ಪೇಜಾವರ ಶ್ರೀಗಳು ಗುರುವಾರ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಈ ಮೊದಲು ಲಾತವ್ಯ ಆಚಾರ್ಯರೊಂದಿಗೆ ಫೋನ್ ನಲ್ಲಿ ಮಾತನಾಡಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೆ. ಅವರಿಗೆ ಕೆಟ್ಟದಾದ ಕಂಚಿನ ಪಾತ್ರೆಯಲ್ಲಿ ಫಲಾಹಾರ ನೀಡಲಾಗಿತ್ತು. ಪಾತ್ರೆ ದೋಷದಿಂದ ಶಿರೂರು ಶ್ರೀಗಳು ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತಪಡಿಸಿದ್ದರು.

  • ಎಲ್ಲಿ ಹುಡುಕಿದ್ರೂ ಸ್ವಾಮೀಜಿ ಇಲ್ಲ – ಶಿರೂರು ಮಠದಲ್ಲಿ ರೂಬಿಯ ಮೂಕ ರೋಧನ!

    ಎಲ್ಲಿ ಹುಡುಕಿದ್ರೂ ಸ್ವಾಮೀಜಿ ಇಲ್ಲ – ಶಿರೂರು ಮಠದಲ್ಲಿ ರೂಬಿಯ ಮೂಕ ರೋಧನ!

    ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗೆ ಮನುಷ್ಯರ ಮೇಲೆ ಎಷ್ಟು ಪ್ರೀತಿ ಇತ್ತೋ ಅದಕ್ಕಿಂತ ಜಾಸ್ತಿ ಪ್ರಾಣಿಗಳ ಮೇಲೆ ಪ್ರೀತಿ ಇತ್ತು. ಇದಕ್ಕೆ ಉದಾಹರಣೆ ಮೂಲ ಮಠದಲ್ಲಿ ರೋಧಿಸುತ್ತಿರುವ ಶ್ವಾನ ರೂಬಿ.

    ಶಿರೂರು ಶ್ರೀಗಳ ಪ್ರಿಯವಾದ ಸಾಕು ನಾಯಿ ರೂಬಿ. ಸ್ವಾಮೀಜಿ ವೃಂದಾವನಸ್ಥರಾದ ನಂತರ ರೂಬಿಯ ರೋಧನ ಮುಗಿಲು ಮುಟ್ಟಿದೆ. ಸ್ವಾಮೀಜಿಯನ್ನು ಕಾಣದೆ ಮಠದ ಸುತ್ತ ಇದೀಗ ಶ್ವಾನ ರೂಬಿ ಸುತ್ತಾಡುತ್ತಿದೆ. ಹತ್ತು ಸಾವಿರ ರೂಪಾಯಿ ಕೊಟ್ಟು ಸ್ವಾಮೀಜಿಯೇ ನಾಯಿಮರಿ ತಂದಿದ್ರು. ಸದ್ಯ ರೂಬಿ ಯಾರನ್ನು ಮಠದ ಹತ್ತಿರ ಸುಳಿಯಲು ಬಿಡದೆ ಕೋಪಗೊಂಡಿದೆ. ಮಠದ ಸುತ್ತಮುತ್ತ, ಪೊಲೀಸರಿದ್ದು ಅವರನ್ನೂ ಮಠದ ಒಳಗೆ ಹೋಗಲು ರೂಬಿ ಅಡ್ಡಿಪಡಿಸುತ್ತಿದೆ ಎಂದು ತಿಳಿದು ಬಂದಿದೆ.

    ಇದಲ್ಲದೆ ಮಠದಲ್ಲಿ ಬಿಳಿ ನಾಯಿಯೊಂದು ಇದ್ದು, ಕಳೆದ ಬಾರಿ ಹಸು ಕಳ್ಳತನವಾದಾಗ ಅದೇ ನಾಯಿ ಕಳ್ಳರನ್ನು ಓಡಿಸಿತ್ತು. ತಿಂಗಳ ಹಿಂದೆ ಡ್ರಮ್ಮರ್ ಶಿವಮಣಿ ಬಂದಾಗ ಅವರೂ ಕೂಡಾ ಸ್ವಾಮೀಜಿಯ ನಾಯಿ ಮೇಲೆ ಪ್ರೀತಿ ತೋರಿದ್ದರು.

  • ಕೊಡಮಣಿತ್ತಾಯ ದೈವದ ಶಾಪಕ್ಕೆ ತುತ್ತಾದ್ರಾ ಶಿರೂರು ಶ್ರೀ?

    ಕೊಡಮಣಿತ್ತಾಯ ದೈವದ ಶಾಪಕ್ಕೆ ತುತ್ತಾದ್ರಾ ಶಿರೂರು ಶ್ರೀ?

    ಉಡುಪಿ: ಶಿರೂರು ಸ್ವಾಮೀಜಿ ವೃಂದಾವನ ಸೇರುತ್ತಿದ್ದಂತೆಯೇ ಅವರ ಬಗೆಗಿನ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    5 ವರ್ಷಗಳ ಹಿಂದಿನ ವಿಡಿಯೋ ಇದಾಗಿದ್ದು, ಇದೀಗ ಶ್ರೀಗಳು ವಿಧಿವಶರಾದ ಬಳಿಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗ್ತಿದೆ. ಈ ಮೂಲಕ ಲಕ್ಷ್ಮೀವರ ತೀರ್ಥರು ಧರ್ಮದೈವವಾದ ಶ್ರೀಕೊಡಮಣಿತ್ತಾಯನ ಉಗ್ರಕೋಪಕ್ಕೆ ಗುರಿಯಾದರೇ ಎಂಬ ಪ್ರಶ್ನೆಗಳನ್ನು ಭಕ್ತರು ಮಾಡುತ್ತಿದ್ದಾರೆ.

    ಉಡುಪಿಯ ಪಡುಬಿದ್ರೆಯ ಬಾಲುಪೂಜಾರಿ ಎಂಬವರ ಕುಟುಂಬದ ಮನೆಯಲ್ಲಿ ನಡೆದ ನೇಮದ ಸಂದರ್ಭದಲ್ಲಿ ಸ್ವಾಮೀಜಿ ಅನುಚಿತ ವರ್ತನೆ ತೋರಿದ್ದರು ಎನ್ನಲಾಗಿದೆ. ಇದೇ ಘಟನೆ ಶ್ರೀಗಳ ಬದುಕಿಗೆ ಕುತ್ತಾಯಿತೇ ಎಂಬ ಪ್ರಶ್ನೆಗಳನ್ನು ಹಾಕಿ ಜನ ವೀಡಿಯೋ ಶೇರ್ ಮಾಡುತ್ತಿದ್ದಾರೆ.

    ಶ್ರೀಗಳ ಅನುಚಿತ ವರ್ತನೆ ದೈವಾರಾಧನೆಯ ರಂಗದಲ್ಲೂ ಸಾಕಷ್ಟು ಚರ್ಚೆಗೆ ದಾರಿಯಾಗಿತ್ತು. ಅದರ ಪರಿಣಾಮ ಇದಾಗಿರಬಹುದೇ ಎಂಬುದು ಈಗ ಚರ್ಚೆಯಾಗುತ್ತಿದೆ. ದರ್ಶನದಲ್ಲಿ ಇರುವಾಗ ಕೊಡಮಣಿತ್ತಾಯ ದೈವದ ಬಳಿ ಮಾತನಾಡುವ ಸ್ವಾಮೀಜಿ, ನೀನು ನನಗೆ ಏನು ಕೊಟ್ಟಿದ್ದೀಯ? ಏನೂ ಕೊಟ್ಟಿಲ್ಲ ಎಂದು ಸನ್ನೆ ಮಾಡಿದ್ದರು. ನಿನ್ನಿಂದ ಏನೂ ಸಹಾಯವಾಗಿಲ್ಲ ಅಂತ ದೈವದ ಮುಂದೆ ಹೇಳಿಕೊಂಡಿದ್ದರು.

    ಸದ್ಯ ಇದೀಗ ಈ ವೀಡಿಯೋ ಬಹು ಚರ್ಚಿತ ವಿಷಯವಾಗಿದೆ. ದೈವದ ನಡೆಯಲ್ಲಿ ನಡೆಯುವ ಕಟ್ಟು-ಪಾಡುಗಳ ವಿಡಂಬನೆ ಜೀವಹಾನಿಗೆ ಕಾರಣವಾಗಿರಬಹುದು ಎಂದು ದೈವ ಭಕ್ತರು ಹೇಳುತ್ತಿದ್ದಾರೆ.

  • ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀಗಳ ಅಂತ್ಯಕ್ರಿಯೆ

    ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀಗಳ ಅಂತ್ಯಕ್ರಿಯೆ

    ಉಡುಪಿ: ನಗರದಿಂದ 20 ಕಿಲೋ ಮೀಟರ್ ದೂರದಲ್ಲಿರುವ ಮೂಲ ಶಿರೂರು ಮಠದಲ್ಲಿ ಮಧ್ವ ಸಂಪ್ರದಾಯದಂತೆ ಲಕ್ಷ್ಮಿವರ ಸ್ವಾಮೀಜಿಗಳ ಅಂತ್ಯಕ್ರಿಯೆ ನಡೆದಿದೆ.

    ಶಿರೂರು ಮೂಲ ಮಠದ ಒಳಾಂಗಣದಲ್ಲಿ ಬೃಂದಾವನ ರಚನೆ ಮಾಡಿ, ಶ್ರೀಗಳು ಬಳಸುತ್ತಿದ್ದ ಕರ್ಪೂರ, ಕಾಳು ಮೆಣಸು, ಉಪ್ಪು, ಪೂಜಾ ಪರಿಕರಗಳು ಮತ್ತು ಹತ್ತಿ ಇವುಗಳನ್ನೆಲ್ಲಾ ಬೃಂದಾವನದಲ್ಲಿ ಇರಿಸಿ, ಕುಳಿತ ಸ್ಥಿತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತು. ಹೆರ್ಗ ವೇದವ್ಯಾಸ ಭಟ್ಟರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ್ರು.

    ಎರಡು ದಿನಗಳ ಹಿಂದೆ ಅಸ್ವಸ್ಥರಾಗಿದ್ದ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇವತ್ತು ಬೆಳಗ್ಗೆ ನಿಧನರಾಗಿದ್ದರು. ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ಶ್ರೀಗಳನ್ನು ಕೃಷ್ಣಮಠಕ್ಕೆ ತರಲಾಗಿತ್ತು. ಅಲ್ಲಿ ಶಿರೂರು-ಸೋದೆ ದ್ವಂದ್ವ ಮಠದಿಂದ ಸಿದ್ಧಪಡಿಸಲಾದ ಬಿದಿರಿನ ಬುಟ್ಟಿಯಲ್ಲಿರಿಸಿ ತುಳಸಿ ಮಾಲೆಯನ್ನು ಹಾಕಲಾಯ್ತು. ಕನಕನ ಕಿಂಡಿ ಮೂಲಕ ಶ್ರೀಗಳ ದೇಹಕ್ಕೆ ಕೃಷ್ಣನ ದರ್ಶನ ಮಾಡಿಸಲಾಯ್ತು.

    ಅಲ್ಲಿಂದ ಶೀರೂರು ಮಠಕ್ಕೆ ತೆಗೆದುಕೊಂಡು ಹೋಗಲಾಯ್ತು.  ಮಾಧ್ವ ಸಂಪ್ರದಾಯದಂತೆ ವಿಧಾನ ನೆರವೇರಿಸಿ ಅಂತ್ಯಕ್ರಿಯೆ ಮಾಡಲಾಯಿತು. ವಿಠಲ ದೇವರ ಆರಾಧಕರಾಗಿದ್ದ ಶ್ರೀಗಳು, ಕೊನೆ ಕ್ಷಣದಲ್ಲೂ ವಿಠಲನ ನಾಮಜಪಿಸಿ ಪ್ರಾಣ ಬಿಟ್ಟರು ಅಂತ ತಿಳಿದು ಬಂದಿದೆ.

    ಶ್ರೀಗಳು ವಿಧಿವಶರಾದ ಹಿನ್ನೆಲೆಯಲ್ಲಿ ಉಡುಪಿ ರಥಬೀದಿ ಸ್ತಬ್ಧವಾಗಿತ್ತು. ಶಾಲಾ, ಕಾಲೇಜು, ಅಂಗಡಿ ಮುಂಗಟ್ಟು ಬಂದ್ ಮಾಡಿ ಶೋಕ ಆಚರಿಸಲಾಯ್ತು. ಈ ಮಧ್ಯೆ, ಆಷಾಢ ಮುಗಿಯೋವರೆಗೆ ಉತ್ತರಾಧಿಕಾರಿ ನೇಮಕ ಇಲ್ಲ ಅಂತ ಕೃಷ್ಣಮಠ ಸ್ಪಷ್ಟಪಡಿಸಿದೆ.

  • ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ

    ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ – ರಹಸ್ಯ ಬಿಚ್ಚಿಟ್ಟ ಪೇಜಾವರ ಶ್ರೀ

    ಕಾರವಾರ: ಶಿರೂರು ಶ್ರೀಗಳು ನನಗೆ ಮಕ್ಕಳಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದರಿಂದ ಅವರಿಗೆ ಪಟ್ಟದ ದೇವರನ್ನು ಕೊಡಲಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

    ಶಿರೂರು ಶ್ರೀ ಗಳ ಅಂತಿಮ ದರ್ಶನಕ್ಕೆ ಹೋಗದ ಕುರಿತು ಸ್ವಷ್ಟನೆ ನೀಡಿ ಶಿರಸಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಶಿರೂರು ಶ್ರೀಗಳು ಸನ್ಯಾಸತ್ವಕ್ಕೆ ಭ್ರಷ್ಟರಾಗಿದ್ದರು ಎಂಬುದರ ಬಗ್ಗೆ ನಮ್ಮ ಬಳಿ ಮಾಹಿತಿಗಳಿವೆ. ಅದ್ದರಿಂದ ಅವರನ್ನು ಪೀಠಾಧಿಪತಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸ್ವಾಮಿಗಳಾದ ಮೇಲೆ ಧರ್ಮ ಬೇಕು. ಅದ್ದರಿಂದ ಅವರು ಮಠಾಧೀಶರಲ್ಲ, ಅವರು ಸನ್ಯಾಸವನ್ನು ಬಿಟ್ಟಿದ್ದಾರೆ, ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ ಎಂದರು.

    ಶಿರೂರು ಶ್ರೀಗಳ ಮೇಲೆ ಮಠಾಧೀಶರಿಗೆ ದ್ವೇಷವಿಲ್ಲ. ನನ್ನ ಅವರ ಮಧ್ಯೆ ಉತ್ತಮ ವಿಶ್ವಾಸವಿತ್ತು. ಆದರೆ ಕೆಲವು ನೈತಿಕ, ತಾತ್ವಿಕ ಕಾರಣಗಳಿಂದ ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ. ಅವರ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಶಿರೂರು ಶ್ರೀಗಳನ್ನು ಪೀಠಾಧಿಪತಿ ಅಲ್ಲ ಎಂದು ಎಲ್ಲರೂ ತೀರ್ಮಾನ ಮಾಡಿ ಒಪ್ಪಿಕೊಂಡಿದ್ದೇವೆ. ಅವರು ಸನ್ಯಾಸ ಜೀವನದಿಂದ ಭ್ರಷ್ಟರಾಗಿದ್ದಾರೆ ಅವರಿಗೆ ಮಗನಿದ್ದಾನೆ. ತನ್ನ ಮಗನೆಂದು ಎಲ್ಲರಿಗೂ ತೋರಿಸಿದ್ದಾರೆ. ಅಂತವರು ಸ್ವಾಮಿಗಳಾಗಲು ಸಾಧ್ಯವಿಲ್ಲ ಎಂದರು.

    ಇದೇ ವೇಳೆ ಶಿರೂರು ಶ್ರೀಗಳ ಸಂಶಯಾಸ್ಪದ ಸಾವು ಕುರಿತು ಪೂರ್ವಾಶ್ರಮದ ಸಹೋದರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿ, ಅವರು ನಿನ್ನೆ ನನ್ನೊಂದಿಗೆ ಲಾತವ್ಯ ಆಚಾರ್ಯ ಮಾತನಾಡುವಾಗ ಶಿರೂರು ಶ್ರೀಗಳು ಫಲಾಹಾರವನ್ನು ತೆಗೆದುಕೊಂಡಿದ್ದರು. ಆಹಾರವನ್ನು ಒಂದು ಕೆಟ್ಟ ಕಿಲುಬು ಪಾತ್ರೆಯನ್ನು ನೀಡಲಾಗಿದೆ ಅಂದಿದ್ದರು. ಅವರ ಸಾವಿಗೆ ಪಾತ್ರೆ ದೋಷ ಕಾರಣವಾಗಿರುವ ಸಾಧ್ಯತೆಗಳಿವೆ. ನಿನ್ನೆ ಅನುಮಾನ ಬಾರದ್ದು ಇಂದು ಹೇಗೆ ಅನುಮಾನ ಬಂತು. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ಬಳಿಕ ಈ ಕುರಿತು ಎಲ್ಲಾ ವಿಷಯ ತಿಳಿಯುತ್ತದೆ ಎಂದರು.