Tag: ಶಿರಾಡಿ ಘಾಟಿ

  • ದೇವರ ದರ್ಶನ ಪಡೆದು ಹಿಂದಿರುಗುತ್ತಿದ್ದ ಭಕ್ತರ ಕಾರು ಪಲ್ಟಿ- ಓರ್ವ ಸಾವು

    ದೇವರ ದರ್ಶನ ಪಡೆದು ಹಿಂದಿರುಗುತ್ತಿದ್ದ ಭಕ್ತರ ಕಾರು ಪಲ್ಟಿ- ಓರ್ವ ಸಾವು

    ಮಂಗಳೂರು: ದೇವರ ದರ್ಶನ ಪಡೆದು ಹಿಂದಿರುಗುತ್ತಿದ್ದ ಪ್ರಯಾಣಿಕರ ಕಾರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಹೊಂಡಕ್ಕೆ ಉರುಳಿ ಬಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಬೆಂಗಳೂರು ಮೂಲದ ನಿವಾಸಿಗಳು ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದು ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಶಿರಾಡಿ ಘಾಟಿಯಲ್ಲಿ ಕಾರು ಚಲಿಸುತ್ತಿದ್ದಾಗ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ಈ ವೇಳೆ ಬೆಂಗಳೂರು ಮೂಲದ ಸುನಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಪ್ರಶಾಂತ್, ಮನೋಜ್ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಪಲ್ಟಿಯಾದ ಪರಿಣಾಮ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಾಟಿ ಹೆದ್ದಾರಿಯ ಬದಿಯಲ್ಲಿ ತಡೆಗೋಡೆ ರಚಿಸದ ಕಾರಣ ಅಪಾಯಕಾರಿ ಅಪಘಾತಗಳು ಮರುಕಳಿಸುತ್ತಲೇ ಇದೆ. ಅಲ್ಲದೆ ಮಳೆಗಾಲದ ಸಂದರ್ಭದಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

  • ಬಿಸಿಲೆ ಘಾಟಿಯಲ್ಲಿ ರಸ್ತೆ ಸಂಚಾರ ಆರಂಭ

    ಬಿಸಿಲೆ ಘಾಟಿಯಲ್ಲಿ ರಸ್ತೆ ಸಂಚಾರ ಆರಂಭ

    ಹಾಸನ: ಭಾರೀ ಮಳೆಯಿಂದ ರಸ್ತೆಗೆ ಗುಡ್ಡ ಜರಿದು ಸಂಪರ್ಕ ಕಡಿತಗೊಂಡಿದ್ದ ಬಿಸಿಲೆ ಘಾಟಿಯಲ್ಲಿ ರಸ್ತೆ ಸಂಚಾರ ಮತ್ತೆ ಆರಂಭವಾಗಿದೆ.

    ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಸಿಮೆಂಟ್ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಸಕಲೇಶಪುರ ಕರಾವಳಿ ಮಾರ್ಗದ ಸಂಪರ್ಕ ಸಂಪೂರ್ಣ ಕಡಿತವಾಗಿತ್ತು. ಈಗ ರಸ್ತೆಯನ್ನು ದುರಸ್ತಿ ಮಾಡಿದ್ದು ಲಘು ವಾಹನಗಳು ಸಂಚರಿಸಬಹುದಾಗಿದೆ.

    ಕೆಲ ದಿನಗಳ ಹಿಂದೆಯಷ್ಟೇ ಶಿರಾಡಿ ಘಾಟ್ ಆರಂಭವಾಗಿತ್ತು. ಈಗ ಬಿಸಿಲೆ ಘಾಟಿಯೂ ಆರಂಭಗೊಂಡಿದ್ದು ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆಯ ರಭಸಕ್ಕೆ 7 ಕಿಮೀ ಕಾಂಕ್ರೀಟ್ ರಸ್ತೆ ನಾಶವಾಗಿತ್ತು. ಬೆಟ್ಟದ ಮೇಲೆ ಸಣ್ಣ ತೊರೆಯಂತಿದ್ದ ನದಿ ದೊಡ್ಡ ನದಿಯಾಗಿ ರೂಪಾಂತರಗೊಂಡು ರಸ್ತೆ, ಸೇತುವೆಗಳೆಲ್ಲಾ ಕೊಚ್ಚಿಕೊಂಡು ಹೋಗಿತ್ತು.

    ರಸ್ತೆ ಸಂಪರ್ಕ ಸರಿಯಾದರೂ ರೈಲು ಮಾರ್ಗ ಇನ್ನೂ ಆರಂಭಗೊಂಡಿಲ್ಲ. ಸಕಲೇಶಪುರ ಭಾಗದಲ್ಲಿ ಭಾರೀ ಕಲ್ಲು ಮತ್ತು ಗುಡ್ಡಗಳು ಹಳಿ ಮೇಲೆ ಬಿದ್ದ ಪರಿಣಾಮ ದುರಸ್ತಿ ಕಾರ್ಯ ನಡೆಯುತ್ತಿದ್ದು, ಶೀಘ್ರವೇ ರೈಲು ಸೇವೆಯೂ ಆರಂಭಗೊಳ್ಳುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv