Tag: ಶಿರಾಡಿಘಾಟ್

  • ಹಾಸನದಲ್ಲಿ ವರುಣಾರ್ಭಟ; ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತ

    ಹಾಸನದಲ್ಲಿ ವರುಣಾರ್ಭಟ; ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತ

    – ಆತಂಕದಲ್ಲಿ ಓಡಾಡುತ್ತಿರೋ ವಾಹನ ಸವಾರರು

    ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಪರಿಣಾಮ ಶಿರಾಡಿಘಾಟ್ (Shiradi Ghat) ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ.

    ಸಕಲೇಶಪುರ (Sakaleshpura) ತಾಲ್ಲೂಕಿನ ದೋಣಿಗಾಲ್ ಬಳಿ ಘಟನೆ ನಡೆದಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ರಸ್ತೆಯ ಎರಡು ಬದಿಗಳಲ್ಲಿ ಕೆಲಸಗಾರರು 90 ಡಿಗ್ರಿ ಮಾದರಿಯಲ್ಲಿ ನೂರು ಅಡಿಗಳಷ್ಟು ಬಗೆದಿದ್ದಾರೆ. ಸಕಲೇಶಪುರ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಗೆ ಮಣ್ಣು ಕುಸಿತ ಕಂಡಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಮಳೆಗೆ ಕೊಚ್ಚಿಹೋದ 15 ವಾಹನಗಳು

    ತಡೆಗೋಡೆ ನಿರ್ಮಿಸಿದ್ದರೂ, ಮೇಲಿನಿಂದ ರಸ್ತೆಗೆ ಮಣ್ಣು ಕುಸಿಯುತ್ತಿದೆ. ಮೇಲ್ಭಾಗದಲ್ಲಿರುವ ಕಾಫಿ, ಸಿಲ್ವರ್ ಹಾಗೂ ಇತರೆ ಮರಗಳು ಮಣ್ಣಿನ ಸಮೇತ ನೆಲಕ್ಕುರುಳಿವೆ. ಬಿರುಗಾಳಿ ಸಹಿತ ಮಳೆ ಸುರಿಯುತ್ತಿರುವುದರಿಂದ ಭೂಕುಸಿತ ಆಗಿದೆ. ವಾಹನ ಸವಾರರು ಆತಂಕದಿಂದ ಪ್ರಯಾಣಿಕರು ಪರಿಸ್ಥಿತಿ ಎದುರಾಗಿದೆ.

    ವೀಕೆಂಡ್ ಹಿನ್ನೆಲೆಯಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ – ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು, ಧರೆಗುರುಳಿದ ಮರಗಳು

  • ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್‌ಫೀಲ್ಡ್ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಕೇಂದ್ರ ಒಪ್ಪಿಗೆ

    ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್‌ಫೀಲ್ಡ್ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಕೇಂದ್ರ ಒಪ್ಪಿಗೆ

    – ಹೆದ್ದಾರಿ ಕಾಮಗಾರಿಗೆ ಪರಿಸರವಾದಿಗಳ ತೀವ್ರ ಆಕ್ರೋಶ

    ಹಾಸನ: ಮಂಗಳೂರು-ಬೆಂಗಳೂರು (Mangaluru-Bengaluru) ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್ ಫೀಲ್ಡ್ ಮಾರ್ಗ ನಿರ್ಮಾಣ ಕಾಮಗಾರಿ ಕುರಿತು ಸಮಗ್ರ ಯೋಜನಾ ವರದಿ (DPR) ತಯಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

    2022ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸುರಂಗ ಮಾರ್ಗ ಕಾರ್ಯಸಾಧುವಲ್ಲ, ಇದಕ್ಕೆ ಭಾರೀ ಮೊತ್ತ ಬೇಕಾಗುತ್ತದೆ ಎಂದು ತಿರಸ್ಕರಿಸಿದ್ದರು. ಆದರೆ, ಸುರಂಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಹಾಸನ ಜಿಲ್ಲೆಯ ಮಲೆನಾಡು ಭಾಗದ ಶಾಸಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಇದೀಗ ಒಪ್ಪಿಗೆ ಸಿಕ್ಕಿದೆ. ಆದರೆ ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:

    ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಒಟ್ಟು 26 ಕಿ.ಮೀ ಉದ್ದದ ಯೋಜನೆ ಇದಾಗಿದ್ದು, 3.8 ಕಿ.ಮೀ ಸುರಂಗ ಇದ್ದರೆ, 10 ಕಿ.ಮೀ ರಸ್ತೆ ಇರಲಿದೆ. ಮಾರನಹಳ್ಳಿಯಿಂದ ಪ್ರಾರಂಭವಾಗಿ ಅಡ್ಡಹೊಳೆಯವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ಬಹಳಷ್ಟು ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ವಿವರವಾದ ಅಂದಾಜು ಮಾಡಬೇಕಿದೆ. ಕೆಲವು ಕಡೆಗಳಲ್ಲಿ ಫ್ಲೈ ಓವರ್‌ಗಳ ನಿರ್ಮಾಣ ಕೂಡ ಆಗಬೇಕಿದೆ. ಇದಕ್ಕೆ ದುಬಾರಿ ವೆಚ್ಚವಾಗುವುದರಿಂದ ಇದನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿದೆ. ಸುರಂಗ ನಿರ್ಮಾಣ ಮಾಡುವುದರಿಂದ ಭೂಸ್ವಾಧೀನ ಜವಾಬ್ದಾರಿ ಕೂಡ ರಾಜ್ಯ ಸರ್ಕಾರ ಹೆಗಲಿಗೆ ಬೀಳಲಿದೆ. ರಾಜ್ಯ ಸರ್ಕಾರವು ಅಲ್ಪ ಪ್ರಮಾಣದ ಅರಣ್ಯ ಭೂಮಿ ನೀಡಲು ಸಿದ್ಧವಿದ್ದರೆ, ಶಿರಾಡಿಘಾಟ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಣ ಹೂಡಿಕೆ ಮಾಡಲು ತಮ್ಮ ಇಲಾಖೆ ಪರಿಗಣಿಸಲಿದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈಗಾಗಲೇ ಭರವಸೆ ನೀಡಿದ್ದಾರೆ.

    ಸಕಲೇಶಪುರದಿಂದ ಗುಂಡ್ಯದವರೆಗೂ ಚತುಷ್ಪಥ ರಸ್ತೆ ಮಾಡಲು ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ರಸ್ತೆ ವಿಸ್ತರಣೆ ಮಾಡುತ್ತಿರುವುದರಿಂದ ಲಕ್ಷಾಂತರ ಗಿಡ ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಮುಂದೆ ಭಾರೀ ಅನಾಹುತ ಆಗಲಿದೆ ಎನ್ನುವ ಕಾರಣಕ್ಕೆ ಸುರಂಗ ಯೋಜನೆಯೇ ಉತ್ತಮ ಎಂದು ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಈಗಾಗಲೇ ರಸ್ತೆ ಕಾಮಗಾರಿಗೆ ಗುಡ್ಡಗಳನ್ನು ಕತ್ತರಿಸಿ ರಸ್ತೆ ವಿಸ್ತರಣೆ ಮಾಡಿರುವುದರಿಂದ ಮಳೆಗಾಲದಲ್ಲಿ ಭೂಕುಸಿತ ಉಂಟಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸುರಂಗ ಮಾರ್ಗ ನಿರ್ಮಾಣ ಮಾಡಿದರೆ ಪಶ್ಚಿಮಘಟ್ಟದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಲೆಕ್ಕಿಸದೆ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತಂದು ಸುರಂಗ ಮಾರ್ಗ ಮಾಡಲು ಮುಂದಾಗಿದೆ.

    ಪಶ್ಚಿಮಘಟ್ಟದಲ್ಲಿ ಸುರಂಗ ನಿರ್ಮಾಣ ಮಾಡುವುದರಿಂದ ಜೀವ ವೈವಿಧ್ಯತೆ ಮೇಲೆ ಮಾರಕ ಪರಿಣಾಮ ಬೀರಬಹುದು ಎನ್ನುವುದು ಪರಿಸರವಾದಿಗಳು ಹಾಗೂ ಮಲೆನಾಡು ಭಾಗದ ಜನರ ಆತಂಕವಾಗಿದೆ. ರಸ್ತೆ ಅಗಲೀಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾದರೆ, ಸುರಂಗ ಮಾರ್ಗ ಸ್ವಲ್ಪಮಟ್ಟಿಗೆ ಕಡಿಮೆ ಹಾನಿ ಮಾಡಬಹುದು ಎಂದು ಸರ್ಕಾರ ಬಿಂಬಿಸುತ್ತಿದ್ದರೂ ಪರಿಸರವಾದಿಗಳು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಸುರಂಗ ಯೋಜನೆಯ ಪರ ಮತ್ತು ವಿರುದ್ಧವಾಗಿಯೂ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಅಪರೂಪದ ಜೀವ ವೈವಿದ್ಯತೆಗಳಿರುವ ಪಶ್ಚಿಮಘಟ್ಟ ಅತೀ ಸೂಕ್ಷ್ಮ ಪರಿಸರ ವಲಯವಾಗಿರುವುದರಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯನಡೆಸುವುದು ಸೂಕ್ತವಲ್ಲವೆಂದು ಈಗಾಗಲೇ ಮಾಧವ್ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ತಿಳಿಸಿರುವುದರಿಂದ ಇದನ್ನೇ ಮುಂದಿಟ್ಟುಕೊAಡು ಪರಿಸರವಾದಿಗಳು ಹಾಗೂ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಕಳೆದ ಏಳು ವರ್ಷಗಳಿಂದ ಶಿರಾಡಿಘಾಟ್ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಇದಕ್ಕಾಗಿ ಗುಡ್ಡಗಳನ್ನು ಬಗೆದು ಪರಿಸರಕ್ಕೆ ಹಾನಿ ಮಾಡಲಾಗಿದೆ. ಇದರ ಜೊತೆಗೆ ಎತ್ತಿನಹೊಳೆ ಕಾಮಗಾರಿಗಾಗಿ ಸಾಕಷ್ಟು ಪಶ್ಚಿಮಘಟ್ಟ ನಾಶವಾಗಿದ್ದು, ಇದೀಗ ಟನಲ್ ನಿರ್ಮಾಣಕ್ಕೆ ಮುಂದಾಗಿರುವುದು ಪರಿಸರವಾದಿಗಳು, ಮಲೆನಾಡು ಭಾಗದ ಜನರು ಹಾಗೂ ಸರ್ಕಾರಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ.ಇದನ್ನೂ ಓದಿ:

     

  • ಶಿರಾಡಿಘಾಟ್‌ ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ – ಕೇಂದ್ರಕ್ಕೆ ಮನವರಿಕೆ ಮಾಡುತ್ತೇವೆಂದ ಸಿಎಂ

    ಶಿರಾಡಿಘಾಟ್‌ ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ – ಕೇಂದ್ರಕ್ಕೆ ಮನವರಿಕೆ ಮಾಡುತ್ತೇವೆಂದ ಸಿಎಂ

    ಹಾಸನ: ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಲು ಬಳಿ ಜೋರು ಮಳೆಯಿಂದಾಗಿ ಪದೇ ಪದೇ ಭೂಕುಸಿತ (Shiradi Ghat Landslide) ಸಂಭವಿಸುತ್ತಿರುವ ಶಿರಾಡಿಘಾಟ್‌ ಪ್ರದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ರಾಷ್ಟ್ರೀಯ ಹೆದ್ದಾರಿ (NHAI), ಚತುಷ್ಪಥ ರಸ್ತೆ ಮಾಡುತ್ತಿದ್ದಾರೆ. ಸುಮಾರು 38 ಕಿಮೀ ರಸ್ತೆ ಮಾಡುತ್ತಿದ್ದಾರೆ. ಮೇಲೆ ಸಡಿಲ ಮಣ್ಣು ಇದೆ. ಹೆಚ್ಚು ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು. 90 ಡಿಗ್ರಿ ಕಟಿಂಗ್ ಮಾಡಬಾರದು. 45 ಡಿಗ್ರಿ ಕಟ್ ಮಾಡಬೇಕು. ಆಗ ಭೂಕುಸಿತ ಆಗಲ್ಲ ಎಂದು ಹೇಳಿದರು.

    ಈ ವರ್ಷ ಹಾಸನ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ. ಶೇ.65ಕ್ಕೂ ಹೆಚ್ಚು ಮಳೆಯಾಗಿದೆ, ಸಕಲೇಶಪುರದಲ್ಲಿ ಶೇ.100ಕ್ಕೂ ಹೆಚ್ಚು ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೂಚನೆ ನೀಡಿದ್ದೇನೆ. ಮುಖ್ಯ ಕಾರ್ಯದರ್ಶಿ ಸಹ ಅವರಿಗೆ ಪತ್ರ ಬರೆಯುತ್ತಾರೆ. ನಾನು ದೆಹಲಿಗೆ ಹೋದಾಗ ನಿತಿನ್ ಗಡ್ಕರಿ ಅವರನ್ನೂ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತ ಆಗುತ್ತಿದೆ. ಸ್ಥಳೀಯರ ಅಭಿಪ್ರಾಯವನ್ನು ಕೇಂದ್ರ ಸಚಿವರಿಗೆ ತಿಳಿಸುತ್ತೇನೆ. ಭೂ ಕುಸಿತ ಸಮಸ್ಯೆಯಿಂದ ವಾಹನ ಓಡಾಟಕ್ಕೆ ಸಮಸ್ಯೆ ಆಗಿದೆ. ಅದಕ್ಕಾಗಿಯೇ ಇಲ್ಲಿಗೆ ಎಸ್‌ಡಿಆರ್‌ಎಫ್ ಟೀಂ ನಿಯೋಜನೆ ಮಾಡಿದ್ದೇವೆ. ಬೇಕಿದ್ದರೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸುತ್ತೇವೆ ಎಂದು ಅಭಯ ನೀಡಿದರು.

  • Video | ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತ – ಕೆಲವೇ ನಿಮಿಷಗಳ ಹಿಂದೆ ತೆರವಾಗಿದ್ದ ರಸ್ತೆ ಮತ್ತೆ ಬಂದ್

    Video | ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತ – ಕೆಲವೇ ನಿಮಿಷಗಳ ಹಿಂದೆ ತೆರವಾಗಿದ್ದ ರಸ್ತೆ ಮತ್ತೆ ಬಂದ್

    ಹಾಸನ: ನೋಡ ನೋಡುತ್ತಲೇ ಶಿರಾಡಿಘಾಟ್‌ನಲ್ಲಿ (Shiradi Ghat) ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಪರಿಣಾಮ ಕೆಲವೇ ನಿಮಿಷಗಳ ಹಿಂದೆಯಷ್ಟೇ ತೆರವಾಗಿದ್ದ ರಸ್ತೆ ಮತ್ತೆ ಬಂದ್‌ ಆಗಿದೆ. ಶಿರಾಡಿಘಾಟ್‌ನ ದೊಡ್ಡತಪ್ಲು ಬಳಿ ಗುರುವಾರ (ಆ.1) ಮತ್ತೆ ಭೂಕುಸಿತ ಸಂಭವಿಸಿದೆ. ದೊಡ್ಡ ಸದ್ದಿನೊಂದಿಗೆ ಗುಡ್ಡ ಕುಸಿಯುವ (Shiradi Ghat Landslide) ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಮೂರು ದಿನಗಳ ಪದೇ ಪದೇ ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತವಾಗಿದ್ದು, ಆತಂಕ ಹೆಚ್ಚಿಸಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಇಲ್ಲಿದೆ.

  • ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಚಾರ್ಮಾಡಿ ಘಾಟ್

    ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಚಾರ್ಮಾಡಿ ಘಾಟ್

    ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕಿಸುವ ಚಾರ್ಮಾಡಿ ಘಾಟಿ ಸಂಪೂರ್ಣ ಕಿತ್ತುಹೋಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಂಚಾರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಶಿರಾಡಿ ಘಾಟಿ, ಸಂಪಾಜೆ ಘಾಟಿ ಹೆದ್ದಾರಿ ಬಂದ್ ಆದ ಸಂದರ್ಭದಲ್ಲಿ ಚಾರ್ಮಾಡಿ ಘಾಟಿ ಮಾತ್ರ ಸಂಪರ್ಕ ರಸ್ತೆಯಾಗಿ ಉಳಿದಿತ್ತು. ಇದರಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿದ ಕಾರಣ ಘಾಟಿ ರಸ್ತೆ ಸಂಪೂರ್ಣ ಹಾಳಾಗಿದೆ. ಅಪಾಯಕಾರಿ ತಿರುವುಗಳಲ್ಲಿ ರಸ್ತೆ ಡಾಂಬರು ಕಿತ್ತು ಹೋಗಿ ಗುಂಡಿಗಳು ಬಿದ್ದಿದೆ.

    ಸದ್ಯ ಶಿರಾಡಿ ಘಾಟ್ ನಲ್ಲಿ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, 6 ಚಕ್ರದ ಘನ ವಾಹನಗಳು ಚಾರ್ಮಾಡಿ ಘಾಟ್ ಮೂಲಕವೇ ಸಂಚರಿಸುತ್ತಿದೆ. ಚಾರ್ಮಾಡಿ ಘಾಟ್ ಅತ್ಯಂತ ಕಿರಿದಾದ ರಸ್ತೆಯಾಗಿದ್ದರಿಂದ ವಾಹನಗಳು ಅಪಾಯಕಾರಿ ಸನ್ನಿವೇಶದಲ್ಲಿ ಚಾಲನೆ ಮಾಡುವ ಅನಿವಾರ್ಯ ಸೃಷ್ಟಿಯಾಗಿದೆ. ಹೀಗಾಗಿ ಅಪಾಯ ಸಂಭವಿಸುವ ಮುನ್ನ ಕನಿಷ್ಠ ರಸ್ತೆಗೆ ತೇಪೆ ಹಾಕುವ ಕಾರ್ಯ ಮಾಡಬೇಕಿದೆ ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

  • ಶಿರಾಡಿ, ಸಂಪಾಜೆ ಬಂದ್: ಚಾರ್ಮಾಡಿ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಶಿರಾಡಿ, ಸಂಪಾಜೆ ಬಂದ್: ಚಾರ್ಮಾಡಿ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್

    ಚಿಕ್ಕಮಗಳೂರು: ಸಂಪಾಜೆ, ಶಿರಾಡಿ ಘಾಟಿ ಬಂದ್ ಆಗಿರೋ ಹಿನ್ನೆಲೆ ಸಾವಿರಾರು ವಾಹನಗಳು ಚಾರ್ಮಾಡಿಘಾಟ್‍ನಲ್ಲಿ ಸಂಚರಿಸುತ್ತಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.

    ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟ್, ಆರಂಭದಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಗಡಿ ಮುಟ್ಟುವವರೆಗೂ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ದೊಡ್ಡ ಗಾಡಿಗಳ ಸಂಚಾರ ಕೂಡ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತೊಂದೊಡ್ಡುತ್ತಿವೆ. ನಾಲ್ಕೈದು ಕಿಮೀ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿರುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಜೊತೆಗೆ ಮಳೆ, ಗಾಳಿ, ದಟ್ಟವಾದ ಮಂಜಿನಿಂದ ಪ್ರಯಾಣಿಕರು ಕಂಗಾಲಾಗಿದ್ದು, ವಾಹನಗಳ ಮಂದಗತಿಯ ಸಂಚಾರದಿಂದ ಮೊದಲು ಬೆಳ್ತಂಗಡಿಯ ಗಡಿ ಮುಟ್ಟಿದರೆ ಸಾಕೆಂದು ಆತಂಕದಿಂದಲೇ ಸಂಚರಿಸುತ್ತಿದ್ದಾರೆ.

    ಶಿರಾಡಿ ಘಾಟ್ ನಲ್ಲಿ ಆಗಸ್ಟ್ 20 ರವರೆಗೆ ಲಘು ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಘಾಟ್ ನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವ ಕಾರಣ ಸಂಚಾರವನ್ನು ಬಂದ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv