ಗದಗ: ಕ್ರಿಮಿನಾಶಕ ಔಷಧ ಸಿಂಪಡಿಸಿದ ಆಹಾರ ಸೇವಿಸಿ ಸುಮಾರು 60ಕ್ಕೂ ಹೆಚ್ಚು ಕುರಿಗಳು (Sheeps) ಸಾವನ್ನಪ್ಪಿದ ಘಟನೆ ಶಿರಹಟ್ಟಿ (Shirahatti) ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿ ನಡೆದಿದೆ.
ಜಮೀನು ಅಥವಾ ಬದುವಿಗೆ ಕ್ರಿಮಿನಾಶಕ ಔಷಧ ಸಿಂಪಡಿಸಿರಬಹುದು. ಔಷಧ ಸಿಂಪಡಿಸಿದ ಹುಲ್ಲು ಸೇವಿಸಿ ಕುರಿಗಳು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಕಂಗಾಲಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ಪಶುವೈದ್ಯರು ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಪಶು ವೈದ್ಯಕೀಯ ವಿಜ್ಞಾನ ಸಂಸ್ಥೆ ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಪರಿಹಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ವಿದೇಶಿ ಬಾನಾಡಿಗಳ ಕಲರವ ಕಣ್ಮನ ಸೆಳೆಯುವಂತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಪಕ್ಷಿಗಳು ಲಗ್ಗೆ ಇಡುತ್ತಿವೆ.
ವಿಶೇಷ ಹಾಗೂ ಅಪರೂಪದ ಪಕ್ಷಿಯಾದ ಗ್ರೇಲ್ಯಾಗ್ ಹೆಬ್ಬಾತು ಎಂಬ ಪಕ್ಷಿ ಕೂಡ ಈ ಕೆರೆಗೆ ಆಗಮಿಸಿದೆ. ಚಳಿಗಾಲ ಬರುತ್ತಿದ್ದಂತೆ ಸಾವಿರಾರು ಕಿ.ಮೀ ದೂರದಿಂದ ಗದಗ ಜಿಲ್ಲೆಯ ಮಾಗಡಿ ಕೆರೆಗೆ ಅನೇಕ ಪಕ್ಷಿಗಳು ಬರುತ್ತವೆ. ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುವುದು ಮೂಲ ಕಾರಣ ಎನ್ನಲಾಗುತ್ತಿದೆ.ಇದನ್ನೂ ಓದಿ:60 ಅಡಿ ಬಾವಿಗೆ ಬಿದ್ದರೂ ಬಚಾವ್ ಆದ 94ರ ವೃದ್ಧೆ!
ಮಾಗಡಿ ಕೆರೆಯು ಒಟ್ಟು 134 ಎಕರೆ ವಿಸ್ತೀರ್ಣ ಹೊಂದಿದ್ದು, ಇಲ್ಲಿಗೆ 130ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ವಿವಿಧ ದೇಶಗಳಿಂದ ವಲಸೆ ಬರುವುದಾಗಿ ಪಕ್ಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಂಗೋಲಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಸೈಬೇರಿಯಾ, ಮಲೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಲಡಾಖ್, ಟಿಬೆಟ್, ರಷ್ಯಾ, ಬ್ರೆಜಿಲ್, ಬರ್ಮಾ ಸೇರಿದಂತೆ ಅನೇಕ ದೇಶಗಳಿಂದ ಸಹಸ್ರಾರು ಪಕ್ಷಿಗಳು ಇಲ್ಲಿ ಬಂದು ಸೇರುತ್ತಿವೆ.
ಗೀರು ತಲೆಯ ಬಾತುಕೋಳಿ (ಬಾರ್ ಹೆಡೆಡ್ ಗೂಸ್) ಹಂಸಗಳ ಜಾತಿಗೆ ಸೇರಿದ ಪೇಂಟೆಡ್ ಸ್ಟಾರ್ಕ್, ಬಾರ್ ಹೆಡೆಡ್ ಗೂಜ್, ಪಟ್ಟೆ ತಲೆ ಹೆಬ್ಬಾತು ಪಕ್ಷಿಗಳು, ಬ್ರಾಹ್ಮೀಣಿ ಡಕ್, ವೈಟ್ ಬಿಸ್, ಬ್ಲಾಕ್ ಬಿಸ್, ಬ್ಲಾಕ್ ನೆಕ್ಕಡ್, ಲೀಟಲ್ ಕಾರ್ಮೊರಂಟ್, ಬ್ಲಾಕ್ ಐಬಿಸ್, ಪೈಂಟೆಡ್ ಸ್ಟಾರ್ಕ್ ಹಾಗೂ ಸ್ಪೂನ್ ಬಿಲ್ ಮತ್ತು ಕೇಳದ ನಾರ್ದನ್ ಶೆಲ್ವರ್, ಲಿಟ್ಲ ಕಾರ್ಪೋರಲ್ಸ್, ಅಟಲ್ರಿಂಗ್ ಪ್ಲೋವರ್, ಲೊಮನ್ ಡೇಲ್, ವುಡ್ ಸ್ಟಾಂಡ್, ಪೈಪರ್, ಗ್ರಿವನ್ ಟೇಲ್, ಬ್ಲಾಕ್ ಡ್ರಾಂಗೋ, ರೆಡ್ ಢ್ರೋಟ್ ಮತ್ತು ಪೆಡ್ಡಿ ಪ್ರೀಪೆಟ್ ಹೀಗೆ ಅನೇಕ ಜಾತಿಯ ಪಕ್ಷಿಗಳು ಕೆರೆಯಲ್ಲಿ ಕಾಣಸಿಗುತ್ತವೆ. ಕೃಷಿ ಪ್ರದೇಶ ಇರುವುದರಿಂದ ಧಾನ್ಯಗಳು ಇಲ್ಲಿ ಯಥೇಚ್ಚವಾಗಿ ದೊರೆಯುತ್ತವೆ.
ಸುಮಾರು 4 ರಿಂದ 5 ಸಾವಿರ ಪಕ್ಷಿಗಳು ಈಗಾಗಲೇ ಮಾಗಡಿ ಕೆರೆಗೆ ಬಂದಿವೆ. ಸೂರ್ಯೋದಯ ಆಗುತ್ತಿದ್ದಂತೆ ಚಿಲಿಪಿಲಿ, ಕಲರವ ಮೂಲಕ ಕೆರೆಗೆ ಆಗಮಿಸುತ್ತವೆ. ಸೂರ್ಯಾಸ್ತದ ನಂತರ ಅಲ್ಲಿಂದ ಅಕ್ಕಪಕ್ಕದ ಗುಡ್ಡಗಾಡು ಪ್ರದೇಶ, ಅರಣ್ಯ ಪ್ರದೇಶ, ಹುಲ್ಲುಗಾವಲು ಪ್ರದೇಶಕ್ಕೆ ಹೋಗುತ್ತವೆ. ಅರಣ್ಯ ಇಲಾಖೆಯವರು ಈ ವರ್ಷ ಇನ್ನೂ ಹೆಚ್ಚಿನ ಪಕ್ಷಿಗಳು ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಮಾಗಡಿ ಪಕ್ಷಿಧಾಮವು ರಾಮ್ಸಾರ್ ವೆಟ್ಲ್ಯಾಂಡ್ ಸ್ಥಾನಮಾನವನ್ನು ಪಡೆದುಕೊಂಡಿದೆ. ಈ ವಿದೇಶಿ ಬಾನಾಡಿಗಳನ್ನು ನೋಡಲು ರಾಜ್ಯದ ನಾನಾ ಭಾಗಗಳಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಪಕ್ಷಿ ಪ್ರೇಮಿಗಳು ಸಾಕಷ್ಟು ಜನ ಬರುತ್ತಾರೆ. ಆದರೆ ಈ ಕುರಿತು ಮಾಹಿತಿ ಹಾಗೂ ನಾಮಫಲಕ ಇಲ್ಲದೆ ಇರುವುದು ಪಕ್ಷಿ ಪ್ರೇಮಿಗಳಿಗೆ ಬೇಸರ ತಂದಿದೆ.
ಕಳೆದ ವರ್ಷ ಸ್ವಚ್ಛತೆ ಇಲ್ಲದಿರುವುದರಿಂದ ಕೆರೆಯಲ್ಲಿಯೇ ಅನೇಕ ವಿದೇಶಿ ಪಕ್ಷಿಗಳು ಸಾವನ್ನಪ್ಪಿದ್ದವು. ಇದಕ್ಕೆ ಕಲುಷಿತ ನೀರು ಕಾರಣ ಎನ್ನುವುದು ತಿಳಿದು ಬಂದಿತ್ತು. ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿರುವ ತಾಣವು ಅವ್ಯವಸ್ಥೆಯ ಆಗರವಾಗಿರುವುದು ಸ್ಥಳೀಯ ಆಡಳಿತ ಮಂಡಳಿ, ಪರಿಸರ ಹಾಗೂ ಅರಣ್ಯ ಇಲಾಖೆ, ಜಿಲ್ಲಾಡಳಿತದ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಇಲಾಖೆಗಳು ಕೆರೆ ಅಭಿವೃದ್ಧಿಪಡಿಸುವ ಮೂಲಕ ವಿದೇಶಿ ಬಾನಾಡಿಗಳು ಹಾಗೂ ಪ್ರವಾಸಿಗರನ್ನು ಕೈಬಿಸಿಕರೆಯುವ ಕಾರ್ಯ ಮಾಡಬೇಕಿದೆ.ಇದನ್ನೂ ಓದಿ: UI ಚಿತ್ರ ‘ಸೂಪರ್’ ಸಿನಿಮಾದ ಮುಂದುವರೆದ ಭಾಗನಾ?- ಉಪೇಂದ್ರ ಹೇಳೋದೇನು?
ಗದಗ: ಜಿಲ್ಲೆಯ ಮೀಸಲು ಕ್ಷೇತ್ರ ಶಿರಹಟ್ಟಿಯ (Shirahatti) ಬಿಜೆಪಿಯಲ್ಲಿ (BJP) ಬಂಡಾಯ ಶುರುವಾಗಿದೆ. ಹಾಲಿ ಶಾಸಕ ರಾಮಣ್ಣ ಲಮಾಣಿ (Ramappa Lamani) ವಿರುದ್ಧ ಸ್ವಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕ್ಷೇತ್ರದ ಜನ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದಾರೆ.
1983ರಲ್ಲಿಯೂ ಬಂಡಾಯ ಕಹಳೆ ಮೊಳಗಿ ಕ್ಷೇತ್ರದಲ್ಲಿ ಬಾರಿ ಅಚ್ಚರಿಯ ಬೆಳವಣಿಗೆ ಆಗಿತ್ತು. ಈಗ 2023ರಲ್ಲಿ ಅಂದರೆ, 40 ವರ್ಷದ ನಂತರ ಮತ್ತೆ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಕಹಳೆ ಮೊಳಗಿಸುವ ಲಕ್ಷಣಗಳಿವೆ. ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ಈಗಲೇ ಭಿನ್ನಮತ ಸ್ಪೋಟವಾಗಿದೆ. ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಹೋಗಲು ಯತ್ನಿಸಿ ಸೋತರು; ರಾಜ್ಯ ರಾಜಕಾರಣದಲ್ಲೇ ಗೆಲುವು ಕಂಡರು!
ಹಾಲಿ ಶಾಸಕರಿಗೆ ಟಿಕೆಟ್ ಕೊಡಬೇಡಿ ಎಂದು ಅತೃಪ್ತ ಕಾರ್ಯಕರ್ತರಿಂದ ಶಕ್ತಿ ಪ್ರದರ್ಶನದ ಮೂಲಕ ರಾಜ್ಯ ಹಾಗೂ ಕೇಂದ್ರ ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ದಾರೆ. ಇದೇ ಏ.3 ರಂದು ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಜಗದ್ಗುರು ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಕ್ಷೇತ್ರದ ಬಿಜೆಪಿ ಅತೃಪ್ತ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಿದ್ದರು.
ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕಿನ ಬಿಜೆಪಿ ಮಾಜಿ ಶಾಸಕರ ವಿರುದ್ಧ ಮಾಜಿ ಹಾಗೂ ಹಾಲಿ ಜಿ.ಪಂ, ತಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಈ ಮೂರು ತಾಲೂಕಿನ ಅನೇಕ ಗ್ರಾಮಗಳ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಒಟ್ಟಾಗಿ ಶಾಸಕರ ವಿರುದ್ಧ ಶಕ್ತಿ ಪ್ರದರ್ಶನ ನಡೆಸಿದ್ದರು. ಈ ಬಾರಿ ರಾಮಣ್ಣ ಲಮಾಣಿಗೆ ಟಿಕೆಟ್ ಕೊಡಬೇಡಿ ಎಂದು ರಾಜ್ಯ ಹಾಗೂ ಕೇಂದ್ರ ಹೈಕಮಾಂಡ್‍ಗೆ ನೇರವಾಗಿ ಸಂದೇಶ ರವಾನಿಸಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿಯಿಂದ ಒಟ್ಟು 10 ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ ಶಾಸಕ ರಾಮಣ್ಣ ಹೊರತಾಗಿ ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ಅಂತಹ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸುತ್ತೇವೆ. ಹಾಲಿ ಶಾಸಕರಿಗೆ ಟಿಕೆಟ್ ನೀಡಿದರೆ ಇನ್ನುಳಿದ 9 ಜನ ಬಿಜೆಪಿ ಆಕಾಂಕ್ಷಿಗಳನ್ನು ಒಟ್ಟುಗೂಡಿಸಿ ಒಬ್ಬರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲ್ಲಿಸುತ್ತೆವೆ. ಶಾಸಕ ರಾಮಣ್ಣನನ್ನು ಸೋಲಿಸುತ್ತೇವೆ ಎಂಬ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ (Election) 30 ಸಾವಿರ ಮತಗಳ ಲೀಡ್‍ನಲ್ಲಿ ಗೆದ್ದಿದ್ದ ಶಾಸಕರಿಗೆ ಸಚ್ಚಾರಿತ್ರ್ಯ ಇಲ್ಲ. ಅವರ ದುರ್ನಡತೆಯ ಕಾರಣದಿಂದ ಕಾರ್ಯಕರ್ತರು ಬೇಸತ್ತಿದ್ದಾರೆ. ಎಲ್ಲಾ ಕೆಲಸಕ್ಕೂ ಕುಟುಂಬಸ್ಥರ ಹಸ್ತಕ್ಷೇಪ ಹಾಗೂ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಪಕ್ಷದ ನಾಯಕರು, ಕಾರ್ಯಕರ್ತರ ಕಡೆಗಣನೆ, ಗುತ್ತಿಗೆದಾರರಿಗೆ ಮಣೆ ಹಾಕುವುದರಿಂದ ಜನ ಶಾಸಕರ ವಿರುದ್ಧ ತಿರುಗಿದ್ದಾರೆ.
ಶಾಸಕರಿಗೆ 73 ವರ್ಷ ವಯಸ್ಸಾಗಿದೆ. ಹೊಸ ಅಭ್ಯರ್ಥಿಗೆ ಅವಕಾಶ ಸಿಗಬೇಕು. ಶಾಸಕರ ಸಂಬಂಧಿಗಳ ಲಂಚದ ದಾಹದಿಂದ ಕ್ಷೇತ್ರದ ಜನಕ್ಕೆ ಸಮಸ್ಯೆಯಾಗಿದೆ. ಇಂತಹ ಅನಕ್ಷರಸ್ಥ ಶಾಸಕ ನಮಗೆ ಬೇಡ ಎಂದು ಬಹಿರಂಗವಾಗಿ ಕಾರ್ಯಕರ್ತರು ಬಂಡಾಯ ಎದ್ದಿದ್ದಾರೆ.
1983ರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಲ್ಲಿ ಹೀಗೆ ಬಂಡಾಯದ ಬಾವುಟ ಹಾರಿಸಲಾಗಿತ್ತು. ಕಾಂಗ್ರೆಸ್ (Congress) ಪಕ್ಷದಿಂದ ಗೋಳಪ್ಪ ಉಪನಾಳ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದ್ದರು. ಆಗ ಆರ್.ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದರು. ಆದರೂ ಕ್ಷೇತ್ರದ ಜನಾಭಿಪ್ರಾಯ ತಳ್ಳಿಹಾಕಿ ಕುಂದಗೋಳದ ನಾನಾಸಾಹೇಬ್ ಕುಲಕರ್ಣಿ ಅವರಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿತ್ತು. ಅದರ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು ಒಟ್ಟಾಗಿ ಗೋಳಪ್ಪ ಉಪನಾಳ ಅವರನ್ನು ಪಕ್ಷೇತರರಾಗಿ ನಿಲ್ಲಿಸಿ ಬಹುಮತಗಳಿಂದ ಆರಿಸಿ ತಂದಿದ್ದರು. ಅಕಸ್ಮಾತ್ ಬಿಜೆಪಿ ಹಾಲಿ ಶಾಸಕನಿಗೆ ಟಿಕೆಟ್ ನೀಡಿದರೆ 1983 ರಲ್ಲಿ ಆದ ಬಂಡಾಯ ಕಹಳೆ 2023ರಲ್ಲೂ ಮರುಕಳಿಸುವ ಲಕ್ಷಣಗಳಿವೆ.
ಕ್ಷೇತ್ರದಲ್ಲಿ ಅನ್ಯ ಪಕ್ಷಕ್ಕಿಂತ ಸ್ವಪಕ್ಷದಿಂದಲೇ ಪ್ರಬಲವಾದ ವಿರೋಧಿ ಅಲೆಯನ್ನು ಶಾಸಕ ರಾಮಪ್ಪ ಲಮಾಣಿ ಎದುರಿಸುತ್ತಿದ್ದಾರೆ. ಒಟ್ಟಿನಲ್ಲಿ ಶಿರಹಟ್ಟಿ ಕ್ಷೇತ್ರದಲ್ಲಿ ಮುಂಖಡರ ಹಠಾವೋ ಬಿಜೆಪಿ ಬಚಾವೋ ಅಭಿಯಾನ ಶುರುವಾಗಿದೆ. ಇದನ್ನೂ ಓದಿ: ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಕೇದಾರಲಿಂಗಯ್ಯ
-ಚೆನ್ನೈನಿಂದ ಬಂದ 17 ಜನರಲ್ಲಿ ಓರ್ವನಿಗೆ ಸೋಂಕು
-ಕ್ವಾರಂಟೈನ್ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ
ಗದಗ: ಕೊರೊನಾ ಸೋಂಕಿತ (ರೋಗಿ 1178) ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಓಡಾಟ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚೆನ್ನೈನಿಂದ ಬಂದಿದ್ದ 17 ಜನರಲ್ಲಿ ಓರ್ವನಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಇದೀಗ ಶಿರಹಟ್ಟಿ ಪಟ್ಟಣದ ಜನ ಆತಂಕಕ್ಕೆ ಒಳಗಾಗಿದ್ದಾರೆ.
17 ಜನರ ಕುಟುಂಬ ಚೆನ್ನೈನಿಂದ ಗದಗ ಜಿಲ್ಲೆಯ ಶಿರಹಟ್ಟಿಗೆ ಸ್ವಂತ ವಾಹನದಲ್ಲಿ ಬಂದಿದ್ದರು. ಈ ವೇಳೆ ಇವರನ್ನು ತಡೆದ ಅಧಿಕಾರಿಗಳು ಎಲ್ಲರನ್ನು ಶಿರಹಟ್ಟಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ 17 ಜನರ ಪೈಕಿ ಕೇವಲ ಆರು ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದಾರೆ. ವಾಹನದಲ್ಲಿ ಬಂದ ಮಕ್ಕಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಆರು ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿದ ಬಳಿಕ 17 ಜನರಿಗೆ ಶಿರಹಟ್ಟಿ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಆಗುವಂತೆ ಹೇಳಿ ಕಳುಹಿಸಿದ್ದಾರೆ. 17 ಜನರ ಜೊತೆ ಯಾವ ಅಧಿಕಾರಿಯೂ ತೆರಳಿಲ್ಲ. ಹೀಗಾಗಿ 17 ಜನರಲ್ಲಿ ಓರ್ವ ಶಿರಹಟ್ಟಿ ಪಟ್ಟಣದಲ್ಲಿ ಸುತ್ತಾಡಿ ಮಕ್ಕಳಿಗೆ ಆಹಾರ ಮತ್ತು ಅವಶ್ಯಕ ವಸ್ತುಗಳನ್ನು ಖರೀದಿಸಿಕೊಂಡು ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ್ದಾನೆ.
ಚೆನ್ನೈನಿಂದ ಬಂದು ಕೋವಿಡ್-19 ಪರೀಕ್ಷೆಗೆ ಒಳಗಾದ ವ್ಯಕ್ತಿಯನ್ನು ಪಟ್ಟಣದಲ್ಲಿ ಸಂಚರಿಸಲು ಅಧಿಕಾರಿಗಳು ಹೇಗೆ ಅವಕಾಶ ನೀಡಿದ್ರು ಎಂದು ಶಿರಹಟ್ಟಿ ನಿವಾಸಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಪರೀಕ್ಷೆಯ ಬಳಿಕ ಎಲ್ಲರನ್ನು ಅಧಿಕಾರಿಗಳ ಅಥವಾ ಪೊಲೀಸರ ನೇತೃತ್ವದಲ್ಲಿ ಕ್ವಾರಂಟೈನ್ ಕೇಂದ್ರ ಶಿಫ್ಟ್ ಮಾಡಬೇಕಿತ್ತು. ಅವರಿಗೆ ತೆರಳಲು ಸೂಚಿಸಿದ್ದರಿಂದ ಸೋಂಕಿತ ಪಟ್ಟಣದಲ್ಲಿ ಸುತ್ತಾಡಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ವಾರಂಟೈನ್ ಕೇಂದ್ರದಲ್ಲಿಯೂ ಈ ಎಲ್ಲರನ್ನು ಒಂದೇ ರೂಮಿನಲ್ಲಿ ಇರಿಸಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಇನ್ನುಳಿದ 11 ಜನರನ್ನು ಕೊರೊನಾ ಪರೀಕ್ಷೆಗೆ ಏಕೆ ಒಳಪಡಿಸಲಿಲ್ಲ. ಹೊರ ರಾಜ್ಯದಿಂದ ಬಂದವನ್ನು ಸರಿಯಾಗಿ ಕ್ವಾರಂಟೈನ್ ಮಾಡುವಲ್ಲಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.