Tag: ಶಿಕ್ಷೆ

  • ಅಪ್ರಾಪ್ತ ಮಕ್ಕಳ ವಾಹನ ಚಾಲನೆಗೆ ಅನುಮತಿ ನೀಡಿದ್ದಕ್ಕೆ 69 ಪೋಷಕರಿಗೆ ಜೈಲು

    ಅಪ್ರಾಪ್ತ ಮಕ್ಕಳ ವಾಹನ ಚಾಲನೆಗೆ ಅನುಮತಿ ನೀಡಿದ್ದಕ್ಕೆ 69 ಪೋಷಕರಿಗೆ ಜೈಲು

    ಹೈದರಾಬಾದ್: ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಆರೋಪದಡಿ ಕಳೆದ ಒಂದು ತಿಂಗಳಿನಲ್ಲಿ 69 ಪೋಷಕರು ಆಂಧ್ರಪ್ರದೇಶ ರಾಜಧಾನಿ ಹೈದರಾಬಾದ್ ನಗರದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ಕಳೆದ ಕೆಲ ತಿಂಗಳಿನಿಂದ ಹೈದರಾಬಾದ್ ಟ್ರಾಫಿಕ್ ಪೊಲೀಸರು ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡುವುದರ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದರು. ಈ ವೇಳೆ 14 ರಿಂದ 16 ವರ್ಷದ ಮಕ್ಕಳು ಬೈಕ್, ಸ್ಕೂಟರ್, ತ್ರಿಚಕ್ರ ವಾಹನ ಮತ್ತು ಕಾರು ಚಾಲನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 69 ಅಪ್ರಾಪ್ತರ ಪೋಷಕರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ದಿನದಿಂದ ಮೂರು ದಿನಗಳ ವರೆಗೆ ಪೋಷಕರಿಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ರಂಗನಾಥ್ ಮಾಹಿತಿ ನೀಡಿದ್ದಾರೆ.

    ಜನವರಿ ಮೊದಲ ವಾರದಲ್ಲಿ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಅಪ್ರಾಪ್ತರು ಸಾವನ್ನಪ್ಪಿದ್ದ ಬಳಿಕ ಫೆಬ್ರವರಿ ಮೊದಲ ವಾರದಲ್ಲಿ ಅಭಿಯಾನ ಆರಂಭಿಸಲಾಗಿತ್ತು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ದಂಡ ಮಾತ್ರ ಪಡೆಯಲಾಗುತ್ತಿತ್ತು. ಆದರೆ ಇದು ಹೆಚ್ಚು ಪರಿಣಾಮಕಾರಿ ಆಗದ ಕಾರಣ ಕಠಿಣ ಕ್ರಮಕೈಗೊಳ್ಳಲು ಮುಂದಾಗಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.

    ಅಪ್ರಾಪ್ತರು ವಾಹನ ಚಾಲನೆ ಮಾಡುವುದರಿಂದ ಹೆಚ್ಚು ಅಪಘಾತಗಳಿಗೆ ಕಾರಣವಾಗುತ್ತಿದೆ. ಅಲ್ಲದೇ ಇಂತಹ ಘಟನೆಗಳಲ್ಲಿ ಅಪ್ರಾಪ್ತರು ತಮ್ಮ ಜೀವ ಕಳೆದುಕೊಳ್ಳುವುದರೊಂದಿಗೆ ಇತರರ ಜೀವಕ್ಕೂ ಅಪಾಯಕಾರಿಯಾಗುತ್ತಿದ್ದಾರೆ. ಸುಪ್ರೀಂ ಕೋರ್ಟ್ ಈ ಕುರಿತ ಪ್ರಕರಣಗಳ ಬಗ್ಗೆ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯಗಳು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿವೆ.

    ಇಂತಹ ಪ್ರಕರಣಗಳನ್ನು ವಾಹನ ಕಾಯ್ದೆಯ 180 (ಅನಧಿಕೃತ ವ್ಯಕ್ತಿಗೆ ವಾಹನ ಚಾಲನೆ ಮಾಡಲು ಅನುಮತಿ) ಮತ್ತು 181 (ಚಾಲನ ಪರವಾನಗಿ ಇಲ್ಲದೆ ಚಾಲನೆ) ಸೆಕ್ಷನ್ ಅಡಿಯಲ್ಲಿ ಪರಿಗಣಿಸಲಾಗುತ್ತಿದೆ. ಅಲ್ಲದೇ ಈ ಅಭಿಯಾನವನ್ನು ವರ್ಷದ ಕೊನೆಯವರೆಗೂ ಮುಂದುವರೆಸುವುದಾಗಿ ಡಿಜಿಪಿ ತಿಳಿಸಿದ್ದಾರೆ.

    10 ದಿನಗಳ ಹಿಂದೆ 10 ಜನ ಪೋಷಕರಿಗೆ ಶಿಕ್ಷೆಯಾಗಿತ್ತು. ಈಗ ಈ ಸಂಖ್ಯೆ ಏರಿಕೆಯಾಗಿದ್ದು, ಹೈದರಾಬಾದ್ ಪೊಲೀಸರ ಈ ಕಠಿಣ ನಿರ್ಧಾರಕ್ಕೆ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಕ್ಕಳು ಬೈಕ್ ಹಾಗೂ ವಾಹನ ಚಾಲನೆ ಮಾಡಿ ಉಂಟು ಮಾಡಬಹುದಾದ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ಬಾರ್ ನಲ್ಲಿ 32 ವರ್ಷದ ವ್ಯಕ್ತಿಯನ್ನ ಕೊಂದ 16 ಮಂದಿಗೆ ಜೀವಾವಧಿ ಶಿಕ್ಷೆ

    ಬಾರ್ ನಲ್ಲಿ 32 ವರ್ಷದ ವ್ಯಕ್ತಿಯನ್ನ ಕೊಂದ 16 ಮಂದಿಗೆ ಜೀವಾವಧಿ ಶಿಕ್ಷೆ

    ಮುಂಬೈ: 2012ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಯಾಣ್ ಕೋರ್ಟ್ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ಪ್ರಕರಣದಲ್ಲಿ 16 ಮಂದಿಯ ಆರೋಪ ಸಾಬೀತಾಗಿದ್ದು, ಕೊಲೆ, ಪಿತೂರಿ, ಸಾಕ್ಷಿ ನಾಶಕ್ಕಾಗಿ ಕೋರ್ಟ್ ಈ ಶಿಕ್ಷೆ ನೀಡಿ ತೀರ್ಪು ಪ್ರಕಟ ಮಾಡಿದೆ.

    ಏನಿದು ಪ್ರಕರಣ?: 2012ರ ಅಕ್ಟೋಬರ್ 3ರಂದು ವಿಕಾಸ್ ಪಾಟೀಲ್ ಎಂಬವರನ್ನ ಅವರು ಕೆಲಸ ಮಾಡುತ್ತಿದ್ದ ಬಾರ್‍ನಲ್ಲಿ ಕೊಲೆ ಮಾಡಲಾಗಿತ್ತು. ಕಾಕಾ ಪಾಟೀಲ್ ಎಂಬ ವ್ಯಕ್ತಿ ಕತ್ತಿಯಿಂದ ವಿಕಾಸ್ ಅವರನ್ನ ಕೊಚ್ಚಿ ಕೊಲೆ ಮಾಡಿದ್ದಾನೆಂದು ವಿಕಾಸ್ ಅವರ ಪತ್ನಿ ಹಾಗೂ ಇತರೆ ಕುಟುಂಬಸ್ಥರಿಗೆ ಮಾಹಿತಿ ಬಂದಿತ್ತು.

    ಮೃತ ವಿಕಾಸ್ ಅವರ ಪತ್ನಿ ಕೋರ್ಟ್ ನಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಕಟುಂಬಸ್ಥರು ನೋಡಿದಾಗ ವಿಕಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅವರು ಸಾವನ್ನಪ್ಪಿದ್ದರು. ಆರೋಪಿ ಕಾಕಾ ಪಾಟೀಲ್ ಹಾಗೂ ನನ್ನ ಪತಿಯ ನಡುವೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕಲಹವಿತ್ತು. ಹೀಗಾಗಿ ಅವರು ಕೆಲಸಕ್ಕೆ ಹೋಗುವಾಗಲೆಲ್ಲಾ ಕಾಕಾ ಪಾಟೀಲ್ ಕಿರುಕುಳ ನೀಡುತ್ತಿದ್ದ. ಹಲವಾರು ಬಾರಿ ಬೆದರಿಕೆ ಹಾಕಿದ್ದ ಎಂದು ಪತ್ನಿ ಹೇಳಿಕೆ ನೀಡಿದ್ದರು.

    ಆರೋಪಿಗಳು ಎರಡು ಕಾರ್‍ಗಳಲ್ಲಿ ಆಯುಧಗಳೊಂದಿಗೆ ಬಂದಿದ್ದರು. ಎಲ್ಲಾ 16 ಮಂದಿ ಸ್ಥಳದಲ್ಲಿದ್ದ ಬಗ್ಗೆ ಹಾಗೂ ಕೃತ್ಯದಲ್ಲಿ ಅವರ ಪಾತ್ರವಿರುವ ಬಗ್ಗೆ ಸಾಕ್ಷಿಗಳಿಂದ ದೃಢಪಟ್ಟಿದ್ದು, ಅವರ ಆರೋಪ ಸಾಬೀತಾಗಿದೆ ಎಂದು ವರದಿಯಾಗಿದೆ.

  • 16 ಟರ್ಕಿ ಮಹಿಳೆಯರಿಗೆ ಗಲ್ಲು ಶಿಕ್ಷೆ ವಿಧಿಸಿದ ಇರಾಕ್ ಕೋರ್ಟ್

    16 ಟರ್ಕಿ ಮಹಿಳೆಯರಿಗೆ ಗಲ್ಲು ಶಿಕ್ಷೆ ವಿಧಿಸಿದ ಇರಾಕ್ ಕೋರ್ಟ್

    ಬಾಗ್ದಾದ್: ಐಸಿಸ್ ಸಂಘಟನೆ ಸೇರಿದ್ದಕ್ಕೆ ಇರಾಕ್ ನ್ಯಾಯಾಲಯವೊಂದು ಟರ್ಕಿ ದೇಶದ 16 ಮಹಿಳೆಯರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ಆದೇಶ ಪ್ರಕಟಿಸಿದೆ.

    ವಿದೇಶದಿಂದ ಬಂದ ಮಹಿಳೆಯರು ಐಸಿಸ್ ಸಂಘಟನೆಗೆ ಸೇರಿ ಬೆಂಬಲ ನೀಡುತ್ತಿರುವ ಕಾರಣದಿಂದ ಇರಾಕ್ ಸೇನೆ ಇಸ್ಲಾಮಿಕ್ ಸಂಘಟನೆ ಸೇರಿರುವ ವಿರುದ್ಧ ಕಾರ್ಯಾಚರಣೆ ನಡೆಸಿ ಬಂಧಿಸುತ್ತಿದೆ. ಕಳೆದ ಕೆಲ ದಿನಗಳಿಂದ ಸುಮಾರು 1,700 ಅಧಿಕ ವಿದೇಶಿ ಮಹಿಳೆಯರನ್ನು ಬಂಧಿಸಿರುವುದಾಗಿ ಇರಾಕ್ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮಹಿಳೆಯರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಮುನ್ನ ಅವರ ಮೇಲಿನ ಆರೋಪಗಳ ಕುರಿತು ವಿಚಾರಣೆ ನಡೆಸಲಾಗಿದ್ದು, ಈ ಮಹಿಳೆಯರು ಐಸಿಸ್ ಸಂಘಟನೆ ಭಯಾನಕ ದಾಳಿ ನಡೆಸಲು ಬೆಂಬಲ ನೀಡಿದ್ದರು. ಪ್ರಕರಣಗಳಿಗೆ ಸಾಕ್ಷ್ಯಗಳು ಸಿಕ್ಕಿದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ ಎಂದು ಇರಾಕ್ ನ ಕೇಂದ್ರ ಕ್ರಿಮಿನಲ್ ಕೋರ್ಟ್ ನ್ಯಾಯಾಧೀಶ ಅಬ್ದುಲ್ ಸತ್ತರ್ ಅಲ್ ಬರ್ಕರ್ ಅವರ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    2014 ರಿಂದ ಇಸ್ಲಾಮಿಕ್ ಉಗ್ರರು ನಡೆಸುತ್ತಿರುವ ಭಯೋತ್ಪಾದನೆಗೆ ಹಲವು ಮಹಿಳೆಯರು ಬೆಂಬಲ ಸೂಚಿಸಿ ಇರಾಕ್ ಮತ್ತು ಸಿರಿಯಾಗೆ ಆಗಮಿಸಿದ್ದರು. ಕಳೆದ ಆಗಸ್ಟ್ ನಲ್ಲಿ ಇರಾಕ್ ಸೈನಿಕರು ಕುರ್ದಿಶ್ ಪೆಶ್ಮೆರ್ಗಾ ಸೇನೆ ಮೇಲೆ ದಾಳಿ ನಡೆಸಿದ ವೇಳೆ ಸುಮಾರು 1,700 ಕ್ಕೂ ಹೆಚ್ಚಿನ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಶರಣಾಗಿದ್ದರು.

    ಕಳೆದ ಒಂದು ಒಂದು ವಾರದ ಹಿಂದೆಯಷ್ಟೇ ಟರ್ಕಿಯ ಮಹಿಳೆಗೆ ಮರಣದಂಡನೆ ಹಾಗೂ ಇತರೇ ರಾಷ್ಟ್ರೀಯತೆ ಹೊಂದಿರುವ 10 ಮಹಿಳೆಯರಿಗೆ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿತ್ತು. ಕಳೆದ ವರ್ಷದ ಐಸಿಸ್‍ಗೆ ಸೇರ್ಪಡೆ ಮಾಡಿದ ಆರೋಪದ ಅಡಿ ರಷ್ಯಾ ಮಹಿಳೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

    ವಿದೇಶದಿಂದ ಇರಾಕ್ ಮತ್ತು ಸಿರಿಯಾ ಗೆ ಆಗಮಿಸುವ ಮಹಿಳೆಯರು ಸ್ವ ಇಚ್ಛೆಯಿಂದ ಐಸಿಸ್ ಸಂಘಟನೆಗೆ ಸೇರಿ ಉಗ್ರರನ್ನೇ ಮದುವೆಯಾಗುತ್ತಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡಲು ಸಹಕಾರ ನೀಡುತ್ತಾರೆ.

  • 1ನೇ ಕ್ಲಾಸ್ ವಿದ್ಯಾರ್ಥಿಗೆ ಮೂತ್ರ ಮಿಕ್ಸ್ ಮಾಡಿದ ಜ್ಯೂಸ್ ಕುಡಿಯುವ ಶಿಕ್ಷೆ ನೀಡಿದ ಶಿಕ್ಷಕ

    1ನೇ ಕ್ಲಾಸ್ ವಿದ್ಯಾರ್ಥಿಗೆ ಮೂತ್ರ ಮಿಕ್ಸ್ ಮಾಡಿದ ಜ್ಯೂಸ್ ಕುಡಿಯುವ ಶಿಕ್ಷೆ ನೀಡಿದ ಶಿಕ್ಷಕ

    ಹೈದರಾಬಾದ್: ಒಂದನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಮೂತ್ರ ಮಿಶ್ರಿತ ಜ್ಯೂಸ್ ಕುಡಿಯುವಂತೆ ಅಮಾನವೀಯ ಶಿಕ್ಷೆ ನೀಡಿರುವ ಘಟನೆ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ವಿದ್ಯಾರ್ಥಿಗೆ ಅಮಾನವೀಯ ಶಿಕ್ಷೆ ನೀಡಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‍ಪಿಆರ್ ವಿದ್ಯಾ ಕಾನ್ಸಪ್ಟ್ ಶಾಲೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಶಾಲೆಯ ದೈಹಿಕ ಶಿಕ್ಷಕ ವಿಜಯ್ ಕುಮಾರ್ ಬಂಧಿತ ಶಿಕ್ಷಕ.

    ಶಾಲೆಯಲ್ಲಿ ನಡೆದಿದ್ದೇನು?: ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬ ತಮಾಷೆಗಾಗಿ ತನ್ನ ಸಹಪಾಠಿಯ ಹಣ್ಣಿನ ಜ್ಯೂಸ್‍ನಲ್ಲಿ ಮೂತ್ರವನ್ನು ಬೆರೆಸಿದ್ದಾನೆ. ತನ್ನ ಸಹಪಾಠಿ ಜ್ಯೂಸ್ ಕುಡಿಯುವಾಗ ಅದರಲ್ಲಿ ಮೂತ್ರ ಮಿಕ್ಸ್ ಆಗಿದೆ ಕುಡಿಯಬೇಡ ಅಂತಾ ಹೇಳಿದ್ದಾನೆ. ಕೂಡಲೇ ಜ್ಯೂಸ್ ತಂದಿದ್ದ ವಿದ್ಯಾರ್ಥಿನಿ ದೈಹಿಕ ಶಿಕ್ಷಕ ವಿಜಯ್ ಕುಮಾರ್‍ಗೆ ದೂರು ನೀಡಿದ್ದಾಳೆ.

    ವಿಷಯ ತಿಳಿದ ವಿಜಯ್ ಕುಮಾರ್ ಮೂತ್ರ ಮಿಕ್ಸ್ ಆಗಿದ್ದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದಾರೆ. ವಿಷಯ ತಿಳಿದು ಶಾಲೆಗೆ ಬಂದ ಪೋಷಕರ ಮುಂದೆಯೂ ವಿಜಯ್ ಕುಮಾರ್ ತಾನು ನೀಡಿರುವ ಶಿಕ್ಷೆಯನ್ನು ಸಮರ್ಥಿಸಿಕೊಂಡಿದ್ದಾನೆ. ವಿಜಯ್ ಕುಮಾರ್ ವಿರುದ್ಧ ದೂರು ದಾಖಲಾದ ಬಳಿಕ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.

    ಶಿಕ್ಷಕನನ್ನು ವಿಚಾರಣೆ ನಡೆಸಿದ ಬಳಿಕ ಐಪಿಸಿ ಸೆಕ್ಷನ್ 270 (ಜೀವಕ್ಕೆ ಅಪಾಯವಾಗುವಂತಹ ಹಾನಿಕಾರಕ ಕ್ರಿಯೆಗೆ ಪ್ರಚೋದನೆ) ಮತ್ತು ಸೆಕ್ಷನ್ 75 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪಿ.ಎ.ಸೂರ್ಯನಾರಾಯಣ ರೆಡ್ಡಿ ಹೇಳಿದ್ದಾರೆ.

  • ವಿಡಿಯೋ ಲೀಕ್ ಆದ್ಮೇಲೆ ಅತ್ಯಾಚಾರವೆಂದ್ಳು, ಕೋರ್ಟ್ ನಲ್ಲಿ ಉಲ್ಟಾ ಹೊಡೆದ್ಳು!

    ವಿಡಿಯೋ ಲೀಕ್ ಆದ್ಮೇಲೆ ಅತ್ಯಾಚಾರವೆಂದ್ಳು, ಕೋರ್ಟ್ ನಲ್ಲಿ ಉಲ್ಟಾ ಹೊಡೆದ್ಳು!

    ಲಕ್ನೋ: ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ನೀಡಿದ್ದ ಯುವತಿ ನ್ಯಾಯಾಲಯದಲ್ಲಿ ಆರೋಪಿಯ ಪರ ಹೇಳಿಕೆ ನೀಡಿ ಆತನನ್ನು ಶಿಕ್ಷೆಯಿಂದ ತಪ್ಪಿಸುವ ಯತ್ನ ನಡೆಸಿದ ಘಟನೆ ಉತ್ತರ ಪ್ರದೇಶದ ಹಮ್ರೀಪುರ್ ಜಿಲ್ಲೆಯಲ್ಲಿ ನಡೆದಿದೆ.

    ಪ್ರೀತಿಯ ನಾಟಕವಾಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಯುವತಿ ದೂರಿನ ಆನ್ವಯ ಪೊಲೀಸರು ತನಿಖೆ ಸಹ ನಡೆಸಿದ್ದರು. ಈ ವೇಳೆ ಯುವತಿ ಮೇಲೆ ಅತ್ಯಾಚಾರ ನಡೆಸಿದ ವಿಡಿಯೋವನ್ನು ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ಹೆಚ್ಚು ವೈರಲ್ ಆಗಿತ್ತು. ಆದರೆ ಪ್ರಕರಣದ ವಿಚಾರಣೆ ನಡೆಸಿದ ವೇಳೆ ಯುವತಿ ನ್ಯಾಯಾಧೀಶರ ಮುಂದೆ ಆರೋಪಿ ಪರ ಹೇಳಿಕೆ ನೀಡಿದ್ದಾಳೆ. ಆತ ತನ್ನ ಮೇಲೆ ಅತ್ಯಾಚಾರ ನಡೆಸಿಲ್ಲ ಮತ್ತು ರೇಪ್ ನಡೆಸಿರುವ ವಿಡಿಯೋವನ್ನು ಬಿಡುಗಡೆಗೊಳಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.

    ಮೂಲಗಳ ಪ್ರಕಾರ ಆರೋಪಿಯ ಪರ ಯುವತಿಯೊಂದಿಗೆ ಸಂಧಾನವನ್ನು ನಡೆಸಲಾಗಿದ್ದು, ಪರಿಣಾಮವಾಗಿ ಆತನ ಪರ ಹೇಳಿಕೆ ನೀಡಿ ತನ್ನ ದೂರನ್ನು ಹಿಂಪಡೆದಿದ್ದಾಳೆ ಎಂದು ಹೇಳಲಾಗಿದೆ. ಪೊಲೀಸ್ ತನಿಖೆ ವೇಳೆ ಆರೋಪಿ ಉದ್ದೇಶ ಪೂರ್ವವಾಗಿ ವಿಡಿಯೋವನ್ನು ಲೀಕ್ ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿತ್ತು. ಆದರೆ ಈಗ ಯುವತಿಯ ಮೇಲೆ ಸುಳ್ಳು ಆರೋಪ ಮತ್ತು ಹೇಳಿಕೆ ನೀಡಿರುವ ಕುರಿತು ಪ್ರಕರಣ ದಾಖಲಾಗಿದೆ.

    ಘಟನೆ ಕುರಿತು ಹೇಳಿಕೆ ನೀಡಿರುವ ಯುವತಿಯ ತಾಯಿ, ಯಾರದರೂ ಮಗಳನ್ನು ಭೇಟಿ ಮಾಡಲು ಬಂದರೆ ಆಕೆ ತನ್ನ ಕೊಠಡಿಗೆ ತೆರಳಿ ಲಾಕ್ ಮಾಡಿಕೊಳ್ಳುತ್ತಾಳೆ. ಅಲ್ಲದೇ ಸರಿಯಾಗಿ ಊಟ ಮಾಡುತ್ತಿಲ್ಲ. ಘಟನೆಯಿಂದ ನಮ್ಮ ಮಗಳು ತೀವ್ರವಾಗಿ ನೊಂದಿದ್ದಾಳೆ. ಕೆಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ವೇಳೆ ಆಕೆಯನ್ನು ರಕ್ಷಣೆ ಮಾಡಿರುವುದಾಗಿ ತಿಳಿಸಿದ್ದಾರೆ.

    ವಕೀಲ ಶೈಲೇಶ್ ಸ್ವರೂಪ್ ಅವರು ತಿಳಿಸುವಂತೆ, ಸಂತ್ರಸ್ತೆ ಶಿಕ್ಷಕಿಯಾಗಿದ್ದು ಶಾಲೆಯಿಂದ ಹಿಂದಿರುಗುವ ವೇಳೆ ಗೋವಿಂದ್ ಒಮರ್ ಎಂಬಾತ ತನ್ನನ್ನು ಬಲವಂತವಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಅಲ್ಲದೇ ಈ ದೃಶ್ಯವಾಳಿಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಎಂದು ದೂರು ನೀಡಿದ್ದರು. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ವೇಳೆ ಯುವತಿ ತನ್ನ ದೂರಿಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾಳೆ. ಇದು ಹೆಚ್ಚಿನ ಅನುಮಾನಗಳಿಗೆ ಕಾರಣವಾಗಿದೆ. ಆದರೆ ಐಟಿ ಕಾಯ್ದೆಯ 66ಇ ಸೆಕ್ಷನ್ ಅಡಿ ವಿಡಿಯೋವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ವಿಡಿಯೋ ಆಧಾರಿಸಿ ವಿಚಾರಣೆ ನಡೆಸಿದ ನ್ಯಾ. ಶೋಲಾಜ್ ಚಂದ್ರ ಅವರು ಆರೋಪಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 1.5 ಲಕ್ಷ ರೂ. ಗಳನ್ನು ದಂಡವಾಗಿ ವಿಧಿಸಿದ್ದಾರೆ. ಅಲ್ಲದೇ ಪ್ರಕರಣದ ಸಂಬಂಧ ಯುವತಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

  • ಜಿಲ್ಲೆಯಲ್ಲೇ ಫಸ್ಟ್ ಟೈಂ – ರಾಮನಗರ ನ್ಯಾಯಾಲಯದಿಂದ ಅತ್ಯಾಚಾರಿಗೆ ಗಲ್ಲು ಶಿಕ್ಷೆ

    ಜಿಲ್ಲೆಯಲ್ಲೇ ಫಸ್ಟ್ ಟೈಂ – ರಾಮನಗರ ನ್ಯಾಯಾಲಯದಿಂದ ಅತ್ಯಾಚಾರಿಗೆ ಗಲ್ಲು ಶಿಕ್ಷೆ

    ರಾಮನಗರ: ಜಿಲ್ಲೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅತ್ಯಾಚಾರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

    9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಸಲೀಂಗೆ 50 ಸಾವಿರ ರೂ. ದಂಡ ಮತ್ತು ಗಲ್ಲು ಶಿಕ್ಷೆ ವಿಧಿಸಿ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದ 3ನೇ ಹೆಚ್ಚುವರಿ ನ್ಯಾಯಾಧೀಶ ಗೋಪಾಲಕೃಷ್ಣ ರೈ ಆದೇಶ ಪ್ರಕಟಿಸಿದ್ದಾರೆ.

    2012 ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದೇ ಬೆಂಗಳೂರು ದಕ್ಷಿಣ ತಾಲೂಕಿನ ತಾವರೇಕರೆಯಲ್ಲಿ 9 ವರ್ಷದ ಬಾಲಕಿ ಹೀನಾ ಕೌಸರ್ ಎಂಬಾಕೆಯನ್ನು ಅತ್ಯಾಚಾರ ಮಾಡಿ ಕೊಲೆಗೈಯಲಾಗಿತ್ತು. ಬೀಡಿ ತರಲು ಅಂಗಡಿಗೆ ಕಳುಹಿಸಿದ್ದ ಸಂದರ್ಭದಲ್ಲಿ ನೆರೆಮನೆಯಲ್ಲಿದ್ದ ಬೆಂಗಳೂರಿನ ಗೋರಿಪಾಳ್ಯದ ಸಲೀಂ (35) ಆಕೆಯನ್ನು ಮನೆಯ ಒಳಗೆ ಕರೆದು ಅತ್ಯಾಚಾರ ಮಾಡಿ ನಂತರ ಕೊಲೆಗೈದಿದ್ದ. ನಂತರ ಆರೋಪಿ ಸಲೀಂನನ್ನು ಬಂಧಿಸಿ ಪ್ರಕರಣ ದಾಖಲಾಗಿತ್ತು.

    ಪ್ರಕರಣದಲ್ಲಿ 23 ಕ್ಕೂ ಹೆಚ್ಚು ಸಾಕ್ಷಿಗಳು ಸಲೀಂ ವಿರುದ್ಧ ಸಾಕ್ಷಿ ನುಡಿದಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೂಡ ಕೃತ್ಯವನ್ನು ಸಾಬೀತುಪಡಿಸಿತ್ತು. ತೀರ್ಪು ಪ್ರಕಟವಾದ ಬಳಿಕ ಹೊರ ಬಂದ ಸಲೀಂ ವಾದ ಮಂಡಿಸಿದ್ದ ಸರ್ಕಾರಿ ಪರ ವಕೀಲರು ಹಾಗೂ ಮಾಧ್ಯಮದವರನ್ನು ಕಂಡು ಕೆಂಡಾಮಂಡಲವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೇ ಕೋರ್ಟ್ ಆವರಣದಲ್ಲಿ ಸಿಕ್ಕ ಕಲ್ಲನ್ನು ಮಾಧ್ಯಮದವರ ಮೇಲೆ ಹಾಗೂ ವಕೀಲರ ಮೇಲೆ ತೂರಿ ಪೊಲೀಸರ ಬಳಿ ಇದ್ದ ರೈಫಲ್ ಕಿತ್ತುಕೊಳ್ಳುವ ಯತ್ನ ನಡೆಸಿದ್ದಾನೆ.

    ಆರೋಪಿಯ ಈ ವರ್ತನೆಯನ್ನು ನೋಡಿ ಪೊಲೀಸರು ಮೂಕರಂತೆ ವರ್ತಿಸಿದ್ದಾರೆ. ಅಲ್ಲದೇ ಅಪರಾಧಿಯನ್ನ ಕೇವಲ ಸಮಾಧಾನ ಪಡಿಸಲು ಮುಂದಾದರು.

  • ಮೇವು ಹಗರಣ: ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್‍ಗೆ 3.5 ವರ್ಷ ಜೈಲು, 5 ಲಕ್ಷ ರೂ. ದಂಡ

    ಮೇವು ಹಗರಣ: ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್‍ಗೆ 3.5 ವರ್ಷ ಜೈಲು, 5 ಲಕ್ಷ ರೂ. ದಂಡ

    ರಾಂಚಿ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ವಿಶೇಷ ಕೋರ್ಟ್ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ 3.5 ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.

    ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್ ಅವರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. 3.5 ವರ್ಷದ ಜೈಲು, 5 ಲಕ್ಷ ರೂ. ದಂಡ ವಿಧಿಸಿದ್ದು, ಮೊತ್ತವನ್ನು ಪಾವತಿಸಲು ವಿಫಲವಾದ ಸಂದರ್ಭದಲ್ಲಿ 6 ತಿಂಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ನೀಡುವ ಕುರಿತು ತೀರ್ಪಿನಲ್ಲಿ ತಿಳಿಸಿದ್ದಾರೆ. ಇನ್ನು ಪ್ರಕರಣದ ಇತರೇ ಅಪರಾಧಿಗಳಾದ ಫೂಲ್ ಚಂದ್, ಮಹೇಶ್ ಪ್ರಸಾದ್, ಬೇಕ್ ಜೂಲಿಯಸ್, ಸುನೀಲ್ ಕುಮಾರ್, ಸುಧೀರ್ ಕುಮಾರ್ ಮತ್ತು ರಾಜ ರಾಮ್ರಿಗೂ 3.5 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಶುಕ್ರವಾರ ಲಾಲು ಪರ ವಕೀಲರ ಮೂಲಕ ಕೋರ್ಟ್ ಗೆ ಮನವಿಯನ್ನು ಸಲ್ಲಿಸಿ ಲಾಲು ಪ್ರಸಾದ್ ಆರೋಗ್ಯದ ಹದಗೆಟ್ಟಿದ್ದು, ಮಧುಮೇಹ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕೋಟ್ ಗಮನಕ್ಕೆ ತಂದಿದ್ದರು. ಅಲ್ಲದೇ ಲಾಲು ತಮ್ಮ ಮನವಿಯಲ್ಲಿ ಈ ಪಕ್ರರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಅಂತಾ ಹೇಳಿದ್ದರು.

    ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರು ಪ್ರಕರಣಗಳ ಪೈಕಿ ಒಂದು ಪ್ರಕರಣದ 22 ಆರೋಪಿಗಳ ಪೈಕಿ ಲಾಲು ಪ್ರಸಾದ್ ಯಾದವ್ ಸೇರಿ 15 ಆರೋಪಿಗಳು ದೋಷಿ ಎಂದು ರಾಂಚಿ ಸಿಬಿಐ ವಿಶೇಷ ಕೋರ್ಟ್ ಕಳೆದ ಡಿಸೆಂಬರ್ 23ರಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಜನವರಿ 3ಕ್ಕೆ ಕಾಯ್ದಿರಿಸಿತ್ತು. ಆದರೆ ಶುಕ್ರವಾರ ಮೂರನೇ ಬಾರಿಗೆ ತೀರ್ಪನ್ನು ಮುಂದೂಡಿ ತೀರ್ಪನ್ನು ಕಾಯ್ದಿರಿಸಿದ್ದರು.

    ಇದೇ ಪ್ರಕರಣ ಸಂಬಂಧ ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಸೇರಿ ಇತರೆ ಏಳು ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಖುಲಾಸೆಗೊಳಿಸಿದ್ದರು. ಈ ಹಿಂದೆ ಲಾಲು ವಿರುದ್ಧದ ಆರೋಪಗಳನ್ನು ಜಾರ್ಖಂಡ್ ಹೈಕೋರ್ಟ್ ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಲಾಲು ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈ ಬಿಡಲು ಸಾಧ್ಯವಿಲ್ಲ. ಎಲ್ಲಾ ಆರೋಪಗಳ ತನಿಖೆಯನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿತ್ತು.

    ಏನಿದು ಪ್ರಕರಣ?
    20 ವರ್ಷಗಳ ಹಿಂದೆ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ಛಾಯ್ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ. 2013ರ ಸೆಪ್ಟೆಂಬರ್ 3ರಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡೂವರೆ ತಿಂಗಳ ಕಾಲ ಬಿರ್ಸಾ ಮುಂಡಾ ಜೈಲಿನಲಿದ್ದ ಲಾಲೂ ಬಳಿಕ ಸುಪ್ರೀಂ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

     

  • ವಿಡಿಯೋ: ಮಹಿಳಾ ಉದ್ಯೋಗಿಗಳು ಪರಸ್ಪರ ಕಪಾಳಕ್ಕೆ ಹೊಡೆಯುವಂತೆ ಶಿಕ್ಷೆ ನೀಡಿದ ಸಂಸ್ಥೆ

    ವಿಡಿಯೋ: ಮಹಿಳಾ ಉದ್ಯೋಗಿಗಳು ಪರಸ್ಪರ ಕಪಾಳಕ್ಕೆ ಹೊಡೆಯುವಂತೆ ಶಿಕ್ಷೆ ನೀಡಿದ ಸಂಸ್ಥೆ

    ಬೀಜಿಂಗ್: ಮಹಿಳಾ ಉದ್ಯೋಗಿಗಳು ಒಬ್ಬರಿಗೊಬ್ಬರು ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಇವರೆಲ್ಲರೂ ಚೀನಾದ ನಾಂಚಂಗ್ ಜಿನ್‍ಹುವಾಯಾನ್ ಮೈಯೇ ಎಂಬ ಸೌಂದರ್ಯವರ್ಧಕಗಳ ಸಂಸ್ಥೆಯಲ್ಲಿ ಕೆಲಸ ಮಾಡೋ ಉದ್ಯೋಗಿಗಳಾಗಿದ್ದು, ಈ ವರ್ಷ ಕಳಪೆ ಪ್ರದರ್ಶನ ತೋರಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರ ಬಾಸ್ ನಿಮ್ಮ ಕೆಲಸ ಉಳಿಸಿಕೊಳ್ಳಬೇಕಾದ್ರೆ ಒಬ್ಬರಿಗೊಬ್ಬರು ಕಪಾಳಕ್ಕೆ ಹೊಡೆದುಕೊಳ್ಳುವಂತೆ ಶಿಕ್ಷೆ ನೀಡಿದ್ದಾರೆ.

    ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಉದ್ಯೋಗಿಗಳು ಪರಸ್ಪರ ಕಪಾಳ ಮೋಕ್ಷ ಮಾಡಿದ್ದಾರೆ. ನೂರಾರು ಸಹೋದ್ಯೋಗಿಗಳ ಎದುರು ಸೇಲ್ಸ್ ವಿಭಾಗದ ಹಲವಾರು ಮಹಿಳಾ ಉದ್ಯೋಗಿಗಳು ಮಂಡಿಯೂರಿ ಎದುರು ಬದುರಾಗಿ ಕುಳಿತು, ತಮ್ಮ ಬಾಸ್ ಸಾಕು ಎನ್ನುವವರೆಗೆ ಕಪಾಳಕ್ಕೆ ಹೊಡೆದಿದ್ದಾರೆ.

    ಈ ವಿಡಿಯೋ ಸದ್ಯ ಆನ್‍ಲೈನ್‍ನಲ್ಲಿ ಹರಿದಾಡುತ್ತಿದ್ದು 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಸಂಸ್ಥೆಯ ವಕ್ತಾರರೊಬ್ಬರು ಇದನ್ನ ಸಮರ್ಥಿಸಿಕೊಂಡಿದ್ದು, ಇದು ಟೀಂ ಸ್ಪಿರಿಟ್ ತೋರಿಸುತ್ತದೆ. ನಮ್ಮ ತಂಡ ಸದೃಢವಾಗಿದೆ ಎಂದಿದ್ದಾರೆ.

    ಆದ್ರೆ ಚೀನಾದ ಸಾಮಾಜಿಕ ಜಾಲತಾಣ ಬಳಕೆದಾರರು ಇದನ್ನು ಉದ್ಯೋಗಿಗಳ ನಿಂದನೆ ಎಂದು ಕರೆದಿದ್ದಾರೆ.

    https://www.youtube.com/watch?v=c9vsiW_77pM

  • ಪ್ರಾಜೆಕ್ಟ್ ಮನೆಯಲ್ಲೇ ಮರೆತು ಬಂದಿದ್ದಕ್ಕೆ 500 ಬಸ್ಕಿ ಹೊಡೆಸಿದ ಮುಖ್ಯ ಶಿಕ್ಷಕಿ- ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

    ಪ್ರಾಜೆಕ್ಟ್ ಮನೆಯಲ್ಲೇ ಮರೆತು ಬಂದಿದ್ದಕ್ಕೆ 500 ಬಸ್ಕಿ ಹೊಡೆಸಿದ ಮುಖ್ಯ ಶಿಕ್ಷಕಿ- ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

    ಮುಂಬೈ: ಪ್ರಾಜೆಕ್ಟ್ ಅಸೈನ್‍ ಮೆಂಟ್ ಮನೆಯಲ್ಲೇ ಬಿಟ್ಟು ಬಂದಿದ್ದಕ್ಕೆ ಶಾಲಾ ಮುಖ್ಯ ಶಿಕ್ಷಕಿವೊಬ್ಬರು 13 ವರ್ಷದ ಬಾಲಕಿಗೆ 500 ಬಸ್ಕಿ ಹೊಡೆಯುವಂತೆ ಶಿಕ್ಷೆ ನೀಡಿದ ಘಟನೆ ಕೋಲ್ಹಾಪುರದ ಶಾಲೆಯಲ್ಲಿ ನಡೆದಿದೆ.

    ಚಾಂದ್‍ಗಡ್ ತಾಲೂಕಿನ ಕನೂರ್ ಗ್ರಾಮದಲ್ಲಿರುವ ಭುವೇಶ್ವರಿ ಸಂದೇಶ್ ವಿದ್ಯಾಲಯಾದಲ್ಲಿ ಈ ಘಟನೆ ನಡೆದಿದೆ. ವಿಜಯಾ ಚೌಗಾಲೆ ಶಿಕ್ಷೆಗೆ ಒಳಗಾದ 8ನೇ ತರಗತಿ ವಿದ್ಯಾರ್ಥಿನಿ. ನವೆಂಬರ್ 24 ರಂದು ವಿಜಯಾ ತನ್ನ ಪ್ರಾಜೆಕ್ಟ್ ಸಲ್ಲಿಸಬೇಕಿತ್ತು. ಆದರೆ ಆ ದಿನ ಶಿಕ್ಷಕಿ ಗೈರು ಹಾಜರಾಗಿದ್ದು, ಮುಖ್ಯ ಶಿಕ್ಷಕಿ ಅಶ್ವಿನಿ ದೇವಾನ್ ಮಕ್ಕಳ ಅಸೈನ್‍ಮೆಂಟ್ ನೋಡುತ್ತಿದ್ದರು. ವಿಜಯಾ ಸೇರಿ 6 ವಿದ್ಯಾರ್ಥಿಗಳು ಪ್ರಾಜೆಕ್ಟ್ ನೀಡಿರಲಿಲ್ಲ. ಆಗ ಮುಖ್ಯ ಶಿಕ್ಷಕಿ ದೇವಾನ್ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಯಲು ಹೇಳಿದ್ದರು.

    ಶಿಕ್ಷೆಯಿಂದ ಬಳಲುತ್ತಿರುವ ಬಾಲಕಿಗೆ ತನ್ನ ಬಲಗಾಲಿನಲ್ಲಿ ನೋವಿದ್ದು, ಬೇರೆಯವರ ಸಹಾಯ ಪಡೆದು ನಡೆದುಕೊಂಡು ಹೋಗುವ ಸ್ಥಿತಿ ಎದುರಾಗಿದೆ. ನಾನು ನನ್ನ ಪ್ರಾಜೆಕ್ಟ್ ಅಸೈನ್‍ಮೆಂಟ್ ಮನೆಯಲ್ಲೇ ಮರೆತು ಹೋಗಿದ್ದೆ. ಹೀಗಾಗಿ ಮುಖ್ಯ ಶಿಕ್ಷಕಿ ನನಗೆ 500 ಬಸ್ಕಿ ಹೊಡೆಯಲು ಹೇಳಿದ್ದರು. 300 ಬಸ್ಕಿ ಹೊಡೆಯಲು ಮಾತ್ರ ಸಾಧ್ಯವಾಯಿತು. ಆದಾದ ಬಳಿಕ ನಾನು ಕುಸಿದು ಬಿದ್ದೆ. ನಂತರ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ವಿಜಯಾ ತಿಳಿಸಿದ್ದಾರೆ.

    ಕೆಲವು ವಿದ್ಯಾರ್ಥಿಗಳು 50 ಬಸ್ಕಿ ಹೊಡೆದರೆ, ಇನ್ನೂ ಕೆಲವು ವಿದ್ಯಾರ್ಥಿಗಳು 100 ಬಸ್ಕಿ ಹೊಡೆದಿದ್ದಾರೆ. ಆದರೆ ವಿಜಯಾ ಮಾತ್ರ 300 ಬಸ್ಕಿ ಹೊಡೆದು ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಆಕೆ ಕುಸಿದು ಬಿದ್ದ ತಕ್ಷಣ ಆ ಶಾಲೆಯಲ್ಲೇ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದ ವಿಜಯಾ ತಂದೆ ರಮೇಶ್ ಗೆ ಆಕೆಯ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ.

    ವಿಜಯಾ ತರಗತಿಯಲ್ಲೇ ಕುಸಿದು ಬಿದ್ದಿದ್ದನ್ನು ಕೆಲವು ಹುಡುಗಿಯರು ನನಗೆ ಬಂದು ತಿಳಿಸಿದರು. ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಕೆ 8 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು ಎಂದು ವಿಜಯಾ ತಂದೆ ರಮೇಶ್ ಹೇಳಿದ್ದಾರೆ.

    ನನ್ನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಹೇಳುತ್ತಿದ್ದಳು. ಆದರೆ ಶಾಲೆ ವಿರುದ್ಧ ದೂರು ನೀಡಲು ನನಗೆ ಕಷ್ಟವಾಯಿತು. ಏಕೆಂದರೆ ನಾನು ಅಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದೆ. ನಂತರ ನನ್ನ ಪತ್ನಿ ನಿಮಗೆ ಕೆಲಸ ಮುಖ್ಯವೋ? ಅಥವಾ ಮಗಳು ಮುಖ್ಯವೋ? ಎಂದು ನನಗೆ ಪ್ರಶ್ನಿಸಿದಳು. ನಂತರ ನನ್ನ ಪತ್ನಿಯೇ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದಳು. ಆಗ ಪೊಲೀಸರು ಮುಖ್ಯ ಶಿಕ್ಷಕಿ ವಿರುದ್ಧ ನಾನ್-ಕಾಗ್ನಿಸೆಬಲ್ ಕೇಸ್ ದಾಖಲಿಸಿಕೊಂಡರು. ಇದು ತಪ್ಪು. ಮುಖ್ಯ ಶಿಕ್ಷಕಿಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.

    ಮುಖ್ಯ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ಒಂದು ಗಂಟೆಯಲ್ಲೇ ಜಾಮೀನು ಪಡೆದು ಹೊರಬಂದಿದ್ದಾರೆ.

  • ಮಗಳನ್ನ ಅತ್ಯಾಚಾರ ಮಾಡಿದ ತಂದೆಗೆ 43 ವರ್ಷ ಜೈಲು ಶಿಕ್ಷೆ

    ಮಗಳನ್ನ ಅತ್ಯಾಚಾರ ಮಾಡಿದ ತಂದೆಗೆ 43 ವರ್ಷ ಜೈಲು ಶಿಕ್ಷೆ

    ಚೆನ್ನೈ: 14 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ದೋಷಿ ತಂದೆಗೆ ತಮಿಳುನಾಡಿನ ತಿರುಚ್ಚಿಯಲ್ಲಿರುವ ಮಹಿಳಾ ಕೋರ್ಟ್ 43 ವರ್ಷ ಜೈಲು ಶಿಕ್ಷೆ ವಿಧಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

    2013 ಜುಲೈ ನಲ್ಲಿ ಅರಸಂಕುಡಿ ಗ್ರಾಮದ ಆರೋಪಿ ಕಾಮರಾಜ್ ತನ್ನ ಅಪ್ರಾಪ್ತ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೇ ಪತ್ನಿಗೂ ಕೂಡ ಜೀವ ಬೆದರಿಕೆ ಒಡ್ಡಿದ್ದ. ಈ ಎಲ್ಲಾ ಪ್ರಕರಣಗಳ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ ನ್ಯಾ. ಜಸಿಂತಾ ಮಾರ್ಟಿನ್ ಕಾಮರಾಜ್‍ಗೆ 43 ವರ್ಷ ಜೈಲು ಶಿಕ್ಷೆ ಮತ್ತು ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.

    ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ 2015 ಮಾರ್ಚ್ 5ರಂದು ಮಗುವಿಗೆ ಜನ್ಮ ನೀಡಿದ್ದಳು. ಆದರೆ ದುರದೃಷ್ಟವಶಾತ್ ಅದೇ ವರ್ಷ ಸಂತ್ರಸ್ತೆ ಮೃತಪಟ್ಟಿದ್ದಳು. ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಪೋಸ್ಕೋ ಕಾಯ್ದೆ ಅಡಿ ಕಾಮರಾಜ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಆರೋಪಿ ವಿರುದ್ಧ 506 ಅಡಿಯಲ್ಲಿ ಕ್ರಿಮಿನಲ್ ಕೇಸ್ ಕೂಡ ದಾಖಲಿಸಿಕೊಂಡಿದ್ದರು. ನ್ಯಾಯಾಧೀಶರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 43 ವರ್ಷ ಶಿಕ್ಷೆ ನೀಡಿದ್ದಾರೆ.

    ಅತ್ಯಾಚಾರ ಪ್ರಕರಣಕ್ಕೆ 43 ವರ್ಷ ಜೈಲು ಶಿಕ್ಷೆ, ಹೆಂಡತಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ಪೋಸ್ಕೋ ಕಾಯ್ದೆಯಡಿ 1 ಸಾವಿರ ರೂ. ಮತ್ತು ಪತ್ನಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ 500 ರೂ. ದಂಡ ವಿಧಿಸಲಾಗಿದೆ.

    ಪತಿ ಅತ್ಯಾಚಾರ ಎಸಗಿ ಮಗಳು 7 ತಿಂಗಳ ಗರ್ಭಿಣಿ ಆಗಿರುವುದನ್ನು ತಿಳಿದು 2014 ರ ಡಿಸೆಂಬರ್‍ನಲ್ಲಿ ದೂರು ದಾಖಲಿಸಿದ್ದಳು.