Tag: ಶಿಕ್ಷೆ

  • ಪ್ರವಾಸದ ಹೆಸರಲ್ಲಿ ದರೋಡೆ – 8 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

    ಪ್ರವಾಸದ ಹೆಸರಲ್ಲಿ ದರೋಡೆ – 8 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

    ಹುಬ್ಬಳ್ಳಿ: ಮಾಗೋಡು ಜಲಪಾತ ಪ್ರವಾಸಕ್ಕೆ ಹೋಗುವ ನೆಪದಲ್ಲಿ ಕಾರು ಬಾಡಿಗೆ ಪಡೆದು, ಚಾಲಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರ್ಸ್, ಮೊಬೈಲ್, ವಾಹನ ದೋಚಿಕೊಂಡು ಹೋಗಿದ್ದ ಮೂವರಿಗೆ ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 20,000 ರೂ. ದಂಡ ವಿಧಿಸಿದೆ.

    ಪ್ರವಾಸದ ನೆಪದಲ್ಲಿ ಅಹ್ಮದ್ ಪಣಿಬಂದ, ಅವಿನಾಶ್ ಪವಾರ, ಮಂಜುನಾರ್ ಪವಾರ ಎಂಬವರು ಗಿರಣಿಚಾಳ ನಿವಾಸಿ ಗಣೇಶ ಜುಮ್ಹಾಪುರ 2014ರ ಜುಲೈ 5ರಂದು ಚನ್ನಮ್ಮ ವೃತ್ತದ ಬಳಿ ಇದ್ಗಾ ಮೈದಾನದಲ್ಲಿ ಬಾಡಿಗೆ ಕಾರು ನಿಲ್ಲಿಸಿದ್ದರು. ಈ ವೇಳೆ ಓರ್ವ ಯುವತಿಯೊಂದಿಗೆ ಬಂದ ಸಿರಾಜ್ ಪಣಿಬಂದ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಜಲಪಾತಕ್ಕೆ ತೆರಳಲು ಬಾಡಿಗೆಗೆ ಮಾತನಾಡಿದ್ದನು. ಬಳಿಕ ಇಬ್ಬರೂ ಕಾರಿನಲ್ಲಿ ಹೊರಟಿದ್ದರು. ಮಾರ್ಗ ಮಧ್ಯ ಹಳೇ ಹುಬ್ಬಳ್ಳಿ ಶಿಮ್ಲಾ ನಗರದ ಬಳಿ ಸಿರಾಜ್ ತನ್ನ ಸಹಚರರಾದ ಅವಿನಾಶ್ ಪವಾರ, ಮಂಜುನಾಥ್ ಪವಾರ ಹಾಗೂ ಓರ್ವ ನನ್ನು ಹತ್ತಿಸಿಕೊಂಡಿದ್ದನು.

    ಮಾಗೋಡು ಫಾಲ್ಸ್ 10 ಕಿ.ಮೀ. ದೂರ ಇದ್ದಾಗ ಕಾರು ನಿಲ್ಲಿಸಲು ಸೂಚಿಸಿದ್ದರು. ಕಾರು ನಿಲ್ಲಿಸುತ್ತಿದ್ದಂತೆ ಚಾಲಕ ಗಣೇಶನ ಮೇಲೆ ಹಲ್ಲೆ ನಡೆಸಿ, ಕೈಕಾಲುಗಳನ್ನು ಕಟ್ಟಿ ಹಿಂದಿನ ಸೀಟಿನಲ್ಲಿ ಹಾಕಿದ್ದರು. ಬಳಿಕ ಕಾರು ಚಲಾಯಿಸಿಕೊಂಡು ಹುಬ್ಬಳ್ಳಿ ಸಮೀಪ ಅಂಚಟಗೇರಿ ಬಳಿ ಬಂದು, ಚಾಲಕ ಗಣೇಶನನ್ನು ಹೊರಕ್ಕೆ ಎಸೆದು ವಾಹನ ಸಮೇತ ಪರಾರಿಯಾಗಿದ್ದರು.

    ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಸ್ಪೆಕ್ಟರ್ ಸಚಿನ್ ಚಲವಾದಿ ತನಿಖೆ ನಡೆಸಿದ್ದರು. 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.

    ದಂಡದ ಮೊತ್ತದಲ್ಲಿ 50 ಸಾವಿರ ರೂ. ಚಾಲಕ ಗಣೇಶನಿಗೆ, 10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಪಾವತಿಸಲು ಸೂಚಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು. ಇದನ್ನೂ ಓದಿ:ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಡ್ಡಾಯ – ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

  • ಅಪ್ರಾಪ್ತೆ ಜೊತೆ ಪ್ರೀತಿ, ಗರ್ಭಿಣಿಯಾದ ಬಳಿಕ ತಾಳಿ ಕಟ್ಟಿದವನಿಗೆ 10 ವರ್ಷ ಜೈಲು ಶಿಕ್ಷೆ

    ಅಪ್ರಾಪ್ತೆ ಜೊತೆ ಪ್ರೀತಿ, ಗರ್ಭಿಣಿಯಾದ ಬಳಿಕ ತಾಳಿ ಕಟ್ಟಿದವನಿಗೆ 10 ವರ್ಷ ಜೈಲು ಶಿಕ್ಷೆ

    ಶಿವಮೊಗ್ಗ: ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಗರ್ಭಿಣಿಯಾದ ಬಳಿಕ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದ ಆರೋಪಿಗೆ ನ್ಯಾಯಾಲಯ ದಂಡ ವಿಧಿಸಿ, ಜೈಲು ಶಿಕ್ಷೆ ನೀಡಿದೆ.

    ಪ್ರಕರಣದ ಬಗ್ಗೆ 4 ವರ್ಷಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರಾದ ದಯಾನಂದ ಅವರು ಆರೋಪಿ ಬೀರೇಶ್(30)ಗೆ 10 ಸಾವಿರ ರೂ.ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

    ಶಿವಮೊಗ್ಗದ ಯಲವಟ್ಟಿ ತಾಂಡಾದ ಬೀರೇಶ್(30) 17 ವರ್ಷದ ಅಪ್ರಾಪ್ತೆಯೊಂದಿಗೆ ಪ್ರೀತಿ ನಾಟಕವಾಡಿದ್ದ. ನಂತರ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಬಾಲಕಿ ಗರ್ಭಿಣಿಯಾಗಲು ಕಾರಣನಾಗಿದ್ದ. ಬಾಲಕಿ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ 2017ರ ಜೂನ್ 28ರಂದು ಭದ್ರಾವತಿಯ ಚೌಡೇಶ್ವರಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದ.

    ಅಪ್ರಾಪ್ತೆ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಗರ್ಭಿಣಿಯಾದ ನಂತರ ಮದುವೆ ಆಗಿದ್ದಾನೆ ಎಂದು ಬಾಲಕಿ ಪೋಷಕರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪೋಕ್ಸೋ ಕಾಯ್ದೆಯಡಿ ಹಾಗೂ ಬಾಲ್ಯ ವಿವಾಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

  • ಮದುವೆಗೆ ಬಂದು ಕಪ್ಪೆಯಂತೆ ಜಿಗಿಯುತ್ತ ವಾಪಸ್ ಹೋದ ಅತಿಥಿಗಳು

    ಮದುವೆಗೆ ಬಂದು ಕಪ್ಪೆಯಂತೆ ಜಿಗಿಯುತ್ತ ವಾಪಸ್ ಹೋದ ಅತಿಥಿಗಳು

    ಭೋಪಾಲ್: ಲಾಕ್‍ಡೌನ್ ನಿಮಯ ಮೀರಿ ಮದುವೆಗೆ ಖುಷಿಯಿಂದ ಹೋದ ಅತಿಥಿಗಳಿಗೆ ಫುಲ್ ಶಾಕ್ ಕೊಟ್ಟ ಪೊಲೀಸರು ವಿಭಿನ್ನವಾದ ಶಿಕ್ಷೆಯನ್ನು ನೀಡಿರುವ ಘಟನೆ ಮಧ್ಯಪ್ರದೇಶದ ಭಿಂಡ್‍ನಲ್ಲಿ ನಡೆದಿದೆ.

    ಮಧ್ಯಪ್ರದೇಶದ ಉಮಾರಿ ಎಂಬ ಹಳ್ಳಿಯಲ್ಲಿ ಮದುವೆ ನಡೆಯುತ್ತಿತ್ತು. ಈ ವಿವಾಹದಲ್ಲಿ ಸುಮಾರು 300 ಮಂದಿ ಸೇರಿದ್ದರು. ಈಗ ಯಾವುದೇ ಮದುವೆ, ಶುಭಸಮಾರಂಭ ನಡೆಯಬೇಕೆಂದರೂ ಜಿಲ್ಲಾಡಳಿತದ ಅನುಮತಿ ಬೇಕು. ಹಾಗಾಗಿ ಸಹಜವಾಗಿಯೇ ಜಿಲ್ಲಾಡಳಿತ, ಪೊಲೀಸರು ಒಂದು ಗಮನ ಇಟ್ಟಿರುತ್ತಾರೆ. ಅಂತೆಯೇ ಇಲ್ಲಿಯೂ ಸಹ ಕೊರೊನಾ ಲಾಕ್‍ಡೌನ್ ನಿಯಮ ಪಾಲನೆಯಾಗಿದೆಯೇ ಎಂದು ಪರಿಶೀಲನೆ ನಡೆಸಲು ಪೊಲೀಸರು ಬಂದಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ ಅಲ್ಲಿ 300ಕ್ಕೂ ಹೆಚ್ಚು ಮಂದಿ ಸೇರಿದ್ದು ಕಂಡುಬಂತು.

    ಪೊಲೀಸರನ್ನು ನೋಡುತ್ತಿದ್ದಂತೆ ಅನೇಕರು ತಪ್ಪಿಸಿಕೊಂಡು ಓಡಿದರೂ, ಮತ್ತೊಂದಷ್ಟು ಮಂದಿ ಸಿಕ್ಕಿಬಿದ್ದರು. ಹೀಗೆ ಸಿಕ್ಕಿಬಿದ್ದವರಿಗೆ ಪೊಲೀಸರು ಕಪ್ಪೆಯಂತೆ ಜಿಗಿಯುತ್ತಾ ಹೋಗುವ ಶಿಕ್ಷೆಯನ್ನು ನೀಡಿದ್ದಾರೆ. 17 ಮಂದಿ ಪುರುಷರು ಕಪ್ಪೆಯಂತೆ ಜಿಗಿದಿರುವ ವೀಡಿಯೋ ವೈರಲ್ ಆಗಿದೆ.

    ಮಧ್ಯಪ್ರದೇಶದಲ್ಲಿ 7 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್‍ಗಳಿದ್ದು, ಕಳೆದ 24 ಗಂಟೆಯಲ್ಲಿ 5,065 ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಆ ರಾಜ್ಯದಲ್ಲಿ 7227 ಮಂದಿ ಮೃತಪಟ್ಟಿದ್ದಾರೆ.

  • ಮನೆಯ ಗಾಜಿನ ಬೌಲ್‍ನ್ನು ಒಡೆದಿದಕ್ಕೆ ವೈಷ್ಣವಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ಮನೆಯ ಗಾಜಿನ ಬೌಲ್‍ನ್ನು ಒಡೆದಿದಕ್ಕೆ ವೈಷ್ಣವಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ಬೆಂಗಳೂರು: ಬಿಗ್‍ಮನೆಯಲ್ಲಿ ಟಾಸ್ಕ್, ಹರಟೆ, ಮಾತು, ಕವನ ಹೀಗೆ ಸಂತೋಷದಿಂದ ಇರುವ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಸೋತಾಗ ಅಥವಾ ಏನಾದರು ತಪ್ಪು ಮಾಡಿದರೆ ಅವರಿಗೆ ಬಿಗ್‍ಬಾಸ್ ಶಿಕ್ಷೆ ಕೂಡ ಕೊಡುತ್ತಾರೆ. ಬಿಗ್ ಮನೆಯಲ್ಲಿದ್ದ ಗಾಜಿನ ಬೌಲ್‍ನ್ನು ಒಡೆದು ಹಾಕಿದ್ದ ಮನೆಯ ಸದಸ್ಯೆ ವೈಷ್ಣವಿ ಇದೀಗ ಬಿಗ್ ಕೆಂಗಣ್ಣಿಗೆ ಗುರಿಯಾಗಿ ಶಿಕ್ಷೆ ಅನುಭವಿಸಲು ತಯಾರಾಗಿದ್ದಾರೆ.

    ಬಿಗ್ ಮನೆಯಲ್ಲಿ ತುಂಬಾ ಲವಲವಿಕೆಯಿಂದ ಓಡಾಡಿಕೊಂಡು ಸ್ಪರ್ಧೆಯಲ್ಲಿ ಉತ್ತಮವಾಗಿ ತಮ್ಮ ಸಾಮರ್ಥ್ಯ ವನ್ನು ತೋರಿಸುತ್ತಿರುವ ವೈಷ್ಣವಿ ಮನೆಯ ಗಾಜಿನ ಬೌಲ್‍ನ್ನು ಒಡೆದು ಹಾಕಿದ್ದರು. ಇದರಿಂದ ಕೆರಳಿರುವ ಬಿಗ್‍ಬಾಸ್ ಇದೀಗ ಶಿಕ್ಷೆಯ ಆಜ್ಞೆ ಪತ್ರವನ್ನು ಬಿಗ್ ಮನೆಗೆ ತಲುಪಿಸಿದ್ದಾರೆ. ಈ ಪತ್ರದಲ್ಲಿರುವ ಶಿಕ್ಷೆಯ ಸವಿವರವನ್ನು ಪ್ರಶಾಂತ್ ವೈಷ್ಣವಿಗೆ ಓದಿ ತಿಳಿಸಿದ್ದಾರೆ.

    ಬಿಗ್‍ಬಾಸ್, ವೈಷ್ಣವಿ ಕುರಿತು ಪತ್ರದಲ್ಲಿ ನೀವು ಚೆನ್ನಾಗಿ ನೃತ್ಯ ಮಾಡುತ್ತೀರಿ ಎಂದು ಗೊತ್ತಿದೆ. ಹಾಗಾಗಿ ಇನ್ನು ಮುಂದೆ ನಿಮಗೆ ನೀರು ಕುಡಿಯಬೇಕು ಎಂದಾಗ ಮನೆಯ ಸದಸ್ಯರೊಬ್ಬರಿಗೆ ಒಂದು ಡ್ಯಾನ್ಸ್ ಸ್ಟೆಪ್ ಹೇಳಿಕೊಡಬೇಕು. ಅದೊಂದು ಸಂಪೂರ್ಣ ಸ್ಟೆಪ್ ಆಗಿರಬೇಕು. ಈ ಸ್ಟೆಪ್‍ನ್ನು ಅವರು ಕಲಿತು ನಿಮಗೆ ತೋರಿಸಬೇಕು. ಅದು ಸರಿಯಾಗಿದ್ದರೆ ಮಾತ್ರ ಅವರು ನಿಮಗೆ ನೀರು ಕುಡಿಸಬೇಕು. ನೀವಾಗಿ ಲೋಟವನ್ನು ಮುಟ್ಟುವಂತಿಲ್ಲ ಅವರೇ ನಿಮಗೆ ನೀರು ಕುಡಿಸಬೇಕು ಇದು ಮನೆಯ ಗಾಜಿನ ಬೌಲ್‍ನ್ನು ಒಡೆದು ಹಾಕಿದ್ದಕ್ಕಾಗಿ ಈ ಶಿಕ್ಷೆ. ಬಿಗ್‍ಬಾಸ್ ಮುಂದಿನ ಆದೇಶದವರೆಗೆ ಈ ಶಿಕ್ಷೆ ಮುಂದುವರಿಯುತ್ತದೆ ಎಂದು ಬರೆದುಕೊಂಡು ಶಿಕ್ಷೆಯನ್ನು ತಿಳಿಸಿದ್ದಾರೆ.

    ಶಿಕ್ಷೆಯ ಆದೇಶ ಪತ್ರವನ್ನು ತಿಳಿದುಕೊಂಡ ಬಳಿಕ ವೈಷ್ಣವಿ ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತು ನಿಮ್ಮ ಶಿಕ್ಷೆಯನ್ನು ಸ್ವೀಕರಿಸಿದ್ದೇನೆ ಇನ್ನು ಮುಂದೆ ಯಾವತ್ತು ಆ ರೀತಿ ತಪ್ಪು ಮಾಡುವುದಿಲ್ಲ ಎಂದು ಮನವಿ ಮಾಡಿಕೊಂಡರು.

  • 2 ಶರ್ಟ್ ಕದಿದ್ದಕ್ಕೆ 20 ವರ್ಷ ಜೈಲು – ಇತ್ತ ಮನೆ ಮಂದಿಯನ್ನೇ ಕಳೆದುಕೊಂಡ

    2 ಶರ್ಟ್ ಕದಿದ್ದಕ್ಕೆ 20 ವರ್ಷ ಜೈಲು – ಇತ್ತ ಮನೆ ಮಂದಿಯನ್ನೇ ಕಳೆದುಕೊಂಡ

    ನ್ಯೂಯಾರ್ಕ್: ಬಟ್ಟೆಯಂಗಡಿಯೊಂದರಲ್ಲಿ ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ವ್ಯಕ್ತಿಯೊಬ್ಬರು ಬರೋಬ್ಬರಿ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಕರುಣಾಜನಕ ಘಟನೆ ಅಮೆರಿಕದಲ್ಲಿ ನಡೆದಿದೆ.

    ಫ್ರಾಂಕ್ ಸಣ್ಣ ತಪ್ಪಿಗೆ ಸುದೀರ್ಘ ಕಾಲ ಜೈಲುವಾಸ ಅನುಭಿವಿಸಿ ಈಗ ಬಿಡುಗಡೆಯಾಗಿದ್ದಾರೆ. ಕೆಲ ಪ್ರಜ್ಞಾವಂತರು ಪ್ರಾಂಕ್‍ಗೆ ವಿಧಿಸಿದ್ದ ಅಮಾನವೀಯ ಶಿಕ್ಷೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಿದ್ದರು. 23 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಕೋರ್ಟ್ ಕೊನೆಯ 3 ವರ್ಷಗಳ ಜೈಲುವಾಸವನ್ನು ರದ್ದುಗೊಳಿಸಿದೆ.
    ಕಡು ಬಡವನಾಗಿದ್ದ ಫ್ರಾಂಕ್‍ಗೆ ಪತ್ನಿ, ಒಬ್ಬ ಮಗನಿದ್ದ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕಳ್ಳತನಗಳನ್ನು ಮಾಡಿ ಜೀವನವನ್ನು ನಡೆಸುತ್ತಿದ್ದರು. ಯಾರನ್ನೂ ಹೆದರಿಸಿ ಲೂಟಿ ಮಾಡುತ್ತಿರಲಿಲ್ಲ. ಸೂಪರ್ ಮಾರ್ಕೆಟ್, ಬಟ್ಟೆ ಶಾಪ್‍ಗಳಲ್ಲಿ ಯಾರಿಗೂ ತಿಳಿಯದಂತೆ ಒಂದೆರೆಡು ವಸ್ತುಗಳನ್ನು ಕಳವು ಮಾಡುತ್ತಿದ್ದರು. ಇದೇ ರೀತಿ ಕಳವು ಮಾಡಿ ಸಿಕ್ಕಿಬಿದ್ದಿದ್ದರು. 2000ನಲ್ಲಿ ಫ್ರಾಂಕ್‍ನನ್ನು ಬಂಧಿಸಲಾಗಿತ್ತು. 47 ವರ್ಷದ ಫ್ರಾಂಕ್‍ಗೆ ಅಲ್ಲಿನ ಕೋರ್ಟ್ 23 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.

    ಬಡ ಕುಟುಂಬ ಫ್ರಾಂಕ್‍ಗಾಗಿ ಉತ್ತಮ ಕಾನೂನು ಸೌಲಭ್ಯ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಫ್ರಾಂಕ್ ಜೈಲಿನಲ್ಲೇ ತಮ್ಮ ಜೀವನವನ್ನು ಸವೆಸುವಂತಾಯಿತು. ಫ್ರಾಂಕ್ ಪ್ರಕರಣವನ್ನು ಗಮನಿಸಿದ ಅಮೆರಿಕಾದ ಕೆಲ ಪ್ರಜ್ಞಾವಂತರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಸಣ್ಣ ಅಪರಾಧಕ್ಕಾಗಿ ಇಷ್ಟು ಕಠಿಣ ಶಿಕ್ಷೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಅಮೆರಿಕದಲ್ಲಿ ಬಡ ಕಪ್ಪು ವರ್ಣಿಯರ ಮೇಲಾಗುತ್ತಿರುವ ಶೋಷಣೆಯಿದು ಎಂದು ಕೆಲವರು ಹೇಳಿದರು.

    ಕೋರ್ಟ್ ತನ್ನ ಶಿಕ್ಷೆಯನ್ನು ಕಡಿತಗೊಳಿಸಿ ಫ್ರಾಂಕ್‍ನ ಬಿಡುಗಡೆ ಮಾಡಿದೆ. 23 ವರ್ಷಗಳ ಶಿಕ್ಷೆಯನ್ನು ಕಡಿತಗೊಳಿಸುವಷ್ಟರಲ್ಲಿ ಫ್ರಾಂಕ್ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆದಾಗಿತ್ತು. ಕೇವಲ 3 ವರ್ಷಗಳ ಶಿಕ್ಷೆಯಿಂದ ಮಾತ್ರ ಪಾರಾಗಿದ್ದ ಫ್ರಾಂಕ್ ಜೈಲಿನಿಂದ ಬಿಡುಗಡೆ ಆಗುವಷ್ಟರಲ್ಲಿ ಪತ್ನಿ, ಮಗ, ಇಬ್ಬರು ಸೋದರರು ಮೃತಪಟ್ಟಿದ್ದರು. ಫ್ರಾಂಕ್‍ನ ಕುಟುಂಬವೇ ಸಾವಿನ ಮನೆ ಸೇರಿಯಾಗಿತ್ತು. 67 ವರ್ಷದ ಫ್ರಾಂಕ್ ಜೈಲಿನಿಂದ ಬಿಡುಗಡೆಯಾದರೂ ಒಬ್ಬಂಟಿ. ಒಟ್ಟಿನ್ಲಲಿ ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ಫ್ರಾಂಕ್ ತನ್ನದೆಲ್ಲವನ್ನೂ ಕಳೆದುಕೊಂಡಿದ್ದಾರೆ.

  • ಪ್ರೀತಿಗೆ ಒಪ್ಪದ ಯುವತಿಗೆ ಚಾಕು ಇರಿತ – ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

    ಪ್ರೀತಿಗೆ ಒಪ್ಪದ ಯುವತಿಗೆ ಚಾಕು ಇರಿತ – ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

    ಹುಬ್ಬಳ್ಳಿ: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಹುಬ್ಬಳ್ಳಿಯ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ಪ್ರಕರಣ ಹಿನ್ನೆಲೆ: ಜಿಲ್ಲೆಯ ವೆಂಕಟೇಶ್ವರ ನಗರದ ಮೇಘನಾ ಚಂದ್ರಶೇಖರ್ ಜಾಳಗಿ ಎಂಬವರಿಗೆ ರಾಯಚೂರು ಮೂಲದ ಅಭಿನವ್ ಕುಲಕರ್ಣಿ ಎಂಬ ಯುವಕ ಫೋನ್ ಹಾಗೂ ಮೆಸೆಜ್ ಮಾಡಿ ತನ್ನ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಯುವತಿ ಪ್ರೀತಿ ಮಾಡಲು ಒಪ್ಪದ್ದರಿಂದ ಯುವಕ ಇದೇ ಸಿಟ್ಟಿನಿಂದಾಗಿ 2015ರ ನವಂಬರ್ 29 ರಂದು ಹುಬ್ಬಳ್ಳಿ ಗೋಕುಲ್ ರೋಡ ಅರ್ಬನ್ ಓಯಾಸಿಸ್ ಮಾಲ್‍ನಲ್ಲಿ ಯುವತಿಗೆ ಚಾಕುವಿನಿಂದ ಕುತ್ತಿಗೆಗೆ ಹಾಗೂ ಹೊಟ್ಟೆಗೆ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ, ತಾನು ಸಹ ಅದೇ ಚಾಕುವಿನಿಂದ ತನ್ನ ಕುತ್ತಿಗೆ ಹಾಗೂ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದನು.

    ಈ ಬಗ್ಗೆ ಹುಬ್ಬಳ್ಳಿ ಗೋಕುಲ್ ರೋಡ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆಃ 140/2015 ಕಲಂ: 307, 354 (ಡಿ) (1), 309 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ಆಗ ಕರ್ತವ್ಯದ ಮೇಲಿದ್ದ ಗೋಕುಲ್ ರೋಡ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಎಸ್.ಕೆ. ಕುರಗೋಡಿರವರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡು ಆರೋಪಿತನಿಗೆ ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದರು. ಆರೋಪಿತನ ಮೇಲೆ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸದರಿಯವನ ಮೇಲೆ ದಿನಾಂಕಃ 23-03-2016 ರಂದು ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಸದರಿ ಪ್ರಕರಣವು ಮಾನ್ಯ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹುಬ್ಬಳ್ಳಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತನ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಿನಾಂಕಃ 08-03-2021ರಂದು ನ್ಯಾಯಾಧೀಶರಾದ ಗಂಗಾಧರ ಕೆ ಎನ್ ರವರು

    1. ಕಲಂ: 307 ಐಪಿಸಿ ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ಒಂದು ಲಕ್ಷ ರೂಪಾಯಿ ಜುಲ್ಮಾನೆ, ಜುಲ್ಮಾನೆ ಕಟ್ಟದಿದ್ದಲ್ಲಿ ಎರಡು ವರ್ಷ ಸಾದಾ ಶಿಕ್ಷೆ.

    2. ಕಲಂ: 354 (ಡಿ) (1) ಐಪಿಸಿ ಅಡಿಯಲ್ಲಿ ಒಂದುವರೆ ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ, ದಂಡ ತುಂಬದಿದ್ದಲ್ಲಿ 6 ತಿಂಗಳು ಸಾದಾ ಶಿಕ್ಷೆ.

    3. ಕಲಂ: 309 ಐಪಿಸಿ ಅಡಿಯಲ್ಲಿ 6 ತಿಂಗಳು ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ, ದಂಡ ತುಂಬದಿದ್ದಲ್ಲಿ 1 ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಯುವತಿ ಪರವಾಗಿ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದರು.

  • ಕೊನೆಗೂ ನ್ಯಾಯ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗ್ತಿದೆ: ಜ್ಯೋತಿ ಉದಯ್

    ಕೊನೆಗೂ ನ್ಯಾಯ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗ್ತಿದೆ: ಜ್ಯೋತಿ ಉದಯ್

    ಬೆಂಗಳೂರು: ಕೊನೆಗೂ ನ್ಯಾಯ ಸಿಕ್ಕಿದೆ. ಹೀಗಾಗಿ ನನಗೆ ತುಂಬಾ ಖುಷಿಯಾಗ್ತಿದೆ ಎಂದು ಜ್ಯೋತಿ ಉದಯ್ ತಿಳಿಸಿದ್ದಾರೆ.

    2013ರಲ್ಲಿ ಎಟಿಎಂನಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣದ ಅಪರಾಧಿ ಮಧುಕರ್ ರೆಡ್ಡಿಗೆ ನ್ಯಾಯಾಲಯ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟಕ್ಕೂ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜ್ಯೋತಿ, ತುಂಬಾ ಸೀರಿಯಸ್ ಆದ ಶಿಕ್ಷೆ ಅವರಿಗೆ ನೀಡಬೇಕು. ಆದರೆ ಅದರ ತೀರ್ಮಾನವನ್ನು ನ್ಯಾಯಾಲಯವೇ ಮಾಡಬೇಕು ಹೊರತು ನಾವಲ್ಲ. ಮುಂದಿನ ದಿನಗಳಲ್ಲಿ ಅವರು ಬೇರೆ ಯಾರ ಮೇಲೂ ಇಂತಹ ಕೃತ್ಯ ಎಸಗಬಾರದು ಎಂದು ಹೇಳಿದರು.

    ಕೃತ್ಯ ಎಸಗಿ ಮಧುಕರ್ ರೆಡ್ಡಿ ಕೆಲ ವರ್ಷ ತಲೆಮರೆಸಿಕೊಂಡಿದ್ದನು. ಈ ವೇಳೆ ನಮಗೆ ತುಂಬಾ ಬೇಜಾರಾಗಿತ್ತು. ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಗಳನ್ನು ನಡೆಸಿದರೂ ಆರೋಪಿ ಸಿಕ್ಕಿರಲಿಲ್ಲ. ಆದರೆ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮೂಲಕ ಅವರು ನನಗೆ ಸಹಾಯ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಎಟಿಎಂನಲ್ಲಿ ಮಚ್ಚಿನಿಂದ ಹಲ್ಲೆ-ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ

    ಏಕಾಏಕಿ ಎಟಿಎಂಗೆ ನುಗ್ಗಿದ ಮಧುಕರ ರೆಡ್ಡಿ ಮೊದಲು ಎಷ್ಟಿದೆ ಅಂತ ಕೇಳಿದ್ರು. ಆಗ ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ 2-3 ಸಲ ಎಷ್ಟಿದೆ ಎಷ್ಟಿದೆ ಅಂತ ಕೇಳಿದ್ರು. ಕೊನೆಗೆ ನನ್ನಲ್ಲಿ ಏನೂ ಇಲ್ಲ. ಮಗಳ ಫೀಸ್ ಇಟ್ಟಿದ್ದೇನೆ ಅಷ್ಟೇ ಅಂತ ಹೇಳಿದೆ. ಆ ಬಳಿಕ ನನಗೇನಾಯ್ತು ಗೊತ್ತಿಲ್ಲ. ಯಾಕಂದ್ರೆ ಅವರು ನನ್ನ ಮೂಲೆಗೆ ತಳ್ಳಿದ್ರು. ಈ ವೇಳೆ ನಾನು ಪ್ರಜ್ಞೆ ತಪ್ಪಿದ್ದೇನೆ ಎಂದು ಜ್ಯೋತಿ ವಿವರಿಸಿದರು.

    ನಾನು ಬ್ಯಾಂಕಿನಲ್ಲಿ ಕೆಲಸ ಮಾಡುವುದರಿಂದ ಮೊದಲು ಯಾರೋ ಕ್ಯಾಶ್ ಲೋಡಿಂಗ್ ನವರು ಬಂದಿರಬಹುದು ಅಂದುಕೊಂಡೆ. ಅಲ್ಲದೆ ಏನು ಬೇಕು ಅಂತ ಕೇಳಿದೆ. ಅಷ್ಟರಲ್ಲಾಗಲೇ ಎಟಿಎಂ ಶಟರ್ ಎಳೆದರು. ಆವಾಗ ಈ ವ್ಯಕ್ತಿ ದುರುದ್ದೇಶದಿಂದ ಬಂದಿದ್ದಾನೆ ಅಂತ ಗೊತ್ತಾಯ್ತು. ಅಪರಾಧ ಕೃತ್ಯ ಎಸಗಲು ಬಂದಿರುವುದಾಗಿ ನನಗೆ ಮನವರಿಕೆ ಆಯ್ತು. ಆಮೇಲೆ ನನಗೆ ಭಯ ಶುರುವಾಯ್ತು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಅಂದು ಸಹಾಯ ಮಾಡಿದ್ದ ಕಾರ್ಪೋರೇಶನ್ ಬ್ಯಾಂಕ್ ಸಿಬ್ಬಂದಿ, ಎಎನ್ ಸುರೇಶ್, ವಿಠಲ್ ರಾವ್. ರವಿ ಬಾಬು ಇವರೆಲ್ಲರೂ ನನಗೆ ಫುಲ್ ಸಪೋರ್ಟ್ ಮಾಡಿದ್ದರು. ನನ್ನ ಕುಟುಂಬ, ಪತಿ ಉದಯ್ ಕುಮಾರ್ ಹಾಗೂ ಬಿಜಿಎಸ್ ಆಸ್ಪತ್ರೆಯ ಸಿಬ್ಬಂದಿ ತಂಡ ಹಾಗೂ ವೈದ್ಯರಾದ ವೆಂಕಟರಮನ್, ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಕ್ಕೆ ಧನ್ಯವಾದ ತಿಳಿಸಲು ಇಷ್ಟಪಡುವುದಾಗಿ ಈ ವೇಳೆ ತಿಳಿಸಿದರು.

  • ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ 7 ವರ್ಷ ಜೈಲು ಶಿಕ್ಷೆ

    ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ 7 ವರ್ಷ ಜೈಲು ಶಿಕ್ಷೆ

    – 5 ವರ್ಷದ ಹಿಂದಿನ ಪ್ರಕರಣ

    ಲಕ್ನೋ: 5 ವರ್ಷಗಳ ಹಿಂದೆ ತಂದೆಯೊಬ್ಬ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದನು. ಇದೀಗ ಅಪರಾಧಿ ತಂದೆಗೆ ನೋಯ್ಡಾ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ನಿರಂಜನ್ ಕುಮಾರ್ ಅವರು ತಂದೆಗೆ 7 ವರ್ಷ ಜೈಲು ಶಿಕ್ಷೆ, ಹಾಗೂ 5 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ 6 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆದೇಶಿಸಿದ್ದಾರೆ.

    ಪ್ರಕರಣದ ಹಿನ್ನೆಲೆ:ಫೆಬ್ರವರಿ 2015 ರಲ್ಲಿ, ನೋಯ್ಡಾ ಮೂಲದ ಮಹಿಳೆಯೊಬ್ಬರು ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತನ್ನ ಗಂಡ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಳು. ಮಹಿಳೆ ಆರೋಪಿ ಪತಿ ವಿರುದ್ಧ ನೋಯ್ಡಾದ ಸೆಕ್ಟರ್ 24 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ನಂತರ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

    ಇದೀಗ ಹೆಚ್ಚುವರಿ ಸೆಷನ್ಸ್ ವಿಶೇಷ ನ್ಯಾಯಾಧೀಶ ನಿರಂಜನ್ ಕುಮಾರ್ ಅವರು ಪೋಸ್ಕೋ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣ ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.

  • 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ- ಇಬ್ಬರಿಗೆ 20 ವರ್ಷ ಜೈಲು ಶಿಕ್ಷೆ

    3 ವರ್ಷದ ಬಾಲಕಿ ಮೇಲೆ ಅತ್ಯಾಚಾರ- ಇಬ್ಬರಿಗೆ 20 ವರ್ಷ ಜೈಲು ಶಿಕ್ಷೆ

    – ಓರ್ವ ರೇಪ್ ಮಾಡೋವಾಗ ಮತ್ತೊಬ್ಬ ಕಾಯ್ತಿದ್ದ
    – ಬಾಲಕಿಯ ತಾಯಿ ಬಂದು ಕೇಳಿದಾಗ ಘಟನೆ ಬೆಳಕಿಗೆ

    ಮುಂಬೈ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಇಬ್ಬರು ನೆರೆಹೊರೆಯವರಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಲೈಂಗಿಕ ಅಪರಾಧಗಳಿಗೆ ಮಕ್ಕಳ ವಿಶೇಷ ಸಂರಕ್ಷಣಾ ಕಾಯ್ದೆ (ಪೋಸ್ಕೊ) ಅಡಿಯಲ್ಲಿ ನ್ಯಾಯಾಲಯವು 19 ವರ್ಷದ ಇಬ್ಬರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. 2018 ರಲ್ಲಿ ನೆರೆ ಮನೆಯ 3 ವರ್ಷದ ಬಾಲಕಿಯ ಮೇಲೆ ಈ ಇಬ್ಬರು ಅತ್ಯಾಚಾರ ನಡೆಸಿದ್ದರು. ಈ ಕುರಿತಾಗಿ ತನಿಖೆ ನಡೆಯುತ್ತಿತ್ತು. ಇದೀಗ ಈ ಇಬ್ಬರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆಯನ್ನು ನಾಯಾಲಯ ವಿಧಿಸಿದೆ.

    ಪ್ರಕರಣದ ಹಿನ್ನೆಲೆ:
    ಬಾಲಕಿ ಹಾದಿಯಲ್ಲಿ ಆಟವಾಡುತ್ತಿದ್ದಾಗ ಕಾಮುಕರು ಬಾಲಕಿಯನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇಬ್ಬರಲ್ಲಿ ಓರ್ವ ಬಾಲಕಿಯ ಮೇಲೆ ಅತ್ಯಾಚಾರ ನಡೆಸುವಾಗ ಮತ್ತೊಬ್ಬ ಕಾವಲು ಕಾಯುತ್ತಾ ನಿಂತಿದ್ದಾನೆ. ಈ ವೇಳೆ ಮಗುವಿನ ತಾಯಿ ಏನು ಮಾಡುತ್ತಿದ್ದಿರಾ ಎಂದು ವಿಚಾರಿಸುತ್ತಾ ಬಂದಾಗ ಅಪ್ರಾಪ್ತೆ ಬಾಲಕಿ ನಡೆದಿರುವ ಘಟನೆಯನ್ನು ವಿವರಿಸಿದ್ದಾಳೆ. ಆಗ ಬಾಲಕಿಯ ಪೋಷಕರು ಸೆವ್ರಿಯಲ್ಲಿರುವ ಆರ್‍ಎಕೆ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪೋಲಿಸರು ಈ ಇಬ್ಬರು ಆರೋಪಿಗಳನ್ನು 2018ರಲ್ಲಿಯೇ ಬಂಧಿಸಿದ್ದಾರೆ. ಈ ಕೃತ್ಯಕ್ಕೆ ತನ್ನ ಸ್ನೇಹಿತನನ್ನು ಕೂಡ ಉತ್ತೇಜಿಸಿದ್ದಕ್ಕಾಗಿ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಆರೋಪಿಗಳನ್ನು ಬಂಧಿಸಿದಾಗಿನಿಂದಲೂ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು. ಮಗು ಹೇಳಿಕೆ ಮತ್ತು ವೈದ್ಯಕೀಯ ಪುರಾವೆಗಳನ್ನು ಅವಲಂಬಿಸಿ ಶಿಕ್ಷೆ ನೀಡಿದೆ. ಆರೋಪಿಗಳು ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆ.

  • ಆಂಧ್ರದ ರೀತಿಯಲ್ಲೇ ಹತ್ರಾಸ್ ಆರೋಪಿಗಳಿಗೆ ಶಿಕ್ಷೆ ನೀಡಬೇಕು: ಎನ್.ಮಹೇಶ್

    ಆಂಧ್ರದ ರೀತಿಯಲ್ಲೇ ಹತ್ರಾಸ್ ಆರೋಪಿಗಳಿಗೆ ಶಿಕ್ಷೆ ನೀಡಬೇಕು: ಎನ್.ಮಹೇಶ್

    ಚಾಮರಾಜನಗರ: ಉತ್ತರ ಪ್ರದೇಶದ ಹತ್ರಾಸ್ ಗ್ಯಾಂಗ್‍ರೇಪ್ ಸಂತ್ರಸ್ತೆಯನ್ನು ಕೊಲೆ ಮಾಡಿದ ಸ್ಥಳಕ್ಕೆ ನಾಲ್ವರು ಆರೋಪಿಗಳನ್ನು ಕರೆದುಕೊಂಡು ಹೋಗಿ ಆಂಧ್ರ ಪ್ರದೇಶದ ರೀತಿಯಲ್ಲಿ ಶಿಕ್ಷೆ ನೀಡಬೇಕು ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು. ಇದನ್ನೂ ಓದಿ: ಹತ್ರಾಸ್ ಪ್ರಕರಣ – ಎಸ್‍ಪಿ ಸೇರಿ ಐವರು ಪೊಲೀಸ್ ಅಧಿಕಾರಿಗಳು ಅಮಾನತು

    ನಗರದಲ್ಲಿ ಮಾತನಾಡಿದ ಎನ್.ಮಹೇಶ್, ಉತ್ತರ ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ಮೂವರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆಯಾಗಿದೆ. ಈಗ ಹತ್ರಾಸ್ ಗ್ರಾಮದ ಯುವತಿಯ ಮೇಲೆ ಗ್ಯಾಂಗ್‍ರೇಪ್ ಮಾಡಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಗಳು ಮತ್ತು ಉತ್ತರ ಪ್ರದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಇದು ಕೊಲೆಗಡುಕ ರಾಜ್ಯ ಎಂದು ನನಗೆ ಅನ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಅತ್ಯಾಚಾರಿಗಳಿಗೆ ಕಠೋರ ಶಿಕ್ಷೆ- ಯೋಗಿ ಆದಿತ್ಯನಾಥ್ ಭರವಸೆ

    ಕೊಲೆಗಡುಕರು ತಪ್ಪಿಸಿಕೊಳ್ಳಲು ರಾಜ್ಯಭಾರ ನಡೆಸುತ್ತಿರುವವರು ಸಹಾಯ ನೀಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಯೋಗಿ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಸಂತ್ರಸ್ತೆ ಎಲ್ಲಿ ರೇಪ್ ಆಗಿ ಕೊಲೆಯಾದಳೋ ಅಲ್ಲಿಯೇ ನಾಲ್ವರು ಆರೋಪಿಗಳನ್ನ ಕರೆದುಕೊಂಡು ಹೋಗಿ ಶಿಕ್ಷೆ ಕೊಡಬೇಕು. ಆಂಧ್ರ ಪ್ರದೇಶ ರೀತಿಯಲ್ಲೇ ಇವರಿಗೆ ಎನ್‍ಕೌಂಟರ್ ಮಾಡಿ ಶಿಕ್ಷೆ ನೀಡಬೇಕು ಎಂದು ಎನ್.ಮಹೇಶ್ ಹೇಳಿದರು.

    ಆರೋಪಿಗಳಿಗೆ ಶಿಕ್ಷೆ ಕೊಡುವುದನ್ನು ಇಡೀ ದೇಶ ನೋಡಬೇಕು. ಆದ್ದರಿಂದ ಉತ್ತರ ಪ್ರದೇಶದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.

    ಉತ್ತರ ಪ್ರದೇಶದ ದಲಿತ ಹೆಣ್ಣು ಮಕ್ಕಳನ್ನ ಅಲ್ಲಿನ ಠಾಕೂರ್ ಮತ್ತು ಜಾಟರ್ ಗಳು ಫ್ರೀ ಪ್ರಾಡಕ್ಟ್ ಎಂದು ತಿಳಿದುಕೊಂಡಿದ್ದಾರೆ. ಹೀಗಾಗಿ ಇದನ್ನ ನಿಯಂತ್ರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಇಲ್ಲವಾದರೆ ಯುಪಿ ರಾಜಕಾರಣ ಉಲ್ಟಾ ಆಗುತ್ತದೆ ಎಂದು ಎನ್.ಮಹೇಶ್ ಆಕ್ರೋಶದಿಂದ ಹೇಳಿದರು.