Tag: ಶಿಕ್ಷೆ

  • 88 ಹುಡುಗಿಯರಿಗೆ ಬಟ್ಟೆ ಬಿಚ್ಚುವಂತೆ ಶಿಕ್ಷೆ ನೀಡಿದ ಶಿಕ್ಷಕರು

    88 ಹುಡುಗಿಯರಿಗೆ ಬಟ್ಟೆ ಬಿಚ್ಚುವಂತೆ ಶಿಕ್ಷೆ ನೀಡಿದ ಶಿಕ್ಷಕರು

    ಇಟಾನಗರ್: ಅರುಣಾಚಲಪ್ರದೇಶದ ಬಾಲಕಿಯರ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಬಟ್ಟೆ ಬಿಚ್ಚುವಂತೆ ಮೂವರು ಶಿಕ್ಷಕರು ಶಿಕ್ಷೆ ನೀಡಿರುವ ಬಗ್ಗೆ ವರದಿಯಾಗಿದೆ.

    ನವೆಂಬರ್ 23ರಂದು ಪಾಪುಮ್ ಪರೆ ಜಿಲ್ಲೆಯ ತಾನಿ ಹಪ್ಪಾದಲ್ಲಿರುವ ಕಸ್ತೂರಬಾ ಬಾಲಿಕಾ ವಿದ್ಯಾಲಯದಲ್ಲಿ 6 ಮತ್ತು 7ನೇ ತರಗತಿಯ ಸುಮಾರು 88 ವಿದ್ಯಾರ್ಥಿನಿಯರಿಗೆ ಈ ರೀತಿ ಅವಮಾನಕರವಾಗಿ ಶಿಕ್ಷೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಖ್ಯ ಶಿಕ್ಷಕರ ಬಗ್ಗೆ ಕೆಟ್ಟ ಶಬ್ದಗಳನ್ನ ಬರೆದಿದ್ದರಿಂದ ಈ ರೀತಿ ಶಿಕ್ಷಿಸಲಾಗಿದೆ.

    ನವೆಂಬರ್ 27ರಂದು ವಿದ್ಯಾರ್ಥಿನಿಯರು ಆಲ್ ಸಗಾಲೀ ಸ್ಟೂಡೆಂಟ್ಸ್ ಯೂನಿಯನ್(ಎಎಸ್‍ಎಸ್‍ಯು) ಮೊರೆ ಹೋಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ದೂರಿನ ಪ್ರಕಾರ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಕೆಟ್ಟ ಶಬ್ದಗಳನ್ನ ಬರೆಯಲಾಗಿದ್ದ ಪೇಪರ್ ಸಿಕ್ಕ ನಂತರ ಇಬ್ಬರು ಸಹಾಯಕ ಶಿಕ್ಷಕರು ಹಾಗೂ ಒಬ್ಬರು ಜೂನಿಯರ್ ಶಿಕ್ಷಕರು 88 ವಿದ್ಯಾಥಿಗಳಿಗೆ ಇತರೆ ವಿದ್ಯಾರ್ಥಿನಿಯರ ಮುಂದೆ ಬಟ್ಟೆ ಬಿಚ್ಚುವಂತೆ ಶಿಕ್ಷಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಎಎಸ್‍ಎಸ್‍ಯು ಎಫ್‍ಐಆರ್ ದಾಖಲಿಸಿರುವುದನ್ನು ಪಾಪುಮ್ ಪರೇ ಪೊಲೀಸ್ ವರಿಷ್ಠಾಧಿಕಾರಿ ಟಮ್ಮಿ ಆಮೋ ಖಚಿತಪಡಿಸಿದ್ದಾರೆ. ಕೇಸ್ ದಾಖಲಿಸಿಕೊಳ್ಳುವುದಕ್ಕೂ ಮುನ್ನ ವಿದ್ಯಾರ್ಥಿನಿಯರು, ಅವರ ಪೋಷಕರು ಹಾಗೂ ಶಿಕ್ಷಕರನ್ನು ವಿಚಾರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ಅರುಣಾಚಲಪ್ರದೇಶ ಕಾಂಗ್ರೆಸ್ ಕಮಿಟಿ ಈ ಘಟನೆಯನ್ನು ಖಂಡಿಸಿದ್ದು, ಶಿಕ್ಷಕರ ಈ ರೀತಿಯ ಕೃತ್ಯದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಮಕ್ಕಳ ಘನತೆಗೆ ಧಕ್ಕೆ ತರುವುದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧ ಎಂದು ಹೇಳಿಕೆಯಲ್ಲಿ ತಿಳಿಸಿದೆ.

  • ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ಬೆಂಗಳೂರು: ಬಿಡದಿ ಧ್ಯಾನಪೀಠ ಮಠದ ನಿತ್ಯಾನಂದ ಸ್ವಾಮಿಗೆ 7 ವರ್ಷ ಹಿಂದಿನ ರಾಸಲೀಲೆ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ.

    2010ರಲ್ಲಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವುದು ನಿತ್ಯಾನಂದ ಸ್ವಾಮಿಯೇ ಎಂಬುದು ಇದೀಗ ಖಚಿತವಾಗಿದೆ. ಸ್ವಾಮಿ ನಿತ್ಯಾನಂದ ಅವರೇ ರಾಸಲೀಲೆ ಸಿಡಿಯಲ್ಲಿರೋದು ಅನ್ನೋ ವಿಚಾರವನ್ನು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ದೃಢಪಡಿಸಿದೆ. ಈಗ ಇದೇ ಎಫ್‍ಎಸ್‍ಎಲ್ ವರದಿ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ.

    2010ರಲ್ಲಿ ಅಂದಿನ ಸಿಐಡಿ ಡಿವೈಎಸ್‍ಪಿ ಚರಣ್ ರೆಡ್ಡಿ ಈ ವರದಿ ಸಲ್ಲಿಕೆ ಮಾಡಿದ್ದರು. ಸಿಐಡಿ ಸಿಡಿಯಲ್ಲಿರುವುದು ನಿತ್ಯಾನಂದ ಎಂದು ಖಚಿತ ಪಡಿಸಿಕೊಳ್ಳಲು ಸಿಡಿಯನ್ನ ದೆಹಲಿಯ ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಸಿಡಿಯಲ್ಲಿರುವುದು ನಾನಲ್ಲ ಅಂತ ನಿತ್ಯಾನಂದ ಸ್ವಾಮಿ ವಾದ ಮಂಡಿಸಿದ್ದರು. ಆದರೆ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಸಿಡಿಯಲ್ಲಿರುವುದು ನಿತ್ಯಾನಂದ ಅವರೇ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಸಿಕ್ಕಿದಂತಾಗಿದೆ.

    ಇದರಿಂದಾಗಿ ಪ್ರಕರಣದಲ್ಲಿ ನಿತ್ಯಾನಂದಗೆ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಿದ್ದು, ಇದೀಗ ಸ್ವಾಮೀಜಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

    ವಿಶ್ವಾದಾದ್ಯಂತ ಸ್ವಾಮಿ ನಿತ್ಯಾನಂದ ಅವರಿಗೆ ಲಕ್ಷಾಂತರ ಮಂದಿ ಭಕ್ತಾದಿಗಳಿದ್ದು, 2010ರಲ್ಲಿ ಸ್ವಾಮೀಜಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದಾರೆಂಬ ಸುದ್ದಿ ವಿಶ್ವದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ನಡೆಸಲು ಆದೇಶ ನೀಡಿತ್ತು.

  • ಮಗಳ ಮೇಲೆ ಅತ್ಯಾಚಾರವೆಸಗಿದ್ದ ಮಲತಂದೆಗೆ ಜೀವಾವಧಿ ಶಿಕ್ಷೆ

    ಮಗಳ ಮೇಲೆ ಅತ್ಯಾಚಾರವೆಸಗಿದ್ದ ಮಲತಂದೆಗೆ ಜೀವಾವಧಿ ಶಿಕ್ಷೆ

    ಕೋಲಾರ: ಸಾಕುತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

    ಕೋಲಾರ ನಗರ ನಿವಾಸಿಯಾದ ಅಪರಾಧಿ ಚಂದ್ರು (40) ಜೀವಾವಧಿ ಶಿಕ್ಷೆಗೆ ಒಳಗಾಗಿರುವವನು. 2015 ರ ಡಿಸೆಂಬರ್ 17 ರಂದು ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಯಾಗಿದ್ದು, ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಗರ್ಭಿಣಿಯಾದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ತಂದೆಯನ್ನು ಬಂಧಿಸಿದ್ದು, ಪ್ರಸ್ತುತ ಕೋಲಾರದ 2ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

    ನಡೆದಿದ್ದೇನು?: ಮೂಲತಃ ಬೆಂಗಳೂರಿನವರಾದ ಸಂತ್ರಸ್ತೆಯ ತಾಯಿ ಚಂದ್ರು ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದರು. ಇದರ ಬಗ್ಗೆ ತಿಳಿದ ಪತಿ ಪತ್ನಿಯನ್ನು ಬಿಟ್ಟು ಹೋಗಿದ್ದರು. ಬಳಿಕ ಚಂದ್ರುವನ್ನು ಎರಡನೇ ಮದುವೆಯಾಗಿದ್ದರು. ಮದುವೆಯಾದಾಗ ತನ್ನ ಜೊತೆ ಮಗಳನ್ನು ಕೂಡ ಆತನ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಪಾಪಿ ಮಲತಂದೆ ಯಾರೂ ಇಲ್ಲದ ಸಮಯದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದ. ಯಾರಿಗೂ ಹೇಳಬಾರದು ಎಂದು ಜೀವ ಬೆದರಿಕೆ ಹಾಕಿದ್ದ. ಕೊನೆಗೆ ಭಯದಿಂದ ಸಂತ್ರಸ್ತೆ ತಾಯಿಗೂ ಕೂಡ ವಿಷಯ ಹೇಳಿರಲಿಲ್ಲ. ಮೂರು ತಿಂಗಳು ಗರ್ಭಿಣಿಯಾದ ನಂತರ ತಾಯಿಗೆ ಎಲ್ಲಾ ವಿಚಾರವನ್ನು ತಿಳಿಸಿದ್ದಳು. ಬಳಿಕ ತಾಯಿ ಪೊಲೀಸ್ ಠಾಣೆಗೆ ಹೋಗಿ ಚಂದ್ರು ವಿರುದ್ಧ ದೂರು ನೀಡಿದ್ದರು.

    ಪೊಲೀಸರು ಚಂದ್ರವನ್ನು ಬಂಧಿಸಿ ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ್ದು, ಇದೀಗ 2ನೇ ಜಿಲ್ಲಾ ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸದ್ಯ ಸಂತ್ರಸ್ತೆಗೆ ಒಂದು ಮಗುವಾಗಿದ್ದು, ತಾಯಿ ಮಗಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

  • ಅಮೆರಿಕದ ಮಹಿಳೆಗೆ ಮೈಸೂರಿನಲ್ಲಿ ಲೈಂಗಿಕ ದೌರ್ಜನ್ಯ: ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ

    ಅಮೆರಿಕದ ಮಹಿಳೆಗೆ ಮೈಸೂರಿನಲ್ಲಿ ಲೈಂಗಿಕ ದೌರ್ಜನ್ಯ: ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ

    ಮೈಸೂರು: ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದ್ದು, ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ ದಂಡ ವಿಧಿಸಿದೆ.

    2015ರಲ್ಲಿ ಆದಿವಾಸಿಗಳ ಮಹಿಳಾ ಅಧ್ಯಯಕ್ಕಾಗಿ ಅಮೆರಿಕದಿಂದ ಬಂದಿದ್ದ ಸಂತ್ರಸ್ತೆ ಅನಾರೋಗ್ಯಕ್ಕೆ ಒಳಗಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮೇಲ್ ನರ್ಸ್ ಆಗಿದ್ದ ಆರೋಪಿ ಸುಮೀತ್ ಚಿಕಿತ್ಸೆ ನೀಡುವ ನೆಪದಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

    ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಮೈಸೂರು 7ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಚಂದ್ರಶೇಖರ್ ಅವರು ಇಂದು ಮಹತ್ವದ ತೀರ್ಪು ನೀಡಿದ್ದಾರೆ. 376/2ಇ ಸೆಕ್ಷನ್ ಅಡಿಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 25 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ಭಾರತ ದೇಶದ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೂ ಶಿಕ್ಷೆ ವಿಧಿಸಲಾಗಿದೆ.

    ಸಂತ್ರಸ್ಥೆ ಅಮೇರಿಕಾ ರಾಯಭಾರಿ ಕಚೇರಿಯಿಂದ ಅನುಮತಿ ಪಡೆದು ಆರೋಪಿಯ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ತಮ್ಮ ದೇಶಕ್ಕೆ ವಾಪಸ್ಸಾಗಿದ್ದರು. ಸಂತ್ರಸ್ತೆ ಸ್ಕೈಪ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಕುರಿತು ಮೈಸೂರಿನ ಎನ್.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

  • ಗ್ರಾಮದ ಯುವತಿಯನ್ನ ಅಣ್ಣ ಪ್ರೀತ್ಸಿದ್ದಕ್ಕೆ ತಂಗಿಯನ್ನ ನಗ್ನಗೊಳಿಸಿ ಮೆರವಣಿಗೆ ಮಾಡಿದ್ರು

    ಗ್ರಾಮದ ಯುವತಿಯನ್ನ ಅಣ್ಣ ಪ್ರೀತ್ಸಿದ್ದಕ್ಕೆ ತಂಗಿಯನ್ನ ನಗ್ನಗೊಳಿಸಿ ಮೆರವಣಿಗೆ ಮಾಡಿದ್ರು

    ಇಸ್ಲಾಮಾಬಾದ್: ಗ್ರಾಮದ ಯುವತಿಯನ್ನ ಯುವಕ ಪ್ರೀತಿಸಿದ್ದಕ್ಕೆ ಆಕೆಯ ತಂಗಿಯನ್ನ ನಗ್ನಗೊಳಿಸಿ 1 ಗಂಟೆ ಕಾಲ ಮೆರವಣಿಗೆ ಮಾಡೋ ಮೂಲಕ ಶಿಕ್ಷಿಸಿರೋ ಅಮಾನವೀಯ ಘಟನೆ ಪಾಕಿಸ್ತಾನದ ಖೈಬರ್ ಫಕ್ತುಂಕ್ವಾ ಪ್ರಾಂತ್ಯದಲ್ಲಿ ನಡೆದಿದೆ.

    ಇಲ್ಲಿನ ದೇರಾ ಇಸ್ಮೈಲ್ ಖಾನ್ ಮಟ್ ಪ್ರದೇಶದಲ್ಲಿ ಅಕ್ಟೋಬರ್ 27ರಂದು ಈ ಘಟನೆ ನಡೆದಿದೆ. 16 ವರ್ಷದ ಬಾಲಕಿ ನೀರು ತೆಗೆದುಕೊಂಡು ಮನೆಗೆ ಹಿಂದಿರುಗುವಾಗ ಕೆಲವರು ಆಕೆಯನ್ನ ಸುತ್ತುವರಿದಿದ್ದಾರೆ. ನಂತರ ಆಕೆಯನ್ನ ವಿವಸ್ತ್ರಗೊಳಿಸಿ ಆ ಪ್ರದೇಶದಲ್ಲಿ ನಡೆಯುವಂತೆ ಮಾಡಿದ್ದಾರೆ. ಈ ವೇಳೆ ಭಯದಿಂದ ಯಾರೊಬ್ಬರೂ ಆಕೆಯ ಸಹಾಯಕ್ಕೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

    ಯುವತಿಯ ಅಣ್ಣ ಸಜ್ಜದ್ ಅದೇ ಗ್ರಾಮದ ಯುವತಿಯನ್ನ ಮೂರು ವರ್ಷಗಳ ಹಿಂದೆ ಪ್ರೀತಿಸುತ್ತಿದ್ದ ಎಂದು ವರದಿಯಾಗಿದೆ. ಗ್ರಾಮದ ಪಂಚಾಯ್ತಿಯಲ್ಲಿ ಈ ವಿಷಯವನ್ನ ಚರ್ಚಿಸಿ ಸಜ್ಜದ್ ಕುಟುಂಬಕ್ಕೆ 1 ಲಕ್ಷ 5 ಸಾವಿರ ರೂ. ದಂಡ ಕೂಡ ವಿಧಿಸಲಾಗಿತ್ತು. ಆದ್ರೆ ಗ್ರಾಮಸ್ಥರು ಸಜ್ಜದ್ ಕುಟುಂಬದ ವಿರುದ್ಧ ದ್ವೇಷ ಇಟ್ಟುಕೊಂಡು ಆಕೆಯ ತಂಗಿಗೆ ಶಿಕ್ಷೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ.

    ಬಾಲಕಿಗೆ ಶಿಕ್ಷಿಸಿದ ಹಿನ್ನೆಲೆಯಲ್ಲಿ ಈಗಾಗಲೇ 8 ಆರೋಪಿಗಳನ್ನ ಬಂಧಿಸಲಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಖೈಬರ್ ಫಕ್ತುಂಕ್ವಾ ಸಿಎಂ ಪರ್ವೇಸ್ ಖಟ್ಟಕ್ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

  • ಚೀನಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ 3 ವರ್ಷ ಜೈಲು ಶಿಕ್ಷೆ!

    ಚೀನಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ 3 ವರ್ಷ ಜೈಲು ಶಿಕ್ಷೆ!

    ಬೀಜಿಂಗ್: ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ತರಲು ಚೀನಾ ಸರ್ಕಾರ ಮುಂದಾಗಿದೆ. ಪ್ರಸ್ತುತ 15 ದಿನಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದ್ದು, ಈಗ ಮತ್ತಷ್ಟು ಕಠಿಣ ಕಾನೂನು ತರಲು ಚೀನಾ ಸಂಸತ್ತು ಮುಂದಾಗಿದೆ.

    ಸೋಮವಾರದಿಂದ ಅಧಿವೇಶನ ಆರಂಭಗೊಂಡಿದ್ದು, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ಸಿನ ಕಾನೂನು ಸದಸ್ಯರು ಈಗಾಗಲೇ ಕರಡು ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ.

    ಅಧಿವೇಶನ ಆರಂಭ ಮತ್ತು ಕೊನೆಯಲ್ಲಿ, ಪ್ರಮಾಣವಚನ ಸಮಾರಂಭ, ಧ್ವಜ ದಿನಾಚರಣೆ, ಪ್ರಮುಖ ಆಚರಣೆ, ಪ್ರಶಸ್ತಿ ಸಮಾರಂಭ, ಪ್ರಮುಖ ರಾಜತಾಂತ್ರಿಕ ಸಂದರ್ಭ, ಕ್ರೀಡಾ ಕಾರ್ಯಕ್ರದಲ್ಲಿ ರಾಷ್ಟ್ರಗೀತೆ ಮೊಳಗಬೇಕು. ಅಂತ್ಯಸಂಸ್ಕಾರ, ಖಾಸಗಿ ಕಾರ್ಯಕ್ರಮ, ಸಾರ್ವಜನಿಕ ಜಾಗದಲ್ಲಿ ರಾಷ್ಟ್ರಗೀತೆಯನ್ನು ಹಿನ್ನೆಲೆ ಮ್ಯೂಸಿಕ್ ಆಗಿ ಬಳಸುವುದನ್ನು ನಿಷೇಧ ವಿಧಿಸಿರುವ ಅಂಶ ಕರಡು ಮಸೂದೆಯಲ್ಲಿದೆ.

    ದೇಶಭಕ್ತಿಯನ್ನು ಬೆಳೆಸುವ ಉದ್ದೇಶದಿಂದಾಗಿ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಯ ಮಕ್ಕಳ ಪಠ್ಯದಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಇರಬೇಕು ಎಂದು ತಿಳಿಸಲಾಗಿದೆ.

    ನಿಮ್ಮ ಅಭಿಪ್ರಾಯ ಏನು? ಭಾರತದಲ್ಲಿ ಚಲನ ಚಿತ್ರ ಮಂದಿರದಲ್ಲಿ ರಾಷ್ಟ್ರಗೀತೆ ಮೊಳಗುವ ಬಗ್ಗೆ ಪರ ವಿರೋಧ ಕೇಳಿ ಬಂದಿದೆ. ಈ ಮಧ್ಯೆ ರಾಷ್ಟ್ರಗೀತೆಗೆ ಅಗೌರವ ತೋರಿಸಿದ ವ್ಯಕ್ತಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ರೂಪಿಸಲು ಚೀನಾ ಮುಂದಾಗಿದ್ದು, ಈ ಕ್ರಮದ ಬಗ್ಗೆ ನಿಮ್ಮ ನಿಲುವು ಏನು? ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

  • ತಡವಾಗಿ ಸ್ಕೂಲ್ ಫೀಸ್ ಕಟ್ಟಿ ಫೈನ್ ಕಟ್ಟಿಲ್ಲವೆಂದು ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗೆ ಕೂರಿಸಿದ ಶಿಕ್ಷಕರು

    ತಡವಾಗಿ ಸ್ಕೂಲ್ ಫೀಸ್ ಕಟ್ಟಿ ಫೈನ್ ಕಟ್ಟಿಲ್ಲವೆಂದು ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗೆ ಕೂರಿಸಿದ ಶಿಕ್ಷಕರು

    ಹೈದರಾಬಾದ್: ಶಾಲೆಯ ಫೀಸ್ ಕಟ್ಟಲು ಪೋಷಕರು ಲೇಟ್ ಮಾಡಿದ ಕಾರಣ ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗಡೆ ಕೂರಿಸಿರುವ ಅಮಾನವೀಯ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸಿರಿಲಿಂಗಮ್‍ಪಲ್ಲಿಯ ಎಂಎನ್‍ಆರ್ ಎಂಬ ಖಾಸಗಿ ಶಾಲೆಯಲ್ಲಿ ನಡೆದಿದೆ.

    ಶಿಕ್ಷಕರು ಇಬ್ಬರು ವಿದ್ಯಾರ್ಥಿನಿಯರು ಮತ್ತು ಓರ್ವ ವಿದ್ಯಾರ್ಥಿಯನ್ನು ಶಾಲೆಯ ಕಾರಿಡಾರ್ ನಲ್ಲಿ ಯೇ ಕೂರಿಸಿದ್ದಾರೆ. ಮಕ್ಕಳು 7 ಮತ್ತು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬರೋಬ್ಬರಿ ಮೂರು ಗಂಟೆಗಳ ಕಾಲ ಹೊರಗಡೆ ಕುಳಿತಿದ್ದಾರೆ. ಈ ಮಕ್ಕಳು ಶಾಲೆಯ ಫೀಸ್ ತಡವಾಗಿ ಕಟ್ಟಿದ್ದು, ಇದಕ್ಕೆ ಫೈನ್ ಹಾಕಲಾಗಿತ್ತು. ಆದ್ರೆ ಫೈನ್ ಹಣ ಕಟ್ಟಿಲ್ಲವೆಂದು ಈ ರೀತಿ ಶೀಕ್ಷೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಮಕ್ಕಳನ್ನ ಈ ರೀತಿ ತರಗತಿಯಿಂದ ಹೊರಗೆ ಕೂರಿಸಿದ್ದು ಮಾನಸಿಕ ಅವಮಾನ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಮಕ್ಕಳ ಹಕ್ಕುಗಳ ಸಂಘದವರಾದ ಅಚ್ಯುತ್ ರಾವ್ ತಿಳಿಸಿದ್ದಾರೆ.

    ಈ ಕುರಿತು ರಂಗಾರೆಡ್ಡಿ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಎಂಎನ್‍ಆರ್ ಶಾಲೆ ಮಕ್ಕಳ ಹಕ್ಕುಗಳನ್ನ ಉಲ್ಲಂಘನೆ ಮಾಡಿದೆ. ಈ ಕುರಿತು ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಒತ್ತಾಯಿಸಿದ್ದೇವೆ ಎಂದು ಅಚ್ಯುತ್ ರಾವ್ ಹೇಳಿದ್ದಾರೆ.

  • ಹಾಲು ಕುಡಿಯದ್ದಕ್ಕೆ ಶಿಕ್ಷೆಯಾಗಿ 3 ವರ್ಷದ ಮಗಳನ್ನ ನಡುರಾತ್ರಿ ಮನೆಯಿಂದ ಹೊರಗೆ ನಿಲ್ಲಿಸಿದ ತಂದೆ- ಬಾಲಕಿ ನಾಪತ್ತೆ

    ಹಾಲು ಕುಡಿಯದ್ದಕ್ಕೆ ಶಿಕ್ಷೆಯಾಗಿ 3 ವರ್ಷದ ಮಗಳನ್ನ ನಡುರಾತ್ರಿ ಮನೆಯಿಂದ ಹೊರಗೆ ನಿಲ್ಲಿಸಿದ ತಂದೆ- ಬಾಲಕಿ ನಾಪತ್ತೆ

    ಟೆಕ್ಸಾಸ್: ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ 3 ವರ್ಷದ ಬಾಲಕಿಗೆ ಆಕೆಯ ತಂದೆ ಮನೆಯಿಂದ ಹೊರಗೆ ಒಬ್ಬಳೇ ನಿಲ್ಲುವಂತೆ ಹೇಳಿ ಶಿಕ್ಷೆ ನೀಡಿದ್ದು, ಈಗ ಬಾಲಕಿ ಕಾಣೆಯಾಗಿರುವ ಘಟನೆ ಟೆಕ್ಸಾಸ್‍ನಲ್ಲಿ ನಡೆದಿದೆ.

    ಇಲ್ಲಿನ ಸಬ್ ಅರ್ಬನ್ ಡಲ್ಲಾಸ್‍ನಲ್ಲಿ ಬಾಲಕಿ ಶೆರಿನ್‍ಳ ತಂದೆ 37 ವರ್ಷದ ವೆಸ್ಲೀ ಮ್ಯಾಥ್ಯೂಸ್, ರಾತ್ರಿ ವೇಳೆ ಮಗಳನ್ನು ಮನೆಯ ಹಿಂದೆ ಇದ್ದ ಕಾಲುದಾರಿಯಲ್ಲಿ ನಿಲ್ಲುವಂತೆ ಹೇಳಿದ್ದರು. ಬಾಲಕಿ ನಾಪತ್ತೆಯಾಗಿರುವ ಕಾರಣ ಶನಿವಾರದಂದು ಮ್ಯಾಥ್ಯೂಸ್‍ರನ್ನು ವಶಕ್ಕೆ ಪಡೆದು ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ರಿಚರ್ಡ್‍ಸನ್‍ನ ಪೊಲೀಸರು ತಿಳಿಸಿದ್ದಾರೆ.

    ಕಳೆದ ಶನಿವಾರ ಶೆರಿನ್ ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ ಮಧ್ಯರಾತ್ರಿ 3 ಗಂಟೆ ವೇಳೆಯಲ್ಲಿ ಮನೆಯ ಬಳಿಯಿದ್ದ ದೊಡ್ಡ ಮರದ ಬಳಿ ನಿಲ್ಲುವಂತೆ ಸೂಚಿಸಿದ್ದೆ. ಆದ್ರೆ 15 ನಿಮಿಷಗಳ ಬಳಿಕ ನೋಡಿದಾಗ ಆಕೆ ಅಲ್ಲಿ ಇರಲಿಲ್ಲ ಎಂದು ಮ್ಯಾಥ್ಯೂಸ್ ಪೊಲೀಸರಿಗೆ ತಿಳಿಸಿದ್ದಾರೆ.

    ಮಗಳನ್ನ ಮನೆಯಿಂದ ಹೊರಗೆ ಕಳಿಸಿದ 5 ಗಂಟೆಗಳ ಬಳಿಕ ಮ್ಯಾಥ್ಯೂಸ್ ಪೊಲೀಸರಿಗೆ ಕರೆ ಮಾಡಿ ಮಗಳು ಕಾಣೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಮನೆಯ ಹೊರಗಡೆ ದಾರಿಯಲ್ಲಿ ಗುಳ್ಳೇನರಿಗಳನ್ನ ನೋಡಿದ್ದು, ಅಲ್ಲೇ ಮಗಳಿಗೆ ನಿಲ್ಲುವಂತೆ ಹೇಳಿದ್ದಾಗಿ ಮ್ಯಾಥ್ಯೂಸ್ ಪೊಲೀಸರಿಗೆ ಹೇಳಿದ್ದಾರೆ.

    ಶೆರಿನ್ ಜನಿಸಿದ್ದು ಭಾರತದಲ್ಲಿ. ಮ್ಯಾಥ್ಯೂಸ್ ಕುಟುಂಬ ಆಕೆಯನ್ನು ದತ್ತು ಪಡೆದಿತ್ತು. ಆಕೆ ಅಮೆರಿಕಗೆ ಬರುವ ಮುಂಚೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದಳು. ಈಗ ವಿಶೇಷ ಡಯಟ್‍ನಲ್ಲಿದ್ದಳು ಎಂದು ರಿಚರ್ಡ್‍ಸನ್ ಪೊಲೀಸ್ ಇಲಾಖೆಯ ವಕ್ತಾರರಾದ ಸಜೆಂಟ್ ಕೆವಿನ್ ಪರ್ಲಿಚ್ ತಿಳಿಸಿದ್ದಾರೆ.

  • ‘ದಯವಿಟ್ಟು ಈ ರೀತಿ ಶಿಕ್ಷೆ ನೀಡಬೇಡಿ’ ಅಂತ ಬರೆದು 5ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ

    ‘ದಯವಿಟ್ಟು ಈ ರೀತಿ ಶಿಕ್ಷೆ ನೀಡಬೇಡಿ’ ಅಂತ ಬರೆದು 5ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ

    ಗೋರಖ್‍ಪುರ್: ಶಾಲೆಯಲ್ಲಿ ಶಿಕ್ಷಕಿ ಕಠಿಣ ಶಿಕ್ಷೆ ಕೊಟ್ಟಿದ್ದಕ್ಕೆ 5ನೇ ತರಗತಿಯ ಹುಡುಗ ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಗೋರಖ್‍ಪುರ್‍ನಲ್ಲಿ ನಡೆದಿದೆ.

    ಸೆಂಟ್ ಆಂಟೋನಿ ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದ ನವನೀತ್ ಪ್ರಕಾಶ್(8) ಆತ್ಮಹತ್ಯೆಗೆ ಶರಣಾದ ಬಾಲಕ. ವಿಷ ಸೇವಿಸಿದ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ‘ದಯವಿಟ್ಟು ನನ್ನ ಶಿಕ್ಷಕರಿಗೆ ಹೇಳಿ ಯಾರಿಗೂ ಈ ತರಹ ಕಠಿಣ ಶಿಕ್ಷೆ ನೀಡಬಾರದು’ ಎಂದು ತನ್ನ ಕೊನೆಯ ಆಸೆಯನ್ನು ನವನೀತ್ ಡೆತ್‍ನೋಟ್‍ನಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸೆಪ್ಟಂಬರ್ 15 ರಂದು ನವನೀತ್ ಪರೀಕ್ಷೆಯನ್ನು ಬರೆಯಲು ಶಾಲೆಗೆ ಹೋಗಿದ್ದನು. ಶಾಲೆಯಿಂದ ಮನೆಗೆ ಬಂದ ಬಳಿಕ ನವನೀತ್ ಬಹಳ ಬೇಸರಗೊಂಡಿದ್ದ ಬಳಿಕ ವಿಷ ಸೇವಿಸಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.

    ಶಾಲೆಯಲ್ಲಿ ನನ್ನನ್ನು 3 ಪಿರಿಯಡ್‍ಗಳ ಕಾಲ ಬೆಂಚ್ ಮೇಲೆ ನಿಲ್ಲಿಸಿದ್ದರು ಮತ್ತು ನನ್ನ ಹತ್ತಿರ ಕೆಟ್ಟದಾಗಿ ವರ್ತಿಸಿದ್ದರು ಎಂದು ನವನೀತ್ ಡೆತ್‍ನೋಟ್ ನಲ್ಲಿ ಬರೆದಿದ್ದಾನೆ.

    ಮಗನಿಗೆ ಶಾಲೆಯ ಶಿಕ್ಷಕರು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಶಾಲೆ ಹಾಗೂ ಶಿಕ್ಷಕಿಯ ವಿರುದ್ಧ ನವನೀತ್ ಪೋಷಕರು ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲಾ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಶಾಲಾ ಸಮವಸ್ತ್ರ ಧರಿಸಿ ಬರದಿದ್ದಕ್ಕೆ ಬಾಲಕಿಗೆ ಏನು ಶಿಕ್ಷೆ ಕೊಟ್ರು ಗೊತ್ತಾ?

    ಶಾಲಾ ಸಮವಸ್ತ್ರ ಧರಿಸಿ ಬರದಿದ್ದಕ್ಕೆ ಬಾಲಕಿಗೆ ಏನು ಶಿಕ್ಷೆ ಕೊಟ್ರು ಗೊತ್ತಾ?

    ಹೈದರಾಬಾದ್: ಶಾಲಾ ಸಮವಸ್ತ್ರ ಧರಿಸಿ ಬರಲಿಲ್ಲವೆಂಬ ಕಾರಣಕ್ಕೆ ಶಿಕ್ಷೆಯಾಗಿ ಹುಡುಗರ ಟಾಯ್ಲೆಟ್‍ಗೆ ನನ್ನನ್ನು ಕಳಿಸಿದ್ರು ಎಂದು ಹೈದರಾಬಾದ್‍ನ ಖಾಸಗಿ ಶಲೆಯ 11 ವರ್ಷದ ಬಾಲಕಿಯೊಬ್ಬಳು ಹೇಳಿದ್ದಾಳೆ.

    ಬಾಲಕಿಯ ತಂದೆ ವಿಡಿಯೋ ಮಾಡಿದ್ದು, ಇದರಲ್ಲಿ 5ನೇ ತರಗತಿಯ ಬಾಲಕಿ ತನಗೆ ನೀಡಿದ ಶಿಕ್ಷೆಯ ಬಗ್ಗೆ ವಿವರಿಸಿದ್ದಾಳೆ. ನಾನು ಕ್ಲಾಸ್‍ಗೆ ಹೋಗುವ ಸಂದರ್ಭದಲ್ಲಿ ಮೊದಲನೇ ಮಹಡಿಯಲ್ಲಿ ಪಿಟಿ ಟೀಚರ್ ನನ್ನನ್ನು ಹಿಡಿದರು. ನಾನು ನನ್ನ ಡೈರಿ ನೋಡುವಂತೆ ಕೇಳಿಕೊಂಡೆ. ಆದ್ರೆ ಯಾರೂ ಕೆಳಿಸಿಕೊಳ್ಳಲೇ ಇಲ್ಲ. ನನ್ನ ಮೇಲೆ ಕಿರುಚಾಡಲು ಶುರು ಮಾಡಿದ್ರು. ನನಗೆ ಭಯವಾಗಿ ಏನೂ ಹೇಳಲಿಲ್ಲ. ಇಂಗ್ಲಿಷ್ ಶಿಕ್ಷಕರು ಹಾಗೂ 10ನೇ ತರಗತಿಯ ತೆಲುಗು ಶಿಕ್ಷಕರು ಸೇರಿದಂತೆ 2-3 ಶಿಕ್ಷಕರು ಅಲ್ಲಿದ್ದರು. ಸಮವಸ್ತ್ರದ ಬದಲು ಕಲರ್ ಡ್ರೆಸ್ ಧರಿಸಿ ಬಂದಿದ್ದಲ್ಲದೆ ನಮ್ಮ ಪ್ರಶ್ನೆಗಳಿಗೆ ಇವಳು ಉತ್ತರವೇ ಕೊಡುತ್ತಿಲ್ಲವಲ್ಲ ಎಂದು ಹೇಳುತ್ತಿದ್ದರು. ನಾವು ಈಕೆಯನ್ನ ಹುಡುಗರ ಟಾಯ್ಲೆಟ್‍ಗೆ ಕಳಿಸೋಣ ಎಂದರು. ಎಲ್ಲಾ ಮಕ್ಕಳು ನೋಡುತ್ತಿದ್ದರು ಎಂದು ವಿಡಿಯೋದಲ್ಲಿ ಬಾಲಕಿ ಹೇಳಿಕೊಂಡಿದ್ದಾಳೆ.

    ಬಾಲಕಿಯನ್ನು ಹುಡುಗರ ಟಾಯ್ಲೆಟ್‍ನಲ್ಲಿ 5 ನಿಮಿಷ ಇರುವಂತೆ ಮಾಡಿದ್ದಾಗಿ ಹೇಳಿದ್ದಾಳೆ. ನಂತರ ಆಕೆಯನ್ನು ಕ್ಲಾಸ್‍ಗೆ ಕಳಿಸಲಾಗಿದೆ. ಸಮವಸ್ತ್ರವನ್ನು ಒಗೆದ ನಂತರ ಇನ್ನೂ ಒದ್ದೆ ಇತ್ತು. ಹೀಗಾಗಿ ಕಲರ್ ಡ್ರೆಸ್ ಧರಿಸಿ ಬಂದಿರುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತನ್ನ ತಾಯಿ ಡೈರಿಯಲ್ಲಿ ಬರೆದಿರುವುದಾಗಿ ಬಾಲಕಿ ಸಮಾಜವಿಜ್ಞಾನ ಶಿಕ್ಷಕಿಗೆ ಹೇಳಿದ್ದಾಳೆ.

    ಘಟನೆಯಿಂದ ನೊಂದ ಬಾಲಕಿ ತಾನು ಆ ಶಾಲೆಗೆ ಹೋಗೋದಿಲ್ಲ ಎಂದು ಹೇಳಿದ್ದಾಳೆ. ಆದ್ರೆ ನಾನು ಶಿಕ್ಷಕರೊಂದಿಗೆ ಮಾತಾಡಿದ್ದೇನೆ. ಇನ್ನು ಯಾರೂ ತೊಂದರೆ ಕೊಡೋದಿಲ್ಲ ಎಂದು ಆಕೆಯ ತಂದೆ ಹೇಳಿತ್ತಿರೋದನ್ನ ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು.

    ಬಾಲಕಿಯ ತಂದೆ ಮಾನವ ಹಕ್ಕು ಹೋರಾಟಗಾರರಾದ ಅಚ್ಯುತ್ ರಾವ್ ಎಂಬವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಇದು ಪೋಕ್ಸೋ ಕಾಯ್ದೆಯ ಉಲ್ಲಂಘನೆಯೂ ಹೌದು ಎಂದು ಅಚ್ಯುತ್ ರಾವ್ ಹೇಳಿದ್ದಾರೆ. ಶಾಲೆ ಹಾಗೂ ಶಿಕ್ಷಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಿದೆ. ಈ ರೀತಿ ಅಮಾನವೀಯವಾಗಿ ಅವರು ಹೇಗೆ ನಡೆದುಕೊಳ್ಳಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮಾನವ ಹಕ್ಕುಗಳ ಸಮಿತಿಗೂ ದೂರು ನೀಡಲು ಯೋಚಿಸಿದ್ದಾರೆ.