Tag: ಶಿಕ್ಷಣ ಸಚಿವರು

  • ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೂಪದ ಅಂಕ ಮತ್ತು ಗ್ರೇಡಿಂಗ್ ವ್ಯವಸ್ಥೆ ಜಾರಿ: ಸುಧಾಕರ್

    ರಾಜ್ಯದ ಎಲ್ಲಾ ವಿವಿಗಳಲ್ಲಿ ಏಕರೂಪದ ಅಂಕ ಮತ್ತು ಗ್ರೇಡಿಂಗ್ ವ್ಯವಸ್ಥೆ ಜಾರಿ: ಸುಧಾಕರ್

    ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಅಂಕ ವ್ಯವಸ್ಥೆ, ಗ್ರೇಡ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಅಂತ ಉನ್ನತ ಶಿಕ್ಷಣ ಸಚಿವ ಸುಧಾಕರ್ (MC Sudhakar) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ (Congress) ಮಂಜುನಾಥ್ ಭಂಡಾರಿ ಪ್ರಶ್ನೆ ಕೇಳಿದರು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ (Karnataka Universities) ಅಂಕಗಳು ನೀಡುವ ವ್ಯವಸ್ಥೆ ಒಂದೊಂದು ವಿವಿಗೆ ಒಂದೊಂದು ವ್ಯವಸ್ಥೆ ಇದೆ. ವಿವಿಗಳಲ್ಲಿ ಮೌಲ್ಯಮಾಪನ ವ್ಯವಸ್ಥೆ ಭಿನ್ನವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗ್ತಿದೆ. ಹೀಗಾಗಿ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಜಾರಿ ಮಾಡಬೇಕು. ಫೇಕ್ ಡಾಕ್ಟರೇಟ್ ಕೊಡುವ ವಿವಿಗಳು ಜಾಸ್ತಿ ಆಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ಪದವಿಯನ್ನ ರಿಜಿಸ್ಟರ್ ಮಾಡಿಸುವ ವ್ಯವಸ್ಥೆ ಜಾರಿ ಮಾಡಬೇಕು. ನಮ್ಮ ಸರ್ಕಾರಿ ವಿವಿಗಳಲ್ಲಿ ಅಂಕಗಳು ನೀಡುವ ವ್ಯವಸ್ಥೆ ಬದಲಾಗಿ ಗ್ರೇಡ್ ವ್ಯವಸ್ಥೆ ವಿವಿಗಳಲ್ಲಿ‌ ಜಾರಿ ಮಾಡಬೇಕು‌ ಅಂತ ಒತ್ತಾಯಿಸಿದರು.

    ಇದಕ್ಕೆ ಸಚಿವ ಸುಧಾಕರ್ ಉತ್ತರ ನೀಡಿ,‌ ರಾಜ್ಯದಲ್ಲಿ 30 ಖಾಸಗಿ ವಿವಿಗಳು ಇವೆ. ಖಾಸಗಿ ವಿವಿಗಳಲ್ಲಿ ಗ್ರೇಡಿಂಗ್ ಸಿಸ್ಟಮ್, ಅಂಕ ವ್ಯವಸ್ಥೆ ಬೇರೆ ಬೇರೆ ಇದೆ. ನಮ್ಮ ಸರ್ಕಾರ ವಿವಿಗಳ ವ್ಯವಸ್ಥೆ ಬೇರೆ ‌ಇದೆ. ಇದರಿಂದ ಸಮಸ್ಯೆ ಆಗ್ತಿದೆ. ಇತ್ತೀಚೆಗೆ ಒಬ್ಬ ವಿದ್ಯಾರ್ಥಿ ಸಹ ಅಂಕ ಕಡಿಮೆ ಬಂತು ಅಂತ ಆತ್ಮಹತ್ಯೆ ಮಾಡಿಕೊಂಡ. ಇದರಿಂದಾಗಿ‌ ಅಂಕ ಮಾದರಿ ಅಧ್ಯಯನಕ್ಕೆ ಒಂದು ಸಮಿತಿ ಮಾಡಿದ್ವಿ. ಸಮಿತಿ ಎಲ್ಲಾ ವಿವಿಗಳಲ್ಲಿ ಅಂಕ ಮಾದರಿ, ಗ್ರೇಡ್ ಮಾದರಿ ಏಕರೂಪವಾಗಿ ಮಾಡಬೇಕು ಅಂತ ವರದಿ ಕೊಟ್ಟಿದೆ. ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಇದನ್ನು ಇಟ್ಟು ನಿರ್ಧಾರ ಮಾಡ್ತೀವಿ. ಖಾಸಗಿ, ಸರ್ಕಾರ ವಿವಿಗಳಿಗೆ ಏಕರೂಪದ ಅಂಕ, ಗ್ರೇಡ್ ವ್ಯವಸ್ಥೆ ಜಾರಿ ಮಾಡ್ತೀವಿ ಎಂದರು. ಇದನ್ನೂ ಓದಿ: ಧೈರ್ಯವಾಗಿ ಪ್ರಶ್ನಿಸಿ ಅಂದಿದ್ದು ತಪ್ಪಿಲ್ಲ- ಕುವೆಂಪು ಬರಹ ಬದಲಿಕೆಗೆ ಪ್ರಿಯಾಂಕ್ ಖರ್ಗೆ ಸಮರ್ಥನೆ

    ಡಾಕ್ಟರೇಟ್ ಪದವಿಗಳ ಬಗ್ಗೆ ಸ್ವಲ್ಪ ಗೊಂದಲ‌ ಇದೆ. ಸುಪ್ರೀಂ ಕೋರ್ಟ್ ಆದೇಶದ ಮೇಲೆ ನಾವು ಇದನ್ನ ಜಾರಿ ಮಾಡ್ತೀವಿ. ಖಾಸಗಿ ವಿವಿಗಳು ಡಾಕ್ಟರೇಟ್ ಕೊಡುವ ವ್ಯವಸ್ಥೆ ಮಾಡುತ್ತಿವೆ. ಹೀಗಾಗಿ ಎಲ್ಲಾ ವಿವಿಗಳಲ್ಲಿ ಏಕರೂಪದ ಡಾಕ್ಟರೇಟ್ ವ್ಯವಸ್ಥೆ ತರುವ ನಿಟ್ಟಿನಲ್ಲಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ: ಸರ್ಕಾರದ ಮುಟ್ಟಾಳತನ: ಜೋಶಿ ಆಕ್ರೋಶ

    ಪದವಿ ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ರಿಜಿಸ್ಟರ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಎಂಜಿನಿಯರಿಂಗ್ ಸೇರಿ ಹಲವು ಪದವಿಗಳ ರಿಜಿಸ್ಟರ್ ಮಾಡೋ ವ್ಯವಸ್ಥೆ ಇದೆ. ಈ ವಿಚಾರವಾಗಿ ಏಕರೂಪದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ತೀವಿ ಅಂತ ಭರವಸೆ ನೀಡಿದರು. ಇದನ್ನೂ ಓದಿ: ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ

  • ಮಧ್ಯಪ್ರದೇಶಕ್ಕೂ ಹಿಜಬ್‌ ವಿವಾದ ಎಂಟ್ರಿ – ನಿಷೇಧ ಮಾಡ್ತೀವಿ ಎಂದ ಶಿಕ್ಷಣ ಸಚಿವ

    ಮಧ್ಯಪ್ರದೇಶಕ್ಕೂ ಹಿಜಬ್‌ ವಿವಾದ ಎಂಟ್ರಿ – ನಿಷೇಧ ಮಾಡ್ತೀವಿ ಎಂದ ಶಿಕ್ಷಣ ಸಚಿವ

    ಭೋಪಾಲ್: ಕರ್ನಾಟಕದಲ್ಲಿ ಭುಗಿಲೆದ್ದ ಹಿಜಬ್‌-ಕೇಸರಿ ಶಾಲು ವಿವಾದವು ಈಗ ದೇಶದ ಇತರೆ ರಾಜ್ಯಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ. ಹಿಜಬ್‌ ಸಮವಸ್ತ್ರದ ಭಾಗವಲ್ಲ. ಮಧ್ಯಪ್ರದೇಶ ರಾಜ್ಯದ ಶಾಲೆಗಳಲ್ಲಿ ಅದನ್ನು ನಿಷೇಧಿಸಬೇಕು ಎಂದು ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪರ್ಮರ್‌ ಪ್ರತಿಕ್ರಿಯಿಸಿದ್ದಾರೆ.

    ಶಾಲಾ ವಿದ್ಯಾರ್ಥಿಗಳಲ್ಲಿ ಸಮಾನತೆ ಮತ್ತು ಶಿಸ್ತನ್ನು ರೂಢಿಸುವ ಉದ್ದೇಶದಿಂದ ಕಟ್ಟುನಿಟ್ಟಿನ ಸಮವಸ್ತ್ರ ನಿಯಮವನ್ನು ರಾಜ್ಯ ಸರ್ಕಾರ ಅಳವಡಿಸಲಿದೆ. ಮುಂದಿನ ಅಧಿವೇಶನದಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಹೊರಡಿಸಲಾಗುವುದು. ಹಿಜಬ್‌, ಸಮವಸ್ತ್ರದ ಭಾಗವಲ್ಲ. ಹೀಗಾಗಿ ರಾಜ್ಯದ ಶಾಲೆಗಳಲ್ಲಿ ಅದನ್ನು ನಿಷೇಧಿಸಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸಿದ ನಂತರ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಹಿಜಬ್ ವಿವಾದ – ಶಿಕ್ಷಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ

    ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ. ಭಾರತದಲ್ಲಿ ಜನರು ಮನೆಯಲ್ಲಿ ವಿಭಿನ್ನ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಆದರೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ನಿಯಮವನ್ನು ಅನುಸರಿಸಬೇಕು. ಕೆಲವರು ಉದ್ದೇಶಪೂರ್ವಕವಾಗಿ ದೇಶದ ವಾತಾವರಣವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಕಾಂಗ್ರೆಸ್‌ ಶಾಸಕ ಆರಿಫ್‌ ಮಸೂದ್‌, ಬಿಜೆಪಿ ನಾಯಕರು ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ತರುತ್ತಿದ್ದಾರೆ. ಅವರು ಹಿಜಬ್‌ ಧರಿಸುವುದನ್ನು ನಿಷೇಧಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೆ, ನಾವು ಅದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಈ ಕ್ರೂರ ಆದೇಶವನ್ನು ಅನುಮತಿಸುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Karnataka Hijab Row: ಹೈಸ್ಕೂಲ್‌, ಕಾಲೇಜುಗಳಿಗೆ 3 ದಿನ ರಜೆ

    ಕರ್ನಾಟಕದಲ್ಲಿ ಉಡುಪಿಯ ಸರ್ಕಾರ ಕಾಲೇಜೊಂದರಲ್ಲಿ ಹಿಜಬ್‌ ಮತ್ತು ಕೇಸರಿ ಶಾಲು ವಿವಾದ ತಲೆದೋರಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಬ್‌ ಧರಿಸಿ ಶಾಲೆಗೆ ಬರುವುದಕ್ಕೆ ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಿಲ್ಲ. ಅದರ ವಿರುದ್ಧ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಹಿಜಬ್‌ ವಿರೋಧಿಸಿ ಕೆಲವರು ವಿದ್ಯಾರ್ಥಿಗಳು ಕಾಲೇಜುಗಳಿಗೆ ಕೇಸರಿ ಶಾಲು ಧರಿಸಿ ಬರುತ್ತಿದ್ದಾರೆ. ಇದು ರಾಜ್ಯಾದ್ಯಂತ ಕಿಡಿಹೊತ್ತಿಸಿದೆ. ಹೈಕೋರ್ಟ್‌ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ.

  • ಶಾಲೆಗೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

    ಶಾಲೆಗೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

    ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾದರೂ ಕೂಡ ಸೂಕ್ತವಾದ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಉಸ್ತುವಾರಿ ಜಿಲ್ಲೆಯಲ್ಲೇ ನೂರಾರು ವಿದ್ಯಾರ್ಥಿಗಳು ಕಾಲ್ನಡಿಗೆಯ ಮೂಲಕ ಶಾಲೆಗೆ ತೆರಳುವ ಪರಿಸ್ಥಿತಿ ಇದೆ.

    ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆ ಯಾದಗಿರಿಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ, ಕಿಲೋ ಮೀಟರ್ ಗಟ್ಟಲೆ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದಾರೆ. ನಿತ್ಯ ಅಷ್ಟು ದೂರ ನಡೆಯಬೇಕಾದರೂ ಸಹ ವಿದ್ಯಾರ್ಥಿಗಳಲ್ಲಿ ಕೊಂಚವೂ ಓದುವ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ. ಓದಿನಲ್ಲಿ ಗುರಿ ಹೊಂದಿರುವ ವಿದ್ಯಾರ್ಥಿಗಳು ಹುಮ್ಮಸ್ಸಿನಲ್ಲೇ ನಿತ್ಯ ನಡೆದು ಶಾಲೆಯತ್ತ ಸಾಗುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

    ಯಾದಗಿರಿ ಮಾತ್ರವಲ್ಲದೇ ಇತ್ತ ದಾವಣಗೆರೆ ಜಿಲ್ಲೆಯಲ್ಲೂ ಇದೇ ಪರಸ್ಥಿತಿ. ಚನ್ನಗಿರಿ ತಾಲೂಕಿನ 15ಕ್ಕೂ ಅಧಿಕ ಹಳ್ಳಿಗಳಿಗೆ ಇನ್ನೂ ಸಹ ಬಸ್‍ಗಳ ವ್ಯವಸ್ಥೆಯೇ ಇಲ್ಲ. ಸಂತೆಬೆನ್ನೂರು ಹೊರವಲಯದಲ್ಲಿರುವ ಕಾಲೇಜ್‍ಗೆ ತೆರಳಲು ವಿದ್ಯಾರ್ಥಿಗಳು ನಿತ್ಯ ಎರಡು ಕಿಲೋ ಮೀಟರ್ ನಡೆಯಲೇಬೇಕು. ನಲ್ಕುದುರೆ, ವೆಂಕಟೇಶ್ವರ ಕ್ಯಾಂಪ್, ಕೋಗಲುರು ಸೇರಿ 15ಕ್ಕೂ ಅಧಿಕ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

    ಡೀಸೆಲ್ ಬೆಲೆ ದುಬಾರಿ ಆಗಿರುವುದರಿಂದ ಖಾಸಗಿ ಬಸ್, ಆಟೋದವರು ದುಪ್ಪಟ್ಟು ಹಣ ಪೀಕುತ್ತಿದ್ದಾರೆ. ಇದರಿಂದಾಗಿ ಅವರಿಗೆ ಹಣ ನೀಡುವ ಬದಲು ವಿದ್ಯಾರ್ಥಿಗಳೇ ನಡೆದುಕೊಂಡು ಹೋಗುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡು ಬರುತ್ತಿದ್ದು, ಶಿಕ್ಷಣ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕಾಗಿದೆ. ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ- ಜೆಡಿಎಸ್ ಮುಂದೆ ಮಂಡಿಯೂರಲು ಕಾಂಗ್ರೆಸ್ ಸಜ್ಜಾಗಿದ್ಯಾ?

  • ಸದ್ಯದಲ್ಲೇ 1 ರಿಂದ 5ನೇ ತರಗತಿ ಶಾಲೆ ತೆರೆಯುತ್ತೇವೆ: ಬಿ.ಸಿ ನಾಗೇಶ್

    ಸದ್ಯದಲ್ಲೇ 1 ರಿಂದ 5ನೇ ತರಗತಿ ಶಾಲೆ ತೆರೆಯುತ್ತೇವೆ: ಬಿ.ಸಿ ನಾಗೇಶ್

    ಶಿವಮೊಗ್ಗ: 1 ರಿಂದ 5ನೇ ತರಗತಿಯವರೆಗೆ ಶಾಲೆ ಆರಂಭಿಸುವ ವಿಚಾರವಾಗಿ ತಾಂತ್ರಿಕ ಸಭೆ ಸದ್ಯದಲ್ಲಿಯೇ ಮಾಡುತ್ತಿದ್ದೇವೆ. ತಾಂತ್ರಿಕ ಸಮಿತಿ ಸಭೆ ಅನುಮತಿ ನೀಡಿದ ನಂತರ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, 6, 7, 8ನೇ ತರಗತಿಗಳನ್ನು ನಮ್ಮ ಶಿಕ್ಷಕರು ನಡೆಸಿದಂತಹ ರೀತಿ ನೋಡಿ ತುಂಬ ಸಂತೋಷವಾಗಿದೆ. ಖಂಡಿತ ಸದ್ಯದಲ್ಲೇ 1 ರಿಂದ 5ನೇ ತರಗತಿ ವರೆಗೆ ಶಾಲೆ ತೆರೆಯುವ ಬಗ್ಗೆ ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡ್ತೇವೆ ನಂತರ ಆರಂಭಿಸುತ್ತೇವೆ ಎಂದರು. ಇದನ್ನೂ ಓದಿ: ಸುದೀಪ್ ಒಬ್ಬ ನಟರಾಗುತ್ತಾರೆ ಅಂತ ಅಂದುಕೊಂಡಿರಲಿಲ್ಲ: ಬೊಮ್ಮಾಯಿ

    ಪಠ್ಯ ಕಡಿತಗೊಳಿಸುವ ವಿಚಾರವಾಗಿ ಮಾತನಾಡಿ, ಬ್ರಿಡ್ಜ್ ಕೋರ್ಸ್ ಮಾಡುತ್ತಿದ್ದೇವೆ. ಸಿಲೆಬಸ್ ಪೂರ್ತಿ ಮಾಡಿದರೆ ಮಕ್ಕಳಿಗೆ ಲಾಭ. ಒಂದೂವರೆ ವರ್ಷ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಅದನ್ನು ಬ್ರಿಡ್ಜ್ ಕೋರ್ಸ್ ನಲ್ಲಿ ಪೂರ್ಣಗೊಳಿಸಬೇಕಿದೆ. ಈ ವರ್ಷವು ಪಠ್ಯ ಕಡಿತಗೊಳಿಸಿದರೆ ಮುಂದಿನ ತರಗತಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಆ ಬಗ್ಗೆ ಯಾವ ನಿರ್ಣಯ ಕೈಗೊಂಡಿಲ್ಲ. ಶಿಕ್ಷಕರ ರಜೆ ಕಡಿಮೆ ಮಾಡಿ ಸಿಲೆಬಸ್ ಪೂರ್ಣಗೊಳಿಸಬಹುದಾ ಎಂಬ ಬಗ್ಗೆ ಯೋಚನೆ ಇದೆ. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಶಿಕ್ಷಕರ ಸಹಕಾರ ನೋಡಿ, ಅವಶ್ಯಕತೆ ಬಿದ್ದರೆ ನಿರ್ಣಯ ಕೈಗೊಳ್ಳುತ್ತೇವೆ. ಪಠ್ಯ ಕಡಿತಗೊಳಿಸುವ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

    ಕೇರಳದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಮಂಗಳೂರು, ಉಡುಪಿಯಲ್ಲಿ ಕಡಿಮೆ ಆಗುತ್ತಿದೆ. ಶಾಲೆ ಪ್ರಾರಂಭ ಮಾಡಿರುವ ಸರ್ಕಾರಕ್ಕೆ ಕೋವಿಡ್ ಹೆಚ್ಚಳವಾದರೆ ತಕ್ಷಣ ನಿಲ್ಲಿಸುವ ಅವಕಾಶ ಇದೆ. ಈ ಬಗ್ಗೆ ಕೊರೊನಾ ಹೆಚ್ಚಾದ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳುತ್ತೇವೆ. ಕಳೆದ ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆ ನೆನೆಗುದಿಗೆ ಬಿದ್ದಿದೆ. ಮೂರು ವರ್ಷದಿಂದ ಸತತವಾಗಿ ಕೋರ್ಟ್ ಗೆ ಹೋಗಿ ಸ್ಟೇ ತರುತ್ತಿದ್ದಾರೆ. ಹೀಗಾಗಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗುತ್ತಿದೆ. ಸರ್ಕಾರದಿಂದ ಕೋರ್ಟ್‍ಗೆ ಮನವಿ ಸಲ್ಲಿಸುತ್ತೇವೆ. ಸ್ಟೇ ತೆರವುಗೊಳಿಸುವ ಪ್ರಯತ್ನ ಮಾಡುತ್ತೇವೆ. ಸ್ಟೇ ತೆರವುವಾಗದಿದ್ದರೆ ಉಳಿದ ವರ್ಗಕ್ಕೆ ವರ್ಗಾವಣೆ ಪ್ರಕ್ರಿಯೆ ಮಾಡುತ್ತೇವೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಭಾರತದಲ್ಲಿ ಬುರ್ಕಾ ನಿಷೇಧಿಸಬೇಕೆಂದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ದೂರು

     

  • ಚಾಕ್ಲೆಟ್, ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳ ಸ್ವಾಗತಿಸಿದ ಬಿ.ಸಿ ನಾಗೇಶ್

    ಚಾಕ್ಲೆಟ್, ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳ ಸ್ವಾಗತಿಸಿದ ಬಿ.ಸಿ ನಾಗೇಶ್

    – 6, 7 ಮತ್ತು 8ನೇ ತರಗತಿಗಳ ಭೌತಿಕ ತರಗತಿ ಪುನಾರಂಭ

    ಬೆಂಗಳೂರು: ಒಂದೂವರೆ ವರ್ಷದ ಬಳಿಕ 6, 7 ಮತ್ತು 8ನೇ ತರಗತಿಗಳ ಭೌತಿಕ ತರಗತಿಗಳು ರಾಜ್ಯದಲ್ಲಿ ಪುನಾರಂಭವಾಗಿದ್ದು, ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ ನಾಗೇಶ್ ತಿಳಿಸಿದರು.

    ಬೆಂಗಳೂರಿನ ಜೀವನ್ ಬೀಮಾ ನಗರದಲ್ಲಿರುವ ಕರ್ನಾಟಕ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳಿಗೆ ಚಾಕೋಲೇಟ್, ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಶಾಲೆಯ ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ಖುಷಿಯಿಂದ ಬರ ಮಾಡಿಕೊಂಡರು.

    ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಅದರಂತೆ ತರಗತಿಗಳಲ್ಲಿ ಒಂದು ಬೆಂಚಿಗೆ ಇಬ್ಬರು ಮಕ್ಕಳನ್ನು ಮಾತ್ರ ಕೂರಿಸಲಾಗಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗೆ ಹಾಜರಾಗುವ ಮಕ್ಕಳು ತಮ್ಮ ಪಾಲಕರು, ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಾಹಿತ್ಯ ಲೋಕದಲ್ಲಿ ಕ್ರಾಂತಿ – ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಲಿದ್ದಾರೆ ಸುನಿಲ್ ಕುಮಾರ್

    ಪ್ರೌಢ ಶಾಲೆಯ 9 ಮತ್ತು 10ನೇ ತರಗತಿ ಮತ್ತು ಪಿಯು ತರಗತಿಗಳು ಸುರಕ್ಷತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉನ್ನತಾಧಿಕಾರಿಗಳು, ಕೋವಿಡ್ -19 ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ಸಂಬಂಧಪಟ್ಟ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಿ, ಒಪ್ಪಿಗೆ ಪಡೆದು ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡು 6ರಿಂದ 8ನೇ ತರಗತಿಗಳ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಸಚಿವ ಬಿ.ಸಿ ನಾಗೇಶ್ ಹೇಳಿದರು.

    1ರಿಂದ 5ನೇ ತರಗತಿಗಳ ಭೌತಿಕ ತರಗತಿಗಳ ಆರಂಭಕ್ಕೆ ಎಂದಿನಂತೆ ತಜ್ಞರ ಅಭಿಪ್ರಾಯ, ಒಪ್ಪಿಗೆ ಪಡೆಯಲಾಗುತ್ತದೆ. 6ರಿಂದ 8ನೇ ತರಗತಿಗಳ ಭೌತಿಕ ತರಗತಿಗಳಲ್ಲಿ ಕಂಡು ಬರುವ ಅಂಶಗಳ ಆಧಾರದ ಮೇಲೆ 1ರಿಂದ 5ನೇ ತರಗತಿಗಳ ಆರಂಭದ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಅತಂತ್ರವಾದರೂ ಬಿಜೆಪಿಗೆ ಅಧಿಕಾರ – ಕಲಬುರಗಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಏನು?

    ಶಾಲೆ ಅವಧಿಗೆ ಕೆಎಸ್‍ಆರ್‍ಟಿಸಿ ಬಸ್ ಸಂಚರಿಸಲು ಈಗಾಗಲೇ ಸಾರಿಗೆ ಸಚಿವರು, ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಕೋವಿಡ್ ಪೂರ್ವದಲ್ಲಿ ಶಾಲೆ ಅವಧಿಗೆ ಬಸ್‍ಗಳು ಸಂಚರಿಸುತ್ತಿದ್ದವು. ಈಗ ಭೌತಿಕ ತರಗತಿಗಳು ಆರಂಭವಾಗಿರುವ ಕಾರಣ ಅದೇ ಸಮಯಕ್ಕೆ ಬಹುತೇಕ ಬಸ್ ಸಂಚರಿಸುತ್ತಿವೆ. ಹೊಸದಾಗಿ ಪಾಸ್ ಪಡೆಯುವವರೆಗೆ ಮಕ್ಕಳು ಬಸ್‍ಗಳಲ್ಲಿ ಸಂಚರಿಸಲು ಹಳೇ ಪಾಸ್ ಅಥವಾ ಶಾಲೆಯ ಐಡಿ ಕಾರ್ಡ್ ತೋರಿಸಿದರೆ ಸಾಕು ಎಂದು ಸಚಿವರು ಹೇಳಿದರು.

    ಸಾಮಾಜಿಕ ಅಂತರ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಿರುವ ಕಾರಣ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಸಾಧ್ಯವಾಗುವ, ವಾಹನ ವ್ಯವಸ್ಥೆ ಹೊಂದಿರುವ ಪಾಲಕರು ಸ್ವತಃ ತಾವೇ ಬಿಟ್ಟು ಬರಬಹುದು ಎಂದು ಸಚಿವರು ಸಲಹೆ ನೀಡಿದರು. ಇದನ್ನೂ ಓದಿ: ತರೀಕೆರೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗ

    ವಿದ್ಯಾರ್ಥಿಗಳ ಜೊತೆ ಮಾತು:
    ತರಗತಿಗಳಿಗೆ ತೆರಳಿದ ಸಚಿವರು, ಭೌತಿಕ ತರಗತಿಗಳ ಆರಂಭದ ಕುರಿತು ಮಕ್ಕಳ ಜೊತೆ ಮಾತನಾಡಿದರು. ತರಗತಿ ಆರಂಭ ಕುರಿತು ಅಭಿಪ್ರಾಯ ಕೇಳಿದಾಗ, ಶಾಲೆಗೆ ಬರಲು ಖುಷಿಯಾಗುತ್ತಿದೆ. ಕೋವಿಡ್-19 ನಿಯಮಗಳನ್ನು ಪಾಲಿಸುತ್ತೇವೆ. ತರಗತಿಗಳು ಮುಂದುವರೆಯಬೇಕು. ಆನ್‍ಲೈನ್ ಕ್ಲಾಸ್‍ಗಿಂತ ಶಾಲೆಗೆ ಬರುವುದೇ ಬೆಸ್ಟ್. ಚೆನ್ನಾಗಿ ಅರ್ಥವಾಗುತ್ತದೆ ಎಂದು ಹೇಳಿದರು.

  • ಪ್ರಾಥಮಿಕ ಶಾಲೆಯೂ ಓಪನ್ – ಸುಳಿವು ನೀಡಿದ ಬಿ.ನಾಗೇಶ್

    ಪ್ರಾಥಮಿಕ ಶಾಲೆಯೂ ಓಪನ್ – ಸುಳಿವು ನೀಡಿದ ಬಿ.ನಾಗೇಶ್

    ಹಾಸನ: ಸಿಎಂ ಜೊತೆ ತಜ್ಞರ ಚರ್ಚೆ ನಂತರ ಆರರಿಂದ ಎಂಟು ಅಥವಾ ಒಂದರಿಂದ ಎಂಟನೇ ತರಗತಿ ಆರಂಭದ ಬಗ್ಗೆ ನಿರ್ಧಾರವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ನಾಗೇಶ್ ತಿಳಿಸಿದ್ದಾರೆ.

    ಅರಸೀಕೆರೆಯಲ್ಲಿ ಮಾತನಾಡಿದ ಅವರು, ಸಿಎಂ ಅಧ್ಯಕ್ಷತೆಯಲ್ಲಿ ಇಂದು ಟೆಕ್ನಿಕಲ್ ಟೀಂ ಮೀಟಿಂಗ್ ನಡೆಸಲಿದೆ. 23 ರಿಂದ 30 ರವರೆಗೆ ನಡೆದಿರುವ ತರಗತಿಗಳ ಬಗ್ಗೆ ತಾಂತ್ರಿಕ ಸಮಿತಿ ವರದಿ ಸಲ್ಲಿಸಲಿದೆ. ಆ ವರದಿ ಆಧಾರದ ಮೇಲೆ ಬೇರೆ ತರಗತಿ ತೆರೆಯುವ ಬಗ್ಗೆ ಆಲೋಚನೆ ಇದೆ. 9 ರಿಂದ 12ನೇ ತರಗತಿಯವರು ಶೇ.70 ರಷ್ಟು ಮಕ್ಕಳು ಹಾಜರಾಗಿದ್ದಾರೆ. ಎಲ್ಲಿಯೂ ಸಮಸ್ಯೆಯಾಗಿಲ್ಲ. ಆ ಮಾನದಂಡದ ಆಧಾರದ ಮೇಲೆ 6 ರಿಂದ 8 ಅಥವಾ 1 ರಿಂದ 8 ನೇ ತರಗತಿ ತೆರೆಯುವ ಆಲೋಚನೆ ಮಾಡುತ್ತೇವೆ. ಆನ್‍ಲೈನ್ ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಕಡಿಮೆ ಮಾಡ್ತೀವಿ. 9 ರಿಂದ 12 ನೇ ತರಗತಿಗೆ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?

    ಬಾಲಕನ ಜೊತೆ ಮಾತು
    ಶೃಂಗೇರಿಯಿಂದ ತಿಪಟೂರಿಗೆ ತೆರಳುವ ಮಾರ್ಗಮಧ್ಯೆ ಅರಸೀಕೆರೆಯಲ್ಲಿ ಉದ್ಯಮಿ ದತ್ತಾತ್ರೇಯ ಅವರ ಮನೆಗೆ ಶಿಕ್ಷಣ ಸಚಿವರು ಭೇಟಿ ನೀಡಿದ್ದರು. ಈ ವೇಳೆ ದತ್ತಾತ್ರೇಯ ಅವರ ಮೊಮ್ಮಗ ಶಿಕ್ಷಣ ಸಚಿವರಿಗೆ ಯಾವಾಗ ಶಾಲೆ ಆರಂಭ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಬಾಲಕನಿಗೆ ಶಾಲೆ ಯಾವಾಗ ಆರಂಭಿಸಬೇಕು ಎಂದು ಶಿಕ್ಷಣ ಸಚಿವರು ಮರು ಪ್ರಶ್ನಿಸಿದ್ದಾರೆ. ತಕ್ಷಣ ಬಾಲಕ ನಾಳೆ ಎಂದು ಉತ್ತರ ಕೊಟ್ಟಿದ್ದಾನೆ. ಅದಕ್ಕೆ ಶಿಕ್ಷಣ ಸಚಿವರು, ಗ್ಯಾರಂಟಿನಾ.. ನಾಳೆಯಿಂದ ಹೋಗ್ತೀಯಾ ನೀನು..? ಎಂದು ತಮಾಷೆ ಮಾಡಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಯಾವುದೇ ಒತ್ತಡಕ್ಕೆ ಮಣಿದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ: ಬಿಎಸ್‍ವೈ

  • ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆಯಿಂದ ಉನ್ನತ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ

    ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆಯಿಂದ ಉನ್ನತ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ

    – ರಾಜ್ಯಾಧ್ಯಕ್ಷರೂ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಂಧನ

    ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸದಿರಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ಅವರ ಕಚೇರಿ ಮತ್ತು ಮನೆಗೆ ಮುತ್ತಿಗೆ ಹಾಕಿದೆ.

    ಈಗಾಗಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಒಲವು ತೋರುತ್ತಿರುವುದು ಕಾಣುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಳವಾಗಿ ಅಧ್ಯಯನ ನಡೆಸಿದರೆ ಅದರಲ್ಲಿ ಆಕರ್ಷಕ ಪದಗಳನ್ನು ಬಿಟ್ಟು ಪ್ರಾಯೋಗಿಕವಾಗಿ ಜಾರಿಗೊಳಿಸುವ ಪೂರಕವಾದ ಅಂಶಗಳಿಲ್ಲ. ಈ ನೀತಿಯು ಏಕ ಸಂಸ್ಕೃತಿ , ಸಿದ್ಧಾಂತವನ್ನು ಹೇರಿಕೆ ಮಾಡುವ ದೂರದೃಷ್ಟಿಯನ್ನು ಹೊಂದಿದೆ ಎಂಬುದು ಬಹಿರಂಗವಾಗಿದೆ. ವಿವಿಧ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು, ಜೀವನಶೈಲಿಗಳಲ್ಲಿ ಬದುಕುವ “ವಿವಿಧತೆಯಲ್ಲಿ ಏಕತೆ” ಸಾರುವ ಜಾತ್ಯತೀತ ಭಾರತದಲ್ಲಿ ಏಕ ನೀತಿ ಹೇರಿಕೆ ಅಸಾಧ್ಯ ಮತ್ತು ಅಸಂವಿಧಾನಿಕವಾಗಿದೆ.

    ಶಿಕ್ಷಣವನ್ನು ಕೇಸರೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ಆಲೋಚನೆಯು ಶಿಕ್ಷಣದ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವು ಆಗಿದೆ. ಶಿಕ್ಷಣವೆಂಬುದು ದೇಶದ ಸಮವರ್ತಿ ವ್ಯಾಪ್ತಿಗೆ ಬರುವಂತಹದ್ದು, ವಿಕೇಂದ್ರೀಕರಣದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾದೇಶಿಕತೆಗೆ ಹೆಚ್ಚು ಒತ್ತು ಕೊಡುವ ಬಗ್ಗೆ ಸಂವಿಧಾನವೇ ಪ್ರತಿಪಾದಿಸುತ್ತದೆ. ಆದರೆ ಹೊಸದಾಗಿ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಉದ್ದೇಶಪೂರ್ವಕವಾಗಿಯೇ ಪ್ರಾದೇಶಿಕತೆಗೆ ಧಕ್ಕೆ ತರಲಿದೆ ಎಂದು ಕಿಡಿಕಾರಿದರು.  ಇದನ್ನೂ ಓದಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ

    ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿ ಹಿಂದಿಯನ್ನು ಹಿಂಬದಿಯಿಂದ ಹೇರಿಸಿ ಹಿಂದುತ್ವ ಫ್ಯಾಶಿಸಂ ಮಾರಕ ಸಿದ್ಧಾಂತದ ಭಾಗವಾಗಿ ಈ ಎಲ್ಲಾ ಪ್ರಯತ್ನಗಳು ಸರ್ಕಾರವು ಮಾಡುತ್ತಿದೆ. ವೈಜ್ಞಾನಿಕ ದೂರದೃಷ್ಟಿ ಇಲ್ಲದೆ ಘೋಷಣೆಗಳಿಗೆ ಮಾತ್ರ ಸೀಮಿತವಾಗಿರುವ ಮತ್ತು ದೇಶದ ವೈವಿಧ್ಯತೆಗೆ ಬೆದರಿಕೆಯಾಗಿರುವ ಈ ಶಿಕ್ಷಣ ನೀತಿಯನ್ನು ಸೌಹಾರ್ದತೆಯ ಕರ್ನಾಟಕದ ಮಣ್ಣಿನಲ್ಲಿ ಕಾರ್ಯರೂಪಕ್ಕೆ ತರಲು ಕ್ಯಾಂಪಸ್ ಫ್ರಂಟ್ ಒಪ್ಪಲ್ಲ. ಇದು ಕೇವಲ ಬಂಡವಾಳಶಾಹಿ ಕಾರ್ಪೊರೇಟ್ ಕುಳಗಳ ಹಿತ ಕಾಪಾಡಲು ತಂದಿರುವ ನೀತಿಯಾಗಿದ್ದು ಇದನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಲಿದ್ದೇವೆ.

    ಒಂದು ವೇಳೆ ನಮ್ಮ ಬೇಡಿಕೆಯನ್ನು ಪರಿಗಣಿಸದೇ ಈ ಪೊಳ್ಳು ಭರವಸೆಗಳ ಕರಡನ್ನು ರಾಜ್ಯ ಸರ್ಕಾರವು ಜಾರಿಗೊಳಿಸಲು ಮುಂದಾದರೆ ಕ್ಯಾಂಪಸ್ ಫ್ರಂಟ್ ಈ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಶಿಕ್ಷಣದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಕಾಪಾಡಲಿಕ್ಕೆ ಬೇಕಾಗಿ ಇಂದು ಉನ್ನತ ಶಿಕ್ಷಣ ಸಚಿವರ ಕಛೇರಿಗೆ ಮಾರ್ಚ್ ಮಾಡುವ ಮೂಲಕ ಎಚ್ಚರಿಸಿದ್ದೇವೆ, ಸರ್ಕಾರ ತನ್ನ ನಿಲುವು ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ಕ್ಯಾಂಪಸ್ ಫ್ರಂಟ್ ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ನೂತನ ಶಿಕ್ಷಣ ನೀತಿ ಜಾರಿಗೆ ಕರ್ನಾಟಕದ ವೇಗದ ಕ್ರಮ: ಕಸ್ತೂರಿ ರಂಗನ್ ಶ್ಲಾಘನೆ

    ರಾಜ್ಯಾಧ್ಯಕ್ಷ, ಕಾರ್ಯದರ್ಶಿ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಂಧನ ಈ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮಾತಿಗೆ ಯಾವುದೇ ರೀತಿ ಸ್ಪಂದನೆ ಮಾಡದೆ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಆಥಾವುಲ್ಲ ಪುಂಜಾಲಕಟ್ಟೆ, ಕಾರ್ಯದರ್ಶಿ ಸರ್ಪರಾಝ್ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ: ಬಿ.ಸಿ ನಾಗೇಶ್

    ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ: ಬಿ.ಸಿ ನಾಗೇಶ್

    ಬೆಂಗಳೂರು: ಆಗಸ್ಟ್-ಸೆಪ್ಟೆಂಬರ್‍ ನಲ್ಲಿ 2021ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಮತ್ತು ದೋಷರಹಿತವಾಗಿ ನಡೆಸಲು ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಬಗ್ಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

    ದ್ವಿತೀಯ ಪಿಯುಸಿ ಪರೀಕ್ಷೆ ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ನಡೆಯಲಿದೆ. ಈ ಸಂಬಂಧ ಇಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ತಮ್ಮ ವಿಧಾನಸೌಧದ ಕಚೇರಿಯಲ್ಲಿ ಸಭೆ ನಡೆಸಿದ ಬಿ.ಸಿ ನಾಗೇಶ್, ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು. ರಾಜ್ಯದಲ್ಲಿ ಒಟ್ಟು 5,546 ಕಾಲೇಜುಗಳಿಂದ 18,414 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದಕ್ಕಾಗಿ 187 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರಗಳಲ್ಲಿ ಆಗಸ್ಟ್ 17ರ ಒಳಗೆ ಪೂರ್ವಸಿದ್ಧತೆ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಖಚಿತ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

    ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್ ಪ್ರಕಾರ ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಪತಿಗೆ ದೇವಸ್ಥಾನ ನಿರ್ಮಿಸಿದ ಪತ್ನಿ

    ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್, ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕರಾದ ಸ್ನೇಹಲ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    ವೀಡಿಯೋ ಕಾನ್ಫರೆನ್ಸ್:
    ಪರೀಕ್ಷೆಗೆ ಸಂಬಂಧಿಸಿದಂತೆ ವಿಕಾಸ ಸೌಧದದಲ್ಲಿ ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಸಚಿವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ ಅವರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಸಲಹೆ ಸೂಚನೆ ನೀಡಿದರು.

  • ಭಾಷೆಯಾಗಿ ಕನ್ನಡ ಕಲಿಕೆ-ಯಾವುದೇ ರಾಜಿಗೂ ಅವಕಾಶವಿಲ್ಲ: ಸುರೇಶ್ ಕುಮಾರ್

    ಭಾಷೆಯಾಗಿ ಕನ್ನಡ ಕಲಿಕೆ-ಯಾವುದೇ ರಾಜಿಗೂ ಅವಕಾಶವಿಲ್ಲ: ಸುರೇಶ್ ಕುಮಾರ್

    ಬೆಂಗಳೂರು: ಕನ್ನಡ ನೆಲದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸುವ ಸಂಬಂಧದ ಕನ್ನಡ ಕಲಿಕಾ ಅಧಿನಿಯಮ-2015ರ ಕಾಯ್ದೆ ಅನುಷ್ಠಾನದಲ್ಲಿ ಯಾವುದೇ ರಾಜಿಯೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಹೊರನಾಡು ಕನ್ನಡಿಗರ ಒಂದು ವರ್ಗ ರಾಜ್ಯದಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಅಧಿನಿಯಮ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಬುಧವಾರ ತಮ್ಮನ್ನು ಭೇಟಿ ಮಾಡಿ ಮನವಿ ಮಾಡಿದ ನಂತರ ಮಾತನಾಡಿದ ಸಚಿವರು, ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳೇ ಆಗಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯವಾಗಿದ್ದು, ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಿದೆ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಪ್ರಕಾರ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದು ಕಡ್ಡಾಯವಾಗಿದೆ. ಒಂದರಿಂದ ಹತ್ತನೇ ತರಗತಿಯವರಿಗೆ ಹಂತಹಂತವಾಗಿ ಕನ್ನಡ ಭಾಷೆಯನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸಬೇಕಿದೆ. ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಹೊರ ರಾಜ್ಯದ ಪೋಷಕರ ಒಂದು ವರ್ಗ ವಿರೋಧಿಸಿ ಈ ಕಡ್ಡಾಯ ಕನ್ನಡ ಕಲಿಕೆಯನ್ನು ಕೈಬಿಡಬೇಕೆಂದು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸುತ್ತಿದ್ದು, ಇದು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ಕ್ಕೆ ವಿರುದ್ಧವಾಗಿದೆ. ಅಲ್ಲದೇ ಈ ನೆಲದ ಸಂಸ್ಕೃತಿಯನ್ನು ವಿರೋಧಿಸುವಂತಹುದ್ದಾಗಿದೆ. ಈ ಕುರಿತಂತೆ ರಾಜ್ಯದ ಯಾವುದೇ ಪಠ್ಯಕ್ರಮದ ಶಾಲೆಗಳು ಯಾವುದೇ ಆಗ್ರಹಕ್ಕೂ ಮಣಿಯದೇ ಕಟ್ಟುನಿಟ್ಟಾಗಿ ಕನ್ನಡ ಕಲಿಕೆಯನ್ನು ಕಡ್ಡಾಯವಾಗಿ ಕಲಿಸುವುದಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯ ಬೇಡ – ಪೋಷಕರಿಂದ ಅಭಿಯಾನ

    ಪೋಷಕರೂ ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಸರ್ಕಾರದ ಸದಾಶಯವನ್ನು ಗೌರವಿಸಬೇಕು. ತಮ್ಮ ಮಕ್ಕಳನ್ನು ನೆಲದ ಭಾಷೆ ಕಲಿಯಲು ಪ್ರೇರೇಪಿಸಬೇಕು. ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳೂ ಸಹ ಯಾವುದೇ ಆಗ್ರಹಗಳಿಗೆ ಮಣಿಯದೇ ಮತ್ತು ಕನ್ನಡ ಕಲಿಕೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿಗೆ ಒಳಗಾಗದೇ ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ರ ಅನ್ವಯ ಕನ್ನಡವನ್ನು ತಮ್ಮ ಶಾಲೆಗಳಲ್ಲಿ ಕಡ್ಡಾಯವಾಗಿ, ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಎಂದಿನಂತೆ ಮುಂದುವರೆಸುವುದು ಮತ್ತು ಈ ಕಾಯ್ದೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆ ನೀಡುವ ಕುರಿತು ಕೂಡಲೇ ಸುತ್ತೋಲೆಯೊಂದನ್ನು ಹೊರಡಿಸಬೇಕೆಂದು ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತು ಆಯಾ ಮಟ್ಟದ ಇಲಾಖೆಯ ಅಧಿಕಾರಿಗಳು ಎಲ್ಲ ಶಾಲೆಗಳಿಗೂ ಭೇಟಿ ನೀಡಿ ಕಾಯ್ದೆಯ ಜಾರಿ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವಂತೆ ಸಹ ಕೂಡಲೇ ನಿರ್ದೇಶನ ನೀಡಲಾಗಿದೆ. ಈಗಾಗಲೇ ಬೆಂಗಳೂರಿನ ಕೇಂದ್ರ ಪಠ್ಯಕ್ರಮದ ಶಾಲೆಗಳ ಪ್ರಾಚಾರ್ಯರು ಮತ್ತು ಮುಖ್ಯಸ್ಥರ ಸಭೆಯನ್ನೂ ನಡೆಸಿ ಈ ಕುರಿತು ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯವಾಗಿ ಅನುಸರಿಸುವಂತೆ ನಿರ್ದೇಶನ ನೀಡಲಾಗಿದೆ. ಯಾರೇ ಆಗಲಿ ಯಾವುದೇ ಭಾಷೆಯನ್ನು ಕಲಿಯುವುದರಿಂದ ಹೆಚ್ಚಿನ ಶಕ್ತಿ ಬರುತ್ತದೆ. ಹೆಚ್ಚಿನ ಭಾಷೆಗಳನ್ನು ಕಲಿಯುವುದರಿಂದ ಸಮೃದ್ಧ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಂತಾಗುತ್ತದೆ. ಇದನ್ನು ನಮ್ಮ ಪೋಷಕರು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

  • ಪರೀಕ್ಷೆ ಬರೆಯಲು ಉತ್ಸುಕರಾಗಿದ್ದೇವೆ – ಸಚಿವರ ಸಂವಾದದಲ್ಲಿ ವಿದ್ಯಾರ್ಥಿಗಳ ಮನದಾಳದ ಮಾತು

    ಪರೀಕ್ಷೆ ಬರೆಯಲು ಉತ್ಸುಕರಾಗಿದ್ದೇವೆ – ಸಚಿವರ ಸಂವಾದದಲ್ಲಿ ವಿದ್ಯಾರ್ಥಿಗಳ ಮನದಾಳದ ಮಾತು

    ಬೆಂಗಳೂರು: ಪರೀಕ್ಷೆ ಬರೆಯಲು ನಾವು ಸಿದ್ದರಿದ್ದೇವೆ ಎಂದು ಎಸ್‍ಎಸ್‍ಎಲ್‍ಸಿ ಮಕ್ಕಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಸಂವಾದದಲ್ಲಿ ತಿಳಿಸಿದ್ದಾರೆ. ಮಕ್ಕಳ ಅಭಿಪ್ರಾಯ ಸಂಗ್ರಹ ಮಾಡಲು ಇಂದು ವಿದ್ಯಾರ್ಥಿಗಳ ಜೊತೆ ಸುರೇಶ್ ಕುಮಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

    ಅನೇಕ ರಾಜ್ಯಗಳು ಮಂಡಳಿ ಪರೀಕ್ಷೆಯನ್ನು ರದ್ದು ಮಾಡಿದ ಸಂದರ್ಭದಲ್ಲಿ ಯಾವುದೇ ರೂಪದಲ್ಲೇ ಆಗಲಿ ಪರೀಕ್ಷೆ ನಡೆಸುವ ಮೂಲಕ ನಮ್ಮ ಆತ್ಮವಿಶ್ವಾಸ ಮೂಡಿಸಿದ್ದಲ್ಲದೇ ನಮ್ಮ ಪ್ರತಿಭೆ, ಸಾಮಥ್ರ್ಯ ಪ್ರದರ್ಶನಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟು, ಪರೀಕ್ಷೆಯಿಲ್ಲದೇ ಉತ್ತೀರ್ಣರಾದವರೆಂದು ಜೀವನವಿಡೀ ಕಾಡುತ್ತಿದ್ದ ಮುಜುಗರ,ತಪ್ಪಿತಸ್ಥ ಭಾವನೆಯಿಂದ ನಮ್ಮನ್ನು ಮುಕ್ತಗೊಳಿಸಿದ್ದಕ್ಕೆ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಇಂದು ಸಂವಾದದಲ್ಲಿ ಭಾಗಿಯಾದ ಮಕ್ಕಳು ಹರ್ಷ ವ್ಯಕ್ತಪಡಿಸಿದರು.

    ಈಗಾಗಲೇ ಪರೀಕ್ಷಾ ಮಂಡಳಿಯಿಂದ ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಒಎಂಆರ್ ಶೀಟ್‍ಗಳನ್ನು ಉತ್ತರಿಸಿದ್ದೇವೆ. ನಮಗೆ ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಕ್ಕಳು ಅಭಿಪ್ರಾಯಪಟ್ಟರು. ಪರೀಕ್ಷೆ ಅಂಕಗಳು, ಪರೀಕ್ಷಾ ಸಮಯ ಕುರಿತು ತಮ್ಮ ಆತಂಕ, ಗೊಂದಲಗಳನ್ನು ನಿವಾರಿಸಿಕೊಂಡ ಮಕ್ಕಳು ರಫ್ ವರ್ಕ್ ಪ್ರಶ್ನೆ ಪತ್ರಿಕೆಯೊಂದಿಗೆ ಹೆಚ್ಚುವರಿ ಹಾಳೆಗಳನ್ನು ಒದಗಿಸುವ ಮಂಡಳಿ ಕ್ರಮವನ್ನು ಮುಕ್ತಕಂಠದಿಂದ ಸ್ವಾಗತಿಸಿದರು. ಬಹುತೇಕ ಮಕ್ಕಳು ಪರೀಕ್ಷಾ ವೇಳೆ ನಿಗದಿ ಕುರಿತು ಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷೆ ಕುರಿತು ಕೈಗೊಂಡ ವಿವಿಧ ಕ್ರಮಗಳು, ಪರೀಕ್ಷಾ ಪಾವಿತ್ರ್ಯತೆಯ ಕ್ರಮಗಳನ್ನು ಮಕ್ಕಳು ಶ್ಲಾಘಿಸಿದರು. ಇದನ್ನೂ ಓದಿ: ಸಿಇಟಿ- 2021 ಪರೀಕ್ಷೆಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ತಮ್ಮೂರಿಗೆ ಇನ್ನು ಪೂರ್ಣಪ್ರಮಾಣದಲ್ಲಿ ಬಸ್ ಸಂಚಾರವಿಲ್ಲದೇ ಇರುವುದರಿಂದ ಬಸ್ ಸೌಲಭ್ಯ ಒದಗಿಸುವ ಕುರಿತ ಅವಳ ಆತಂಕ ನಿವಾರಿಸಿದ ಸಚಿವರು ಬಸ್ ಸೌಲಭ್ಯ ಒದಗಿಸುವ ಕುರಿತು ಇಂದು ನಿಮ್ಮ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗುವುದು. ನೀವು ಪರೀಕ್ಷೆ ತಯಾರಾಗುವುದಕ್ಕೆ ಮಾತ್ರವೇ ತಮ್ಮ ಏಕಾಗ್ರತೆ ಇರಲಿ ಎಂದು ಸುರೇಶ್ ಕುಮಾರ್ ಅಭಯ ನೀಡಿದರು.

    ಪರೀಕ್ಷೆ ಬರೆಯಲು ಸಾಕ್ಷಿ:
    ಕಾರವಾರ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷಿ ಎಂಬ ವಿದ್ಯಾರ್ಥಿನಿ, ‘ನೀವು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತದೆ ಮತ್ತು ಪರೀಕ್ಷೆ ಬರೆಯುವ ಮೂಲಕವೇ ನಮ್ಮ ಸಾಮಥ್ರ್ಯ ಸಾಬೀತು ಪಡಿಸಲು ಅವಕಾಶ ನೀಡಿರುವುದರಿಂದ ನಾವೆಲ್ಲ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಲು ಸಿದ್ಧವಾಗಿರುವುದಕ್ಕೆ ನಾನೇ ಸಾಕ್ಷಿ’ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದಾಗ ಮುಕ್ತ ಸಂವಾದದಲ್ಲಿ ಭಾಗಿಯಾದ ರಾಜ್ಯದ 1000ಕ್ಕೂ ಹೆಚ್ಚು ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿ ತಾವೆಲ್ಲ ಪರೀಕ್ಷೆ ಬರೆಯಲು ದಿನಗಣನೆ ಮಾಡುತ್ತಿರುವುದನ್ನು ಮುಕ್ತವಾಗಿ ಹಂಚಿಕೊಂಡರು.

    ಪರೀಕ್ಷೆ ನಡೆಸದೇ ಹೋಗಿದ್ದರೆ ನಾವು ಕೊರೊನಾ ಬ್ಯಾಚ್ನಲ್ಲಿ ಪರೀಕ್ಷೆ ಬರೆಯದೇ ಪಾಸಾದವರೆಂಬ ಒಂದು ಅಪಖ್ಯಾತಿ ನಮ್ಮ ಮೇಲೆ ಉಳಿದುಬಿಡುತ್ತಿತ್ತೇನೋ ಎಂಬ ಆತಂಕ ನಮ್ಮಲ್ಲಿ ಉಳಿಯದಂತೆ ಮಾಡಿದ್ದಕ್ಕೆ ನಾವು ಕರ್ನಾಟಕ ಸರ್ಕಾರಕ್ಕೆ ನಮ್ಮ ಕೃತಜ್ಞತೆಗಳನ್ನು ತಿಳಿಸಲು ಈ ವೇದಿಕೆಯನ್ನು ಮೊದಲು ಬಳಸಿಕೊಳ್ಳುತ್ತೇವೆಂದು ಅನೇಕ ಮಕ್ಕಳು ಹೇಳಿದ್ದು ವೈಯಕ್ತಿಕವಾಗಿ ನಮ್ಮ ಅಧಿಕಾರಿಗಳು, ಶಿಕ್ಷಕರು ಮತ್ತು ನಮಗೆಲ್ಲರಿಗೂ ಅತ್ಯಂತ ಖುಷಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಪಿಯುಸಿ ಸೀಟುಗಳ ಹೆಚ್ಚಳಕ್ಕೆ ಕ್ರಮ – ಸುರೇಶ್ ಕುಮಾರ್

    ಇಳಿಮುಖವಾದ ಕೊರೊನಾ – ಭಯ ಬೇಡ:
    ನಾವು ಪರೀಕ್ಷೆ ಮಾಡಲು ಮುಂದಾದಾಗ ನಮ್ಮ ಮುಖ್ಯಮಂತ್ರಿಯವರು ಕೊರೊನಾ ಪ್ರಕರಣಗಳು ಕಡಿಮೆಯಾದರೆ ಮಾತ್ರವೇ ಪರೀಕ್ಷೆ ಮಾಡಲು ಮುಂದಾಗುತ್ತೇವೆ ಎಂದು ಹೇಳಿದಂತೆ ಈಗ ನಾವು ಪರೀಕ್ಷೆ ನಡೆಸಲು ಮುಂದಾಗಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕಳೆದ ವರ್ಷ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವಿಟಿ ದರ 13.2ರಷ್ಟಿದ್ದರೆ ಅದು ಈ ವರ್ಷ 1.7ರ ಆಸುಪಾಸಿನಲ್ಲಿದೆ, ಈ ಬಾರಿಯ ಪರೀಕ್ಷೆ ಕಳೆದ ಬಾರಿಯ ಪರೀಕ್ಷೆಗಿಂತ ಹೆಚ್ಚಿನ ಸುರಕ್ಷಿತ ವಾತಾವರಣದಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ದ್ವಿಗುಣವಾಗಿವೆ. ಪರೀಕ್ಷಾ ಕೊಠಡಿಗಳು ಮೂರು ಪಟ್ಟು ಹೆಚ್ಚಾಗಿವೆ. ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ. ಕೇವಲ ಎರಡೇ ದಿನಗಳ ಕಾಲ ಪರೀಕ್ಷೆ ನಡೆಯುವುದರಿಂದ ಯಾವುದೇ ತೊಂದರೆಗೆ ಅವಕಾಶವೇ ಇಲ್ಲ. ರಾಜ್ಯದ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಮತ್ತು ಪರೀಕ್ಷೆಗಳು ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿರುವ ಕುರಿತು ನಮಗೆಲ್ಲಾ ಭರವಸೆಯಿದ್ದು ತಮ್ಮ ಪೋಷಕರು ನಮ್ಮನ್ನು ಧೈರ್ಯವಾಗಿ ಪರೀಕ್ಷೆಗೆ ಕಳಿಸಲು ಉತ್ಸುಕರಾಗಿದ್ದಾರೆಂದು ಮಕ್ಕಳು ಹೇಳಿದರು. ರಾಜ್ಯದ 34ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಕಚೇರಿ ಮತ್ತು ಡಯಟ್ ಕೇಂದ್ರಗಳಲ್ಲಿ ಹಾಜರಿದ್ದ ಮಕ್ಕಳು ಸಚಿವರೊಂದಿಗೆ ಪರೀಕ್ಷೆ ಕುರಿತ ತಮ್ಮ ಶಂಕೆಗಳನ್ನು ನಿವಾರಿಸಿಕೊಂಡರು. 90 ಮಕ್ಕಳು ನೇರವಾಗಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

    ಶೇ.98ರಷ್ಟು ಸಿಬ್ಬಂದಿ ವ್ಯಾಕ್ಸಿನೇಷನ್:
    ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ 1,33,926 ಸಿಬ್ಬಂದಿಗಳಲ್ಲಿ 1,30,522 ಮಂದಿ ಮೊದಲ ಡೋಸ್ ಕೊರೊನಾ ವ್ಯಾಕ್ಸಿನೇಷನ್ ಪಡೆದಿದ್ದಾರೆ. 48,938 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಶೇ. 98 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. 3404 ಮಂದಿ ಇನ್ನೆರೆಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆಂದು ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪರೀಕ್ಷೆ ನಡೆಸಲು ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ:
    ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆ ಇಲ್ಲವೇ ಹಠದ ವಿಷಯವಲ್ಲ. ಪರೀಕ್ಷೆ ಕೈಬಿಡುವುದು ಯಾರಿಗೇ ಆಗಲಿ ಸುಲಭದ ಸಂಗತಿ. ಆದರೆ ನಾವು ನಮ್ಮ ಮಕ್ಕಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ ಅವರ ಮುಂದಿನ ಶಿಕ್ಷಣ ಅಯ್ಕೆಯ ಅನುಕೂಲಕ್ಕಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸಚಿವರು ಪುನರುಚ್ಚರಿಸಿದರು. ಪರೀಕ್ಷೆ ನಡೆಸುವುದರಲ್ಲಿ ಶಿಕ್ಷಣ ಇಲಾಖೆಯ ಯಾವುದೇ ರಹಸ್ಯ ಕಾರ್ಯಸೂಚಿಯೇನಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ರಾಜ್ಯದ ಆರೋಗ್ಯ ಇಲಾಖೆ ಮತ್ತು ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿದ ನಿರ್ದೇಶನದ ಆಧಾರದಲ್ಲೇ ಅವರು ರೂಪಿಸಿದ ಎಸ್‍ಒಪಿಯನ್ವಯವೇ ಪರೀಕ್ಷೆ ನಡಯುತ್ತಿದೆ. ಅದಕ್ಕೆ ರಾಜ್ಯದ ಮುಖ್ಯಮಂತ್ರಿಯವರೂ ಅನುಮೋದನೆ ನೀಡಿದ್ದಾರೆಂದು ಸಚಿವರು ತಿಳಿಸಿದರು.ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸ್ಯಾನಿಟೈಸರ್, ಮಾಸ್ಕ್ ಕೊಡುಗೆ ಕೊಟ್ಟ ದಾನಿಗಳು

    ಶೀಘ್ರವೇ ಕಾರ್ಯಪಡೆ ಕಾರ್ಯಾರಂಭ:
    ಬರುವ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ನಿರಂತರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಲು ಸಾಶಿಇ ಆಯುಕ್ತರ ನೇತೃತ್ವದಲ್ಲಿ ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ಶಿಕ್ಷಣದ ಮುಂದುವರಿಕೆ ಕುರಿತಂತೆ ಕ್ರಿಯಾಯೋಜನೆಯನ್ನು ರೂಪಿಸಲಿದೆ ಎಂದು ಸಚಿವರು ವಿವರಿಸಿದರು.

    ಜುಲೈ ಕೊನೇ ವಾರದಲ್ಲಿ ಪಿಯುಸಿ ಫಲಿತಾಂಶ:
    ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳನ್ನು ಜುಲೈ 20ರ ಆಸುಪಾಸಿನಲ್ಲಿ ಪ್ರಕಟಿಸಲಾಗುವುದು ಎಂದು ಸುರೇಶ್ ಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಎಲ್ಲ ಜಿಲ್ಲೆಗಳ ಡಿಡಿಪಿಐಗಳು, ಡಯಟ್ ಪ್ರಾಚಾರ್ಯರು ಭಾಗವಹಿಸಿದ್ದರು.