Tag: ಶಿಕ್ಷಕ

  • 1ನೇ ಕ್ಲಾಸ್ ವಿದ್ಯಾರ್ಥಿಗೆ ಮೂತ್ರ ಮಿಕ್ಸ್ ಮಾಡಿದ ಜ್ಯೂಸ್ ಕುಡಿಯುವ ಶಿಕ್ಷೆ ನೀಡಿದ ಶಿಕ್ಷಕ

    1ನೇ ಕ್ಲಾಸ್ ವಿದ್ಯಾರ್ಥಿಗೆ ಮೂತ್ರ ಮಿಕ್ಸ್ ಮಾಡಿದ ಜ್ಯೂಸ್ ಕುಡಿಯುವ ಶಿಕ್ಷೆ ನೀಡಿದ ಶಿಕ್ಷಕ

    ಹೈದರಾಬಾದ್: ಒಂದನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಮೂತ್ರ ಮಿಶ್ರಿತ ಜ್ಯೂಸ್ ಕುಡಿಯುವಂತೆ ಅಮಾನವೀಯ ಶಿಕ್ಷೆ ನೀಡಿರುವ ಘಟನೆ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ವಿದ್ಯಾರ್ಥಿಗೆ ಅಮಾನವೀಯ ಶಿಕ್ಷೆ ನೀಡಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‍ಪಿಆರ್ ವಿದ್ಯಾ ಕಾನ್ಸಪ್ಟ್ ಶಾಲೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಶಾಲೆಯ ದೈಹಿಕ ಶಿಕ್ಷಕ ವಿಜಯ್ ಕುಮಾರ್ ಬಂಧಿತ ಶಿಕ್ಷಕ.

    ಶಾಲೆಯಲ್ಲಿ ನಡೆದಿದ್ದೇನು?: ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬ ತಮಾಷೆಗಾಗಿ ತನ್ನ ಸಹಪಾಠಿಯ ಹಣ್ಣಿನ ಜ್ಯೂಸ್‍ನಲ್ಲಿ ಮೂತ್ರವನ್ನು ಬೆರೆಸಿದ್ದಾನೆ. ತನ್ನ ಸಹಪಾಠಿ ಜ್ಯೂಸ್ ಕುಡಿಯುವಾಗ ಅದರಲ್ಲಿ ಮೂತ್ರ ಮಿಕ್ಸ್ ಆಗಿದೆ ಕುಡಿಯಬೇಡ ಅಂತಾ ಹೇಳಿದ್ದಾನೆ. ಕೂಡಲೇ ಜ್ಯೂಸ್ ತಂದಿದ್ದ ವಿದ್ಯಾರ್ಥಿನಿ ದೈಹಿಕ ಶಿಕ್ಷಕ ವಿಜಯ್ ಕುಮಾರ್‍ಗೆ ದೂರು ನೀಡಿದ್ದಾಳೆ.

    ವಿಷಯ ತಿಳಿದ ವಿಜಯ್ ಕುಮಾರ್ ಮೂತ್ರ ಮಿಕ್ಸ್ ಆಗಿದ್ದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದಾರೆ. ವಿಷಯ ತಿಳಿದು ಶಾಲೆಗೆ ಬಂದ ಪೋಷಕರ ಮುಂದೆಯೂ ವಿಜಯ್ ಕುಮಾರ್ ತಾನು ನೀಡಿರುವ ಶಿಕ್ಷೆಯನ್ನು ಸಮರ್ಥಿಸಿಕೊಂಡಿದ್ದಾನೆ. ವಿಜಯ್ ಕುಮಾರ್ ವಿರುದ್ಧ ದೂರು ದಾಖಲಾದ ಬಳಿಕ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.

    ಶಿಕ್ಷಕನನ್ನು ವಿಚಾರಣೆ ನಡೆಸಿದ ಬಳಿಕ ಐಪಿಸಿ ಸೆಕ್ಷನ್ 270 (ಜೀವಕ್ಕೆ ಅಪಾಯವಾಗುವಂತಹ ಹಾನಿಕಾರಕ ಕ್ರಿಯೆಗೆ ಪ್ರಚೋದನೆ) ಮತ್ತು ಸೆಕ್ಷನ್ 75 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪಿ.ಎ.ಸೂರ್ಯನಾರಾಯಣ ರೆಡ್ಡಿ ಹೇಳಿದ್ದಾರೆ.

  • ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಕನ್ನಡ ಶಾಲೆಯ ಮಕ್ಕಳಿಗೆ ಬೇಕಿದೆ ಡೆಸ್ಕ್

    ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಕನ್ನಡ ಶಾಲೆಯ ಮಕ್ಕಳಿಗೆ ಬೇಕಿದೆ ಡೆಸ್ಕ್

    ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶ ಮತ್ತು ಕರ್ನಾಟಕ ಗಡಿ ಭಾಗದಲ್ಲಿರುವ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿ ಗ್ರಾಮದ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಳೀಯ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಕಾರಣ ಶಿಕ್ಷಕ ನಾಗೇಶ್. ಶಿಕ್ಷಕರಾದ ನಾಗೇಶ್ ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಕರ್ನಾಟಕದಲ್ಲೇ ಈ ಗ್ರಾಮವಿದ್ದರೂ ಇಲ್ಲಿನ ಜನರ ಆಡು ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವಷ್ಟು ಭಾವನೆಗಳಲ್ಲಿ ಬದುಕುತ್ತಿದ್ರು. ಈ ಶಾಲೆಗೆ ಶಿಕ್ಷಕರಾಗಿ ನಾಗೇಶ್ ಬಂದಾಗ ಇಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಕೂಡ ಬರುತ್ತಿರಲಿಲ್ಲ. ಕನಿಷ್ಠ ಇಲ್ಲಿನ ಜನ ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿರಲಿಲ್ಲ. ಆದ್ರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಕ್ಷಕ ನಾಗೇಶ್ ಗ್ರಾಮದಲ್ಲೇ ವಾಸ ಮಾಡುವ ಮೂಲಕ, ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನ ತಿಳಿಸಿದರು. ಪೋಷಕರ ಮನವೊಲಿಸಿ ಎಲ್ಲಾ ಮಕ್ಕಳನ್ನ ಶಾಲೆಗೆ ಕರೆತಂದು ಸತ್ಪ್ರಜೆಗಳನ್ನ ಮಾಡುವ ಕಾಯಕಕ್ಕೆ ಮುಂದಾದರು.

    ಪ್ರತಿ ವರ್ಷ ಶಾಲೆಯಲ್ಲಿ ಕನ್ನಡದ ನುಡಿ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಕನ್ನಡದ ಕಂಪು ಸೂಸುವ ಕೆಲಸ ಮಾಡುತ್ತಿದ್ದಾರೆ. ತೆಲುಗು ಭಾಷೆಯ ಪ್ರಭಾವದಿಂದ ಕನ್ನಡವೇ ಬಾರದ ಮಕ್ಕಳ ಬಾಯಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದಾರೆ. ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿ ಭಿನ್ನ ವಿಭಿನ್ನ ಪ್ರಯತ್ನಗಳಿಂದ ಇಡೀ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಿದ ಕೀರ್ತಿ ಶಿಕ್ಷಕ ನಾಗೇಶರದ್ದು. ಅಸಲಿಗೆ ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಈ ಶಾಲೆಗೆ ಸಹೃದಯಿ ದಾನಿಗಳು ಹಾಗೂ ಸ್ನೇಹಿತರ ಬಳಗದಿಂದ, ಅಳಿವಿನಂಚಿಗೆ ಸಾಗುತ್ತಿದ್ದ ಸರ್ಕಾರಿ ಶಾಲೆಗೆ ಒಂದಷ್ಟು ಸೌಲಭ್ಯಗಳನ್ನ ಪಡೆದುಕೊಳ್ಳುವಲ್ಲಿ ಶಿಕ್ಷಕ ನಾಗೇಶ್ ಸಫಲರಾಗಿದ್ದಾರೆ.

    ದಾನಿಗಳ ನೆರವಿನಿಂದ ಪಡೆದ ಪ್ರೊಜೆಕ್ಟರ್ ಮೂಲಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಕಂಪ್ಯೂಟರ್‍ನ್ನೇ ಕಾಣದ ಮಕ್ಕಳ ಕೈ ಹಿಡಿದು ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಕನಿಷ್ಠ ಕನ್ನಡವೂ ಬಾರದ ಮಕ್ಕಳ ಬಾಯಲ್ಲಿ ಇಂದು ಪಟಪಟನೆ ಇಂಗ್ಲೀಷ್ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯಲ್ಲಿ ಇಂದು 1 ರಿಂದ 7 ನೇ ತರಗತಿಯವರೆಗೂ 114 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

    ಪ್ರತಿ ವರ್ಷ ತಮ್ಮ ಫೇಸ್ ಬುಕ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನ ಸಹಾಯ ಪಡೆಯುವ ಶಿಕ್ಷಕ ನಾಗೇಶ್ ವಿದ್ಯಾರ್ಥಿಗಳಿಗೆ ಇಡೀ ವರ್ಷ ಉಚಿತ ನೋಟ್ ಪುಸ್ತಕ್ ಸೇರಿದಂತೆ ಪೆನ್, ಪೆನ್ಸಿಲ್., ರಬ್ಬರ್ ಹೀಗೆ ಎಲ್ಲಾ ಕಲಿಕಾ ಸಾಮಾಗ್ರಿಗಳನ್ನ ನೀಡುತ್ತಾರೆ. ಇನ್ನೂ ಕುಡಿಯುವ ನೀರಿನಿಂದ ಹಿಡಿದು ಆಡುಗೆಗೆ ಬೇಕಾದ ಗ್ರೈಂಡರ್, ತಟ್ಟೆ, ಲೋಟ, ವಾಟರ್ ಫಿಲ್ಟರ್ ಸೇರಿದಂತೆ ಶಾಲೆಗೆ ಬೇಕಾದ ಸಕಲ ಸೌಲಭ್ಯಗಳನ್ನ ದಾನ ಪಡೆದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.

    ಶಿಕ್ಷಕರ ಕೊರತೆ ಕಾರಣ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ತಮ್ಮ ಪತ್ನಿಯನ್ನೇ ತಮ್ಮ ಶಾಲೆಯಲ್ಲಿ ಉಚಿತವಾಗಿ ಭೋಧನೆ ಮಾಡಿಸುತ್ತಿದ್ದಾರೆ. ಪತಿಯ ಸಮಾಜಮುಖಿ ಕಾರ್ಯಕ್ಕೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟಿದ್ದಾರೆ. ಆದ್ರೆ ಇಂತಹ ಶಾಲೆಯಲ್ಲಿ 114 ಮಕ್ಕಳಿಗೆ ತಕ್ಕಂತೆ ಡೆಸ್ಕ್ ಗಳ ಕೊರತೆ ಇದೆ. ಹೀಗಾಗಿ ಕೆಲ ಮಕ್ಕಳು ಡೆಸ್ಕ್ ಗಳ ಮೇಲೆ ಕೂತು ಪಾಠ ಕೇಳಿದ್ರೇ ಕೆಲವರು ನೆಲದಲ್ಲೇ ಕೂರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೀಗಾಗಿ ಯಾರಾದ್ರೂ ಸಹೃದಯಿ ದಾನಿಗಳು ತಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ 12 ಡೆಸ್ಕ್ ಗಳನ್ನ ಕೊಡಿಸಿ ಅಂತ ಬೆಳಕು ಕಾರ್ಯಕ್ರಮದ ಮೂಲಕ ಮನವಿ ಮಾಡುತ್ತಿದ್ದಾರೆ.

    https://youtu.be/VusB20dZ_WE

  • ಬಡಮಕ್ಕಳ ಬದುಕು ರೂಪಿಸಲು ಪಣ – ಬೆಳಗಿನ ಜಾವ 4 ಗಂಟೆಗೆ ಬಂದು ಮಕ್ಕಳನ್ನ ಓದಿಸೋ ಮೇಷ್ಟ್ರು

    ಬಡಮಕ್ಕಳ ಬದುಕು ರೂಪಿಸಲು ಪಣ – ಬೆಳಗಿನ ಜಾವ 4 ಗಂಟೆಗೆ ಬಂದು ಮಕ್ಕಳನ್ನ ಓದಿಸೋ ಮೇಷ್ಟ್ರು

    ರಾಯಚೂರು: ಸರ್ಕಾರಿ ಶಾಲೆ ಆರಂಭವಾದ್ರೂ ಸರಿಯಾದ ಟೈಮ್‍ಗೆ ಮೇಷ್ಟ್ರು ಬರಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ. ಇದಕ್ಕೆ ಅಪವಾದ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಮೌನೇಶ್ ಮೇಷ್ಟ್ರು.

    ಮೌನೇಶ್ ಕುಂಬಾರ್ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನ್ನಂತೆ ಬಡ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದುಳಿಯಬಾರದು ಅಂತ ಶಪಥತೊಟ್ಟು ಶ್ರಮಿಸ್ತಿದ್ದಾರೆ. “ಎದ್ದೇಳು ಮಂಜುನಾಥ” ಅಂತ ಯೋಜನೆ ರೂಪಿಸಿ ಮುಂಜಾನೆಯೇ ಎದ್ದು ನಾಲ್ಕೈದು ಗಂಟೆಗೆ 5 ಕಿ.ಮೀ ದೂರದ ಲಿಂಗಸುಗೂರಿನಿಂದ ಸರ್ಜಾಪೂರಕ್ಕೆ ಬರುತ್ತಾರೆ. ಒಂದು ವೇಳೆ ಶಿಕ್ಷಕರು ಬರಲಿಲ್ಲ ಅಂದ್ರೆ ವಿದ್ಯಾರ್ಥಿಗಳೇ ತಾವು ಓದ್ತಿರೋ ಬಗ್ಗೆ ಮಿಸ್ ಕಾಲ್ ಕೊಡಬೇಕು.

    ಸರ್ಜಾಪೂರದ ಈ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆಯೇನಲ್ಲ. ವಿಜ್ಞಾನ, ಗಣಿತ ಹಾಗೂ ಭಾಷಾ ಪ್ರಯೋಗಾಲಯಗಳು ಇಡೀ ಜಿಲ್ಲೆಗೆ ಮಾದರಿಯಾಗಿವೆ. ಹೆಡ್‍ಮೇಷ್ಟ್ರು ಮೌನೇಶ್ ಅವರ ಈ ಕಾರ್ಯಕ್ಕೆ ಶಾಲೆಯ 8 ಜನ ಸಹ ಶಿಕ್ಷಕರು ಸಾಥ್ ನೀಡಿದ್ದಾರೆ.

    ಸರ್ಜಾಪೂರದ ಜೊತೆಗೆ ಕುಪ್ಪಿಗುಡ್ಡ ಗ್ರಾಮ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಧ್ಯಯನ ಮಾಡ್ತಿದ್ದು, ಇಲ್ಲಿನ ಪಾಠ ಪ್ರವಚನದ ಗುಣಮಟ್ಟ ಕಂಡು ಲಿಂಗಸುಗೂರು ತಾಲೂಕು ಕೇಂದ್ರದಿಂದಲೂ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ.

  • ಅವಾಚ್ಯ ಶಬ್ಧಗಳಿಂದ ಶಿಕ್ಷಕ ನಿಂದನೆ- ತಾಯಿ ಜೊತೆ ಕಷ್ಟ ಹೇಳಿಕೊಂಡ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ

    ಅವಾಚ್ಯ ಶಬ್ಧಗಳಿಂದ ಶಿಕ್ಷಕ ನಿಂದನೆ- ತಾಯಿ ಜೊತೆ ಕಷ್ಟ ಹೇಳಿಕೊಂಡ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದಲ್ಲಿರುವ ನವೋದಯ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಜೈಬುನ್ನೀಸ ಆತ್ಮಹತ್ಯೆಗೆ ಶರಣಾಗುವ ಮುನ್ನ ತಾಯಿಯೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜನವರಿ 24ರಂದು ಜೈಬುನ್ನೀಸ ವಸತಿ ಶಾಲೆಯ ಕೊಠಡಿಯಲ್ಲೇ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದ ಜೈಬುನ್ನೀಸ ಸಾವಿಗೆ ವಸತಿ ಶಾಲೆ ಶಿಕ್ಷಕ ರವಿ ಎಂಬವನೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.

    ಶಿಕ್ಷಕ ರವಿ ಜೈಬುನ್ನೀಸಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಬಗ್ಗೆ ಆತ್ಮಹತ್ಯೆಗೆ ಶರಣಾಗುವ ಮುಂಚೆ ತಾಯಿಗೆ ಕರೆ ಮಾಡಿದ್ದ ಜೈಬುನ್ನೀಸ, ಅಳುತ್ತಾ ತನ್ನ ಕಷ್ಟ ಹೇಳಿಕೊಂಡಿದ್ದಳು. ಈ ವೇಳೆ ಜೈಬುನ್ನೀಸ ಮನೆಯವರು ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದರು. ಶಾಲೆಯ ಮರ್ಯಾದೆ ಹಾಳಾಗುತ್ತೆ ಎಂದು ಸುಮ್ಮನಿದ್ದ ವಿದ್ಯಾರ್ಥಿನಿ, ನಂತರ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಬಗ್ಗೆ ವಿದ್ಯಾರ್ಥಿನಿ ಮನೆಯವರು ಕೆ.ಆರ್ ಪೇಟೆ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರು ಶಿಕ್ಷಕ ರವಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಶಿಕ್ಷಕನ ಬಗ್ಗೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಪೋಷಕರಿಗೆ ಅಳುತ್ತಾ ತನ್ನ ಕಷ್ಟ ಹೇಳಿಕೊಂಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿಕ್ಷಕನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

  • ಹೋಂವರ್ಕ್ ಮಾಡದ್ದಕ್ಕೆ 3ನೇ ಕ್ಲಾಸ್ ವಿದ್ಯಾರ್ಥಿಗೆ ಸಹಪಾಠಿಗಳಿಂದ 40 ಬಾರಿ ಕಪಾಳಮೋಕ್ಷ

    ಹೋಂವರ್ಕ್ ಮಾಡದ್ದಕ್ಕೆ 3ನೇ ಕ್ಲಾಸ್ ವಿದ್ಯಾರ್ಥಿಗೆ ಸಹಪಾಠಿಗಳಿಂದ 40 ಬಾರಿ ಕಪಾಳಮೋಕ್ಷ

    ಲಕ್ನೋ: 3 ನೇ ತರಗತಿಯ ವಿದ್ಯಾರ್ಥಿ ಹೋಂ ವರ್ಕ್ ಮಾಡದಿದ್ದಕ್ಕೆ ಶಿಕ್ಷಕ, ಬಾಲಕನ ಸಹಪಾಠಿಗಳಿಂದಲೇ 40 ಬಾರಿ ಕಪಾಳಮೋಕ್ಷ ಮಾಡಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಇಲ್ಲಿನ ಯುನೈಟೆಡ್ ಪಬ್ಲಿಕ್ ಸ್ಕೂಲ್‍ನಲ್ಲಿ ಈ ಘಟನೆ ನಡೆದಿದೆ. ಕಪಾಳಮೋಕ್ಷ ಮಾಡಿಸಿದ ನಿರ್ದಯಿ ಶಿಕ್ಷಕನನ್ನು ಅಮಾನತು ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಶಾಲೆಯಪ್ರಾಂಶುಪಾಲರು ತಿಳಿಸಿದ್ದಾರೆ. ನನ್ನ ಮಗ ಯುವರಾಜ್ ಕಳೆದ 15 ದಿನಗಳಿಂದ ಖಿನ್ನತೆಗೊಳಗಾಗಿದ್ದ. ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದ. ನಾವು ಬಲವಂತ ಮಾಡಿ ಕೇಳಿದಾಗ ಹೋಂ ವರ್ಕ್ ಪೂರ್ಣಗೊಳಿಸದ ಕಾರಣ ಶಾಲಾ ಶಿಕ್ಷಕರೊಬ್ಬರು ಸಹಪಾಠಿಗಳಿಂದ ಕಪಾಳಮೋಕ್ಷ ಮಾಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ ಎಂದು ಬಾಲಕನ ಪೋಷಕರು ಹೇಳಿದ್ದಾರೆ.

    ಈ ಘಟನೆ ಸಂಬಂಧ ಬಾಲಕನ ಪೋಷಕರು ನೀಡಿರುವ ದೂರನ್ನು ಸ್ವೀಕರಿಸಿದ್ದು, ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲಾ ಪ್ರಾಂಶುಪಾಲ ಶ್ಯಾಲಿ ಧೀರ್ ತಿಳಿಸಿದ್ದಾರೆ.

  • ಮೈಸೂರಿನಲ್ಲೊಬ್ಬ ನೀಚ ಶಿಕ್ಷಕ- 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಮೈಸೂರಿನಲ್ಲೊಬ್ಬ ನೀಚ ಶಿಕ್ಷಕ- 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಮೈಸೂರು: 6ನೇ ತರಗತಿ ವಿದ್ಯಾರ್ಥಿನಿಗೆ ಮೂರು ತಿಂಗಳಿನಿಂದ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಕೆ.ಆರ್.ನಗರದ ಶಾಲೆಯ ಶಿಕ್ಷಕನಾಗಿರುವ ರೋಹಿತ್ ಮೇಲೆ ಈ ಆರೋಪ ಕೇಳಿಬಂದಿದೆ. ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ನಿವಾಸಿಯಾದ ರೋಹಿತ್ ಶಾಲಾ ಅವಧಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ

    ಬಾಲಕಿಯ ಹಾವಭಾವದಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ನಂತರ ಮೈಸೂರಿನಲ್ಲಿ ಮನಶಾಸ್ತ್ರಜ್ಞರಲ್ಲಿ ಕೌನ್ಸಿಲಿಂಗ್ ಮಾಡಿಸಿದ್ದಾರೆ. ಈ ವೇಳೆ ಬಾಲಕಿ ರೋಹಿತ್ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಶಾಲೆ ಬಳಿ ತೆರಳಿ ಶಿಕ್ಷಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಪ್ರಾಪ್ತೆಯ ಪೋಷಕರು ಶಿಕ್ಷಕನನ್ನು ಎಳೆತಂದು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಕೆ.ಆರ್. ನಗರ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಈ ಪ್ರಕರಣ ದಾಖಲಾಗಿದೆ.

  • ಲೀವ್ ಲೆಟರ್ ತರದಿದ್ದಕ್ಕೆ 10ರ ಬಾಲಕಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ಲೀವ್ ಲೆಟರ್ ತರದಿದ್ದಕ್ಕೆ 10ರ ಬಾಲಕಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ಮುಂಬೈ: ಎರಡು ದಿನದ ರಜಾ ಅರ್ಜಿಯನ್ನು ತರದಕ್ಕೆ 10 ವರ್ಷದ ಬಾಲಕಿಗೆ ಚೆನ್ನಾಗಿ ಥಳಿಸಿದ್ದ ಮುಂಬೈ ಶಾಲೆಯೊಂದರ ತರಗತಿ ಶಿಕ್ಷಕರೊಬ್ಬರು ಅಮಾನತುಗೊಂಡಿದ್ದಾರೆ.

    ಈ ಘಟನೆ ನಗರದ ಮುನ್ಸಿಪಲ್ ಕಾರ್ಪೋರೇಷನ್ ನಡೆಸಲ್ಪಡುವ ಸಾಯಿ ಜೀವನ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದಿದೆ. ಘಟನೆಯಿಂದ ಅಮನಾತಾದ ಶಿಕ್ಷಕನನ್ನು ಶ್ರೀಕೃಷ್ಣ ಕೆಂಜಾಲೆ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: 5ನೇ ತರಗತಿಯಲ್ಲಿ ಓದುತ್ತಿದ್ದ ಬಿಹಾದ ಮೂಲದ ವಿದ್ಯಾರ್ಥಿನಿ ಹೊಟ್ಟೆ ನೋವು ಅಂತ ಎರಡು ದಿನ ಶಾಲೆಗೆ ಹೋಗಿರಲಿಲ್ಲ. ಆದ್ರೆ ರಜೆ ಕಳೆದು ಶಾಲೆಗೆ ಹೋಗಬೇಕಿದ್ರೆ ಆಕೆ ರಜೆಯ ಅರ್ಜಿಯನ್ನು ತೆದುಕೊಂಡು ಹೋಗಲು ಮರೆತಿದ್ದಳು. ಇದರಿಂದ ಸಿಟ್ಟುಗೊಂಡ ಶಿಕ್ಷಕ ಆಕೆಗೆ ಶಿಕ್ಷೆಯಾಗಿ ಚೆನ್ನಾಗಿ ಥಳಿಸಿದ್ದಾರೆ. ಪರಿಣಾಮ ಬಾಲಕಿಯ ಬಲಗೈಯಲ್ಲಿ ಬಾಸುಂಡೆ ಬಂದಿದೆ.

    ಬುಧವಾರ ಈ ಘಟನೆ ನಡೆದಿದ್ದು, ಬಾಲಕಿಯ ತಂದೆ ಕಟ್ಟಡ ಕಾರ್ಮಿಕರಾಗಿದ್ದು ಈ ವಿಚಾರವನ್ನು ಪಾಲಿಕೆ ಸದಸ್ಯ ರಾಹುಲ್ ಜಾಧವ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ಜಾಧವ್ ಅವರು ಪುಣೆ ನಗರಾಯುಕ್ತರಿಗೆ ವಿಷಯ ತಿಳಿಸುತ್ತಾರೆ. ಜಾಧವ್ ಮಾಹಿತಿಯಂತೆ ಅವರು ಚಿಕಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ ಘಟನೆಯ ಬಗ್ಗೆ ಬಾಲಕಿ ಅಥವಾ ಆಕೆಯ ತಂದೆ ಯಾವುದೇ ದೂರು ದಾಖಲಿಸಿಲ್ಲ ಎಂಬುದಾಗಿ ವರದಿಯಾಗಿದೆ.

    ಸದ್ಯ ಬಾಲಕಿ ನಗರದ ಯಶ್ವಂತ್ ರಾವ್ ಚೌಹಾಣ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾಳೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ. ಅಷ್ಟಕ್ಕೂ ಈ ಘಟನೆ ನಡೆದ ದಿನ ಪ್ರಾಂಶುಪಾಲರು ಗೈರಾಗಿದ್ದರು. ಸದ್ಯ ಪ್ರಕರಣ ಸಂಬಂಧ ಶಿಕ್ಷಕನನ್ನು ಶಾಲೆಯಿಂದ ಅಮಾನತು ಮಾಡಿದ್ದೇವೆ ಅಂತ ಶಿಕ್ಷಣಾಧಿಕಾರಿ ಬಿ ಎಸ್ ಅವಾರಿ ತಿಳಿಸಿದ್ದಾರೆ.

  • ಪತ್ನಿ ಅಂದವಾಗಿದ್ದಾಳೆಂದು ಮೊಬೈಲ್ ಕೊಡದ ಶಿಕ್ಷಕ ಪತಿ, ನೇಣು ಬಿಗಿದು ಕೊಂದೇ ಬಿಟ್ಟ!

    ಪತ್ನಿ ಅಂದವಾಗಿದ್ದಾಳೆಂದು ಮೊಬೈಲ್ ಕೊಡದ ಶಿಕ್ಷಕ ಪತಿ, ನೇಣು ಬಿಗಿದು ಕೊಂದೇ ಬಿಟ್ಟ!

    ಬಳ್ಳಾರಿ: ಪತ್ನಿ ಚಂದವಾಗಿ, ಅಂದವಾಗಿದ್ದಾಳೆ. ಅವಳಿಗೆ ಮೊಬೈಲ್ ನೀಡಿದ್ರೆ ಬೇರೆಯವರ ಜೊತೆ ಮಾತನಾಡುತ್ತಾಳೆಂದು ಅನುಮಾನಪಡುತ್ತಿದ್ದ ಶಿಕ್ಷಕ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೂವಿನಹಡಗಲಿ ತಾಲೂಕಿನ ಕುಂಬಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯ ಶಿಕ್ಷಕ ನಾಗರಾಜ್, ತನ್ನ ಪತ್ನಿಯನ್ನು ನೇಣು ಬಿಗಿದು ನಂತರ ಹೃದಯಾಘಾತವೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

    ಶಿಕ್ಷಕ ನಾಗರಾಜ್ ಚೆನ್ನಗಿರಿಯ ಹೆಬ್ಬಾಳಗೇರಿಯ ನೇತ್ರಾವತಿಯೊಂದಿಗೆ ಕಳೆದ ವರ್ಷವಷ್ಟೆ ಮದುವೆಯಾಗಿದ್ದ. ಆದ್ರೆ ಮದುವೆಯಾದ ನಂತರ ಪತ್ನಿಯನ್ನು ಸದಾ ಅನುಮಾನಿಸುತ್ತಿದ್ದ ನಾಗರಾಜ್, ಪತ್ನಿಯನ್ನು ತವರು ಮನೆಗೂ ಸಹ ಕಳುಹಿಸದೆ, ಮೊಬೈಲ್ ನಲ್ಲಿ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ. ಅಲ್ಲದೇ ವರದಕ್ಷಿಣೆ ತಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ.

    ಪತಿಯ ಕಿರುಕುಳಕ್ಕೆ ಸೊಪ್ಪು ಹಾಕದ ನೇತ್ರಾವತಿ, ತವರು ಮನೆಯಿಂದ ವರದಕ್ಷಿಣೆ ತರಲು ನಿರಾಕರಿಸಿದ್ದರು. ಹೀಗಾಗಿ ನಾಗರಾಜ್ ಬುಧುವಾರ ರಾತ್ರಿ ಪತ್ನಿಗೆ ಹಡಗಲಿಯ ಇಸ್ಲಾಂಪೇಟೆಯ ಮನೆಯಲ್ಲಿ ಹಲ್ಲೆ ಮಾಡಿ ನೇಣು ಬಿಗಿದು ಕೊಲೆ ಮಾಡಿದ್ದಾನೆ. ನಂತರ ಪತ್ನಿಗೆ ಹೃದಯಾಘಾತವಾಗಿದೆ ಎಂದು ಬೀಗರಿಗೆ ಫೋನ್ ಮಾಡಿ ಕರೆಸಿದ್ದಾನೆ. ನೇತ್ರಾವತಿಯ ಪೋಷಕರು ಅಳಿಯನ ಮನೆಗೆ ಬಂದು ನೋಡಿದಾಗ ಮಗಳನ್ನು ನೇಣು ಬಿಗಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

    ಇಷ್ಟಾದ್ರೂ ಆಗಿದ್ದು ಆಗಿ ಹೋಗಿದೆ ಎಂದು ರಾಜಿ ಮಾಡಿಸುವ ಪ್ರಯತ್ನವನ್ನು ನಾಗರಾಜ್ ಮಾಡಿದ್ದ. ರಾಜಿಯಾಗದ ಹಿನ್ನಲೆಯಲ್ಲಿ ನಾಗರಾಜ್ ಇದೀಗ ತೆಲೆಮರೆಸಿಕೊಂಡಿದ್ದಾನೆ.

    ಘಟನೆಯ ಕುರಿತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಉರ್ದು ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ರು ದಾವಣಗೆರೆ ಶಿಕ್ಷಕ ಸೋಯದ್

    ಸರ್ಕಾರಿ ಉರ್ದು ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ರು ದಾವಣಗೆರೆ ಶಿಕ್ಷಕ ಸೋಯದ್

    ದಾವಣಗೆರೆ: ಇದು ರಾಜ್ಯದಲ್ಲೇ ಅತಿದೊಡ್ಡ ಇಂಟರ್ ಆಕ್ಟೀವ್ ಬೋರ್ಡ್ ಹೊಂದಿರುವ ಉರ್ದು ಶಾಲೆ. ದಾವಣಗೆರೆಯ ಈ ಶಾಲೆ ಸಂಪೂರ್ಣ ಹೈಟೆಕ್ ಆಗಿದ್ದು, ಇದೀಗ ಜಿಲ್ಲೆಯ ಗಮನ ಸೆಳೆದಿದೆ.

    ಹೌದು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಉರ್ದು ಶಾಲೆಯ ಗಣಿತ ಶಿಕ್ಷಕ ಸೋಯದ್ ಬೇಗ್ ಪರಿಶ್ರಮದಿಂದ ಈ ಶಾಲೆ ಈಗ ಕೇಂದ್ರಬಿಂದುವಾಗಿದೆ. ತರಗತಿಯಲ್ಲಿ ಪಾಠ ಕೇಳುವ ಮಕ್ಕಳಿಗೆ ಹೈಟೆಕ್ ಲ್ಯಾಬ್‍ನಲ್ಲಿ ಪ್ರತ್ಯಕ್ಷವಾಗಿ ಪ್ರಯೋಗ ಮಾಡುವುದರಿಂದ ಮಕ್ಕಳ ಗ್ರಹಿಕೆ ಉತ್ತಮವಾಗಿದೆ ಅಂತ ಶಿಕ್ಷಕ ಸೋಯದ್ ಬೇಗ್ ಹೇಳ್ತಾರೆ.

    ರಾಜ್ಯದಲ್ಲಿ ಎರಡನೇ ಅತ್ಯಂತ ದೊಡ್ಡ ಇಂಟರ್ ಆಕ್ಟಿವ್ ಬೋರ್ಡ್ ಹೊಂದಿರುವ ಉರ್ದು ಶಾಲೆ ಎಂಬ ಖ್ಯಾತಿಗೆ ಈ ಶಾಲೆ ಭಾಜನವಾಗಿದೆ. ಸೋಯದ್ ಅವರಿಗೆ ಸಹಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರ ಸಾಥ್ ಸಿಕ್ಕಿದೆ.

    ಸರ್ಕಾರಿ ಶಾಲೆ ಅಂದ್ರೆ ಹೀಗೂ ಇರುತ್ತೆ ಅಥವಾ ಇರಿಸಬಹುದು ಅನ್ನೋದನ್ನ ಋಜುವಾತು ಮಾಡಿದ್ದಾರೆ ಕೆರೆಬಿಳಚಿ ಶಾಲೆಯ ಮೇಷ್ಟ್ರು ಸೋಯದ್ ಬೇಗ್.

    https://www.youtube.com/watch?v=zYA3oc4tfAA

  • ಮದುವೆ ದಿನವೇ ಶಿಕ್ಷಕ ಜೋಡಿ ಕೆಲಸದಿಂದ ವಜಾ- ಅವರ ‘ರೊಮ್ಯಾನ್ಸ್’ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಎಂದ ಶಾಲೆ

    ಮದುವೆ ದಿನವೇ ಶಿಕ್ಷಕ ಜೋಡಿ ಕೆಲಸದಿಂದ ವಜಾ- ಅವರ ‘ರೊಮ್ಯಾನ್ಸ್’ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಎಂದ ಶಾಲೆ

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡ್ತಿದ್ದ ನವವಿವಾಹಿತ ದಂಪತಿಯನ್ನ ಮದುವೆಯ ದಿನವೇ ಕೆಲಸದಿಂದ ವಜಾ ಮಾಡಲಾಗಿದೆ. ಈ ಜೋಡಿಯ ರೊಮ್ಯಾನ್ಸ್ ನಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಶಾಲೆಯವರು ಹೇಳಿಕೆ ನೀಡಿದ್ದಾರೆ.

    ಪುಲ್ವಾಮಾದ ಟ್ರಾಲ್ ಟೌನ್‍ನವರಾದ ರಾತಿಖ್ ಭಟ್ ಹಾಗೂ ಸುಮಾಯಾ ಬಶೀರ್ ಕೆಲಸದಿಂದ ವಜಾಗೊಂಡಿರೋ ದಂಪತಿ. ಈ ಇಬ್ಬರೂ ಕಳೆದ ಹಲವು ವರ್ಷಗಳಿಂದ ಪಾಂಫೋರ್ ಮುಸ್ಲಿಂ ಎಜಿಕೇಷನಲ್ ಇನ್ಸ್‍ಟಿಟ್ಯೂಟ್‍ನಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಕೆಲಸ ಮಾಡುತ್ತಿದ್ದರು. ಆದ್ರೆ ಇದ್ದಕ್ಕಿದ್ದಂತೆ ನವೆಂಬರ್ 30 ರಂದು ನಮ್ಮ ಮದುವೆ ನಡೆದ ದಿನವೇ ಶಾಲೆಯವರು ನಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆಂದು ದಂಪತಿ ಹೇಳಿದ್ದಾರೆ.

    ಈ ಬಗ್ಗೆ ಶಾಲೆಯ ಪ್ರಿನ್ಸಿಪಲ್ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಶಾಲೆಯ ಅಧ್ಯಕ್ಷರಾದ ಬಶೀರ್ ಮಸೂದಿ ಪ್ರತಿಕ್ರಿಯೆ ನೀಡಿದ್ದು, ಇವರಿಬ್ಬರೂ ಮದುವೆಗೆ ಮುಂಚೆ ರೊಮ್ಯಾಂಟಿಕ್ ರಿಲೇಷನ್‍ಶಿಪ್‍ನಲ್ಲಿ ಇದ್ದ ಕಾರಣ ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಿದ್ದಾರೆ. ಶಾಲೆಯಲ್ಲಿ 2 ಸಾವಿರ ಮಕ್ಕಳಿದ್ದು, 200 ಸಿಬ್ಬಂದಿ ಕೆಲಸ ಮಾಡುತ್ತಾರೆ. ಈ ಜೋಡಿಯ ರೊಮ್ಯಾನ್ಸ್‍ನಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮಸೂದಿ ಹೇಳಿದ್ದಾರೆ.

    ಆದ್ರೆ ದಂಪತಿ ತಮ್ಮ ಮದುವೆ ಹಿರಿಯರು ನಿಶ್ಚಯಿಸಿದ್ದು ಎಂದು ಹೇಳಿದ್ದಾರೆ. ನಮ್ಮದು ಅರೇಂಜ್ಡ್ ಮ್ಯಾರೇಜ್. ಕೆಲವು ತಿಂಗಳ ಹಿಂದೆಯಷ್ಟೇ ನಮ್ಮ ನಿಶ್ಚಿತಾರ್ಥವಾಗಿತ್ತು. ನಂತರ ಸುಮಾಯಾ ಶಾಲಾ ಸಿಬ್ಬಂದಿಗೆ ಪಾರ್ಟಿ ಕೊಟ್ಟಿದ್ದರಿಂದ ಈ ವಿಷಯ ಶಾಲೆಯ ಎಲ್ಲಾ ಆಡಳಿತ ಮಂಡಳಿವರಿಗೆ ಗೊತ್ತಿತ್ತು ಎಂದು ರಾತಿಖ್ ಭಟ್ ಹೇಳಿದ್ದಾರೆ. ಒಂದು ವೇಳೆ ನಮ್ಮ ಸಂಬಂಧದಿಂದ ಈ ರೀತಿ ಆಗುತ್ತಿದೆ ಎಂದಾದರೆ ಆ ಬಗ್ಗೆ ವಿವರಣೆ ನೀಡಲು ಶಾಲೆಯವರು ಯಾಕೆ ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಮದುವೆಗಾಗಿ ಒಂದು ತಿಂಗಳ ಹಿಂದೆಯೇ ರಜೆ ಕೋರಿದ್ದೆವು. ರಜೆಯನ್ನು ಮಂಜೂರು ಮಾಡಿದ್ದರು. ಒಂದು ವೇಳೆ ಅವರು ಹೇಳಿದಂತೆ ನಾವು ರೊಮ್ಯಾಂಟಿಕ್ ಸಂಬಂಧದಲ್ಲಿ ಇದ್ದಿದ್ದಾದ್ರೆ ಮದುವೆ ಬಗ್ಗೆ ಘೋಷಿಸಿದ ಮೇಲೆ ಅವರಿಗೆ ಇದು ಗೊತ್ತಾಯ್ತಾ? ಎಂದು ಹೇಳಿದ್ದಾರೆ. ಶಾಲೆಯವರು ನಮ್ಮ ಘನತೆಗೆ ಧಕ್ಕೆ ತಂದಿದ್ದಾರೆಂದು ದಂಪತಿ ಆರೋಪಿಸಿದ್ದಾರೆ. ನಾವು ಮದುವೆಯಾಗಿದ್ದೀವಿ. ಯಾವುದೇ ಪಾಪ ಅಥವಾ ಅಪರಾಧ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.