Tag: ಶಿಕ್ಷಕ

  • 66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

    66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

    ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದನೆಯ ಉಗುರುಗಳನ್ನ ಕತ್ತರಿಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲಾಗಿದ್ದಾರೆ.

    ಶ್ರೀಧರ್ ಚಿಲ್ಲಾಸ್ 82 ವರ್ಷದವರಾಗಿದ್ದು, ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರುಗಳನ್ನ ಬೆಳೆಸಿಕೊಂಡು ವಿಶ್ವ ದಾಖಲೆ(ಗಿನ್ನಿಸ್ ದಾಖಲೆ) ಮಾಡಿದ್ದರು. ಚಿಲ್ಲಾಸ್ 1985 ರಿಂದ ತಮ್ಮ ಉಗುರುಗಳನ್ನ ಬೆಳೆಸಲು ಆರಂಭಿಸಿದ ಇವರು ಸುಮಾರು 31 ಅಡಿ ಉದ್ದದಷ್ಟು ಉಗುರುಗಳನ್ನ ಬೆಳೆಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ.

    ಚಿಲ್ಲಾಸ್ ಒಂದು ಬಾರಿ ತಮ್ಮ ತರಗತಿಯಲ್ಲಿ ಆಕಸ್ಮಿಕವಾಗಿ ಶಿಕ್ಷಕರ ಉದ್ದನೆಯ ಉಗುರನ್ನ ಮುರಿದು ಬಿಟ್ಟಿದ್ದರು. ಆ ಕಾರಣ “ನೀನು ಏನು ಮಾಡಿದ್ದೀಯ ಎಂಬುದು ನಿನಗೆ ಗೊತ್ತಿಲ್ಲ ಅದರ ಮಹತ್ವ ಏನು ಎನ್ನುವುದು ನಿನಗೆ ಎಂದು ಅರ್ಥವಾಗುವುದಿಲ್ಲ ಎಂದು ತರಗತಿಯಲ್ಲೇ ಬೈದಿದ್ದರು. ಅಂದಿನಿಂದ “ನಾನು ಅದನ್ನು ಒಂದು ಸವಾಲಾಗಿ ತೆಗೆದುಕೊಂಡೆ” ಎಂದು ಚಿಲ್ಲಾಸ್ ತಿಳಿಸಿದ್ದಾರೆ. ಇದನ್ನೂ ಓದಿ: 66 ವರ್ಷಗಳ ಬಳಿಕ ವಿಶ್ವದ ಅತ್ಯಂತ ಉದ್ದನೆಯ ಉಗುರು ಕಟ್: ವಿಡಿಯೋ ನೋಡಿ

    ಅಂದಿನಿಂದ ಕೇವಲ ತಮ್ಮ ಎಡಗೈ ಬೆರಳುಗಳ ಉಗುರುಗಳನ್ನ ಬೆಳೆಸಲು ಆರಂಭಿಸಿದ ಚಿಲ್ಲಾಸ್ ಸುಮಾರು 66 ವರ್ಷಗಳವರೆಗೆ ಮುಂದುವರಿಸಿದರು. ಅವರ ಉಗುರು ಸುಮಾರು 909.6 ಸೆ.ಮಿ ಉದ್ದವಿದ್ದು ಅದರ ತೂಕದಿಂದಾಗಿ ಅವರ ಎಡಗೈ ಶಾಶ್ವತವಾಗಿ ಹ್ಯಾಂಡಿಕ್ಯಾಪ್ ಆಗಿದೆ. ಮುಚ್ಚಿದ ಸ್ಥಿತಿಯಲ್ಲಿದ್ದ ಕೈ ಬಿಚ್ಚಲು ಸಾಧ್ಯವಾಗದೇ ಬೆರಳುಗಳನ್ನ ಸಹ ತಳ್ಳಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

    ಚಿಲ್ಲರ್ ಅವರ ಈ ಅಸಾಮಾನ್ಯ ಆಯ್ಕೆಯು ಅವರ ಸಾಮಾನ್ಯ ಜೀವನದಲ್ಲಿ ಯಾವುದೇ ಅಡಚಣೆಯನ್ನ ಉಂಟು ಮಾಡಲಿಲ್ಲ. ಅವರ ಪತ್ನಿ ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳ ಜೊತೆ ಖುಷಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಚಿಲ್ಲರ್ ಅವರಿಗೆ ವಯಸ್ಸಾದಂತೆ ಅವರ ಉದ್ದನೆಯ ಉಗುರು ಅವರ ಸಾಮಾನ್ಯ ಜೀವನ ಶೈಲಿ ನಡೆಸಲು ಒಂದು ಸವಾಲಾಗಿ ಪರಿಣಮಿಸಿತು. ರಾತ್ರಿ ಮಲಗುವಾಗ ತುಂಬ ಕಷ್ಟವಾಗುತ್ತಿತ್ತು. ಹಾಗಾಗಿ ತಮ್ಮ ಉಗುರುಗಳನ್ನ ಕಟ್ ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಇದೀಗ ಶ್ರೀಧರ್ ಚಿಲ್ಲಾಸ್ ಅವರ ವಿಶ್ವದ ಅತೀ ಉದ್ದನೆಯ ಉಗುರುಗಳನ್ನ ಟೈಮ್ಸ್ ಸ್ಕ್ವೇರ್ ರಿಪ್ಲೇ ನ ಬ್ಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದರ ಹೊರತು ಪಡಿಸಿ ಪ್ರಪಂಚದಾದ್ಯಂತ ಸುಮಾರು 20 ಗ್ಯಾಲರೀಸ್ ಹಾಗೂ 500 ಕ್ಕು ಹೆಚ್ಚು ಕಲಾಕೃತಿಯನ್ನ ಈ ಮ್ಯೂಸಿಯಂ ಹೊಂದಿದೆ.

  • 1ನೇ ತರಗತಿಯ ಬಾಲಕ ಶಿಕ್ಷಕನ ಮುಂದೆ ಮಾತನಾಡಿದ ವಿಡಿಯೋ ವೈರಲ್- ನೀವು ನೋಡಿ

    1ನೇ ತರಗತಿಯ ಬಾಲಕ ಶಿಕ್ಷಕನ ಮುಂದೆ ಮಾತನಾಡಿದ ವಿಡಿಯೋ ವೈರಲ್- ನೀವು ನೋಡಿ

    ಬಾಗಲಕೋಟೆ: ಪುಟಾಣಿ ಬಾಲಕನೊಬ್ಬ ಶಿಕ್ಷಕನ ಮುಂದೆ ಮಾತನಾಡಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಬಸವೇಶ್ವರ ಖಾಸಗಿ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ಸ್ವರೂಪ್ ಎಂಬ ಬಾಲಕನ ವಿಡಿಯೋ ಇದಾಗಿದ್ದು, ಪುಸ್ತಕ ಹರಿದ ವಿಚಾರಕ್ಕೆ ಎಂ.ಎಸ್ ತೇಲಿ ಎಂಬ ಶಿಕ್ಷಕರು ಬೆದರಿಸಲು ಮುಂದಾಗಿದ್ದಾರೆ.

    ವಿಡಿಯೋದಲ್ಲೇನಿದೆ?:
    ಕೈಯಲ್ಲಿ ಸ್ಟೆಪ್ಲರ್ ಹಿಡಿದು ಪುಸ್ತಕ ಹರಿಯುತ್ತಿಯಾ? ಹಲ್ಲು ಕೀಳಬೇಕೇನು ಎಂದು ಶಿಕ್ಷಕ ಬೆದರಿಸಿದ್ದಾರೆ. ಈ ವೇಳೆ ಬಾಲಕ ಉತ್ತರ ಕರ್ನಾಟಕ ಶೈಲಿಯಲ್ಲಿ ತೊದಲುತ್ತಾ ಅಳು ಮಿಶ್ರಿತವಾಗಿ ಮಾತಾಡಿದ್ದು, ಎಲ್ಲರಿಗೂ ಇಷ್ಟವಾಗಿದೆ. ಇಲ್ರಿ ಇನ್ನು ಮೇಲೆ ಪುಸ್ತಕ ಹರಿಯಂಗಿಲ್ರಿ, ಚೆಂದಗಿ ಬರಿತಿನ್ರಿ, ಇನ್ನೊಮ್ಮೆ ಹರಿಯಂಗಿಲ್ರಿ ಅಂತ ಅಳುತ್ತಾ ಉತ್ತರಿಸಿದ್ದಾನೆ. ಆದರೂ ಶಿಕ್ಷಕರು ಇಲ್ಲ ನಿನ್ನ ಎರಡು ಹಲ್ಲು ಕೀಳುತ್ತೇನೆ ಎಂದು ಬೆದರಿಸಿದ್ದಾರೆ.

    ಇದೇ ವೇಳೆ ನಿನ್ನ ಹೆಸರೇನು ಎಂದು ಕೇಳಿದಾಗ ಸ್ವರೂಪ್, ತಂದೆ ಹೆಸರು ಉಮೇಶ್, ಮನೆ ಹೆಸರು ಮೊಸಳಿ ಎಂದು ಅಳುತ್ತಲೇ ಉತ್ತರಿಸಿದ್ದಾನೆ. ಊರು ಬನಹಟ್ಟಿ, ತಾಲೂಕು ಜಮಖಂಡಿ, ಜಿಲ್ಲೆ ಬಾಗಲಕೋಟೆ ಅಂತಾನೂ ಹೇಳಿದ್ದಾನೆ. ಆದರೆ ರಾಜ್ಯ ಅಂದಾಗ ಕರ್ನಾಟಕ ಅನ್ನುವ ಬದಲು ಕರ್ನಾಟಕ ಮುಖ್ಯಮಂತ್ರಿ ಎಂದು ತಗಲಾಕಿಕೊಂಡಿದ್ದಾನೆ.

    ಈ ಸಂದರ್ಭದಲ್ಲಿ ಶಿಕ್ಷಕರು ಕರ್ನಾಟಕ ಮುಖ್ಯಮಂತ್ರಿ ಯಾರು ಅಂದಾಗ ಬಾಲಕ ಸಿದ್ದರಾಮಯ್ಯ ಎಂದು ಉತ್ತರಿಸಿದ್ದಾನೆ. ಆಗ ಶಿಕ್ಷಕರು ಸಿದ್ದರಾಮಯ್ಯ ಮನೆಗೆ ಹೋಗಿದ್ದಾನೆ ಅಂತಾರೆ. ಅಲ್ಲಂದ್ರ ಮೋದಿ ಅಂತಾನೆ ಬಾಲಕ. ಶಿಕ್ಷಕರು ನರೇಂದ್ರ ಮೋದಿ ಭಾರತದ ಪ್ರಧಾನಿ ಅಂತಾರೆ. ಆದರೂ ಬಾಲಕ ಕರ್ನಾಟಕ ಮುಖ್ಯಮಂತ್ರಿ ಮೋದಿ ಎನ್ನುತ್ತಾನೆ. ಬಳಿಕ ನನಗೆ ಗೊತ್ತಿಲ್ರಿ, ಸಿದ್ದರಾಮಯ್ಯ ಗೊತ್ತಿಲ್ಲ ಎಂದಿದ್ದಾನೆ.

    ಶಿಕ್ಷಕರು ಯಾಕೆ ಸಿದ್ದರಾಮಯ್ಯ ನಿಮ್ಮ ಮನೆಗೆ ಬಂದಿಲ್ಲೇನು ಅಂತ ಕೇಳಿದಾಗ ಬಾಲಕ ಹೇಳಿದ ಉತ್ತರ ಸಾಕಷ್ಟು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಸಿದ್ದರಾಮಯ್ಯ ನಮ್ಮ ಮನೆಗೆ ಬಂದಿದ್ದ, ಬಂದು ಊಟ ತಿಂದು ಹೋಗ್ಯಾನರಿ. ಮೋದಿನೂ ನಮ್ಮ ಮನೆಗೆ ಬಂದಿದ್ದರು. ಮೊನ್ನೆ ಜಾತ್ರಿ ಇದ್ದಾಗ ನಮ್ಮ ಮನಿಗೆ ಬಂದಿದ್ದರು. ಇಷ್ಟೇ ಅಲ್ಲದೆ ಮೊನ್ನೆ ನಾನು ಸಿದ್ದರಾಮಯ್ಯ ಮತ್ತು ಮೋದಿ ಮನೆಗೆ ಹೋಗಿದ್ದೆ. ನನಗೆ ಕೇಕ್ ಅನ್ನ(ಮಮ್ಮು) ಸಾರು, ರೊಟ್ಟಿ ಎಲ್ಲಾ ಕೊಟ್ರು ಅಂತಾನೆ. ನೀ ಏನು ಕೊಟ್ಟೆ ಅಂದಾಗ ರೊಟ್ಟಿ ಸಾರು ಮಮ್ಮು(ಅನ್ನ) ಕೊಟ್ಟೆ ಎಂದಿದ್ದಾನೆ. ನಂತರ ಇನ್ನೊಮ್ಮೆ ಹುಡುಗರನ್ನು ಬಡಿಯಂಗಿಲ್ಲ, ಇನ್ನೊಮ್ಮೆ ತಪ್ಪು ಮಾಡಂಗಿಲ್ಲ ಎಂದು ಹೇಳಿದ್ದಾನೆ.

    ಬಾಲಕನ ಈ ವಿಡಿಯೋ ಈಗ ಎಲ್ಲರ ಮೊಬೈಲ್ ನಲ್ಲಿ ಹರಿದಾಡುತ್ತಿದೆ. ಆತನ ತೊದಲುನುಡಿ ಉತ್ತರ ಕರ್ನಾಟಕ ಶೈಲಿ ಮಾತುಗಳು ಸಾಕಷ್ಟು ಇಷ್ಟವಾಗಿದ್ದು, ನೋಡುಗರು ನಕ್ಕು ನಲಿಯುವಂತೆ ಮಾಡಿವೆ. ಆದರೆ ಕೆಲವರು ಶಿಕ್ಷಕನ ವರ್ತನೆ ಬಗ್ಗೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಬಾಲಕನಿಗೆ ಸ್ಟೆಪ್ಲರ್ ಹಿಡಿದು ಬೆದರಿಸಿದ್ದು, ಹಲ್ಲು ಕೀಳುತ್ತೇನೆ ಎಂದು ಗದರಿಸೋದು ಸರಿಯಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಬಾಲಕನ ವಿಡಿಯೋ ಮಾತ್ರ ಈಗ ಸಾಕಷ್ಟು ವೈರಲ್ ಆಗಿ ಮನರಂಜನೆ ನೀಡುತ್ತಿರೋದಂತು ಸತ್ಯ.

    https://www.youtube.com/watch?v=jltWstnr1nk

  • ಶಿಕ್ಷಕನ ಪರ ನಿಂತು ಪ್ರಿನ್ಸಿಪಾಲರನ್ನು ತರಾಟೆಗೆ ತೆಗೆದುಕೊಂಡ ಪೋಷಕರು!

    ಶಿಕ್ಷಕನ ಪರ ನಿಂತು ಪ್ರಿನ್ಸಿಪಾಲರನ್ನು ತರಾಟೆಗೆ ತೆಗೆದುಕೊಂಡ ಪೋಷಕರು!

    ಕೊಪ್ಪಳ: ಶಾಲೆಯಲ್ಲಿ ಗುಂಪುಗಾರಿಕೆ ನಡೆಸುತ್ತಿರುವ ಪ್ರಿನ್ಸಿಪಾಲರು ಮತ್ತು ಸಿಬ್ಬಂದಿಯನ್ನು ಪೋಷಕರು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ನಡೆದಿದೆ.

    ತಳಕಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕರ ನಡುವೆ ಗುಂಪುಗಾರಿಕೆಗೆ ರೋಸಿ ಹೋದ ಪೋಷಕರು ಇಂದು ಶಾಲೆಗೆ ಮುತ್ತಿಗೆ ಹಾಕಿದ್ದಾರೆ.

    ಶಾಲೆಯ ಇಂಗ್ಲೀಷ್ ಶಿಕ್ಷಕ ಚಕ್ರಪಾಣಿಯವರಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಶಾಲೆಯ ಪ್ರಿನ್ಸಿಪಾಲರು ಹಾಗೂ ಸಿಬ್ಬಂದಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಾನಸಿಕವಾಗಿ ನೊಂದ ಶಿಕ್ಷಕ ಚಕ್ರಪಾಣಿ ನೆರವಿಗೆ ಪೋಷಕರು ನಿಂತಿದ್ದು, ಶಾಲೆಯಲ್ಲಿ ಗುಂಪುಗಾರಿಕೆಗೆ ಬೆಂಬಲಿಸುತ್ತಿರುವ ಶಾಲಾ ಪ್ರಿನ್ಸಿಪಾಲರನ್ನು ತೆಗೆದು ಹಾಕುವಂತೆ ಪೋಷಕರು ಆಗ್ರಹಿಸಿದರು. ಗುಂಪುಗಾರಿಕೆ ನಡೆಸುತ್ತಿದ್ದ ಶಾಲಾ ಸಿಬ್ಬಂದಿಗಳ ವಿರುದ್ಧವು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಸಿಬ್ಬಂದಿಗಳ ವರ್ತನೆಯಿಂದ ರೋಸಿಹೋದ ಶಿಕ್ಷಕ ಚಕ್ರಪಾಣಿ ಶಾಲೆಯಲ್ಲೇ ಕಣ್ಣೀರು ಹಾಕಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿಗಳು ಸಹ ಕಣ್ಣೀರು ಹಾಕಿದರು.

  • ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಭುವನೇಶ್ವರ್: ಖಾಸಗಿ ಕೋಚಿಂಗ್ ಕ್ಲಾಸಿನ ಇಂಗ್ಲಿಷ್ ಶಿಕ್ಷಕರೊಬ್ಬರು ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಅವರಿಗೆ ಬೂಟ್ ಹಾರ ಹಾಕಿ ಅವಮಾನ ಮಾಡಿದ ಘಟನೆ ಓಡಿಶಾದ ನಯಾಗರ್ ಜಿಲ್ಲೆಯಲ್ಲಿ ನಡೆದಿದೆ.

    ಮಾಯಾಧರ್ ಮೋಹಪಾತ್ರ ಎಂಬವರು ಖಾಸಗಿ ಕೋಚಿಂಗ್ ಸಂಸ್ಥೆ ಸತ್ಯಸಾಯಿ ಟ್ಯುಟೋರಿಯಲ್ ನಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋಚಿಂಗ್ ಕ್ಲಾಸಿನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ಹಾಗಾಗಿ ತಮ್ಮ ತಿಂಗಳ ಸಂಬಳ ಕೊಡಿ ಎಂದು ಕೇಳಿದ್ದಕ್ಕೆ ಸಿಟ್ಟಾದ ಮಾಲೀಕ ತಪನ್ ಪಾತ್ರ ಶಿಕ್ಷಕ ಮಾಯಾಧರ್ ರವರಿಗೆ ಬೂಟಿನ ಹಾರ ಹಾಕಿ ಅವಮಾನ ಮಾಡಿದ್ದಾರೆ.

    ಮಹಾಪಾತ್ರ ರವರು ಹೇಳುವಂತೆ ಕೋಚಿಂಗ್ ಕ್ಲಾಸ್ ನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ತಮ್ಮ ಸಂಬಳವನ್ನು ನೀಡುವಂತೆ ಪದೇ ಪದೇ ಮಾಲೀಕನಿಗೆ ಕೇಳಿಕೊಂಡಿದ್ದರೂ, ಇದಕ್ಕೆ ತಪನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಮಾಲೀಕ ತಪನ್ ಶಿಕ್ಷಕ ಮಾಯಾಧರ್ ರವರಿಗೆ ನೌಕರಿಯನ್ನೇ ಬಿಟ್ಟು ಹೋಗುವಂತೆ ಕೇಳಿದ್ದಾರೆ. ಅಲ್ಲದೇ ಕೋಪಗೊಂಡ ತಪನ್ ತಮ್ಮ ಇಬ್ಬರು ಸಹಾಯಕರೊಂದಿಗೆ ಶಿಕ್ಷಕ ಮಾಯಾಧರ್ ರವರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿಹಾಕಿದ್ದಾರೆ. ನಿಷ್ಕಾರುಣವಾಗಿ ಶಿಕ್ಷಕ ಮಹಾಪಾತ್ರ ರನ್ನು ಥಳಿಸಿ, ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ.

  • ಅಮ್ಮನ ಕಣ್ಣೀರೊರೆಸುವ ಸ್ಪೆಷಲ್ ಗಿಫ್ಟ್ ಕೊಟ್ಟ ಉಡುಪಿಯ ನಿಟ್ಟೂರು ಶಾಲೆ!

    ಅಮ್ಮನ ಕಣ್ಣೀರೊರೆಸುವ ಸ್ಪೆಷಲ್ ಗಿಫ್ಟ್ ಕೊಟ್ಟ ಉಡುಪಿಯ ನಿಟ್ಟೂರು ಶಾಲೆ!

    ಉಡುಪಿ: ಶಾಲೆಯಲ್ಲಿ ಪುಸ್ತಕ, ಯೂನಿಫಾರ್ಮ್, ಶೂ, ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಕೆಲ ಶಾಲೆಗಳಲ್ಲಿ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಆದರೆ ಉಡುಪಿಯ ನಿಟ್ಟೂರಲ್ಲೊಂದು ಶಾಲೆಯಿದೆ. ಶಾಲೆ ಆರಂಭವಾದ ಒಂದು ತಿಂಗಳ ಒಳಗೆ ಕಡು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪೆಷಲ್ ಗಿಫ್ಟೊಂದನ್ನು ಶಾಲೆ ಕೊಟ್ಟಿದೆ. ಇದರ ಹಿಂದೆ ನಮ್ಮ ಪಬ್ಲಿಕ್ ಹೀರೋ ಇದ್ದಾರೆ ಎಂಬುದು ಮತ್ತೊಂದು ವಿಶೇಷ.

    ಶಾಲೆಯಲ್ಲಿ ಮಕ್ಕಳು ಬ್ಯಾಗ್ ಹೊತ್ತು ಮನೆಗೆ ಹೋಗೋದನ್ನು ನೋಡಿರುತ್ತೇವೆ. ಬ್ಯಾಗ್ ಜೊತೆ ಬ್ಯಾಟು- ಬಾಲು ತೆಗೆದುಕೊಂಡು ಹೋಗೋದನ್ನು ನೋಡಿದ್ದೇವೆ. ಆದರೆ ಉಡುಪಿ ಜಿಲ್ಲೆಯ ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಮನೆಗೆ ಹೋಗುವಾಗ ಎಲ್ಪಿಜಿ ಸಿಲಿಂಡರ್, ಗ್ಯಾಸ್ ಸ್ಟವ್, ರೆಗ್ಯೂಲೇಟರ್ ಹಿಡಿದುಕೊಂಡು ಖುಷಿ ಖುಷಿಯಿಂದ ಹೊರಟಿದ್ದರು. ವಿಷಯ ಏನಪ್ಪಾ ಅಂದರೆ ನಿಟ್ಟೂರು ಪ್ರೌಢಶಾಲೆಯ ಕಡುಬಡವ ವಿದ್ಯಾರ್ಥಿಗಳಿಗೆ ಸ್ಪೆಷಲ್ ಗಿಫ್ಟನ್ನು ಈ ಶಾಲೆ ನೀಡಿದೆ. ನಾಲ್ಕಾರು ದಾನಿಗಳನ್ನು, ಹಳೇ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಿ, ಧನ ಸಹಾಯ ಪಡೆದು 28 ವಿದ್ಯಾರ್ಥಿಗಳ ಮನೆಗೆ ಗ್ಯಾಸ್ ಸಿಲಿಂಡರ್- ರೆಗ್ಯೂಲೇಟರ್, ಸ್ಟವ್ ಅನ್ನು ಶಾಲೆಯ ಶಿಕ್ಷಕರು ಕೊಟ್ಟಿದ್ದಾರೆ. ಈ ಸ್ಪೆಷಲ್ ಗಿಫ್ಟಿನಿಂದ ಮಕ್ಕಳು ಖುಷಿಯಾಗಿದ್ದಾರೆ.

    ನಾವು ಗುಡಿಸಲಿನಲ್ಲಿ ಜೀವನ ಮಾಡುವುದು. ಒಂದೇ ಕೋಣೆಯೊಳಗೆ ಅಡುಗೆ, ಊಟ, ನಿದ್ದೆ ಮಾಡಬೇಕು. ಬೇಸಿಗೆಯಲ್ಲಿ ಹೊರಗಡೆ ಅಡುಗೆ ಮಾಡುತ್ತಿದ್ದೆವು. ಮಳೆಗಾಲದಲ್ಲಿ ಕಟ್ಟಿಗೆ ಹೊಂದಿಸುವುದು ಕಷ್ಟ. ಈಗ ಶಾಲೆಯಲ್ಲೇ ಗ್ಯಾಸ್ ಕೊಟ್ಟಿದ್ದಾರೆ. ಇದರಿಂದ ನಮ್ಮ ಅರ್ಧ ಕಷ್ಟ ಕಮ್ಮಿಯಾಗುತ್ತದೆ. ಮುರಳಿ ಸರ್ ಮತ್ತು ದಾನಿಗಳಿಗೆ ಥ್ಯಾಂಕ್ಸ್ ಅಂತ ವಿದ್ಯಾರ್ಥಿನಿ ರಶ್ಮೀ ಹೇಳಿದ್ದಾಳೆ.

    ಉಡುಪಿಯ ಪಬ್ಲಿಕ್ ಹೀರೋ ಮುರಲಿ ಕಡೆಕಾರು ಈ ಯೋಜನೆಯ ಹಿಂದಿರುವ ವ್ಯಕ್ತಿ. ಎಲ್ಲಾ ಮನೆಗಳನ್ನು ಸಂಪರ್ಕ ಮಾಡಿ, ವಿಚಾರಿಸಿ- ಗ್ಯಾಸ್ ಉಪಯೋಗಿಸುವುದನ್ನು ಕಲಿಸಿ ಇದೀಗ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ವನ್ನು ಕೊಟ್ಟಿದ್ದಾರೆ.

    ನಾಲ್ಕು ಗೋಡೆಯೊಳಗೆ ಮಕ್ಕಳಿಗೆ ಪಾಠ ಹೇಳುವುದು ಮಾತ್ರ ಶಿಕ್ಷಕನ ಕೆಲಸ ಅಲ್ಲ. ತಮ್ಮ ವಿದ್ಯಾರ್ಥಿಗಳ ಕುಟುಂಬದ ಕಷ್ಟಕ್ಕೆ ಸ್ಪಂದಿಸುವುದೂ ಶಿಕ್ಷಕರಾದ ನಮ್ಮ ಕರ್ತವ್ಯ. ಸಂಚಯಿಕ ಬ್ಯಾಂಕ್, ಬಿಸಿಯೂಟ, ವಾಹನ ವ್ಯವಸ್ಥೆ ಹೀಗೆ ಎಲ್ಲಾ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಿದ್ದೇವೆ. ಮಕ್ಕಳ ಕುಟುಂಬಸ್ಥರು ಅನಾರೋಗ್ಯ ಪೀಡಿತರಾದರೂ ಅವರಿಗೆ ಚಿಕಿತ್ಸೆಯ ವೆಚ್ಚ ಶಾಲೆ ಭರಿಸುತ್ತದೆ. ಒಂದು ರುಪಾಯಿಯನ್ನು ಪಡೆಯದೆ ಮಕ್ಕಳ ಶಿಕ್ಷಣ ಕೊಡುತ್ತಿದ್ದೇವೆ ಎಂದು ಮುರಳಿ ಕಡೆಕಾರು ಹೇಳಿದರು.

    ಶಾಲೆಯಲ್ಲಿರುವ 171 ವಿದ್ಯಾರ್ಥಿಗಳ ಮನೆಯಲ್ಲೂ ಅಡುಗೆ ಮಾಡುವಾಗ ಅಮ್ಮಂದಿರು ಕಣ್ಣೀರು ಇಡುವುದನ್ನು ನಿಟ್ಟೂರು ಶಾಲೆ ತಪ್ಪಿಸಿದೆ. ಎಲ್ಲಾ ಸರಕಾರಿ ಶಾಲೆಗಳಲ್ಲೂ ಇಂತಹ ಕೆಲಸ ಆದರತೆ ಬಡವರ ಕಷ್ಟ ದೂರವಾಗುತ್ತದೆ. ಶಿಕ್ಷಕರು ಇಂತಹ ಸಾರ್ಥಕ್ಯ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

  • ಮಗನಿಗಿಟ್ಟ ಹಣದಿಂದ ದತ್ತು ಮಕ್ಕಳಿಗೆ ಭವಿಷ್ಯ- ನೂರಕ್ಕೂ ಹೆಚ್ಚು ಮಂದಿಗೆ ದಾರಿದೀಪವಾದ್ರು ಚಿಕ್ಕೋಡಿಯ ದಂಪತಿ

    ಮಗನಿಗಿಟ್ಟ ಹಣದಿಂದ ದತ್ತು ಮಕ್ಕಳಿಗೆ ಭವಿಷ್ಯ- ನೂರಕ್ಕೂ ಹೆಚ್ಚು ಮಂದಿಗೆ ದಾರಿದೀಪವಾದ್ರು ಚಿಕ್ಕೋಡಿಯ ದಂಪತಿ

    ಚಿಕ್ಕೋಡಿ: ಈ ಕಾಲದಲ್ಲಿ ಹೆತ್ತ ಮಕ್ಕಳನ್ನ ಸಾಕೋಕೇ ಪೋಷಕರು ಒದ್ದಾಡ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಿಕ್ಷಕ ದಂಪತಿ, ಶೈಕ್ಷಣಿಕವಾಗಿ ದತ್ತು ಪಡೆದ ಮಕ್ಕಳಿಗೆ ಉನ್ನತ ವ್ಯಾಸಂಗದವರೆಗೆ ಸಹಾಯ ಮಾಡ್ತಿದ್ದಾರೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಡಿ.ಎಸ್.ನಾಡಗೆ ಅನುದಾನಿತ ಪ್ರೌಢ ಶಾಲೆಯಲ್ಲಿ ಶಿಕ್ಷಕರಾದ ಶಕುಂತಲಾ ಮತ್ತು ಜನವಾಡೆ ದಂಪತಿ, ಮಗನ ವಿದ್ಯಾಭ್ಯಾಸಕ್ಕೆ 5ಲಕ್ಷ ಕೂಡಿಟ್ಟಿದ್ದರು. ಆದ್ರೆ, ಮಗ 5ನೇ ತರಗತಿಯಲ್ಲಿ ಪರೀಕ್ಷೆ ಬರೆದು ನವೋದಯ ಶಾಲೆಗೆ ಸೇರಿದನು. ನಂತರ ಆ 5 ಲಕ್ಷವನ್ನ ಇತರೆ ಮಕ್ಕಳನ್ನ ಶೈಕ್ಷಣಿಕವಾಗಿ ದತ್ತು ಪಡೆದು ಸಹಾಯಕ್ಕೆ ವಿನಿಯೋಗಿಸ್ತಿದ್ದಾರೆ. ಕಳೆದ 10 ವರ್ಷಗಳಿಂದ ಈ ಕಾಯಕವನ್ನ ಮುಂದುವರಿಸಿದ್ದಾರೆ.

    ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಪಾಲಕರಿಗೆ ಹೇಳಿ ಸಮವಸ್ತ್ರ, ಪಠ್ಯ ಪುಸ್ತಕ, ಶಾಲೆಯ ಫೀಸ್ ಸೇರಿದಂತೆ ವಿದ್ಯಾರ್ಥಿಯ 3 ವರ್ಷ ವಿದ್ಯಾಭ್ಯಾಸಕ್ಕೆ ತಗಲುವ ಖರ್ಚನ್ನು ಭರಿಸುತ್ತಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಬಡ ಮಕ್ಕಳಿಗೆ ಬದುಕು ರೂಪಿಸಿದ್ದಾರೆ. ಇವರಿಂದ ಸಹಾಯ ಪಡೆದವರು ಈಗ ವಕೀಲರು, ವೈದ್ಯರು ಹಾಗೂ ಎಂಜಿನಿಯರ್‍ಳಗಾಗಿದ್ದಾರೆ.

    ತಮ್ಮ ಮಗನ ಉಜ್ವಲ ಭವಿಷ್ಯಕ್ಕಾಗಿ ಕೂಡಿಟ್ಟ ಹಣದಿಂದ ಇದೀಗ ನೂರಾರು ಮಕ್ಕಳಿಗೆ ದಾರಿದೀಪವಾಗಿದ್ದಾರೆ.

    https://www.youtube.com/watch?v=S0ftceLWfvc

  • ಸರ್, ಪ್ಲೀಸ್ ನಮ್ಮನ್ನ ಬಿಟ್ಟು ಹೋಗ್ಬೇಡಿ- ಮಕ್ಕಳಿಂದ ಶಿಕ್ಷಕನಿಗೆ ಮುತ್ತಿಗೆ

    ಸರ್, ಪ್ಲೀಸ್ ನಮ್ಮನ್ನ ಬಿಟ್ಟು ಹೋಗ್ಬೇಡಿ- ಮಕ್ಕಳಿಂದ ಶಿಕ್ಷಕನಿಗೆ ಮುತ್ತಿಗೆ

    ಚೆನ್ನೈ: ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ವರ್ಗಾವಣೆಗೊಂಡು ಬೇರೆ ಶಾಲೆಗೆ ಹೋಗುವಾಗ ವಿದ್ಯಾರ್ಥಿಗಳು ಸರ್, ಪ್ಲೀಸ್ ನಮ್ಮನ್ನು ಬಿಟ್ಟು ಹೋಗ್ಬೇಡಿ ಅಂತಾ ಮುತ್ತಿಗೆ ಹಾಕಿದ್ದಾರೆ.

    ತಮಿಳುನಾಡು ರಾಜ್ಯದ ತಿರುವಳ್ಳರ್ ಇಲಾಖೆಯ ವೇಲಿಯಾ ಗ್ರಾಮದ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ.ಭಗವಾನ್ (28) ಅವರಿಗೆ ಬೇರೆ ಊರಿಗೆ ವರ್ಗಾವಣೆ ಆಗಿತ್ತು. ಬುಧವಾರ ವೇಲಿಯಾ ಗ್ರಾಮದ ಶಾಲೆಯಲ್ಲಿ ಕೊನೆಯ ದಿನದ ಡ್ಯುಟಿ ಮುಗಿಸಿ ವರ್ಗಾವಣೆ ಪತ್ರ ಪಡೆದು ಹೋಗುತ್ತಿದ್ದರು.

    ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯಾಗುತ್ತಿರುವ ಸುದ್ದಿ ಕೇಳಿದ ಮಕ್ಕಳು ನಮ್ಮನ್ನು ಬಿಟ್ಟು ಹೋಗಬೇಡಿ ಅಂತಾ ಭಗವಾನ್ ಅವರಿಗೆ ಮುತ್ತಿಗೆ ಹಾಕಿ ಕಣ್ಣೀರು ಹಾಕಿದ್ದಾರೆ. ಭಗವಾನ್ ಶಾಲೆಯಲ್ಲಿ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಮಕ್ಕಳ ವಿರೋಧದ ಕಾರಣ ಭಗವಾನ್ ಅವರ ವರ್ಗಾವಣೆಯ ಆದೇಶವನ್ನು 10 ದಿನಗಳವರೆಗೆ ಮುಖ್ಯಶಿಕ್ಷಕ ಅರವಿಂದನ್ ತಡೆಹಿಡಿದಿದ್ದಾರೆ.

    ಬುಧವಾರ ನಾನು 10 ಗಂಟೆಗೆ ಹೊಸ ಶಾಲೆಗೆ ಹಾಜರಾಗಬೇಕಿತ್ತು. ಹೋಗುವ ವೇಳೆ ಬಂದ ಮಕ್ಕಳು ನನಗೆ ಮುತ್ತಿಗೆ ಹಾಕಿ ತಡೆದಿದಲ್ಲದೇ, ನನ್ನ ಬೈಕ್ ಕೀ ಮತ್ತು ಬ್ಯಾಗ್ ಕಸಿದುಕೊಂಡರು. ಮಕ್ಕಳನ್ನು ನೋಡಿದಾಗ ನನ್ನ ಸೇವೆಗೆ ಹಣಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಪಡೆದಿದ್ದೇನೆ ಎಂಬುವುದು ಮನವರಿಕೆ ಆಯಿತು ಎಂದು ಶಿಕ್ಷಕ ಭಗವಾನ್ ಒಂದು ಕ್ಷಣ ಭಾವುಕರಾದ್ರು.

    ಭಗವಾನ್ ಶಿಕ್ಷಕರೇ ಶಾಲೆಯಲ್ಲಿ ಇಂಗ್ಲಿಷ್ ಬೋಧನೆ ಮಾಡಬೇಕೆಂದು ಮಕ್ಕಳು ಹಾಗು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಭಗವಾನ್ ತಮ್ಮ ಸರಳ ವ್ಯಕ್ತಿತ್ವದಿಂದ ಮಕ್ಕಳಿಗೆ ತುಂಬಾ ಹತ್ತಿರವಾಗಿದ್ದರು. ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಕ್ಕಳಿಗೆ ಉತ್ಸಾಹದಿಂದ ಪಾಠ ಮಾಡುತ್ತಿದ್ದರು. ಮಕ್ಕಳ ಮನವಿಯ ಮೇರೆಗೆ 10 ದಿನಗಳವರೆಗೆ ಭಗವಾನ್ ಅವರ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ ಎಂದು ಮುಖ್ಯ ಶಿಕ್ಷಕ ಅರವಿಂದನ್ ಸ್ಪಷ್ಟಪಡಿಸಿದ್ದಾರೆ.

  • ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕ ಸಾವು!

    ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕ ಸಾವು!

    ಬಾಗಲಕೋಟೆ: ಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ.

    ವಿಶ್ವನಾಥ್ ಬಿರಾದಾರ(50) ಮೃತ ದುರ್ದೈವಿ ಶಿಕ್ಷಕ. ತೇರದಾಳ ಪಟ್ಟಣದ ಜೆವಿ ಮಂಡಲ ಸಂಸ್ಥೆಯ ಗುರುಕುಲ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವನಾಥ್ ಅವರು ಭಾಗಿಯಾಗಿದ್ದರು. ಯೋಗ ಮಾಡುತ್ತಿದ್ದ ವೇಳೆಯೇ ವಿಶ್ವನಾಥ್ ಅವರಿಗೆ ಹೃದಯಾಘಾತವಾಗಿದೆ.

    ವಿಶ್ವನಾಥ್ ಎಸ್.ಜೆ. ಹೆಣ್ಣು ಮಕ್ಕಳ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿದ್ದು, ಮೊದಲಿಂದಲೂ ಯೋಗ ಅಭ್ಯಾಸ ಮಾಡುತ್ತಿದ್ದರು. ಸದ್ಯ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿದ ಅಮಲಿನಲ್ಲಿ ರಾಕ್ಷಸನಂತೆ ವರ್ತಿಸಿದ ಶಿಕ್ಷಕ

    ಕುಡಿದ ಅಮಲಿನಲ್ಲಿ ರಾಕ್ಷಸನಂತೆ ವರ್ತಿಸಿದ ಶಿಕ್ಷಕ

    ವಿಜಯಪುರ: ಜಿಲ್ಲೆಯ ಸಿಂಧಗಿ ತಾಲೂಕಿನ ಮೊರಟಗಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನೊಬ್ಬ ಕುಡಿದ ಅಮಲಿನಲ್ಲಿ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    4ನೇ ತರಗತಿಯ ನಿಂಗಪ್ಪ ಹಲ್ಲೆಗೊಳಗಾದ ವಿದ್ಯಾರ್ಥಿ. ಸಹ ಶಿಕ್ಷಕ ನಗನೂರ ಹಲ್ಲೆ ನಡೆಸಿದ ಆರೋಪಿ. ಶಿಕ್ಷಕ ಶಾಲೆಗೆ ಪಾನಮತ್ತನಾಗಿ ಆಗಮಿಸಿದ್ದು, ನಶೆಯಲ್ಲಿ ನಿಂಗಪ್ಪನಿಗೆ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ನಿಂಗಪ್ಪನ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ವಿದ್ಯಾರ್ಥಿ ನೆಲದ ಮೇಲೆ ಬಿದ್ದು ಹೊರಳಾಡಿದ್ದಾನೆ. ವಿದ್ಯಾರ್ಥಿ ನೋವಿನಿಂದ ಅಳುತ್ತಿದ್ದನ್ನು ನೋಡಿ ಗಾಬರಿಯಾದ ಶಿಕ್ಷಕ ಪರಾರಿಯಾಗಿದ್ದಾನೆ. ಇದನ್ನು ಓದಿ: ಸ್ಕೇಲ್‍ನಿಂದ ಹೊಡೆದ ಟೀಚರ್- ವಿದ್ಯಾರ್ಥಿ ಕಣ್ಣಿನ ದೃಷ್ಟಿಯೇ ಹೋಯ್ತು!

    ಸದ್ಯ ನಿಂಗಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಿಕ್ಷಕನ ಅಮಾನವೀಯ ಕೃತ್ಯಕ್ಕೆ ನಿಂಗಪ್ಪನ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಧಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಸ್ಕೇಲ್‍ನಿಂದ ಹೊಡೆದ ಟೀಚರ್- ವಿದ್ಯಾರ್ಥಿ ಕಣ್ಣಿನ ದೃಷ್ಟಿಯೇ ಹೋಯ್ತು!

    ಸ್ಕೇಲ್‍ನಿಂದ ಹೊಡೆದ ಟೀಚರ್- ವಿದ್ಯಾರ್ಥಿ ಕಣ್ಣಿನ ದೃಷ್ಟಿಯೇ ಹೋಯ್ತು!

    ಚಾಮರಾಜನಗರ: ಮುಖ್ಯ ಶಿಕ್ಷಕ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ನಡೆದಿರುವುದಾಗಿ ವಿದ್ಯಾರ್ಥಿಯ ಪೋಷಕರು ಆರೋಪಿಸುತ್ತಿದ್ದಾರೆ.

    ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್, ಗಿರಿಮಲ್ಲೇಶ್ ಎಂಬ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದಿದ್ದಾರೆ. ಹೊಡೆಯುವ ವೇಳೆ ವಿದ್ಯಾರ್ಥಿಯ ಎಡಗಣ್ಣಿಗೆ ತಾಗಿ ವಿದ್ಯಾರ್ಥಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಕಳೆದ ಜನವರಿಯಲ್ಲಿ ಶಾಲೆಯ ಸಮಯದಲ್ಲಿ ಗಿರಿಮಲ್ಲೇಶ್ ಗಲಾಟೆ ಮಾಡುತ್ತಿದ್ದ ಎಂದು ಶಿಕ್ಷಕ ಸ್ಕೇಲ್ ಮೂಲಕ ಹೊಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿ ಕಣ್ಣಿಗೆ ಸ್ಕೇಲ್ ಬಿದ್ದ ಕಾರಣ ವಿದ್ಯಾರ್ಥಿಯ ಕಣ್ಣಿಗೆ ಪೆಟ್ಟು ಬಿದ್ದಿದೆ. ಇದಾದ ನಂತರ ವಿದ್ಯಾರ್ಥಿ ತನಗೆ ಯಾವುದೇ ನೋವಾಗಿಲ್ಲ ಎಂದು ತಿಳಿದುಕೊಂಡಿದ್ದಾನೆ.

    ಇದೀಗ ವಿದ್ಯಾರ್ಥಿಗೆ ಕಣ್ಣಿನ ನೋವು ಕಾಡುತ್ತಿದ್ದ ಕಾರಣ ತಂದೆ ಸೋಮೇಶ್ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ ಹೀಗಾಗಿ ಇತನ ದೃಷ್ಟಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಗಿರಿಮಲ್ಲೇಶ್‍ನನ್ನು ಪೋಷಕರು ವಿಚಾರಿಸಿದಾಗ ಐದು ತಿಂಗಳ ಹಿಂದೆ ಶಾಲೆಯಲ್ಲಿ ಹೀಗೆ ಆಗಿದೆ ಎಂದು ಹೇಳಿದ್ದಾನೆ.

    ಈ ಬಗ್ಗೆ ಗಿರಿಮಲ್ಲೇಶ್ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದ್ದನ್ನು ಒಪ್ಪಿಕೊಳ್ಳದ ಶಾಲೆ ಆಡಳಿತ ಮಂಡಳಿ ಮುಖ್ಯ ಶಿಕ್ಷಕ ಯುಸೇಫ್‍ರನ್ನು 10 ದಿನಗಳ ರಜೆ ಮೇಲೆ ಕಳುಹಿಸಲಾಗಿದೆ. ಸದ್ಯ ಗಿರಿಮಲ್ಲೇಶ್ ತಮಿಳುನಾಡಿನ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.