Tag: ಶಿಕ್ಷಕರ ವರ್ಗಾವಣೆ

  • ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಮಕ್ಕಳಿಗೆ ಪಾಠ ಮಾಡಲಿಕ್ಕೆ, ಸಂಸಾರ ನೋಡಿಕೊಳ್ಳೋಕಲ್ಲ- ಸಚಿವ ನಾಗೇಶ್‌

    ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಮಕ್ಕಳಿಗೆ ಪಾಠ ಮಾಡಲಿಕ್ಕೆ, ಸಂಸಾರ ನೋಡಿಕೊಳ್ಳೋಕಲ್ಲ- ಸಚಿವ ನಾಗೇಶ್‌

    ದಾವಣಗೆರೆ: ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಮಕ್ಕಳಿಗೆ ಪಾಠ ಮಾಡಲಿಕ್ಕೆ ಹೊರತು ಸಂಸಾರ ನೋಡಿಕೊಳ್ಳುವುದಕ್ಕಲ್ಲ ಎಂದು ಶಿಕ್ಷಕರ ವರ್ಗಾವಣೆ ವಿಚಾರವಾಗಿ ಶಿಕ್ಷಕರ ವಿರುದ್ಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಿಡಿಕಾರಿದರು.

    TEACHERS TRANSFER

    ಶಿಕ್ಷಕರ ವರ್ಗಾವಣೆಗೆ ಸರ್ಕಾರ ಕೈಗೊಂಡಿರುವ ಕ್ರಮದಿಂದ ಶಿಕ್ಷಕರು ಪರದಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲೂ ಸಾಧ್ಯವಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ? – ಎಎಪಿ ಪ್ರಶ್ನೆ

    ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೇರೆ ಗ್ರಾಮದಲ್ಲಿ ಮಾತನಾಡಿದ ಅವರು, ಮೂರು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಎರಡು ದಿನದಿಂದ ಮತ್ತೆ ಶುರುವಾಗಿದ್ದು, ಎಲ್ಲಾ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲ ಶಿಕ್ಷಕರ ವೈಯುಕ್ತಿಕ ಸಮಸ್ಯೆಗಳನ್ನು ಸಾಮೂಹಿಕ ಎಂದು ಬಿಂಬಿಸಲಾಗದು. ಕೆಲ ಶಿಕ್ಷಕರಿಗೆ ಕೆಲಸಕ್ಕೆ ಸೇರುವಾಗ ಜಿಲ್ಲಾವಾರು ಆಯ್ಕೆ ಅಂತ ಗೊತ್ತಿರಲಿಲ್ಲವೇ? ಆಗ ರಾಯಚೂರು ಮತ್ತೊಂದು ಜಿಲ್ಲೆ ದೂರ ಅಂತಾ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಸಚಿವರು, ಎಲ್ಲರ ಸಮಸ್ಯೆ ಅರ್ಥ ಆಗುತ್ತದೆ. ಆದರೆ, ಶಿಕ್ಷಕರ ಸಮಸ್ಯೆಗಿಂತ ಮೊದಲು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ. ನಂತರ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಬಗೆಹರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    SCHOOL

    ಶಿಕ್ಷಣ ವ್ಯವಸ್ಥೆಗೆ ಕೋವಿಡ್ ಸವಾಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ನಿಗಾ ವಹಿಸುತ್ತಿದೆ. ಮೂರನೇ ಅಲೆ ಪರಿಣಾಮ ಬೀರಿದರೆ ಶಾಲೆ ನಿಲ್ಲಿಸಬೇಕೆ? ಬೇಡವೆ ಎಂಬುದನ್ನು ಮುಂದೆ ನಿರ್ಧರಿಸಲಾಗುವುದು. ಸದ್ಯಕ್ಕೆ ದೇಶದಲ್ಲಿ ಕೊರೊನಾ ಸಮಸ್ಯೆ ಭೀಕರವಾಗಿಲ್ಲ. ಕೊರೊನಾ ಪರಿಣಾಮ ಆದರೆ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲದೇ ಶಾಲೆ ಪ್ರಾರಂಭ ಆಗಿದೆ ಎಂದರು. ಇದನ್ನೂ ಓದಿ: ಗಿಣಿರಾಮನ ರಾಣಿಗೆ ಮೋಹಕ ತಾರೆ ಕೊಟ್ರು ಕಾಂಪ್ಲಿಮೆಂಟ್

    ಕೊಡುಗು ಜಿಲ್ಲೆಯ ರೆಸಿಡೆಸ್ಸಿ ಶಾಲೆಯ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಕೊಡಗಿನ ಗಡಿಗೆ ಹೊಂದಿಕೊಂಡಂತೆ ಕೇರಳ ಇದ್ದು, ಅಲ್ಲಿಂದ ವೈರಸ್ ಹಬ್ಬಿದೆ ಎಂಬ ಮಾಹಿತಿ ಸಿಕ್ಕಿದೆ. ಜಿಲ್ಲಾಧಿಕಾರಿಗಳನ್ನು ಆ ಶಾಲೆಗೆ ಪರಿಶೀಲನೆಗೆ ಕಳುಹಿಸಲಾಗಿದ್ದು, 450 ಮಕ್ಕಳನ್ನು ಕೋವಿಡ್‌ ಪರೀಕ್ಷೆಗೊಳಪಡಿಸಲಾಗಿದೆ. ಶಾಲೆಯಲ್ಲಿ 31 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಎಸ್‌ಒಪಿ‌ ಪ್ರಕಾರ ಒಂದು ವಾರಗಳ ಕಾಲ ಶಾಲೆಯನ್ನು ಸೀಲ್‌ಡೌನ್ ಮಾಡಲು ತಿಳಿಸಲಾಗಿದೆ ಎಂದು ಹೇಳಿದರು.

  • ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ನಾಳೆಯಿಂದ ಆರಂಭ – ಸುರೇಶ್ ಕುಮಾರ್

    ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ನಾಳೆಯಿಂದ ಆರಂಭ – ಸುರೇಶ್ ಕುಮಾರ್

    ಬೆಂಗಳೂರು: ವರ್ಷದಿಂದ ಕಗ್ಗಂಟಾಗಿ ಉಳಿದಿರುವ ಶಿಕ್ಷಕರ ವರ್ಗಾವಣೆಗೆ ಕೊನೆಗೂ ಕಾಲ ಕೂಡಿಬಂದಿದ್ದು, ನಾಳೆಯಿಂದ ಕೌನ್ಸಿಲಿಂಗ್ ನಡೆಯಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಇಂದು ಸರ್ವ ಶಿಕ್ಷಣ ಅಭಿಯಾನದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಡ್ಡಾಯ ವರ್ಗಾವಣೆ ಬಗ್ಗೆ ಅನೇಕ ಗೊಂದಲಗಳು ಇತ್ತು. ಅನೇಕ ಜನ ಕಡ್ಡಾಯ ವರ್ಗಾವಣೆ ಬಗ್ಗೆ ನನ್ನ ಬಳಿ ದೂರು ನೀಡಿದ್ದರು. ಹೀಗಾಗಿ ನಾನು ವರ್ಗಾವಣೆ ನಿಲ್ಲಿಸಿದ್ದೆ. ಈ ಸುದ್ದಿಗೋಷ್ಠಿಯನ್ನು ಸಹ ಸಂತೋಷದಿಂದ ಮಾಡುತ್ತಿಲ್ಲ. ಎರಡು ಗುಂಪುಗಳ ಮಧ್ಯೆ ಸಿಲುಕಿ ಹಾಕಿಕೊಂಡಿದ್ದೇನೆ ಎಂದು ತಿಳಿಸಿದರು.

    ಕಡ್ಡಾಯ ವರ್ಗಾವಣೆ ಮಾಡದಿದ್ದಲ್ಲಿ ನಿಮ್ಮ ಮನೆ ಮುಂದೆ ವಿಷ ತೆಗೆದುಕೊಳ್ಳುತ್ತೇನೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಕಡ್ಡಾಯ ವರ್ಗಾವಣೆ ಮಾಡಿದ್ದಲ್ಲಿ ನಿಮ್ಮ ಮನೆ ಮುಂದೆ ವಿಷ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಹೀಗಾಗಿ ಎರಡೂ ಗುಂಪುಗಳ ಮಧ್ಯೆ ಸಿಲುಕಿಕೊಂಡಿದ್ದೇನೆ. ಈ ಕುರಿತು 20 ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

    ಎಲ್ಲರಿಗೂ ಸಮಾನ ರೀತಿಯಲ್ಲಿ ಅನುಕೂಲವಾಗುವಂತೆ ವರ್ಗಾವಣೆ ಮಾಡಲು ಚಿಂತನೆ ನಡೆಸಿದ್ದೇನೆ. ಕಡ್ಡಾಯ ವರ್ಗಾವಣೆ ಆಗುವವರಿಗೆ ಕೆಲವು ಆಫರ್ ನೀಡಲಾಗಿದೆ. ಏನೆಂದರೆ, ಅವರಿಗೆ ಇಷ್ಟವಾಗದ ಜಾಗದಲ್ಲಿ ವರ್ಗಾವಣೆ ಸಿಗದೇ ಇದ್ದರೆ ಪಕ್ಕದ ತಾಲೂಕು, ಅಥವಾ ಹತ್ತಿರದ ಜಿಲ್ಲೆಗೆ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಅಲ್ಲದೆ, ವರ್ಗಾವಣೆ ಬಯಸಿದವರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಮುಂದಿನ ವರ್ಷದಿಂದ ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಲಾಗುವುದು. ಇನ್ನೊಂದು ವರ್ಷದಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೆ ತರುತ್ತೇವೆ. ಶಿಕ್ಷಕ ಸ್ನೇಹಿ ವರ್ಗಾವಣೆ ಜಾರಿಗೆ ತರಲು ಕೆಲಸ ಮಾಡುತ್ತೇನೆ. ಮುಂದಿನ ವರ್ಷದೊಳಗೆ ತಿದ್ದುಪಡಿ ತರುತ್ತೇವೆ ಎಂದು ಭರವಸೆ ನೀಡಿದರು.

    2017ರಲ್ಲಿ ಬಂದ ಈ ವರ್ಗಾವಣೆ ಕಾಯ್ದೆ ಯಾವುದೇ ಚರ್ಚೆ ಇಲ್ಲದೆ ಅಧಿವೇಶನದಲ್ಲಿ ಪಾಸ್ ಆಗಿದೆ. ಯಾವುದೇ ಚರ್ಚೆ ಇಲ್ಲದೆ ಪಾಸ್ ಆಗಿರೋದಕ್ಕೆ ಇಂದು ಸಮಸ್ಯೆ ತಂದಿಟ್ಟಿದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ ಅನಿವಾರ್ಯವಿದೆ. ಕಡ್ಡಾಯ ವರ್ಗಾವಣೆ ಪದ ಅನ್ನೋದೇ ಸರಿಯಿಲ್ಲ. ಈ ಕಡ್ಡಾಯ ವರ್ಗಾವಣೆ ಅನ್ನೋದು ಒಂದು ರೀತಿ ಶಿಕ್ಷೆ ಇದ್ದ ಹಾಗೆ. ಹೀಗಾಗಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಸಿದ್ದಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಡ್ಡಾಯ ವರ್ಗಾವಣೆ ತಿದ್ದುಪಡಿ ಕಾಯ್ದೆಗೆ ಆದಷ್ಟು ಬೇಗ ತಿದ್ದುಪಡಿ ತರುತ್ತೇವೆ ಎಂದು ಮಾಹಿತಿ ನೀಡಿದರು.

    ಖಾಯಿಲೆ ಇರುವವರು ಹಾಗೂ ಬೇರೆ ಸಮಸ್ಯೆ ಇರುವವರಿಗಾಗಿ ಕಡ್ಡಾಯ ವರ್ಗಾವಣೆಗೆ ಗುರುತಿಸಲಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಕಡ್ಡಾಯ ವರ್ಗಾವಣೆಗೆ 12,622 ಶಿಕ್ಷಕರನ್ನು ಗುರುತಿಸಲಾಗಿದೆ. ಇದರಲ್ಲಿ 6,832 ಜನ ವಿವಿಧ ಕಾರಣಕ್ಕೆ ವಿನಾಯಿತಿ ಪಡೆದಿದ್ದಾರೆ. ಒಟ್ಟು 5,790 ಜನ ವರ್ಗಾವಣೆಗೆ ಅರ್ಹರಾಗಿದ್ದಾರೆ. ಶೇ.4ರಷ್ಟು ವರ್ಗಾವಣೆಯ ನಿಯಮದಂತೆ 4,084 ಜನ ವರ್ಗಾವಣೆಗೆ ಅರ್ಹರಾಗಿದ್ದಾರೆ. ಬಳ್ಳಾರಿಯಲ್ಲೇ ಹೆಚ್ಚು ವರ್ಗಾವಣೆ ನಡೆಯುತ್ತಿದ್ದು, 320 ಒಂದೇ ಜಿಲ್ಲೆಯಲ್ಲಿ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ಮಟ್ಟದಲ್ಲಿ 3,692 ಕಡ್ಡಾಯ ವರ್ಗಾವಣೆಗೆ ಶಿಕ್ಷಕರನ್ನು ಗುರುತಿಸಲಾಗಿದೆ. ಇದರಲ್ಲಿ 2100 ಜನರಿಗೆ ವಿನಾಯಿತಿ ನೀಡಲಾಗಿದೆ. 1,592 ಜನ ವರ್ಗಾವಣೆಗೆ ಅರ್ಹರಾಗಿದ್ದಾರೆ. ಶೇ.4ರ ನಿಯಮದಡಿ 1,234 ಜನ ವರ್ಗಾವಣೆ ಆಗಬೇಕು ಎಂದು ಮಾಹಿತಿ ನಿಡಿದರು.

    ವರ್ಗಾವಣೆಗೆ ಅರ್ಹರಾಗಿರುವವರಿಗೆ ಬಿ ಮತ್ತು ಸಿ ಝೋನ್ ನಲ್ಲಿ ಸ್ಥಳವಿಲ್ಲ. ಹೀಗಾಗಿ ಮತ್ತೊಂದು ಸಮಸ್ಯೆ ಆಗಿದೆ. ಈವರೆಗೆ 1,6066 ಶಿಕ್ಷಕರ ವರ್ಗಾವಣೆ ಆಗಿದೆ. ಉಳಿದಂತೆ 4,260 ಕಡ್ಡಾಯ ವರ್ಗಾವಣೆ, ಪರಸ್ಪರ ವರ್ಗಾವಣೆ 3,777 ಮತ್ತು ಅಂತರ್ ಘಟಕ ವರ್ಗಾವಣೆ 1,4076 ಬಾಕಿ ಇದ್ದು, ವರ್ಗಾವಣೆ ಪ್ರಕ್ರಿಯೆ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಸಚಿವರು ತಿಳಿಸಿದರು.

    ಇದೇ ವೇಳೆ 10 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಿದ್ಧತೆ ಆಗಿದೆ. ಅಕ್ಟೋಬರ್ ಅಂತ್ಯದೊಳಗೆ ಎಲ್ಲರಿಗೂ ನೇಮಕಾತಿ ಆದೇಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿ ನಂತರ ಕೆಲವು ಶಿಕ್ಷಕರು ಕಡ್ಡಾಯ ವರ್ಗಾವಣೆ ಬೇಡ ಎಂದು ಸಚಿವ ಸುರೇಶ್ ಕುಮಾರ್‍ಗೆ ಮನವಿ ಮಾಡಿದರು. ಕಣ್ಣೀರು ಹಾಕಿ ವರ್ಗಾವಣೆ ಬೇಡ ಎಂದು ಗೋಗರೆದರು. ಆದರೆ, ಇದ್ಯಾವುದಕ್ಕೂ ಒಪ್ಪದ ಸಚಿವರು, ನಿಯಮದ ಪ್ರಕಾರ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ವಲಯವಾರು ಆಧಾರದ ಮೇಲೆ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತದೆ. ಎ ಝೋನ್ ಎಂದರೆ ನಗರ ಪ್ರದೇಶ, ಬಿ ಝೋನ್ ಎಂದರೆ ತಾಲೂಕು, ಸಿ ಝೋನ್ ಎಂದರೆ ಗ್ರಾಮೀಣ ಭಾಗ ಎಂದರ್ಥ.

  • ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‍ಗೆ ತಡೆ – ನೂತನ ಸಚಿವರ ಆದೇಶ

    ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‍ಗೆ ತಡೆ – ನೂತನ ಸಚಿವರ ಆದೇಶ

    ಬೆಂಗಳೂರು: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸಿಲಿಂಗ್‍ನ್ನು ತಡೆ ಹಿಡಿಯುವಂತೆ ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

    ವರ್ಗಾವಣೆಯಲ್ಲಿರುವ ಗೊಂದಲ ನಿವಾರಣೆಗಾಗಿ ವರ್ಗಾವಣೆ ಪ್ರಕ್ರಿಯೆ ತಡೆ ಹಿಡಿಯಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಡೆ ಹಿಡಿಯಲು ನೂತನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ನಾಳೆಯಿಂದಲೇ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆಯಬೇಕಿತ್ತು.

    ಶಿಕ್ಷಕರ ಕಡ್ಡಾಯ ವರ್ಗಾವಣೆ ಕುರಿತು ಅನೇಕ ಶಿಕ್ಷಕರು, ವಿಶೇಷವಾಗಿ ಶಿಕ್ಷಕಿಯರು ಮನವಿಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ವಿವರಿಸಿ ಕೆಲವು ನ್ಯಾಯಯುತ ಪ್ರಸ್ತಾವನೆಗಳನ್ನು ನನ್ನ ಮುಂದೆ ಇಟ್ಟಿದ್ದಾರೆ. ಈ ವರ್ಗಾವಣೆ ವ್ಯವಸ್ಥೆಯಲ್ಲಿರುವ ಕೆಲವು ದೋಷಗಳನ್ನೂ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಕೆಲ ಗೊಂದಲಗಳನ್ನು ನಿವಾರಿಸಿ, ಎಲ್ಲರಿಗೂ ಅನುಕೂಲವಾಗುವ ರೀತಿಯ ವ್ಯವಸ್ಥೆ ಕುರಿತು ಚಿಂತನೆ ಮತ್ತು ಪ್ರಯತ್ನ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕೇವಲ ಕೆಲದಿನಗಳ ಮಟ್ಟಿಗೆ ಮಾತ್ರ ಹಾಲಿ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಬಹಳ ಬೇಗ ಸುಧಾರಿತ ವರ್ಗಾವಣೆ ಪ್ರಕ್ರಿಯೆ ಜಾರಿ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಯಾರಿಗೂ ಆತಂಕ ಬೇಡ ಎಂದು ನೂತನ ಶಿಕ್ಷಣ ಸಚಿವರು ತಿಳಿಸಿದ್ದಾರೆ.