Tag: ಶಿಕ್ಷಕರ ದಿನಾಚರಣೆ

  • ಸರ್ಕಾರ ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ತೆಗೆಯಬೇಕು: ತೋಂಟದ ಸಿದ್ಧಲಿಂಗ ಶ್ರೀ

    ಸರ್ಕಾರ ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ತೆಗೆಯಬೇಕು: ತೋಂಟದ ಸಿದ್ಧಲಿಂಗ ಶ್ರೀ

    ಗದಗ: ಸರ್ಕಾರ ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ತೆಗೆಯಬೇಕು. ರಾಧಾಕೃಷ್ಣನ್ ರಾಷ್ಟ್ರಪತಿ, ಬ್ರಾಹ್ಮಣ ಆಗಿದ್ದು, ಹೆಚ್ಚಿನ ಪ್ರಾಧಾನ್ಯತೆ ಇರಲಿ. ಆದರೆ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾ ಪುಲೆ ನೆನಪಿರಲಿ ಎಂದು ಹೇಳಿಕೆ ನೀಡಿದ್ದಾರೆ.

    ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾವಿತ್ರಿಬಾ ಪುಲೆ ಅವರು ನಿಂದೆ, ಅಪಮಾನ, ಹಿಂಸೆಗೊಳಗಾಗಿದ್ದಳು. ಮನುವಾದಿಗಳು ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಕೊಂದವ ಮತಾಂಧರು ಆಗಿನ ಕಾಲದಲ್ಲೂ ಸಾವಿತ್ರಿಬಾ ಪುಲೆಗೆ ಸಾಕಷ್ಟು ತೊಂದರೆ ಕೊಟ್ಟಿದ್ದರು. ಆದರೆ ಇವತ್ತು ವಿಶ್ವವಿದ್ಯಾಲಯಕ್ಕೆ ಸಾವಿತ್ರಿ ಬಾ ಅವರ ಹೆಸರೇ ಇಡಲಾಗಿದೆ. ಯಾರು ಅವತ್ತು ಅವರನ್ನು ಅವಮಾನಿಸಿದ ಮನುವಾದಿಗಳ ಜನಾಂಗದ ಈಗಿನ ಮುಖ್ಯಸ್ಥನಾದ ಸಿಎಂ ಫಡ್ನವೀಸ್ ಈಗ ವಿವಿಗೆ ಸಾವಿತ್ರಿ ಬಾ ಪುಲೆ ಅವರ ಹೆಸರನ್ನು ಇಟ್ಟಿದ್ದಾರೆ ಎಂದರು.

    ಎಲ್ಲ ತೊಂದರೆ ಸಹಿಸಿಕೊಂಡ ಸಾವಿತ್ರಿ ಬಾ ಪುಲೆ ದೇಶದ ಮೊದಲ ಶಿಕ್ಷಕಿಯಾಗಿದ್ದಾಳೆ. ಭಾರತ ಸರ್ಕಾರ ಸಾವಿತ್ರಿ ಬಾ ಪುಲೆ ಹಾಗೂ ಜ್ಯೋತಿ ಬಾಪುಲೆ ಅವರಿಗೆ ಭಾರತ ರತ್ನ ನೀಡಬೇಕು. ಸಾವಿತ್ರಿಬಾ ಗೆ ಮರಣೋತ್ತರ ಭಾರತ ರತ್ನ ನೀಡಬೇಕು. ಈ ಮೂಲಕ ಕೇಂದ್ರ ಸರ್ಕಾರ ತನ್ನ ಮೇಲಿನ ಕಳಂಕ ತೊಳೆದುಕೊಳ್ಳಬೇಕು. ಜನಪರ, ಶೋಷಿತರ ಪರ, ತುಳಿತಕ್ಕೊಳಗಾದವರ ಪರ ಅನ್ನೋದು ಕೇಂದ್ರ ಸರ್ಕಾರ ತೋರಿಸಿಕೊಡಬೇಕು ಎಂದು ತೋಂಟದ ಸಿದ್ಧಲಿಂಗ ಶ್ರೀ ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಸನಕ್ಕೆ ಐಐಟಿ ಹೆಂಗೆ ತರಬೇಕು ಅಂತ ನಂಗೊತ್ತು: ರೇವಣ್ಣ

    ಹಾಸನಕ್ಕೆ ಐಐಟಿ ಹೆಂಗೆ ತರಬೇಕು ಅಂತ ನಂಗೊತ್ತು: ರೇವಣ್ಣ

    ಹಾಸನ: ಸ್ವಕ್ಷೇತ್ರಕ್ಕೆ ಬೆಳಗಾವಿಯಿಂದ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್) ಕಚೇರಿಯನ್ನು ಸ್ಥಳಾಂತರ ಮಾಡಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್‍ಡಿ ರೇವಣ್ಣ ಈಗ ಹಾಸನಕ್ಕೆ ಐಐಟಿ ಹೇಗೆ ತರಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

    ನಗರದ ಕಲಾಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2019ರ ವೇಳೆಗೆ ಜಿಲ್ಲೆಯಲ್ಲಿ ಐಐಟಿ ಕಾಲೇಜು ಆರಂಭವಾಗುವುದು ನಿಶ್ಚಿತ. ಐಐಟಿಯನ್ನು ಹಾಸನ ಜಿಲ್ಲೆಗೆ ಹೇಗೆ ತರಬೇಕೆಂದು ನನಗೆ ಗೊತ್ತಿದೆ. ಈಗಾಗಲೇ ಅದರ ಬಗ್ಗೆ ಪ್ರಯತ್ನವನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: `ಮೇಡಂ ಎಣ್ಣೆಕಾಟ ತಪ್ಪಿಸಿ’-ಡಿಸಿ ರೋಹಿಣಿ ಸಿಂಧೂರಿಗೆ ರೇವಣ್ಣ ಮನವಿ+

    ಹಾಸನ ಜಿಲ್ಲೆಯಲ್ಲಿ ಮತ್ತೊಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡುವ ಗುರಿಯನ್ನು ಹೊಂದಿದ್ದೇನೆ. ಈಗಾಗಲೇ ಹೊಳೆನರಸೀಪುರ ಕ್ಷೇತ್ರದಲ್ಲಿ ಒಟ್ಟು ಏಳು ಪದವಿ ಕಾಲೇಜುಗಳನ್ನು ಹೊಂದುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಪದವಿ ಕಾಲೇಜುಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರವೆಂದು ಹೆಸರುಗಳಿಸಿಕೊಂಡಿದೆ ಎಂದು ಹೇಳಿದರು. ಇದನ್ನೂ ಓದಿ:ರೇವಣ್ಣ ಸ್ವಕ್ಷೇತ್ರಕ್ಕೆ ಕೆಶಿಪ್ ಕಚೇರಿ ಸ್ಥಳಾಂತರ

    ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿನ ಶಿಕ್ಷಣದ ಮಟ್ಟ ಕುಸಿಯುತ್ತಿದೆ. ಇದರ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು. ಇದೇ ರೀತಿ ಮುಂದುವರಿದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೇ ಸರ್ಕಾರದಿಂದಲೇ ಇಂಗ್ಲೀಷ್ ಶಾಲೆಗಳನ್ನು ತೆರೆಯುವ ಉದ್ದೇಶ ಹೊಂದಿದ್ದೇವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೇ ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂದು ಹಾಸನದ ಕಸಾಪ ಅಧ್ಯಕ್ಷ ಮಂಜೇಗೌಡರ ಸಮ್ಮುಖದಲ್ಲೇ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೂರೇ ತಿಂಗಳಲ್ಲಿ ಬಿಜೆಪಿಯನ್ನು ನಗರದಿಂದ ಕಳುಹಿಸಿಲ್ಲವೇ: ರೇವಣ್ಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೀಚರ್ಸ್ ಡೇ ದಿನದಂದು ಜಮಖಂಡಿ ಪ್ರಿನ್ಸಿಪಾಲ್ ಡಾನ್ಸ್- ವಿಡಿಯೋ ಫುಲ್ ವೈರಲ್

    ಟೀಚರ್ಸ್ ಡೇ ದಿನದಂದು ಜಮಖಂಡಿ ಪ್ರಿನ್ಸಿಪಾಲ್ ಡಾನ್ಸ್- ವಿಡಿಯೋ ಫುಲ್ ವೈರಲ್

    ಬಾಗಲಕೋಟೆ: ಶಿಕ್ಷಕರ ದಿನಾಚರಣೆಯಂದು ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಗಳ ಎದುರಿಗೇ ಸಖತ್ ಸ್ಟೆಪ್ ಹಾಕಿ ಫುಲ್ ಫೇಮಸ್ ಆಗಿದ್ದಾರೆ.

    ಜಿಲ್ಲೆಯ ಜಮಖಂಡಿ ನಗರದ ಬಾಲಕಿಯರ ಸರ್ಕಾರಿ ಪಿಯುಸಿ ಕಾಲೇಜು ಪ್ರಾಂಶುಪಾಲರಾದ ಹೆಚ್ ಎಲ್ ಶೇಗುಣಶಿ ಎಂಬವರು ಕನ್ನಡ ಚೌಕ ಸಿನಿಮಾದ `ಅಲ್ಲಾಡ್ಸು.. ಅಲ್ಲಾಡ್ಸು..’ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇದನ್ನು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಒಂದು ವರ್ಷದ ನಂತರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕಳೆದ ವರ್ಷ ಶಿಕ್ಷಕರ ದಿನಾಚರಣೆ ವೇಳೆ ಟೀಚಿಂಗ್ ಡಯಾಸ್ ಮೇಲೆ ಪ್ರಿನ್ಸಿಪಾಲ್ ನೃತ್ಯ ಮಾಡಿದ್ದರು. ಇದನ್ನು ಕಂಡ ವಿದ್ಯಾರ್ಥಿನಿಯರು ಕೇಕೆ ಹಾಕಿ ಸಂಭ್ರಮಿಸಿದ್ದರು. ಪ್ರಿನ್ಸಿಪಾಲ್ ಕುಣಿತವನ್ನ ಅಲ್ಲಿ ಸೇರಿದ್ದ ಎಲ್ಲರೂ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು.

    https://www.youtube.com/watch?v=bfmIQfuEpss

    ಈ ಡ್ಯಾನ್ಸ್ ನೋಡಿ ಕೆಲ ವಿಧ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ರೆ ಇನ್ನೂ ಕೆಲ ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರು ಟೀಕೆ ಮಾಡಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಿನ್ಸಿಪಾಲ್ ರ ನೃತ್ಯಕ್ಕೆ ಪರವಿರೋಧ ಅಭಿಪ್ರಾಯ ವ್ಯಕ್ತವಾಗಿವೆ. ಇದನ್ನು ಓದಿ: ಬ್ರಾಂಡ್ ಅಂಬಾಸಿಡರ್ ಆದ್ರು `ಗೋವಿಂದ ಡಾನ್ಸ್ ಸ್ಟೈಲ್’ ಅಂಕಲ್

    ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಅವರ ಅಂಕಲ್ ಡ್ಯಾನ್ಸ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ದೇಶವಿದೇಶಗಳಿಂದ ಭಾರಿ ಮೆಚ್ಚುಗೆ ಕಾರಣವಾಗಿದ್ದ ಅಂಕಲ್ ಡ್ಯಾನ್ಸ್ ಸಾಕಷ್ಟು ಸುದ್ದಿ ಮಾಡಿತ್ತು.

    https://www.youtube.com/watch?v=Jv6vUS0h_4U

  • ಶಿಕ್ಷಕರ ಮುಂದೆ ಸಂಧಿ ಪಾಠ – ವೇದಿಕೆಯಲ್ಲೇ ಶರವಣರ ಕಾಲೆಳೆದ ಸಿಎಂ

    ಶಿಕ್ಷಕರ ಮುಂದೆ ಸಂಧಿ ಪಾಠ – ವೇದಿಕೆಯಲ್ಲೇ ಶರವಣರ ಕಾಲೆಳೆದ ಸಿಎಂ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ಮತ್ತೊಮ್ಮೆ ಕನ್ನಡ ವ್ಯಾಕರಣ ಟೀಚರ್ ಆಗಿ, ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರಿಗೆ ಸಂಧಿ ಬಗ್ಗೆ ಪಾಠ ಮಾಡಿದ್ದಾರೆ.

    ಶಿಕ್ಷಕರ ದಿನಾಚರಣೆಯ ಅಂಗವಾಗಿ ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರ ಕುರಿತು ಮಾತನಾಡಿ, ನನ್ನ ಭಾಷಣದ ವೇಳೆ ಕೆಲವರು ಕನ್ನಡದ ಬಗ್ಗೆ ಭಾಷಣ ಮಾಡ್ತಾರೆ. ಮೊನ್ನೆ ಯಾರೋ ವಿಧಾನಸೌಧದಲ್ಲಿ ಕನ್ನಡ ಶಾಲೆ ಉಳಿಸಬೇಕು ಅಂತ ಮಾತಾಡುತ್ತಿದ್ದರು. ಅದಕ್ಕೆ ನಾನು ಸಂಧಿ ಅಂದ್ರೆ ಗೊತ್ತ ಅಂತ ಕೇಳಿದೆ ಅದಕ್ಕೆ ಆ ವ್ಯಕ್ತಿ ಇಲ್ಲ ಹೇಳಿದ್ದರು.

    ಈ ವೇಳೆ ವೇದಿಕೆ ಮೇಲೆ ಸಚಿವ ತನ್ವೀರ್ ಸೇಠ್ ಹಾಗೂ ಎಂಎಲ್‍ಸಿ ಶರವಣಗೆ ಸಂಧಿ ಪಾಠದ ವಿಚಾರ ಹೇಳುತ್ತಾ ಕಿಚಾಯಿಸಿದ ಸಿಎಂ, ನಿನಗೆ ಗೊತ್ತೇನಯ್ಯ ಸಂಧಿ ಅಂದ್ರೆ ಏನು ಅಂತ. ಅದಕ್ಕೆ ನಗುತ್ತಲೆ ಶರವಣ ಸುಮ್ಮನಾದ್ರು. ಬಳಿಕ ಸಿಎಂ ಅವರೇ ನಿನಗೆ ಗೊತ್ತಿಲ್ಲ ಬಿಡು ಅಂತ ಕಾಲೆಳೆದರು. ಶರವಣರನ್ನ ಮತ್ತೆ ಬಿಡದ ಸಿಎಂ ಎಷ್ಟು ಓದುದ್ದೀಯಾ ಅಂತ ಮರು ಪ್ರಶ್ನೆ ಮಾಡಿದ್ರು. ಅದಕ್ಕೆ ಶರವಣ ನಗುತ್ತಲೇ 10 ಕ್ಲಾಸ್ ಅಂದ್ರು.

    ಸಚಿವ ತನ್ವೀರ್ ಸೇಠ್ ಅವರಿಗೆ ಸಂಧಿ ಅಂದ್ರೆ ಗೊತ್ತಿಲ್ಲ. ಅವರು ಕಾನ್ವೆಂಟ್ ಓದಿದ್ದು ಅದಕ್ಕೆ ಅವರಿಗೂ ಗೊತ್ತಿಲ್ಲ ಅಂತ ಹೇಳಿದರು. ಸಿಎಂ ಮಾತು ಕೇಳಿ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಬಳಿಕ ಸಿದ್ದರಾಮಯ್ಯ ಅವರೇ ಸಂಧಿ ಅಂದ್ರೆ ಏನು ಅನ್ನೋ ಪಾಠವನ್ನು ಶಿಕ್ಷಕರಿಗೆ ಹೇಳಿಕೊಟ್ರು.

  • ಗುರು ಗೋಪಿಚಂದ್‍ರನ್ನು ‘ಹೇಟ್’ ಮಾಡ್ತಾರಂತೆ ಪಿವಿ ಸಿಂಧು!- ಕನ್‍ಫ್ಯೂಸ್ ಆಗ್ಬೇಡಿ, ವಿಡಿಯೋ ನೋಡಿ

    ಗುರು ಗೋಪಿಚಂದ್‍ರನ್ನು ‘ಹೇಟ್’ ಮಾಡ್ತಾರಂತೆ ಪಿವಿ ಸಿಂಧು!- ಕನ್‍ಫ್ಯೂಸ್ ಆಗ್ಬೇಡಿ, ವಿಡಿಯೋ ನೋಡಿ

    ನವದೆಹಲಿ: 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಕೀರ್ತಿ ತಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಈಗ ಎಲ್ಲರ ಮನೆ ಮಾತಾಗಿದ್ದಾರೆ. ಸಿಂಧು ಯಶಸ್ಸಿನ ಹಿಂದಿದ್ದುದು ಅವರ ಕೋಚ್ ಪುಲ್ಲೆಲಾ ಗೋಪಿಚಂದ್. ಶಿಕ್ಷಕರ ದಿನಾಚರಣೆಯಾದ ಇಂದು ಪಿವಿ ಸಿಂಧು ತನ್ನ ಗುರು ಗೋಪಿಚಂದ್‍ಗೆ ಗುರುಕಾಣಿಕೆಯಾಗಿ ವಿಡಿಯೋವೊಂದನ್ನ ಅರ್ಪಿಸಿದ್ದಾರೆ.

    ಪಿವಿ ಸಿಂಧು ಸ್ಪೋರ್ಟ್ಸ್ ಡ್ರಿಂಕ್ ಬ್ರ್ಯಾಂಡ್‍ವೊಂದರ ಜೊತೆಗೂಡಿ ಐ ಹೇಟ್ ಮೈ ಟೀಚರ್ ಎಂಬ ಡಿಜಿಟಲ್ ಕಿರು ಚಿತ್ರವನ್ನ ಸಹ-ನಿರ್ಮಾಣ ಮಾಡಿದ್ದಾರೆ.

    ಯಶಸ್ಸಿನ ದಾರಿ ತುಂಬಾ ಕಠಿಣವಾದುದು. ಅದಕ್ಕೆ ಸಾಕಷ್ಟು ಪರಿಶ್ರಮ ಹಾಗೂ ಸಮರ್ಪಣೆ ಬೇಕು. ಆದ್ರೆ ಬಹುತೇಕ ಮಂದಿ ಯಾವುದೋ ಒಂದು ಘಟ್ಟದಲ್ಲಿ ಇದು ನನ್ನಿಂದ ಆಗಲ್ಲ ಅಂತ ಕೈಚೆಲ್ಲಿಬಿಡುತ್ತಾರೆ. ಆದ್ರೆ ಯಾವುದೋ ಒಂದು ಶಕ್ತಿ ಅವರನ್ನ ಮುಂದೆ ತಳ್ಳುತ್ತದೆ. ಅವರು ಯಶಸ್ವಿಯಾಗಿ ಹೊರಹೊಮ್ಮುವಂತೆ ಮಾಡುತ್ತದೆ ಅನ್ನೋದನ್ನ ವಿಡಿಯೋದಲ್ಲಿ ತೋರಿಸಲಾಗಿದೆ.

    ಇಂತಹ ಸಂದರ್ಭಗಳಲ್ಲಿ ಕ್ರೀಡಾಪಟು ತನ್ನ ಗುರುವಿನ ಕಠಿಣತೆ ಹಿಂದಿನ ಉದ್ದೇಶವನ್ನ ಅರಿಯದೆ ಅವರನ್ನ ದ್ವೇಷಿಸುತ್ತಾರೆ. ಆದ್ರೆ ಕೊನೆಗೆ ತನ್ನ ಬೆನ್ನ ಹಿಂದೆ ನಿಂತು ಯಶಸ್ಸಿಗೆ ಕಾರಣವಾದ ಗುರುವಿಗೆ ಕೃತಜ್ಞತೆ ಸಲ್ಲಿಸದೆ ಇರಲಾಗದು ಅನ್ನೋದನ್ನ ವಿಡಿಯೋದಲ್ಲಿ ತೋರಿಸಿಕೊಡಲಾಗಿದೆ.

    ಐ ಹೇಟ್ ಮೈ ಟೀಚರ್. ನನ್ನ ಗಾಯಗಳಿಗೆ ಅವರೇ ಕಾರಣ. ನನ್ನ ಮೇಲೆ ರೇಗಾಡ್ತಾರೆ. ನಾನು ಬೆವರು ಸುರಿಸಿದ್ರೆ ಅವರಿಗಿಷ್ಟ. ನಾನು ಬಿದ್ದಾಗ, ನನಗೆ ಉಸಿರಾಡಲೂ ಕಷ್ಟವಾದಾಗ ಅದು ಅವರಿಗೆ ಇಷ್ಟ. ನನ್ನ ನೋವಿಗೆ ಅವರೇ ಕಾರಣ. ನಾನು ನಿದ್ದೆ ಮಾಡ್ತೀನೋ ಇಲ್ವೋ ಅವರಿಗೆ ಬೇಕಾಗಿಲ್ಲ. ಅವರು ಎಂದಿಗೂ ಕೈಚೆಲ್ಲಿ ಕೂರಲ್ಲವಲ್ಲ ಅದಕ್ಕೆ ನಾನು ಅವರನ್ನ ದ್ವೇಷಿಸುತ್ತೇನೆ. ಅವರು ಯಾವಾಗ್ಲೂ ಸರಿಯಾಗೇ ಯೋಚಿಸ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವರನ್ನ ದ್ವೇಷಿಸೋದು ಯಾಕಂದ್ರೆ ನಾನು ನನ್ನನ್ನು ನಂಬೋದಕ್ಕಿಂತ ಹೆಚ್ಚಿಗೆ ಅವರು ನನ್ನನ್ನು ನಂಬ್ತಾರೆ. ಥ್ಯಾಂಕ್ಯೂ ಕೋಚ್ ಎಂದು ವಿಡಿಯೋ ಅಂತ್ಯವಾಗುತ್ತದೆ.

    ಕೋಚ್ ಪಟ್ಟುಬಿಡದೆ ಕೆಲಸ ಮಾಡಿ ನನಗಾಗಿ ದೊಡ್ಡ ದೊಡ್ಡ ಕನಸು ಹೊಂದಿದ್ದಾರೆ. ಅವರ ಈ ಶ್ರೇಷ್ಠತೆಗೆ ನಾನು ಋಣಿ. ಈ ಶಿಕ್ಷಕರ ದಿನಾಚರಣೆಯಂದು ನನ್ನ ಎಲ್ಲಾ ಯಶಸ್ಸನ್ನು ಅವರಿಗೆ ಸಮರ್ಪಿಸುತ್ತೇನೆ. ಅಲ್ಲದೆ ಎಲ್ಲರೂ ತಮ್ಮ ಜೀವನದಲ್ಲಿ ಪ್ರೇರಕ ಶಕ್ತಿಯಾಗಿರುವವರನ್ನ ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಅಂತ ಪಿವಿ ಸಿಂಧು ಹೇಳಿದ್ದಾರೆ.

    https://twitter.com/GatoradeIndia/status/904646010114162688

  • ಮಕ್ಕಳಿಗೆ ಹೈಟೆಕ್ ಶಿಕ್ಷಣ, ಮಾದರಿ ಶಾಲೆಯನ್ನಾಗಿಸಿದ ಟೀಚರ್ಸ್- ಇದು ಟೀಚರ್ಸ್ ಡೇ ಸ್ಪೆಷಲ್

    ಮಕ್ಕಳಿಗೆ ಹೈಟೆಕ್ ಶಿಕ್ಷಣ, ಮಾದರಿ ಶಾಲೆಯನ್ನಾಗಿಸಿದ ಟೀಚರ್ಸ್- ಇದು ಟೀಚರ್ಸ್ ಡೇ ಸ್ಪೆಷಲ್

    ಹಾವೇರಿ: ಇಂದು ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ 129ನೇ ಜನ್ಮದಿನ. ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗ್ತಿದೆ. ಆದ್ರೆ ಹಾವೇರಿಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದ ಶಿಕ್ಷಕರು ಎಲ್ಲರಿಗೂ ಮಾದರಿಯಾಗಿದ್ದಾರೆ.

    ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಾಮಿಕ ಶಾಲೆಯ ವಿಶೇಷ ಅಂದ್ರೆ ಎಲ್ಲಾ ಮಕ್ಕಳಿಗೆ ಡಿಜಿಟಲ್ ಶಿಕ್ಷಣದ ಜೊತೆಗೆ ಸ್ಮಾರ್ಟ್ ಕ್ಲಾಸ್‍ಗಳಾಗಿವೆ. ಕಳೆದ ವರ್ಷ 130 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಇದೀಗ 230ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

    ಕೇವಲ ಒಂದು ವರ್ಷದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಶಾಲೆಯ 9 ಜನ ಶಿಕ್ಷಕರ ಆಸಕ್ತಿ ಕಾರಣವಾಗಿದೆ. ಶಾಲೆಯಲ್ಲಿ ಬೋಧನ ಮಟ್ಟ ಸುಧಾರಣೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಉತ್ಸಾಹ ತುಂಬುತ್ತಿದ್ದಾರೆ. ಶನಿವಾರ ಮತ್ತು ಭಾನುವಾರವೂ ಒಬ್ಬೊಬ್ಬ ಶಿಕ್ಷಕರು ಮಕ್ಕಳಿಗೆ ವಿಶೇಷ ಪಾಠ ಪ್ರವಚನ ಮಾಡುತ್ತಾರೆ.

    ಶಿಕ್ಷಕರ ಈ ಕಾರ್ಯಕ್ಕೆ ಗ್ರಾಮಸ್ಥರೂ ಸಾಥ್ ನೀಡಿದ್ದಾರೆ. ಸಭೆ ಕರೆದು ಶಾಲೆಯ ಕುಂದುಕೊರತೆ ಚರ್ಚಿಸಿ, ಮಕ್ಕಳಿಗೆ ಬೇಕಾದ ಕಂಪ್ಯೂಟರ್, ಆಟದ ವಸ್ತುಗಳು, ಪೀಠೋಪಕರಣಗಳನ್ನ ಕೊಡುಗೆಯಾಗಿ ನೀಡಿದ್ದಾರೆ. ಶಿಕ್ಷಕರ ದಿನಾಚರಣೆಯ ಇವತ್ತಿನ ಸುಸಂದರ್ಭದಲ್ಲಿ ಹೊಸಕಟ್ಟಿ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ಕಾರ್ಯ ಶ್ಲಾಘನಾರ್ಹವಾಗಿದೆ.