Tag: ಶಾಹೀನ್ ಶಾಲೆ

  • ಸಿಎಎ ವಿರೋಧಿ ನಾಟಕ ಪ್ರದರ್ಶನ- ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಸಿಎಎ ವಿರೋಧಿ ನಾಟಕ ಪ್ರದರ್ಶನ- ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    – ಶಾಹೀನ್ ಶಾಲೆಯಲ್ಲಿ ನಾಟಕ ಪ್ರದರ್ಶನ

    ನವದೆಹಲಿ: ರಾಜಕೀಯ ಪಕ್ಷಗಳು ದೇಶದ್ರೋಹ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಆದ್ದರಿಂದ ಸೂಕ್ತ ಮಾರ್ಗಸೂಚಿಗಳನ್ನು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಬೀದರ್‍ನ ಶಾಹೀನ್ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ವಿಚಾರಣೆ ನಡೆಸಲು ನಿರಾಕರಿಸಿದೆ.

    ಬೀದರ್ ನ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕ ವಿರುದ್ಧ ದಾಖಲಿಸಿರುವ ದೇಶದ್ರೋಹದ ಎಫ್‍ಐಆರ್ ರದ್ದುಪಡಿಸಬೇಕು. ದೇಶ ದ್ರೋಹ ಕಾಯ್ದೆಯ ದುರ್ಬಳಕೆ ಆಗುತ್ತಿರುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಅವರು ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ ಖಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠ, ಎಫ್‍ಐಆರ್ ರದ್ದು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಬೇಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಇದನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ. ದೇಶದ್ರೋಹದ ಕೇಸ್ ದಾಖಲು ಮಾಡಲು ಈಗಾಗಲೇ ನಿರ್ದೇಶನಗಳಿವೆ ಮತ್ತೆ ಅವುಗಳನ್ನು ಉಲ್ಲೇಖಿಸುವ ಅಗತ್ಯ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

    ಸಿಎಎ ವಿರೋಧಿಸಿವ ನಾಟಕವನ್ನು ವೇದಿಕೆ ಮೇಲೆ ಪ್ರದರ್ಶನ ಮಾಡಿದ ಹಿನ್ನೆಲೆ ಶಾಹೀನ್ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ, ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ವಿದ್ಯಾರ್ಥಿಯೊಬ್ಬರ ಪಾಲಕರಾದ ಅನುಜಾ ಮಿನ್ಸಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು. ಬೀದರ್ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶಾಲಾ ಆಡಳಿತ ಮಂಡಳಿಯ 5 ಜನರಿಗೆ ನಿರೀಕ್ಷಣಾ ಜಾಮೀನು ನೀಡಿದೆ.

  • ಶಾಹೀನ್ ಶಾಲೆ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದು ಕೋರಿ ಸುಪ್ರೀಂಗೆ ಅರ್ಜಿ

    ಶಾಹೀನ್ ಶಾಲೆ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದು ಕೋರಿ ಸುಪ್ರೀಂಗೆ ಅರ್ಜಿ

    – ದೇಶದ್ರೋಹದ ಕೇಸುಗಳಿಗಾಗಿ ಸಮಿತಿ ರಚಿಸುವಂತೆ ಒತ್ತಾಯ

    ನವದೆಹಲಿ: ಬೀದರ್‌ನ ಶಾಹೀನ್ ಶಾಲೆಯಲ್ಲಿ ಸಿಎಎ ನಾಟಕ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್‍ಐಆರ್ ರದ್ದು ಗೊಳಿಸುವಂತೆ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

    ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕರ ವಿರುದ್ಧ ದೇಶದ್ರೋಹದ ಸೆಕ್ಷನ್ ಅಡಿ ದಾಖಲಿಸಿರುವ ಎಫ್‍ಐಆರ್ ರದ್ದು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪೋಲಿಸರು ದೇಶದ್ರೋಹದ ಕೇಸ್ ದಾಖಲಿಸಿರುವುದು ಸರಿಯಲ್ಲ. ಇದು ವ್ಯಕ್ತಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ಅಷ್ಟೇ ಅಲ್ಲದೆ ಕೆಲವು ರಾಜ್ಯ ಸರ್ಕಾರಗಳು ತಮ್ಮ ಅನುಕೂಲಕ್ಕೆ ಈ ಸೆಕ್ಷನ್ ಬಳಕೆ ಮಾಡಿಕೊಳ್ಳುತ್ತಿವೆ. ಹಾಗಾಗಿ ದೇಶದ್ರೋಹದ ಕೇಸ್ ದಾಖಲು ಮಾಡಿಕೊಳ್ಳುವ ಮುನ್ನ ಘಟನೆಯ ಪೂರ್ವಪರಗಳ ಬಗ್ಗೆ ತನಿಖೆ ನಡೆಯಬೇಕು. ಇದಕ್ಕಾಗಿ ಸಮಿತಿಯೊಂದನ್ನ ರಚಿಸಬೇಕು. ಸಮಿತಿಯೂ ಘಟನೆಯನ್ನು ಅಧ್ಯಯನ ನಡೆಸಿ ಒಪ್ಪಿಗೆ ನೀಡಿದ ಬಳಿಕವಷ್ಟೇ ದೇಶದ್ರೋಹದ ಕೇಸ್ ದಾಖಲಾಗುವಂತೆ ನಿರ್ದೇಶನಗಳನ್ನು ಸುಪ್ರೀಂಕೋರ್ಟ್ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

    ಕರ್ನಾಟಕ ಹೈಕೋರ್ಟ್ ನಲ್ಲೂ ಎಫ್‍ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಬಾಕಿ ಇದೆ. ಈ ನಡುವೆ ಅರ್ಜಿ ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಬರಲಿದೆ.

    ಏನಿದು ಪ್ರಕರಣ?
    ಜನವರಿ 23 ರಂದು ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಮಾಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿ ದೇಶಾದ್ಯಂತ ಬಾರಿ ಸುದ್ದಿಯಾದ ಬಳಿಕ ಬಿಜೆಪಿಯ ಯುವ ಮೋರ್ಚಾ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಪೊಲೀಸರು ತನಿಖೆ ಮಾಡಿ ಸಂಸ್ಥೆಯ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ವಿದ್ಯಾರ್ಥಿಯ ತಾಯಿ ನಶೀಮಾ ಎಂಬವರನ್ನು ಪೊಲೀಸರು ಬಂಧಿಸಿದ್ದರು.

    ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿದ್ದ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ಶಾಲೆಯ ಮಗುವಿನ ತಾಯಿ ನಶೀಮಾ 15 ದಿನಗಳ ಬಳಿಕ ಅಂದ್ರೆ ಫೆಬ್ರವರಿ 14ರಂದು ಕೋರ್ಟ್ ಜಾಮೀನು ನೀಡಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮಾವತಿ ಮನಗೂಳಿ ಅವರು ಜಾಮೀನು ಮಂಜೂರು ಮಾಡಿದ್ದರು. ಫೆಬ್ರವರಿ 11 ರಂದು ಆರೋಪಿಗಳ ಪರವಾಗಿ ಬೆಂಗಳೂರಿನ ಹಿರಿಯ ವಕೀಲರಾದ ಬಿ.ಟಿ ವೆಂಕಟೇಶ್ ಅವರು ವಾದ ಮಂಡಿಸಿದ್ದರು. ಫೆಬ್ರವರಿ 14ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಜಾಮೀನು ನೀಡಿತ್ತು.

  • ಶಾಹೀನ್ ಶಾಲೆಯ ಶಿಕ್ಷಕಿ, ಮಗುವಿನ ತಾಯಿಗೆ ಜಾಮೀನು

    ಶಾಹೀನ್ ಶಾಲೆಯ ಶಿಕ್ಷಕಿ, ಮಗುವಿನ ತಾಯಿಗೆ ಜಾಮೀನು

    ಬೀದರ್: ಕಳೆದ 15 ದಿನಗಳಿಂದ ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿದ್ದ ಬೀದರ್ ನ ಶಾಲೆಯ ಮುಖ್ಯ ಶಿಕ್ಷಕಿ ಫರಿನಾಭಾನು ಮತ್ತು ಶಾಲೆಯ ಮಗುವಿನ ತಾಯಿ ನಶೀಮಾಗೆ ಇಂದು ಕೋರ್ಟ್ ಜಾಮೀನು ನೀಡಿದೆ.

    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮಾವತಿ ಮನಗೂಳಿಯವರು ಜಾಮೀನು ಮಂಜೂರು ಮಾಡಿದ್ದಾರೆ. ಫೆ.11 ರಂದು ಆರೋಪಿಗಳ ಪರವಾಗಿ ಬೆಂಗಳೂರಿನ ಹಿರಿಯ ವಕೀಲರಾದ ಬಿ.ಟಿ ವೆಂಕಟೇಶ್‍ರವರು ವಾದ ಮಂಡಿಸಿದ್ದರು. ಇಂದಿಗೆ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಇಂದು ಜಾಮೀನು ನೀಡಿದೆ.

    ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಸಿಎಎ ವಿರುದ್ಧ ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಮಕ್ಕಳಿಂದ ನಾಟಕ ಆಡಿಸಲಾಗಿತ್ತು. ಅದರಲ್ಲಿ ಯಾರಾದರೂ ದಾಖಲೆ ಕೇಳಿ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂಬ ಸಂಭಾಷಣೆ ಇದ್ದ ಕಾರಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೂರು ದಾಖಲಾಗಿತ್ತು. ಇದಾದ ನಂತರ ಪೊಲೀಸರು ಶಾಲೆಯ ಮುಖ್ಯ ಶಿಕ್ಷಕಿ ಫರೀದಾಭಾನು ಮತ್ತು ಶಾಲೆಯ ಮಗುವಿನ ತಾಯಿ ನಶೀಮಾ ಎಂಬವರನ್ನು ಕಳೆದ 15 ದಿನಗಳಿಂದ ಬಂಧಿಸಿ ಜೈಲಿನಟ್ಟಿದ್ದರು.