Tag: ಶಾಸಕ ಹರ್ಷವರ್ಧನ್

  • ಜ್ಯೂಬಿಲಿಯೆಂಟ್ ಕಾರ್ಖಾನೆ ಪ್ರಕರಣದ ತನಿಖೆ- ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಅಸಮಾಧಾನ

    ಜ್ಯೂಬಿಲಿಯೆಂಟ್ ಕಾರ್ಖಾನೆ ಪ್ರಕರಣದ ತನಿಖೆ- ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಅಸಮಾಧಾನ

    – ಸತ್ಯ ಎಲ್ಲರಿಗೂ ಗೊತ್ತು ಹೇಳಲು ಧೈರ್ಯವಿಲ್ಲ 

    – ತಮ್ಮದೇ ಸರ್ಕಾರದ ವಿರುದ್ಧ ಹರ್ಷವರ್ಧನ್ ಬೇಸರ

    ಮೈಸೂರು: ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ತನಿಖೆ ವಿಚಾರದಲ್ಲಿ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಹಾಗೂ ಹೋರಾಟದ ವಿಚಾರದಲ್ಲಿ ಸರ್ಕಾರದಿಂದ ನನಗೆ ಬೆಂಬಲ ಸಿಕ್ಕಿಲ್ಲ. ಜ್ಯೂಬಿಲಿಯೆಂಟ್ ವಿಚಾರದಲ್ಲಿ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೆ ಹೇಳಲು ಯಾರಿಗೂ ಧೈರ್ಯವಿಲ್ಲ. ಕಂಪನಿಯದ್ದು ತಪ್ಪೇ ಇಲ್ಲ ಎಂಬಂತೆ ಬಿಂಬಿಸಿ ನನ್ನನ್ನು ತಪ್ಪಿತಸ್ಥನಂತೆ ಮಾಡಲಾಗಿದೆ. ಐಎಎಸ್ ಅಧಿಕಾರಿ ಹರ್ಷಗುಪ್ತ ಅವರಿಂದ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದೆ. ನೇಮಕ ಪ್ರಕ್ರಿಯೆ ವಿಳಂಬವಾಗಿದ್ದಕ್ಕೆ ತನಿಖೆ ಹಾದಿ ತಪ್ಪಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲವು ಇಲಾಖೆಗಳು ಹರ್ಷಗುಪ್ತಾ ಅವರಿಗೆ ಸಹಕಾರ ನೀಡಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಹರ್ಷಗುಪ್ತಾ ಅವರಂಥ ಅಧಿಕಾರಿಯೇ ಏನೂ ಮಾಡಲು ಸಾಧ್ಯವಾಗಿಲ್ಲ ಎಂದರೆ ಏನು ಹೇಳೋಕಾಗುತ್ತೆ. ತನಿಖೆಗೆ ಸಹಕರಿಸದಿರುವುದು ಎಲ್ಲೋ ಒಂದು ಕಡೆ ನಿರಾಸೆಯಾಗಿದೆ ಎಂದರು.

    ರೋಗಿ ನಂ.52 ನಿಂದ ಸರ್ಕಾರದ ಬೊಕ್ಕಸಕ್ಕೆ 8 ಕೋಟಿ ರೂ. ನಷ್ಟವಾಗಿದೆ. ಕಂಪನಿ ಕೆಲಸ ಶುರುಮಾಡಿದೆ. ನಾಳೆ ಮತ್ತೆ ಪುನರಾವರ್ತನೆ ಆಗಲ್ಲ ಅನ್ನೋದು ಏನು ಗ್ಯಾರೆಂಟಿ. ನನ್ನ ಸ್ವಾರ್ಥಕ್ಕಾಗಿಯೋ ಅಥವಾ ಲಾಭಕ್ಕಾಗಿಯೋ ನಾನು ಹೋರಾಟ ಮಾಡಿಲ್ಲ. ರೋಗಿ ನಂ.52 ನಂಜನಗೂಡು ಹೆಸರನ್ನು ಹೀನಾಯವಾಗಿ ಹಾಳು ಮಾಡಿದ್ದಾನೆ. ಅತ್ಯಾಚಾರಕ್ಕಿಂತ ಹೆಚ್ಚು ಹೀನಾಯವಾಗಿ ಎಫೆಕ್ಟ್ ಆಗಿದೆ. ಆತನಿಗೆ ನೋಟಿಸ್ ನೀಡುವ ಬದಲು ಸಸ್ಪೆಂಡ್ ಮಾಡಬೇಕಿತ್ತು ಎಂದು ಹೇಳಿದ್ದಾರೆ ಒತ್ತಾಯಿಸಿದ್ದಾರೆ.

  • ಅಂಬೇಡ್ಕರ್ ಪ್ರತಿಮೆಗೆ ಬೇಕಾಬಿಟ್ಟಿ ಪುಷ್ಪಾರ್ಚನೆ – ಬಿಜೆಪಿ ಶಾಸಕನ ವಿರುದ್ಧ ದಲಿತ ಸಂಘಟನೆಗಳು ಗರಂ

    ಅಂಬೇಡ್ಕರ್ ಪ್ರತಿಮೆಗೆ ಬೇಕಾಬಿಟ್ಟಿ ಪುಷ್ಪಾರ್ಚನೆ – ಬಿಜೆಪಿ ಶಾಸಕನ ವಿರುದ್ಧ ದಲಿತ ಸಂಘಟನೆಗಳು ಗರಂ

    ಮೈಸೂರು: ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಅಳಿಯ ಬಿಜೆಪಿ ಶಾಸಕ ಹರ್ಷವರ್ಧನ್ ಅವರು ಅಂಬೇಡ್ಕರ್ ಪುತ್ಥಳಿಗೆ ಬೇಕಾಬಿಟ್ಟಿ ಪುಷ್ಪಾರ್ಚನೆ ಮಾಡಿದ್ದಾರೆ. ಈ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳು ಶಾಸಕರ ವಿರುದ್ಧ ಗರಂ ಆಗಿದಾರೆ.

    ಮಾವ ಅಂಬೇಡ್ಕರ್ ಅನುಯಾಯಿ ಆದ್ರೆ ಅಳಿಯನಿಂದ ಅಂಬೇಡ್ಕರ್‍ಗೆ ಅವಮಾನವಾಗಿದೆ ಎಂದು ಹರ್ಷವರ್ಧನ್ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.

    ಶನಿವಾರ ಮೊರಾರ್ಜಿ ದೇಸಾಯಿ ವಸತಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಹರ್ಷವರ್ಧನ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಆಗಮಿಸಿದ್ದರು. ಈ ವೇಳೆ ಅಂಬೇಡ್ಕರ್ ಪುತ್ಥಳಿಗೆ ಎಲ್ಲಾ ನಾಯಕರು ಪುಷ್ಪರ್ಚನೆ ಮಾಡಿದ್ದಾರೆ. ಆದ್ರೆ ಶಾಸಕ ಹರ್ಷವರ್ಧನ್ ಮಾತ್ರ ಬೇಕಾಬಿಟ್ಟಿಯಾಗಿ ಪುಷ್ಪರ್ಚನೆ ಮಾಡಿದ್ದಾರೆ.

    ಅಂಬೇಡ್ಕರ್ ಪುತ್ಥಳಿಯನ್ನೆ ನೋಡದೇ ಪುಷ್ಪರ್ಚನೆ ಮಾಡಿ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳು ಸಿಟ್ಟಿಗೆದ್ದಿದ್ದು, ಹರ್ಷವರ್ಧನ್ ಅವರು ಪುತ್ಥಳಿಗೆ ಬೇಕಾಬಿಟ್ಟಿ ಪುಷ್ಪಾರ್ಚನೆ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಪುಷ್ಪಾರ್ಚನೆ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಮಾತಿಗಿಳಿದಿದ್ದ ಹರ್ಷವರ್ಧನ್ ಅವರು, ಮಾತನಾಡುತ್ತಲೇ ಹೂವುಗಳನ್ನ ಪುತ್ಥಳಿಗೆ ಎಸೆದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹರ್ಷವರ್ಧನ್ ಕ್ಷಮೆಯಾಚಿಸಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv