Tag: ಶಾಸಕ ಸುರೇಶ್ ಗೌಡ

  • ಡಿಕೆಸು ಸೋಲಿಗೆ ಸಿದ್ದರಾಮಯ್ಯ & ಟೀಂ ಕಾರಣ: ಹೊಸ ಬಾಂಬ್ ಸಿಡಿಸಿದ ಸುರೇಶ್ ಗೌಡ

    ಡಿಕೆಸು ಸೋಲಿಗೆ ಸಿದ್ದರಾಮಯ್ಯ & ಟೀಂ ಕಾರಣ: ಹೊಸ ಬಾಂಬ್ ಸಿಡಿಸಿದ ಸುರೇಶ್ ಗೌಡ

    ತುಮಕೂರು: ಲೋಕಸಭಾ ಚುನಾವಣೆಯಲ್ಲಿ (Lok sabha election 2024) ಡಿ.ಕೆ ಸುರೇಶ್ (DK Suresh) ಸೋಲಿಗೆ ಸಿದ್ದರಾಮಯ್ಯ (CM Siddaramaiah) ಹಾಗೂ ಅವರ ಟೀಮ್ ಕಾರಣ ಎಂದು ಬಿಜೆಪಿ (BJP) ಶಾಸಕ ಸುರೇಶ್ ಗೌಡ (Sureshgowda) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನವರೇ ಮುಂದುವರಿಯಬೇಕು ಎಂದು ಅಹಿಂದ ಟೀಮ್ ಯಾವಾಗಲೂ ಕೆಲಸ ಮಾಡುತ್ತಿದೆ. ಆ ಅಹಿಂದ ಟೀಮ್ ಮತ್ತು ಸಿದ್ದರಾಮಯ್ಯ ಸೇರಿ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದಾರೆ. ಚುನಾವಣೆಗಿಂತ ಮೊದಲೇ ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ ಹಾಗೂ ಸಿದ್ದರಾಮಯ್ಯ ಇಷ್ಟೂ ಜನ ಸೇರಿ ಡಿ.ಕೆ ಸುರೇಶ್ ಅವರನ್ನು 2 ಲಕ್ಷ ಮತಗಳ ಅಂತರದಿಂದ ಸೋಲಿಸ್ತಾರೆ ಎಂದು ನಾನು ಹೇಳಿದ್ದೆ. ಅದು ಈಗ ನಿಜವಾಗಿದ್ದು, ಅದ್ಕಕಿಂತ ಹೆಚ್ಚಿನ ಅಂತರದಲ್ಲಿ ಅವರು ಸೋತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆಯೂ ಮೋದಿ ಪ್ರಮಾಣವಚನಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಆಹ್ವಾನ

    ಡಿ.ಕೆ ಸುರೇಶ್ ಅವರ ಸೋಲು, ಸಂಚಿನ ಒಂದು ಭಾಗವಾಗಿದೆ. ಡಿ.ಕೆ ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗಬಾರದು. ಅವರ ನೈತಿಕತೆ ಕುಸಿಯಬೇಕು ಎಂದು ಹೀಗೆ ಮಾಡಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಆಗಲ್ಲ, ಈ ಸರ್ಕಾರ ಉಳಿಯಲ್ಲ. ಇಲ್ಲಿಂದ ರಾಜಕೀಯ ಧ್ರುವೀಕರಣ ಪ್ರಾರಂಭವಾಗಿ, ಕಾಂಗ್ರೆಸ್‍ನಲ್ಲಿ ಒಳಜಗಳ ಶುರುವಾಗಲಿದೆ. ಈಗಾಗಲೇ ಬೆಳಗಾವಿಯಲ್ಲಿ ಕಿತ್ತಾಟ ಶುರುವಾಗಿದೆ. ಬೆಂಗಳೂರು ಗ್ರಾಮಾಂತರದ ಸೋಲಿನಿಂದ ಇಲ್ಲಿಯೂ ಕೂಡ ಜಗಳ ಶುರುವಾಗಿದೆ. ಇನ್ನೂ ಸರ್ಕಾರ ಪತನವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರದ ಪ್ರಜ್ವಲ್ ನಿವಾಸದಲ್ಲಿ ಎಸ್‍ಐಟಿಯಿಂದ ಸ್ಥಳ ಮಹಜರು

  • ವೈದ್ಯಕೀಯ ಕಾಲೇಜುಗಳು ಬಿಎಸ್‍ವೈಗೆ ಕಡಲೆಕಾಯಿ ಅಂಗಡಿಯೇ – ಸುರೇಶ್ ಗೌಡ ಪ್ರಶ್ನೆ

    ವೈದ್ಯಕೀಯ ಕಾಲೇಜುಗಳು ಬಿಎಸ್‍ವೈಗೆ ಕಡಲೆಕಾಯಿ ಅಂಗಡಿಯೇ – ಸುರೇಶ್ ಗೌಡ ಪ್ರಶ್ನೆ

    – ಅನರ್ಹರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಹೇಳಿಕೆ

    ಮಂಡ್ಯ: ವೈದ್ಯಕೀಯ ಕಾಲೇಜುಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಡ್ಲೇಕಾಯಿ ಅಂಗಡಿಗಳಾಗಿರಬೇಕು ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಪೇಟೆಗೆ ವೈದ್ಯಕೀಯ ಕಾಲೇಜು ನೀಡುವ ಭರವಸೆ ನೀಡಿದ ಬಿಎಸ್‍ವೈ ವಿರುದ್ಧ ಕಿಡಿಕಾರಿದರು. ಅನರ್ಹ ಶಾಸಕರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆಡೆ ಹಿಂದೆ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಹಣವಿಲ್ಲ ಎಂದು ತಡೆಹಿಡಿಯುತ್ತಿದ್ದಾರೆ. ಇಂದಹ ಸಂದರ್ಭದಲ್ಲಿ ಅನರ್ಹ ಶಾಸಕರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವರೇ ಎಂದು ಪ್ರಶ್ನಿಸಿದ್ದಾರೆ.

    ಸೋಮವಾರದಿಂದ ನೀತಿಸಂಹಿತೆ ಜಾರಿಯಾಗುತ್ತದೆ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ರಾಜಕೀಯ ಗಿಮಿಕ್ ಅಷ್ಟೇ. ನಾರಾಯಣಗೌಡರನ್ನು ಅಭ್ಯರ್ಥಿ ಮಾಡಬಹುದು ಅನಿಸುತ್ತೆ ಅದಕ್ಕೆ ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಕಾರ್ಯರೂಪಕ್ಕೆ ತಂದಿದ್ದಾರೆ? ಮಾಧ್ಯಮಗಳೇ ಅವಲೋಕಿಸಿ ನೋಡಿ ತಿಳಿಯುತ್ತದೆ ಎಂದು ಹರಿಹಾಯ್ದರು.

    ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಕುರಿತು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಜಾತ್ಯಾತೀತ ತತ್ವದಲ್ಲಿವೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲಾ ಕಟಿಬದ್ಧರಾಗಿರುತ್ತೇವೆ. ಜೆಡಿಎಸ್ ಪಕ್ಷದ ಯಾವೊಬ್ಬ ಶಾಸಕನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಪಟ್ಟಾಭಿಷೇಕ ವೇದಿಕೆಯಲ್ಲೇ, ನಿಖಿಲ್ ಮದುವೆ ಮಾತು!

    ಪಟ್ಟಾಭಿಷೇಕ ವೇದಿಕೆಯಲ್ಲೇ, ನಿಖಿಲ್ ಮದುವೆ ಮಾತು!

    – ಮಂಡ್ಯ ಅಳಿಯ ಆಗ್ತಾರಾ ನಿಖಿಲ್?

    ಮಂಡ್ಯ: ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರು ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡುವ ಸಂದರ್ಭದಲ್ಲೇ ಅವರ ಮದುವೆ ಬಗ್ಗೆಯೂ ಜೆಡಿಎಸ್ ಶಾಸಕ ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ.

    ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿದ್ದ ನಾಗಮಂಗಲ ಶಾಸಕ ಸುರೇಶ್ ಗೌಡ ಅವರು, ನಿಮ್ಮ ನಿಮ್ಮ ಬೂತ್ ಗಳಲ್ಲಿ ಕೆಲಸ ಆರಂಭಿಸಿ. ಯಾರು ಏನು ಟೀಕೆ ಮಾಡಿದರೂ ಸಂತೋಷವಾಗಿ ಸ್ವೀಕರಿಸಿ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ. ಮಂಡ್ಯ ಜಿಲ್ಲೆಯ ಜೆಡಿಎಸ್ ಕಟ್ಟಾಳುಗಳು ಯಾವ ರೀತಿ ಇದ್ದಾರೆ ಎಂಬುದನ್ನು ಮತ ನೀಡಿ ಸಾಬೀತು ಪಡಿಸಬೇಕಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

    ಇದೇ ವೇಳೆ ವೇದಿಕೆ ಮೇಲಿದ್ದ ನಿಖಿಲ್‍ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನಿಖಿಲ್ ಬೇರೆಯಲ್ಲ ನಮ್ಮ ಮನೆಯ ಮಗ, ನಾಳೆ ಅಳಿಯ ಆದರೂ ಆಗಬಹುದು ಎಂದರು. ಈ ಮೂಲಕ ಪರೋಕ್ಷವಾಗಿ ನಿಖಿಲ್ ಮಂಡ್ಯದ ಯುವತಿಯನ್ನು ಮದುವೆಯಾಗುತ್ತಾರೆ ಎಂದು ಶಾಸಕ ಸುರೇಶ್‍ಗೌಡ ಸುಳಿವು ನೀಡಿದ್ರು.

    ಈಗಾಗಲೇ ರೇವಣ್ಣ ಅವರ ಮಕ್ಕಳು ಮಂಡ್ಯದ ಅಳಿಯರಾಗಿದ್ದಾರೆ. ಇವರು ಕೂಡ ಮುಂದೆ ಇಲ್ಲಿನ ಅಳಿಯ ಆಗಬಹುದು. ಇವರನ್ನು ನಾವು ನೆರೆಯ ಆಂಧ್ರ, ತಮಿಳುನಾಡಿನಿಂದ ಕರೆತಂದಿಲ್ಲ. ಇಲ್ಲಿನ ಮಗ ಆಗಿದ್ದಾರೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.

    ನಿಖಿಲ್ ವಿರುದ್ಧ ಮದುವೆಯ ವಿಚಾರವನ್ನೇ ಪ್ರಸ್ತಾಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಪ್ರಚಾರ ನಡೆಸಿದ್ದರು. ಸದ್ಯ ವೇದಿಕೆಯಲ್ಲೇ ಮದುವೆ ವಿಚಾರ ಪ್ರಸ್ತಾಪ ಮಾಡುವ ಮೂಲಕ ಶಾಸಕರು ತಿರುಗೇಟು ನೀಡಿದ್ದಾರೆ. ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ಕೂಡ ಒಗಟ್ಟಿನ ಮಂತ್ರ ಜಪಿಸಿ ನಿಖಿಲ್ ಗೆಲುವಿಗೆ ಶ್ರಮಿಸಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮತ ಹಾಕ್ಲಿಲ್ಲ ಅಂತ ಮನೆ ಕೆಡವಿದ್ರು – ಮಂಡ್ಯದಲ್ಲಿ ಮತ್ತೆ ಜೆಡಿಎಸ್, ಕಾಂಗ್ರೆಸ್ ಕಿತ್ತಾಟ!

    ಮತ ಹಾಕ್ಲಿಲ್ಲ ಅಂತ ಮನೆ ಕೆಡವಿದ್ರು – ಮಂಡ್ಯದಲ್ಲಿ ಮತ್ತೆ ಜೆಡಿಎಸ್, ಕಾಂಗ್ರೆಸ್ ಕಿತ್ತಾಟ!

    ಮಂಡ್ಯ: ವಿಧಾನಸೌಧದಲ್ಲಿ ಮೈತ್ರಿ ಸರ್ಕಾರ ರಚಿಸಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸ್ಥಿತಿ ಜಿಲ್ಲೆಯಲ್ಲಿ ತದ್ವಿರುದ್ಧವಾಗಿದೆ.

    ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವಿನ ರಾಜಕೀಯ ದ್ವೇಷ ಎಷ್ಟಿದೆ ಅಂದರೆ, ಕಳೆದ ವಿಧಾನಸೌಧ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಚಲುವರಾಯಸ್ವಾಮಿಗೆ ಮತ ಹಾಕಿದ್ದಾರೆ ಎಂಬ ದ್ವೇಷದಲ್ಲಿ ನಾಗಮಂಗಲ ಶಾಸಕ ಸುರೇಶ್‍ಗೌಡ ಮತದಾರರೊಬ್ಬರ ಮನೆ ಒಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಬಚ್ಚಿಕೊಪ್ಪಲು ಗೇಟ್‍ನಿಂದ ಹುರುಳಿಗಂಗನಹಳ್ಳಿಗೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ರಸ್ತೆ ಆಗಲಿಕಾರಣಕ್ಕೆ ಮನೆ ಅಡ್ಡ ಬರುತ್ತಿದೆ ಎಂದು ಮನೆ ಕೆಡವಲಾಗಿದೆ. ಆದರೆ ತಮ್ಮ ಮನೆಯನ್ನ ಕಡವದಂತೆ ಮನೆ ಒಡತಿ ಸುಧಾಮಣಿ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡಿದ ಅಧಿಕಾರಿಗಳು ಮನೆ ಕೆಡವಿ ಹಾಕಿದ್ದಾರೆ.

    ಅಧಿಕಾರಿಗಳ ದರ್ಪ ಎಷ್ಟಿದೆ ಎಂದರೆ ಮನೆಯ ಪಕ್ಕ ಇದ್ದ ಕೊಟ್ಟಿಗೆಯನ್ನು ಬಿಟ್ಟಿಲ್ಲ. ಕೊಟ್ಟಿಗೆಯನ್ನು ಕಡವಿದ ಕಾರಣ ಅವಶೇಷಗಳಡಿ ಸಿಲುಕಿರುವ ಹಸು-ಎಮ್ಮೆಗಳು ನರಳಾಡುತ್ತಿದ್ದು, ಶಾಸಕ ಸುರೇಶ್‍ಗೌಡ ಕುಮ್ಮಕ್ಕಿನಿಂದ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಚಲುವರಾಯಸ್ವಾಮಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮನೆ ಒಡತಿ ಸುಧಾಮಣಿ ಅವರು, 6 ತಿಂಗಳಿಂದ ಪದೇ ಪದೇ ಅಧಿಕಾರಿಗಳು ಮನೆ ಬಳಿ ಬಂದು ಸಮಸ್ಯೆ ನೀಡುತ್ತಿದ್ದಾರೆ. ಆದರೆ ಈ ಬಗ್ಗೆ 3 ಬಾರಿ ಶಾಸಕರಿಗೂ ದೂರು ನೀಡಲಾಗಿದೆ. ಅಧಿಕಾರಿಗಳಿಗೆ ಒತ್ತಡ ಹಾಕಿದ ಕಾರಣ ಕೃತ್ಯ ನಡೆಸಿದ್ದು, ನಮಗೇ ನ್ಯಾಯ ದೊರೆಯದಿದ್ದರೆ ಇಡೀ ಕುಟುಂಬ ಸಿಎಂ ಕುಮಾರಸ್ವಾಮಿ ಅವರ ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

    https://www.youtube.com/watch?v=AtcVfWX1fsw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv