Tag: ಶಾಸಕ ಸುರೇಶ್ ಕುಮಾರ್

  • ಕಾಂಗ್ರೆಸ್ ಸ್ಪೇಸ್ ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಲಿಲ್ಲ, ಇದು ನಮ್ಮ ಪುಣ್ಯ: ಸುರೇಶ್ ಕುಮಾರ್

    ಕಾಂಗ್ರೆಸ್ ಸ್ಪೇಸ್ ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಲಿಲ್ಲ, ಇದು ನಮ್ಮ ಪುಣ್ಯ: ಸುರೇಶ್ ಕುಮಾರ್

    – ಬಿಜೆಪಿ ಯೋಗ್ಯರಿಗೆ ಟಿಕೆಟ್ ಕೊಟ್ಟಿದೆ, ಅಯೋಗ್ಯರಿಗಲ್ಲ: ಯತ್ನಾಳ್‍ಗೆ ತಿರುಗೇಟು
    – ಸಮ್ಮಿಶ್ರ ಸರ್ಕಾರದಲ್ಲಿ ದುಷ್ಟ ಜೋಡೆತ್ತುಗಳಿವೆ: ತೇಜಸ್ವಿನಿ ಗೌಡ

    ಬೆಂಗಳೂರು: ಕಾಂಗ್ರೆಸ್‍ನವರು ಸ್ಪೇಸ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿಲ್ಲ. ಇದು ನಮ್ಮ ಪುಣ್ಯ. ಕಾಂಗ್ರೆಸ್ ನಾಯಕರಿಗೆ ಪ್ರಬುದ್ಧತೆ ಬಂದಿರುವುದು ಸಂತೋಷ ತಂದಿದೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಸ್ಪೇಸ್ ಸರ್ಜಿಕಲ್ ಸ್ಟ್ರೈಕ್‍ನಿಂದ ಬಿಜೆಪಿಗೆ ಲಾಭ ವಿಚಾರ ಎನ್ನುವ ಕಾಂಗ್ರೆಸ್ ನಾಯಕರ ಟೀಕೆಗೆ ತಿರುಗೇಟು ಕೊಟ್ಟರು. ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಕಾಂಗ್ರೆಸ್‍ನವರು ಪೂರ್ಣ ಕೇಳಲಿ. ಬಳಿಕ ಪ್ರತಿಕ್ರಿಯೆ ನೀಡಲಿ. ಸ್ಪೇಸ್ ಸರ್ಜಿಕಲ್ ಸ್ಟ್ರೈಕ್ ಶ್ರೇಯಸ್ಸು ಡಿಆರ್ ಡಿಒ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದು ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ವಿಜ್ಞಾನಿಗಳ ಸಾಧನೆಯನ್ನು ದೇಶಕ್ಕೆ ತಿಳಿಯಲಿ ಎನ್ನುವ ಕಾರಣಕ್ಕೆ ಸುದ್ದಿಗೋಷ್ಠಿ ಮಾಡಿದರು ಎಂದು ತಿಳಿಸಿದರು.

    ಸಮ್ಮಿಶ್ರ ಸರ್ಕಾರದ ಅವಸ್ಥೆ ಹರಿದ ಬಟ್ಟೆಯಂತಾಗಿದೆ. ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‍ಗೆ ಅಭ್ಯರ್ಥಿ ಸಿಕ್ಕಿಲ್ಲ. ಹೊಸ ರೀತಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಚುನಾವಣೆ ಹಾಸ್ಯಾಸ್ಪದವಾಗಿ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.

    ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಿದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದು ಮತದಾರರನ್ನು ಬ್ಲಾಕ್ ಮೇಲ್ ಮಾಡುವ ಹೇಳಿಕೆ. ಮಂಡ್ಯದಲ್ಲಿ ಮುಕ್ತ, ಶಾಂತಿಯುತ ಮತದಾನ ನಡೆಯಬೇಕು. ಈ ನಿಟ್ಟಿನಲ್ಲಿ ಮಂಡ್ಯವನ್ನು ಅತಿ ಸೂಕ್ಷ್ಮ ಕ್ಷೇತ್ರವೆಂದು ಚುನಾವಣಾ ಆಯೋಗ ಘೋಷಿಸಬೇಕು ಎಂದು ಆಗ್ರಹಿಸಿದರು.

    ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ತಪ್ಪಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ತೇಜಸ್ವಿನಿ ಅವರ ಹೆಸರನ್ನು ರಾಜ್ಯ ಕೋರ್ ಕಮಿಟಿ ಕಳಿಸಿತ್ತು ಹಾಗೂ ಟಿಕೆಟ್ ಸಿಗುವ ನಿರೀಕ್ಷೆ ಹೊಂದಿದ್ದೆವು. ಆದರೆ ಪಕ್ಷದ ತೀರ್ಮಾನದಂತೆ ಟಿಕೆಟ್ ಸಿಗಲಿಲ್ಲ. ಇದೇ ಕಾರಣಕ್ಕೆ ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿದೆ ಎಂದು ಹೇಳಲು ಸಾಧ್ಯವಿಲ್ಲ. ತುಮಕೂರು ಸಂಸದ ಮುದ್ದಹನುಮೇಗೌಡ ಅವರಂತೆ ತೇಜಸ್ವಿನಿ ಅನಂತ್‍ಕುಮಾರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿಲ್ಲ. ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿ, ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ಕೊಟ್ಟರು.

    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್ ಅವರು, ಬಿಜೆಪಿ ಹೈಕಮಾಂಡ್ ಯೋಗ್ಯರಿಗೆ ಟಿಕೆಟ್ ಕೊಟ್ಟಿದೆ. ಯಾವುದೇ ಅಯೋಗ್ಯರಿಗೆ ಟಿಕೆಟ್ ಕೊಟ್ಟಿಲ್ಲ. ಚುನಾವಣಾ ಕಣದಲ್ಲಿರುವ ಎಲ್ಲರೂ ಯೋಗ್ಯರೇ. ಎಲ್ಲರೂ ಗೆದ್ದು ಬರುತ್ತಾರೆ ಎಂದು ತಿರುಗೇಟು ಕೊಟ್ಟರು.

    ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ದುಷ್ಟ ಜೋಡೆತ್ತುಗಳಿವೆ. ಅವುಗಳು ಚುನಾವಣಾ ಸಂಸ್ಕೃತಿಯನ್ನು ಹಾಳು ಮಾಡುತ್ತಿವೆ ಎಂದು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

    ಮಂಡ್ಯದಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದೆ. ಸಿಎಂ ತಮ್ಮ ಮಗ ನಿಖಿಲ್ ನಾಮಪತ್ರ ಸಲ್ಲಿಸುವ ದಿನದಂದು 3 ಗಂಟೆಗೂ ಹೆಚ್ಚು ಕಾಲ ಮೈಸೂರು-ಬೆಂಗಳೂರು ರಸ್ತೆ ಬಂದ್ ಮಾಡಿಸಿದ್ದರು. ನಟರಾದ ಯಶ್, ಹಾಗೂ ದರ್ಶನ್ ವಿರುದ್ಧ ಜೆಡಿಎಸ್ ನಾಯಕರು ಅವಮಾನಕರ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಪತಿ ನಿಧನರಾದ ಬಳಿಕ ಮಹಿಳೆಯರು ರಾಜಕೀಯಕ್ಕೆ ಬರಲೇಬಾರದೆಂಬ ಧೋರಣೆಯನ್ನು ಜೆಡಿಎಸ್‍ನವರು ತೋರುತ್ತಿದ್ದಾರೆ. ಮಂಡ್ಯ ರಾಜಕಾರಣದಲ್ಲಿ ಸುಮಲತಾ ಪರ ಅಲೆ ಇದೆ. ಅಷ್ಟೇ ಅಲ್ಲದೆ ಸುಮಲತಾರಿಗೆ ಬಿಜೆಪಿ ಹಾಗೂ ರೈತಸಂಘದ ಬೆಂಬಲವಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಹೆದರಿದ್ದು, ಅವರ ಮನಸಲ್ಲಿರುವ ಭಯ ನಮಗೆ ಅರ್ಥವಾಗುತ್ತಿದೆ ಎಂದರು.

  • ಕೈ ಶಾಸಕರು ಉಳಿದುಕೊಂಡಿರುವ ಈಗಲ್‍ಟನ್ ರೆಸಾರ್ಟಿನಿಂದ ಸರ್ಕಾರಕ್ಕೆ ಬರಬೇಕಿದೆ 982 ಕೋಟಿ ರೂ.

    ಕೈ ಶಾಸಕರು ಉಳಿದುಕೊಂಡಿರುವ ಈಗಲ್‍ಟನ್ ರೆಸಾರ್ಟಿನಿಂದ ಸರ್ಕಾರಕ್ಕೆ ಬರಬೇಕಿದೆ 982 ಕೋಟಿ ರೂ.

    – ರೆಸಾರ್ಟಿನಿಂದ ಮರಳುವಾಗ ಬಾಕಿ ಹಣ ತನ್ನಿ : ಬಿಜೆಪಿ ವ್ಯಂಗ್ಯ
    – ಅಧಿವೇಶನದಲ್ಲಿ ದಂಡ ವಸೂಲಿ ಮಾಡ್ತೀವಿ ಎಂದಿದ್ದ ದೇಶಪಾಂಡೆ
    – ಸರ್ಕಾರಕ್ಕೆ ರೆಸಾರ್ಟ್ ಮೇಲೆ ಇಷ್ಟೊಂದು ಅಕ್ಕರೆ ಯಾಕೆ: ಸುರೇಶ್ ಕುಮಾರ್ ಪ್ರಶ್ನೆ

    ಬೆಂಗಳೂರು: ನೀವು ಉಳಿದುಕೊಂಡಿರುವ ರೆಸಾರ್ಟ್ ಸರ್ಕಾರಕ್ಕೆ ನೀಡಬೇಕಾದ 982 ಕೋಟಿ ರೂ. ದಂಡವನ್ನು ಬಾಕಿ ಉಳಿಸಿಕೊಂಡಿದೆ. ಅಲ್ಲಿಂದ ನೀವು ವಾಪಾಸ್ ಬರುವಾಗ ಹಣವನ್ನು ಪಡೆದುಕೊಂಡು ಬನ್ನಿ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರ ಕಾಲೆಳೆದಿದೆ.

    ಕಾಂಗ್ರೆಸ್‍ನ ಮರ್ಯಾದಾ ಪುರುಷೋತ್ತಮರಾದ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈಗಲ್ ಟನ್ ರೆಸಾರ್ಟ್ ಗೆ ಹೋಗಿದ್ದಾರೆ. ಸರ್ಕಾರಕ್ಕೆ ರೆಸಾರ್ಟ್ ಪಾವತಿಸಬೇಕಾದ ದಂಡದ ಹಣವನ್ನು ತಂದರೆ ಅದನ್ನು ರೈತರ ಸಾಲ ಮನ್ನಾಕ್ಕೆ ಬಳಸಬಹುದು ಎಂದು ಬಿಜೆಪಿ ವ್ಯಂಗ್ಯವಾಡಿದೆ.

    ಏನಿದು ಪ್ರಕರಣ?:
    ಬಿಡದಿ ಬಳಿ ಇರುವ ಈಗಲ್‍ಟನ್ ರೆಸಾರ್ಟ್ 77 ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಬರೋಬ್ಬರಿ 982 ಕೋಟಿ ರೂ. ದಂಡ ಹಾಕಿತ್ತು. ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಪೆನಾಲ್ಟಿ ಹಾಕಲು ಸಿದ್ದರಾಮಯ್ಯ ಸರ್ಕಾರದ ಕ್ಯಾಬಿನೆಟ್ ತೀರ್ಮಾನಿಸಿತ್ತು. 982 ಕೋಟಿ ರೂ. ದಂಡ ಕಟ್ಟಬೇಕು ಇಲ್ಲದೇ ಇದ್ದರೆ 77 ಎಕ್ರೆ ಭೂಮಿಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಈ ಹಿಂದೆ ತಿಳಿಸಿದ್ದರು. ಕ್ಯಾಬಿನೆಟ್ ತೀರ್ಮಾನ ಕೈಗೊಂಡು ಪೆನಾಲ್ಟಿ ವಿಧಿಸಿದ ಬೆನ್ನಲ್ಲೇ ರೆಸಾರ್ಟಿಗೆ ಗುಜರಾತ್‍ನ 42 ಜನ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದರು.

    2012ರಲ್ಲೂ ಬಿಜೆಪಿ ಸರ್ಕಾರ ಇದೇ ರೆಸಾರ್ಟ್ ನ 72 ಎಕರೆ ಸಕ್ರಮಕ್ಕೆ 82 ಕೋಟಿ ರೂ. ಪೆನಾಲ್ಟಿ ಹಾಕಿತ್ತು. ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆಂಧ್ರಪ್ರದೇಶದ ಉದ್ಯಮಿ ಮೇದಾ ಅಶೋಕ್‍ಗೆ ಈ ರೆಸಾರ್ಟ್ ಸೇರಿದ್ದು, 2000ನೇ ಇಸ್ವಿಯಲ್ಲಿ ರೆಸಾರ್ಟ್ ನಿರ್ಮಾಣಗೊಂಡಿದೆ. 2013ರಿಂದ ಅವರ ಮಕ್ಕಳಾದ ಮೇದಾ ಕಿರಣ್ ಕುಮಾರ್, ಮೇದಾ ಚೇತನ್ ಅವರು ರೆಸಾರ್ಟ್ ನಡೆಸುತ್ತಿದ್ದಾರೆ. ವಿಶೇಷವಾಗಿ 2006 ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವಾಗ ಇದೇ ರೆಸಾರ್ಟ್ ನಲ್ಲಿ ಜೆಡಿಎಸ್ ಶಾಸಕರು ತಂಗಿದ್ದರು.

    ಸುರೇಶ್ ಕುಮಾರ್ ಪೋಸ್ಟ್ : ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈಗಲ್ ಟನ್ ರೆಸಾರ್ಟ್ ಕುರಿತು ಹೇಳಿಕೊಂಡಿದ್ದಾರೆ. ಈಗಲ್ ಟನ್ ರೆಸಾರ್ಟ್ ನಿಂದ ಸರ್ಕಾರಕ್ಕೆ 982 ಕೋಟಿ ರೂ, ಬರಬೇಕಾಗಿದೆ. ಕೋರ್ಟ್ ಸೂಚನೆ ಕೊಟ್ಟಿದ್ದರೂ ಇದುವರೆಗೂ ರಾಜ್ಯ ಸರ್ಕಾರ ಹಣ ವಸೂಲಾತಿ ಮಾಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಹಣ ವಸೂಲಾತಿ ಮಾಡದಿರುವ ಬಗ್ಗೆ ಸದನದಲ್ಲಿ ಉತ್ತರಿಸಲು ತಡಬಡಾಯಿಸಿದ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅವರು, ಯಾವ ಮೂಲಾಜಿಗೂ ಈಡಾಗದೇ ರೆಸಾರ್ಟ್ ನಿಂದ 982 ಕೋಟಿ ವಸೂಲಿ ಮಾಡುತ್ತೇವೆ ಸ್ವಲ್ಪ ಸಮಯ ಕೊಡಿ ಎಂದು ಸ್ಪೀಕರ್ ಎದುರು ಮನವಿ ಮಾಡಿದ್ದರು. ಈಗ ಅದೇ ರೆಸಾರ್ಟ್ ನಲ್ಲಿ ಕಾಂಗ್ರೆಸ್ ತನ್ನ ಶಾಸಕರಿಗೆ ವಾಸ್ತವ್ಯ ಕಲ್ಪಿಸಿದೆ. ಈ ಮೂಲಕ ಮತ್ತೆ ಈಗಲ್ ಟನ್ ರೆಸಾರ್ಟ್ ಮುಲಾಜಿಗೆ ಮೈತ್ರಿ ಸರ್ಕಾರ ಬಿದ್ದಿದೆ ಎಂದು ಹೇಳಿದ್ದಾರೆ.

    ಮೈತ್ರಿ ಸರ್ಕಾರ ಮುರಿದು ಬೀಳುವ ಹಂತದಲ್ಲಿ ಕೈ ಶಾಸಕರ ರಕ್ಷಣೆಗೆ ಈಗಲ್ ಟನ್ ರೆಸಾರ್ಟ್ ಬಳಕೆ ಮಾಡಲಾಗುತ್ತಿದೆ. ಆದರೆ ಸರ್ಕಾರಿ ಜಮೀನನ್ನು ಕಬಳಿಸಿಕೊಂಡು ಈಗಲ್ ಟನ್ ರೆಸಾರ್ಟ್ ನೆಲೆ ನಿಂತಿದೆ. 77 ಎಕರೆ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡು, 982 ಕೋಟಿ ರೂ., ದಂಡಕ್ಕೆ ಗುರಿಯಾಗಿತ್ತು. ಆದರೆ ಸರ್ಕಾರದ ಭೂಮಿ ಲಪಟಾಯಿಸಿರುವ ಈಗಲ್ ಟನ್ ರೆಸಾರ್ಟ್ ಮೇಲೆ ಏಕೆ ಕಾಂಗ್ರೆಸ್‍ಗೆ ಇಷ್ಟೊಂದು ಅಕ್ಕರೆ? ಕೈ ಶಾಸಕರ ರಕ್ಷಣೆಗೆ ಬೇರೆ ಯಾವ ರೆಸಾರ್ಟ್ ಸಿಗಲಿಲ್ಲವೇ ಎಂದು ಸುರೇಶ್ ಕುಮಾರ್ ಕುಟುಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನಾರ್ದನ ರೆಡ್ಡಿ ಹೇಳಿಕೆಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಕ್ಷೇಪ

    ಜನಾರ್ದನ ರೆಡ್ಡಿ ಹೇಳಿಕೆಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಕ್ಷೇಪ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಕುರಿತು ಹೇಳಿಕೆ ನೀಡಿದ್ದ ಜನಾರ್ದನ ರೆಡ್ಡಿ ವಿರುದ್ಧ ಬಿಜೆಪಿಯ ಶಾಸಕ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವಿರೋಧಿ ಬಣದ ನಾಯಕರ ಮಗನ ಸಾವು ಚುನಾವಣಾ ಸಂದರ್ಭದಲ್ಲಿ ಪ್ರಚಾರದ ಸರಕಾಗಿರುವುದು ಅತ್ಯಂತ ಅಮಾನವೀಯ. ಮಗನನ್ನು ಕಳೆದುಕೊಂಡ ಆ ಸಂಕಟ ಯಾರಿಗೂ ಬರದಿರಲಿ. ನಾವು ಮನುಷ್ಯತ್ವ ಕಳೆದುಕೊಳ್ಳದಿರೋಣ ಎಂದು ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

    ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ ಶಾಸಕರು, ಕರ್ನಾಟಕ ಚುನಾವಣಾ ರಾಜಕೀಯದ ಸಂವಾದ ಇನ್ನಷ್ಟು ಕೆಳಮಟ್ಟಕ್ಕೆ ಇಳಿಯುವ ಮೊದಲು ಸಂಬಂಧಪಟ್ಟವರೆಲ್ಲರೂ ಎಚ್ಚರಗೊಳ್ಳುವುದು ಈ ಕ್ಷಣದ ಅಗತ್ಯವಾಗಿದೆ. ಇಲ್ಲದಿದ್ದರೆ ಇನ್ನಷ್ಟು ಅಪಾಯಕಾರಿ ಪದಗಳ ವಿಜೃಂಭಣೆಯ ಕಾಣಲಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಆಗಿದ್ದೇನು?: ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ನನ್ನನ್ನು ನನ್ನ ಮಕ್ಕಳಿಂದ ಸಿದ್ದರಾಮಯ್ಯ 4 ವರ್ಷ ದೂರ ಇರುವಂತೆ ಮಾಡಿದ್ದಾರೆ. ಶ್ರವಣ ಕುಮಾರ ಕೊಂದಾಗ ಆದ ಪುತ್ರನ ಅಗಲಿಕೆ ನೋವು ಗೊತ್ತಾಗಲಿ ಅಂತ ಹೆತ್ತವರು ಶಾಪ ಕೊಟ್ಟಿಟ್ರು. ನನ್ನನ್ನ ನನ್ನ ಮಕ್ಕಳಿಂದ ದೂರ ಮಾಡಿದ ಎಲ್ಲರೂ ಅನುಭವಿಸ್ತಾರೆ. ಕೆಟ್ಟವರಿಗೆ ಭಗವಂತ ಬುದ್ಧಿ ಕಲಿಸ್ತಾನೆ. ಅದೇ ರೀತಿ ಸಿದ್ದರಾಮಯ್ಯಗೆ ದೇವರು ಸರಿಯಾಗಿ ಬುದ್ಧಿ ಕಲಿಸಿದ್ದಾನೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ, ನೀವು ಮಾಡಿರುವ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಅಂತ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗಾಲಿ ಜನಾರ್ದನ ರೆಡ್ಡಿ, ಹಿಂದೂ ವಿರೋಧಿ ಮತ್ತು ನಾಸ್ತಿಕರಾಗಿದ್ದ ನೀವು ಇತ್ತೀಚಿನ ದಿನಗಳಲ್ಲಿ ದೇವರನ್ನು ನಂಬುತ್ತಿರುವುದು ನನಗೆ ಬಹಳ ಖುಷಿಕೊಟ್ಟಿದೆ. ನಿಮಗೆ ಸದ್ಬುದ್ಧಿ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಜನಾರ್ದನ ರೆಡ್ಡಿ ಅವರ ಈ ಹೇಳಿಕೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv