Tag: ಶಾಸಕ ಸುಧಾಕರ್

  • ಶೀಘ್ರವೇ ಸಂಪುಟ ವಿಸ್ತರಣೆ- ಮಂತ್ರಿ ಸ್ಥಾನ ಸಿಗೋ ನಂಬಿಕೆ ಇದೆ: ಸುಧಾಕರ್

    ಶೀಘ್ರವೇ ಸಂಪುಟ ವಿಸ್ತರಣೆ- ಮಂತ್ರಿ ಸ್ಥಾನ ಸಿಗೋ ನಂಬಿಕೆ ಇದೆ: ಸುಧಾಕರ್

    -ಮೆಡಿಕಲ್ ಕಾಲೇಜಿಗೆ ಭೂಮಿ ಪೂಜೆ

    ಚಿಕ್ಕಬಳ್ಳಾಪುರ: ಕೆಲವೇ ದಿನಗಳಲ್ಲಿ ಸುಧಾಕರ್ ಮಂತ್ರಿಯಾಗುತ್ತಾರೆ ಎಂದು ಮಾನ್ಯ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದು. ಹೀಗಾಗಿ ಬಿಎಸ್‍ವೈ ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ. ಅದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಕೆ ಸುಧಾಕರ್ ಹೇಳಿದರು.

    ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಆರೂರು ಗ್ರಾಮದ ಬಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಉಪಚುನಾವಣೆಗೆ ಮುನ್ನವೂ ಸಿಎಂ ಬಿಎಸ್‍ವೈ ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದರು. ಈಗ 525 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಸಚಿವ ಸಂಪುಟ ವಿಳಂಬಕ್ಕೆ ತಮ್ಮ ಬೆಂಬಲಿಗರು ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಸಿಎಂ ಅವರು ನಮಗಾಗಿ 525 ಕೋಟಿ ರೂ. ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ. ದಿನಗಳು ಚೆನ್ನಾಗಿಲ್ಲ ಎಂದು ಇಷ್ಟು ದಿನ ಮಾಡಲಿಲ್ಲ, ಈಗ ಎಲ್ಲವೂ ಪರಿಪಕ್ವವಾಗಿದೆ. ನೂರಕ್ಕೆ ನೂರು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು ಆತ್ಮವಿಶ್ವಾಸದ ವ್ಯಕ್ತಪಡಿಸಿದರು.

    ಹಿರಿಯ ಶಾಸಕರು, ಕಿರಿಯ ನೂತನ ಶಾಸಕರಿಗೆ ತಮ್ಮ ಸಚಿವ ಸ್ಥಾನ ತ್ಯಾಗ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳ ಪಕ್ಷ ಹಾಗೂ ಹೈಕಮಾಂಡ್‍ಗೆ ನಾಯಕರು ಕೊಡುವ ಬೆಲೆಗೆ ಸಾಕ್ಷಿಯಾಗಿದೆ ಎಂದರು. ಪದವಿ ಮುಖ್ಯ ಅಲ್ಲ, ಪಕ್ಷ ಹಾಗೂ ಸರ್ಕಾರಕ್ಕೆ ಒಳ್ಳೆಯಾಗಲಿ ಎಂದು ಅಧಿಕಾರ ಮುಖ್ಯ ಅಲ್ಲ ಅಂತ ತ್ಯಾಗ ಮಾಡ್ತೀವಿ ಎಂದಿರುವುದು ಅವರ ಹೃದಯ ವೈಶಾಲ್ಯತೆಯ ಗುಣ ಎಂದರು.

    ಬುಧವಾರ ಅಥವಾ ಗುರುವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು ಎಂಬ ಮಾಹಿತಿ ಇದೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿಯವರು ಪದೇ ಪದೇ ಯಡಿಯೂರಪ್ಪನವರ ಬಗ್ಗೆ ಟೀಕೆ ಮಾಡುತ್ತಿದ್ದು, ಅವರಿಗೆ ಸಿಎಂ ಕುರ್ಚಿ ಮೇಲಿನ ಮೋಹಕ್ಕೆ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  • ರಾಜಕೀಯ ಸ್ವಾರ್ಥಕ್ಕಾಗಿ ಕಾಂಗ್ರೆಸ್‍ನಿಂದ ಅಶಾಂತಿ ಸೃಷ್ಟಿಸುವ ಪ್ರಯತ್ನ: ಶಾಸಕ ಸುಧಾಕರ್

    ರಾಜಕೀಯ ಸ್ವಾರ್ಥಕ್ಕಾಗಿ ಕಾಂಗ್ರೆಸ್‍ನಿಂದ ಅಶಾಂತಿ ಸೃಷ್ಟಿಸುವ ಪ್ರಯತ್ನ: ಶಾಸಕ ಸುಧಾಕರ್

    ಚಿಕ್ಕಬಳ್ಳಾಪುರ: ಪೌರತ್ವ ಕಾಯಿದೆ ತಿದ್ದುಪಡಿ ಬೆಂಬಲಿಸಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಗೌರಿಬಿದನೂರು ನಗರದಲ್ಲಿ ಇಂದು ಬೃಹತ್ ಮೆರವಣಿಗೆ ನಡೆಸಲಾಯಿತು. ಭಾರತೀಯ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಆಯೋಜಿಸಿದ್ದ ಬೃಹತ್ ಮೆರವಣಿಗೆ ಗೌರಿಬಿದನೂರು ನಗರದ ನಾಗಪ್ಪ ಬ್ಲಾಕ್ ನಿಂದ ಆರಂಭದ ಮೆರವಣಿಗೆ ನಗರದ ಗಾಂಧಿ ವೃತ್ತದವರೆಗೂ ಸಾಗಿತ್ತು.

    ಗಾಂಧಿ ವೃತ್ತದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುಧಾಕರ್, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದೇಶದಲ್ಲಿ ಅಶಾಂತಿಯನ್ನ ಸೃಷ್ಟಿ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಮಾಡುತ್ತಿವೆ. ಕಾಂಗ್ರೆಸ್ ಲೋಕಸಭೆಯಲ್ಲಿ 450 ಸ್ಥಾನ ಪಡೆಯುತ್ತಿದ್ದವರು ಈಗ ಕೇವಲ 44-45 ಸ್ಥಾನಗಳಿಗೆ ಕುಸಿದು ನೆಲಕಚ್ಚಿದ್ದಾರೆ. ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿ ವೋಟ್ ಬ್ಯಾಂಕ್ ಲಾಭ ಪಡೆದುಕೊಳ್ಳುವುದು ಕಾಂಗ್ರೆಸ್ 70 ವರ್ಷಗಳಲ್ಲಿ ಕಲಿತಿರುವ ವಿದ್ಯೆಯಾಗಿದೆ ಎಂದು ಕಿಡಿಕಾರಿದರು.

    ಮಂಗಳೂರು ಗಲಭೆ ವಿಚಾರ ಪ್ರಸ್ತಾಪಿಸಿದ ಶಾಸಕರು, ನಮಗೆ ರಕ್ಷಣೆ ನೀಡಿರುವ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿಸುವುದು ಕಾಂಗ್ರೆಸ್ ಸಂಸ್ಕೃತಿ. ಭಾರತದ ಯಾವ ಒಬ್ಬ ಪ್ರಜೆಗೂ ಸಿಎಎ ಇಂದ ತೊಂದರೆ ಆಗುವುದಿಲ್ಲ. ಆದರೂ ಕಾಂಗ್ರೆಸ್ ನಾಯಕರು ಯಾಕೆ ಹೋರಾಟ ಮಾಡ್ತಿದ್ದಾರೆ. ಈ ದೇಶದಲ್ಲಿದ್ದು, ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುವವರಿಗೆ ಇಲ್ಲಿ ಇರೋಕೆ ನಾವು ಬಿಡಬಾರದು. ಈ ದೇಶದಲ್ಲಿ ಹುಟ್ಟಿದ ಯಾವುದೇ ಪ್ರಜೆಗೂ ಸಿಎಎ ಇಂದ ತೊಂದರೆ ಆಗಲ್ಲ ಎಂದು ಸ್ಪಷ್ಟನೆ ನೀಡಿದರು.

    ಮೆರವಣಿಗೆಯಲ್ಲಿ 1,500 ಅಡಿ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ಮಾಡಲಾಯಿತು. 1,500 ಅಡಿ ಉದ್ದದ ರಾಷ್ಟ್ರಧ್ವಜ ಎಲ್ಲರ ಗಮನ ಸೆಳೆದಿದ್ದು, ಸಿಎಎ ಪರ ಘೋಷಣೆಗಳು ಮೊಳಗಿದವು.

  • ಮಂಗ್ಳೂರು ಕಿಚ್ಚಿಗೆ ‘ಕೈ’ ನಾಯಕರು ಎಲ್‍ಪಿಜಿ ಸುರಿದರು: ಸುಧಾಕರ್

    ಮಂಗ್ಳೂರು ಕಿಚ್ಚಿಗೆ ‘ಕೈ’ ನಾಯಕರು ಎಲ್‍ಪಿಜಿ ಸುರಿದರು: ಸುಧಾಕರ್

    – ಗಲಭೆಗಳಿಗೆ ಕಾಂಗ್ರೆಸ್ ನೇರ ಕಾರಣ

    ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಆಗುತ್ತಿರುವ ಹಿಂಸಾಚಾರ ಗಲಭೆಗಳಿಗೆ ಕಾಂಗ್ರೆಸ್ ಕೈವಾಡವಿದೆ. ಹೀಗಾಗಿ ಇಷ್ಟು ಪ್ರಮಾಣದ ಗಲಭೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಬಿಜೆಪಿ ಶಾಸಕ ಡಾ ಕೆ.ಸುಧಾಕರ್ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ಚೀಡಚಿಕ್ಕನಹಳ್ಳಿ ಗ್ರಾಮದಲ್ಲಿ ಡಾಂಬರು ಕಾಮಗಾರಿ ಪರಿಶೀಲಿಸಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವುದು ಕಾಂಗ್ರೆಸ್ ಎನ್ನುವುದು ಜಗಜ್ಜಾಹೀರು. ಅದು ಗುಟ್ಟಾಗಿ ಉಳದಿಲ್ಲ. ನನಗೆ ಬಂದ ಮಾಹಿತಿ ಪ್ರಕಾರ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷದವರು ಬೇರೆ ರಾಜ್ಯಗಳಿಂದಲೂ ಜನರನ್ನು ಮಂಗಳೂರಿಗೆ ಕರೆತಂದಿದ್ದಾರೆ. ಅದು ತನಿಖೆ ಬಳಿಕ ಜಗತ್ತಿಗೆ ಗೊತ್ತಾಗಲಿದೆ. ಕಾಂಗ್ರೆಸ್ಸಿಗರು ರಾಜಕೀಯವಾಗಿ ಹತಾಶರಾಗಿ ಇಷ್ಟು ಕೀಳುಮಟ್ಟದ ರಾಜಕಾರಣ ಮಾಡುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯದಲ್ಲಿ 144 ಸೆಕ್ಷನ್ ಜಾರಿ ಇರುವಾಗ ಮಂಗಳೂರಿಗೆ ಕಾಂಗ್ರೆಸ್ ನಾಯಕರು ಯಾಕೆ ಹೋಗುತ್ತಾರೆ? ಅವರು ಹೋಗಿದ್ದು ಬೆಂಕಿ ನಂದಿಸುವುದಕ್ಕಲ್ಲ, ಬದಲಾಗಿ ಬೆಂಕಿಗೆ ತುಪ್ಪದ ಬದಲು ಎಲ್‍ಪಿಜಿ ಹಾಕಿ ಇನ್ನೂ ಹೆಚ್ಚಾಗಿ ಉರಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಈ ನಡೆ ಇದು ಖಂಡನೀಯ ಎಂದು ಗುಡುಗಿದರು.

    ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಭೇಟಿ ನೀಡಿದ್ದು, ಯಾವುದೇ ಕಾರಣಕ್ಕೂ ಲಾಠಿ ಚಾರ್ಜ್, ಗೋಲಿಬಾರ್ ಮಾಡಬೇಡಿ ಎಂದು ಪೊಲೀಸರಿಗೆ ಆದೇಶಿಸಿದ್ದಾರೆ. ಆದರೆ ಮುಗ್ದ ಜನರನ್ನು ಕೆಲ ರಾಜಕೀಯ ಪಕ್ಷಗಳು ದಿಕ್ಕು ತಪ್ಪಿಸಿದ ಪರಿಣಾಮ ಅವರು ಬೀದಿಗೆ ಬಂದಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಮನವರಿಕೆ ಮಾಡುವ ಕೆಲಸ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಕರ್ನಾಟಕದ ಜನರು ಮುಗ್ದರು, ಶಾಂತಿ ಪ್ರಿಯರು. ಈ ಕಾಯಿದೆಯಿಂದ ನಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

    ಸಿಎಎ ಹಾಗೂ ಎನ್‍ಆರ್‍ಸಿ ಎರಡು ಬೇರೆ ಬೇರೆ ಆಗಿವೆ. ಆದರೆ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿಯನ್ನು ಜನರಿಗೆ ನೀಡುವ ಮೂಲಕ ಭಯವನ್ನು ಉಂಟು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಮಾತ್ರ ಗಲಾಟೆ ಮಾಡಿಸಬೇಕು ಎನ್ನುವ ಷಡ್ಯಂತ್ರವನ್ನು ಕಾಂಗ್ರೆಸ್ ರೂಪಿಸಿದೆ. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಯಾವುದೇ ಗಲಭೆಗಳು ಆಗಿಲ್ಲ. ಆದರೆ ಅಸ್ಸಾಂ, ಕರ್ನಾಟಕನಲ್ಲಿ ಗಲಭೆ ಉಂಟಾಗಿದೆ ಎಂದು ತಿಳಿಸಿದರು.

  • ಯಾರ ಸಂಪರ್ಕಕ್ಕೂ ಸಿಗ್ತಿಲ್ಲ ಶಾಸಕ ಸುಧಾಕರ್- `ಕೈ’ ನಾಯಕರಲ್ಲಿ ಆತಂಕ

    ಯಾರ ಸಂಪರ್ಕಕ್ಕೂ ಸಿಗ್ತಿಲ್ಲ ಶಾಸಕ ಸುಧಾಕರ್- `ಕೈ’ ನಾಯಕರಲ್ಲಿ ಆತಂಕ

    ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಇಂದು ಮುಂಜಾನೆಯಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿದೆ.

    ಶಾಸಕ ಸುಧಾಕರ್ ಮುಂಜಾನೆಯೇ ಮನೆಯಿಂದ ಹೊರ ಹೋಗಿದ್ದಾರೆ. ಚಿಕ್ಕಬಳ್ಳಾಪುರದ ಸ್ಥಳೀಯ ನಾಯಕರುಗಳನ್ನು ಬೆಂಗಳೂರಿಗೆ ಕರೆಸಿಕೊಂಡು ಸುಧಾಕರ್ ಮುಂದಿನ ನಡೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಗುಪ್ತ ಸ್ಥಳದಲ್ಲಿ ತಮ್ಮ ಕ್ಷೇತ್ರದ ಮುಖಂಡರೊಂದಿಗೆ ಚರ್ಚೆ ನಡೆಸಿ ತಿರ್ಮಾನಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಸುಧಾಕರ್ ಅವರು ಯಾರ ಸಂಪರ್ಕಕ್ಕೆ ಸಿಗದ ಕಾರಣ ಅವರು ರಾಜೀನಾಮೆ ನೀಡುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಶಾಸಕ ಸುಧಾಕರ್ ಹಲವು ಸಂದರ್ಭಗಳಲ್ಲಿ ರೆಬೆಲ್ ಆಗಿದ್ದರು. ಈಗ ಮತ್ತೆ ರೆಬೆಲ್ ಆಗುತ್ತಾರಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ.

    ಸುಧಾಕರ್ ಸೋಮವಾರ ಎಂಟಿಬಿ ನಾಗರಾಜ್ ಅವರ ಜೊತೆ ಸುದೀರ್ಘ 4 ತಾಸು ಚರ್ಚೆ ನಡೆಸಿದ್ದರು. ಸುಧಾಕರ್ ರಾಜೀನಾಮೆ ಕೊಡುತ್ತಾರೆ ಅಂತಲೇ ಎಂಟಿಬಿ ನಾಗರಾಜ್ ಮನವೊಲಿಸಲು ಬಂದಿದ್ರಾ ಎಂಬ ಪ್ರಶ್ನೆ ಈಗ ಶುರುವಾಗಿದೆ. ಸದ್ಯ ಶಾಸಕ ಸುಧಾಕರ್ ಅವರ ನಡೆ ಎಲ್ಲರಿಗೂ ಕುತೂಹಲ ಮೂಡಿಸಿದೆ.

    ಸುಧಾಕರ್ ಇಂದು ಬೆಳಗ್ಗೆ 11 ಗಂಟೆಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ‘ಕೈ’ ಶಾಸಕರ ಬಂಡಾಯಕ್ಕೆ ಮಣಿದ ಸಿಎಂ

    ‘ಕೈ’ ಶಾಸಕರ ಬಂಡಾಯಕ್ಕೆ ಮಣಿದ ಸಿಎಂ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಸಕ ಸುಧಾಕರ್ ಅವರ ಬಂಡಾಯಕ್ಕೆ ಮಣಿದಿರುವ ಮುಖ್ಯಮಂತ್ರಿಗಳು ದಿಡೀರ್ ಬೆಳವಣಿಗೆಯಲ್ಲಿ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ) ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

    ಇಂದು ಬೆಳಗ್ಗೆ ಮಂಡಳಿಯ ಅಧ್ಯಕ್ಷರಾಗಿದ್ದ ಸಿ. ಜಯರಾಮ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಜಯರಾಮ್ ರಿಂದ ತೆರವಾದ ಅಧ್ಯಕ್ಷ ಸ್ಥಾನ ಶಾಸಕ ಸುಧಾಕರ್ ಅವರಿಗೆ ನೀಡಲಾಗಿದೆ.

    ಕಳೆದ ನಾಲ್ಕು ತಿಂಗಳ ಹಿಂದೆಯೇ ಶಾಸಕ ಸುಧಾಕರ್ ಅವರನ್ನು ಮಾಲಿನ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಿ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳಿಗೆ ಪಟ್ಟಿಯನ್ನು ರವಾನೆ ಮಾಡಿತ್ತು. ಆದರೆ ಈ ಸ್ಥಾನಕ್ಕೆ ತಜ್ಞರನ್ನಷ್ಟೇ ನೇಮಕ ಮಾಡಬೇಕೆಂಬ ಅಂಶವನ್ನು ಮುಂದಿಟ್ಟಿದ್ದ ಸಿಎಂ, ಸುಧಾಕರ್ ಅವರ ನೇಮಕವನ್ನು ತಡೆ ಹಿಡಿದಿದ್ದರು. ಆ ಬಳಿಕ ಶಾಸಕ ಸುಧಾಕರ್ ಅವರು ಸಿಎಂ ಅವರ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

    ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದ ಈ ಅಂಶಕ್ಕೆ ಸುಧಾಕರ್ ರನ್ನು ನೇಮಕ ಮಾಡುವ ಮೂಲಕ ಸಿಎಂ ತೆರೆ ಎಳೆದಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಬಂಡಾಯ ನಾಯಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಸುಧಾಕರ್ ಅವರು, ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರ ಮನೆಯಲ್ಲೂ ಕಾಣಿಸಿಕೊಂಡಿದ್ದರು.

    ಇದೆಲ್ಲವುದರ ಜೊತೆಗೆ ಸುಧಾಕರ್ ಅವರು ಪಕ್ಷದ ಬಂಡಾಯ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಕ್ಷೇತ್ರದಲ್ಲಿ ಕಾರ್ಯಕರ್ತರ ಗುಪ್ತ ಸಭೆಗಳನ್ನು ನಡೆಸಿದ್ದರು. ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂಬ ಅನುಮಾನಕ್ಕೆ ಪುಷ್ಠಿ ನೀಡುವಂತೆ ಸದ್ದಿಲ್ಲದೇ ಶಾಸಕ ಸುಧಾಕರ್ ತಂದೆ ಪಿ.ಎನ್ ಕೇಶವರೆಡ್ಡಿ ಕೆಲ ರಹಸ್ಯ ಸಭೆಗಳನ್ನು ನಡೆಸಿದ್ದರು. ಸತತ ಎರಡನೇ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಸುಧಾಕರ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರು. ಆದರೆ ಸಚಿವ ಸ್ಥಾನ ಅವರಿಗೆ ಸಿಕ್ಕಿರಲಿಲ್ಲ. ಅಲ್ಲದೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕೇಶವರೆಡ್ಡಿ ಅವರು, ಮೊದಲ ಬಾರಿ ಗೆದ್ದರು ವರಿಷ್ಠರ ಮಕ್ಕಳಿಗೆ ಸಚಿವ ಸ್ಥಾನ ಕೊಡುತ್ತಾರೆ. ಆದರೆ ಎರಡು ಬಾರಿ ಗೆದ್ದರು ನನ್ನ ಮಗನಿಗೆ ಸಚಿವ ಸ್ಥಾನ ಇಲ್ಲ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ಅನುದಾನ, ಸುಧಾಕರ್ ಮಾಡಿದ ಅಭಿವೃದ್ಧಿ ಕೆಲಸಗಳು ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಮಾಡಲಾಗುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ರಾಜ್ಯ ಮಟ್ಟದ ಕೆಲ ನಾಯಕರು ಸ್ವಾರ್ಥಕ್ಕಾಗಿ ಜೆಡಿಎಸ್ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ ಎಂದು ಮೈತ್ರಿ ಪಕ್ಷದ ವಿರುದ್ಧ ಗುಡುಗಿದರು. ಈ ಎಲ್ಲ ಬೆಳವಣಿಗೆಗಳ ನಡುವಯೇ ಸುಧಾಕರ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಎಸ್‍ಎಂ ಕೃಷ್ಣ ಭೇಟಿ ವೇಳೆ ಬಿಎಸ್‍ವೈ ಆಗಮನ ಕಾಕತಾಳೀಯವಷ್ಟೇ – ರಮೇಶ್, ಸುಧಾಕರ್ ಸ್ಪಷ್ಟನೆ

    ಎಸ್‍ಎಂ ಕೃಷ್ಣ ಭೇಟಿ ವೇಳೆ ಬಿಎಸ್‍ವೈ ಆಗಮನ ಕಾಕತಾಳೀಯವಷ್ಟೇ – ರಮೇಶ್, ಸುಧಾಕರ್ ಸ್ಪಷ್ಟನೆ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನ ಭೇಟಿ ಮಾಡಿದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಆಗಮಿಸಿ ಅಲ್ಲಿಂದ ಸದಾಶಿವನಗರದ ಎಸ್‍ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಸುಧಾಕರ್ ಅವರು ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

    ಬಿಎಸ್ ಯಡಿಯೂರಪ್ಪ ಅವರ ಭೇಟಿ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಯಡಿಯೂರಪ್ಪ ಅವರು, ರಮೇಶ್ ಜಾರಕಿಹೊಳಿ ಕೃಷ್ಣ ನಿವಾಸಕ್ಕೆ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೃಷ್ಣ ಅವರಿಗೆ ಧನ್ಯವಾದ ಹೇಳಲು ಬಂದಿದ್ದು, ರಮೇಶ್ ಅವರು ಬಿಜೆಪಿಗೆ ಬರುವುದು ಅವರ ವೈಯಕ್ತಿಕ ವಿಚಾರ. ಇಲ್ಲಿ ಯಾವುದೇ ಕಾರ್ಯತಂತ್ರವನ್ನು ನಡೆಸಿಲ್ಲ ಇಲ್ಲ ಎಂದರು.

    ಮುಂದಿನ ವರ್ಷ ರಾಜೀನಾಮೆ:
    ಎಸ್.ಎಂ ಕೃಷ್ಣ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ನಾನು ಬಿಎಸ್‍ವೈರೊಂದಿಗೆ ಮಾತುಕತೆ ನಡೆಸಿಲ್ಲ. 1999 ರಲ್ಲಿ ಮೊದಲ ಬಾರಿಗೆ ನನ್ನನ್ನು ಶಾಸಕರಾಗಿ ಗೆಲ್ಲಿಸಿಕೊಂಡು ಬಂದಿದ್ದು ಕೃಷ್ಣ ಅವರು, ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಬಿಎಸ್‍ವೈ ಭೇಟಿ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ಅವರು ಬಂದಿದ್ದು ಕಾಕತಾಳೀಯ ಅಷ್ಟೇ ಎಂದರು. ಇದೇ ವೇಳೆ ಆಪರೇಷನ್ ಕಮಲ ಕುರಿತ ಪ್ರಶ್ನೆಗೆ ಉತ್ತರಿಸಿ, ಆಪರೇಷನ್ ಕಮಲಕ್ಕೂ ನನಗೂ ಸಂಬಂಧ ಇಲ್ಲ. ನನ್ನ ರಾಜೀನಾಮೆ ಹೇಳಿಕೆಗೆ ಬದ್ಧ ಆದರೆ 1 ವರ್ಷದ ಬಳಿಕ ರಾಜೀನಾಮೆ ನೀಡುತ್ತೇನೆ ಅದಕ್ಕೆ ಏನು ಮಾಡಬೇಕು ಎಂದು ಮಾಧ್ಯಮಗಳ ವಿರುದ್ಧ ಗರಂ ಆದ್ರ. ಮಾಧ್ಯಮಗಳಿಂದಲೇ ರಾಜೀನಾಮೆ ಗೊಂದಲ ಸೃಷ್ಟಿಯಾಗಿದೆ. ನೀವು ಸ್ಟಿಂಗ್ ಆಪರೇಷನ್ ಹೇಳಿ ಮಾಡಿದಂತೆ ನಾವು ಕೂಡಾ ಅಷ್ಟೇ? ಎಲ್ಲವನ್ನು ಮಾಧ್ಯಮಗಳಿಗೆ ಹೇಳಿ ಮಾಡಲು ಸಾಧ್ಯವಿಲ್ಲ ಎಂದರು.

    ಬಳಿಕ ಮಾತನಾಡಿದ ಶಾಸಕ ಸುಧಾಕರ್ ಅವರು, ನನ್ನ ರಾಜಕೀಯ ಗುರು ಎಸ್‍ಎಂಕೆ ಅವರು ಅವರನ್ನು ನೋಡಿ ನಾನು ರಾಜಕೀಯಕ್ಕೆ ಬಂದೆ. ಅವರ ಆರೋಗ್ಯ ವಿಚಾರ ಮಾಡಲು ಪ್ರತಿ ತಿಂಗಳು ಭೇಟಿ ನೀಡುತ್ತೇನೆ. ಇಂದು ರಮೇಶ್ ಅವರು ನನ್ನನ್ನು ಭೇಟಿ ಮಾಡಲು ಆಗಮಿಸಿದ್ದರು. ಆ ವೇಳೆ ನಾನು ಕೃಷ್ಣರನ್ನು ಭೇಟಿ ಮಾಡುವ ಬಗ್ಗೆ ಹೇಳಿದೆ. ಅವರು ನನ್ನ ಜೊತೆಗೆ ಆಗಮಿಸಿದರು. ಇದು ಸೌಜನ್ಯಯುತ ಭೇಟಿ ಅಷ್ಟೇ. ನಮಗೆ ಯಾವುದೇ ಅತೃಪ್ತಿ ಇಲ್ಲ. ಮಾಧ್ಯಮಗಳು ಇದನ್ನು ಹೇಗಾದರೂ ವಿಶ್ಲೇಷಣೆ ಮಾಡಬಹುದು, ನಾವು ರಾಜಕೀಯ ಚರ್ಚೆ ಮಾಡಿಲ್ಲ. ಬಿಎಸ್‍ವೈ ಕಾಣಿಸಿದಾಗ ಅವರ ಆರೋಗ್ಯ ಬಗ್ಗೆ ವಿಚಾರಿಸಿದೆ ಎಂದರು.

  • ಫಲಿತಾಂಶದ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ : ಶಾಸಕ ಸುಧಾಕರ್

    ಫಲಿತಾಂಶದ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ : ಶಾಸಕ ಸುಧಾಕರ್

    ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇನ್ನು ನಾಲ್ಕು ವರ್ಷ ಇರಬೇಕು ಎಂಬ ಆಸೆ ನಾನು ಹೊಂದಿದ್ದು, ಆದರೆ ಲೋಕಸಭಾ ಚುನಾವಣೆ ಫಲಿತಾಂಶ ಬಂದ ಮೇಲೆ ಏನೇನು ಬದಲಾವಣೆ ಆಗುತ್ತೆ ನೋಡಬೇಕು. ನಾನು ಈಗ ದೈಹಿಕವಾಗಿ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಭವಿಷ್ಯದಲ್ಲಿ ಏನೂ ಬೇಕಾದರು ಆಗಬಹುದು ಎಂದು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳಿನ ಫಲಿತಾಂಶ ಸರ್ಕಾರದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಕಾದುನೋಡಬೇಕು. ಮೈತ್ರಿ ಸರ್ಕಾರ ಚುನಾವಣೆ ಫಲಿತಾಂಶದ ಮೇಲೆಯೇ ಇದೆ. ಎಲ್ಲರನ್ನು ಪರಸ್ಪರ ಪ್ರೀತಿಯಿಂದ ಕರೆದುಕೊಂಡು ಹೋದರೆ ಸರ್ಕಾರ ಮುಂದಿನ 4 ವರ್ಷ ಸುಭದ್ರವಾಗಿರುತ್ತದೆ ಎಂದರು.

    ಈ ಹಿಂದೆ ಸರ್ಕಾರವನ್ನು ನಾನು ಅಪವಿತ್ರ ಮೈತ್ರಿ ಹೇಳಿದ್ದೆ, ಆದರೆ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಲೋಕಸಭಾ ಚುನಾವಣೆಯನ್ನ ಮೈತ್ರಿ ಮೂಲಕ ಎದುರಿಸುವುದರಿಂದ ನಮಗೆ 15ಕ್ಕೂ ಹೆಚ್ಚು ಸ್ಥಾನಗಳು ಬರಬೇಕು. ಕಡಿಮೆ ಬಂದರೆ ನಾಯಕತ್ವದಲ್ಲಿ ಎಡವಿದ್ದೇವೆ ಅನ್ನಿಸುತ್ತದೆ. ನನಗೆ ಈಗಲೂ ನಂಬಿಕೆ ಇದೆ 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ತಮ್ಮ ತಮ್ಮ ಇವಿಎಂ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಇವಿಎಂ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶದಿಂದ ಟ್ವೀಟ್ ಮಾಡಿಲ್ಲ. ಎಕ್ಸಿಟ್ ಪೋಲ್ ಮಾತ್ರವೇ ಫಲಿತಾಂಶ ಅಲ್ಲ, ನಾಳೆ ಫಲಿತಾಂಶ ಹೊರಬರುತ್ತೆ. ಫಲಿತಾಂಶ ಬರುವವರೆಗೆ ಇವಿಎಂ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ ಎಂಬುದು ನನ್ನ ಅಭಿಪ್ರಾಯ. ಇವಿಎಂ ಮೋಸದಿಂದ ಕೂಡಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ಹೇಳಿದ್ದು, 2004 ರಿಂದ ಇವಿಎಂ ವ್ಯವಸ್ಥೆ ನಡೆಯುತ್ತಿದ್ದು, 2004 ಮತ್ತು 2009 ರಲ್ಲಿ ಯುಪಿಎ ಅಧಿಕಾರ ನಡೆಸಿದೆ. ಆಗಿನಿಂದಲೂ ಇವಿಎಂ ವ್ಯವಸ್ಥೆಯಿದೆ. ಹೀಗಾಗಿ ಇವಿಎಂ ಬಗ್ಗೆ ಶಂಕೆ ವ್ಯಕ್ತಪಡಿಸುವುದು ಬೇಡ. ಹೀಗಾಗಿ ಜವಾಬ್ದಾರಿಯಿಂದ ಈ ವಿಚಾರದಲ್ಲಿ ನಡೆದುಕೊಳ್ಳಬೇಕು ಎಂದರು.

  • ಶಾಸಕ ಸುಧಾಕರ್ ಬೆಂಬಲಿಗರ ಹತಾಶ ಮನೋಭಾವದ ಆಡಿಯೋ ವೈರಲ್!

    ಶಾಸಕ ಸುಧಾಕರ್ ಬೆಂಬಲಿಗರ ಹತಾಶ ಮನೋಭಾವದ ಆಡಿಯೋ ವೈರಲ್!

    ಚಿಕ್ಕಬಳ್ಳಾಪುರ: ಕೋಚಿಮುಲ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರಿಗೆ ಮುಖಭಂಗವಾಗಿದ್ದು, ಈ ಸಂಬಂಧ ಶಾಸಕರ ಬೆಂಬಲಿಗ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಚಿಕ್ಕಬಳ್ಳಾಪುರ ಕೋಚಿಮುಲ್ ನಿರ್ದೇಶಕ ಸ್ಥಾನವು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಬಗ್ಗೆ ಸುಧಾಕರ್ ಬೆಂಬಲಿಗರಾದ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಚನ್ನಕೇಶವ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾವಪ್ಪ ಮೊಬೈಲ್ ಮೂಲಕ ಮಾತನಾಡಿದ್ದಾರೆ. ಈ ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಸಂಭಾಷಣೆಯಲ್ಲಿ ಕೆಲ ಕೀಳುಮಟ್ಟದ ಪದ ಪ್ರಯೋಗ ಮಾಡಿರುವ ಬೆಂಬಲಿಗರು ಏನಣ್ಣ ಹೀಗಾಗಾಯ್ತೋ? ಜೆಡಿಎಸ್‍ನವರಿಗೆ ಎಷ್ಟು ಬೇಗ ರೆಕ್ಕೆ ಪುಕ್ಕ ಬಂದುಬಿಡ್ತು, ನಮ್ಮ ಜೊತೆ 98 ಮಂದಿ ಮತದಾರರಿದ್ದರು. ನಮ್ಮ ಜೊತೆ ಬಂದರು ಆಣೆ, ಪ್ರಮಾಣ ಮಾಡಿದರು. ಆದರೆ ಅದರಲ್ಲಿ ಕೆಲವರು ಜೆಡಿಎಸ್‍ನವರಿಗೆ ಮತ ಹಾಕಿಬಿಟ್ಟು ದ್ರೋಹ ಮಾಡಿದ್ದಾರೆ ಎಂದು ಮಾತನಾಡಿದ್ದಾರೆ.

    ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ಕೆಲ ಒಡಕುಗಳನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್‍ನ ಅಕ್ರಮವಾಗಿ ಹಣ ಮಾಡಿದ್ದಾರೆ. ನಮ್ಮ ಶಾಸಕರು ಏನು ಮಾಡಲಿಲ್ಲ. ಆದರೂ ಕರೆ ಮಾಡಿ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾತನಾಡಿರುವುದು ಆಡಿಯೋದಲ್ಲಿದೆ.

    ಈ ಚುನಾವಣೆ ಶಾಸಕ ಸುಧಾಕರ್ ಅವರಿಗೆ ಸಾಕಷ್ಟು ಪ್ರತಿಷ್ಠೆಯಾಗಿತ್ತು. ಆದರೆ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. 7 ನಿಮಿಷ 56 ಸೆಕೆಂಡಿನ ಈ ಆಡಿಯೋ ವೈರಲ್ ಆಗಿದ್ದು, ಇದು ಜೆಡಿಎಸ್‍ನವರಿಗೆ ಒಂದು ರೀತಿಯ ಆಶ್ರಯವಾಗಿವಾಗಿದೆ.

  • ಮತ್ತೆ ಸುಮಲತಾ ಪರ ಬ್ಯಾಟ್ ಬೀಸಿ ರೇವಣ್ಣಗೆ ಟಾಂಗ್ ಕೊಟ್ಟ ಸುಧಾಕರ್

    ಮತ್ತೆ ಸುಮಲತಾ ಪರ ಬ್ಯಾಟ್ ಬೀಸಿ ರೇವಣ್ಣಗೆ ಟಾಂಗ್ ಕೊಟ್ಟ ಸುಧಾಕರ್

    ಚಿಕ್ಕಬಳ್ಳಾಪುರ: ಪತಿ ನಿಧನವಾದ ಬಳಿಕ ತಾಯಂದಿರು ರಾಜಕೀಯ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಬಾರದು ಎನ್ನುವ ಆಲೋಚನೆ ಅನಾಗರಿಕತೆಯನ್ನು ತೋರಿಸುತ್ತದೆ ಎಂದು ಶಾಸಕ ಡಾ.ಸುಧಾಕರ್ ಅವರು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಸಚಿವ ರೇವಣ್ಣ ಅವರು ಮಹಾನ್ ದೈವ ಭಕ್ತರೆಂದು ನಾನು ತಿಳಿದುಕೊಂಡಿದ್ದೆ. ಅವರ ಬಾಯಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ. ಸಚಿವರು ಯಾವ ಆಲೋಚನೆಯಿಂದ ಸುಮಲತಾ ಅವರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ ಸುಮಲತಾ ಅವರಲ್ಲಿ ತಕ್ಷಣ ಕ್ಷಮಾಪಣೆ ಕೇಳಬೇಕೆಂದು ಸಚಿವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನು ಓದಿ: ಸುಮಲತಾ ಪರ ಬ್ಯಾಟ್ ಮಾಡಿ ಸಿಎಂಗೆ ಶಾಸಕ ಸುಧಾಕರ್ ಟಾಂಗ್!

    ಸುಮಲತಾ ಅಂಬರೀಶ್ ಅವರಿಗೆ ಕ್ಷಮೆ ಕೇಳಿದರೆ ಸಚಿವರಿಗೆ ಗೌರವ ಬರುತ್ತದೆ. ಈಗಾಗಲೇ ಸುಮಲತಾ ತುಂಬಾ ದುಃಖದಲ್ಲಿದ್ದಾರೆ. ಹೀಗಿದ್ದರೂ ಸಹ ಅವರು ಚುನಾವಣೆಗೆ ನಿಲ್ಲಲು ಹಾಗೂ ಮಂಡ್ಯದ ಜನರ ಜೊತೆ ನಿಲ್ಲುವ ಧೈರ್ಯ ತೋರಿದ್ದಾರೆ. ಅದನ್ನು ನಾವು ಮೆಚ್ಚಬೇಕು. ಅಂತಹವರಿಗೆ ನಮ್ಮಿಂದ ಆಗುವ ಸಹಾಯ ಮಾಡಬೇಕೇ ಹೊರತು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಟಗೋಸಿ ನಿಗಮ ಮಂಡಳಿಗಾಗಿ ಕಾರ್ಯಕರ್ತರಿಂದ ಹೋರಾಟ ಮಾಡಿಸಿದ್ರಿ: ಸುಧಾಕರ್‌ಗೆ ಜೆಡಿಎಸ್ ಟಾಂಗ್

    ಪುಟಗೋಸಿ ನಿಗಮ ಮಂಡಳಿಗಾಗಿ ಕಾರ್ಯಕರ್ತರಿಂದ ಹೋರಾಟ ಮಾಡಿಸಿದ್ರಿ: ಸುಧಾಕರ್‌ಗೆ ಜೆಡಿಎಸ್ ಟಾಂಗ್

    ಚಿಕ್ಕಬಳ್ಳಾಪುರ: ಪುಟಗೋಸಿ ನಿಗಮ ಮಂಡಳಿಗಾಗಿ ನಿಮ್ಮ ಕಾರ್ಯಕರ್ತರಿಂದ ಹೋರಾಟ ಮಾಡಿಸಿದ್ರಿ ಎಂದು ಜಿಲ್ಲೆಯ ಜೆಡಿಎಸ್ ಮುಖಂಡರು ಶಾಸಕ ಡಾ ಕೆ.ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ.

    ರಾಜ್ಯ ಮಾಲಿನ್ಯ ನಿಯಂತ್ರಣ (ಪಿಸಿಬಿ) ಮಂಡಳಿ ಅಧ್ಯಕ್ಷ ಸ್ಥಾನ ತಪ್ಪಿದ್ದರಿಂದ ಸಿಎಂ ಕುಮಾರಸ್ವಾಮಿ ವಿರುದ್ಧ ಶಾಸಕ ಸುಧಾಕರ್ ಟೀಕೆ ಮಾಡಿದ್ದರು. ಹೀಗಾಗಿ ಶಾಸಕರ ಮೇಲೆ ಜೆಡಿಎಸ್ ಮುಖಂಡರು ಕೆಂಡಾಮಂಡಲರಾಗಿದ್ದಾರೆ. ಇದನ್ನು ಓದಿ: ಸುಮಲತಾ ಪರ ಬ್ಯಾಟ್ ಮಾಡಿ ಸಿಎಂಗೆ ಶಾಸಕ ಸುಧಾಕರ್ ಟಾಂಗ್!

    ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ರಾಜಾಕಾಂತ್, ಪುಟಗೋಸಿ ನಿಗಮಮಂಡಳಿಗಾ ನೀವು ಇಷ್ಟೆಲ್ಲಾ ಮಾಡಿದ್ದು..? ಸಿಎಂ ಕುಮಾರಸ್ವಾಮಿ, ಪಕ್ಷದ ವರಿಷ್ಠ ದೇವೇಗೌಡ ಅವರ ವಿರುದ್ಧ ಹಗುರವಾಗಿ ಮಾತನಾಡಿದ್ರೇ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಇದನ್ನು ಓದಿ: ಹೈಕಮಾಂಡಿಗೆ ಎಚ್ಚರಿಕೆ ನೀಡಿ ಜೆಡಿಎಸ್ ವಿರುದ್ಧ ಸುಧಾಕರ್ ಕೆಂಡಾಮಂಡಲ

    ಜಿಲ್ಲಾ ಪಂಚಾಯತಿ ಸದಸ್ಯ ಮುನೇಗೌಡ ಮಾತನಾಡಿ, ಶಾಸಕ ಸುಧಾಕರ್ ನೋಡಿ ಯಾರು ವೋಟ್ ಹಾಕ್ತಾರೆ..? ಅವರ ವರ್ತನೆಯಿಂದ ಕ್ಷೇತ್ರದ ಜನ ಬೇಸತ್ತಿದ್ದಾರೆ. ಶಾಸಕರು ಮುಂಬೈ, ದೆಹಲಿ ಎಂದು ಹೇಳುತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಿಂದೆ ಓಡಿ ಹೋಗುತ್ತಾರೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಮಂತ್ರಿಗಿರಿ ಬೇಕು ಅಂತ ಕಾರ್ಯಕರ್ತರಿಂದ ಹೋರಾಟ, ಕಲ್ಲು ತೂರಾಟ ಮಾಡಿಸಿದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡದಿದ್ದರೆ ಸಾಮೂಹಿಕ ರಾಜೀನಾಮೆ ಕೊಡುತ್ತೇವೆಂದು ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರಿದ್ದರು ಎಂದು ಶಾಸಕರಿಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv