Tag: ಶಾಸಕ ಶ್ರೀನಿವಾಸಮೂರ್ತಿ

  • ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನಮ್ಮ ಪತ್ರಗಳನ್ನು ಗಾಳಿಗೆ ತೂರುತ್ತಿದ್ದರು – ಜೆಡಿಎಸ್ ಶಾಸಕ

    ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನಮ್ಮ ಪತ್ರಗಳನ್ನು ಗಾಳಿಗೆ ತೂರುತ್ತಿದ್ದರು – ಜೆಡಿಎಸ್ ಶಾಸಕ

    ನೆಲಮಂಗಲ: ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಉರುಳಿಬಿದ್ದ ಬಳಿಕ ಎರಡು ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ನಡೆದಿದೆಯಾ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಸದ್ಯ ನೆಲಮಂಗಲ ಜೆಡಿಎಸ್ ಪಕ್ಷದ ಶಾಸಕ ಶ್ರೀನಿವಾಸ್ ಅವರು ನೀಡಿರುವ ಬಹಿರಂಗ ಹೇಳಿಕೆ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕುಲವನಹಳ್ಳಿಯಲ್ಲಿ ಜನರೊಂದಿಗೆ ಸಭೆ ನಡೆಸಿ ಮಾತನಾಡಿದ ಶಾಸಕರು, ನೇರವಾಗಿ ಸಿದ್ದರಾಮಯ್ಯ ಅವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

    ರಸ್ತೆ ಅಭಿವೃದ್ಧಿ ಕಾರ್ಯ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾನು 5 ವರ್ಷಗಳ ಕಾಲ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಅನುದಾನ ಪಡೆಯಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಬಳಿ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅಂದು ನಾವು ಮನವಿ ಪತ್ರಗಳನ್ನು ತೆಗೆದುಕೊಂಡು ಅವರಿಗೆ ನೀಡಿದರೆ ಗಾಳಿಗೆ ತೂರುತ್ತಿದ್ದರು. ಯಾವುದೇ ಅಭಿವೃದ್ಧಿಗೆ ಸಹಕರಿಸುತ್ತಿರಲಿಲ್ಲ, ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದರು ಎಂದು ಸಾರ್ವಜನಿಕ ವೇದಿಕೆಯಲ್ಲೇ ಆರೋಪ ಮಾಡಿದರು.

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೇವಣ್ಣ ಅವರು ಸಚಿವರಾದ ಮೇಲೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಕುಮಾರಸ್ವಾಮಿ ಅವರು ಕ್ಷೇತ್ರ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ್ದರು. ಅವರಿಂದಲೇ ಸದ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು. ರಾಜ್ಯದ ರಾಜಕೀಯದಲ್ಲಿ ಹೈಡ್ರಾಮಾ ಮುಗಿದು ಮೈತ್ರಿ ಸರ್ಕಾರ ಪತನವಾದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಗುದ್ದಾಟ ಮುಂದುವರಿದಿದೆ.

    ಸಭೆ ಬಳಿಕ ಮಾಧ್ಯಮಗಳೊಂದಿಗೆ ಬಿಜೆಪಿ ಸರ್ಕಾರದ ಕುರಿತು ಮಾತನಾಡಿದ ಅವರು, ಸಾರ್ವಜನಿಕರು ಬಿಜೆಪಿ ಸರ್ಕಾರದ ನಡೆ ನೋಡುತ್ತಿದ್ದಾರೆ. ಬಿಜೆಪಿ ಸಚಿವ ಸಂಪುಟ ವಿಸ್ತರಣೆಯಲ್ಲೇ ತೊಡಗಿದ್ದು, ಅವರ ಮುಂದಿನ ನಡೆ ಮತ್ತಷ್ಟು ಕಷ್ಟ ಇದೆ. ಏನೆಲ್ಲಾ ನಡೆಯಲಿದೆ ಎಂಬುವುದನ್ನು ಕಾದು ನೋಡುತ್ತೇವೆ ಎಂದರು.