Tag: ಶಾಸಕ ಶಿವರಾಮ್ ಹೆಬ್ಬಾರ್

  • ಸಿದ್ದರಾಮಯ್ಯ ಮಾತಿನಂತೆ ದೂರ ಉಳಿದಿದ್ದೇವೆ – ಶಿವರಾಮ್ ಹೆಬ್ಬಾರ್ ಬಾಂಬ್

    ಸಿದ್ದರಾಮಯ್ಯ ಮಾತಿನಂತೆ ದೂರ ಉಳಿದಿದ್ದೇವೆ – ಶಿವರಾಮ್ ಹೆಬ್ಬಾರ್ ಬಾಂಬ್

    ಕಾರವಾರ: ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರು ಸಿದ್ದರಾಮಯ್ಯ ಮಾತಿನಂತೆ ನಡೆದುಕೊಂಡಿದ್ದು, ಬಿಜೆಪಿ ಸಂಪರ್ಕದಲ್ಲಿ ಇಲ್ಲ ಎಂದಿದ್ದಾರೆ.

    ರಾತ್ರಿಯಷ್ಟೇ ಕ್ಷೇತ್ರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಪಬ್ಲಿಕ್ ಟಿವಿ ಮಾತನಾಡಿದ ಅವರು, ನಾವು ಯಾವ ಬಿಜೆಪಿ ನಾಯಕರ ಜೊತೆ ಸಂಪರ್ಕವಿಲ್ಲ. ಸದ್ಯ ರಾಜ್ಯದಲ್ಲಿ ಆಗುತ್ತಿರುವ ಬಿಜೆಪಿ ಸರ್ಕಾರ ರಚನೆಯ ಬೆಳವಣಿಗೆಗೆ ನಮಗೆ ಯಾವುದೇ ಸಂಬಂಧ ಇಲ್ಲ. ನಾವು ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇವೆ. ಇಂದಿಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದರು.

    ಶಾಸಕ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ರಾಜೀನಾಮೆ ಅಂಗೀಕಾರ ಬಳಿಕ ಎಲ್ಲರೂ ಒಟ್ಟಿಗೆ ಸೇರಿ ತೀರ್ಮಾನ ಮಾಡುತ್ತೇವೆ. ನಮ್ಮ ನಾಯಕರು ಸಿದ್ದರಾಮಯ್ಯ ಅವರು, ಅವರೇ ದೂರ ಉಳಿಯಿರಿ ಎಂದಿದ್ದಾರೆ. ಸ್ಪೀಕರ್ ಅವರಿಗೆ ಮನವಿ ಮಾಡಿದ್ದು, ಅವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಮ್ಮ ಮುಂದಿನ ತೀರ್ಮಾನ ಇರುತ್ತದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಕ್ಷೇತ್ರದ ಜನರ ಕ್ಷಮೆಯಾಚನೆ ಮಾಡಿರುವ ಅವರು, ಕಳೆದ 1 ತಿಂಗಳಿನಿಂದ ನಡೆದ ರಾಜಕೀಯ ಬೆಳವಣಿಗೆ ನನಗೂ ಅಸಮಾಧಾನ ಉಂಟು ಮಾಡಿದೆ. ಆದರೆ ಅನಿವಾರ್ಯ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ. 120 ಶಾಸಕರಲ್ಲಿ ನಾವು 20 ಶಾಸಕರು 4 ರಿಂದ 7 ಬಾರಿ ಶಾಸಕರಾಗಿದ್ದೇವೆ. ಆದರೆ ನಾವು ಯಾರನ್ನು ಟೀಕೆ ಮಾಡಲ್ಲ. ಈಗ ನಾವು ತೆಗೆದುಕೊಂಡಿರುವ ನಿರ್ಧಾರ ಧೃಡವಾಗಿದ್ದು, ಸ್ಪೀಕರ್ ಅವರು ಯಾವ ಒತ್ತಡಕ್ಕೂ ಒಳಗಾಗದೇ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ ಎಂದರು.

    ಕ್ಷೇತ್ರಕ್ಕೆ ಆಗಮಿಸಿದ್ದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ನಾನು ತುರ್ತು ಕೆಲಸಕ್ಕೆ ಬಂದಿದ್ದು ನಿಜ. ನಮ್ಮ ಯಾವ ನಿಲುವಿನಲ್ಲಿ ಒಗ್ಗಟ್ಟಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂತಿಮ ನಿರ್ಣಯಕ್ಕೆ ನಾವೆಲ್ಲರೂ ಬಾಧ್ಯಸ್ಥರು. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಕೊಟ್ಟಿದ್ದೇವೆ ನಮ್ಮ ನಿರ್ಣಯವನ್ನು ಸ್ವೀಕರಿಸಬೇಕು ಎಂದು ಪ್ರಾರ್ಥನೆ ಮಾಡಿದ್ದೇವೆ. ಸೂಕ್ತ ನಿರ್ಣಯ ಸಿಗುತ್ತೆ ಎಂದು ನಂಬಿಕೊಂಡಿದ್ದೇವೆ. ಆ ನಿರ್ಣಯದ ನಂತರ ನಮ್ಮ ನಡೆ ಬಹಿರಂಗ ಮಾಡುತ್ತೇವೆ ಎಂದು ತಿಳಿಸಿದರು.

    ಶಿವರಾಮ್ ಹೆಬ್ಬಾರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅತೃಪ್ತ ಶಾಸಕರ ಹಿಂದೆ ಸಿದ್ದರಾಮಯ್ಯ ಅವರು ಇದ್ದರಾ ಎಂಬ ಪ್ರಶ್ನೆ ಮೂಡಿದೆ. ಆದರೆ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅತೃಪ್ತ ಶಾಸಕರನ್ನ ಸೇರಿಸಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ದಿಕ್ಕು ತಪ್ಪಿಸಲು ಶಿವರಾಮ್ ಹೆಬ್ಬಾರ್ ಈ ಹೇಳಿಕೆ ನೀಡಿದ್ದಾರಾ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

    ವಿಶ್ವಾಸ ಮತಯಾಚನೆಯ ವೇಳೆ ಮಾತನಾಡಿದ್ದ ಸಿದ್ದರಾಮಯ್ಯ, ಈ ಹೊಲಸು ರಾಜಕೀಯ ಬೆಳವಣಿಗೆಗಳ ಹಿಂದೆ ಬಿಜೆಪಿ ಪಕ್ಷ ಇದೆ ಎಂಬುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ. ರಾಜ್ಯದ ಮತದಾರರು ಮೂರ್ಖರಲ್ಲ. ಇದಕ್ಕೆ ಮುಂದಿನ ಚುನಾವಣೆಗಳು ತಕ್ಕ ಪಾಠ ಕಲಿಸಲಿವೆ. ಅಧಿಕಾರದಾಸೆಗೆ ಶಾಸಕರನ್ನು ಖರೀದಿಸಿ, ಇದ್ದ ಸರ್ಕಾರವನ್ನು ಅಸ್ಥಿರಗೊಳಿಸಿ ಜನರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ರಚಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.

    ಇಂದಿನ ಹದಗೆಟ್ಟ ರಾಜಕೀಯ ಪರಿಸ್ಥಿತಿಗೂ ನಮಗೂ ಸಂಬಂಧವೇ ಇಲ್ಲ ಎಂದು ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಇದೊಂದು ರೀತಿ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯದು ಎಂಬಂತಿದೆ. ಮುಂದೆ ಬಿಜೆಪಿ ಸರ್ಕಾರ ಬಂದು ಈಗ ಪಕ್ಷಾಂತರ ಮಾಡಿದವರೆಲ್ಲ ಬಿಜೆಪಿಯಲ್ಲಿ ಮಂತ್ರಿಗಳಾದರೆ ಜಗತ್ತಿಗೆ ಇವರ ಕುತಂತ್ರ ತಿಳಿಯುವುದಿಲ್ಲವೇ? ನಮಗೆ ದ್ರೋಹ ಬಗೆದು ಪಕ್ಷವನ್ನು ಬಿಟ್ಟು ಯಾರು ಬಿಜೆಪಿ ಜತೆ ಹೋಗಿದ್ದಾರೋ, ಅವರನ್ನು ಪ್ರಳಯವಾದರೂ ಮತ್ತೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದಿದ್ದರು.

  • ನಿವಾಸಕ್ಕೆ ಆಗಮಿಸಿ ರಾತ್ರೋ ರಾತ್ರಿ ಮತ್ತೆ ಮುಂಬೈಗೆ ತೆರಳಿದ ಶಿವರಾಮ್ ಹೆಬ್ಬಾರ್

    ನಿವಾಸಕ್ಕೆ ಆಗಮಿಸಿ ರಾತ್ರೋ ರಾತ್ರಿ ಮತ್ತೆ ಮುಂಬೈಗೆ ತೆರಳಿದ ಶಿವರಾಮ್ ಹೆಬ್ಬಾರ್

    ಕಾರವಾರ: ದಿಢೀರ್ ಬೆಳವಣಿಗೆಗಳ ನಡುವೆ ಮುಂಬೈನಿಂದ ಕ್ಷೇತ್ರಕ್ಕೆ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್ ರಾತ್ರೋ ರಾತ್ರಿ ಮತ್ತೆ ಮುಂಬೈಗೆ ಮರಳಿದ್ದಾರೆ.

    ತುರ್ತು ಕೆಲಸ ನಿಮಿತ್ತ ಕ್ಷೇತ್ರಕ್ಕೆ ಆಗಮಿಸಿದ್ದ ಶಿವರಾಮ್ ಹೆಬ್ಬಾರ್ ಅವರು ಯಲ್ಲಾಪುರದಲ್ಲಿರುವ ಮನೆಗೆ ಮಾಧ್ಯಮಗಳು ಬರದಂತೆ ನಿರ್ಬಂಧ ಹೇರಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಸೇರುವ ಕುರಿತು ಕುಟುಂಬದವರೊಂದಿಗೆ ಹಾಗೂ ಆಪ್ತರೊಂದಿಗೆ ಚರ್ಚೆ ನಡೆಸಿದ್ದರು ಎನ್ನಲಾಗಿತ್ತು.

    ಶಾಸಕರು ಸ್ವಗೃಹಕ್ಕೆ ಮರಳಿರುವ ಕುರಿತು ವರದಿ ಪ್ರಸಾರವಾಗುತ್ತಿದ್ದಂತೆ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿ, ನಾನು ತುರ್ತು ಕೆಲಸಕ್ಕೆ ಬಂದಿದ್ದು ನಿಜ. ನಮ್ಮ ಯಾವ ನಿಲುವಿನಲ್ಲಿ ಒಗ್ಗಟ್ಟಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂತಿಮ ನಿರ್ಣಯಕ್ಕೆ ನಾವೆಲ್ಲರೂ ಬಾಧ್ಯಸ್ಥರು. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಕೊಟ್ಟಿದ್ದೇವೆ ನಮ್ಮ ನಿರ್ಣಯವನ್ನು ಸ್ವೀಕರಿಸಬೇಕು ಎಂದು ಪ್ರಾರ್ಥನೆ ಮಾಡಿದ್ದೇವೆ. ಸೂಕ್ತ ನಿರ್ಣಯ ಸಿಗುತ್ತೆ ಎಂದು ನಂಬಿಕೊಂಡಿದ್ದೇವೆ. ಆ ನಿರ್ಣಯದ ನಂತರ ನಮ್ಮ ನಡೆ ಬಹಿರಂಗ ಮಾಡುತ್ತೇವೆ ಎಂದು ತಿಳಿಸಿದರು.

    ಬಿಜೆಪಿ ಸೇರುವ ಕುರಿತು ನಮ್ಮ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇರುವ ವದಂತಿ ಬಗ್ಗೆ ಈಗ ಉತ್ತರ ಕೊಡುವುದಿಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ ಅದರ ನಿರ್ಣಯದ ನಂತರ ನಮ್ಮ ನಡೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

    ದೋಸ್ತಿ ಸರ್ಕಾರ ಉರುಳಿದರೂ ಮಹಾರಾಷ್ಟ್ರ ಸೇರಿದ್ದ ಅತೃಪ್ತ ಶಾಸಕರು ಮಾತ್ರ ಸದ್ಯಕ್ಕೆ ವಾಪಸ್ ಬರುವ ನಿರ್ಧಾರವನ್ನು ಮಾಡಿಲ್ಲ. ಸ್ಪೀಕರ್ ಅವರ ಎದುರು ಇರುವ ಅನರ್ಹತೆ ಪ್ರಕರಣಗಳನ್ನು ಅವರು ಇನ್ನೂ ಇತ್ಯರ್ಥ ಮಾಡಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ರಾಜ್ಯಕ್ಕೆ ಬಂದರೆ ಕೈ ನಾಯಕರ ಒತ್ತಡಕ್ಕೆ ಸಿಲುಕಬಹುದು ಎಂಬ ಭಯ ಅತೃಪ್ತರನ್ನು ಕಾಡುತ್ತಿದೆ. ಹೀಗಾಗಿ ಅತೃಪ್ತರು ಪುಣೆ ರೆಸಾರ್ಟಿನಲ್ಲಿಯೇ ಇರಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ಶಾಸಕರನ್ನು ಸೆಳೆಯಲು ಸ್ವಾಮೀಜಿಗಳ ಮೊರೆ ಹೋದ ಬಿಎಸ್‍ವೈ!

    ಶಾಸಕರನ್ನು ಸೆಳೆಯಲು ಸ್ವಾಮೀಜಿಗಳ ಮೊರೆ ಹೋದ ಬಿಎಸ್‍ವೈ!

    ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರನ್ನು ಸೆಳೆಯಲು ಬಿ.ಎಸ್.ಯಡಿಯೂರಪ್ಪ ಅವರು ಸ್ವಾಮೀಜಿಗಳ ಮೊರೆ ಹೋಗಿದ್ದಾರೆ.

    ರಾಜ್ಯದ ಕೆಲವು ಲಿಂಗಾಯಿತ ಮಠದ ಸ್ವಾಮೀಜಿಗಳ ಜೊತೆ ಬಿಎಸ್‍ವೈ ಮಾತುಕತೆ ನಡೆಸಿದ್ದು, ಅವರ ಮೂಲಕ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ. ಹಿಂದೂ ಧರ್ಮದ ಉಳಿವಿಗೆ ಬಿಎಸ್‍ವೈ ಗೆ ಬೆಂಬಲ ನೀಡಬೇಕು ಎಂದು ಸ್ವಾಮೀಜಿಗಳು ಶಾಸಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

    ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್‍ಗೆ ಕರೆ ಮಾಡಿ ಬಿ.ಎಸ್.ಯಡಿಯೂರಪ್ಪಗೆ ಬೆಂಬಲ ಸೂಚಿಸಬೇಕೆಂದು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಸ್ವಾಮೀಜಿಗಳು ತಮ್ಮ ಶಾಸಕರಿಗೆ ಕರೆ ಮಾಡಿ ಶನಿವಾರ ನಡೆಯಲಿರುವ ವಿಶ್ವಾಸ ಮತಯಾಚನೆಯ ವೇಳೆ ಬಿಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.