Tag: ಶಾಸಕ ರಾಘವೇಂದ್ರ ಹಿಟ್ನಾಳ್

  • ನನಗೆ ಸಚಿವ ಸ್ಥಾನ ಸಿಗದಿರಲು ಮಾಧ್ಯಮದವರೇ ಕಾರಣ: ರಾಘವೇಂದ್ರ ಹಿಟ್ನಾಳ್

    ನನಗೆ ಸಚಿವ ಸ್ಥಾನ ಸಿಗದಿರಲು ಮಾಧ್ಯಮದವರೇ ಕಾರಣ: ರಾಘವೇಂದ್ರ ಹಿಟ್ನಾಳ್

    – ನನ್ನನ್ನ ಸ್ವಲ್ಪವೂ ಫೋಕಸ್ ಮಾಡ್ಲಿಲ್ಲ

    ಕೊಪ್ಪಳ: ನನಗೆ ಸಚಿವ ಸ್ಥಾನ ಸಿಗದಿರಲು ಮಾಧ್ಯಮದವರು ಕಾರಣ ಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

    ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದಲ್ಲಿ ಮಾತನಾಡಿದ ಶಾಸಕರು, ನನಗೆ ಸಚಿವ ಸ್ಥಾನ ಕೊಡಿಸುವುದರಲ್ಲಿ ಮಾಧ್ಯಮದವರು ವಿಫಲರಾಗಿದ್ದಾರೆ. ಟಿವಿಗಳಲ್ಲಿ ನನ್ನನ್ನ ಸ್ವಲ್ಪವೂ ಫೋಕಸ್ ಮಾಡಲಿಲ್ಲ. ಸಚಿವ ಸ್ಥಾನದ ಕುರಿತು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.  ಇದನ್ನೂ ಓದಿ: 12 ನಿಮಿಷದಲ್ಲಿ ಯುದ್ಧ ಆಗಿದೆ ಅಂತಾರೆ, ಡೆಡ್‍ಬಾಡಿ ಎಲ್ಲಿವೆ: ಶಾಸಕ ರಾಘವೇಂದ್ರ ಹಿಟ್ನಾಳ್

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ನಮ್ಮ ಜಿಲ್ಲೆಯಲ್ಲಿ ಅಮರೇಗೌಡ ಬಯ್ಯಾಪುರ ಹಾಗೂ ನಾನು ಇಬ್ಬರು ಶಾಸಕರಿದ್ದೇವೆ. ಅವರು ನನಗಿಂತ ಹಿರಿಯರಿದ್ದು, ನಾಲ್ಕಕ್ಕಿಂತಲೂ ಅಧಿಕ ಬಾರಿ ಶಾಸಕರಾಗಿದ್ದಾರೆ. ಪಕ್ಷದ ಹೈಕಮಾಂಡ್ ಯಾರನ್ನು ಮಂತ್ರಿ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

    ಜಾತಿ ಕೋಟಾ ಏನಿದ್ದರೂ ಬಿಜೆಪಿಯಲ್ಲಿ, ನಮ್ಮಲ್ಲಿಲ್ಲ. ನಮ್ಮ ಜಿಲ್ಲೆಯವರನ್ನು ಮಂತ್ರಿ ಮಾಡಿ ಎನ್ನುವುದು ನಮ್ಮ ವಾದ. ಇಷ್ಟು ದಿನ ಬೇರೆ ಜಿಲ್ಲೆಯವರು ಸಚಿವರಾಗಿದ್ದಾರೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್ ಉತ್ತಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನನಗೆ ಸಚಿವ ಸ್ಥಾನ ಸಿಕ್ಕರೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬಹುದು. ಇನ್ನೂ ವಯಸ್ಸಿದೆ, ಸಚಿವ ಸ್ಥಾನ ಕೊಟ್ಟರೆ ನಿರ್ವಹಿಸುತ್ತೇನೆ ಎಂದು ಮಂತ್ರಿಗಿರಿ ಬೇಡಿಕೆ ವ್ಯಕ್ತಪಡಿಸಿದರು.

    ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್ ಸೇರ್ಪಡೆ ಆಗುವ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಬಿಜೆಪಿಯಲ್ಲಿ ಅಸಮಾಧಾನವಿರುವ ಶಾಸಕರು ಇದ್ದಾರೆ. ಕಳೆದ ಒಂದು ವರ್ಷದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂತ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ ಅವರ ಶಾಸಕರನ್ನೆ ಕಾಂಗ್ರೆಸ್ ಆಪರೇಷನ್ ಹಂತಕ್ಕೆ ಮಾಧ್ಯಮದವರು ತಂದು ನಿಲ್ಲಿಸಿದ್ದೀರಿ ಎಂದರು.

    ಯಾವುದೇ ಶಾಸಕರು ಪಕ್ಷದ ಸಿದ್ಧಾಂತ ಬಿಟ್ಟು ಹೋಗಲು ಸಿದ್ಧರಾಗಿರುವುದಿಲ್ಲ. ಹಾಗೊಂದು ವೇಳೆ ನಿಮ್ಮ ಮೂಲಕ ಅವರು ಬರುವುದಾದರೆ ನಾನು ಹೈಕಮಾಂಡ್‍ಗೆ ಮಾತನಾಡುತ್ತೇನೆ. ನಿಮಗೆ ಮಾಹಿತಿ ಇದ್ದರೆ ಹೇಳಿ ನಾನು ಮಾತನಾಡುತ್ತೇನೆ. ಪಕ್ಷ ಬಿಟ್ಟು ಬರುತ್ತಾರೆ ಎನ್ನುವುದಾದರೆ ನೇತೃತ್ವವಹಿಸುತ್ತೇನೆ ಎಂದರು ಹೇಳಿದರು.

  • ಏರ್ ಸ್ಟ್ರೈಕ್ ಸಾಕ್ಷಿಯನ್ನ ಯಾರೂ ಕೇಳಿಲ್ಲ: ಎಂ.ಬಿ.ಪಾಟೀಲ್

    ಏರ್ ಸ್ಟ್ರೈಕ್ ಸಾಕ್ಷಿಯನ್ನ ಯಾರೂ ಕೇಳಿಲ್ಲ: ಎಂ.ಬಿ.ಪಾಟೀಲ್

    ಹುಬ್ಬಳ್ಳಿ: ಏರ್ ಸ್ಟ್ರೈಕ್ ಕುರಿತಂತೆ ಸಾಕ್ಷಿ ಬಿಡುಗಡೆ ಮಾಡುವಂತೆ ಯಾರೂ ಕೇಳಿಲ್ಲ ಹಾಗೂ ಒತ್ತಾಯ ಮಾಡಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಅವರು, ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.

    ನಗರದಲ್ಲಿ ಮಾತನಾಡಿದ ಗೃಹ ಸಚಿವರು, ಯೋಧರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಆದರೆ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸೇನೆಯ ಬಗ್ಗೆ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತು. ಅವರು ಮಾತನಾಡಿದ ವಿಡಿಯೋ ನನ್ನ ಬಳಿಯೇ ಇದೆ. ಈಗ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ. ಸೇನೆಯ ವಿಷಯದಲ್ಲಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಮಾಡಬಾರದಿತ್ತು ಎಂದು ಗುಡುಗಿದರು.

    ಭಾರತೀಯ ವಾಯುಪಡೆ ಉಗ್ರರ ನೆಲೆಯ ಮೇಲೆ ನಡೆಸಿದ ಏರ್ ಸ್ಟ್ರೈಕ್ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಸೇನೆ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದ್ದಲ್ಲ. ಅದು ನಮ್ಮ ದೇಶದ ಸೇನೆ. ನಮ್ಮ ಯೋಧರ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕೇ ಹೊರತು ರಾಜಕೀಯ ಬೆರಸಬಾರದು ಎಂದು ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು.

    ಶಾಸಕ ಹಿಟ್ನಾಳ್ ಹೇಳಿದ್ದೇನು?:
    ಕೊಪ್ಪಳದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು, ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಯ ಮೇಲೆ 12 ನಿಮಿಷ ದಾಳಿ ಮಾಡಿವೆ. ಈ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೇಳುತ್ತಿದೆ. ಹಾಗಾದರೆ ಶವಗಳು ಎಲ್ಲಿವೆ? ಉಗ್ರ ಮೃತ ದೇಹವನ್ನು ಯಾರೂ ತೋರಿಸಿಲ್ಲ ಎಂದು ವೈಮಾನಿಕ ದಾಳಿಗೆ ಸಾಕ್ಷಿ ಕೇಳಿದ್ದರು.

    https://youtu.be/oseIZ5XYm4o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮಗೆ ವೋಟ್ ಹಾಕಿದ್ದಕ್ಕೆ ಎಚ್‍ಡಿಕೆ ಸಿಎಂ – ಕೈ ಶಾಸಕ ರಾಘವೇಂದ್ರ ಹಿಟ್ನಾಳ್ ಟಾಂಗ್

    ನಮಗೆ ವೋಟ್ ಹಾಕಿದ್ದಕ್ಕೆ ಎಚ್‍ಡಿಕೆ ಸಿಎಂ – ಕೈ ಶಾಸಕ ರಾಘವೇಂದ್ರ ಹಿಟ್ನಾಳ್ ಟಾಂಗ್

    ಕೊಪ್ಪಳ: ರೈತರ ಹೋರಾಟದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶಾಸಕ ಕೊಪ್ಪಳ ವಿಧಾನಸಭಾ ಕ್ಷೇತ್ರದ ರಾಘವೇಂದ್ರ ಹಿಟ್ನಾಳ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಜನರು ಚುನಾವಣೆಯಲ್ಲಿ ಜಾತಿ, ಹಣ ನೋಡಿ ಮತಹಾಕಿದ್ದಾರೆ ಎಂದು ಹೇಳಿದ್ದ ಸಿಎಂ ಎಚ್‍ಡಿಕೆ ಹೇಳಿಕೆಗೆ ಟಾಂಗ್ ನೀಡಿದ ಶಾಸಕ ರಾಘವೇಂದ್ರ, ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದರಿಂದ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾರೆ ಎಂದು ಹೇಳಿದರು.

    ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಶಾಸಕರು, ಮುಖ್ಯಮಂತ್ರಿಗಳು ಯಾವ ಅರ್ಥದಲ್ಲಿ ರೈತರ ಹೋರಾಟದ ಕುರಿತು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಅವರು ಹೇಳಿದ ಮಾತಿಗೆ ನೀವು ಅವರನ್ನೇ ಕೇಳಬೇಕು. ಆದರೆ ನನಗೆ, ಅಮರೇಗೌಡರಿಗೆ ರೈತರು ಮತ ಹಾಕಿದ್ದಾರೆ. ಕೊಪ್ಪಳದ ಜನರು ನಮಗೆ ಮತ ಹಾಕಿದ್ದಕ್ಕೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಅವರ ಹೇಳಿಕೆ ಕುರಿತು ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

    ಜುಲೈ 23 ರಂದು ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ರೈತರು ಸಾಲ ಮನ್ನಾ ಕುರಿತು ಕೊಪ್ಪಳದಲ್ಲಿ ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನನ್ನನ್ನು ನೆನಪು ಮಾಡಿಕೊಳ್ಳದೆ ಹಣ, ಜಾತಿಗೆ ಮತ ಹಾಕಿದ್ದಾರೆ. ಅವರಿಗೆ ನನ್ನನ್ನು ಕೇಳುವ ನೈತಿಕತೆ ಇಲ್ಲ ಎಂದು ದೂರಿದ್ದರು.